ಒಂದು ಊರಿನಲ್ಲಿ ರಾಮೋಜಿ ಎಂಬ ಕುಂಬಾರನಿದ್ದನು. ಗಂಡ-ಹೆಂಡತಿ ತಮ್ಮ ಕುಲ ಕಸುಬಾದ ಕುಂಬಾರಿಕೆಯಿಂದ ಜೀವನ ನಡೆಸುತ್ತಿದ್ದರು. ಪ್ರತಿ ದಿನ ಸೂರ್ಯ ಹುಟ್ಟುವ ಮುಂಚೆಯೇ ಹೆಂಡತಿ ಕೊಟ್ಟ ರೊಟ್ಟಿ ಕಟ್ಟಿಕೊಂಡು ಮಡಿಕೆ ಮಾಡಲಿಕ್ಕೆ ಮಣ್ಣು ತರಲು ಹೋಗುತ್ತಿದ್ದನು. ಗಾಡಿಯಿಂದ ಮಣ್ಣು ತಂದು ಹಾಕಿ, ಮಣ್ಣನ್ನು ಹದ ಮಾಡುತ್ತಿರಬೇಕಾದರೆ ಒಂದು ದಿನ ರಾಮೋಜಿಗೆ ಮಣ್ಣಿನಲ್ಲಿ ನಿಂಬೆಹಣ್ಣಿನ ಗಾತ್ರದ ಒಂದು ಹರಳು ದೊರಕಿತು. ಪಕ್ಕದಲ್ಲೇ ಮಡಕೆಯಲ್ಲಿದ್ದ ನೀರಿನಲ್ಲಿ ಅದನ್ನು ತೊಳೆದು ನೋಡಲು ಅದು ಸೂರ್ಯನ ಬೆಳಕಿಗೆ ಸಪ್ತವರ್ಣದಿಂದ ಹೊಳೆಯುತ್ತಿತ್ತು. ರಾಮೋಜಿ ಊಟ ಮಾಡಿಕೊಂಡು ಮಧ್ಯಾಹ್ನದ ಮೇಲೆ ಚಿನ್ನದ ಕೆಲಸ ಮಾಡುವ ಅಕ್ಕಸಾಲಿಗ ಚೆಲುವನಿಗೆ ಆ ಹರಳನ್ನು ತೋರಿಸಲು ಅವನ ಬಳಿ ಹೋದನು. ರಾಮೋಜಿ ತನಗೆ ಸಿಕ್ಕಿದ ಹರಳನ್ನು ಚಿನ್ನದ ಕೆಲಸ ಮಾಡುವ ಚೆಲುವಯ್ಯನಿಗೆ ತೋರಿಸಿದನು. ಚೆಲುವಯ್ಯ ರಾಮೋಜಿಗೆ ಮೋಸ ಮಾಡಲು ಅದು ಕೇವಲ ಗಾಜಿನ ಚೂರೆಂದು ಹೇಳಿ ಕಳುಹಿಸಿದನು. ತಟವಟ ಅರಿಯದ ರಾಮೋಜಿ ಚೆಲುವಯ್ಯನ ಮಾತು ಸತ್ಯವೆಂದು ನಂಬಿ ’ಬಂದ ದಾರಿಗೆ ಸುಂಕವಿಲ್ಲ’ ಎಂದು ಹಾಗೇ ಮನೆಗೆ ಹಿಂತಿರುಗಿದನು.

