ಮಕ್ಕಳ ನಾಟಕಗಳು ಮತ್ತು ಮಕ್ಕಳ ರಂಗಭೂಮಿ ಎಂದು ಹೇಳುವಾಗ ನಾವು ಸುಮಾರು ಹದಿನಾರು ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳ ಮನಸ್ಸನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ದೊಡ್ಡವರ ಅನುಭವಕ್ಕೆ ಬರುವ ಪ್ರೇಮ, ಕಾಮ, ಸಾಮಾಜಿಕ ಸಂಘರ್ಷಗಳು, ಯುದ್ಧ, ಕ್ರೌರ್ಯ ಮಂತಾದವುಗಳಿರುವ ನಾಟಕಗಳು ಮಕ್ಕಳಿಂದ ಆಡಿಸಿದರೂ ಮಕ್ಕಳ ನಾಟಕಗಳೆನ್ನಿಸಿಕೊಳ್ಳಲಾರವು.

ದೊಡ್ಡವರಾಡುವ ನಾಟಕಗಳನ್ನೇ ಅಲ್ಲಿ ಇಲ್ಲಿ ಬದಲಾಯಿಸಿ ಮಕ್ಕಳಿಂದ ಆಡಿಸಿದರೆ, ಅವುಗಳನ್ನು ಮಕ್ಕಳ ನಾಟಕಗಳೆಂದು ತಿಳಿಯಲು ಸಾಧ್ಯವಿಲ್ಲ. ಶೈಕ್ಷಣಿಕ ದೃಷ್ಟಿಯಿಂದ ವಿಚಾರ ಮಾಡುವುದಾದರೆ, ಮಕ್ಕಳ ನಾಟಕದ ವಸ್ತು ಅವರ ವಯೋಮಾನಕ್ಕೆ ತಕ್ಕ ಅನುಭವದ ಸೀಮೆಯೊಳಗೆ ಬರುವಂಥ ವಿಚಾರ- ವಿಷಯವಾಗಿರಬೇಕು. ಅದರೊಳಗಿದ್ದುಕೊಂಡೇ ಮತ್ತು ಅಥವಾ ಅದನ್ನು ದಾಟಿ, ಸಾಹಿತ್ಯ, ಸೃಜನಶೀಲತೆ, ಕಲ್ಪನಾ ಸಾಮರ್ಥ್ಯ ಮುಂತಾದ ವಿಚಾರಗಳ ಕಡೆಗೆ ಮಕ್ಕಳನ್ನು ಆಕರ್ಷಿಸುವಂಥದಾಗಿರಬೇಕು. ಮಕ್ಕಳ ನಾಟಕಗಳು ಆರೋಗ್ಯಕರವಾಗಿ ರಂಜನೀಯವಾಗಿರಬೇಕು. ಜಾನಪದ ಕತೆಗಳು ಮತ್ತು ಅಪ್ಸರ ಕಥೆಗಳು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಫ್ಯಾಂಟಸಿ ಮಕ್ಕಳಿಗೆ ಇಷ್ಟ. ಇಂಥ ಗುಣಗಳುಳ್ಳ ನಾಟಕಗಳು ಮಕ್ಕಳ ರಂಗಭೂಮಿಗೆ ಸೂಕ್ತ.

ಶಾಲೆಗಳಲ್ಲಿ ನಾಟಕಗಳನ್ನು ಒಂದು ಶಿಕ್ಷಣ ಮಾಧ್ಯಮವಾಗಿ ಬಳಸಿದರೆ ಕಲಿಕೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದು. ಈಗ ಕಲಿಸುವ ಪರಂಪರಾಗತ ಕ್ರಮಕ್ಕಿಂತ ನಾಟಕಗಳ ಮೂಲಕ ಆಕರ್ಷಕವಾಗಿ ಮತ್ತು ಫಲಪ್ರದವಾಗಿ ಭಾಷೆಯನ್ನು ಕಲಿಸಬಹುದು. ಗಣಿತ, ವಿಜ್ಞಾನ ಮುಂತಾದ ವಿಷಯಗಳನ್ನು ಸಹ ಭಾಗಶಃ ನಾಟಕ ವಿಧಾನ ಬಳಸಿ ಕಲಿಸಲು ಸಾಧ್ಯವಿದೆ.

ಯಾವುದೇ ಭಾಷೆಯನ್ನು ಅತ್ಯಂತ ಸಮರ್ಪಕವಾದ ರೀತಿಯಲ್ಲಿ ಬಳಸುವ ತರಬೇತಿಯನ್ನು ನಾಟಕಗಳ ಮೂಲಕ ಕೊಡಬಹುದು. ಸಾಹಿತ್ಯ, ಸಂಸ್ಕೃತಿಯ ಪರಿಚಯ ಮತ್ತು ಅರಿವನ್ನು ಮಕ್ಕಳಲ್ಲಿ ನಾಟಕಗಳ ಮೂಲಕ ಬೆಳೆಸಬಹುದು. ಆದರೆ, ಇದನ್ನು ಒಂದು ವರ್ಷದಲ್ಲಿ ಒಂದು ಬಾರಿ ಆಡಿಸುವ ವಾರ್ಷಿಕೋತ್ಸವದ ನಾಟಕದ ಮೂಲಕ ಮಾಡಲಿಕ್ಕಾಗಲಿಕ್ಕಿಲ್ಲ. ಚಿಕ್ಕ ನಾಟಕಗಳು ಅಥವಾ ಪ್ರಹಸನಗಳನ್ನು ಆಗಾಗ ಏರ್ಪಡಿಸಬೇಕು. ಶಾಲಾ ತರಗತಿಯ ಮಿತಿಯೊಳಗೆ, ಸಾಧ್ಯವಿದ್ದರೆ, ಶಾಲಾ ಕೊಠಡಿಯ ಹೊರಗೆ ಕರೆದುಕೊಂಡು ಹೋಗಿ ಮರದಡಿಯಲ್ಲಿ ಮಕ್ಕಳಿಂದ ನಾಟಕಗಳನ್ನು ಆಡಿಸಬಹುದು. ಶೈಕ್ಷಣಿಕ ಮತ್ತು ಸಾಹಿತ್ಯಿಕ ಎಂಬ ವರ್ಗೀಕರಣ ಮಾಡಬೇಕಾದ್ದಿಲ್ಲ. ಇಂಥ ಅನುಭವಗಳು ಮುದ ನೀಡುವ ನೆನಪುಗಳಾಗಿ ಮಕ್ಕಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗುತ್ತವೆ. ಇಂಥ ಅನುಭವಗಳನ್ನು ಒದಗಿಸಿದ ಶಿಕ್ಷಕನನ್ನು ಅವರು ಜೀವನ ಪರ್ಯಂತ ನೆನಪಿಸಿಕೊಳ್ಳುತ್ತಾರೆ. ನಾಲ್ಕು ಕೋಣೆಯೊಳಗಿನ ರೂಢಿಗತ ‘ಪಾಠ ಮಾಡುವಿಕೆ’ಯಿಂದಾಚೆ ಮಕ್ಕಳಲ್ಲಿ ಚೈತನ್ಯವುಕ್ಕಿಸುವ ನಿಜವಾದ ಪಾಠಗಳಾಗಬೇಕಾದ್ದು ಹೀಗೆ.

