ನಮ್ಮೂರ ವೀರಮ್ಮ, ಅಪ್ಪ ಹಾಲಪ್ಪ ಹಾಡಿದರೆ ದೇವರೆ ಕುಂತು ಕೇಳಬೇಕು. ಅಷ್ಟು ಬಯಭಕ್ತಿಭಾವದಲ್ಲಿ ಹಾಡುತ್ತಾರೆ. ಯಾವ ಹಬ್ಬ ಹರಿದಿನವಾದರೂ, ಮದುವೆ ಮುಂಜಿಯಾದರೂ ಮೊದಲು ವೀರಮ್ಮ, ಅಪ್ಪ ಹಾಲಪ್ಪ ಹಾಡಿರಬೇಕು. ಎಂಟು ದಿನಗಳ ಮದುವೆ ಇದ್ದರೂ ಒಂದು ಸಲ ಹಾಡಿದ ಪದ ಮತ್ತೊಂದು ಸಲ ಹಾಡುತ್ತಿರಲಿಲ್ಲ.

ಇವರು ಪ್ರತಿ ವರ್ಷ ಕಾಲ್ನಡಿಗೆಯಲ್ಲಿ ಕಾಡುಮೇಡು ದಾಟಿ ಗುಂಬಳಾಪುರಕ್ಕೆ ಗೌರಿ ಹಬ್ಬಕ್ಕೆ ಹೋಗುತ್ತಿದ್ದರು. ಅಲ್ಲಿ ಗೌರಮ್ಮನ ಮುಂದೆ ಗೌರೀಪದ ಹೇಳುತ್ತಿದ್ದರು. ಕೈಲಾಸದಲ್ಲಿ ಗೌರಮ್ಮನಾದೋ  ಯಾವಾಗ ಗೌರೀಹಬ್ಬ ಬರುವುದೋ, ಇವರ ಪದ ಕೇಳುವೇನೋ ಎಂಬ ಕಾತುರ. ಆದರೆ ಏನು ಮಾಡುವುದು? ಗೌರಮ್ಮನ ಬಿಟ್ಟಿರಲಾರದ ಶಿವ ಹಿಂದೆಯೂ ಗಣಪನನ್ನು ಕಳುಹಿಸಿಬಿಡುತ್ತಿದ್ದ. ತೌರಿನಲ್ಲಿ ನೆಮ್ಮದಿಯಾಗಿ ಇರಲಿಕ್ಕೆ ಬಿಡದೆ ಕರೆಸಿಕೊಂಡುಬಿಡುತ್ತಿದ್ದ.

ಹೀಗೆ ಪ್ರತಿ ವರ್ಷದಂತೆ ಗುಂಬಳಾಪುರಕ್ಕೆ ವೀರಮ್ಮ ಅಪ್ಪ ಹಾಲಪ್ಪ ಬಂದರು. ಕೈಲಾಸದಿಂದ ಮಣಿ ಮೇಲೆ ಬಂದ ಗೌರಮ್ಮನ ಐಭೋಗ ನೋಡಿ ವೀರಮ್ಮ ಅಪ್ಪ ಹಾಲಪ್ಪ ಪದ ಹಾಡಲಿಕ್ಕೆ ಪ್ರಾರಂಭಿಉಸಿದರು. ಲಗುಬಗೆಯಿಂದ ತೌವರಿಗೆ ಬಂದ ಗೌರಿಗೆ ಇವರನ್ನು ನೋಡಿ ಬಹಳ ಸಂತೋಷವಾಯಿತು.

ವಯಸ್ಸಾದ ಮುತ್ತೈದೆಯ ಹಾಗೆ ಬಂದ ಗೌರಮ್ಮ ಇವರಿಬ್ಬರ ಪಕ್ಕ ಬಂದು ಕುಳಿತಳು. “ಅಲ್ಲ, ಹೀಗೆ ಒಂದೇ ಸಲ ಪದ ಹೇಳುತ್ತೀರಲ್ಲ, ಬ್ಯಾಸರ ಆಗಕಿಲ್ಲವ?” ಎಂದಳು. ಅದಕ್ಕೆ ವೀರಮ್ಮ “ತಪ್ಪಾಯಿತು ಅನ್ನ ತಾಯಿ. ದೇವರ ನೆನೆದರೆ,  ಗೌರಮ್ಮ “ನೀವು ಯಾವಾಗ್ಯಾವಾಗ ಪದ ಹಾಡುತ್ತೀರಾ?” ಎಂದು ಕೇಳಿದಳು.