ಹೀಗಿರಲು ಮತ್ತೊಂದು ದಿನ ಮಣ್ಣನ್ನು ಹದ ಮಾಡಬೇಕಾದರೆ, ಅದೇ ರೀತಿಯ ಇನ್ನೊಂದು ಹರಳು ದೊರಕಿತು. ಇದನ್ನು ರಾಮೋಜಿಯ ಹೆಂಡತಿ ನೋಡಿದಳು. ರಾಮೀಜಿಯ ಹೆಂಡತಿ ಲಕ್ಷ್ಮೀ ಬಹಳ ಚತುರೆ. ಲಕ್ಷ್ಮೀ ಆ ಹರಳನ್ನು ಸಂತೋಷದಿಂದ ತಂದು ನೀರಿನಲ್ಲಿ ತೊಳೆದು ಚಿನ್ನದ ಕೆಲಸದ ಚೆಲುವಯ್ಯನಿಗೆ ತೋರಿಸಿ, ಹಣ ಬಂದರೆ ತೆಗೆದುಕೊಂಡು ಬರುವಂತೆ ಗಂಡನಿಗೆ ಹೇಳಿದಳು. ರಾಮೋಜಿ ಮೊದಲೇ ತನಗೆ ಇಂಥ ಹರಳು ದೊರಕಿದುದು, ಅದನ್ನು ವಜ್ರದ ಹರಳಿರಬಹುದೆಂದು ತಾನೂ ಅನುಮಾನಿಸಿ ಚೆಲುವಯ್ಯನ ಬಳಿ ತೋರಿಸಿದುದು, ಅವನು ಅದನ್ನು ಗಾಜಿನ ಚೂರೆಂದು ಹೇಳಿದ ವೃತ್ತಾಂತವನ್ನು ಹೇಳಿ ಅದು ಗಾಜಿನ ಅಸಡ್ಡೆಯಿಂದ ಹೇಳಿದನು. ಆದರೆ ಲಕ್ಷ್ಮೀಗೆ ಸಂಶಯ ಪರಿಹಾರವಾಗಲಿಲ್ಲ. ಅವಳು ರಾಮೋಜಿಗೆ ಹೇಳಿದಳು: “ನಾಳೆ ಹೇಗಿದ್ದರೂ ನಾನು ಪಕ್ಕದ ಊರಿಗೆ ಹೋಗಬೇಕು. ಅಲ್ಲಿನ ಮಾಲಿಂಗಾಚಾರಿಗೆ ತೋರಿಸಿ ಬರುತ್ತೇನೆ” ಎಂದು ಹೇಳಿ, ಮಾರನೇ ದಿನ ಗಂಡನಿಗೆ ಅಡಿಗೆ ಮಾಡಿಟ್ಟು, ಮಧ್ಯಾಹ್ನ ತಾನೇ ಹಾಕಿಕೊಂಡು ಉಣ್ಣಲು ಹೇಳಿ, ಪಕ್ಕದ ಗ್ರಾಮಕ್ಕೆ ಹೊರಟಳು. ಇದರಿಂದ ರಾಮೋಜಿಗೆ ಯಾವ ರೀತಿಯ ಉತ್ಸಾಹವಾಗಲಿ, ಕುತೂಹಲವಾಗಲಿ ಇರಲಿಲ್ಲ. ಚೆಲುವಯ್ಯ ನಂಬಿಗಸ್ಥ, ತನ್ನ ಹೆಂಡತಿಗೆ ಓಲೆ ಸಹ ಮಾಡಿಕೊಟ್ಟಿದ್ದಾನೆ. ಅಂಥವನು ಸುಳ್ಳು ಹೇಳುತ್ತಾನೆಯೇ ಎಂಬ ದೃಢವಾದ ನಂಬಿಕೆ.