ಮಕ್ಕಳಿಗೆ ವಿಷಯ ಕೊಟ್ಟು, ಮಾರ್ಗದರ್ಶನ ನೀಡಿ ಅವರಿಂದಲೇ ಪುಟ್ಟ- ಪುಟ್ಟ ನಾಟಕಗಳನ್ನು ಬರೆಸಿದರೆ ಅವರ ವಿಚಾರಶಕ್ತಿ, ಕಲ್ಪಾನಾಶಕ್ತಿ  ಉದ್ದೀಪನಗೊಳ್ಳುತ್ತದೆ. ಈ ಕ್ರಿಯೆಯಿಂದ ಸೃಜನಶೀಲ ಚಿಂತನೆಗೆ  ಚಾಲನೆ ದೊರೆಯುತ್ತದೆ. ಭಾಷೆಯನ್ನು ಚೆನ್ನಾಗಿ ಆಡುವ ಮತ್ತು ಬರೆಯುವ ಸಾಮರ್ಥ್ಯ ಲಭಿಸುತ್ತದೆ. ವಿಚಾರ ಮಾಡುವ ಮತ್ತು ವಿಚಾರವನ್ನು ಅಭಿವ್ಯಕ್ತಿಸುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ವರ್ಧಿಸುತ್ತದೆ. ನಟನೆ ಮತ್ತು ನಾಟಕ ರಚನೆಯನ್ನು ಒಂದು ಕೂಟ ಚಟುವಟಿಕೆಯಾಗಿ ನಡೆಸಿದಾಗ ಅದರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಯೋಜನಗಳು ಅಪಾರ. ಈ ಚಟುವಟಿಕೆಯನ್ನು ಕೂಡ ಮಾಡಬೇಕಾದ್ದು ಶಾಲಾ ಕೊಠಡಿಯಿಂದ ಹೊರಗಿನ ನಿಸರ್ಗದ ಮಡಿಲಲ್ಲಿ. ಯಾಕೆಂದರೆ, ಸೃಜನಶೀಲತೆ ಅರಳುವುದೇ ಇಲ್ಲಿ. ಮಕ್ಕಳು ಬರೆಯಬೇಕಾದ್ದು, ಸೃಷ್ಟಿಸಬೇಕಾದ್ದು ಕಣ್ಣು ತೆರೆದು, ಸುತ್ತಮುತ್ತ ನೋಡಿಕೊಂಡು. ಇದೇ ಬಾಲಕ- ಲೇಖಕನಿಗೂ ವಯಸ್ಕ- ಲೇಖಕನಿಗೂ ಇರುವ ವ್ಯತ್ಯಾಸ!

ಸದಭಿರುಚಿ, ಸಜ್ಜನತೆ, ಸದ್ಗುಣ, ಸನ್ನಡತೆ ಇತ್ಯಾದಿಗಳನ್ನು ಪೋಷಿಸಬೇಕೆಂದು ನೀತಿಕಥೆಗಳನ್ನೇ ಕೊಡಬೇಕು ಎಂದು ತಿಳಿದುಕೊಂಡರೆ ತಪ್ಪಾದೀತು. ಏಕೆಂದರೆ ನೀತಿ- ಅನೀತಿ, ಧರ್ಮ- ಅಧರ್ಮ, ನ್ಯಾಯ- ಅನ್ಯಾಯ ಇವುಗಳೆಲ್ಲ ಮಕ್ಕಳ ಮನಸ್ಸಿಗೆ- ಬದುಕಿಗೆ ಸಂಬಂಧಿಸಿದ ಮೌಲ್ಯಗಳಲ್ಲ. ಇವು ದೊಡ್ಡವರ ಮನಸ್ಸಿಗೆ- ಬದುಕಿಗೆ ಸಂಬಂಧಿಸಿದ ಮೌಲ್ಯಗಳು. ಇಂಥದನ್ನೆಲ್ಲ ಅನಗತ್ಯವಾಗಿ ಮಕ್ಕಳ ಮನಸ್ಸಿನಲ್ಲಿ ತುಂಬಿಸಿ ಅವರಲ್ಲಿ ಗೊಂದಲವನ್ನು ಸೃಷ್ಟಿಸುವ ಕಥಾ ಪಠ್ಯಗಳನ್ನು ಮತ್ತು ನಾಟಕ ಪಠ್ಯಗಳನ್ನು ಮಕ್ಕಳಿಂದ ದೂರವಿಟ್ಟರೆ ಅವರ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.

ಮಕ್ಕಳಿಗಾಗಿ ಸಿದ್ಧ ನಾಟಕಗಳನ್ನು ಆರಿಸುವಾಗ ತುಂಬಾ ಜಾಗ್ರತೆ ವಹಿಸಬೇಕು. ಮಕ್ಕಳ ಅನುಭವ ಸೀಮೆ, ವಯಸ್ಸಿಗೆ ತಕ್ಕುದಾದ ಅಭಿರುಚಿಗಳು, ಆಸಕ್ತಿಗಳು, ಅವರ ಮನೋವಿಕಾಸದ ಹಂತ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ, ಆಯ್ಕೆ ಮಾಡುವವರು ಮಕ್ಕಳ ಮನೋವಿಜ್ಞಾನವನ್ನು ಸಾಕಷ್ಟು ತಿಳಿದಿರಬೇಕು.

ಔಪಚಾರಿಕ ವಿಧಾನದ ಕಲಿಕೆಯ ತರಗತಿಯಲ್ಲಿ ಬಹುತೇಕ ಎಲ್ಲಾ ವಿಷಯಗಳನ್ನೂ ರೂಢಿಗತವಾಗಿರುವ ‘ಬೋರು’ ಹೊಡೆಸುವ ವಿಧಾನದಲ್ಲಿ ಕಲಿಸಲಾಗುತ್ತದೆ. ಇದಕ್ಕಿಂತ ಭಿನ್ನವಾದ ರೀತಿಯಲ್ಲಿ ಕಲಿಸುವ, ದಿನ- ದಿನ ಸ್ವಯಂ ಪುನಶ್ಚೇತನಗೊಳ್ಳುವ ಕ್ರಿಯಾಶೀಲ ಶಿಕ್ಷಕರ ಸಂಖ್ಯೆ ಬಹಳ ಸಣ್ಣದು. ಆದರೆ, ತರಬೇತಿ ಶಿಬಿರಗಳ ಮೂಲಕ ನವಚೈತನ್ಯವುಂಟುಮಾಡಲು ಸಾಧ್ಯವಿದೆ. ಕಲಿಕೆಯ ಎಲ್ಲಾ ವಿಷಯಗಳಲ್ಲಿಯೂ ನಾಟಕೀಯತೆಯನ್ನು ಉಪಯೋಗಿಸಿ ವಿಷಯವನ್ನು- ಟಾಪಿಕನ್ನು ಆಕರ್ಷಕವಾಗಿಸಲು ಸಾಧ್ಯವಿದೆ. ಅಂದರೆ, ಗಣಿತದಲ್ಲಿ ತ್ರಿಕೋನಮಿತಿಯ ಕುರಿತಾದ ಪಾಠ ಕರಿಹಲಿಗೆಯ ಮೇಲೆ ಒಂದು ತ್ರಿಕೋನವನ್ನು ಎಳೆಯುವ ಮೂಲಕವಲ್ಲ ಆರಂಭಿಸಬೇಕಾದ್ದು. ಯೂಕ್ಲಿಡ್, ಪೈಥಾಗೋರಸ್ ಗಣಿತದ ಮಹಾಪುರುಷರಾದದ್ದು ಇಂಥ ಕಲಿಕೆಯ ಮೂಲಕವಲ್ಲ. ಮಕ್ಕಳನ್ನು ಶಾಲೆಯಿಂದ ಹೊರಗೆ ಒಂದು ಕಟ್ಟಡ ನಿರ್ಮಾಣಗೊಳ್ಳುತ್ತಿರುವಲ್ಲಿಗೆ ಕರೆದುಕೊಂಡು ಹೋಗಿ ಒಂದಷ್ಟು ಜಾಮಿತಿಯನ್ನು ಕಲಿಸಬಹುದು.

