ಹಿಂದೂ ಧರ್ಮದಲ್ಲಿರುವ, ದೋಷಗಳಲ್ಲಿ ಅಸ್ಪೃಷ್ಯತೆಯೂ ಒಂದು. ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೀಳು ಎಂದು ತಿಳಿಯುವುದು ಅತಿ ದೊಡ್ಡ ತಪ್ಪು. ಹುಟ್ಟಿನಿಂದ ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ. ಅವರವರು ಮಾಡಿದ ಒಳ್ಳೆಯ ಕೆಲಸಗಳಿಂದಲೇ ಇತರರಿಂದ ಗೌರವವನ್ನು ಪಡೆಯುತ್ತಾರೆ.

ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳವರೆಗೆ ಅಸ್ಪೃಶ್ಯರನ್ನು ಇತರರು ಅತಿ ನಿಕೃಷ್ಟವಾಗಿ ಕಾಣುತ್ತಿದ್ದರು. ಅವರನ್ನು ಮುಟ್ಟಿಸಿಕೊಳ್ಳುವುದೂ ಪಾಪ ಎಂದು ತಿಳಿಯುತ್ತಿದ್ದರು.

ಬಾಪು ಚಿಕ್ಕವರಿದ್ದಾಗ ಅವರ ತಾಯಿ, “ಮಗು ಅಸ್ಪೃಶ್ಯರನ್ನು (ಹರಿಜನ-ಗಿರಿಜನ) ಮುಟ್ಟಿಸಿಕೊಳ್ಳಬೇಡ. ಒಂದು ವೇಳೆ ಅವರ ಮೈ ಕೈ ತಗುಲಿದರೆ ತಕ್ಷಣ ಯಾರಾದರೊಬ್ಬ ಮುಸ್ಲಿಮನನ್ನು ಮುಟ್ಟಿಬಿಡು. ಪಾಪ ಪರಿಹಾರವಾಗಿ ಬಿಡುತ್ತದೆ” ಎಂದು ಹೇಳುತ್ತಿದ್ದರಂತೆ. ಆ ಮಾತು ಕೇಳಿ ಬಾಪುಗೆ ನಗೆ ಬರುತ್ತಿತ್ತು. ಆತ ಶಾಲೆಗೆ ಹೋಗಿ ಬಂದರೆ ಯಾರ್ಯಾರು ಮುಟ್ಟಿ ಮೈಲಿಗೆಯಾಯಿತೋ ಎಂದು ಮನೆಯ ಹೊರಗೆ ಕುಳ್ಳರಿಸಿ ಸ್ನಾನ ಮಾಡಿಸುತ್ತಿದ್ದರಂತೆ!

ಗಾಂಧೀಜಿ ಬೆಳೆದಂತೆಲ್ಲಾ ವಿಚಾರವಂತರಾದರು. ಅಸ್ಪೃಶ್ಯರು ನನ್ನ ಬಂಧುಗಳು ಎಂದರು. ಅವರನ್ನು ಹರಿಜನರು ಎಂದು ಕರೆದರು. ಅವರ ಜೀವನ ಮಟ್ಟವನ್ನು ಸುಧಾರಿಸಲು ಶ್ರಮಿಸಿದರು.

ಗಾಂಧೀಜಿ ಅಹಮದಾಬಾದಿನ ಬಳಿ ಸೇವಾ ಗ್ರಾಮವನ್ನು ಸ್ಥಾಪಿಸಿದರು. ಅಲ್ಲಿಗೆ ಒಂದು ಹರಿಜನ ಸಂಸಾರ ಬಂದು ಆಶ್ರಯ ಕೇಳಿತು. ಅವರು ಕೂಡಲೇ ತುಂಬು ಹೃದಯದಿಂದ ಒಪ್ಪಿಕೊಂಡರು.

ಸುದ್ದಿ ಹಬ್ಬಿತು. ಗಾಂಧೀಜಿ ಹರಿಜನರಿಗೆ ಆಶ್ರಮವನ್ನು ಕೊಟ್ಟು ಆಶ್ರಮವನ್ನು ಅಪವಿತ್ರಗೊಳಿಸಿದರು ಎಂದು ಹಲವರು ಬಾಪುವನ್ನು ಕಟುವಾಗಿ ಟೀಕಿಸದರು. ಆಶ್ರಮಕ್ಕೆ ಧನಸಹಾಯ ನೀಡುತ್ತಿದ್ದ ಅಹಮದಾಬಾದಿನ ಧನಿಕರೆಲ್ಲಾ ಸಹಾಯ ನಿಲ್ಲಿಸಿದರು. ಆಶ್ರಮದ ವೆಚ್ಚಕ್ಕೆ ಹಣವಿಲ್ಲವಾಯಿತು. ಆಶ್ರಮದ ಮಗನ್ ಲಾಲ್ ಬಾಪು ಬಳಿಗೆ ಬಂದು ಹೇಳಿದರು.

“ಹಣ ಮುಗಿಯಿತು. ಯಾರಿಂದಲೂ ನೆರವು ದೊರೆಯುವ ಸಂಭವವೂ ಇಲ್ಲವೆಂದು ತೋರುತ್ತಿದೆ. ಮುಂದೆ ಆಶ್ರಮಕ್ಕೆ ಬೇಕಾಗುವ ದವಸ-ಧಾನ್ಯದ ಖರ್ಚಿಗೆ ಏನು ಮಾಡುವುದು?”