ಲಕ್ಷ್ಮಿ ನೇರವಾಗಿ ಪಕ್ಕದ ಗ್ರಾಮಕ್ಕೆ ಬಂದು ಮಾಲಿಂಗಾಚಾರಿ ಹತ್ತಿರ ಹೋಗಿ, ತನಗೆ ಸಿಕ್ಕಿದ ಹರಳನ್ನು ತೋರಿಸಿದಳು. ಮಾಲಿಂಗಾಚಾರಿ ವೃದ್ಧ, ಅನುಭವಸ್ಥ, ಸತ್ಯಧರ್ಮ ಬಲ್ಲವನು. ಇನ್ನೊಬ್ಬರ ವಸ್ತುವೆಂದರೆ ಪಾಷಾಣದಂತೆ ಕಂಡವನು. ಬಡತನವಿದ್ದರೂ ನೆಮ್ಮದಿಯ ಜೀವನ ನಡೆಸುತ್ತಿದ್ದವನು. ಮಾಲಿಂಗಾಚಾರಿ ಹರಳನ್ನು ಪರೀಕ್ಷಿಸಿ, “ಇದು ಬಹುಬೆಲೆ ಬಾಳುವ ವಜ್ರ. ಇದನ್ನು ತೆಗೆದುಕೊಳ್ಳುವ ಶಕ್ತಿ ಮಹಾರಾಜರಿಗಲ್ಲದೆ ಬೇರೆ ಯಾರಿಗೂ ಇಲ್ಲ. ಸುಮ್ಮನೆ ನಿನ್ನ ಗಂಡನನ್ನು ಕರೆದುಕೊಂಡು ರಾಜಧಾನಿಗೆ ಹೋಗಿ ಮಹರಾಜರಿಗೆ ಇದನ್ನು ಒಪ್ಪಿಸಿ, ನಿಮ್ಮನ್ನು ಆದರದಿಂದ ಕಂಡು ಬಹುಮಾನವನ್ನು ಕೊಡುತ್ತಾರೆ, ಬೇರೆ ಯಾರಿಗೂ ತೋರಿಸಬೇಡಿ, ನಿಮಗೆ ಅಪಾಯ ಸಂಭವಿಸಬಹುದು” ಎಂದು ಬುದ್ಧಿ ಮಾತು ಹೇಳಿದನು.

ಲಕ್ಷ್ಮಿ ಮನೆಗೆ ಬಂದು ಗಂಡನಿಗೆ ನಡೆದ ವಿಷಯವನ್ನೆಲ್ಲಾ ಹೇಳಿದಳು. ರಾಮೋಜಿಗೆ ತನ್ನ ಗೆಳೆಯ ಚೆಲುವಯ್ಯನು ಮಾಡಿದ ಮೋಸವೆಲ್ಲಾ ಅರಿವಾಯಿತು. ರಾಮೋಜಿ ಹೆಂಡತಿಗೆ, “ಲಕ್ಷ್ಮೀ, ಈಗ ನಾವು ಹೋಗಿ ಚೆಲುವಯ್ಯನನ್ನು ಕೇಳಿದರೆ ಮೊದಲೇ ಮೋಸಮಾಡಿದ ಅವನು ಹರಳನ್ನು ಇಲ್ಲ ಎನ್ನಬಹುದು. ಅದಕ್ಕೆ ಮಹಾರಾಜರಿಗೆ ಈ ಹರಳನ್ನು ಒಪ್ಪಿಸಿ, ನಡೆದುದನ್ನೆಲ್ಲಾ ಅವರಲ್ಲಿ ಅರಿಕೆ ಮಾಡಿಕೊಳ್ಳೋಣ. ಮಿಕ್ಕದ್ದು ಮಹಾರಾಜರಿಗೆ ಬಿಟ್ಟಿದ್ದು. ಏನಂತೀಯಾ?” ಎಂದು ಕೇಳಿದನು. ಹೆಂಡತಿ ಲಕ್ಷ್ಮಿ ಅವನ ಮಾತಿಗೆ ಒಪ್ಪಿಗೆ ಸೂಚಿಸಿದಳು.

