ಒಂದು ಸಮೀಕ್ಷೆಯ ಪ್ರಕಾರ, ಇಂಟರ್‍ನೆಟ್ ಕಾಮುಕರಿಗೆ ಬಲಿಯಾದ ಮುಗ್ಧ ಮಕ್ಕಳಲ್ಲಿ ಶೇಕಡಾ ೭೮ರಷ್ಟು ಮಕ್ಕಳು ೧೨ ವರ್ಷಕ್ಕಿಂತ ಚಿಕ್ಕ ವಯಸ್ಸಿನವರಾಗಿದ್ದಾರೆ.ಇವರಲ್ಲಿ ಹಲವರು ಇಂಟರ್‍ನೆಟ್, ಮೊಬೈಲ್ ಫೋನ್ ಬಳಸುವುದಿಲ್ಲ. ಕೆಲವು ಮಕ್ಕಳ ಚಿತ್ರಗಳನ್ನು ಅವರ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ಇಲ್ಲ.

ಸರಾಸರಿ ದಿನಕ್ಕೆ ೫ ಜನ ಮುಗ್ಧ ಮಕ್ಕಳ ಲೈಂಗಿಕ ಶೋಷಣೆಯನ್ನು ಇಂಟರ್‍ನೆಟ್ ಕಾಮುಕರು ಮಾಡಿರುವ ಪ್ರಕರಣಗಳು ವರದಿಯಾಗುತ್ತಿವೆ ಎಂದು ಇಂಟರ್‍ಪೋಲ್‍ನ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ. ಹಲವಾರು ಕಾರಣಗಳಿಂದ ವರದಿಯಾಗದೆ ಉಳಿಯುವ ಪ್ರಕರಣಗಳ ಸಂಖ್ಯೆ ಕೂಡಾ ಸಾಕಷ್ಟು ಇದೆ ಎಂದು ಹಲವು ತಜ್ಞರು ಅಭಿಪ್ರಾಯ ಪಡುತ್ತಾರೆ.

“ಕಿಡ್ಸ್ ಎಕ್ಸಎಕ್ಸಎಕ್ಸ” ಹೆಸರಿನ ವಾಟ್ಸಪ್ ಗ್ರೂಪ್‍ನ್ನು ಬಳಸಿ ಅದರ ೧೧೯ ಜನ ಸದಸ್ಯರು, ಪುಟ್ಟ ಮಕ್ಕಳ ನಗ್ನ ಚಿತ್ರಗಳು ಮತ್ತು ಅಶ್ಲೀಲ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.ಈ ಗ್ರೂಪ್‍ನ ಸದಸ್ಯರು ಪಾಕಿಸ್ತಾನ, ಅಫಘಾನಿಸ್ತಾನ, ಅಮೇರಿಕ, ಚೀನಾ, ನ್ಯೂಜಿಲ್ಯಾಂಡ್, ಮೆಕ್ಸಿಕೋ, ಬ್ರೇಜಿಲ್, ಕೀನ್ಯಾ, ನೈಜೇರಿಯಾ, ಶ್ರೀಲಂಕಾ ಮತ್ತು ಭಾರತಕ್ಕೆ ಸೇರಿದವರಾಗಿದ್ದಾರೆ.ಭಾರತದ ಸಿಬಿಐ ಈ ಜಾಲವನ್ನು ಭೇದಿಸಿದ್ದು, ಈ ವಾಟ್ಸಪ್ ಗ್ರೂಪ್ ನಿರ್ವಹಿಸುತ್ತಿದ್ದ ನಾಲ್ವರು ಭಾರತೀಯರನ್ನು ಕೆಲದಿನಗಳ ಹಿಂದೆ ಬಂಧಿಸಿದೆ.ಭಾರತದ ಮಾಹಿತಿ ತಂತ್ರಜ್ಞಾನ ೨೦೦೦ ಕಾನೂನಿನ ೬೭ ಬಿ ಪ್ರಕಾರ ಮಕ್ಕಳ ನಗ್ನ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ಇಂಟರ್‍ನೆಟ್‍ನಲ್ಲಿ ಅಪಲೋಡ್ ಮಾಡುವುದು ಮತ್ತು ಹಂಚಿಕೊಳ್ಳುವುದು ಅಪರಾಧವಾಗಿದೆ.ಈ ಪ್ರಕರಣದ ತನಿಖೆ ಮುಂದುವರೆದಿದೆ.

