ಆಕಾಶ ಎಂಬ ಹುಡುಗ, ಇಳೆ ಎಂಬ ಹುಡುಗಿ. ಇಬ್ಬರೂ ಪರಸ್ಪರ ಹುಚ್ಚಾಪಟ್ಟೆ ಪ್ರೀತಿಸುತ್ತಿದ್ದರು. ದಿನದ ಇಪ್ಪತ್ನಾಲ್ಕು ಗಂಟೆ ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ಪಡ್ಡೆ ಹುಡುಗ ಆಕಾಶ ಅಪ್ಪ ಅಮ್ಮನ ಮಾತಿಗೆ ಸೊಪ್ಪು ಹಾಕುತ್ತಿರಲಿಲ್ಲ. ಇನ್ನು ಇಳೆ ಅಪ್ಪ ಅಮ್ಮನಿಗೆ ಅಧಿಕಾರ ಚಲಾಯಿಸುತ್ತಿದ್ದಳು. ಇವರು ತಿರುಗದ ಜಾಗವೇ ಇರಲಿಲ್ಲ. ಬೆಟ್ಟ, ಗುಡ್ಡ, ನದಿ, ತೊರೆ, ಹೊಲ, ಗದ್ದೆ ಎಲ್ಲೆಲ್ಲೂ ಇವರೇ. ಇಬ್ಬರೂ ಅಂದ ಚೆಂದದ ಹುಡುಗರು. ಇವರು ನಡೆದೆಡೆಯೇ ಸ್ವರ್ಗ. ಬೆಟ್ಟಗುಡ್ಡದ ಮರಗಿಡಗಳಲ್ಲಿ ಹಣ್ಣು ಕಿತ್ತು ತಿಂದು, ನದಿ ತೊರೆಗಳಲ್ಲಿ ತಿಳಿ ನೀರು ಕುಡಿದು ಎಲ್ಲೆಂದರಲ್ಲಿ ಸ್ವಚ್ಛಂದತೆಯಿಂದ ತಿರುಗುತ್ತಿದ್ದರು.

ಇವರ ಈ ಪ್ರೇಮವನ್ನು ಸಹಿಸದ ಗ್ರಾಮದ ಪ್ರಮುಖರು, ಇಬ್ಬರ ತಂದೆ ತಾಯಿಗೆ ಹೇಳಿ ನೋಡಿದರು, ಆದರೆ ಏನೂ ಪ್ರಯೋಜನವಾಗಲಿಲ್ಲ. ಅವರಿಬ್ಬರ ತಂದೆ ತಾಯಿಗಳು “ನೀವೇನಾದರೂ ಮಾಡಿ, ನಮ್ಮ ಮಾತೇ ಅವರು ಕೇಳುವುದಿಲ್ಲ” ಎಂದು ಬಿಟ್ಟರು.

ಗ್ರಾಮಸ್ಥರೆಲ್ಲಾ ಸೇರಿ ಬಾಧೆಪುರ ಭಯಂಕರ ಎಂಬ ಮಂತ್ರವಾದಿಯನ್ನು ಕರೆಸಿದರು. ಇರುವ ವಿಷಯ ಹೇಳಿದರು. ಅವನು ಅಂಜನಾ ಹಾಕಿ ನೋಡಿ, “ಪರಸ್ಪರ ನೋಡುವುದನ್ನು ತಪ್ಪಿಸಲಿಕ್ಕೆ ಆಗುವುದಿಲ್ಲ. ದೂರ ಬೇಕಾದರೆ ಮಾಡಬಹುದು. ಏನು ಮಾಡಬೇಕು. ” ಎಂದು ಕೇಳಿದ.

ಅದಕ್ಕೆ ನಮ್ಮ ಹಳ್ಳಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳನ್ನು ಯಾರು ಮದುವೆ ಮಾಡಿಕೊಳ್ಳುತ್ತಾರೆ? ಆದುದರಿಂದ ಅವರನ್ನು ಶಾಶ್ವತವಾಗಿ ದೂರ ಮಾಡಬೇಕು” ಎಂದರು. “ಸರಿ ಅದನ್ನು ಬೇಕಾದರೆ ಮಾಡೋಣ” ಎಂದನು ಮಂತ್ರವಾದಿ. ಗ್ರಾಮಸ್ಥರೆಲ್ಲಾ ಮಾತು ಕತೆ ಮುಗಿಸಿ ಆಕಾಶ ಮತ್ತು ಇಳೆಯನ್ನು ಪರಸ್ಪರ ದೂರ ಮಾಡಲು ಒಪ್ಪಿಕೊಂಡರು.

