ವೀರನ ಜನನಿಯೆ ಜೀಜಾಬಾಯಿಯೆ
ಪಾವನ ಚರಿತೆಯು ನೀನಮ್ಮ
ನಾಡಿಗೆ ಧೀರ ಕುಮಾರನ ನಿತ್ತಿಹ
ಸನ್ಮಾನ್ಯಳು ನೀ ದಿಟವಮ್ಮ

ಅಂದು ಶಿವಾಜಿಯು ಬಾಲಕನಾಗಿರೆ
ವೀರರ ಧೀರರ ಕತೆಯೊರೆದೆ
ಮಹಿಮರ ಜೀವನ ತತ್ವದ ಸತ್ಯವ
ಬಾಲಕ ನೆದೆಯೊಳು ತುಂಬಿಸಿದೆ

ಜೀವನ ವಿದ್ಯೆಯ ನೊದಗಿಸಿ ಮಗನಿಗೆ
ನೀನೇ ಮಮತೆಯ ಗುರುವಾದೆ
ಲೋಕಕೆ ಹೆಣ್ಣಿನ ಹಿರಿಮೆಯ ತಾಯ್ತನ
ಮಾದರಿಯನ್ನೇ ತೋರಿಸಿದೆ

ಧನ್ಯಳೆ ಮಾನ್ಯಳೆ ನಿನ್ನಾದರ್ಶದ
ಮಾತೆಯರುದಿಸಲಿ ನಾಡಲ್ಲಿ
ಭಾರತ ವೀರರ ಕೋಟಿಯು ಹೆಚ್ಚಲಿ
ಬಾವುಟ ಮೆರೆಯಲಿ ಬಾನಲ್ಲಿ