ಬೆತ್ಲೆಹೆಮದಿ ಜನುಮ ತಳೆದ
ಏಸು ಕ್ರಿಸ್ತನೆ
ನಿನಗೆ ಬಾಗಿ ನಮಿಪೆನಯ್ಯ
ಪುಣ್ಯ ಪುರುಷನೆ

ದೀನ ದಲಿತ ಬಂಧು ನೀನು
ಧರ್ಮ ರಕ್ಷಕ
ಜಗದ ಜನಕೆ ತಿಳಿವನಿತ್ತು
ಪೊರೆದ ಶಿಕ್ಷಕ

“ಕೊಲ್ಲಬೇಡಿ ಕದಿಯಬೇಡಿ
ಸತ್ಯ ನುಡಿಯಿರಿ
ಶುದ್ಧ ಮನದಿ ನ್ಯಾಯ ಧರ್ಮ
ಬಿಡದೆ ನಡೆಯಿರಿ”

“ದುಃಖಿಗಳಿಗೆ ತಕ್ಕ ನೆರವು
ನೀಡಿ ಪೊರೆಯಿರಿ
ಕಾವ ದೇವನನ್ನು ಮನದಿ
ನಿತ್ಯ ನೆನೆಯಿರಿ”

“ಕೇಡು ಬಗೆದ ವೈರಿಗಳಿಗು
ಒಳಿತ ನೆಸಗಿರಿ
ನೆರೆಯ ಮಂದಿ ನಮ್ಮ ಹಾಗೆ
ಎಂದು ತಿಳಿಯಿರಿ”

“ತಪ್ಪು ಹುಡುಕಿ ಪರರ ತೆಗಳೆ
ನಿಮಗೆ ಕಿರಿತನ
ನಿಮ್ಮ ನೀವು ತಿದ್ದಿ ಕೊಳ್ಳಿ
ಅದುವೆ ಹಿರಿತನ”

“ತ್ಯಾಗದಿಂದ ಸೇವೆಯಿಂದ
ಪರಮ ಪಾವನ
ಎನಿಸಿಕೊಂಡು ಬೆಳಗಲಣ್ಣ
ನಿಮ್ಮ ಜೀವನ”

ಇಂಥ ದಿವ್ಯ ತತ್ವಗಳನು
ಜನಕೆ ಸಾರಿದೆ
ಒಳಿತಿನೆಡೆಗೆ ನಡೆಯೆ ಜಗಕೆ
ದಾರಿ ತೋರಿದೆ

ಪರರ ಹಿತಕೆ ದುಡಿದ ಮಹಿಮ
ನೀನೆ ಧನ್ಯನು
ಸತ್ಯಕ್ಕಾಗಿ ಜೀವ ತೆತ್ತ
ಲೋಕ ಮಾನ್ಯನು