ಇಂಥ ಎಲ್ಲಾ ಶೈಕ್ಷಣಿಕ ‘ಚಟುವಟಿಕೆ’ಯಲ್ಲಿ ಅಂತರ್ಗತವಾಗಿ ನಾಟಕಾಂಶವಿದೆ ಮತ್ತು ಆ ಕಾರಣದಿಂದ ಚಟುವಟಿಕೆ ಆಸಕ್ತಿಯುತವಾಗುತ್ತದೆ ಎನ್ನುವುದನ್ನು ಶಿಕ್ಷಕರು ತಿಳಿದುಕೊಳ್ಳಬೇಕು. ಉಣ್ಣುವ, ತಿನ್ನುವ, ಮಲಗಿ ನಿದ್ರಿಸುವ ಬದುಕಿನ ಕ್ರಿಯೆಗಳಿಂದಾಚೆ ನಮ್ಮ ಮತ್ತು ನಮ್ಮ ಸುತ್ತಲಿರುವ ಇತರರ ‘ಚಟುವಟಿಕೆ’ಗಳಲ್ಲಿ ಒಂದಷ್ಟು ಸ್ವಾಭಾವಿಕ ನಾಟಕೀಯತೆ ಇರುತ್ತದೆ. ಶ್ರೇಷ್ಠ ನಟರಾಗಿರುವವರು ಇದನ್ನು ಕಾಣುತ್ತಾರೆ. ಮಕ್ಕಳಿಗೆ ನಟನೆ ಮತ್ತು ನಾಟಕದ ಪರಿಚಯ ಶಾಲೆಯಲ್ಲಿಯೇ ಆಗಬೇಕು. ಅದರ ಇತಿಮಿತಿಯನ್ನು ಕೂಡ ಅವರು ಅಲ್ಲಿಯೇ ತಿಳಿಯಬೇಕು. ಯಾಕೆಂದರೆ, ನಟನೆ ಅಥವಾ ನಾಟಕ ಒಂದು ‘ಹುಚ್ಚು’ ಅಗಬಾರದು. ಅದು ಹೇಗೆ ಸಿನಿಮಾಕ್ಕಿಂತ ಭಿನ್ನ ಎನ್ನುವುದನ್ನು ಕೂಡ ಮಕ್ಕಳು ತಿಳಿದುಕೊಳ್ಳಬೇಕು. ಮಕ್ಕಳ ರಂಗಭೂಮಿಗೆ ಇರಬೇಕಾದ್ದು ಸಿನೀಮೀಯ ಗ್ಲಾಮರ್ ಅಲ್ಲ. ಅದಕ್ಕಿರಬೇಕಾದ್ದು ಶೈಕ್ಷಣಿಕ ಆಕರ್ಷಣೆ ಮಾತ್ರ.

ಸಿನಿಮಾದಲ್ಲಿ ಹೃದಯ ಕಲಕುವ ಸಂಗತಿಗಳಿಗೆ ಹೆಚ್ಚು ಒತ್ತು. ರಂಗಭೂಮಿಯ ನಾಟಕಗಳಲ್ಲಿ ಕೂಡಾ ಹಾಸ್ಯ, ಕರುಣ, ಶೃಂಗಾರ ರಸಾನುಭವಕ್ಕೆ ಒತ್ತು. ಮಕ್ಕಳ ನಾಟಕಗಳನ್ನು ನೀಡುವವರು ಹಾಸ್ಯ ಮತ್ತು ಕರುಣವನ್ನು ಬಹುಮಟ್ಟಿಗೆ ತರುತ್ತಾರೆ. ವಿಶೇಷ ಅಕರ್ಷಣೆಗೆಂದು ಒಂದಷ್ಟು ಹಾರಾಟ, ಚೀರಾಟ, ವಿಲಕ್ಷಣ ನಡೆನುಡಿ ಸೇರಿಸುತ್ತಾರೆ. ಶಿಕ್ಷಣದ ಹೊರಗಿನ ರಂಗಭೂಮಿಯಲ್ಲಿ ಇಂಥದೆಲ್ಲ ಇರಬಹುದು. ಆದರೆ ಶಿಕ್ಷಣದಲ್ಲಿ ಇರಬೇಕಾದ್ದು ಮಕ್ಕಳನ್ನು ಬೌದ್ಧಿಕವಾಗಿ ತಟ್ಟುವ, ಮುಟ್ಟುವ, ಅವರ ಚಿಂತನಶೀಲತೆಯನ್ನು ಬೆಳೆಸುವ ನಾಟಕಗಳು.

