ಒಂದು ದೇಶದಲ್ಲಿ ರಾಜನಿಗೆ ಒಬ್ಬ ರಾಜಕುಮಾರನಿದ್ದನು. ರಾಜಕುಮಾರ ವಯಸ್ಸಿಗೆ ಬರಲು ವಿವಾಹ ಮಾಡಲು ತಯಾರಿ ನಡೆಸಿದರು. ದೇಶವಿದೇಶಗಳಿಂದ ರಾಜಕುಮಾರಿಯರ ಚಿತ್ರಪಟಗಳನ್ನು ತರಿಸಿದರು. ಆದರೆ ರಾಜಕುಮಾರ ಒಂದೊಂದು ಚಿತ್ರಪಟದಲ್ಲೂ ಕೊಂಕು ತೆಗೆದು ನಿರಾಕರಿಸಿದನು.

ರಾಜಕುಮಾರನ ಮನಸ್ಸಿನಲ್ಲಿ ಬೇರೆಯೇ ಆದ ಆಸೆ ಇದ್ದವು. ಅವನಿಗೆ ಏಳುಮಲ್ಲಿಗೆ ತೂಕದ ರಾಜಕುಮಾರಿಯನ್ನು ಮದುವೆಯಾಗಬೇಕೆಂಬ ಆಸೆ. ಆದರೆ ಅವನಿಗೆ ಅವಳು ಎಲ್ಲಿರುವಳು, ಏನು ಎಂದು ಗೊತ್ತಿರಲಿ. ಇದೇ ಯೋಚನೆಯಲ್ಲಿ ಅರಮನೆಯ ಉದ್ಯಾನವನದಲ್ಲಿ ತಿರುಗಾಡುತ್ತಿರಲು ಒಂದು ಗಿಣಿ ಬಂದು ಅವನ ಹೆಗಲ ಮೇಲೆ ಪ್ರೀತಿಯಿಂದ ಕುಳಿತುಕೊಂಡಿತು. ಮೊದಲೇ ಬೇಸರದಲ್ಲಿದ್ದ ರಾಜಕುಮಾರನಿಗೆ ಹೆಗಲ ಮೇಲೆ ಪ್ರೀತಿಯಿಂದ ಬಂದು ಕೂತ ಗಿಣಿಯನ್ನು ಕಂಡು ಅಂತಃಕರಣ ಉಕ್ಕಿ ಅಳು ಬಂದುಬಿಟ್ಟಿತು. ಕೈಯಿಂದ ಗಿಣಿಯನ್ನು  ತೆಗೆದುಕೊಂಡು ಪ್ರೀತಿಯಿಂದ ಸವರುತ್ತಾ ಕಣ್ಣಲ್ಲಿ ನೀರು ಸುರಿಸುತ್ತ “ಗಿಣಿಯೇ ಗಿಣಿಯೇ, ನನ್ನ ಮುದ್ದಿನ ಗಿಣಿಯೇ, ನನಗೆ ಏಳು ಮಲ್ಲಿಗೆ ತೂಕದ ರಾಜಕುಮಾರಿ ಸಿಗುವಳೇ” ಎಂದು ಕೇಳಲುಗಿಣಿಯು ಅತಿಮುದ್ದಿನಿಂದ “ಸಿಕ್ಕುತ್ತಾಳೆ” ಎಂದಿತು. ಗಿಣಿ ಮಾತನಾಡಿದ್ದನ್ನು ನೋಡಿ ಆಶ್ಚರ್ಯದಿಂದ “ಏನಂದೆ?” ಎಂದು, “ಹೌದೆ! ಹಾಗಾದರೆ ಎಲ್ಲಿ? ಯಾವಾಗ?” ಎಂದು ಕೇಳಲು ಗಿಣಿಯು “ಈ ರಾತ್ರಿ ತನ್ನ ಜೊತೆಯಲ್ಲಿ ಬಂದರೆ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿತು.

ರಾಜಕುಮಾರ ಅರಮನೆಗೆ ಬಂದು ಸ್ನಾನ ಮಾಡಿ ಭೋಜನ ಮುಗಿಸಿ ಉತ್ಸಾಹದಿಂದ ಕುದುರೆಯ ಜೀನನ್ನು ಎಳೆಯಲು ರಾಜಕುಮಾರನ ಹೆಗಲ ಮೇಲೆ ಗಿಣಿ ಅತಿಮುದ್ದಿನಿಂದ ಬಂದು ಕುಳಿತುಕೊಂಡಿತು. ರಾಜರಾಣಿಗೆ ರಾಜಕುಮಾರ ಸಂತೋಷದಿಂದ ಇರುವುದನ್ನು ಕಂಡು ಅತೀವ ಸಂತೋಷ ಪಟ್ಟರು.

