ಸೋದರ ಸೋದರಿಯರೆ ನಾವಿಂದು
ನಗು ಮೊಗದಿಂದಲೆ ಮುಂದಕೆ ಬಂದು
ನಾಡಿನ ಹಾಡನು ಹಾಡೋಣ
ನಾಡ ಪತಾಕೆಗೆ ನಮಿಸೋಣ ||೧||

ಕೇಸರಿ ಬಿಳುಪೂ ಹಸುರಿನ ಬಣ್ಣ
ನಡುವೆಯೆ ಚಕ್ರದ ಗುರುತಿಹುದಣ್ಣ
ಚೆಲುವಿನ ಬಾವುಟ ನಮ್ಮದಿದು
ಗೆಲುವಿನ ಬಾವುಟ ನಮ್ಮದಿದು ||೨||

ಧ್ವಜವಿದಕಾಗಿಯೆ ವೀರರ ತಂಡ
ತೆತ್ತಿದೆ ಸಾವಿರ ಜೀವದ ದಂಡ
ಗಾಂಧೀ ನೆಹರೂ ಎಲ್ಲವರೂ
ಈ ಗುಡಿಯಡಿಯಲೆ ದುಡಿದವರು     ||೩||

ಭಾರತಮಾತೆಯ ವರಸಂಕೇತ
ಧ್ವಜವಿದು ನಮ್ಮದು ಜಗವಿಖ್ಯಾತ
ಇದರಲ್ಲಿದೆ ನಮ್ಮಯ ಭಕ್ತಿ
ಇದರಿಂದಲೆ ನಮಗೀ ಶಕ್ತಿ   ||೪||

ಕೋಟಿ ಜನಂಗಳ ಗೈಮೆಯ ಹಣ್ಣು
ದೇಶದ ಸ್ವಾತಂತ್ಯ್ರದ ನಿಜ ಕಣ್ಣು
ಬಾವುಟಕಿಂತಲು ಮಿಗಿಲಿಲ್ಲ
ಬಾವುಟ ದೇವರು ನಮಗೆಲ್ಲ ||೫||