ನಾಟಕ- ಒಂದು ಸಮಗ್ರ ಅನುಭವ

ಮಕ್ಕಳ ನಾಟಕಗಳ ತಯಾರಿಯಲ್ಲಿ ಕೂಡ ಮಕ್ಕಳಿಗೆ ಭಾಗವಹಿಸುವ ಅವಕಾಶಗಳಿರಬೇಕು. ನಾಟಕದ ವಸ್ತುವಿನ ಆಯ್ಕೆ, ನಾಟಕ ರಚನೆ, ರಂಗಪ್ರಯೋಗ, ಪರಿಕರಗಳ ತಯಾರಿ, ನಿರ್ದೇಶನ ಎಲ್ಲದರಲ್ಲಿಯೂ ಮಕ್ಕಳು ಭಾಗವಹಿಸುವಂತೆ ಮಾಡಬೇಕು. ಇದು ಮಕ್ಕಳ ನಾಟಕಗಳ ನಿರ್ದೇಶಕನ ವಿಶೇಷವಾದ ಮತ್ತು ಮುಖ್ಯವಾದ ಕೆಲಸ. ಅವನು ಕೇವಲ ಮಕ್ಕಳ ನಾಟಕ ನಿರ್ದೇಶಕನಲ್ಲ. ಅವನು ಮಕ್ಕಳ ರಂಗಭೂಮಿಯ ಸೃಷ್ಟಿಕರ್ತನಂತೆ ಕೆಲಸ ಮಾಡಬೇಕು. ಎಲ್ಲಕ್ಕಿಂತ ಮೊದಲು ಅವನು ಮಾಡಬೇಕಾದ್ದು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು. ಅನಂತರ ಅವನು ಚಿಂತಿಸಬೇಕಾದ್ದು ಮಕ್ಕಳ ನಾಟಕಗಳನ್ನು ಆಡುವ ಮೂಲಕ ಅವರು ಏನು ಪಡೆಯುತ್ತಾರೆ ಎಂಬುದು. ಎಲ್ಲಾ ಶಿಕ್ಷಕರೂ ಇಂಥ ನಿರ್ದೇಶಕರಾದರೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ. ಇದನ್ನು ಶಿಕ್ಷಕ ತರಬೇತಿಯಲ್ಲಿ ಒಂದು ಮುಖ್ಯ ಅಧ್ಯಯನ ಮತ್ತು ತರಬೇತಿಯ ವಿಷಯವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ಮಕ್ಕಳ ನಾಟಕಗಳ ಶೈಕ್ಷಣಿಕ ಮಹತ್ವವನ್ನು ಇವತ್ತಿಗೂ ಶಿಕ್ಷಣ ವ್ಯವಸ್ಥೆ ಗಮನಕ್ಕೆ ತೆಗೆದುಕೊಂಡಿಲ್ಲ. ಮಕ್ಕಳ ಕಥೆಗಳೆಂದು ಪ್ರಚಲಿತವಿರುವ ನಾಟಕಗಳಲ್ಲಿ ಹೆಚ್ಚಿನವು ಶಾಲಾ ಮಕ್ಕಳಿಗಾಗಿ ಬರೆದವುಗಳಲ್ಲ. ರಂಗಭೂಮಿಯನ್ನು ಅಪೇಕ್ಷಿಸುವ ಇಂಥ ನಾಟಕಗಳು ಹಲವೊಂದು ಗಿಮಿಕ್ಕುಗಳ ಮೂಲಕ ಮಕ್ಕಳಿಗೂ ಅವರ ಹೆತ್ತವರಿಗೂ ಕಿಂಚಿತ್ ರಂಜನೆ ನೀಡುವಲ್ಲಿ ಸಫಲವಾಗಬಹುದು. ವಿಲಕ್ಷಣವಾದ ನಡೆದಾಟ, ಕುಣಿದಾಟ. ಹಾರಾಟ, ಚೀರಾಟ ಮುಂತಾದ ದೈಹಿಕ ಕಸರತ್ತುಗಳಿಂದ ಕೂಡಿದ ನಾಟಕಗಳಷ್ಟೇ ಮಕ್ಕಳ ನಾಟಕಗಳಲ್ಲ, ದೊಡ್ಡವರ ಬದುಕು, ಅದರಲ್ಲಿರುವ ಕಾಮ- ಪ್ರೇಮ, ನೆಲ ದಾಹ, ದ್ರವ್ಯದಾಹ, ಅಪರಾಧ, ಅಧಿಕಾರದಾಹ, ಮದ ಮತ್ಸರ ಮತ್ತಿತರ ಅವಿಚಾರಗಳನ್ನು ಶಿಶುಭಾಷೆಯಲ್ಲಿ ಸಾದರಪಡಿಸಿದರೆ ಅದು ಮಕ್ಕಳ ನಾಟಕ ಅಥವಾ ಮಕ್ಕಳ ಸಿನಿಮಾ ಆಗುವುದಿಲ್ಲ. ಮಕ್ಕಳ ಕಥೆಗಳ ನಾಯಕನಿಗೂ ದೊಡ್ಡವರ ಕಥೆಗಳ ನಾಯಕನಿಗೂ ಬಹಳ ವ್ಯತ್ಯಾಸವಿದೆ.

ಮಕ್ಕಳ ಸಾಹಿತ್ಯದಲ್ಲಿ ವಿಶ್ವದ ನಾನಾ ಭಾಗಗಳ ಉತ್ತಮ ಕಥೆಗಳನ್ನು, ಪದ್ಯಗಳನ್ನು, ನಾಟಕಗಳನ್ನು ಸೇರಿಸಿಕೊಳ್ಳಬಹುದು. ಒಂದು ಭಾಷೆ ಮತ್ತು ಅದರ ಸಾಹಿತ್ಯವನ್ನು ಪ್ರೀತಿಸುವಂತೆ ಮಾಡುವ ಕೆಲಸವನ್ನು ಕಥೆಗಳು ಮತ್ತು ನಾಟಕಗಳಷ್ಟು ಚಲೋದಾಗಿಯೂ, ಪರಿಣಾಮಕಾರಿಯಾಗಿಯೂ ಮಾಡುವ ಮಾಧ್ಯಮ ಇನ್ನೊಂದಿಲ್ಲ. ಈ ವಿಚಾರದಲ್ಲಿ, ನಾಟಕ ಪ್ರಕಾರವು ಕಥಾ ಪ್ರಕಾರಕ್ಕಿಂತ ಒಂದಷ್ಟು ಭಿನ್ನ. ಹೇಗೆಂದರೆ, ಒಂದೇ ದಿನದಲ್ಲಿ ಮಗು ಒಂದು ದೊಡ್ಡ ಕಥೆಯನ್ನು ಅಥವಾ ಹಲವು ಚಿಕ್ಕ ಕಥೆಗಳನ್ನು ಓದಿ ಮುಗಿಸಬಹುದು. ಕಥೆಗಳನ್ನು ವೇಳೆ ಸಿಕ್ಕಾಗಲೆಲ್ಲಾ ಓದಬಹುದು. ಮೌನವಾಗಿ ಏಕಾಂತದಲ್ಲಿ ಓದಿ ಖುಷಿಪಡಬಹುದು. ನಾಟಕವನ್ನು ದಿನಾ ನೋಡಲಿಕ್ಕಾಗುವುದಿಲ್ಲ. ನಾಟಕ ಆಗಾಗ ನೋಡಲಿಕ್ಕೆ ಸಿಗುವಂಥದೂ ಅಲ್ಲ. ನಾಟಕ ನೋಡಲು ಅದು ನಡೆಯುವಲ್ಲಿಗೇ ಹೋಗಬೇಕು.