ಹೀಗೆ ಕುದುರೆ ಮೇಲೇರಿದ ರಾಜಕುಮಾರ ಏಳು ಹಗಲು – ಏಳು ರಾತ್ರಿ ಎಡಬಿಡದೆ ಗಿಣಿ ಹೇಳಿದ ದಾರಿಯಲ್ಲಿ ಪಯಣಿಸುತ್ತಿದ್ದನು. ಏಳನೇ ದಿನ ಒಂದು ಗೊಂಡಾರಣ್ಯಕ್ಕೆ ಬಂದು ತಲುಪಿದರು. ಗಿಣಿ ರಾಜಕುಮಾರನಿಗೆ ಸ್ನಾನ ಮಾಡಿ ವಿಶ್ರಮಿಸಲು ಹೇಳಿ ತಾನು ಏನಾದರೂ ಹಣ್ಣು ತರುವುದಾಗಿ ಹಾರಿ ಹೋಯಿತು.

ತುಂಬ ದಣಿದ ರಾಜಕುಮಾರ ಹರಿಯುತ್ತಿದ್ದ ನೀರಿನಲ್ಲಿಳಿದು ಸ್ನಾನ ಮಾಡಿ ಹಾಗೇ ಒಂದು ಮರದ ಕೆಳಗೆ ವಿಶ್ರಮಿಸಲು, ಗಿಣಿ ತನ್ನ ಕೊಕ್ಕಿನಿಂದ ಹಣ್ಣುಗಳನ್ನು ತಂದು, “ಇದನ್ನು ತಿನ್ನು. ಇದನ್ನು ತಿಂದರೆ ನಿನಗೆ ಏಳು ಮಲ್ಲಿಗೆ ತೂಕದ ರಾಜಕುಮಾರಿ ಸಿಗುವತನಕ ಹಸಿವಾಗುವುದಿಲ್ಲ” ಎಂದು ಹೇಳಿತು. ರಾಜಕುಮಾರ ಬಹುಪ್ರೀತಿಯಿಂದ ಗಿಣಿಯನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಗಿಣಿ ತಂದ ಹಣ್ಣನ್ನು ತಿಂದನು.

“ನನ್ನ ಮುದ್ದಿನ ಗಿಣಿಯೇ, ಮುಂದೇನು?” ಎಂದು ಕೇಳಲು, “ಅಲ್ಲಿ ನೋಡು, ಏಳು ಬೆಟ್ಟಗಳ ಸಾಲು. ಅಲ್ಲಿ ಭಯಂಕರವಾದ ಕಾಡುಮೃಗಗಳು, ದಟ್ಟ ಗೊಂಡಾರಣ್ಯ, ಅಲ್ಲಿ ಹೋದ ಮನುಷ್ಯರ್ಯಾರೂ ಹಿಂದೆ ಬರಲಾರರು. ಭಯಂಕರವಾದ ರಾಕ್ಷಸರು ಅಲ್ಲಿ ಇದ್ದಾರೆ. ಈ ಏಳು ಬೆಟ್ಟಗಳನ್ನು ಕಾಯುವ ಒಂಟಿ ಕಾಲಿನ ರಾಕ್ಷಸನಿದ್ದಾನೆ. ಅವನ ಕಾಲಿಗೆ ನೂರಾನೆ ಬಲವಿದೆ. ಯಾವ ಮನುಷ್ಯರು ಹೋದರೂ ಮೊದಲು ಅವನಿಗೆ ಆಹಾರವಾಗುತ್ತಾನೆ. ನೀನು ಧೈರ್ಯವಾಗಿ ಅವನ ಬಳಿಗೆ ಹೋಗು. ಅವನು ನಿನ್ನನ್ನು ತಿನ್ನಲಿಕ್ಕೆ ಬರುತ್ತಾನೆ. ನೀನು ಅವನ ಜೊತೆ ಯುದ್ಧ ಮಾಡಬೇಡ. “ನನ್ನನ್ನು ತಿನ್ನು, ನನ್ನನ್ನು ತಿನ್ನು” ಎಂದು ಹೇಳು. ಆಗ ಅವನು “ಹಾಳಾಗಿ ಹೋಗು” ಎನ್ನುತ್ತಾನೆ. ನೀ “ಹೋಗುವುದಿಲ್ಲ” ಎಂದು ಅಲ್ಲಿಯೇ ಕುಳಿತು ಬಿಡು. ಆಗ ಆ ರಾಕ್ಷಸ ತನ್ನ ಒಂಟಿಕಾಲಿನಿಂದ ಒದೆಯುತ್ತಾನೆ. ನೀನು ಏಳು ಬೆಟ್ಟದ ಆಚೆ ಇರುವ ಹುಲ್ಲುಗಾವಲಿನಲ್ಲಿ ಬಿದ್ದಿರುತ್ತೀಯಾ. ನಾನು ಅಲ್ಲಿ ನಿನಗಾಗಿ ಕಾಯುತ್ತಿರುತ್ತೇನೆ. ಅವನು ನಿನ್ನ ತಿನ್ನಲಿಕ್ಕೆ ಬಂದಾಗ ‘ತಿನ್ನಬೇಡ’ ಎನ್ನಬೇಡ ಹುಷಾರು. ” ಎಂದು ಹೇಳಿ ಪುರ್ರೆಂದು ಹಾರಿ ಹೋಗುತ್ತದೆ.