ಆಸ್ಟ್ರೇಲಿಯಾ ದೇಶದಲ್ಲಿ ಹದಿಹರೆಯದ ಯುವತಿಯರಿಬ್ಬರನ್ನು ಬಂಧಿಸಿ, ವಿಚಾರಣೆ ನೆಡೆಸಲಾಗಿದ್ದು, ಅಮಾಯಕ ಮಕ್ಕಳ ಲೈಂಗಿಕ ಶೋಷಣೆಯಲ್ಲಿ ಇವರು ಭಾಗಿಯಾಗಿರುವುದು ಸಾಬೀತಾಗಿದೆ.ಕೆಲವು ದಿನಗಳ ಹಿಂದೆ ಇವರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಕೆಲವು ತಿಂಗಳ ಹಿಂದೆ, ಹೈದರಾಬಾದಿಗೆ ಪ್ರವಾಸಿಯಂತೆ ಬಂದ ವಿದೇಶಿ ಪ್ರಜೆಯೊಬ್ಬ, ಅಮಾಯಕ ಮಕ್ಕಳನ್ನು ವಂಚಿಸಿ ಅವರ ನಗ್ನ ಚಿತ್ರಗಳು ಮತ್ತು ವೀಡಿಯೋಗಳನ್ನು ತೆಗೆದು ಮಾರಾಟ ಮಾಡುತ್ತಿದ್ದ. ಈ ಕುರಿತು ಮಾಹಿತಿ ದೊರೆತ ಸ್ಥಳೀಯ ಪೋಲಿಸರು, ಈತನನ್ನು ಬಂಧಿಸಿ, ಪ್ರಕರಣದ ತನಿಖೆ ನೆಡೆಸುತ್ತಿದ್ದಾರೆ.

ಇದಕ್ಕೂ ಮೊದಲು, ದಕ್ಷಿಣ ಭಾರತದ ರಾಜ್ಯವೊಂದಕ್ಕೆ ಸೇರಿದ ನೂರಾರು ಜನ,  ಸಾಮಾಜಿಕ ಜಾಲತಾಣವೊಂದರಲ್ಲಿ ರಹಸ್ಯ ಗ್ರೂಪ್ ರಚಿಸಿ, ಅದರ ಮೂಲಕ ಶಾಲೆಗೆ ಹೋಗುವ ಪುಟ್ಟ ಮಕ್ಕಳ ಲೈಂಗಿಕ ಶೋಷಣೆಯಲ್ಲಿ ತೊಡಗಿದ್ದರು. ಈ ಜಾಲವನ್ನು ಭೇದಿಸಿದ ಪೋಲಿಸರು, ಅಪರಾಧಿಗಳನ್ನು ಬಂಧಿಸಿ ತನಿಖೆ ನೆಡೆಸುತ್ತಿದ್ದಾರೆ.

ಪುಟ್ಟ ಮಕ್ಕಳ ನಗ್ನ ಚಿತ್ರ, ವೀಡಿಯೋಗಳನ್ನು ಬಳಸುವುದು, ಅಮಾಯಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನೆಡೆಸುವುದು, ಮಕ್ಕಳನ್ನು ಬಳಸಿ ವೇಶ್ಯಾವೃತ್ತಿ ನೆಡೆಸುವುದು ಮತ್ತಿತರ ರೀತಿಯಲ್ಲಿ ಅಪರಾಧ ಕೃತ್ಯಗಳು ವಿಶ್ವಾದ್ಯಂತ್ಯ ಹೆಚ್ಚಾಗುತ್ತಿರುವುದು, ಆತಂಕದ ವಿಷಯವಾಗಿದೆ. ಅಪರಾಧಿಗಳು ಇಂಟರ್‍ನೆಟ್, ಸಾಮಾಜಿಕ ಜಾಲತಾಣ ಮೊದಲಾದ ಸೌಲಭ್ಯಗಳನ್ನು ಬಳಸಿ ಇಂತಹ ಕೃತ್ಯಗಳನ್ನು ನೆಡೆಸುತ್ತಿರುವುದು ಖಂಡನಾರ್ಹ. ಮಕ್ಕಳನ್ನು ಇಂತಹ ಕಾಮುಕರಿಂದ ರಕ್ಷಿಸಲು ಹೆಚ್ಚಿನ ಜನಜಾಗೃತಿಯ ಅಗತ್ಯವಿದೆ.

ಇಂಟರ್‍ನೆಟ್, ಮೊಬೈಲ್ ಫೋನ್ ಬಳಸದ ಪುಟ್ಟ ಮಕ್ಕಳು ಕೂಡಾ ಇಂಟರ್‍ನೆಟ್ ಕಾಮುಕರಿಗೆ ಹೇಗೆ ಬಲಿಯಾಗುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಹೀಗೊಂದು ನೈಜ ಪ್ರಕರಣ.

( ಈ ಪ್ರಕರಣಕ್ಕೆ ಸಂಬಂಧಿಸಿದ ಶಾಲೆಯ ಹೆಸರು, ಊರು ಮತ್ತು ಮಕ್ಕಳ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ ).

ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದುವ ಮಗಳು, ಓದಿನಲ್ಲಿ ಮತ್ತು ಆಟದಲ್ಲಿ ಮುಂದೆ ಇರುವುದು ಪೋಷಕರಿಗೆ ಸಂತಸ ತಂದಿತ್ತು.ಆದರೆ, ಇದ್ದಕ್ಕಿದಂತೆ ಆ ಪುಟ್ಟ ಕಂದ, ಓದು, ಆಟಪಾಟಗಳಲ್ಲಿ ಹಿಂದೆ ಬೀಳತೊಡಗಿದಳು.ಎಲ್ಲರ ಜೊತೆ ಇರುತ್ತಿದ್ದವಳು, ಈಗ ಏಕಾಂಗಿಯಾಗಿರಲು ಇಷ್ಟ ಪಡುತ್ತಿದ್ದಾಳೆ.ನಗುವ ಹುಡಗಿ, ಈಗ ಯಾವುದೋ ಭಯ, ಅತಂಕದಲ್ಲಿರುವಂತೆ ಕಾಣುತ್ತಿದೆ.ಹೀಗೆ ತಮ್ಮ ಹಲವಾರು ಆತಂಕಗಳನ್ನು ಹಂಚಿಕೊಂಡರು ಪೋಷಕರು.

