ಚಳಿಗೆ ಮಳೆಗೆ ಬಳಲಿ ಕೊನೆಗೆ
ಮಿಡಿತೆ ಹೊರಟು ಬಂದಿತು
ಇರುವೆ ಮನೆಗೆ ಹೋಗಿ ತನಗೆ
ಅನ್ನ ಬೇಡಿ ನಿಂದಿತು

“ಕಾಳು ಬೇಳೆ ಸಿಗುವ ವೇಳೆ
ಬೇಸಗೆಯಲಿ ಗಳಿಸದೆ
ಗೈದೆ ಏನು ಹೇಳು ನೀನು
ಮಂದಿಗೆಂದು ಉಳಿಸದೆ”

ಇರುವೆ ಬೇಗ ಕೇಳಿದಾಗ
ಮಾಡಿಕೊಳದೆ ಗಡಿಬಿಡಿ
ಮಿಡಿತೆ ನಿಂದು ನುಡಿಯಿತಂದು-
“ಹಾಡು ತಿದ್ದೆ ದಿನವಿಡಿ”

“ಸಿಗಲೆ ಇಲ್ಲ ಸಮಯವೆಲ್ಲ
ಆಗ ನನಗೆ ದುಡಿಯಲು
ಈಗ ಅನ್ನ ಕೊಟ್ಟು ನನ್ನ
ಸಲಹು, ಬಿಡದೆ ಮಡಿಯಲು”

“ದುಡಿಯದವನು ಮಡಿದರೇನು?”
ಎಂದಿತಿರುವೆ “ಆ ದಿನ-
ಇರದೆ ಚಿಂತೆ ಹಾಡಿದಂತೆ
ಕುಣಿದು ಬಿಡೋ ಈ ದಿನ”