ಪ್ರೌಢರಿಗಾಗಿ ವಿವಿಧ ಸಾಹಿತ್ಯ ಪ್ರಕಾರಗಳನ್ನು ಸಮರ್ಥವಗಿ ರಚಿಸದಿ ಆನಂದಕಂದರು ಮಕ್ಕಳಿಗಾಗಿಯೂ ಬರೆದಿದ್ದಾರೆ. ಬಾಲಕರನ್ನು ಉದ್ದೇಶಿಸಿ ಅವರು ರಚಿಸಿದ ಗದ್ಯ ಕೃತಿಗಳು ನಾಲ್ಕು. ‘ಬಸವಣ್ಣನವರು’ (೧೯೨೭)‘ಭೀಷ್ಮ(೧೯೬೨)’ ಲವಕುಶ’(೧೯೬೨) ಹಾಗೂ ‘ಚಂದ್ರಹಾಸ’ (೧೯೬೭) ಹೀಗೆ ವಿವಿಧ ವಿಷಯಗಳ ಚಾರಿತ್ರಿಕ ಕೃತಿಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ.

‘ಮಕ್ಕಳಿಗಾಗಿ ಬಸವಣ್ಣ’ ಈ ಕೃತಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಮಕ್ಕಳು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಲು ತಕ್ಕುದಾಗಿದೆ. ಬಸವಣ್ಣನವರ ಜೀವನ ಹಾಗೂ ಸಾಧನೆಗಳನ್ನು ಅವರ ಕ್ರಾಂತಿಯನ್ನು ಅರಿತುಕೊಳ್ಳುವಂತೆ ಹದಿವಯದ ಮನೋಧರ್ಮಕ್ಕೆ ಅನುಗುಣವಾಗಿ ಸೊಗಸಾಗಿ ನಿರೂಪಿಸಿದ್ದಾರೆ. ಮಹಾಭಾರತದ ಕಥಾ ಪ್ರಸಂಗ ‘ನುಡಿದಂತೆ ನಡೆದ ಭೀಷ್ಮ’ ಕೂಡ ಅಚ್ಚುಕಟ್ಟಾದ ನಿರೂಪಣೆ, ಸಂಭಾಷಣಾ ಚಾತುರ್ಯ, ನಾಟಕೀಯ ರೀತಿಯಲ್ಲಿ ಮಕ್ಕಳ ಮನಸ್ಸನ್ನು ಸೂರೆಗೊಳ್ಳುವಂತಿದೆ.

ರಾಮಾಯಣದ ‘ಲವಕುಶ’ರನ್ನು ಕುರಿತಾದ ಈ ಕಿರು ಪುಸ್ತಕ ಕೂಡ ಮಕ್ಕಳು ಮೆಚ್ಚುವಂತಿದೆ. ಬಾಲ ಲವಕುಶರ ಸಾಹಸ ಪ್ರವೃತ್ತಿ ಮಕ್ಕಳಿಗೆ ಪ್ರೇರಣೆ ನೀಡುವಂತಿದೆ. ಜೈಮಿನಿ ಭಾರತದಲ್ಲಿಯ ಪ್ರಸಂಗ ‘ಚಂದ್ರಹಾಸ’ಕೂಡ ಮಕ್ಕಳಿಗೆ ಹಿಡಿಸುವ ಬೋಧಕ ಕಥೆಯೇ ಆಗಿದೆ. ಮಕ್ಕಳ ಚಾರಿತ್ಯ್ರ ನಿರ್ಮಾಣದಲ್ಲಿ ಆನಂದಕಂದರ ಸುಲಭಶೈಲಿಯ, ಆಕರ್ಷಕ ಕಥೆಗಳ ಈ ನಾಲ್ಕು ಕೃತಿಗಳು ಮಹತ್ವದ ಪಾತ್ರವನ್ನು ನಿರ್ವಹಿಸಬಲ್ಲವು.

ಆನಂದಕಂದರ ‘ಮುದ್ದನ ಮಾತು’ ಮಕ್ಕಳನ್ನು ಕುರಿತು ಬರೆದ ನಲವತ್ತು ಕವಿತೆಗಳ ಮುದ್ದಾದ ಸಂಕಲನವಾಗಿದೆ. ತಾಯಿ-ಮಗುವಿನ ಒಲವಿನ ಸಂಬಂಧ ಕವಿತೆಗಳಲ್ಲಿ ಮಗುವಿನ ನಿತ್ಯ ಚಟುವಟಿಕೆಗಳ ಚಿತ್ರಣವೇ ಇದೆ. ಮಗುವಿನ ಕೂತೂಹಲಕ್ಕೆ ಮಗುವಿನ ಸಹಜ ಮಾನಸಿಕ ಬೆಳವಣಿಗೆಗೆ ತಾಯಿ ನೀರೆರೆದು ವಿಕಸಿತಗೊಳಿಸುವ ಪರಿಯನ್ನು ಸುಂದರವಾಗಿ ಅಭಿವ್ಯಕ್ತಗೊಳಿಸಲಾಗಿದೆ.