ಬೆಟ್ಟಗಳ ತಪ್ಪಲಿನ ಗುಹೆಯ ಮುಂದೆ ಬಂಡೆಯಂತೆ ಕುಳಿತ ರಾಕ್ಷಸನನ್ನು ನೋಡಿ ರಾಜಕುಮಾರನಿಗೆ ಭಯವಾದರೂ ಧೈರ್ಯ ತಂದುಕೊಂಡು ರಾಕ್ಷಸನ ಮುಂದೆ ಹೋದನು. ಆಗ ತಾನೆ ಯಾವುದೋ ಮಾಂಸವನ್ನು ತಿಂದು ತೇಗಿನ ರಾಕ್ಷಸ ಮರದ ಕೊಂಬೆಯಿಂದ ಹಲ್ಲಿನ ಸಂದಿಯಲ್ಲಿ ಸಿಕ್ಕಿಕೊಂಡದ್ದನ್ನು ತೆಗೆಯುತ್ತಿದ್ದನು. ರಾಜಕುಮಾರನನ್ನು ನೋಡಿ ಕೊಂಬೆಯ ಕೈಸಂದಿಯಲ್ಲಿ ಜಾರಿಸಿ, “ಎಂಥ ಒಳ್ಳೆಯ ಮಾಂಸ, ರಸವತ್ತಾದ ಮಾಂಸ, ನಿನ್ನನ್ನು ನಾನು ತಿನ್ನಲೇಬೇಕು ಬಾ, ಬಾ” ಎಂದ. ತನ್ನ ಒಂಟಿಕಾಲಿನಿಂದ ಇವನತ್ತ ಬರಲು, ರಾಜಕುಮಾರ, “ಓ ಒಂಟಿಕಾಲಿನ ರಾಕ್ಷಸ, ನಾನೇ ಬರುತ್ತೇನೆ. ನನ್ನ ತಿನ್ನು, ತಿಂದು ಸಂತೋಷದಿಂದಿರಲು” ಎನ್ನಲು, “ಛೇ! ನನ್ನ ಕಂಡರೇನೆ ಹೆದರಿ, ಪ್ರಾಣ ವಿಲವಿಲನೆ ಒದ್ದಾಡುತ್ತಿದ್ದ ಮಂದಿ, ಇವನ್ಯಾವನು ತಿನ್ನು, ತಿನ್ನು ಎನ್ನುತ್ತಿರುವನಲ್ಲ. ಮನುಷ್ಯರಾಗಲಿ, ಪ್ರಾಣಿಗಳಾಗಲಿ ಒದ್ದಾಡುತ್ತಾ, ಜೀವ ಭಯದಿಂದ ತಪ್ಪಿಸಿ ಕೊಳ್ಳುವಾಗ ತಿನ್ನುವ ಮಜವೇ ಮಜ. ಈಗ ತಾನೆ ತಿಂದಿದ್ದೇನೆ. ಹಾಳಾಗಿ ಹೋಗಲಿ” ಎಂದು ಮತ್ತೆ ಕುಳಿತುಕೊಳ್ಳಲು ಹೋಗುತ್ತಾನೆ. ರಾಜಕುಮಾರ, “ಓ ಒಂಟಿ ಕಾಲಿನ ರಾಕ್ಷಸ, ನನ್ನ ತಿನ್ನುವುದಿಲ್ಲವೇ? ತಿನ್ನು ಬಾ, ತಿನ್ನು ಬಾ” ಎನ್ನಲು, ’ಇವನ್ಯಾವನು ತಲೆಕೆಟ್ಟವನು?’ “ಏಯ್ ಮನುಷ್ಯ ಪ್ರಾಣಿ, ಸುಮ್ಮನೆ ನಿನ್ನ ದಾರಿ ಹಿಡಿದು ಹೋಗು. ಇಲ್ಲದಿದ್ದರೆ. . . ”