ವೈದ್ಯರು, ಆಪ್ತ ಸಮಾಲೋಚಕರು ಈ ಪುಟ್ಟ ಕಂದನಿಗೆ ನೆರವಾಗಲು ಪ್ರಯತ್ನಿಸುತ್ತಿದ್ದರು.ಇಂಟರ್‍ನೆಟ್ ಕಾಮುಕರ ಕರಿನೆರಳು ಈ ಪುಟ್ಟ ಕಂದನನ್ನು ಕಾಡುತ್ತಿರುವ ಕೆಲವು ಲಕ್ಷಣಗಳು ಕಂಡು ಬಂದವು.ಈ ಕುರಿತು ಸೈಬರ್ ವಿಧಿವಿಜ್ಞಾನ ವಿಧಾನದಂತೆ ತನಿಖೆ ನೆಡೆಸಿದಂತೆ, ದೊರೆತ ವಿವರಗಳು ಗಾಬರಿಪಡಿಸಿದವು.

ಅದೇ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಹಿರಿಯ ವಿದ್ಯಾರ್ಥಿನಿಯರು, ಇಂಟರ್‍ನೆಟ್ ಕಾಮುಕರ ಜಾಲಕ್ಕೆ ಸಿಕ್ಕಿದ್ದರು.ಅವರನ್ನು ಬಳಸಿಕೊಂಡು ಈ ಕಾಮುಕರು, ಈ ಪುಟ್ಟ ಕಂದನಂತೆ ಹಲವು ಮಕ್ಕಳನ್ನು ತಮ್ಮ ಜಾಲಕ್ಕೆ ತರುವ ಪ್ರಯತ್ನ ನೆಡೆಸಿದ್ದರು.

ಪುಟ್ಟ ಮಕ್ಕಳ ಜೊತೆ ಸ್ನೇಹಗಳಿಸುವುದು, ಅವರೊಡನೆ ಆಟವಾಡುವುದು, ಓದಿನಲ್ಲಿ ಸಹಾಯ ಮಾಡುವುದು, ಆಗಾಗ ಚಾಕಲೇಟ್ ಕೊಡಿಸುವುದು, ಹೀಗೆ ಬಹಳ ಯೋಜಿತವಾಗಿ ಆ ಮಕ್ಕಳ ಮತ್ತು ಪೋಷಕರ ವಿಶ್ವಾಸವನ್ನು ಈ ಹಿರಿಯ ವಿದ್ಯಾರ್ಥಿನಿಯರು ಗಳಿಸುತ್ತಿದ್ದರು. ಸಮಯ ಸಾಧಿಸಿ, ಈ ಪುಟ್ಟ ಮಕ್ಕಳಿಗೆ ಪ್ರಜ್ಞೆ ತಪ್ಪುವಂತಹ ತಿನಿಸು ನೀಡುತ್ತಿದ್ದ ಈ ಹಿರಿಯ ವಿದ್ಯಾರ್ಥಿನಿಯರು. ಈ ಕಂದಗಳನ್ನು ವಿವಸ್ತ್ರಗೊಳಿಸಿ ಅವರ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ತಗೆಯುತ್ತಿದ್ದರು. ನಂತರ, ಈ ಚಿತ್ರಗಳು, ವೀಡಿಯೋಗಳನ್ನು ಇಂಟರ್‍ನೆಟ್ ಕಾಮುಕರಿಗೆ ಈ ಹಿರಿಯ ವಿದ್ಯಾರ್ಥಿನಿಯರು ತಲುಪಿಸುತ್ತಿದ್ದರು.

ಒಂದು ಮುದ್ದು ಕಂದನ ಚಿತ್ರಕ್ಕೆ ಇಷ್ಟು ಡಾಲರ್, ವೀಡಿಯೋಗೆ ಇಷ್ಟು ಡಾಲರ್ ಹೀಗೆ ಬೇರೆಯವರಿಗೆ ಮಾರಾಟ ಮಾಡುವ ಇಂಟರ್‍ನೆಟ್ ಕಾಮುಕರು, ಯಾವ ಮಕ್ಕಳ ಚಿತ್ರ ಮತ್ತು ವೀಡಿಯೋಗೆ ಹೆಚ್ಚು ಬೇಡಿಕೆ ಇದೆ ಆ ಮಕ್ಕಳ ಚಿತ್ರ ಮತ್ತು ವೀಡಿಯೋ ತಗೆದು ಕಳುಹಿಸುವಂತೆ ಈ ಹಿರಿಯ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದ್ದರು. ಅವರ ಬೆದರಿಕೆ, ಒತ್ತಡಗಳಿಗೆ ಮಣಿದು ಈ ಹಿರಿಯ ವಿದ್ಯಾರ್ಥಿನಿಯರು, ಆ ಮುದ್ದು ಕಂದಗಳ ಶೋಷಣೆಗೆ ಮುಂದಾಗುತ್ತಿದ್ದರು.ಈ ಮೊದಲು ತಾವು ತಗೆದಿರುವ ಚಿತ್ರಗಳನ್ನು, ವೀಡಿಯೋಗಳನ್ನು ಮುದ್ದು ಕಂದಗಳಿಗೆ ತೋರಿಸಿ, ಅವುಗಳನ್ನು ಅವರ ಪೋಷಕರಿಗೆ ತೋರಿಸುವ ಬೆದರಿಕೆ ಹಾಕುತ್ತಿದ್ದರು.ಕೆಲವೊಮ್ಮೆ ದೈಹಿಕವಾಗಿ ಹಲ್ಲೆ ಕೂಡಾ ಮಾಡುತ್ತಿದ್ದರು.ಹೆದರಿದ ಮುದ್ದು ಕಂದಗಳು, ಈ ಹಿರಿಯ ವಿದ್ಯಾರ್ಥಿನಿಯರು ಹೇಳಿದಂತೆ ಮಾಡುತ್ತಿದ್ದವು.

