ಒಬ್ಬ ಮುದುಕಿ ಒಂದು ದಿನ ತನ್ನ ಮನೆ ಮುಂದೆ ಕುಳಿತಿದ್ದಳು. ಅವಳ ಕಾಲಿನ ಬೆರಳು ತಣ್ಣಗಾಗದಂತೆ ಅವಳಿಗೆ ಅನ್ನಿಸಿತು. ತಕ್ಷಣ ಕಾಲನ್ನು ಎಳೆದುಕೊಂಡು ಏನೆಂದು ನೋಡಲು, ಎಲ್ಲಿಂದಲೋ ಒಂದು ನಾಗರಹಾವು ಅವಳತ್ತಲೇ ನೋಡುತ್ತಿತ್ತು. ಅವಳು ಭಯಭಕ್ತಿಯಿಂದ ಒಂದು ಬಟ್ಟಲಲ್ಲಿ ಹಾಲನ್ನು ತಂದು ನೀಡಿ ಕೈ ಮುಗಿದು, “ನಾಗರಾಜ, ಹಾಲನ್ನು ಕುಡಿದು ಯಾರಿಗೂ ಏನು ಮಾಡದೇ ಹೊರಟು ಹೋಗು” ಎಂದಳು. ಅದಕ್ಕೆ ನಾಗರಾಜ “ಪ್ರತಿ ದಿನಾ ನನಗೆ ಹಾಲು ಇಡುವುದಾದರೆ ಯಾರಿಗೂ ಏನು ಮಾಡುವುದಿಲ್ಲ” ಎಂದು ಹೇಳಿತು.

ಹೀಗೆ ವರ್ಷಾನುಗಟ್ಟಲೆ ಮುದುಕಿ ಭಕ್ತಿಯಿಂದ ನಾಗರಾಜನಿಗೆ ಹಾಲನ್ನು ನೀಡುತ್ತಿದ್ದಳು. ನಾಗರಾಜನಿಗೂ ಪ್ರತಿದಿನ ಮುದುಕಿ ಕೊಡುವ ಹಾಲನ್ನು ಕುಡಿಯುವುದು ರೂಢಿಯಾಗಿ ಹೋಯಿತು. ವಯಸ್ಸಾದಂತೆ ಮುದುಕಿ  ನಿತ್ರಾಣಳಾದಳು. ಬರುವ ಆದಾಯ ಕಡಿಮೆಯಾಗಿ ಮಗ ಬೇರೆ ಕಡೆ ಮನೆ ಮಾಡಿ ಹೊರಟುಹೋದನು. ಮುದುಕಿಗೆ ನಾಗರಾಜನಿಗೆ ಹಾಲನ್ನು ತರುವಷ್ಟು ಹಣ ಇಲ್ಲದಂತಾಯಿತು. ಮುಂದೆ ಏನು ಮಾಡಬೇಕೆಂದು ತಿಳಿಯದೆ ಬಹಳ ಪೇಚಾಡಿಕೊಂಡಳು. ಕೊನೆಗೆ ಒಬ್ಬ ಹಾವು ಹಿಡಿಯುವನನ್ನು ಕರೆದು, “ನಾಗರಾಜ ಬಂದಾಗ ಅದನ್ನು ನೋವಾಗದಂತೆ ಹಿಡಿದು ಊರಿನಿಂದ ಆಚೆ ತೆಗೆದುಕೊಂಡು ಹೋಗಿ ಬಿಟ್ಟುಬಿಡು” ಎಂದು ಹಾವಾಡಿಗನಿಗೆ ಹೇಳಿದಳು. ಹಾವು ಹಿಡಿಯುವವನು ಅದೇ ರೀತಿ ಹಾವನ್ನು ಹಿಡಿದು ಊರಿನ ಆಚೆ ಬಿಟ್ಟು ಬಂದನು. ಆದರೆ ಮಾರನೆ ದಿನ ಅದೇ ಸಮಯಕ್ಕೆ ಸರಿಯಾಗಿ ಹಾವು ಬುಸುಗುಟ್ಟುತ್ತಾ ಮರಳಿ ಅಜ್ಜಿಯ ಮನೆ ಬಾಗಿಲಿಗೇ ಬಂದಿತು. ಮುದುಕಿ ದಡಬಡಿಸಿ ಎದ್ದು ಮನೆಯಲ್ಲಿ ಇದ್ದ ಅಲ್ಪಸ್ವಲ್ಪ ಹಾಲನ್ನು ಬಟ್ಟಲಲ್ಲಿ ಹಾಕಿ ಹಾವಿಗೆ ಕುಡಿಯಲು ಇಟ್ಟಳು. ಮಾರನೇ ದಿನ ಹಾವು ಹಿಡಿಯುವನನ್ನು ಮತ್ತೆ ಹಿಡಿಸಿ ಊರಾಚೆ ಕಾಡಿನಲ್ಲಿ ಬಿಡಲು ಹೇಳಿದಳು. ಹೀಗೆ ಐದಾರು ಬಾರಿ ಹಾವನ್ನು ಹಿಡಿಸಿ ಊರಿಂದ ಆಚೆ ಬಿಡಿಸಿದರೂ ಅದು ಪುನಃ ಪುನಃ ಮುದುಕಿಯ ಮನೆಗೇ ಬರುತ್ತಿತ್ತು.