“ಇಲ್ಲದಿದ್ದರೆ. . . ಇಲ್ಲದಿದ್ದರೆ ಏನು ಮಾಡುತ್ತೀಯಾ? ಮಾಡು, ನಾನಿಲ್ಲೇ ಕೂರುತ್ತೇನೆ. ”

“ಬೇಡ, ನನಗೆ ಕೋಪ ಬಂದರೆ ಒದ್ದು ಏಳು ಬೆಟ್ಟಗಳಾಚೆ ಬಿಸಾಡುತ್ತೇನೆ. ”

“ನಿನ್ನ ಒಂಟಿ ಕಾಲಿಗೆ ಅಷ್ಟು ಬಲವೇ?” ಎಂದು ವ್ಯಂಗ್ಯದಿಂದ ರಾಜಕುಮಾರ ನಗಲು ಕೋಪದಿಂದ ಬಂದ ರಾಕ್ಷಸ ರಾಜಕುಮಾರನನ್ನು ಒದ್ದನು. ರಾಜಕುಮಾರ ಏಳು ಬೆಟ್ಟಗಳಾಚೆ ಇರುವ ಹುಲ್ಲುಗಾವಲಿನಲ್ಲಿ ಬಿದ್ದನು.

ಅಲ್ಲಿ ರಾಜಕುಮಾರನ ಭಾಗ್ಯದ ಗಿಣಿ ಇವನ ದಾರಿ ಕಾಯುತ್ತಿತ್ತು. ರಾಜಕುಮಾರ ಬಿದ್ದ ತಕ್ಷಣ ಗಿಣಿ ಅವನ ಹೆಗಲ ಮೇಲೇರಿ ಕುಳಿತುಕೊಂಡಿತು. ರಾಜುಕುಮಾರ ಪ್ರೀತಿಯಿಂದ ಅದರ ಮೈದಡವುತ್ತಾ, “ಭಾಗ್ಯದ ಗಿಣಿಯೇ, ಮುಂದೇನು?” ಎನ್ನಲು, ” ಈಗ ತಾನೆ ಬಂದಿರುವೆ, ವಿಶ್ರಾಂತಿ ತೆಗೆದುಕೋ. ಮುಂದಿನದನ್ನು ಹೇಳುತ್ತೇನೆ” ಎನ್ನಲು ರಾಜಕುಮಾರನು ಹುಲ್ಲುಗಾವಲಿನ ಮೆತ್ತೆಯಲ್ಲಿ ವಿಶ್ರಾಂತಿ ತೆಗೆದುಕೊಂಡನು.

