ಪಾರಿವಾಳ ಬಳಗ ಒಂದು
ತಿನ್ನಲು ಮೇವು ಹುಡುಕಲೆಂದು
ಒಟ್ಟುಗೂಡಿ ಹಾರಿತು
ದೂರ ದೂರ ಸೇರಿತು

ಅಲ್ಲಿ ಪುಟ್ಟ ಬಯಲಿನಲ್ಲಿ
ಕಾಳು ಅಕ್ಕಿ ಇರಲು ಚೆಲ್ಲಿ
ಹಕ್ಕಿ ಬಳಗ ಬಂದಿತು
ಹೆಕ್ಕಿ ತಿನ್ನಲು ನಿಂದಿತು

ಆಗ ಅಯ್ಯೊ ಹೇಳಲೇನು
ಹಕ್ಕಿ ಬಳಗವೆಲ್ಲ ತಾನು
ಸಿಕ್ಕಿತಣ್ಣ ಬಲೆಯಲಿ
ಚಡಪಡಿಸಿತು ವಿಲಿ ವಿಲಿ

ಬೇಡನಿಂಗೆ ಸಿಕ್ಕದಂತೆ
ಬದುಕಲೆಂತು ಎನುವ ಚಿಂತೆ
ಹಕ್ಕಿಗಳನು ಕಾಡಿತು
ಬಳಲುವಂತೆ ಮಾಡಿತು

ಬೇಗ ಒಂದು ನುಡಿಯಿತಂದು
ಎಲ್ಲರೊಂದು ಗೂಡಿ ನಿಂದು
ಬಲೆಯ ಸಹಿತ ಹಾರುವ
ಹೊರಟ ಜಾಗ ಸೇರುವ

ಮಾತು ಕೇಳಿ ಹಕ್ಕಿ ಹಿಂಡು
ಬಲೆಯನೆತ್ತಿ ಹಾರಿ ಬಂದು
ಗೆಳೆಯ ಇಲಿಯ ಕಂಡವು
ನೆರವು ಬೇಡಿ ಕೊಂಡವು

ಒಡನೆ ಇಲಿಯು ಬಲೆಯನೆಲ್ಲ
ಕಡಿದು ತುಂಡು ಮಾಡಿ ಮೆಲ್ಲ
ಗೆಳೆಯರನ್ನು ಬಿಡಿಸಿತು
ಅವರ ಪ್ರಾಣ ಉಳಿಸಿತು

ಸೋಲಿನಲ್ಲಿ ಧೈರ್ಯಗೆಡದ
ಮುಂದೆ ನಡೆವ ಯತುನ ಬಿಡದ
ಜನರ ಕಷ್ಟ ಸರಿವುದು
ಮನದ ಇಷ್ಟ ದೊರೆವುದು