ಈ ಎಲ್ಲ ಘಟನೆಗಳಿಂದ ಅಪಘಾತ, ತೀವ್ರ ಮಾನಸಿಕ ಒತ್ತಡ, ಭಯದಿಂದ ಬಳಲುತ್ತಿದ್ದ ಈ ಪುಟ್ಟ ಮಗು ಮತ್ತೆ ಚೇತರಿಸಿ ಕೊಂಡು ಮೊದಲಿನಂತೆ ಓದು, ಆಟಪಾಠಗಳಲ್ಲಿ ಅಗ್ರಸ್ಥಾನಗಳಿಸಿದೆ.ಆ ಇಬ್ಬರು ಹಿರಿಯ ವಿದ್ಯಾರ್ಥಿನಿಯರ ಮನವೊಲಿಸಿ, ಅವರ ನೆರವಿನಿಂದ ಈ ಕೃತ್ಯಗಳಿಗೆ ಕಾರಣರಾದ ಇಂಟರ್‍ನೆಟ್ ಕಾಮುಕರನ್ನು ಗುರುತಿಸಿ, ಅವರ ಬಂಧನವಾಗುವಂತೆ ಮಾಡಲಾಯಿತು.ಈ ರೀತಿ ಈ ಕಾಮುಕರು ಸಂಗ್ರಹಿಸಿದ್ದ ಸಾವಿರಾರು ಮಕ್ಕಳ ಚಿತ್ರಗಳು ಮತ್ತು ವೀಡಿಯೋಗಳ ಸಂಗ್ರಹ ನೋಡಿದಾಗ ಎಂತಹ ಕಲ್ಲದೆಯವರಿಗೂ ನೋವಾಗುತ್ತದೆ.

ಇಂತಹ ವಿಕೃತ ಕಾಮಿಗಳಿಂದ ಅಮಾಯಕ ಮಕ್ಕಳನ್ನು ರಕ್ಷಿಸಲು, ಹೋರಾಡುವ ಸಮಾನಮನಸ್ಕ ಸೈಬರ್ ತಜ್ಞರ ಜೊತೆಗೂಡಿ ನಾನು ಕೆಲಸ ಮಾಡುತ್ತಿರುವುದಕ್ಕೆ ಇದು ಪ್ರಮುಖ ಕಾರಣವಾಗಿದೆ. .

ವಿಶ್ವಾದಂತ್ಯ ಹರಡಿರುವ ಇಂಟರ್‍ನೆಟ್ ಕಾಮುಕರ ಜಾಲದಲ್ಲಿ ಯಾರು, ಏನು ಪಾತ್ರವಹಿಸುತ್ತಾರೆ ಮತ್ತು ಅವರಿಂದ ನಮ್ಮ ಮಕ್ಕಳಿಗೆ ಆಗಬಹುದಾದ ಅಪಾಯವೇನು ಎಂದು ತಿಳಿದುಕೊಳ್ಳೋಣ.

ಸಂಖ್ಯೆ ಅಪರಾಧಿಗಳು ಆಸಕ್ತಿ ಸಂಭವನೀಯ ಅಪಾಯ
ಸಂಚಾರಿಗಳು

ಇಂಟರ್‍ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಉಚಿತವಾಗಿ ದೊರೆಯುವ ಮಕ್ಕಳ ನಗ್ನ ಚಿತ್ರಗಳು, ವೀಡಿಯೋಗಳಿಗಾಗಿ ಇವರು ಹುಡುಕುತ್ತಾರೆ. ಇಂತಹ ಚಿತ್ರಗಳು, ವೀಡಿಯೋಗಳ ಸಂಗ್ರಹವನ್ನು ಇಟ್ಟು ಕೊಳ್ಳುವ ಇವರು, ಸಾಮಾಜಿಕ ಜಾಲತಾಣಗಳ ಮೂಲಕ ಇವುಗಳನ್ನು ಇಂತಹ ಆಸಕ್ತಿ ಇರುವ ಜನರ ಜೊತೆ ಹಂಚಿಕೊಳ್ಳುತ್ತಾರೆ.