ಮಾರನೇ ದಿನ ಬೆಳಗಾಗಲು ಗಿಣಿಯು ಬಂದು ರಾಜಕುಮಾರನನ್ನು ಎಚ್ಚರಿಸಿತು. ರಾಜಕುಮಾರನ ಸ್ನಾನ ಮಾಡಿ ಸಿದ್ಧನಾಗಲು ಭಾಗ್ಯದ ಗಿಣಿ ರಾಜಕುಮಾರನಿಗೆ “ಅಲ್ಲಿ ನೋಡು, ಕತ್ತಲೆಯಂತ ಗುಡ್ಡ. ಅದು ಗುಡ್ಡವಲ್ಲ, ಒಂಟಿ ಕಾಲಿನ ರಾಕ್ಷಸನ ಹೆಂಡತಿ. ಇವಳಿಗೆ ಮೂರು ಕಾಲು. ಎದ್ದು ನಡೆದಾಡಲು ಆಗುವುದಿಲ್ಲ. ಎಲ್ಲ ತನ್ನ ನಾಲಿಗೆಯಿಂದ ಸೆಳೆದುಕೊಳ್ಳುತ್ತಾಳೆ. ಕಣ್ಣಿನಿಂದ ಸುಟ್ಟುಬಿಡುತ್ತಾಳೆ. ಆದರೆ ರಾಕ್ಷಸಿಯಾದರೂ ಅವಳ ಮೃದು ಮಕ್ಕಳು ಬಿಟ್ಟುಹೋದ ಮೇಲೆ ’ಅಮ್ಮ’ ಎಂದು ಕರೆದವರನ್ನು ಅವಳು ಏನೂ ಮಾಡಳು. ಆದರೆ ಅವಳ ಹಿಂದೆ ಏಳು ಪಾತಾಳಕ್ಕೆದಾರಿ ತೋರುವ ಬಾವಿಗಳಿದ್ದು ಒಂದಕ್ಕೊಂದು ಅಂಟಿದಂತೆ ಇದೆ. ಬೇರೆ ಕಡೆಯಿಂದ ನೀನು ಬರುವಂತಿಲ್ಲ. ಅದನ್ನು ದಾಟಿಯೇ ಬರಬೇಕು. ಅವಳ ಬಳಿ ಪ್ರೀತಿಯಿಂದ ಹೋಗಿ ಅಸಹ್ಯ, ಭಯ ಬಿಟ್ಟು ಅವಳ ನೆತ್ತಿಯ ಮೇಲೆ ಏರು. ಅವಳ ನೆತ್ತಿ ಜುಟ್ಟನ್ನು ನಿನ್ನ ಧೈರ್ಯವನ್ನೆಲ್ಲ ಬಿಟ್ಟು ಎಳೆ. ಎಷ್ಟೋ ವರ್ಷಗಳಿಂದ ಬಾವಿಯೊಳಗೆ ಬಿದ್ದಿರುವ ಅವಳ ಕೂದಲು ಮೇಲೆ ಬರುತ್ತದೆ. ಆಗ ನಿನ್ನ ಕೈಯಲ್ಲಿದ್ದ ಕೂದಲನ್ನು ಅವಳ ಕೋರೆ ಹಲ್ಲಿಗೆ ಕಟ್ಟು, ನೀನು ಅವಳ ಕೂದಲ ಮೇಲೆ ಏಳು ಬಾವಿಗಳು ದಾಟಿ ನಡೆದು ಬಾ. ಜೊತೆಗೆ ಅವಳ ನಾಲಿಗೆಯನ್ನು ಸೋಂಕಿಸಿಕೊಳ್ಳಬೇಡ. ನಾನು ನಿನಗಾಗಿ ಏಳು ಬಾವಿಯ ಆಚೆ ಬಯಲಲ್ಲಿ ಕಾಯುತ್ತಿರುತ್ತೇನೆ” ಎಂದು ಭಾಗ್ಯದ ಗಿಣಿ ಪುರ್ರೆಂದು ಹಾರಿ ಹೋಯಿತು.