“ಹೇ ಸುಮ್ನಿರು ತಾಯಿ, ನಾವೇನು ಹೀಗೆ ಮನಸ್ಸಿಗೆ ಕಷ್ಟ-ಸುಖ ಆದಾಗ ಹಾಡಿಕೊಂತಾನೇ ಇರುತ್ತೀವಿ. ಕೆಲಸ ಬೊಗಸೆ ಮಾಡುವಾಗ, ಹೊಲದ ಕೆಲಸ ಮಾಡುವಾಗ” ಎನ್ನಲು, “ಹಾಗಾದರೆ ನಿನ್ನ ಪದ ಕೇಳಬೇಕೆಂದರೆ ನಾನು ಯಾವಾಗ ಬರಲಿ?” ಎಂದು ಕೇಳಿದಳು.

“ಅಯ್ಯೋ ಅದಕ್ಕೇನಂತೆ ಯಾವಾಗ ಬೇಕಾದರೂ ಬಾ, ನಾ ಹಾಡುತ್ತಿರುತ್ತೀನಿ. ನೀ ಕೇಳುವಂತೆ,”

“ಸರಿಯವ್ವ, ಹಾಗಾದರೆ ಎಲೆ ಅಡಿಕೆ ಕೊಡಬೇಕಾ?” ಎನ್ನಲು, ಗೌರಮ್ಮ ” ಕೊಡು ತಾಯಿ ಕೊಡು. ಒಳ್ಳೆ ಗೌರಮ್ಮ ತಾಯಿ ಇದ್ದ ಹಾಗೆ ಇದ್ದೀಯಾ, ಕೈಮುಗಿದೆ” ಎಂದಳು ವೀರಮ್ಮ.

ಗುಂಬಳಾಪುರದಿಂದ ಬಂದ ವೀರಮ್ಮನಿಗೆ ಮನೆ ಕೆಲಸ, ಹೊಲದ ಕೆಲಸ, ಅವಳ ಪಾಡು ಅವಳ ಹಾಡು. ಹೀಗಿರಲು ಒಂದು ದಿನ ಮಧ್ಯಾಹ್ನ ಮನೆಯ ಕದ ಸದ್ದಾಯಿತು. ಯಾರೆಂದು ನೋಡಲು, ಗುಂಬಳಾಪುರದಲ್ಲಿ ಸಿಕ್ಕ ಮುತ್ತೈದೆ, ವೀರಮ್ಮ “ಓ ನನ್ನ ಪದ ಕೇಳಲು ಬಂದೆಯ ತಾಯಿ, ಬಾ” ಎಂದು ಚಾಪೆ ಹಾಕಿ ಬೆಲ್ಲ ನೀರು ಕೊಟ್ಟಳು. “ಅಲ್ಲ ತಾಯಿ, ಚಂದದ ಪದವೆಂದು ಅಲ್ಲಿಂದ ಇಲ್ಲಿಯತನಕ ಬಂದೆ” ಎಂದು ನಾಚಿಕೊಂಡಳು. “ಅದು ಸರಿ, ನಾನು ಆದಿನ ತಾಯಿ ನಿನ್ನ ಹೆಸರು ಕೇಳಲೇ ಇಲ್ಲ” ಎನ್ನಲು, ಗೌರಮ್ಮ “ನನ್ನ ಹೆಸರು ಗೌರಮ್ಮ ಅಂತ. ಇಲ್ಲೆ ಪಕ್ಕ ಇದೆಯಲ್ಲ. ಹರಕಾಯುವ ಪುರ ಅದೇ ನಮ್ಮೂರು.”

