ಜಯಪುರವೆಂಬ ರಾಜ್ಯದಲ್ಲಿ ಜಯಸಿಂಹನೆಂಬ ರಾಜ ಆಳುತ್ತಿದ್ದನು. ಅವನಿಗೆ ಚಂಚಲೆಯೆಂಬ ಸಾಧ್ವಿ ರಾಣಿಯಾಗಿದ್ದಳು. ಇವರಿಗೆ ಎಷ್ಟು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ರಾಜ ಮತ್ತು ರಾಣಿ ಭೀಮಾ ಎಂಬ ಕುದುರೆಯನ್ನು ಚಿಕ್ಕ ವಯಸ್ಸಿನಿಂದಲೂ ಅತಿ ಮುದ್ದಿನಿಂದ ಸಾಕುತ್ತಿದ್ದರು. ಮಕ್ಕಳಿಲ್ಲವೆಂಬ ಕೊರಗು ದೂರವಾಗುವಷ್ಟರ ಮಟ್ಟಿಗೆ ಅದನ್ನು ಪ್ರೀತಿಸುತ್ತಿದ್ದರು. ಅದು ಹೆಸರಿಗೆ ತಕ್ಕಂತೆ ಭೀಮನಂತೆ ಸದೃಢವಾಗಿತ್ತು. ಕೆಲವಾರು ಯುದ್ಧಗಳಲ್ಲಿ ಜಯಸಿಂಹನ ಪ್ರಾಣವನ್ನು ಅದು ರಕ್ಷಿಸಿದ್ದಿತು.

ಕಮಲಾಪುರದ ಯುದ್ಧದಲ್ಲಿ ಜಯಸಿಂಹನು ಶತ್ರು ರಾಜರಿಂದ ತೀವ್ರವಾಗಿ ಗಾಯಗೊಂಡು ಮೂರ್ಛಿತನಾಗಲು ಭೀಮನು ತನ್ನ ಚಾಕಚಕ್ಯತೆಯಿಂದ ಯುದ್ಧಭೂಮಿಯಿಂದ ಹೊರಬಂದು ತನ್ನ ರಾಜನನ್ನು ಕರೆಯ ದಂಡೆಯಲ್ಲಿ ತಂದು ನಿಲ್ಲಿಸಿದಾಗ, ಅಲ್ಲಿದ್ದ ಮಡಿವಾಳರು ರಾಜರ ಗಾಯಕ್ಕೆ ಮುಲಾಮನ್ನು ಹಾಕಿ ನೀರನ್ನು ಕುಡಿಸಿ ಶೈತ್ಯೋಪಚಾರ ಮಾಡಿದ್ದರು. ಹೀಗೆ ಅನೇಕ ರೀತಿಯಲ್ಲಿ ಭೀಮಾ ಜಯಸಿಂಹನಿಗೆ ಸಹಾಯವನ್ನು ಮಾಡಿದ್ದ. ಏನೇ ಹೇಳಿದರೂ ಅರ್ಥಮಾಡಿಕೊಳ್ಳುವ ಜಾಣ್ಮೆ ಭೀಮನಿಗಿದೆ. ರಾಣಿ ಭೀಮನಿಗೆ ಬೇಕಾದ ಹುಲ್ಲನ್ನು ತಾನೇ ನಿಂತು ಹುಲ್ಲುಗಾವಲಿನಲ್ಲಿ ಬೆಳೆಸುತ್ತಿದ್ದಳು. ಅದಕ್ಕೆ ಸ್ನಾನ ಮಾಡಿಸಲು ತಾನೇ ಮುಂದಾಗುತ್ತಿದ್ದಳು. ಅದಕ್ಕೆ ಹಣ್ಣುಗಳನ್ನು ತಟ್ಟೆಯಲ್ಲಿಟ್ಟು ತಿನ್ನಿಸುತ್ತಿದ್ದಳು. ಅದಕ್ಕೆ ಚಿನಿವಾರನಿಗೆ ಹೇಳಿ ಚಿನ್ನದ ಸರಪಣಿಯ ಲಗಾಮನ್ನೂ, ಬೆಳ್ಳಿಯ ಕವಚವನ್ನೂ ಮಾಡಿಸಿ ಹಾಕಿದ್ದಳು. ಒಟ್ಟಿನಲ್ಲಿ ಭೀಮಾ ಜಯಪುರದ ಅರಮನೆಯಲ್ಲಿ ರಾಜಕುಮಾರನಂತೆ ಬೆಳೆಯುತ್ತಿತ್ತು.

