ಒಂದೂರ ಪರ್ವತವು ಭೋರೆಂದು ಗುಡುಗೆ
ಭೂಮಿ ಅದುರಿದ ಹಾಗೆ ಗಡಗಡನೆ ನಡುಗೆ
ಬೆಚ್ಚಿದರು ಬೆದರಿದರು ಮಂದಿಗಳು ಎಲ್ಲ
ಬಳಿ ಬಂದು ಏನೆಂದು ಕೇಳಿದರು ಮೆಲ್ಲ

ಬಂದ ಜನಗಳ ನೋಡಿ ಪರ್ವತವು ಅಂದು
ಅವರೊಡನೆ ಹೇಳಿತ್ತು ನರಳುತಲೆ ನಿಂದು
“ನಿಜಕು ಮೂರ್ಖರು ನೀವು ತಿಳಿಯದೇ ನಿಮಗೆ
ಹೆರಿಗೆಯದೆ ನೋವೀಗ ಕಾಣಿಸಿದೆ ನನಗೆ”

ತಮ್ಮ ಪರ್ವತರಾಣಿ ಹೆರುತಾಳೆ ಇಂದು
ಎಂದು ಜನ ಸೋಜಿಗದಿ ಕಾಯುತಿರುವಂದು
ಗುಡುಗಾಟ ನಡುಗಾಟ ಸಾಗಿ ತುಸು ಹೊತ್ತು
ಎಲ್ಲವೂ ನಿಃಶಬ್ದವಾಗಿತ್ತು ಮತ್ತು

ಹೆರಿಗೆಯಾಗಿರಬೇಕು ಪರ್ವತಕೆ ಈಗ
ಎಂಥ ಮಗು ಹುಟ್ಟಿಹುದೊ ತಿಳಿಯುವೆವು ಬೇಗ
ಎಂದು ಜನ ಆತುರದಿ ನೋಡುತಿರೆ ಸುತ್ತು
ಪರ್ವತದ ಬಿಲದಿಂದ ಇಲಿ ಹೊರಗೆ ಬಿತ್ತು