ಒಂದು ಕಾಡಲಿ ಮರದ ಗೂಡಲಿ
ಎರಡು ಹಕ್ಕಿಗಳಿದ್ದವು
ತಮ್ಮ ಮೊಟ್ಟೆಯ ತಿನ್ನುವ ಸರ್ಪವ
ಕಂಡು ದುಃಖಿಸುತ್ತಿದ್ದವು

ಒಮ್ಮೆ ಅಲ್ಲಿಗೆ ಬಂದ ಏಡಿಗೆ
ಹೇಳಿಕೊಂಡವು ವ್ಯಥೆಯನು
ಭಾರಿ ದರ್ಪದ ವೈರಿ ಸರ್ಪದ
ಮೊಟ್ಟೆ ನುಂಗುವ ಕಥೆಯನು

ಕೇಳಿ ನೊಂದಿತು ಏಡಿ ಎಂದಿತು
‘ಹುಡುಕಿ ಮುಂಗುಲಿ ಬಿಲವನು
ಇಡಿರಿ ಸಾಲಿಗೆ ಹಾವಿನಲ್ಲಿಗೆ
ತಂದು ರಾಶಿಯ ಮೀನನು’

ಏಡಿ ಹೇಳಿದ ಮಾತು ಕೇಳಿದ
ಹಕ್ಕಿ ಜೋಡಿಯು ಘಳಿಗೆಗೆ
ಸೇರಿ ಕೊಳವನು ಹಿಡಿದು ಮೀನನು
ಇಟ್ಟು ಬಿಟ್ಟಿತು ಸಾಲಿಗೆ

ಮೀನ ಕಂಡಿತು ತಿನುತ ಬಂದಿತು
ಹಾವು ಇದ್ದೆಡೆ ಮುಂಗುಸಿ
ಅದನು ಫಕ್ಕನೆ ಹಿಡಿದು ಕತ್ತನೆ
ಕಡಿದು ತಿಂದಿತು ಹಸಿಹಸಿ

ಹಾವು ಸತ್ತಿತು ಭಯವು ನಿತ್ತಿತು
ಪುಟ್ಟ ಹಕ್ಕಿಯ ಜೋಡಿಗೆ
ನೋಡಿ ಪಿಳಿಪಿಳಿ ಹಾಡಿ ಚಿಲಿಪಿಲಿ
ಹಾರಿ ಬಂದವು ಗೂಡಿಗೆ