ರಾಮೋಜಿ ಮತ್ತು ಲಕ್ಷ್ಮಿ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ರೊಟ್ಟಿ ಕಟ್ಟಿಕೊಂಡು ಮಹಾರಾಜರನ್ನು ಕಾಣಲು ರಾಜಧಾನಿಗೆ ಪ್ರಯಾಣ ಮಾಡಿದರು. ಕಷ್ಟಪಟ್ಟು ಹೇಗೋ ಮಹಾರಾಜನ ದರ್ಶನ ಪಡೆಯುವುದರಲ್ಲಿ ಯಶಸ್ವಿಯಾದರು. ಮಹಾರಾಜರಿಗೆ ಹರಳನ್ನು ಒಪ್ಪಿಸಿ, ನಡೆದ ಸಮಾಚಾರವನ್ನೆಲ್ಲ ಹೇಳಿದರು. ತಾವೇ ಹರಳನ್ನು ಇಟ್ಟುಕೊಳ್ಳದೆ, ಯಾವ ರತ್ನಪಡಿ ವ್ಯಾಪಾರಿಗೂ ಮಾರದೆ, ಭಯಭಕ್ತಿಯಿಂದ ತಂದು ಕೊಟ್ಟಿರುವುದನ್ನು ನೋಡಿ ಮಹಾರಾಜನಿಗೆ ಬಹಳ ಸಂತೋಷವಾಯಿತು. ಆದರೆ ಇಂಥ ಮುಗ್ಧರನ್ನು ಮೋಸ ಮಾಡಿದ ಚೆಲುವಯ್ಯನ ಮೇಲೆ ಕೋಪ ಸಹ ಬಂದಿತು. ರಾಮೋಜಿ ದಂಪತಿಗಳನ್ನು ಅಭಿನಂದಿಸಿದ ರಾಜನಿಗೆ ಚೆಲುವಯ್ಯನಿಗೆ ಬುದ್ದಿ ಕಲಿಸುವುದು ಹೇಗೆಂದು ಆಪ್ತ ಸಚಿವರಲ್ಲಿ ಅಮಾಲೋಚಿಸಿದನು. ಸಮಾಲೋಚನೆಯ ಫಲವಾಗಿ ರಾಮೋಜಿ ದಂಪತಿಗಳಿಗೆ ಅಂದು ಅಲ್ಲೇ ಉಳಿದುಕೊಳ್ಳಲು ಹೇಳಿ, ಎಲ್ಲ ವ್ಯವಸ್ಥೆಯನ್ನು ಮಾಡಿಸಿದನು.

ಮಾರನೇ ದಿನ ಮಹಾರಾಜ ಉಪಹಾರ ನಂತರ ರಾಮೋಜಿ ದಂಪತಿಗಳಿಗೆ ಒಂದು ಉಪಾಯವನ್ನು ಹೇಳಿದನು. “ನೀವು ಹೇಗೆ ಬಂದಿರೋ ಹಾಗೇ ನಿಮ್ಮ ಗ್ರಾಮಕ್ಕೆ ಹೋಗಿ, ಚೆಲುವಯ್ಯನ ಬಳಿ ಹೋಗಿ, ಈಗ ಸಿಕ್ಕಿರುವ ಈ ಹರಳನ್ನು ತೋರಿಸಿ. ಇಷ್ಟು ಬೇಗ ಇಂಥ ಹರಳನ್ನು ಅವನು ಬೇರೆಯವರಿಗೆ ಮಾರುವುದಕ್ಕೆ ಸಾಧ್ಯವಿಲ್ಲ. ಹರಳಿನ ವಿಷಯವನ್ನು ಲೋಕಾಭಿರಾಮವಾಗಿ ಮಾತಾಡುತ್ತಾ ಇರಿ. ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ.”

“ಹಾಗೆ ಆಗಲಿ ಮಹಾಪ್ರಭು!” ಎಂದು ರಾಮೋಜಿ ದಂಪತಿಗಳು ಮಹಾರಾಜನಿಗೆ ಹೇಳಿ ರಾಜನಿಂದ ಬೀಳ್ಕೊಂಡು ತಮ್ಮ ಊರಿಗೆ ಮರಳಿದರು.

ರಾಮೋಜಿ ದಂಪತಿಗಳು ತುಸು ಹೊತ್ತು ಪ್ರಯಾಣದ ದಣಿವಾರಿಸಿ ಕೊಂಡು ಮತ್ತೆ ಮಹಾರಾಜನು ಹೇಳಿದ ಹಾಗೆ ಚಲುಯ್ಯನ ಅಂಗಡಿಯನ್ನು ಕುರಿತು ಹೊರಟರು.

