ಇಬ್ಬರು ಗೆಳೆಯರು ಜೊತೆಯಲಿ ಬಂದು
ಪಯಣಿಸುತಿದ್ದಿರೆ ಕಂಡರು ಒಂದು
ಕರಡಿಯು ತಮ್ಮೆಡೆ ಬರುವುದನು
ಪ್ರಾಣಾಪಾಯವು ಇರುವುದನು

ಒಬ್ಬನು ಮರವನು ಹತ್ತಿದ ಚಣಕೆ
ದುರ್ಬಲ ಫಕ್ಕನೆ ಒರಗಿದ ನೆಲಕೆ
ಅವರನು ಕರಡಿಯು ನೋಡಿತ್ತು
ಮಲಗಿದವನ ಕಡೆ ಓಡಿತ್ತು

ಸತ್ತವನಂತೆಯೆ ನೆಲದಲಿ ಬಿದ್ದ
ವ್ಯಕ್ತಿಯು ಉಸಿರನು ಬಿಗಿ ಹಿಡಿದಿದ್ದ
ಮೂಸಿದ ಕರಡಿಯು ತಾನಂದು
ಬಿಟ್ಟಿತು ಅವನನು ಹೆಣವೆಂದು

ಕರಡಿಯು ದೂರಕೆ ಹೋದುದ ಕಂಡು
ಮರದಿಂದಿಳಿದವ ಕೇಳಿದ ಬಂದು
“ಗೆಳೆಯನೆ ನಿನ್ನಲಿ ಈ ಹೊತ್ತು
ಕರಡಿಯು ಏನನು ಹೇಳಿತ್ತು?”

“ಆಪತ್ಕಾಲದಿ ಎಂದಿಗು ಕೂಡ
ಬಿಟ್ಟೋಡುವನಲಿ ಗೆಳೆತನ ಬೇಡ
ಎಂದಿತು ಕರಡಿಯು ನನ್ನಲ್ಲೆ”
ಎಂದನು ಅವ ಜೊತೆಯವನಲ್ಲಿ