ಪುಟ್ಟ ಮಕ್ಕಳನ್ನು ಅಪಹರಿಸಿ, ಅವರ ನಗ್ನ ಚಿತ್ರ, ವೀಡಿಯೋ ತಗೆಯುವ ಕಾಮುಕರು ಕೆಲವೊಮ್ಮೆ ತಮ್ಮ ಕೃತ್ಯಗಳಲ್ಲಿ ಇಂತಹವರನ್ನು ಬಳಸಿಕೊಳ್ಳುತ್ತಾರೆ.
ಪ್ರೇಕ್ಷಕರು ಮಕ್ಕಳನ್ನು ಕುರಿತು ಅಶ್ಲೀಲ ಮಾಹಿತಿ, ಚಿತ್ರ, ವೀಡಿಯೋ ಮತ್ತು ಲೈವ್ ಷೋಗಳನ್ನು ನೀಡುವ ಇಂಟರ್‍ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರು ಹಣ ನೀಡಿ ಸದಸ್ಯರಾಗುತ್ತಾರೆ. ಅವರ ಸದಸ್ಯತ್ವಕ್ಕೆ ಸೂಕ್ತವಾದಂತೆ ಇಂತಹ ಮಾಹಿತಿಯನ್ನು ನೋಡಿ, ಆನಂದಿಸುವ ಸೌಲಭ್ಯಗಳನ್ನು ನೀಡಲಾಗುತ್ತದೆ.

ಇಂಟರ್‍ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಂತೆ, ನಿಜ ಜೀವನದಲ್ಲೂ ಮಕ್ಕಳ ಜೊತೆ ಅಸಹಜವಾಗಿ ವರ್ತಿಸುವ ಪ್ರಯತ್ನವನ್ನು ಇಂತಹವರು ಮಾಡಿರುವ ಉದಾಹರಣೆಗಳಿವೆ. ಮಗುವಿನ ಕುಟುಂಬದ ಸದಸ್ಯರು, ಬಂಧುಗಳು, ಪರಿಚಿತರಲ್ಲಿ ಇವರು ಒಬ್ಬರಾಗಿರುವ ಸಾಧ್ಯತೆ ಇದೆ.

ವ್ಯಸನಿಗಳು ತಮಗೆ ಇಂತಹ ಮಗುವಿನ ಚಿತ್ರ, ವೀಡಿಯೋ, ಲೈವ್ ಶೋ ಬೇಕು ಎಂದು ಹಣ ನೀಡಿ, ಬೇಡಿಕೆ ಇಡುತ್ತಾರೆ. ನಿಜ ಜೀವನದಲ್ಲೂ ಮಕ್ಕಳ ಮೇಲೆ ಅತ್ಯಾಚಾರವನ್ನು ಇಂತಹವರು ನೆಡೆಸಿರುವ ಪ್ರಕರಣಗಳಿವೆ.
ವಿಕೃತ ಕಾಮಿಗಳು ಮಕ್ಕಳ ಮೇಲೆ ಚಿತ್ರಹಿಂಸೆ, ಅಸಹಜ ಲೈಂಗಿಕ ಕ್ರಿಯೆಗಳ ಚಿತ್ರಗಳು, ವೀಡಿಯೋಗಳಿಗೆ ಇವರ ಬೇಡಿಕೆ ಹೆಚ್ಚಾಗಿರುತ್ತದೆ. ನಿಜ ಜೀವನದಲ್ಲಿ ಮಕ್ಕಳ ಮೇಲೆ ಇಂತಹವರು, ಈ ರೀತಿಯ ಕೃತ್ಯ ನೆಡೆಸಿ, ಮಕ್ಕಳ ಸಾವಿಗೆ ಕಾರಣವಾದ ಪ್ರಕರಣಗಳಿವೆ.
ನಿರ್ಮಾಪಕರು ಮೇಲೆ ತಿಳಿಸಿರುವ 1ರಿಂದ 4ನೆ ವರ್ಗದ ಅಪರಾಧಿಗಳಿಗೆ ಅಗತ್ಯವಾದ ಚಿತ್ರಗಳು, ವೀಡಿಯೋಗಳನ್ನು ಮಾಡಿಸುವುದು, ಮಕ್ಕಳ ಮೇಲೆ ನೆಡೆಯುವ ಅತ್ಯಾಚಾರ, ಚಿತ್ರಹಿಂಸೆಗಳ ಆನ್‍ಲೈನ್ ಲೈಫ್ ಷೋಗಳನ್ನು ಏರ್ಪಡಿಸುವುದು ಇವರ ಕೊಡುಗೆ. ಲಾಭಕ್ಕಾಗಿ ಏನು ಅಪರಾಧ ಮಾಡಲೂ ಸಿದ್ಧವೆನ್ನುವಂತೆ ವರ್ತಿಸುವ ಇಂತಹವರ ಗುಂಪುಗಳು ಬೇರೆ ಬೇರೆ ದೇಶಗಳಿಂದ ಕೆಲಸ ಮಾಡುವುದರಿಂದ, ಇಂತಹವರನ್ನು ಪತ್ತೆ ಮಾಡುವುದು ಮತ್ತು ಬಂಧಿಸುವುದು ಕಷ್ಟದ ಕೆಲಸವಾಗುತ್ತದೆ.
ಘೋಷಿತ ಅಪರಾಧಿಗಳು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ ಮೊದಲಾದ ಘೋರ ಅಪರಾಧ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿರುವ ಅಥವಾ ಇಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡಿರುವ ಕಾರಣಕ್ಕಾಗಿ ಇಂಟರ್‍ಫೋಲ್‍ನ ಘೋಷಿತ ಅಪರಾಧಿಗಳ ಡಾಟಾಬೇಸ್‍ನಲ್ಲಿ ಇವರು ದಾಖಲಾಗಿರುತ್ತಾರೆ. ಕಾನೂನಿನ ಕಣ್ಣು ತಪ್ಪಿಸಿ ಓಡಾಡುವ ಈ ಅಪರಾಧಿಗಳು, ಮಕ್ಕಳ ಮೇಲೆ ನೆಡೆಯುವ ಲೈಂಗಿಕ ಶೋಷಣೆ ಮತ್ತು ಅಪರಾಧಗಳನ್ನು ಪ್ರೋತ್ಸಾಹಿಸುವ ಸಿ.ಡಿ, ಡಿ.ವಿ.ಡಿ, ಪುಸ್ತಕಗಳ ಮಾರಾಟ, ಇಂತಹ ಕೃತ್ಯಗಳಿಗೆ ಮೀಸಲಾದ ಜಾಲತಾಣಗಳ ನಿರ್ವಹಣೆ ಮೊದಲಾದ ಅಪರಾಧಗಳಲ್ಲಿ ಭಾಗಿಯಾಗಿರುವ ಪ್ರಕರಣಗಳಿವೆ.

