ಹಳೆ ಮೈಸೂರಿನ ದಿವಾನಗಿರಿಯಲಿ
ವಿಶ್ವೇಶ್ವರಯ್ಯಾ ಇದ್ದಾಗ
ದೂರದ ಯಾವುದೊ ಹಳ್ಳಿಯ ಮೂಲೆಯ
ಊರೊಳು ರಾತ್ರೆಗೆ ಉಳಿದಾಗ

ಮೇಣದ ಬತ್ತಿಯ ಮುಂಗಡೆ ಕೂಡುತ
ಕಾಗದ ಪತ್ರವ ನೋಡಿದರು
ಕೂಡಲೆ ಬೇರೆಯೆ ದೀಪವನುರಿಸುತ
ಬರೆಯುವ ಕೆಲಸವ ಮಾಡಿದರು

ರಾಯರ ವರ್ತನೆ ಹಳ್ಳಿಯ ಗೌಡನ
ಮನದಿ ಕುತೂಹಲ ಮೂಡಿಸಿತು
ದೀಪಗಳೆರಡನು ಹಚ್ಚಿದ ಗುಟ್ಟನು
ತಿಳಿಯಲು ಮಾತನು ಆಡಿಸಿತು

ಹಳ್ಳಿಯ ಗೌಡನ ವಿನಯದ ನುಡಿಗಳ
ರಾಯರು ಮೌನದಿ ಕೇಳಿದರು
ತುಟಿಗಳ ಒಳಗಡೆ ನಗುತಲೆ ಸಟ್ಟನೆ
ಆತಗೆ ಉತ್ತರ ಹೇಳಿದರು-

‘ಘನ ಸರಕಾರದ ಕೆಲಸದ ವೇಳೆಗೆ
ಅದರದೆ ಬೆಳಕನು ಬಳಸಿದೆನು
ಸ್ವಂತದ ಕಾರ್ಯಕೆ ನಾನೇ ಕೊಂಡಿಹ
ಮೇಣದ ಬತ್ತಿಯನುರಿಸಿದೆನು’