ಎಷ್ಟು ದಿನಗಳಿಂದ ಏಳದೆ ಕುಳಿತಲ್ಲೇ ಕುಳಿತಿದ್ದರಿಂದ ಗಬ್ಬೆಂಬ ವಾಸನೆ ಮೂಗಿಗೆ ಬಡಿಯುತ್ತಿತ್ತು. ನಾಲಿಗೆ ಸದಾ ಚಾಚಿ ಆಹಾರಕ್ಕೆ ಹುಡುಕಾಡುತ್ತಿತ್ತು. ಕಣ್ಣಿನಿಂದ ಬೆಂಕಿಯುಂಡೆಗಳೇ ಉದುರುತ್ತಿದ್ದವು. ಆದರೂ ರಾಜುಕುಮಾರ ಏಳು ಮಲ್ಲಿಗೆ ತೂಕದ ರಾಜಕುಮಾರಿಯ ಆಸೆಯಿಂದ, “ಅಮ್ಮ, ಅಮ್ಮ” ಎಂದು ಕೂಗುತ್ತ ಅವಳ ಹತ್ತಿರ ಹೋಗಲು, ಬೆಂಕಿಯುಗುಳುತ್ತಿದ್ದ ಕಣ್ಗಳು ಮಮತೆಯಿಂದ ಮಾರ್ಪಟ್ಟವು. ಆದರೆ ನಾಲಿಗೆ ಮಾತ್ರ ಸುತ್ತುತ್ತಲೇ ಇತ್ತು. “ಯಾರಪ್ಪ ನೀನು? ಯಾರು ಬೇಕು? ನನ್ನನ್ನು ಯಾಕೆ ಅಮ್ಮ ಎಂದು ಕರೆದೆ? ನನ್ನ ಮಗ ನನ್ನಿಂದ ದೂರಾಗಿ ಬಹಳ ವರ್ಷಗಳಾಯಿತು” ಎನ್ನಲು, “ನಾನಮ್ಮ, ನಿನ್ನ ಹಾಗೆ ಅಮ್ಮನನ್ನು ಹುಡುಕುತ್ತಿದ್ದೇನೆ” ಎಂದು ಹತ್ತಿರ ಹೋಗಿ ಅವಳ ತೊಡೆ ಹತ್ತಿ ತಲೆಯ ಮೇಲೇರಿದನು. “ಓ, ಅಮ್ಮನನ್ನು ಹುಡುಕುತ್ತಿದ್ದೀಯಾ?” ಎಂದು ರಾಕ್ಷಸಿ ನಾಲಿಗೆ ವಿಚಿತ್ರವಾಗಿ ಆಡಿಸುತ್ತ ಸುಮ್ಮನಾದಳು. ತಲೆ ಏರಿದ ರಾಜಕುಮಾರ ಬಾವಿಯಲ್ಲಿ ಅವಳ ಜಡೆಗಟ್ಟಿದ ಕೂದಲು ನಿಮರಿ ನಿಂತು ಏಳು ಬಾವಿಗಳಿಗೆ ಹೊದಿಕೆಯಾಯಿತು. ಆ ರಾಕ್ಷಸಿಗಾದರೋ ರಾಜಕುಮಾರ ಮಾಡುವುದೆಲ್ಲ ಹುಡುಗಾಟವೆನಿಸಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದಳು. ರಾಜಕುಮಾರ ಭಾಗ್ಯದ ಗಿಣಿ ಹೇಳಿದಂತೆ ತಾನು ಹಿಡಿದ ಜುಟ್ಟನ್ನು ಅವಳ ನಾಲಿಗೆಗೆ ಸೋಕಿಸದೆ ರಾಕ್ಷಸಿಯ ಕೋರೆ ಹಲ್ಲಿಗೆ ಕಟ್ಟಿ ಏಳು ಬಾವಿಗಳನ್ನು ದಾಟಿ ಬಯಲಿಗೆ ಬಂದನು.

ಭಾಗ್ಯದ ಗಿಣಿ ಇವನ ಬರುವನ್ನು ಕಾಯುತ್ತಾ ಬಯಲಲ್ಲಿ ಹಾರಾಡುತ್ತಿತ್ತು. ರಾಜಕುಮಾರ ಬಂದುದನ್ನು ನೋಡಿ ಸಂತೋಷದಿಂದ ಅವನ ಹೆಗಲನ್ನು ಏರಿತು. ಅಂದು ರಾಜಕುಮಾರ ಮತ್ತು ಗಿಣಿ ಬಯಲಿನಲ್ಲಿ ವಿಶ್ರಾಂತಿ ಪಡೆದರು.