ವಿಶ್ವಾದ್ಯಂತ ಸಾವಿರಾರು ಮಕ್ಕಳ ಮೇಲೆ ದೌರ್ಜನ್ಯ ನೆಡೆಸಿರುವ ಇಂತಹ ಕಾಮುಕರನ್ನು ಹಿಡಿಯಲು ಏನು ಮಾಡಲಾಗುತ್ತಿದೆ ಎಂದು ತಿಳಿದುಕೊಳ್ಳೋಣ.

ಇಂಟರ್‍ನೆಟ್ ಕಾಮುಕರನ್ನು ಹಿಡಿಯಲು ಬಳಸಲಾಗುತ್ತಿರುವ ಕೆಲವು ಆಧುನಿಕ ತಂತ್ರಜ್ಞಾನ ಮತ್ತು ವಿಧಾನಗಳ ಕಿರು-ಪರಿಚಯ ಹೀಗಿದೆ.ಇಂತಹ ತಂತ್ರಜ್ಞಾನಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ, ಇಂಟರ್‍ನೆಟ್ ಕಾಮುಕರಿಗೆ ಅವುಗಳಿಂದ ಪಾರಾಗುವ ತಂತ್ರ ರೂಪಿಸಲು ಇನ್ನೂ ಸಾಧ್ಯವಾಗಿಲ್ಲ.

1) ಮಕ್ಕಳ ಜೊತೆ ಸಂವಾದ, ಮಾತುಕತೆ ನಡೆಸುವಾಗ ಸ್ಮಿತ್‍ನಂತಹ ಇಂಟರ್‍ನೆಟ್ ಕಾಮುಕರು ತುಂಬಾ ಎಚ್ಚರಿಕೆ ವಹಿಸುತ್ತಾರೆ. ಅವರು ಅಪ್ರಾಪ್ತ ವಯಸ್ಸಿನ ಬಾಲಕ ಅಥವಾ ಬಾಲಕಿಯ ಜೊತೆ ಸಂವಾದ ನೆಡೆಸುತ್ತಿರುವುದನ್ನು ನಂಬಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ.ಕೆಲವೊಮ್ಮೆ ಅಂತಹ ಬಾಲಕಿ ತನ್ನ ಮನೆ, ಶಾಲೆ, ಆಟದಲ್ಲಿ ತೊಡಗಿರುವ ಚಿತ್ರಗಳನ್ನು ಇಂತಹ ಅಪರಾಧಿಗಳ ಜೊತೆ ಹಂಚಿಕೊಳ್ಳುತ್ತೇವೆ.ಸಮುದ್ರ ದಂಡೆಯಲ್ಲಿ ವಿಹರಿಸುತ್ತಿರುವ ಅಥವಾ ಈಜುಕೊಳದಲ್ಲಿರುವ ಚಿತ್ರಗಳು ದೊರೆತಾಗ ಈ ಕಾಮುಕರು ತುಂಬಾ ಉತ್ಸಾಹ ತೋರಿಸುತ್ತಾರೆ.