“ಹರ ಕಾಯುವ ಪುರ ನಾನು ಕೇಳೇ ಇಲ್ಲವಲ್ಲ? ಇಲ್ಲೇ ಎಲ್ಲೋ ಇರಬೇಕು. ನಾನು ಮನೇಲಿರತೀನಿ. ನಂಗೇನು ಗೊತ್ತಾಯ್ತದೆ ಹೇಳು ತಾಯಿ” ಎಂದಳು.

“ಬಾ ವೀರಮ್ಮ. ಇಬ್ಬರು ಕುಳಿತುಕೊಂಡು ಎಲೆ ಅಡಿಕೆ ಹಾಕಿಕೊಳ್ಳುವ. ಚಿಗುರು ವಿಳ್ಳೇದೆಲೆ, ಸಣ್ಣಚೂರಿನ ಅಡಿಕೆ ಎಲ್ಲ ತಂದಿದ್ದೇನೆ” ಎನ್ನಲು, “ನನಗೆ ಇನ್ನೇನಿದೆ ಎಲೆ ಅಡಿಕೆ ಹಾಕಿಕೊಂಡು ಕೆಲಸ ಮಾಡುತ್ತಾ ಹಾಡುತ್ತೇನೆ. ನೀನು ಮಾಹಾರಾಯ್ತಿಯಂಗೆ ಕುಂತು ಕೇಳು” ಎಂದು ಎಲೆ ಅಡಿಕೆಗೆ ಕೈಚಾಚಿದಳು. ” ಎಲೆ ಅಡಿಕೆ ಎಷ್ಟು ಬೇಕಾದರೂ ತಗೋ, ಬೇಡ ಅನ್ನಲ್ಲ ವೀರಮ್ಮ. ಆದರೆ ಸುಣ್ಣ ಮಾತ್ರ ಎಷ್ಟಬೇಕೋ ಅಷ್ಟು ಮಾತ್ರ ತಗೋ” ಎಂದಳು. ಏನು ಅರಿಯದ ವೀರಮ್ಮ “ಯಾಕೆ ಸುಣ್ಣ ಬೆಣ್ಣೆಯಂಗೆ ಘಂ ಅಂತ ಐತೇ ಅಂತಲಾ?” ಎನ್ನಲು, ಗೌರಮ್ಮ ಹುಂಗುಟ್ಟುತ್ತಾ ಮನಸ್ಸಿನಲ್ಲಿ ’ನೀ ಈ ಸುಣ್ಣ ನಾನಿಲ್ಲದಾಗ ಬಳಸಿದರೆ ನಾನಿರುವಲ್ಲಿಗೆ ಬಂದು ಬಿಡುತ್ತೀಯಾ’ ಎಂದುಕೊಂಡಳು. ವೀರಮ್ಮ ಕೆಲಸ ಮಾಡುತ್ತಾ ಪದ ಹಾಡಲು ಸುರು ಮಾಡಿದಳು. ಹೀಗೆ ದಿನಾ ನಡೆಯುತ್ತಿರಲು ಒಂದು ದಿನ ಗೌರಮ್ಮನಿಗೆ ಕುಂಕುಮ ಕೊಟ್ಟು ತಲೆಬಾಗಿಲ ತನಕ ಬಿಟ್ಟು ಹಿಂತಿರುಗಿ ಬರಲು ಸುಣ್ಣದ ಪುಟ್ಟ ಕರಂಡಿಕೆ ಕಂಡಿತು. ತಕ್ಷಣ ಕರಂಡಿಕೆ ಎತ್ತಿಕೊಂಡು ಬಾಗಿಲ ಹೊರಗೆ ನೋಡಲು ಗೌರಮ್ಮ ಕಾಣಲಿಲ್ಲ. ’ಇಷ್ಟು ಬೇಗ ಎಲ್ಲಿ ಹೋದಳು. ನಾಳೆ ಕೊಟ್ಟರಾಯಿತು’ ಎಂದು ಗೂಡಿನಲ್ಲಿಟ್ಟಳು. ಇಡುವಾಗ ಕರಂಡಿಕೆಯ ಅಂದ ಚೆಂದ ನೋಡಿ ಬೆರಗಾದಳು.