ಭಾಷೆಯನ್ನು ಹೇಗೆ ಸರಿಯಾಗಿ ಆಡಬೇಕು, ಹೇಗೆ ಓದಬೇಕು ಎಂಬ ತರಬೇತಿಯನ್ನು ನೀಡುವಲ್ಲಿ ನಾಟಕಗಳಿಗೆ ಸರಿಸಾಟಿ ಬೇರೆ ಇಲ್ಲ. ಮಕ್ಕಳು ಇಷ್ಟಪಡುವ ನಾಟಕಗಳನ್ನು ತರಗತಿಗಳಲ್ಲಿ ಒಂದು ಪಾಠವಾಗಿ ಆಡಬಹುದು. ನಾಟಕದ ಪಾತ್ರಗಳನ್ನು ಮಕ್ಕಳ ನಡುವೆ ಹಂಚಿ ಓದಿಸುವ ಚಟುವಟಿಕೆಗಳನ್ನು ತರಗತಿಗಳಲ್ಲಿ ನಡೆಸಬೇಕು. ಭಾಷಾ ಪಾಠದ ಒಂದು ಭಾಗವಾಗಿ ನಾಟಕವನ್ನು ಓದುವಂಥ ಆಸಕ್ತಿಯನ್ನು ಮಕ್ಕಳಲ್ಲಿ ಹುಟ್ಟಿಸಬೇಕು. ಸ್ಪಷ್ಟ, ಶುದ್ಧ ಉಚ್ಚಾರಣೆ, ಮಾತಿನ ಲಯ ಮುಂತಾದುವುಗಳನ್ನಲ್ಲದೆ, ಸಂಭಾಷಣಾ ಚಾತುರ್ಯವನ್ನು ಮಕ್ಕಳು ನಾಟಕಗಳ ಮೂಲಕ ಕಲಿಯಬಹುದಾಗಿದೆ. ಸಾಧ್ಯವಾದರೆ ಆಗಾಗ ಶಾಲಾ ರಂಗಭೂಮಿಯಲ್ಲಿ ಪ್ರದರ್ಶನಗಳನ್ನೇರ್ಪಡಿಸಬೇಕು. ಹಾಗೆ ಮಾಡಿದಾಗ ಏಕ ಕಾಲದಲ್ಲಿ ನೂರಾರು ಮಕ್ಕಳಿಗೆ ಒಂದು ಅಪೂರ್ವವಾದ ಭಾಷಾಪಾಠ ಲಭ್ಯವಾಗುತ್ತದೆ. ಯಾವುದೇ ಶಾಲಾ ರಂಗಭೂಮಿಯಲ್ಲಿ ನಾಟಕವನ್ನು ಪ್ರದರ್ಶಿಸಿದ ಬಳಿಕ ನಾಟಕದ ಪಠ್ಯವನ್ನು ಮಕ್ಕಳಿಗೆ ಒದಗಿಸಬೇಕಾದ್ದು ಅತಿ ಅಗತ್ಯ. ನಾಟಕದಲ್ಲಿ  ಕೇಳಿದ ಮಾತುಗಳು ಅವರ ನೆನಪಿನಲ್ಲಿರುವಾಗಲೇ ನಾಟಕದ ಪಠ್ಯ ಅವರಿಗೆ ಸಿಗಬೇಕು. ಈ ಮೂಲಕ ಮಕ್ಕಳು ಭಾಷೆಯನ್ನು ಬಹಳ ಸಮರ್ಥವಾಗಿ ಮತ್ತ್ತುವೇಗವಾಗಿ ಕಲಿತುಕೊಳ್ಳುತ್ತಾರೆ.

ತಮ್ಮ ಪಠ್ಯ ಪುಸ್ತಕದಲ್ಲಿರುವ ಯಾವ ಪಾಠಗಳನ್ನು ಮಕ್ಕಳು ಮರಳಿ- ಮರಳಿ ಓದುತ್ತಾರೆ ಎಂದು ಪಾಲಕರು ಮತ್ತು ಶಿಕ್ಷಕರು ವಿಚಾರಿಸಿ ನೋಡಿದರೆ, ನಾಟಕಗಳನ್ನು ಮತ್ತು ಹಾಡುಗಳನ್ನು ಎಂದು ಕಂಡುಕೊಳ್ಳಬಹುದು. ಪಾತ್ರಗಳನ್ನು ಹಂಚಿಕೊಟ್ಟು ಮಕ್ಕಳಿಂದ ಓದಿಸಿದರೆ, ಅವರಿಗೆ ಅದರಿಂದ ಬಹಳ ಮುದ ಸಿಗುತ್ತದೆ. ಅದು ಎಂದೆಂದೂ ಮರೆಯದಂತಹ ಅನುಭವವಾಗುತ್ತದೆ. ವ್ಯಾಕರಣ ಅಭ್ಯಾಸದ ಮೂಲಕ ಭಾಷೆಯ ಮೇಲೆ ಪ್ರಭುತ್ವ ಬರುವುದಿಲ್ಲ. ವ್ಯಾಕರಣಬದ್ಧ ವಾಕ್ಯಸೂತ್ರಗಳ ಪ್ರಕಾರ ನೂರಾರು ವಾಕ್ಯಗಳನ್ನು ರಚಿಸಿ ಮುದ್ರಿಸಿಕೊಟ್ಟರೆ ಭಾಷೆಯನ್ನು ಸುಲಲಿತವಾಗಿ ಆಡಲು, ಬರೆಯಲು ಬರುವುದಿಲ್ಲ. ಭಾಷೆಯನ್ನು ಸುಲಲಿತವಾಗಿ ಆಡಲು ಬರಬೇಕಾದರೆ, ಭಾಷೆಯು ನಮ್ಮ ಚಿಂತನೆಯಾಗಿ ಹೊರಬರಬೇಕು. ನಾವು ಆಡುವ ವಾಕ್ಯ ನಮ್ಮ ವಾಕ್ಯವಾಗಿರಬೇಕು. ಅಂದರೆ, ನಮ್ಮ ಮಾತು ನಮ್ಮದೇ ಚಿಂತನೆಯ ಅಭಿವ್ಯಕ್ತಿಯಾಗಿರಬೇಕು.

ಶಾಲಾ ತರಗತಿಯಲ್ಲಿ ನಡೆಯುವ ಹಲವು ಔಪಚಾರಿಕ ಭಾಷಾಪಾಠಗಳು ಏನು ಸಾಧಿಸುತ್ತವೆ ಅದನ್ನು ಅದಕ್ಕಿಂತ ಪರಿಣಾಮಕಾರಿಯಾಗಿ ಒಂದು ನಾಟಕ ಸಾಧಿಸಬಹುದು. ಒಂದು ನಾಟಕವು ರಂಗಪ್ರಯೋಗಕ್ಕೆ ಅನುಕೂಲವಾದುದಾಗಿರಲಿ, ಅಲ್ಲದಿರಲಿ, ಅದರಲ್ಲಿ  ಒಂದು ಕಥೆಯಿದ್ದರೆ ಮತ್ತು ಸಂಭಾಷಣೆಯ ಮೂಲಕ ಆ ಕಥೆ ನಡೆಯುವುದನ್ನು ಓದಿನ ಮೂಲಕ ಕಾಣಬಹುದಾಗಿದ್ದರೆ, ಅದನ್ನು ನಾವು ಓದಿ ಆನಂದಿಸಬಹುದಾಗಿದೆ. ಆದ್ದರಿಂದ ಮಕ್ಕಳಲ್ಲಿ ಆ ಭಾವನೆಯಿಂದ ನಾಟಕ ಓದುವ ಅಭ್ಯಾಸವನ್ನು ಚಿಕ್ಕಂದಿನಲ್ಲಿ ಬೆಳೆಸಬೇಕು.

ಹಲವು ವರ್ಷಗಳ ಭಾಷಾಭ್ಯಾಸದ ಬಳಿಕ ಕೂಡ ಮಕ್ಕಳು ಯಾಕೆ ಚಲೋದಾಗಿ ಮಾತಾಡುವುದಿಲ್ಲ, ಭಾಷೆಯನ್ನು ಕಲಿಯಲು ಯಾಕೆ ತ್ರಾಸಪಡುತ್ತಾರೆ ಎಂದು ನಾವು ಯಾವತ್ತಾದರೂ ಚಿಂತಿಸಿದ್ದೇವೆಯೇ? ಸುಮಾರು ಹತ್ತು- ಹನ್ನೆರಡು ವರ್ಷಗಳ ಭಾಷಾಭ್ಯಾಸದ ನಂತರ ಕೂಡ ಉಚ್ಚಾರ ದೋಷಗಳು, ವ್ಯಾಕರಣ ದೋಷಗಳು ಸಾಮಾನ್ಯ. ಕೇಳುವವರಿಗೆ ಸ್ಪಷ್ಟವಾಗಿ ಕೇಳಿಸುವಂತೆ ಮತ್ತ ಸ್ಪಷ್ಟವಾಗಿ ಅರ್ಥವಾಗುವಂತೆ ಭಾಷೆಯನ್ನು ಆಡುವವರ ಸಂಖ್ಯೆ ಯಾಕಿಷ್ಟು ಕಡಿಮೆ?