2) ಇಂಟರ್‍ನೆಟ್ ಕಾಮುಕರು ಪ್ರಾರಂಭದಲ್ಲಿ ಮಕ್ಕಳಿಗೆ ತೋರಿಸುವ ಅಥವಾ ಕಳುಹಿಸುವ ಚಿತ್ರಗಳು ಮತ್ತು ವೀಡಿಯೋಗಳಲ್ಲಿ ತಮ್ಮ ಸುಳಿವು ಸಿಗದಂತೆ ಎಚ್ಚರವಹಿಸುತ್ತಾರೆ. ಆದರೆ ಆ ಮಗು ತಾವು ಹೇಳಿದಂತೆ ಕೇಳುತ್ತಿದೆ ಮತ್ತು ಅದನ್ನು ಲೈಂಗಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಅವಕಾಶ ಹತ್ತಿರದಲ್ಲಿದೆ ಎಂದಾಗ ತಾವು ಅದೇ ವಯಸ್ಸಿನ ಮಕ್ಕಳ ಜೊತೆ ನೆಡೆಸುತ್ತಿರುವ ಕ್ರಿಯೆಗಳ ಚಿತ್ರಗಳನ್ನು ಮತ್ತು ವೀಡಿಯೋಗಳನ್ನು ತೋರಿಸಲು ಪ್ರಾರಂಭಿಸುತ್ತಾರೆ. ನಿನ್ನ ವಯಸ್ಸಿನ ಮಕ್ಕಳು ನೆಡೆಸುವ ಸಹಜ ಕ್ರಿಯೆ ಮತ್ತು ಒಂದು ರೀತಿಯ ಆಟ ಆಡಿದಂತೆ ಅಷ್ಟೇ ಎಂದು ಮಗುವನ್ನು ನಂಬಿಸುವ ಪ್ರಯತ್ನ ಇವರದಾಗಿರುತ್ತದೆ.

ಹೀಗೆ ಮಗುವೊಂದರ ಜೊತೆಗೆ ಇಂಟರ್‍ನೆಟ್ ಅಪರಾಧಿಯೊಬ್ಬ ಹಂಚಿಕೊಂಡ ಚಿತ್ರವೊಂದು, ಅವನ ಬಂಧನಕ್ಕೆ ಕಾರಣವಾಯಿತು. ಸ್ನಾನದ ಕೋಣೆಯಲ್ಲಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನೆಡೆಸುತ್ತಿರುವ ಚಿತ್ರವನ್ನು ಕಳುಹಿಸುವ ಮೊದಲು, ಆತ ಬುದ್ದಿವಂತಿಕೆಯಿಂದ ಆ ಚಿತ್ರದಲ್ಲಿ ಕಾಣುವ ಸೋಪು, ಶಾಂಪೂ ಮೊದಲಾದವುಗಳ ಹೆಸರು ಕಾಣದಂತೆ ಮಾಡಿದ್ದ. ಸಾಮಾನ್ಯ ಫೋಟೋ ಎಡಿಟಿಂಗ್ ತಂತ್ರಾಂಶಗಳನ್ನು ಬಳಸಿ ಆತ ಮರೆಮಾಚಿರುವ ವಿವರಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇಂತಹ ಚಿತ್ರಗಳಲ್ಲಿ ಮರೆಮಾಚಿರುವ ಮಾಹಿತಿಯನ್ನು ಮತ್ತೆ ಓದಲು ಸಾಧ್ಯವಾಗುವಂತೆ, ಫೋಟೋ ಡಿಎನ್‍ಎ ಹೆಸರಿನ ತಂತ್ರಜ್ಞಾನವನ್ನು ಬಳಸುತ್ತೇವೆ.ಹೇಗೆ ಒಬ್ಬ ಮನುಷ್ಯನ ಕೈಬೆರಳುಗಳ ಗುರುತು ಮತ್ತೊಬ್ಬ ಮನುಷ್ಯನ ಕೈಬೆರಳುಗಳ ಗುರುತುಗಳಿಗಿಂತ ವಿಭಿನ್ನವಾಗಿರುತ್ತದೆ, ಅದೇ ರೀತಿ ಪ್ರತಿಯೊಂದು ಚಿತ್ರಕ್ಕೂ ಕೆಲವು ಮೂಲಭೂತ ಅಂಶಗಳಿರುತ್ತವೆ.ಇದನ್ನು ಫೋಟೋ ಡಿಎನ್‍ಎ ಎಂದು ಕರೆಯಲಾಗುತ್ತದೆ ಎಂದು ಸಂಕ್ಷಿಪ್ತವಾಗಿ ಇಲ್ಲಿ ಹೇಳಬಹುದು.