ಮಂತ್ರವಾದಿ ಭಯಂಕರ “ನೋಡಿ, ನಾನು ಹೇಳಿದ ಹಾಗೆ ಮಾಡಿ. ಅವರನ್ನು ಪ್ರೀತಿಯಿಂದ ಮಾತನಾಡಿಸಿ ಮದುವೆ ಮಾಡುವುದಾಗಿ ಹೇಳಿ. ಆಕಾಶನನ್ನು ಹೊಂಬಾಳೆ ತರುವುದಕ್ಕೂ, ಇಳೆಯನ್ನು ಹೂ ತರುವುದಕ್ಕೂ ಕಳುಹಿಸಿ. ಅಷ್ಟರೊಳಗೆ ನಾನು ಕಂದಕ ಏರ್ಪಡಿಸುತ್ತೇನೆ. ಆಗ ಅವರಿಬ್ಬರು ಶಾಶ್ವತವಾಗಿ ದೂರವಾಗುತ್ತಾರೆ” ಎಂದನು.

ಗ್ರಾಮಸ್ಥರು ಮಂತ್ರವಾದಿ ಭಯಂಕರ ಹೇಳಿಕೊಟ್ಟಂತೆ ಅವರನ್ನು ಕರೆದು ಪ್ರೀತಿಯಿಮದ ಮಾತನಾಡಿಸಿ ಅವರಿಗೆ ಮದುವೆ ಮಾಡುವುದಾಗಿ ಹೇಳಿ, ಅವರಿಗೆ ಎಣ್ಣೆ ತಿಕ್ಕಿ ನೀರು ಹಾಕಿ ಹೊಸ ಬಟ್ಟೆ ಉಡಿಸಿದರು. ಅವರ ಮಾತಿಗೆ ಮರುಳಾದ ಆಕಾಶ ಹೊಂಬಾಳೆ ತರಲು ತೆಂಗಿನ ಮರವೇರಿದನು. ಇಳೆ ಹೂ ತರಲು ತೋಟಕ್ಕೆ ಹೋದಳು. ಎಂದೂ ಇಬ್ಬರನ್ನೊಬ್ಬರು ಬಿಟ್ಟಿರದಿದ್ದ ಆಕಾಶ – ಇಳೆ ಬೇಗ ಸೇರುವುದಾಗಿ ಹೇಳಿ ಹೊರಟಿದ್ದರು. ಇದನ್ನೇ ಕಾಯುತ್ತಿದ್ದ ಮಂತ್ರವಾದಿ ಭಯಂಕರ ತನ್ನ  ಗಾಜಿನ ಗೋಲದಲ್ಲಿದ್ದ ಗಾಳಿಯನ್ನು ಹೊರಗೆ ಬಿಟ್ಟು ಬಿಟ್ಟನು. ಪ್ರಚಂಡ ಗಾಳಿ ಬೀಸತೊಡಗಿತು. ತೆಂಗಿನ ಮರ ಏರಿದ್ದ ಆಕಾಶ ಮೇಲೆ ಮೇಲೇರಿ ಆಕಾಶವಾದನು. ಹೂ ಕೀಳಲು ತೋಟದೊಳಗೆ ಹೋದ ಇಳೆ, ಪ್ರಚಂಡ ಗಾಳಿಗೆ ಹೆದರಿ ಮುದುರಿ ಮಣ್ಣಿನ ಪಾತಿಯೊಳಗೆ ಹೂತು ಇಳೆಯಲ್ಲಿ ಇಳೆಯಾದಳು.

ಗ್ರಾಮಸ್ಥರಿಗೆ ಬಹಳ ಸಂತೋಷವಾಯಿತು. ಮಂತ್ರವಾದಿ ಭಯಂಕರನಿಗೆ ಧನಕನಕ ಕೊಟ್ಟು ಗೌರವಿಸಿದರು. ಪಾಪ ಇದರಿಂದ ದೂರದ ಆಕಾಶ – ಇಳೆ ದೂರದಿಂದಲೇ ಒಬ್ಬರನ್ನೊಬ್ಬರು ನೋಡಿಕೊಂಡು ವಿರಹವನ್ನು ಅನುಭವಿಸುತ್ತಿದ್ದರು.