ಭಾಷೆಯ ಬಳಕೆಯಲ್ಲಿನ ಬಹಳಷ್ಟು ಕುಂದುಕೊರತೆಗಳಿಗೆ ಶಾಲೆಯಲ್ಲಿ ಭಾಷೆಯನ್ನು ಕಲಿಸುವುದರಲ್ಲಿರುವ ದೋಷಗಳೇ ಕಾರಣ. ಮಕ್ಕಳಿಗೆ ಆರಂಭದಲ್ಲಿ ಶಿಕ್ಷಕರು ಹೇಗೆ ಓದಲು ಹೇಳಿಕೊಡುತ್ತಾರೆ? ಮೊದಲು ‘ಅಕ್ಷರದ ನಂತರ ಅಕ್ಷರ’ ವಿಧಾನದಲ್ಲಿ, ಅನಂತರ ‘ಶಬ್ದದ ನಂತರ ಶಬ್ದ’ ವಿಧಾನದಲ್ಲಿ. ಯಾವ ಮಗು ತನ್ನ ಮನೆಯಲ್ಲಿ ಈ ರೀತಿ ಮಾತಾಡಲು ಕಲಿತುಕೊಂಡಿರುತ್ತದೆ? ಯಾವ ಅಪ್ಪಅಮ್ಮಂದಿರು ಈ ರೀತಿ ಮಾತಾಡುತ್ತಾರೆ? ಮಗು ಇಡೀಯಿಡೀ ವಾಕ್ಯಗಳನ್ನು ಕೇಳಿಸಿಕೊಂಡು ಅದೇ ರೀತಿ ಮಾತಾಡಲು ಕಲಿತುಕೊಂಡಿರುತ್ತದೆ. ಅದನ್ನು ಗಮನಕ್ಕೆ ತೆಗೆದುಕೊಳ್ಳದೆ, ಶಿಕ್ಷಕರು ಅನುಸರಿಸುವ ಈ ಅವೈಜ್ಞಾನಿಕ ವಿಧಾನ ಮಗುವನ್ನು ‘ಹೆಳವ ಓದುಗ’ನಾಗಿಸುತ್ತದೆ. ಮಕ್ಕಳು ಕೆಟ್ಟ- ಕೆಟ್ಟದಾಗಿ ಓದಲು ಶಿಕ್ಷಕರೇ ಕಾರಣ ಎನ್ನುವ ವಿಖ್ಯಾತ ಶಿಕ್ಷಣತಜ್ಞನೊಬ್ಬ “ನಮ್ಮ ಮಕ್ಕಳಿಗೆ ಭಾಷೆ ಕಲಿಸಲು ಶಾಲೆಗಳಿರುವಂತೆ, ನಡೆಯುವುದನ್ನು ಕಲಿಸಲು ಕೂಡ ಶಾಲೆಗಳಿರುತ್ತಿದ್ದರೆ, ಅವರೆಲ್ಲ ಹೆಳವರಾಗುತ್ತಿದ್ದರು” ಎಂದು ಹೇಳುತ್ತಾನೆ.

ಮಾತು ವಾಕ್ಯಗಳ ರೂಪದಲ್ಲಿರುತ್ತದೆ. ವಾಕ್ಯವನ್ನು ನಾವು ಆಡುವುದು ಅಥವಾ ಓದುವುದು ‘ನುಡಿಗಟ್ಟುಗಳ ಪುಂಜ’ಗಳಾಗಿರುವ ವಾಕ್ಯಗಳ ರೂಪದಲ್ಲಿ, ಹೊರತು ‘ಶಬ್ದದ ನಂತರ ಶಬ್ದ’ವಾಗಿ ಅಲ್ಲ. ಕೆಳಗಿನ ತರಗತಿಗಳಲ್ಲಿ ಓದುವ ಮಕ್ಕಳು ವಾಕ್ಯಗಳನ್ನು ಏರುಪೇರಿಲ್ಲದೆ ಓದುವುದು, ಒಂದು ವಿಚಿತ್ರವಾದ ರಾಗದಲ್ಲಿ ಓದುವುದು ಸಾಮಾನ್ಯ. ತಡೆತಡೆದು, ಅಕ್ಷರ- ಅಕ್ಷರವಾಗಿ, ಶಬ್ದ- ಶಬ್ದವಾಗಿ ಓದುವುದು ಕೂಡ ಸಾಮಾನ್ಯ. ಇದಕ್ಕೆ ಶಿಕ್ಷಕರು ಸರಿಯಾದ ರೀತಿಯಲ್ಲಿ ಭಾಷೆಯನ್ನು ಓದಲು ಕಲಿಸದಿರುವುದೇ ಕಾರಣ. ಈ ರೀತಿಯ ಓದುವಿಕೆ ವ್ಯಕ್ತಿಯಲ್ಲಿ ಶಾಶ್ವತೀಕರಣಗೊಳ್ಳುತ್ತದೆ ಎಂಬುದನ್ನು ನಾವು ಗಮನಿಸಬಹುದು. ಸರಿಯಾದ ಓದುವಿಕೆಯು ಹತ್ತಿರ- ಹತ್ತಿರ ಮಾತಿನ ಧಾಟಿಯಲ್ಲಿ ಇರಬೇಕು. ನಾಲ್ಕೈದು ನಾಟಕ ಪ್ರಯೋಗಗಳನ್ನು ಏರ್ಪಡಿಸಿ, ಅದರ ಪಠ್ಯವನ್ನು ಮಕ್ಕಳಿಗೆ ಒದಗಿಸಿಕೊಟ್ಟರೆ ಏಕ ಕಾಲದಲ್ಲಿಯೇ ನಾನೂರು- ಐನೂರು ಮಕ್ಕಳಿಗೆ ಅದೊಂದು ‘ಕರೆಕ್ಟಿವ್’ ಭಾಷಾಪಾಠವಾಗುತ್ತದೆ.

ತರಗತಿಯಲ್ಲಿ ಇಂಗ್ಲಿಷನ್ನು ಈವರೆಗಿನ ಕಲಿಕೆಯ ರೂಢಿಯಲ್ಲಿ ಕಲಿಸುವ ಬದಲು ನಾಟಕಗಳ ಮೂಲಕ ಪ್ರಾಥಮಿಕ ತರಗತಿಗಳಿಂದಲೇ ಕಲಿಸಬಹುದು. ‘ಕಲಿಸದೆ ಕಲಿಸುವ’ ಈ ವಿಧಾನದಿಂದ ಮಕ್ಕಳು ತಮ್ಮ ಸ್ವಂತ ಭಾಷೆಯನ್ನು ಮಾತಾಡುವಂತೆ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲು ಕಲಿತುಕೊಳ್ಳುತ್ತಾರೆ. ಭಾಷೆಯನ್ನು ಕಲಿಯುವುದು ಬಳಕೆಯ ಮೂಲಕ; ಮಾತು, ಓದು ಮತ್ತು ಬರವಣಿಗೆಯ ಮೂಲಕ. ಪ್ರಬಂಧ, ಕತೆ, ಕವಿತೆಗಳನ್ನು ಓದಿ ‘ಕಠಿಣ’ ಪದಗಳ ಅರ್ಥ ಕೊಟ್ಟು, ವ್ಯಾಕರಣ ಕಲಿಸಿ, ಪ್ರಶ್ನೆಗಳನ್ನು ಕೊಟ್ಟು ಅವುಗಳಿಗೆ ಉತ್ತರ ಬರೆಸಿ, ಅಂಕಗಳನ್ನು ಹಾಕಿ ಪಾಸು-ಫೇಲು ಮಾಡುವ ರೂಢಿಯಲ್ಲಿ ಮಗುವಿಗೆ ಬೇಕಾದಷ್ಟು ಭಾಷೆ ಬರುವುದಿಲ್ಲ ಎನ್ನುವುದನ್ನು ನಾವು ತಿಳಿದುಕೊಂಡಾಗಿದೆ.