ಯಾರ ದೃಷ್ಟಿ ತಾಗಿತೋ ದಿನದಿಂದ ದಿನಕ್ಕೆ ಭೀಮಾ ಬಡಕಲಾಗುತ್ತ ಬಂದಿತು. ರಾಜ – ರಾಣಿಗೆ ಚಿಂತೆ ಆವರಿಸಿತು. ದೇಶ – ವಿದೇಶಗಳಿಂದ ವೈದ್ಯರುಗಳನ್ನು ಕರೆಸಿದರು. ಅವರುಗಳು ಮಾಡದ ಔಷಧಿಯೇ ಇಲ್ಲ, ಕುಡಿಸದ ಕಷಾಯವಿಲ್ಲ. ಆದರೂ ಭೀಮಾ ಬಡಕಲಾಗುತ್ತಾ ಬಂದಿತು. ಜಯಸಿಂಹ – ಚಂಚಲೆಗೆ ಊಟ ಸೇರದಾಯಿತು. ದಿನವೆಲ್ಲ ಭೀಮನ ಬಳಿಯೇ ಕುಳಿತು ಅದರ ಆರೈಕೆಯಲ್ಲಿ ತೊಡಗಿದರು. ಯಾರಿಗೂ ಕಂಡು ಹಿಡಿಯಲಾರದ ಕಾಯಿಲೆಗೆ ಭೀಮಾ ಗುರಿಯಾಗಿದ್ದ.

ಸದಾ ಅರಮನೆಯ ಮೈದಾನದಲ್ಲಿ ಠೀವಿಯಿಂದ ಕೆನೆಯುತ್ತ ಓಡಾಡುತ್ತಿದ್ದ ಭೀಮಾ, ಒಂದು ಹೆಜ್ಜೆಯನ್ನೂ ಎತ್ತಿಕ್ಕಲಾರದಷ್ಟು ನಿಶ್ಯಕ್ತನಾದ. ಚಂಚಲೆ ಊಟ-ನೀರು ಬಿಟ್ಟು ಅದರ ಆರೈಕೆಗೆ ನಿಂತಳು. ಭೀಮಾ ತನ್ನ ದುಃಸ್ಥಿತಿ, ಚಂಚಲೆಯ ಆರೈಕೆ ನೋಡಿ ಕಣ್ಣೀರು ಸುರಿಸಿದರೆ, ಮಗನಿಗಿಂತ ಹೆಚ್ಚಾಗಿ ಸಾಕಿದ ಭೀಮನ ಸ್ಥಿತಿ ನೋಡಿ ಚಂಚಲೆ ಕಣ್ಣೀರು ಸುರಿಸುತ್ತಿದ್ದಳು. ಇವರಿಬ್ಬರ ಪರಿ ನೋಡಿ ಜಯಸಿಂಹನಿಗೆ ದಿಕ್ಕೇ ತೋಚದಾಯಿತು.

 ಭೀಮನ ತಲೆಯ ಬಳಿ ಕುಳಿತಿದ್ದ ಚಂಚಲೆಗೆ ಜೋಂಪು ಹತ್ತಿತು. ಸ್ವಪ್ನದಲ್ಲಿ ಭೀಮ ’ಅಮ್ಮ, ನಿನ್ನನ್ನು ಬಿಟ್ಟು ಹೋಗಲಾರೆ. ಆದರೆ ಏನು ಮಾಡಲಿ, ಸಾವು ನನ್ನನ್ನು ಕರೆಯುತ್ತಿದೆ’ ಎನ್ನಲು ಚಂಚಲೆ, ’ಬೇಡ ಭೀಮಾ, ನಿನ್ನನ್ನು ಬಿಟ್ಟು ನಾತಾನೇ ಹೇಗೆ ಬದುಕಲಿ?’ ಎನ್ನುತ್ತಿದ್ದಳು. ಅದಕ್ಕೆ ಭೀಮಾ ’ಮುಂದಿನ ಜನ್ಮದಲ್ಲಿ ನಾನು ನಿನ್ನ ಹೊಟ್ಟೆಯಲ್ಲಿ ಮಗನಾಗಿ ಹುಟ್ಟುತ್ತೇನೆ’ ಎನ್ನಲು ಚಂಚಲೆಗೆ ಎಚ್ಚರವಾಯಿತು.

