ಚಿರುಸಲೇಮಿನ ದೊರೆಯು ಸೊಲೊಮನ
ಜ್ಞಾನಿಯೆಂದು ಪ್ರಸಿದ್ಧನು
ಜಗದ ಮನೆಗಳ ಸಕಲ ಜನಗಳ
ಗೌರವವ ಗಳಿಸದ್ದನು

ಹೆಂಗಳಿಬ್ಬರು ಒಮ್ಮೆ ಬಂದರು
ಅರಸನೆದುರಲಿ ನಿಂದರು
ಬದುದಿದೊಂದನು – ಸತ್ತುದೊಂದನು
ಮಕ್ಕಳೆರಡನು ತಂದರು

“ಜೀವಿಸಿರುವುದು ಮಗುವು ನನ್ನದು”
ಎಂದು ನುಡಿದಳು ಒಬ್ಬಳು
“ಇದುವೆ ನನ್ನದು, ಸತ್ತುದವಳದು”
ವಾದಿಸಿದಳಿನ್ನೊಬ್ಬಳು

“ತಪ್ಪಿ ನಡೆಯದೆ ಸುಳ್ಳು ನುಡಿಯದೆ
ಇರುವುದೊಳ್ಳಿತು ಇಬ್ಬರೂ”
ಎಂದು ರಾಜನು ಅವರೊಳೆಂದನು
ಮಾತನಾಡರು ಒಬ್ಬರೂ

ಆಗ ಸೊಲೊಮನ ದೊರೆಯು ಚಾರನ
ಕರೆಸಿ ಕತ್ತಿಯ ಕೇಳಿದ
ನಗುವ ಮಗುವನು ಕಡಿದು ಪಾಲನು
ಮಾಡಿ ಹಂಚಲು ಹೇಳಿದ

ಥಟ್ಟನೆದ್ದಳು ಅವರಲೊಬ್ಬಳು-
“ಒಡೆಯರೆಂದುದು ನಡೆಯಲಿ
ನಮ್ಮೊಳಿಂದಿದು ಜಗಳ ತಂದುದು
ಮಗುವ ನೀಗಲೆ ಕಡಿಯಲಿ”

ಮತ್ತೆ ಒಬ್ಬಳು ಓಡಿ ಬಂದಳು
ಬೇಡಿಕೊಂಡಳು ದೊರೆಗಳ
“ಕಂದ ಬದುಕೊ, ಅವಳೆ ಪಡೆಯಲಿ”
ಎಂದು ಅತ್ತಳು ಗಳಗಳ

ಜಾಣ ಸೊಲೊಮನ ರಾಜನದು ಮನ
ಕಂಡು ಕೊಂಡಿತು ನಿಜವನು
ತಪ್ಪಿದವಳಿಗೆ ಎಲ್ಲರೆದುರಿಗೆ
ನೀಡ ಬಯಸಿತು ಸಜವನು

“ಮಗುವು ಬದುಕಲಿ ಎಂಬ ನುಡಿಯಲಿ
ತಾಯ ಪತ್ತೆಯ  ಹಚ್ಚಿದೆ
ಉಳಿದ ಹಸುಳೆಗೆ ಅಮ್ಮ ಇವಳಿಗೆ
ಅದನು ಪಡೆಯುವ ಹಕ್ಕಿದೆ”

ಎಂದು ನುಡಿದನು ಅವಳ ಕರೆದನು
ಕೈಗೆ ಕಂದನ ಕೊಟ್ಟನು
ಬಳಿಕ ತಪ್ಪನು ಮಾಡಿದವಳನು
ಹಿಡಿದು ಶಿಕ್ಷಿಸಿ ಬಿಟ್ಟನು