ನಾಟಕವನ್ನು ಆಡಿದ ಬಳಿಕ ಮಕ್ಕಳು ಅದರ ಕುರಿತು ಮಾತಾಡಬೇಕು, ಚರ್ಚಿಸಬೇಕು, ವಿಮರ್ಶಿಸಬೇಕು. ಇದು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಜೊತೆಜೊತೆಗೆ ನಡೆಯಬಹುದು. ಅದು ನಿಜವಾದ ಪಾಠ. ಆಡಿದ ನಾಟಕವನ್ನೇ ಪುನಃ ಪುನಃ ಆಡಬೇಕು. ಒಂದೇ ನಾಟಕವನ್ನು ಎಲ್ಲಾ ತರಗತಿಯವರೂ ಆಡಬೇಕು. ಆ ನೆಲೆಯಲ್ಲಿ ನಾಟಕ ಸ್ಪರ್ಧೆ ನಡೆಸಬೇಕು. ಇಂಗ್ಲಿಷ್ ಭಾಷೆಯ ನಾಟಕದಲ್ಲಿ, ಉಚ್ಚಾರ, ಆಕ್ಸೆಂಟ್ ಮತ್ತು ಇಂಟೊನೇಷನಿಗೆ ಪ್ರತ್ಯೇಕ ಗಮನ ನೀಡಬೇಕು. ಮಕ್ಕಳಿಂದಲೇ ಚಿಕ್ಕ- ಚಿಕ್ಕ ನಾಟಕ ಬರೆಸಬೇಕು. ಅದಕ್ಕೆ ಬೇಕಾದ ಕತೆಯನ್ನು, ಸನ್ನಿವೇಶಗಳನ್ನು ಮಕ್ಕಳು ಮತ್ತು ಶಿಕ್ಷಕರು ಸೇರಿ ಹೆಣೆಯಬಹುದು. ಜಾನಪದ ಕತೆಗಳು (ಫೋಕ್ ಟೇಲ್ಸ್) ಮತ್ತು ಅಪ್ಸರ ಕತೆಗಳನ್ನು (ಫೇರಿ ಟೇಲ್ಸ್) ಬಹಳ ಸುಲಭವಾಗಿ ನಾಟಕವಾಗಿ ಪರಿವರ್ತಿಸಬಹುದು.

ತರಗತಿಯಲ್ಲಿ ನಾಟಕವನ್ನು ಆಡುವಾಗ ಮಕ್ಕಳು ಪಾತ್ರದ ಮಾತುಗಳನ್ನು ಕಂಠಪಾಠ ಮಾಡಲೇ ಬೇಕೆಂದಿಲ್ಲ. ಮಾಡಿದರೆ ಒಳ್ಳೆಯದು. ಇಂಗ್ಲಿಷ್ ನಾಟಕವಾದರೆ, ಕಂಠಪಾಠ ಮಾಡುವುದರಿಂದ ಹೆಚ್ಚು ಪ್ರಯೋಜನವಿದೆ. ಆದರೆ ಮಾತುಗಳ ಅರ್ಥ ಮಕ್ಕಳಿಗೆ ತಿಳಿದಿರಬೇಕು. ಒಂದು ತರಗತಿಯವರು ಕನ್ನಡದಲ್ಲಿ ಆಡಿದ್ದನ್ನೇ ಇನ್ನೊಂದು ತರಗತಿಯವರು ಇಂಗ್ಲಿಷಿನಲ್ಲಿ ಆಡಿದರೆ ಇಂಗ್ಲಿಷ್ ಕಲಿಕೆಯಲ್ಲಿ ಒಂದು ಕ್ರಾಂತಿ ಆರಂಭವಾಗುತ್ತದೆ. ಸಿನಿ ನೋಡಿ, ಟೀವಿ ನೋಡಿ ಮಕ್ಕಳು ಇಂಗ್ಲಿಷ್ ಮತ್ತು ಹಿಂದಿ ಕಲಿತಿರುವುದು ಇದೇ ವಿಧಾನದಲ್ಲಿ. ತನ್ನ ಮನೆಯ ಪರಿಸರದಲ್ಲಿ ಜನರಾಡುವ ಬೇರೆ ಭಾಷೆಗಳನ್ನು ಮಕ್ಕಳು ಬಹಳ ಸುಲಭದಲ್ಲಿ ಕಲಿತುಕೊಳ್ಳುವುದು ಇದೇ ರೀತಿಯಲ್ಲಿ.

ನಾಟಕಾಭಿನಯದ ಮೂಲಕ ಮಗುವಿನಲ್ಲಿ ಆತ್ಮವಿಶ್ವಾಸ ತಾನಾಗಿ ಬೆಳೆಯುತ್ತದೆ. ಸಭಾಕಂಪನ ಎಂಬುದೊಂದಿದೆ ಅದನ್ನು ಗೆಲ್ಲುವುದು ಹೇಗೆ ಎಂದು ಹೇಳಿಕೊಡಬೇಕಾದ್ದೇ ಇಲ್ಲ. ಅಂಥದ್ದನ್ನೆಲ್ಲಾ ನೇರವಾಗಿ ಗೆಲ್ಲುವ ವಿಧಾನವೇ ತಪ್ಪು. ಮನಸ್ಸು ಬೇರೆ ಕ್ರಿಯೆಯಲ್ಲಿ ತೊಡಗಿದಾಗ ಉಂಟಾಗುವ ಮೈಮರವೆಯಲ್ಲಿ ‘ಸೆಲ್ಫ್ಫ್ ಕಾನ್ಷಿಯಸ್ನೆಸ್’ ಎಂಬುದು ತಾನಾಗಿ ಅದೃಶ್ಯವಾಗುತ್ತದೆ. ನಾಟಕ ಅಂಥ ಅವಕಾಶವನ್ನು ಒದಗಿಸಿಕೊಡುತ್ತದೆ.

