“ಜಗವ ಕಾಯುವ ‘ಅಲ್ಲಾ’ ಒಬ್ಬನೆ
ಹಲವರಿಲ್ಲವು ತಿಳಿಯಿರಿ
ಸತ್ಯ ಮಾರ್ಗದಿ ನಿತ್ಯ ನಡೆಯುತ
ಆತನೊಲುಮೆಯ ಪಡೆಯಿರಿ”

“ನಿಮಗೆ ಹಿತವಹುದೆಂದು ಎಂದಿಗು
ಪರರ ಹಿಂಸಿಸಬೇಡಿರಿ
ದುಃಖಿಗಳ ಕಣ್ಣೀರ ಸೊರಸಿರಿ
ತಕ್ಕ ನೆರವನು ನೀಡಿರಿ”

“ನಿಮ್ಮ ನೆರೆಯವರೆಲ್ಲರಲ್ಲೂ
ಬಂಧು ಪ್ರೇಮವ ತಳೆಯಿರಿ
ದಿನವು ಜನಹಿತ ಬಯಸಿ ದುಡಿಯಿರಿ
ನೀತಿ ತಪ್ಪದೆ ನಡೆಯಿರಿ”

“ಅನ್ಯರೊಡವೆಯ ಬಯಸಬೇಡಿರಿ
ದಾನ ಧರ್ಮವ ಮಾಡಿರಿ
ಕಷ್ಟ ಬಂದರು ತಾಳ್ಮೆ ಗೆಡದಿರಿ
ಸವಿಯ ನುಡಿಗಳ ನಾಡಿರಿ”

“ದ್ವೇಷ ಮತ್ಸರಗಳನು ತೊರೆಯಿರಿ
ಶುದ್ಧ ಹೃದಯೊಇಗಳಾಗಿರಿ
ಜಗದ ಸೇವಕರಂತೆ ಬಾಳಿರಿ
“ಅಲ್ಲಾ”ನಿಗೆ ತಲೆ ಬಾಗಿರಿ”