ಭೀಮನು ತಲೆಯನ್ನು ಎರಡು ಮೂರು ಬಾರಿ ಒದರಿದನು. ಬಾಯಿಮದ ಜೊಲ್ಲು ಸುರಿಯುತ್ತಿತ್ತು. ಕಣ್ಣೀರು ಬತ್ತಿಹೋಯಿತು. ಸತ್ತ ಭೀಮನನ್ನು ನೋಡಿ ಚಂಚಲೆ ಎದೆ ಎದೆ ಬಡಿದುಕೊಂಡು ಅತ್ತಳು. ಜಯಸಿಂಹ ದುಃಖಪೂರಿತನಾಗಿ ಅರಮನೆಯ ಆವರಣದಲ್ಲಿಯೇ ಭೀಮನನ್ನು ಸಮಾಧಿ ಮಾಡಿದನು. ಅಲ್ಲಿ ಭೀಮನ ಒಂದು ಮೂರ್ತಿಯನ್ನು ಕೆತ್ತಿಸಿದನು.

ಚಂಚಲೆ ಯಾವಾಗಲೂ ಭಿಮನ ಸಮಾಧಿಯ ಹತ್ತಿರ ಸರಿಯಾಗಿ ಊಟ ತಿಂಡಿ ಸ್ನಾನ ಮಾಡದೆ ಕುಳಿತಿರುತ್ತಿದ್ದಳು. ಚಂಚಲೆಗೆ ತಲೆ ತಿರುಗುವಿಕೆ, ವಾಂತಿ ಪ್ರಾರಂಭವಾಯಿತು. ಚಂಚಲೆಯ ದೇಹಸ್ಥಿತಿ ಜಯಸಿಂಹನಿಗೆ ಗಾಬರಿ ತರಿಸಿತು. ವೈದ್ಯರನ್ನು ಕರೆದುಕೊಂಡು ಬಂದು ತೋರಿಸಲು ಚಂಚಲೆ ಗರ್ಭಧರಿಸಿರುವುದಾಗಿ ತಿಳಿಯಿತು.

ಭೀಮ ಸತ್ತ ಒಂಭತ್ತು ತಿಂಗಳಿಗೆ ಚಂಚಲೆ ಒಂದು ಕುದುರೆಗೆ ಜನ್ಮ ನೀಡಿದಳು. ಜಯಸಿಂಹ ಚಂಚಲೆ ಕುದುರೆ ಹಡೆದುದನ್ನು ನೋಡಿ ಬೇಸರಪಟ್ಟನು. ಒಂದು ರಾಜ್ಯದ ರಾಣಿ ಕುದುರೆ ಹಡೆದಳೆಂದರೆ ಅವಮಾನವೆಂದು, ರಾಜ್ಯದ ಪ್ರಜೆಗಳ ಮುಂದೆ ಅವಮಾನಕ್ಕೆ ತುತ್ತಾಗಬೇಕಾಗುತ್ತದೆ ಎಂದು ಅವಳನ್ನು ಕಾಡಿಗೆ ಅಟ್ಟಿದನು.

ರಾಣಿ ಚಂಚಲೆಗೆ ಭೀಮನೇ ಹುಟ್ಟಿದನೆಂಬ ಸಂತೋಷ. ಆದರೆ ರಾಜಾಜ್ಞೆಯಂತೆ ತನ್ನ ಕುದುರೆಯ ಜೊತೆ ಕಾಡಿಗೆ ಹೊರಟಳು. ಕಾಡಿನಲ್ಲಿ ಅಲೆದಾಡುತ್ತ ಗೆಡ್ಡೆಗೆಣಸು, ಸಿಕ್ಕಿದ ಹಣ್ಣು ಹಂಪಲನ್ನು ತಿನ್ನುತ್ತಾ, ಕೊನೆಗೆ ಕಾಡಿನಲ್ಲೆ ಒಂದು ಗುಡಿಸಲನ್ನು ಕಟ್ಟಿಕೊಂಡು ವಾಸಿಸಲು ಮೊದಲು ಮಾಡಿದಳು. ಹೀಗೆ ವರ್ಷಗಳು ಉರುಳಲು, ಕುದುರೆ ವಯಸ್ಸಿಗೆ ಬಂದು ಗರ್ಭಧರಿಸಿತು. ಚಂಚಲೆಗೆ ತಾನು ಹೆತ್ತ ಕುದುರೆಯ ಮೇಲೆ ಅಗಾಧವಾದ ಪ್ರೀತಿ. ತುಂಬು ಗರ್ಭಿಣಿಯಾದ ಕುದುರೆಯ ಲಾಲನೆ, ಪೋಷಣೆಯನ್ನು ಚೆನ್ನಾಗಿಯೇ ಮಾಡುತ್ತಿದ್ದಳು.