ಏಳನೇ ಬಾರಿ ಹಾವಿನವನು ಹಿಡಿದಾಗ ನಾಗರಹಾವು ತುಂಬ ಕೋಪದಿಂದ ಮುದುಕಿಯನ್ನು ಕಚ್ಚಲಿಕ್ಕೆ ಹೋಯಿತು. ಮುದುಕಿ ಕಣ್ಣಲ್ಲಿ ನೀರನ್ನು ತುಂಬಿ ಕೈಮುಗಿದು ನಿಂತಳು. ಹಾವಾಡಿಗ ಹಾವನ್ನು ಮತ್ತೆ ಹಿಡಿದು ಊರಾಚೆ ಬಿಟ್ಟಾಗ ಆ ನಾಗರಹಾವು “ನೀನು ಎಷ್ಟು ದಿನಾಂತ ಹಿಡಿದು ಬಿಡುತ್ತಿಯಾ? ಆ ಮುದುಕಿಯನ್ನು ನಾನು ಕಚ್ಚೇ ಕಚ್ಚುತ್ತೇನೆ” ಎಂದಿತು. ಅದಕ್ಕೆ ಹಾವಾಡಿಗನು, “ಒಳ್ಳೆ ಕೆಲಸ. ನಿನಗೆ ವರ್ಷಾನುಗಟ್ಟಲೆಯಿಂದ ಹಾಲೆರೆದು ಸಾಕಿದ್ದಕ್ಕೆ ಮುದುಕಿಗೆ ಒಳ್ಳೆ ಪ್ರತಿಫಲವನ್ನೇ ಕೊಟ್ಟೆ. ನಿನ್ನಂಥ ಹಾವುಗಳನ್ನು ನಾನು ಎಷ್ಟೊಂದು ಹಿಡಿದು ಸಾಯಿಸಿದ್ದೇನೆ ಗೊತ್ತೆ? ನಿನಗೆ ಒಂದು ಚೂರೂ ನೋವಾಗದಂತೆ ಹಿಡಿದು ಊರಾಚೆ ಬಿಟ್ಟುಬಿಡಲು ಪ್ರತಿಬಾರಿಯೂ ಮುದುಕಿ ಹೇಳುತ್ತಿದ್ದಳು. ಬೇರೆಯವರಾಗಿದ್ದರೆ ಯಾವತ್ತೋ ನಿನ್ನನ್ನು ನನ್ನ ಕೈಯಿಂದ ಸಾಯಿಸುತ್ತಿದ್ದರು. ನಿನಗೆ ಅನೇಕ ಬಾರಿ ಪ್ರಾಣ ನೀಡಿದ ಆ ಮುದುಕಿಯನ್ನೇ ಕಚ್ಚುತ್ತೀಯಾ? ಕಚ್ಚು ಹೋಗು. ಅದಕ್ಕೇ ಅನ್ನುವುದು ಹಾವಿಗೆ ಹಾಲೆರೆದು ಏನು ಫಲ? ಎಂದು” ಕೋಪದಿಂದ ಅದನ್ನು ಕೊಲ್ಲುವುದಕ್ಕೆ ಹೋದನು. ಆಗ ಪಶ್ಚಾತ್ತಾಪದಿಂದ ನಾಗರಹಾವು “ತಡಿ, ತಡಿ, ನೀ ಹೇಳುವುದೆಲ್ಲ ನಿಜವೇ. ಆದರೆ ನನಗೆ ಇದೆಲ್ಲ ತಿಳಿಯದು. ನನ್ನನ್ನು ಕ್ಷಮಿಸು” ಎಂದು ಹೇಳಿ ಸರಸರನೆ ಹರಿದು ಹೋಯಿತು. ತನ್ನ ಕೋಪವನ್ನು ಬಿಟ್ಟು ತನ್ನಷ್ಟಕ್ಕೆ ತಾನು ಹೋದ ಹಾವನ್ನು ನೋಡಿ ಹಾವಾಡಿಗ ನೆಮ್ಮದಿಯ ನಿಟ್ಟುಸಿರು ಬಿಟ್ಟನು.

ಮಾರನೇ ದಿನ ಅದೇ ಸಮಯಕ್ಕೆ ಮುದುಕಿಯ ಮನೆಗೆ ಬಂದ ಹಾವನ್ನು ಕಂಡು ಮುದುಕಿ ಭಕ್ತಿಯಿಂದ ಕೈ ಮುಗಿದು ಹಾಲು ತರಲಿಕ್ಕೆ ಒಳ ಹೋಗುವುದಕ್ಕೂ ಸರಿಯಾಗಿ ಆ ಹಾವು “ನನಗೆ ಇನ್ನು ನಿನ್ನ ಹಾಲು ಬೇಡ. ನೀನು ನನಗೆ ಇಷ್ಟು ವರ್ಷ ಹಾಲು ನೀಡಿದ್ದೇ ಸಾಕು. ತಗೋ ನನ್ನಲ್ಲಿರುವ ಈ ರತ್ನ. ಇದನ್ನು ಮಾರಿ ಬಂದ ಹಣದಿಂದ ಸುಖವಾಗಿ ಬಾಳು” ಎಂದು ಹೇಳಿ ತನ್ನ ಹೆಡೆಯಿಂದ ಒಂದು ರತ್ನವನ್ನು ಉರುಳಿಸಿ ಸರಸರನೆ ಹರಿದು ಹೋಯಿತು. ಮತ್ತೆಂದೂ ಮುದುಕಿಯ ಮನೆಯಲ್ಲಿ ಆ ಹಾವು ಕಂಡು ಬರಲಿಲ್ಲ.