ಇತ್ತ ಆ ವೇಳೆಗಾಗಲೇ ಚೆಲುವಯ್ಯನು ಆ ಬೆಲೆಬಾಳುವ ವಜ್ರದ ಹರಳನ್ನು ರಾಜಧಾನಿಗೆ ತೆಗೆದುಕೊಂಡು ಹೋಗಿ ಮಾರಲು ಸಮಯ ಕಾಯುತ್ತಿದ್ದನು. ಅಷ್ಟರಲ್ಲೇ ತನ್ನ ಅಂಗಡಿಯತ್ತ ರಾಮೋಜಿ ಮತ್ತು ಅವನ ಹೆಂಡತಿ ಬರುತ್ತಿರುವುದನ್ನು ನೋಡಿ ಅವನಿಗೆ ಬಹಳ ಸಂತೋಷವಾಯಿತು. ಆದರೆ ಇವರು ಯಾವುದೋ ಊರಿಗೆ ಹೋಗಿದ್ದ ವಿಷಯ ಚೆಲುವಯ್ಯನಿಗೆ ತಿಳಿದಿತ್ತು. ತನ್ನ ಮುಖದಲ್ಲಿ ಸಂತೋಷವನ್ನು ಆದಷ್ಟು ಮರೆಮಾಡಿ, ಏನೋ ಕೆಲಸದಲ್ಲಿ ಮಗ್ನನಾಗಿರುವಂತೆ ನಟಿಸಿದನು. ಅಂಗಡಿ ಬಳಿಗೆ ಬಂದ ಮೇಲೆ, “ಓ ರಾಮೋಜಿ. ಮೊನ್ನೆ ಎಲ್ಲೋ ಯಾವುದೋ ಊರಿಗೆ ಹೊರಟಂಗೆ ಇತ್ತು?” ಎನ್ನಲು ರಾಮೋಜಿ ಲಕ್ಷ್ಮಿಗೆ, ಎಲ್ಲಿಯಾದರೂ ನಾವು ಮಹಾರಾಜರನ್ನು ಕಂಡ ವಿಷಯ ಇವನಿಗೆ ಗೊತ್ತಾಯಿತೇನೋ ಎಂದು ಒಂದು ಗಳಿಗೆ ಇಬ್ಬರೂ ಗಾಬರಿಗೊಂಡರು. ಆದರೂ ಗುಟ್ಟು ಬಿಡದೆ ಸಾವರಿಸಿಕೊಂಡು “ಮೊನ್ನೆ ಇವಳಪ್ಪನ ಮನೆಗೆ ಹೋಗಿದ್ದೆ. ನಮ್ಮತ್ತೆಗೆ ಹುಷಾರಿರಲಿಲ್ಲ. ಈಗ ಪರ್ವಾಗಿಲ್ಲ. ನೀನು ಹೆಂಗಿದ್ದೀಯಾ? ಯಾಪಾರ ಹೆಂಗೈತೇ?” ಎನ್ನಲು, “ಏನು ಯಾಪಾರವೋ ಎನೋ? ಅದು ಸರಿ, ಈವತ್ತು ಮತ್ತೆ ಯಾವುದಾದರೂ ಗಾಜಿನ ಚೂರು ತಂದಿಲ್ಲ ತಾನೆ?” ಎಂದು ಹೇಳುತ್ತ, ರಾಮೋಜಿಯ ಕಡೆ ಕಳ್ಳ ನೋಟ ಬೀರಿದನು. ನೀ ಹಂಗಣೆ ಮಾಡಬ್ಯಾಡಪ್ಪ, ಏನೋ ಮಣ್ಣು ತೆಗೆಯಲಿಕ್ಕೆ ಹೋದಾಗ ಸಿಕ್ತು, ತಂದು ತೋರಿಸಿದೆ. ಅದು ತೆಪ್ಪಾ?” ಎಂದನು.

“ನಾ ಯಾಕೆ ನಗಸಾರ ಮಾಡ್ಲಿ, ಸಿಕ್ಕಿದರೆ ಕೊಡು, ನನಗೂ ಕೆಲಸ ಇಲ್ಲ, ಕಲ್ಲನ್ನಾದರೂ ಕುಟ್ಟುತ್ತೀನಿ” ಎಂದನು. ಅದಕ್ಕೆ ರಾಮೋಜಿ “ನೆನ್ನೆ ಅದೇ ತರದ್ದು ಇನ್ನೊಂದು ಸಿಕ್ತು. ನನ್ನ ಹೆಂಡತಿಗೆ ಅದು ಗಾಜಿನ ಚೂರೆಂದು ಹೇಳಿದರೆ ಸಂಶಯ, ಕೇಳಲೇ ಇಲ್ಲ. ನನ್ನ ಮೇಲೆ ಸಂಶಯ ಅವಳಿಗೆ. ಅದಕ್ಕೆ ಅವಳನ್ನೇ ನಿನ್ನಲ್ಲಿಗೆ ಕರೆದುಕೊಂಡು ಬಂದೆ. ನೀನೇ ಹೇಳಪ್ಪ” ಎಂದನು.