ಸೂರ್ಯ ಚಂದ್ರರ ಕಣ್ಣುಗಳಾಗಿ ಪಡೆದ ಆಕಾಶ, ಸೂರ್ಯ ಚಂದ್ರರ ಕಿರಣಗಳಿಂದ ಇಳೆಯನ್ನು ಸ್ಪರ್ಶಿಸುತ್ತಾ ಇರಲು, ಆದರೆ ಒಂದಾಗುವ ಮಾರ್ಗ ಕಾಣದೆ ಇಬ್ಬರು ಪರಿತಪಿಸುತ್ತಿದ್ದರು. ಇಳೆ ತನ್ನ ಮೇಲಿನ ಗಿಡಮರ ಬೆಟ್ಟಗಳಾಗಿ ಕೈ ಚಾಚಿದರೂ ಸಿಗಲೊಲ್ಲ, ಏನು ಮಾಡುವುದು? ನಿತ್ಯ ಇಬ್ಬರಿಗೂ ಒಂದೇ ಒಂದಾಗುವ ಯೋಚನೆ, ಆಕಾಶನಿಗೊಂದು ಯೋಚನೆ ಹೊಳೆಯಿತು. ಮೋಡವಾಗಿ ಯಾಕೆ ಹೋಗಬಾರದು? ಆದರೆ ಅದಕ್ಕೂ ಗಾಳಿ ಬೀಸಬೇಕು. ಗಾಳಿಯನ್ನು ” ಗಾಳಿ, ಗಾಳಿ, ನಾವಿಬ್ಬರು ಮಂತ್ರವಾದಿಯಿಂದ ದೂರವಾಗಿದ್ದೇವೆ. ನೀನು ಜೋರಾಗಿ ಬೀಸಿದರೆ ಮೋಡವಾಗಿ ಅವಳನ್ನು ಸೇರುತ್ತೇನೆ. ನನಗೆ ಉಪಕಾರ ಮಾಡಿ ಪುಣ್ಯಕಟ್ಟಿಕೋ” ಎಂದು ಕೇಳಿದ ಆಕಾಶ.

ಅದಕ್ಕೆ ಗಾಳಿ ” ಮಂತ್ರವಾದಿ ಭಯಂಕರ ತಾನೆ? ನಾನು ಅವನಿಂದ ಅಂತರ ಪಿಶಾಚಿಯಾಗಿದ್ದೇನೆ. ಮೋಡವಾಗಿ ನೀನು ಹೋದರೆ ಗ್ರಾಮಸ್ಥರು ನಿನ್ನನ್ನು ಸುಮ್ಮನೆ ಬಿಡುವರೆ? ಮತ್ತೆ ಮಂತ್ರವಾದಿಯನ್ನು ಕರೆಸಿ ಇನ್ನೇನಾದರೂ ಮಾಡಿಸುತ್ತಾರೆ. ಆಮೇಲೆ ಮಂತ್ರವಾದಿ ನನ್ನನ್ನು ಸುಮ್ಮನೆ ಬಿಡುವನೆ? ಬೇಡಪ್ಪ” ಎಂದಿತು ಗಾಳಿ.

ಆಕಾಶನಿಗೆ ಮತ್ತೊಂದು ಯೋಚನೆ ಹೊಳೆಯಿತು. “ಸರಿ ಗಾಳಿ ನಾನು ಮೋಡವಾಗಿ ಹೋದರೆ ತಾನೆ ಗ್ರಾಮಸ್ಥರಿಗೆ ಗೊತ್ತಾಗುವುದು? ನಾನು ಮಳೆಯಾಗಿ ನನ್ನ ಬಾಹುಗಳನ್ನು ಇಳೆಯತ್ತ ಚಾಚುತ್ತೇನೆ. ಸರಿ ತಾನೇ? ಆಗ ಯಾರಿಗೂ ಗೊತ್ತಾಗುವುದಿಲ್ಲ” ಎಂದನು.

“ಸರಿ, ನಾನು ಜೋರಾಗಿ ಬೀಸುತ್ತೇನೆ. ಮಂತ್ರವಾದಿ ಕೇಳಿದರೆ ಬೀಸುವುದೇ ನನ್ನ ಕೆಲಸವಲ್ಲವೆ ಎಂದು ಹೇಳುತ್ತೇನೆ” ಎಂದು ಗಾಳಿ ಧೈರ್ಯವಾಗಿ ಹೇಳಿತು. ಆಕಾಶ ಕಡು ನೀಲಿ ಉಡಿಗೆ ತೊಟ್ಟು ಸಿದ್ಧನಾಗಲು, ಗಾಳಿ ಜೋರಾಗಿ ಬೀಸಿತು. ಎಲ್ಲಿಯೋ ಇದ್ದ ಮಂತ್ರವಾದಿ ಭಯಂಕರನಿಗೆ ಗೊತ್ತಾಗಿ ಗುಡುಗು ಮಿಂಚಾಗಿ ಬಾಣಗಳನ್ನು ಬಿಟ್ಟನು. ಹಠವಾದಿಯಾದ ಆಕಾಶ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಮೋಡ ಚದುರಿ ಮಳೆ ಇಳೆಯತ್ತ ತನ್ನ ಬಾಹುಗಳನ್ನು ಚಾಚಿತು. ಆದರೂ ತುಂಟ ಆಕಾಶ ಯಾರಿಗೂ ಕಾಣದಂತೆ ಆನೆಕಲ್ಲಾಗಿ ಇಳೆಯತ್ತ ಆಗಾಗ ಧಾವಿಸುತ್ತಿದ್ದನು.

* * *