ತಾಯೆ ನಮ್ಮ ಭಾರತಿ
ಬೆಳಗಲಮ್ಮ ಕೀರುತಿ

ನಿನ್ನ ಬನದ, ಬಯಲ, ಹೊಲದ
ಹಸಿರು ನಗಲಿ ಎಂದಿಗೂ
ಮಣ್ಣ ಬಲವು ಬಸಿರ ಜಲವು
ಬತ್ತದಿರಲು ಮುಂದಿಗೂ

ಚೆಲುವು ಚೆಲ್ಲಿ ನಿಂದು ಇಲ್ಲಿ
ಜಗಕೆ ಹರುಷ ಉಣಿಸಲಿ
ಕೋಟಿ ತೀರ್ಥ ಪುಣ್ಯ ಕ್ಷೇತ್ರ
ಲೋಕದೆದೆಯ ತಣಿಸಲಿ

ಸಹಜ ಸಿರಿಯ ನಿನ್ನ ಹಿರಿಯ
ಸೆಲೆಯು ಇರಲಿ ತುಂಬಿಯೆ
ಬಾಳಲೆಮ್ಮ ಹರಸು ಅಮ್ಮ
ನಮ್ಮ ನಾವು ನಂಬಿಯೆ

ಸತ್ಯ ಪ್ರೀತಿ ನ್ಯಾಯ ನೀತಿ
ನಡೆ ನುಡಿಯಲಿ ಹೊಮ್ಮಲಿ
ಧರ್ಮ, ನಿಯಮ, ದೇಶ ಪ್ರೇಮ
ಹೃದಯಗಳಲಿ ಚಿಮ್ಮಲಿ

ಜನಮನದಲಿ ಪರಿಮಳಿಸಲಿ
ಮಾನವತೆಯ ಚಂದನ
ಸುಖದ ಸುಗ್ಗಿಯಲ್ಲಿ ಹಿಗ್ಗಿ
ಆಗಲಿ ನೆಲ ನಂದನ