ಸ್ನಾನದ ಕೋಣೆಯಲ್ಲಿ ಸೋಪು, ಶಾಂಪು ಮೊದಲಾದ ವಸ್ತುಗಳ ಮಾಹಿತಿಯನ್ನು ಚಿತ್ರದಲ್ಲಿ ಅಪರಾಧಿ ಮರೆಮಾಚಿದ್ದ. ಆತನ ಜೊತೆಗಿದ್ದ ಮಗುವಿನ ಮುಖ ಅಸ್ಪಷ್ಟವಾಗಿತ್ತು. ಫೋಟೋ ಡಿಎನ್‍ಎ ತಂತ್ರಜ್ಞಾನ ಮತ್ತು ವಿವಿಧ ಇಮೇಜ್ ಅನೆಲೆಟಿಕ್ಸ್ ತಂತ್ರಾಂಶಗಳನ್ನು ಬಳಸಿದಾಗ, ಆ ಸ್ನಾನದ ಕೋಣೆಯಲ್ಲಿದ ವಸ್ತುಗಳ ಮಾಹಿತಿ ಸ್ಪಷ್ಟವಾಗಿ ಕಾಣಿಸಿತು ಮತ್ತು ಅಪರಾಧಿಯ ಜೊತೆಗಿದ್ದ ಮಗುವಿನ ಮುಖ ನೋಡಲು ಸಾಧ್ಯವಾಯಿತು. ಆ ಮಗುವಿನ ವಿವರಗಳನ್ನು ಪೋಲಿಸರಿಗೆ ನೀಡಿದಾಗ, ಅವರು ತನಿಖೆ ಮಾಡಿ, ಕೆಲವು ತಿಂಗಳು ಹಿಂದೆ ವಯಸ್ಕನೊಬ್ಬನಿಂದ ಭೀಕರವಾಗಿ ಅತ್ಯಾಚಾರ ಮತ್ತು ಚಿತ್ರಹಿಂಸೆಗೆ ಗುರಿಯಾಗಿ, ಮೃತಪಟ್ಟ ಮಗುವಿನ ಚಿತ್ರವೆಂದು ಖಾತ್ರಿ ಪಡಿಸಿದರು. ಈ ಸಮಯದಲ್ಲಿ ಅಪರಾಧಿಯ ಸ್ನಾನದ ಮನೆಯಲ್ಲಿದ್ದ ವಸ್ತುಗಳ ಚಿತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ, ಆತ ಸ್ನಾನದ ಸಮಯದಲ್ಲಿ ಬಳಸುತ್ತಿದ್ದ ಔಷಧದ ಬಾಟಲ್ ಮತ್ತು ಅದರ ವಿವರಗಳು ಪತ್ತೆಯಾದವು. ಈ ಮಾಹಿತಿಯನ್ನು ಪರಿಶೀಲಿಸಿ, ವೈದ್ಯರು ನೀಡಿದ ಮಾಹಿತಿಯನ್ನು ಪಡೆದ ಪೋಲಿಸರು, ಆ ಅಪರಾಧಿ ಈ ಔಷಧವನ್ನು ಖರೀದಿಸುತ್ತಿರುವ ಔಷಧ ಅಂಗಡಿ ಮತ್ತು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಪತ್ತೆ ಮಾಡಿದರು.

ಒಂದು ದಿನ ವೈದ್ಯರ ಬಳಿ ಬಂದ ಅಪರಾಧಿಯನ್ನು ಪೋಲಿಸರು ಬಂಧಿಸಿದರು. ಅಪರಾಧಿಯ ತನಿಖೆ ಮುಂದುವರೆದಾಗ, ಆತ ಹಲವಾರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿರುವುದು, ಚಿತ್ರಹಿಂಸೆ ನೀಡಿರುವುದು, ಸಾವಿರಾರು ಗಂಟೆಗಳ ಇಂತಹ ದೌರ್ಜನ್ಯಗಳ ವೀಡಿಯೋ ಮತ್ತು ಚಿತ್ರಗಳು ಪತ್ತೆಯಾದವು. ನ್ಯಾಯಾಲಯ ಈ ಅಪರಾಧಿಗೆ ಮರಣ ದಂಡನೆಯ ಶಿಕ್ಷೆ ವಿಧಿಸುವ ವಿಶ್ವಾಸವನ್ನು ಆ ದೇಶದ ಪೋಲಿಸರು ಹೊಂದಿದ್ದಾರೆ.

ಬೇರೆ ಬೇರೆ ದೇಶಗಳಲ್ಲಿರುವ ಇಂಟರ್‍ನೆಟ್ ಕಾಮುಕರು, ತಮ್ಮ ಗುರುತು ಸಿಗಬಾರದು ಎಂದು ಸಾಕಷ್ಟು ಎಚ್ಚರಿಕೆವಹಿಸುತ್ತಾರೆ.ಹೀಗಾಗಿ ಇವರನ್ನು ಹಿಡಿಯುವುದು ಸುಲಭದ ಕೆಲಸವಾಗಿಲ್ಲ. ಕಷ್ಟುಪಟ್ಟು ಬಂಧಿಸಿದ ಕೆಲವು ಇಂತಹ ಕಾಮುಕರು, ಕೆಲವು ದೇಶಗಳಲ್ಲಿ ಜಾಮೀನು ಪಡೆಯಲು ಯಶಸ್ವಿಯಾಗಿರುವ ಸಂದರ್ಭಗಳೂ ಇವೆ.ಭಾರತದಾದ್ಯಂತ ಸೈಬರ್ ಅಪರಾಧ ಕುರಿತು ವಿಶೇಷ ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸುವುದು, ನ್ಯಾಯಾಲಯ ಮತ್ತು ಪೋಲಿಸರಿಗೆ ಅಗತ್ಯ ತಾಂತ್ರಿಕ ಮಾಹಿತಿ ನೀಡಲು ಅನುಭವಿ ಸೈಬರ್ ತಜ್ಞರು ಮತ್ತು ವಿಶೇಷವಾಗಿ ಸೈಬರ್ ವಿಧಿವಿಜ್ಞಾನ ತಜ್ಞರ ತಂಡವನ್ನು ನೇಮಿಸುವುದನ್ನು ಕುರಿತು ನ್ಯಾಯವಾದಿಗಳು, ಮಕ್ಕಳ ಹಕ್ಕು ರಕ್ಷಣೆ ಕಾರ್ಯಕರ್ತರು ಮತ್ತು ಸರ್ಕಾರಗಳು ಯೋಚಿಸಬಹುದು.

ಉದಯ ಶಂಕರ ಪುರಾಣಿಕ