ಸಿಂಹ ಒಂದು ಸುತ್ತಿ ಬಂದು
ಕೊಳ್ಳೆ ಹುಡಿಕಿಕ ಸೋತಿತು
ಬಳಿಯ ಗುಡ್ಡದೆಡೆಯ ದೊಡ್ಡ
ಗವಿಯ ಸೇರಿ ಕೂತಿತು
ಇರುಳ ಮುನ್ನ ನರಿಯು ತನ್ನ
ಗವಿಯ ಮನೆಯ ಬಾಗಿಲ
ಹೆಜ್ಜೆ ಗುರುತು ಕಂಡು ಬೆವತು
ಉದ್ಗರಿಸಿತು ಎಲ ಎಲ!
ಮತ್ತೆ ನಿತ್ತು ಕೊಂಚ ಹೊತ್ತು
ಯೋಚನೆಯನು ಮಾಡಿತು
ಗಟ್ಟಿಯಾಗಿ ಗವಿಯ ಕೂಗಿ
ತಾನೆ ಮಾತನಾಡಿತು-
‘ಗೆಳೆಯ ಗವಿಯೆ, ಬಂದು ಬಳಿಯೆ
ನಿಂದಿದೇನೆ ಹೊರಗಡೆ
ಹೇಳು ನೀನು ಈಗ ನಾನು
ಬರಲು ಬಹುದೆ ಒಳಗಡೆ?’
ಕಾದರೇನು ಗವಿಯು ತಾನು
ಕೊಡಲೆ ಇಲ್ಲ ಉತ್ತರ
ನರಿಯು ಬೇಗ ನುಡಿಯಿತಾಗ
ದನಿಯ ಮಾಡಿ ಎತ್ತರ-
‘ಮಿತ್ರ ನಿನ್ನ ಮೌನ ನನ್ನ
ಮನಕೆ ನ ಓವು ನೀಡಿದೆ
ಬಂದ ಸಿಟ್ಟು ನಿನ್ನ ಬಿಟ್ಟು
ಹೋಗುವಂತೆ ಮಾಡಿದೆ’
ಎಂದ ಮಾತು ಕೇಳಿ ಸೋತು
ಸಿಂಹ ಬಾಯಿ ತೆರೆಯಿತು
‘ಬಾರೊ ಗೆಳೆಯ’ ಎನುತ ನರಿಯ
ಒಳಗೆ ಬರಲು ಕರೆಯಿತು
ನಿಮಿಷದಲ್ಲಿ ನರಿಯು ಅಲ್ಲಿ
ಸಿಂಹ ದಿರವ ಕಂಡಿತು
ಹಿಂದೆ ನೋಡಿ ನೋಡಿ ಓಡಿ
ಜೀವ ಉಳಿಸಿ ಕೊಂಡಿತು
Leave A Comment