ಜೇನಿನ ಹೂಜೆಯು ಒಂದೆಡೆ ಇತ್ತು
ಹೂಜೆಯು ಹೇಗೋ ಕೆಳಗಡೆ ಬಿತ್ತು
ಸುತ್ತಲು ಜೇನೇ ಹರಿದಿತ್ತು
ಎತ್ತಲು ಪರಿಮಳ ಹರಡಿತ್ತು

ನೊಣಗಳು ಹಾರುತ ಬಂದವು ಆಗ
ಚೆಲ್ಲಿದ ಜೇನನು ಕಂಡವು ಬೇಗ
ಕೂತವು ಅಲ್ಲೇ ತಿನ್ನಲಿಕೆ
ಜೇನಿನ ಸವಿಯನು ಉಣ್ಣಲಿಕೆ

ಹೊಟ್ಟೆಯ ತುಂಬಾ ಜೇನನು ತಿಂದು
ನೊಣಗಳು ಹಾರಲು ನೋಡಿರೆ ಅಂದು
ರೆಕ್ಕೆಯು ಜೇನಿಗೆ ಅಂಟಿತ್ತು
ಕಾಲೂ ನಿಲ್ಲದೆ ಕುಂಟಿತ್ತು

ನೊಣಗಳು ವಿಲಿವಿಲಿ ಒದ್ದಾಡಿದವು
ಸಾವಿನ ಸಮಯದಿ ಗುದ್ದಾಡಿದವು
ನುಡಿದವು, ‘ಅಲ್ಪದ ಸುಖಕಾಗಿ
ಹೋದೆವು ನಾವೇ ಹೆಣವಾಗಿ.’