ಇದ್ದನು ಒಬ್ಬನು ಠಾಗೋರಜ್ಚ
ನಮ್ಮೀ ಭಾರತ ದೇಶದಲಿ
ಬಿಳಿನರೆ ಕೂದಲು ಮೀಸೆಯು ಗಡ್ಡ
ನಿಜ ಬೈರಾಗಿಯ ವೇಷದಲಿ

ಮಗುವಿನ ಹೂ ಮನ ಇದ್ದವನಾತನು
ದೇಶ ಪ್ರೇಮದ ಮೂರುತಿಯು
ಕತೆ ಕಾದಂಬರಿ ಕವಿತೆಯ ರಚನೆಗೆ
ಎಲ್ಲೆಡೆ ಹರಡಿದ ಕೀರುತಿಯು

ಸೃಷ್ಟಿಯ ಚೆಲುವಿನ ತಂಪಿನ ತಾಣದಿ
ನಡೆಯಲಿ ಶಿಕ್ಷಣ ಎಂದವನು
‘ಶಾಂತಿ ನಿಕೇತನ’ ಹೆಸರಿನ ಹೊಸತಿನ
ಜ್ಞಾಲನದ ಕೇಂದ್ರವ ತಂದವನು

ಋಷಿ-ಕವಿ-ತತ್ವಜ್ಞಾನಿಯು ಬೋಧಕ
ಶಿಕ್ಷಣ ತಜ್ಞನು ಠಾಗೋರ
ಹಾಡಿದ ಜನಗಣ ಗೀತೆಯ ಸವಿದನಿ
ಹರಡಿದೆ ಜಗದಲಿ ಬಲುದೂರ