ಕತ್ತೆಯು ಬಂದಿತು ನರಿಯನು ಕಂಡಿತು
ಬೇಗಲನೆ ಗೆಳೆತನ ಬೆಳೆಸಿತ್ತು
ಜೊತೆಯಲಿ ಕೂಡುತ ಮಾತನು ಆಡುತ
ಸೌತೆಯ ತೋಟಕೆ ನುಸುಳಿತ್ತು

ಒಳಗಡೆ ಎಲ್ಲಾ ಹುಡುಕುತ ಮೆಲ್ಲ
ಬಂದವು ತಿಂದವು ಕಾಯಿಗಳ
ಗಿಡ ಬರಿದಾಯಿತು ಹೊಟ್ಟೆಯ ಸೇರಿತು
ಕೃಷಿಕರ ದುಡಿಮೆಯ ಹೊಲದ ಫಲ

ಹೊಟ್ಟೆಯು ತಣಿಯಲು ಹೃದಯವು ಕುಣಿಯಲು
ಹಾಡನು ಬಯಸಿತು ಆ ಕತ್ತೆ
ಬಯಕೆಯ ತಿಳಿಸಿತು, ನರಿ ತಾನೆಣಿಸಿತು
“ಈತನು ಹಾಡಲು ನಾ ಸತ್ತೆ”

“ಹಾಡುತ ನಿಂದರೆ ಜನಗಳು ಬಂದರೆ
ನಮಗೇ ತೊಂದರೆ ತಿಳಿಯಣ್ಣ
ಓಡುವೆ ನೀಗಲೆ ದೂರಕೆ, ಆಗಲೆ
ಹಾಡಿಕೊ” ಎಂದಿತು ನರಿಯಣ್ಣ

ಮಾತನು ಕೇಳದೆ ನಿಮಿಷವು ತಾಳದೆ
ಕತ್ತೆಯು ಹಾಡನು ಹಾಡಿತ್ತು
ಬಂದ ಅಪಾಯವ ಕಳೆವ ಉಪಾಯವ
ತಿಳಿಯದೆ ಆ ನರಿ ಓಡಿತ್ತು

ಜನಗಳು ಬಂದರು ಬಡಿಗೆಯ ತಂದರು
ಪೆಟ್ಟಿನ ಸುರಿಮಳೆ ಸುರಿಸಿದರು
ಬುದ್ಧಿಯ ಮಾತಿಗೆ ಒಪ್ಪದ ಕತ್ತೆಗೆ
ತಕ್ಕುದೆ ಪಾಠವ ಕಲಿಸಿದರು