ಕೆಲಸ ಬೇಗನೆ ಮುಗಿಸಿ ಸಾಯಂಕಾಲವಾಗಲು, ಹೊಲಕ್ಕೆ ಹೋಗಿದ್ದ ಹಾಲಪ್ಪ ದನ ಹೊಡೆದುಕೊಂಡು ಬಂದನು. ಅಪ್ಪ ಮಗಳು ಇಬ್ಬರು ಉಂಡು ಎಲೆ ಅಡಿಕೆ ಹಾಕಿಕೊಳ್ಳುವಾಗ ಅಪ್ಪ ” ತಡಿ, ಘಂ ಅನ್ನೋ ಬೆಣ್ಣೆಯಂತೆ ಸುಣ್ಣ ಐತೆ, ಕೊಟ್ಟೇನು. ಅದೇ ದಿನಾ ಮದ್ಯಾಹ್ನ ಪದ ಕೇಳಕ್ಕೆ ಗೌರಮ್ಮ ಅಂತಾ ಬತ್ತಾಳಲ್ಲ ಅವಳದು. ಪಾಪ, ಈವತ್ತು ಮರೆತು ಹೋಗಿ ಬಿಟ್ಟಳು. ನಾನು ತಲೆಬಾಗಿಲ ತನಕ ಹೋಗಿ ದಾರಿಗಂಟ ನೋಡಿದೆ, ಕಾಣಲಿಲ್ಲ. ತಗೋ” ಎಂದು ಸುಣ್ಣದ ಡಬ್ಬಿಯನ್ನು ಕೊಟ್ಟು, ಕುಳಿತುಕೊಂಡು ಇಬ್ಬರು ಎಲೆ ಅಡಿಕೆ ಹಾಕಿಕೊಳ್ಳಲು ಮುಂದಾದರು.

ತಾಂಬೂಲ ಹಾಕಿಕೊಳ್ಳುವಾಗಲೂ ಇವರಿಗೆ ’ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರ ಕೇಳಿಸುತ್ತಿತ್ತು. ತಾಂಬೂಲ ಅಗಿದಂತೆಲ್ಲ ಅವರು ಬಹು ಸಂತೋಷದಿಂದ ಕೈಲಾಸದತ್ತ ಪಯಣಿಸುತ್ತಿದ್ದರು. ಘಂಟಾನಾದ, ಜಾಗಟೆಗಳ ಶಬ್ದ ಗಣಗಣಗಳಿಂದ ಕೂಡಿದ ಒಂದು ಅದ್ಭುತ ಸಭೆಗೆ ಬಂದರು. ಅಲ್ಲಿ ಶಿವನ ಪಕ್ಕದಲ್ಲಿ ಗೌರಮ್ಮ ಕುಳಿತಿದ್ದಳು. ಗೌರಮ್ಮನಿಗೆ ತನ್ನ ತಪ್ಪಿನ ಅರಿವಾಯಿತು. ಇದನ್ನೆಲ್ಲ ಬಲ್ಲ ಶಿವ ಹುಸಿನಗುತ್ತಿದ್ದನು. ” ಬನ್ನಿ ಬನ್ನಿ. ನೀವು ಒಂದುದು ಒಳ್ಳೆಯದಾಯಿತು. ಇನ್ನು ಮೇಲೆ ದಿನಾ ಗೌರಿ ಭೂಲೋಕ ಯಾತ್ರೆ ಮಾಡಬೇಕಾಗಿಲ್ಲ” ಎಂದು ಹೇಳಿ ವೀರಮ್ಮ ಅಪ್ಪ ಹಾಲಪ್ಪನಿಗೆ ಬಿಟ್ಟು ಪದವಿಯನ್ನಿತ್ತು ದಿನಾ ಕೈಲಾಸದಲ್ಲಿ ಪದ ಹೇಳುವ ಹಾಗೆ ಏರ್ಪಾಟು ಮಾಡಿದರು.