ಹೀಗೆ ಒಂದು ದಿನ ಚಂಚಲೆ ಕುದುರೆಯ ತಲೆಯ ಹತ್ತಿರ ನಿದ್ರೆ ಮಾಡುತ್ತಿರಲು, ಮತ್ತೊಂದು ಸ್ವಪ್ನ ಬಿದ್ದಿತು. ’ಅಮ್ಮ, ನನ್ನನ್ನು ಅಪ್ಪನ ಹತ್ತಿರ ಕರೆದುಕೊಂಡು ಹೋಗು’ ಎಂದಂತೆ. ಮೊದಲನೇ ಸ್ವಪ್ನ ನಿಜವಾದುದು ಅನ್ನುತ್ತಿದ್ದ ಚಂಚಲೆ ಸಂತೋಷದಿಂದಲೇ ಜಯಪುರದತ್ತ ತನ್ನ ಮಗಳು ಕುದುರೆಯ ಜೊತೆ ಪ್ರಯಾಣ ಬೆಳೆಸಿದಳು.

ಇತ್ತ ಜಯಸಿಂಹ ಜನರ ಅವಮಾನಕರವಾದ ಮಾತುಗಳಿಗೆ ಹೆದರಿ ರಾಣಿಯನ್ನೇನೋ ರಾಜ್ಯ ಬಿಟ್ಟು ಕಳುಹಿಸಿ ಬಿಟ್ಟಿದ್ದ. ಆದರೆ ರಾಣಿಯ ಮೇಲೂ ಮತ್ತು ಕುದುರೆಯ ಮೇಲೂ ಅವನಿಗಿದ್ದ ಪ್ರೀತಿಯೇನು ಕಡಿಮೆಯಾಗಿರಲಿಲ್ಲ. ರಾಜ್ಯಭಾರವನ್ನೆಲ್ಲ ಮಂತ್ರಿಯ ಮೇಲೆ ಹಾಕಿ ಸದಾ ಹೆಂಡತಿ, ಮಗಳ ಚಿಂತೆಯಲ್ಲೇ ಕಾಲ ಕಳೆಯತೊಡಗಿದ.

ರಾಜ್ಯದ ಹೊರಗೆ ಯಾರೋ ಅಲೆಮಾರಿ ಹೆಂಗಸು ಎಷ್ಟು ಹೇಳಿದರೂ ಕೇಳದೆ ಕುದುರೆಯ ಸಮೇತ ಬಂದು ರಾಜನ ದರ್ಶನಕ್ಕೆ ಕಾಯುತ್ತಿರುವುದಾಗಿ ಸೈನಿಕನೊಬ್ಬ ರಾಜನಿಗೆ ತಿಳಿಸಿದ. ಜಯಸಿಂಹ ಕುದುರೆಯ ಸಮೇತ ಬಂದಿರುವವಳು ತನ್ನ ಹೆಂಡತಿ ಎಂದು ಅತಿ ಸಂತೋಷದಿಂದ ಎದುರುಗೊಂಡ. ಚಂಚಲೆ ಚಿಂದಿಯುಟ್ಟು ಕಳಾಹೀನಳಾಗಿ ನಿಂತ ಅವಳನ್ನು ನೋಡಿ ರಾಜನಿಗೆ ದುಃಖ ಒತ್ತರಿಸಿ ಬಂತು. ಚಂಚಲೆ ರಾಜನನ್ನು ಅತಿ ಸಂತೋದಿಂದ ನೋಡುತ್ತಿರಲು, ಚಂಚಲೆಯ ಬಳಿ ಇದ್ದ ಕುದುರೆ ಮಗಳು ತಂದೆಯ ಬಳಿ ಬಂದು ಪಾದಕ್ಕೆ ನಮಸ್ಕರಿಸುತ್ತಲೇ ಕುಸಿಯಿತು. ಅಲ್ಲೇ ಅದು ಒಂದು ಗಂಡು ಮಗುವಿಗೆ ಜನ್ಮ ನೀಡಿ ಕೊನೆಯುಸಿರೆಳೆಯಿತು.

ಈ ಆಘಾತದಿಂದ ಕುಸಿದ ಚಂಚಲೆಗೆ ಅಲ್ಲಿ ಸೇರಿದ ಪುರದ ಜನರೇ ಸಂತೈಸಿ, ಮಗುವಿನ ಸಮೇತ ಅರಮನೆಗೆ ಕರೆದುಕೊಂಡು ಹೋದರು. ರಾಜ ಜಯಸಿಂಹ ಭೀಮನ ಪಕ್ಕದಲ್ಲೇ ತನ್ನ ಮಗಳು ಕುದುರೆಗೂ ಸಮಾಧಿ ಕಟ್ಟಿಸಿ ದಿನಾ ಅದಕ್ಕೆ ಪೂಜೆ ಸಲ್ಲಿಸುತ್ತಾ ಬಹುಕಾಲ ರಾಜ್ಯಭಾರ ಮಾಡುತ್ತ ಸುಖದಿಂದಿದ್ದರು.