ಮರುದಿನ ರಾಜಕುಮಾರ ಪ್ರಾತಃವಿಧಿಗಳನ್ನು ಮುಗಿಸಿ, ಭಾಗ್ಯದ ಗಿಣಿಯನ್ನು “ಮುಂದೇನು?” ಎಂದು ಕೇಳಲು, “ಅಲ್ಲಿ ನೋಡು ರಾಜಕುಮಾರ, ಆ ಬಯಲಿನಾಚೆ ಈ ರಾಕ್ಷಸರ ಮಗನಿದ್ದಾನೆ. ಅವನು ಬಹು ಬಲಾಢ್ಯ. ಕಷ್ಟಪಟ್ಟು ಇಲ್ಲೀತನಕ ಬಂದ ಎಷ್ಟೋ ರಾಜಕುಮಾರರನ್ನು ಸೋಲಿಸಿ, ಹಿಂಸಿಸಿ ಭಕ್ಷಿಸಿದ್ದಾನೆ. ನೀನು ಹುಷಾರಾಗಿ ಅವನ ಜೊತೆ ಯುದ್ಧ ಮಾಡಬೇಕು. ಏಕೆಂದರೆ ಅವನು ತನ್ನ ಪ್ರಾಣವನ್ನು ವಿಚಿತ್ರ ರೀತಿಯಲ್ಲಿ ರಕ್ಷಿಸಿಟ್ಟುಕೊಂಡಿದ್ದಾನೆ. ಯುದ್ಧ ಮಾಡುವಾಗ ಅವನು ಬಲಗೈ ಎತ್ತಿದರೆ ಆಗ ಅವನ ಪ್ರಾಣ ಎಡಗೈಯಲ್ಲಿ ಇರುತ್ತದೆ. ಎಡಗಾಲು ಎತ್ತಿದರೆ ಬಲಗಾಲಿನಲ್ಲಿರುತ್ತದೆ. ತನ್ನ ದೇಹದ ಯಾವ ಅಂಗಕ್ಕಾದರೂ ತನ್ನ ಪ್ರಾಣವನ್ನು ಬದಲಾಯಿಸುತ್ತಾನೆ. ಆದರೆ ಎಡದಲ್ಲಿ ಚಲಿಸಿದ ಅಂಗದ ಬಲದಲ್ಲಿ ಅವನ ಜೊತೆ ಯುದ್ಧ ಮಾಡು. ಏಳು ಮಲ್ಲಿಗೆ  ತೂಕದ ರಾಜಕುಮಾರಿಯನ್ನು ಕದ್ದು ತಂದು ಬಂಧನದಲ್ಲಿ ಇಟ್ಟಿರುವವನೇ ಇವನು. ’ಮದುವೆ ಮಾಡಿಕೊ’ ಎಂದು ಅವಳನ್ನು ದಿನಾ ಪೀಡಿಸುತ್ತಿರುತ್ತಾನೆ. ವಿಜಯಶಾಲಿಯಾಗಿ ಬಾ. ನಾನು ನೋಡು, ಆ ಹಣ್ಣಿನ ಮರದಲ್ಲಿ ಕುಳಿತಿರುತ್ತೇನೆ” ಎಂದು ಪುರ್ರೆಂದು ಹಾರಿ ಹೋಯಿತು.

ಘೋರಾಕಾರದ ರಾಕ್ಷಸ ತನ್ನ ಕೈಗೆ ಸಿಕ್ಕಿದ್ದಲ್ಲವನ್ನೂ ಕಿತ್ತೊಗೆಯುತ್ತಿದ್ದ. ರಾಜಕುಮಾರ ಅವನ ಮುಂದೆ ಹೋಗಿ ನಿಲ್ಲಲು ಆ ರಾಕ್ಷಸ ರಾಜಕುಮಾರಿಯನ್ನು ಮದುವೆಯಾಗಲು ಬಂದವನೆಂದು ಅತಿ ಕೋಪದಿಂದ ಭಯಂಕರವಾಗಿ ಘರ್ಜಿಸುತ್ತ, ರಾಜಕುಮಾರನ ಮೇಲೆ ಯುದ್ಧಕ್ಕೆ ಬಂದನು. ರಾಜಕುಮಾರ ಧೈರ್ಯವಾಗಿ ರಾಕ್ಷಸನ ಜೊತೆ ಹೋರಾಡಿದನು. ರಾಕ್ಷಸನಾದರೋ ಮರಗಳನ್ನೇ ಕಿತ್ತುಕೊಂಡು ರಾಜಕುಮಾರನ ಮೇಲೆ ಎಸೆದನು. ಚಾಕಚಕ್ಯತೆಯಿಂದ ತಪ್ಪಿಸಿಕೊಂಡ ರಾಜಕುಮಾರ, ಮತ್ತೆ ಪಕ್ಕದಲ್ಲಿದ್ದ ಬಂಡೆಯನ್ನು ಎತ್ತಿಕೊಂಡು ರಾಜಕುಮಾರನ ಮೇಲೆ ಹಾಕಲು ಬರಲು, ತಟ್ಟನೆ ರಾಕ್ಷಸನ ಕಾಲುಗಳನ್ನು ತನ್ನ ಖಡ್ಗದಿಂದ ಕತ್ತರಿಸಿದ. ರಾಕ್ಷಸ ಒದ್ದಾಡುತ್ತಾ ಪ್ರಾಣ ಬಿಟ್ಟನು. ತುಂಬ ಆಯಾಸದಿಂದ ಬಳಲಿದ್ದರೂ ಸಂತೋಷದಿಂದ ಭಾಗ್ಯದ ಗಿಣಿ ಕುಳಿತಿದ್ದ ಮರದ ಕಡೆ ನೋಡಲು, ಅದು ಆಗಲೇ ಇವನ ಬಳಿಗೆ ಹಾರಿ ಬಂದು ಇವನ ಮುಖವನ್ನೆಲ್ಲಾ ತನ್ನ ಕೊಕ್ಕಿನಿಂದ ಪ್ರೀತಿಯಿಂದ ಮುದ್ದಿಸಿತು.

