ಭಾರತಾಂಬೆಯ ಮಕ್ಕಳೆಲ್ಲರು
ನಾವೆ ನಾಡಿನ ವೀರರು
ಕಷ್ಟ ಕೋಟಿಗೆ ಕುಗ್ಗಿ ಬಗ್ಗದೆ
ಮುಂದೆ ನಡೆಯುವ ಧೀರರು

ನಾವು ಎಲ್ಲವರೊಂದೆಯೆನ್ನುವ
ಬಂಧು ಭಾವನೆ ತಳೆವೆವು
ದ್ವೇಷ ಮತ್ಸರ ವೆನುವ ಮನಸಿನ
ಹೊಲದ ಕಳೆಗಳ ಕಳೆವೆವು

ಕೆಡುಕು ಮಾಡಿದ ಕೆಟ್ಟ ವೈರಿಯ
ಕ್ಷಮಿಸಿ ಪ್ರೀತಿಯ ನಿಡುವೆವು
ನಿತ್ಯ ಜನಹಿತ ಬಯಸಿ ದುಡಿಯುತ
ಸತ್ಯ ಮಾರ್ಗದಿ ನಡೆವೆವು

ಸೇವೆ ನಮಗಿದು ಸಹಜ ಧರ್ಮವು
ದುಡಿಮೆ ವೃದ್ಧಿಗೆ ಕಾರಣ
ಸರ್ವರಲಿ ಸಮಭಾವ-ಸ್ನೇಹವೆ
ನಮ್ಮ ಬದುಕಿನ ಹೂರಣ

ಬಂದ ನೋವನು ನುಂಗಿ ನಗುವೆವು
ಎಂಥ ಸೋಲಿಗು ಸೋಲೆವು
ದೇಶ ಮಾತೆಯ ಮೆರೆಸಿ ಮೆರೆಯುವ
ಪಂಥ ಗೆದ್ದೇ ಗೆಲುವೆವು