ಚೆಲುವಿನ ನಾಡಿದು ಕನ್ನಡವು
ಗೆಲುವಿನ ಬೀಡಿದು ಕನ್ನಡವು

ಬನಗಳ ತಂಪಿನ ಹೊಲಗಳ ಸೊಂಪಿನ
ನಾಡಿದು ನಮ್ಮದು ಕನ್ನಡವು
ತೆಂಗಿನ ಕಂಗಿನ ತಾಳೆಯ ಬಾಳೆಯ
ತೋಟದ ಬೀಡಿದು ಕನ್ನಡವು

ನೀರಿನ ಕೆರೆಗಳ ಹರಿವಿನ ತೊರೆಗಳ
ನಾಡಿದು ನಮ್ಮದು ಕನ್ನಡವು
ಗುಡ್ಡದ ಬೆಟ್ಟದ ಹಳ್ಳದ ಕೊಳ್ಳದ
ಬೀಡಿದು ನಮ್ಮದು ಕನ್ನಡವು

ಹರಿಯುವ ತೀರ್ಥದ ಮೆರೆಯುವ ಕ್ಷೇತ್ರದ
ನಾಡಿದು ನಮ್ಮದು ಕನ್ನಡವು
ವಿಧ ವಿಧ ಕಲೆಗಳ ಶಿಲ್ಪದ ನೆಲೆಗಳ
ಸೊಬಗಿನ ಬೀಡಿದು ಕನ್ನಡವು

ಕೋಗಿಲೆ ಹಾಡುವ ನವಿಲುಗಳಾಡುವ
ನಾಡಿದು ನಮ್ಮದು ಕನ್ನಡವು
ಕಪಿಗಳ ದಂಡಿನ ಆನೆಯ ಹಿಂಡಿನ
ಕಾಡಿನ ಬೀಡಿದು ಕನ್ನಡವು

ಗಂಧವು ಬೆಳೆಯುವ ಮಲ್ಲಿಗೆ ಅರಳುವ
ನಾಡಿದು ನಮ್ಮದು ಕನ್ನಡವು
ಕೈವೊಲ ಮೆರೆಯುವ ಕಾಫಿಯು ಕರೆಯುವ
ಬೀಡಿದು ನಮ್ಮದು ಕನ್ನಡವು

ಧುಮುಕುವ ಜೋಗಿನ ಮಿಂಚಿನ ಬೆಳಕಿನ
ನಾಡಿದು ನಮ್ಮದು ಕನ್ನಡವು
ವಿಧ ವಿಧ ಲೋಹವ ಸಂಪದ ತುಂಬಿದ
ಬೀಡಿದು ನಮ್ಮದು ಕನ್ನಡವು

ಗುರುಗಳು ಋಷಿಗಳು ರಾಜರು ಕವಿಗಳು
ಬಾಳಿದ ನಾಡಿದು ಕನ್ನಡವು
ಧೀರರು ವೀರರು ಭಕ್ತರು ಶಕ್ತರು
ಬೆಳಗಿದ ಬೀಡಿದು ಕನ್ನಡವು

ದೇಗುಲ ಗುರುಮನೆ ಕೋಟೆಯ ಅರಮನೆ
ಮೆರೆಯುವ ನಾಡಿದು ಕನ್ನಡವು
ಗೋಮಟ ನೆಲೆಸಿದ ಕೇಶವ ಹರಸಿದ
ಹಿರಿಮೆಯ ಬೀಡಿದು ಕನ್ನಡವು

ಕೂಡಿದ ಮನಗಳ ಬಗೆ ಬಗೆ ಜನಗಳ
ಮಮತೆಯ ನಾಡಿದು ಕನ್ನಡವು
ಶಾಂತಿಯ ಬಯಕೆಯ ವಿನಯದ ನಡತೆಯ
ಮಂದಿಯ ಬೀಡಿದು ಕನ್ನಡವು