ಮಗುವಿನ ಪ್ರತಿ ದಿನದ ತರಗತಿಯ ಓದು ಅನುಭವವಾಗುವುದಿಲ್ಲ. ಅನುಭವವಾಗದ್ದು ಪೂರ್ಣವಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ನೆನಪಿನಲ್ಲಿಡಲು ಪ್ರತ್ಯೇಕವಾಗಿ ಶ್ರಮಪಡಬೇಕಾಗುತ್ತದೆ. ಆದರೆ ಪ್ರತಿಯೊಂದು ನಾಟಕಾನುಭವವೂ ಮಕ್ಕಳ ನೆನಪಿನಲ್ಲಿ ಉಳಿಯುತ್ತದೆ. ಕಾರಣ, ಅದು ಅನುಭವ. ಅದು ಮಾನಸಿಕ ಕ್ರಿಯೆ ಮತ್ತು ಶಾರೀರಿಕ ಚಟುವಟಿಕೆ ಎರಡೂ ಸೇರಿದ ಅನುಭವ. ನಾಟಕದಲ್ಲಿನ ಮಾತುಗಳು ಪಠ್ಯ ಪುಸ್ತಕದ ಪಾಠಗಳ ಮಾತುಗಳಂತಿರದೆ, ನಾವು ಬದುಕಿನಲ್ಲಿ ಆಡುವ ಮಾತುಗಳಂತಿರುವುದರಿಂದ ಮಕ್ಕಳಿಗೆ ಆತ್ಮೀಯವಾಗುತ್ತವೆ. ಆತ್ಮೀಯವಾದದ್ದು ಮರೆತುಹೋಗುವುದಿಲ್ಲ.

ಮಕ್ಕಳೇ ನಾಟಕ ರಚಿಸಬಹುದು

ಮಕ್ಕಳು ಕೂಡ ತಮಗೆ ಸಿಕ್ಕಿದ ಕಥೆಗಳನ್ನು ಆಯ್ದುಕೊಂಡು ಐದು- ಹತ್ತು- ಹದಿನೈದು ನಿಮಿಷಗಳ ನಾಟಕ- ಕಥೆಯನ್ನು ಹೆಣೆಯಬಹುದು. ತಾವು ಕಂಡ ವಸ್ತು, ದೃಶ್ಯ, ತಮಗಾದ ಅನುಭವ ಇತ್ಯಾದಿಗಳ ಬಗ್ಗೆ ನಾಲ್ಕೆ ದು ಸಾಲಿನ ಹಾಡುಗಳನ್ನು ಅಥವಾ ಪುಟ್ಟ- ಪುಟ್ಟ ಪ್ರಬಂಧಗಳನ್ನು ರಚಿಸಬಹುದು. ಚಿಕ್ಕ ಮಕ್ಕಳನ್ನು ಆಕರ್ಷಿಸುವಂಥ ಚಿಕ್ಕ ಮಕ್ಕಳ ಕಥೆಗಳು ಜನಪದದಲ್ಲಿ, ಪತ್ರಿಕೆ- ಪುಸ್ತಕಗಳಲ್ಲಿ ಹೇರಳವಾಗಿ ಸಿಗುತ್ತವೆ. ಒಂದು ಪರಿಪೂರ್ಣ ನಾಟಕವಾಗುವಂಥ ವಸ್ತು ಅವುಗಳಲ್ಲಿ ಇರುವುದು ಕಡಿಮೆ. ಇದ್ದರೂ ಅಂಥ ಕೆಲಸವನ್ನು ಮಕ್ಕಳಿಂದ ಮಾಡಲಿಕ್ಕಾಗದು. ಆದರೆ ಮಕ್ಕಳಿಗೆ ಅವುಗಳ ಮೂಲಕ ಸಂಭಾಷಣೆಯನ್ನು ರಚಿಸುವ ತರಬೇತಿಯನ್ನು ನೀಡಲು ಸಾಧ್ಯವಿದೆ. ಇದನ್ನು ಇಬ್ಬರು ಮೂವರು ಸೇರಿ ಕೂಡ ಮಾಡಬಹುದು. ಇಂಥ ತರಬೇತಿಯ ಲಾಭ ಬಹಳ. ನಾಟಕಗಳಲ್ಲಿ ಪಾತ್ರಗಳು ಆಡುವ ಮಾತುಗಳು ನಾವು ನಮ್ಮ ದಿನದಿನದ ಬದುಕಿನಲ್ಲಿ ಆಡುವ ಮಾತುಗಳೇ ಆಗಿರುತ್ತವೆ ಎಂಬುದನ್ನು ಮಕ್ಕಳು ಗುರುತಿಸುತ್ತಾರೆ. ಭಾಷೆಯನ್ನು ಪ್ರೀತಿಸಲು ಕಲಿಯುತ್ತಾರೆ.

ಭಾಷೆ ಮತ್ತ್ತುಚಿಂತನೆ ಎಲ್ಲಾ ಕಲಿಕೆಯ ಅಡಿಗಲ್ಲು. ಭಾಷೆ ಸಶಕ್ತವಾಗಿದ್ದರೆ, ಕಲಿಕೆ ಸಶಕ್ತವಾಗಿರುತ್ತದೆ. ತಮ್ಮ ಚಿಂತನಾಶಕ್ತಿ, ವಿಚಾರಶಕ್ತಿ, ಕಲ್ಪನಾಶಕ್ತಿ ಮತ್ತು ಸೃಜನಶೀಲತೆಯನ್ನು ಬೆಳೆಸಲು ತಾವೇ ಕಲಿತುಕೊಳ್ಳುವಂತೆ ಮಕ್ಕಳಿಗೆ ಕಲಿಸಲು ನಾಟಕಗಳು ಅತ್ಯಂತ ಸಹಕಾರಿ. ಈ ರೀತಿ ತಮಗಾಗಿ ತಾವೇ ತಯಾರಿಸಿಕೊಂಡ ಸಾಹಿತ್ಯವೇನಿದೆ ಅದು ಕೂಡ ಮಕ್ಕಳ ಸಾಹಿತ್ಯವೇ. ಮಕ್ಕಳ ಸಾಹಿತ್ಯವೆಂದರೆ ಮುದ್ರಿತವಾದದ್ದು, ಪುಸ್ತಕದಂಗಡಿಯಲ್ಲಿ ಲಭಿಸುವಂಥದು ಎಂದು ನಾವು ವ್ಯಾಖ್ಯಾನಿಸಬೇಕಾಗಿಲ್ಲ. ಒಂದು ತರಗತಿಯ ಅಥವಾ ಶಾಲೆಯ ಮಕ್ಕಳು ತಮ್ಮ ಶಿಕ್ಷಕರ ನೆರವಿನಿಂದ ತಮಗಾಗಿ ತಾವೇ ಶಿಶುಸಾಹಿತ್ಯವನ್ನು ನಿರ್ಮಿಸಿಕೊಳ್ಳಬಹುದು. ಈ ಸಾಹಿತ್ಯ ಆಯಾ ಶಾಲೆಯ ಪರಿಸರಕ್ಕನುಸಾರವಾಗಿ ರೂಪುಗೊಳ್ಳಬಹುದು. ಅದರಲ್ಲಿ ಅಲ್ಲಿನ ಬದುಕು ಮತ್ತು ಸಮಾಜ, ಅಲ್ಲಿನ ಭೌಗೋಳಿಕ, ಐತಿಹಾಸಿಕ ಮತ್ತಿತರ ವೈಶಿಷ್ಟ್ಯಗಳು ಸ್ಥಾನ ಪಡೆಯಬಹುದು. ಅದು ಜೀವಂತ ಶಿಶುಸಾಹಿತ್ಯವಾಗುತ್ತದೆ. ಅದರಲ್ಲಿ ಶಿಶುಮನ ಮಿಡಿಯುತ್ತಿರುತ್ತದೆ.