ಗಾಡಿಯ ತುಂಬಾ ಗೊಬ್ಬರ ಹೇರಿ
ಮಾಡಿದ ರೈತನು ಕೂತು ಸವಾರಿ
ಗಾಡಿಯು ಗಡಗಡ ಸಾಗಿರೆ ಮುಂದು
ಕಿರ್ ಕಿರ್ ಎಂದಿತು ಗಾಲಿಯು ಒಂದು

ಇಳಿದನು ರೈತನು ಗಾಡಿಯ ಕೆಳಗೆ
ನಡೆದನು ಕೂಗುವ ಗಾಡಿಯ ಬಳಿಗೆ
ಕೇಳಿದ, “ಆ ಕಡೆ ಚಕ್ರದ ಹಾಗೆ
ಸಾಗದೆ ಕಿರಿಚುವೆ ಏತಕೆ ಹೀಗೆ?”

“ಆ ಕಡೆಯವನಿಗೆ ಎಣ್ಣೆಯ ಕುಡಿಸಿ
ಏನೂ ಕೊಡದೆಯೆ ನನ್ನನು ದುಡಿಸಿ
ಕಷ್ಟವ ಕೊಟ್ಟರೆ ಕೂಗಿದೆ ಇಂದು”
ಎಂದಿತು ಗಾಲಿಯು ದುಃಖದಿ ಅಂದು

ಆಗಲೆ ಹಳ್ಳಿಗ ತಪ್ಪನು ತಿಳಿದ
ಈ ಕಡೆ ಗಾಲಿಗು ಎಣ್ಣೆಯ ಬಳಿದ
ಗಾಡಿಯು ಸರಸರ ಓಡಿತು ಫಕ್ಕ
ಸಮತೆಯನಡತೆಯು ಬಾಳಿಗು ಮುಖ್ಯ