ಪಿತನ ಮಾತ ಸಲಿಸಲೆಂದು
ಸಕಲ ಸುಖವ ತೊರೆದು ನಿಂದು
ಸತಿ-ಅನುಜರ ಕೂಡಿಕೊಂಡು
ವನದೊಳಿರಲು ನಡೆದನು
ಕಷ್ಟ ನಷ್ಟ ಪಡೆದನು

ಲೋಕ ಶಾಂತಿ ಕಾಯಲೆಂದು
ಸಾಧು ಜನರ ಸಲಹಲೆಂದು
ದುಷ್ಟರೆಲ್ಲರನ್ನು ಕೊಂದು
ಜನಕೆ ಹರುಷ ತಂದನು
ಆದನವನು ವಂದ್ಯನು

ನಾಡೆ ತನ್ನ ಭವನವೆಂದು
ಮಂದಿಯೆಲ್ಲ ಮಕ್ಕಳೆಂದು
ಪರರ ಸುಖವೆ ತನ್ನದೆಂದು
ನಂಬಿ ನಡೆದು ಕೊಂಡನು
ಸಫಲತೆಯನು ಉಂಡನು

ಸತ್ಯ ಧರ್ಮ ಬಿಡದೆ ಬಂದು
ನ್ಯಾಯ ಮೂರ್ತಿಯಂತೆ ಅಂದು
ಸಮತೆಯಿಂದ ಜಗವ ಕಂಡು
ಧನ್ಯನೆನೆಸಿ ಕೊಂಡನು
ಅಮರನಾಗಿ ನಿಂದನು