ಕಾಡಿನ ರಾಜನೆ ದಿನ ದಿನ ಬಂದು
ಮನಸಿಗೆ ತೋಚಿದ ಪ್ರಾಣಿಯ ಕೊಂದು
ತಿನುತಿರೆ ಅಲ್ಲಿನ ಮಿಗವೆಲ್ಲ
ಸಭೆಯನು ಕೂಡಿಸಿದವು ಮೆಲ್ಲ

ಸಭೆಯಲಿ ಚರ್ಚಿಸಿ ದಿವಸಕೆ ಒಂದು
ಪ್ರಾಣಿಯ ತಾವೇ ಕಳಿಸುವೆವೆಂದು
ತೀರ್ಮಾನವನು ಮಾಡಿದವು
ರಾಜನ ಒಪ್ಪಿಗೆ ಬೇಡಿದವು

ಸರದಿಯ ಮರೆಯದೆ ಸಿಂಹದ ಬಳಿಗೆ
ಒಂದೊಂದೇ ಮೃಗ ಸಾಗಿರೆ ಕೊನೆಗೆ
ರಾಜನ ಬಳಿ ಮೊಲ ಹೋಗಿತ್ತು
ಆಗಲೆ ಬಲು ತಡವಾಗಿತ್ತು

ನಿಶ್ಚಿತ ಸಮಯಕೆ ಊಟವು ಸಿಗದೆ
ಸಿಟ್ಟಿನ ಭರದಲಿ ಮೊಲವನು ಹಿಡಿದೆ
ಸಿಂಹವು ಘರ್ಜಿಸಿ ಕೇಳಿತ್ತು-
‘ತಡವೇಕಾಯಿತು ಈ ಹೊತ್ತು?”

ನಡುಗುತ ಆ ಮೊಲ ಹೇಳಿತು ಆಗ
‘ಈ ಕಡೆ ನಾನೇ ಬರುತಿರೆ ಬೇಗ
ತಮ್ಮಂಥವನೇ ತಡೆದಿಟ್ಟ
‘ತಿನ್ನುವೆ’ ಎನ್ನುತ ಹಿಡಿದಿಟ್ಟ’

ಒಡನೆಯೆ ಗುಡುಗಿತು ಕೆರಳಿದ ಸಿಂಗ-
‘ಎಲ್ಲಿರುವನು ಆ ದುಷ್ಟ – ಫಟಿಂಗ
ತೋರಿಸು ಬೆದರದೆ ನೀನಿನ್ನು
ಕೊಂದೇ ಬಿಡುವೆನು ಅವನನ್ನು’

‘ಈಗಲೆ ತೋರುವೆ ಬನ್ನಿರಿ’ ಎಂದು
ಮೊಲವೇ ಮೃಗರಾಜನ ಕರೆ ತಂದು
ಆಳದ ಬಾವಿಗೆ ಕೈ ನೀಡಿ
ನುಡಿಯಿತು, ‘ಇಲ್ಲಿರುವನು ನೋಡಿ’

ಸಿಂಹವು ಘರ್ಜಿಸಿ ಕತ್ತನು ಬಾಗಿ
ಬಾವಿಯ ನೀರಿಗೆ ಇಣುಕಲು ಹೋಗಿ
ತನ್ನಂತಹುದೇ ಇನ್ನೊಂದು
ಸಿಂಹವ ಕಂಡಿತು ತಾನಂದು

ಮೇರೆಯು ಮೀರಿರೆ ಕೋಪದ ಹುಚ್ಚು
ನೀರಲಿ ಕಾಣಿಸಿದಾ ಪಡಿಯಚ್ಚು
ತನ್ನದು ಎನ್ನದೆ ಜಿಗಿದಿತ್ತು
ಸಿಂಹದ ಕಥೆಯೇ ಮುಗಿದಿತ್ತು