ಗಿಣಿಯು “ರಾಜಕುಮಾರ ತುಂಬಾ ಬಳಲಿದ್ದೀ. ನೋಡು, ಈ ಕೊಳದ ನೀರಿನಲ್ಲಿ ರಾಕ್ಷಸನ ರಕ್ತದಿಂದ ಮಲಿನಗೊಂಡ ನಿನ್ನ ಶರೀರವನ್ನು ತೊಳೆದುಕೋ. ಆ ಹಾಲು ಕೊಳದಲ್ಲಿ ಹೊಟ್ಟೆ ತುಂಬ ಹಾಲು ಕುಡಿ. ಆಮೇಲೆ ಆ ಪುಟ್ಟ ಬೆಟ್ಟದ ಮೇಲಿರುವ ಅರಮನೆಗೆ ಬಾ” ಎಂದು ಅರಮನೆಯತ್ತ ಪುರ್ರೆಂದು ಹಾರಿ ಹೋಯಿತು.

ರಾಜಕುಮಾರ ನೀರಿನ ಕೊಳದಲ್ಲಿ ಸ್ನಾನ ಮಾಡಿ, ಶುಭ್ರನಾಗಿ ಹಾಲಿನ ಕೊಳದಲ್ಲಿ ಹೊಟ್ಟೆ ತುಂಬ ಹಾಲು ಕುಡಿದು ಅರಮನೆಯತ್ತ ನಡೆದನು. ಅರಮನೆಯ ಬಾಗಿಲಲ್ಲಿ ಸೇವಕಿಯರು ರಾಜಕುಮಾರನಿಗೆ ಆರತಿ ಎತ್ತಿ ಒಳಗೆ ಬರಮಾಡಿಕೊಂಡರು. ಆದರೆ ಎಲ್ಲೂ ಭಾಗ್ಯದ ಗಿಣಿಯ ಸುಳಿವೇ ಇಲ್ಲ. ಅವನು ಸುತ್ತಮುತ್ತ ತಡಕಾಡುವ ನೋಟದಿಂದ ನೋಡಿದನು. ಅರಮನೆಯ ಒಳಭಾಗದಲ್ಲಿ ಹಂಸತೂಲಿಕಾ ತಲ್ಪದ ಮೇಲೆ ಏಳು ತೂಕದ ಮಲ್ಲಿಗೆ ರಾಜಕುಮಾರಿ ಕುಳಿತಿದ್ದಳು. ರಾಜಕುಮಾರ ಅವಳ ಅಪೂರ್ವ ಸೌಂದರ್ಯರಾಶಿಯನ್ನು ನೋಡಿ ಮೂಕವಿಸ್ಮಿತನಾದನು. ಏಳು ಮಲ್ಲಿಗೆ ತೂಕದ ರಾಜಕುಮಾರಿ ನಗು ನಗುತ್ತಾ ಬಂದು ರಾಜಕುಮಾರನ ಕೈ ಹಿಡಿದಳು. ಆಗ ರಾಜಕುಮಾರ “ನನ್ನ ಭಾಗ್ಯದ ಗಿಣಿ ಎಲ್ಲಿ” ಎಂದು ಕೇಳಲು “ನಾನೇ ಆ ಭಾಗ್ಯದ ಗಿಣಿ!” ಎಂದು ಹೇಳಿದಳು. ಕೆಲವಾರು ದಿನಗಳು ಅರಮನೆಯಲ್ಲಿ ಸುಖವಾಗಿದ್ದು ರಾಜಕುಮಾರ ಏಳು ಮಲ್ಲಿಗೆ ತೂಕದ ರಾಜಕುಮಾರಿಯ ಜೊತೆ ತನ್ನ ರಾಜ್ಯಕ್ಕೆ ಬಂದನು.

ರಾಜಕುಮಾರನ ತಂದೆ ತಾಯಿ ಇವನ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದರು. ರಾಜಕುಮಾರ ಏಳು ಮಲ್ಲಿಗೆ ತೂಕದ ರಾಜಕುಮಾರಿಯನ್ನು ಮದುವೆಯಾಗಿ ಬಂದುದನ್ನು ಕಂಡು ಸಂತೋಷದಿಂದ ರಾಜಕುಮಾರನಿಗೆ ರಾಜ್ಯಭಾರವನ್ನು ನೀಡಿ ನಿಶ್ಚಿಂತರಾದರು ಅವನ ಮಾತಾಪಿತರು.

* * *