ಒಂದೂರಿನಲ್ಲಿ ಅಜ್ಜಿ ಮತ್ತು ಮೊಮ್ಮಗಳಿದ್ದರು. ಮೊಮ್ಮಗಳು ಶಾರದ ರಜ ಕಳೆಯಲು ಅಜ್ಜಿಯ ಮನೆಗೆ ಬಂದಿದ್ದಳು. ಅಪ್ಪನ ಮನೆಯಲ್ಲಿ ಕುರುಕಲು ತಿಂದು ಅಭ್ಯಾಸವಿದ್ದ ಮೊಮ್ಮಗಳಿಗೆ, ಅಜ್ಜಿ ಕೊಡುತ್ತಿದ್ದ ಕುರುಕಲು ಸಾಕಾಗುತ್ತಿರಲಿಲ್ಲ. ದಿನ ಚಕ್ಕುಲಿ, ಉಂಡೆ, ನಿಪ್ಪಟ್ಟು ಮಾಡುವ ಶಾಮಣ್ಣ ಅಜ್ಜಿಯ ಜಗುಲಿಯ ಮೇಲೆ ಮಾರಾಟಕ್ಕೆ ಕೂರುತ್ತಿದ್ದ. ಮೊಮ್ಮಗಳಿಗೆ ಶಾಮಣ್ಣನ ಚಕ್ಕುಲಿ ಉಂಡೆ ತಿನ್ನಲು ಅತಿಯಾದ ಆಸೆ. ಆದರೆ ಅವಳ ಹತ್ತಿರ ಹಣವಿಲ್ಲ. ಏನು ಮಾಡುವುದು? ಅಜ್ಜಿ ಮನೆಗೆಲಸವೆಲ್ಲ ಮುಗಿಸಿ ಬಟ್ಟೆ ತೆಗೆದುಕೊಂಡು ಹೊಳೆಯ ಹತ್ತಿರ ಹೋದ ಮೇಲೆ ಮೊಮ್ಮಗಳು ಶಾಮಣ್ಣನನ್ನು ಕೇಳಿದಳು. ಅದಕ್ಕೆ ಬಹು ಚತುರನಾದ ಶಾಮಣ್ಣ “ಅದಕ್ಯಾಕವ್ವ ಬೇಸರ, ವಾಡೆಲಿ ರಾಗಿ ಇದ್ದರೆ ಕೊಡು, ಚಕ್ಕುಲಿ ಕೊಡುತ್ತೀನಿ” ಎಂದನು. ಅಜ್ಜಿಯು ಸಹ ಸೊಪ್ಪಿನವಳಿಗೆ ರಾಗಿ ಕೊಟ್ಟು ಸೊಪ್ಪು ತೆಗೆದುಕೊಂಡುದು ನೋಡಿದ್ದ ಮೊಮ್ಮಗಳಿಗೆ ಇದರಲ್ಲಿ ತಪ್ಪೇನು ಕಾಣಲಿಲ್ಲ. ಮೊರ ತೆಗೆದುಕೊಂಡು ಕಿರುಕೋಣೆಗೆ ಹೋಗಿ ವಾಡೆಯ ಬೆಣೆ ತೆಗೆದು ಮೊರಕ್ಕೆ ರಾಗಿ ತುಂಬಿಕೊಂಡು ಕಷ್ಟಪಟ್ಟು ಬೆಣೆ ಹಾಕಿದಳು. ಶಾಮಣ್ನ ಕೊಟ್ಟಿ ಉಂಡೆ ಚಕ್ಕುಲಿ ತಿಂದು ಆಟವಾಡುತ್ತ ಆನಂದದಿಂದ ಇರುತ್ತಿದ್ದಳು.

ಅಜ್ಜಿಗೆ ಅನುಮಾನ ಶುರುವಾಯಿತು. ವಾಡೆಯಲ್ಲಿ ರಾಗಿ ಇದ್ದಕ್ಕಿದ್ದ ಹಾಗೆ ಕಮ್ಮಿಯಾಗುತ್ತಿದೆ. ಕಿರುಕೋಣೆಗೆ ಬಂದರೆ ರಾಗಿ ಚೆಲ್ಲಿರುತ್ತದೆ. ಇದು ಯಾರ ಕೆಲಸವೋ ಕಂಡು ಹಿಡಿಯಬೇಕೆಂದು ಸುಮ್ಮನಾದಳು. ಮಾರನೆ ದಿನ ಮನೆ ಕೆಲಸ ಮುಗಿಸಿ ಬಟ್ಟೆ ಗೂಡೆ ಹಿಡಿದು ’ಹೊಳೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಹಿತ್ತಲ ಬಾಗಿಲಿನಿಂದ ವಾಡೆಯ ಹಿಂದೆ ಅವಿತುಕೊಂಡಳು. “ಚಕ್ಕುಲಿ, ಉಂಡೆ ಎರಡು ಹೆಚ್ಚಾಗೆ ಇದೆ. ಬೇಗ ರಾಗಿ ತಗೊಂಬಾ, ನಿಮ್ಮಜ್ಜಿ ಏನಾದರೂ ಬಂದುಗಿಂದಾಳು” ಎಂದು ಅಂಗಡಿಯವನು ಎನ್ನಲು, ಕಿರುಕೋಣೆಯ ವಾಡೆಯಿಂದ “ಇರು ಪಂಚಾಯತಿ ಸೇರಿಸಿ, ಅರಿಯದ ಹುಡುಗಿಗೆ ಕಳ್ಳತನ ಕಲಿಸುತ್ತಿದ್ದಾನೆ ಎಂದು ಹೇಳುತ್ತೇನೆ” ಎನ್ನಲು, ಶಾಮಣ್ಣ ಅಜ್ಜಿ ಕಾಲಿಗೆ ಬಿದ್ದು “ನನ್ನ ಹೊಟ್ಟೆ ಮೇಲೆ ಹೊಡಿಬೇಡಿ, ಮಕ್ಕಳೊಂದಿಗ, ಇನ್ನು ಮೇಲೆ ಇಂಥ ಕೆಲಸ ಮಾಡಲ್ಲ” ಎಂದು ಪ್ರಮಾಣ ಮಾಡಿ ಹೇಳಲು, “ಸರಿ ಹಾಗಾದರೆ, ನನ್ನ ಮೊಮ್ಮಗಳ ಕೈಯಲ್ಲಿ ಹಣ ಕೊಟ್ಟಿರುತ್ತೇನೆ. ದಿನಕ್ಕಿಂತ ಹೆಚ್ಚಾಗಿ ಅವಳಿಗೆ ಚಕ್ಕುಲಿ ಉಂಡೆ ಕೊಡು. ಇನ್ನು ಮೇಲಿಂದ ಯಾರ ಹತ್ತಿರಾನೂ ಇಂಥ ಕೆಲಸ ಮಾಡಿದ್ದು ತಿಳಿದರೆ ನಿನಗೆ ಪಂಚಾಯಿತಿಯೇ ಗತಿ, ಹುಷಾರ್!” ಎಂದು ಅಜ್ಜಿ ಎಚ್ಚರಿಸಿದಳು.

ಕಕ್ಕಾಬಿಕ್ಕಿಯಾಗಿ ನಿಂತಿದ್ದ ಮೊಮ್ಮಗಳಿಗೆ ಅಜ್ಜಿ ಬುದ್ಧಿ ಹೇಳಿ, “ಇನ್ನು ಮೇಲೆ ಹಣಕೊಟ್ಟು ಚಕ್ಕುಲಿ ಉಂಡೆ ತೆಗೆದುಕೊ” ಎಂದು ಹೇಳಿದಳು.