ಕನ್ನಡ ನಾಡೊಳು ಬಾಳಿದ ಬೆಳಗಿದ
ಕಿತ್ತೂರಿನ ಓ ಚೆನ್ನಮ್ಮ
ಧೈರ್ಯದ ಶೌರ್ಯದ ರಣ ಕೌಶಲ್ಯದ
ಹಿರಿಮೆಯ ಮೂರುತಿ ನೀ ನಮ್ಮ

ಕನ್ನಡ ನೆಲವನು ಕಬಳಿಸ ಬಯಸಿದ
ಆಂಗ್ಲರ ದರ್ಪವ ನೆದುರಿಸಿದೆ
ಸ್ವಾತಂತ್ಯ್ರದ ಹೊಂಬೆಳಕನು ಬೆಳಗಿಸೆ
ಜನಮನವೆಲ್ಲವ ಕುದುರಿಸಿದೆ

ಗುಂಡಿಗೆ ಬೆದರದೆ ಗಂಡೆದೆಯಿಂದಲೆ
ದುಡನು ಕೂಡಿಸಿ ನಡು ಬಿಗಿದೆ
ರಣ ಕಣದಲಿ ರಣಚಂಡಿಯ ತೆರದಲಿ
ಹಗೆಗಳ ರುಂಡವ ಕಡಿದೊಗೆದೆ

ತೊಟ್ಟಿಲು ತೂಗುವ ಕೈಗಳ ಕತ್ತಿಯ
ಶಕ್ತಿಯ ಲೋಕಕೆ ತೋರಿಸಿದೆ
ಭಾರತ ಮಾತೆಯ ಕನ್ನಡ ಕುವರಿಯ
ಕೀರ್ತಿಯ ಬಾವುಟ ಹಾರಿಸಿದೆ