“ಹೌದು ಲಕ್ಷ್ಮವ್ವ, ನಿನ್ನ ಗಂಡ ಹೇಳಿದ್ದು ಸತ್ಯನೇ, ಎಲಾ ಇನ್ನೊಂದು ಹರಳು ತೋರಿಸು” ಎಂದನು ಚೆಲುವಯ್ಯ. ಲಕ್ಷ್ಮಿ ತನ್ನ ಬಾಳೆಕಾಯಿ ಗಂಟಲ್ಲಿದ್ದ ನಿಂಬೆ ಹಣ್ಣಿನ ಗಾತ್ರದ ಹರಳನ್ನು ತೆಗೆದು ತೋರಿಸಿ, “ಅಲ್ಲ ಚೆಲುವಯ್ಯ, ಮೊದಲಿನ ತರದ್ದೇ ಅಂತ ಹೇಗೆ ಹೇಳುತ್ತೀಯಾ? ನೋಡು, ಹೇಗೆ ಹೊಳೆಯುತ್ತಿದೆ!?” ಎಂದು ಹರಳನ್ನು ಚೆಲುವಯ್ಯ ಹರಳನ್ನು ಕೈಗೆ ತೆಗೆದುಕೊಂಡು “ಅಲ್ಲ ಕಣ್ಣವ್ವ, ಎಲ್ಲರೂ ನನ್ನ ಅಂಗಡಿಗೆ ಚಿನ್ನ ಕೊಟ್ಟು ಒಡವೆ ಮಾಡಿಸಿದರೆ, ನೀವೊಬ್ಬರೇ ಗಾಜಿನ ಚೂರು ತಂದು ತೋರಿಸುತ್ತಿರುವುದು” ಎಂದು ನಗೆಯಾಡಿದನು.

ಅವನಿಗೆ ಈಗ ಒಳಗೇ ಸಂತೋಷ ತುಂಬಿ ಇದನ್ನು ಹೇಗಾದರೂ ಲಪಟಾಯಿಸಿಬಿಡಬೇಕೆಂಬ ಉತ್ಕಟೇಚ್ಛೆ ಮನದಲ್ಲಿ ಪ್ರಬಲವಾಯಿತು.

ಅಷ್ಟರಲ್ಲಿ ಅಲ್ಲೇ ಮಾರುವೇಷದಲ್ಲಿ ಅಡಗಿದ್ದ ಮಹಾರಾಜರ ಕಡೆಯವರು ಚೆಲುವಯ್ಯನನ್ನು ಬಂಧಿಸಿ ರಾಜಧಾನಿಗೆ ಎಳೆದುಕೊಂಡು ಹೋದರು. ಮಹಾರಾಜ ಚೆಲುವಯ್ಯನಿಂದ ಹರಳುಗಳನ್ನು ವಶಪಡಿಸಿಕೊಂಡು, ಮುಗ್ಧ ದಂಪತಿಗಳಿಗೆ ಮೋಸ ಮಾಡಿದ್ದಕ್ಕೆ ಶಿಕ್ಷೆಯನ್ನು ವಿಧಿಸಿ, ರಾಮೋಜಿ ದಂಪತಿಗಳನ್ನು ಅರಮನೆಗೆ ಕರೆಸಿ, ಸತ್ಕರಿಸಿ, ಮುಂದಿನ ಜೀವನವನ್ನು ಸುಖಸಂತೋಷದಿಂದ ಕಳೆಯಲು ಅನುಕೂಲಗಳನ್ನು ಮಾಡಿಕೊಟ್ಟನು.