ಬಾಪು ಶಾಂತಚಿತ್ತರಾಗಿ ಹೇಳಿದರು-

“ಅದಕ್ಕೇಕೆ ಚಿಂತೆ. ನಾವು ದೇವರು ಮೆಚ್ಚುವ ಕೆಲಸ ಮಾಡಿದ್ದೇವೆ. ಅದಕ್ಕಾಗಿ ತಲೆ ತಗ್ಗಿಸಬೇಕಾಗಿಲ್ಲ, ಧೈರ್ಯಗೆಡಬೇಕಿಲ್ಲ. ನಾಳೆಯಿಂದ ಅಗತ್ಯ ಬಿದ್ದರೆ ಹರಿಜನರ ವಸತಿಯಲ್ಲಿ ಹೋಗಿ ಅಲ್ಲೇ ನೆಲೆಸೋಣ, ನಿಲ್ಲೋಣ. ”

ಗಾಂಧೀಜಿಗೆ ದೇವರಲ್ಲಿ ಅಚಲ ನಂಬಿಕೆ ಇತ್ತು. ಇದೂ ಒಂದು ಪರೀಕ್ಷೆ. ಸತ್ಯ ಶೋಧಕರಿಗೆ ಇಂತಹ ಅಡಚಣೆಗಳು ಹೆಜ್ಜೆ ಹೆಜ್ಜೆಗೂ ಹಿಂಭಾಲಿಸುತ್ತೇವೆ. ಸಾಧಕರು ಧೈರ್ಯದಿಂದಿರಬೇಕು. ದೇವರೇ ದಾರಿ ತೋರಿಸುತ್ತಾನೆ ಎಂದುಕೊಂಡು ಆ ರಾತ್ರಿ ಸುಖವಾಗಿ ನಿದ್ರಿಸಿದರು.

ಮಾರನೆಯ ದಿನ ಬೆಳಕು ಹರಿಯುವುದರಲ್ಲಿ ಶ್ರೀಮಂತನೊಬ್ಬ ಕಾರಿನಲ್ಲಿ ಆಶ್ರಮಕ್ಕೆ ಬಂದು ಗಾಂಧೀಜಿಯನ್ನು ಭೇಟಿ ಮಾಡಿದ. ಗಾಂಧೀಜಿ ಆತನನ್ನು ಎಂದೋ ಒಂದು ಬಾರಿ ನೋಡಿದರಷ್ಟೆ.

“ಬಾಪೂ, ನಿಮ್ಮ ಆಶ್ರಮಕ್ಕೆ ಹಣದ ಅವಶ್ಯಕತೆ ಇದೆಯೇ?”

ಆ ಶ್ರೀಮಂತ ನಮ್ರನಾಗಿ ಕೇಳಿದ.

“ಹೌದು” ಎಂದರು ಬಾಪೂಜಿ.

“ಮಾರನೆಯ ದಿನ ಆತ ಹದಿಮೂರು ಸಾವಿರ ರೂಪಾಯಿಗಳನ್ನು ಗಾಂಧೀಜಿಯ ಕೈಗೆ ತಂದಿತ್ತ. ಆ ಹಣ ಆಶ್ರಮದ ಒಂದು ವರ್ಷದ ಖರ್ಚಿಗೆ ಸಾಕಾಗಿತ್ತು.”

ಆಶ್ರಮದ ಜನರಿಂದ, ಕಸ್ತೂರಬಾ ಮನದಿಂದ ಅಸ್ಪೃಶ್ಯತಾ ಭಾವನೆಯನ್ನು ತೊಡೆದು ಹಾಕಲು ಬಾಪು ತುಂಬಾ ಶ್ರಮಿಸಬೇಕಾಯಿತು.

ಗಾಂಧೀಜಿ ಆ ಅಸ್ಪೃಶ್ಯ ಸಂಸಾರದ ಹೆಣ್ಣು ಮಗು ಲಕ್ಷ್ಮಿಯನ್ನು ತಮ್ಮ ಮಗಳಾಗಿ ದತ್ತು ಸ್ವೀಕರಿಸಿದರು.

“ನನಗೆ ಎಷ್ಟೊಂದು ಜನ್ಮ ಇರುವುದಾದರೆ ಆ ಜನ್ಮ ಹರಿಜನ ಕುಟುಂಬದಲ್ಲಿ ಬರಲಿ. ಅವರು ಸಾವಿರಾರು ವರ್ಷಗಳಿಂದ ಅನುಭವಿಸುತ್ತಿರುವ ಅಪಮಾನದಲ್ಲಿ ಪಾಲು ದೊರೆಯಲಿ. ಅವರನ್ನು ಆ ದುಃಖ ಸ್ಥಿತಿಯಿಂದ ಪಾರುಗೊಳಿಸುವ ಶಕ್ತಿಯನ್ನು ದೇವರು ನನ್ನಲ್ಲಿ ಅನುಗ್ರಹಿಸಲಿ” ಎಂದು ಬಾಪು ಬಯಸುತ್ತಿದ್ದರು.