ನಮ್ಮೂರಿನ ದಂಪತಿಗಳಾದ ನಂಜುಂಡಯ್ಯ ನಂಜಮ್ಮ ತಮ್ಮ ಬದುಕು ಸಾಗಿಸಲು ಒಂದು ಚಿಕ್ಕ ಹೋಟೆಲ್ ನಡೆಸುತ್ತಿದ್ದರು. ತುಂಬ ಶುಚಿ-ರುಚಿಯಾಗಿ ಮಾಡುತ್ತಿದ್ದುದರಿಂದ ಬಹಳ ಜನ ಇವರ ಹೋಟೆಲಿಗೆ ಬರುತ್ತಿದ್ದರು. ಹೋಟೆಲ್ಲಿನಲ್ಲಿ ಮಲ್ಲಿಗೆ ಹೂವಿನಂತೆ ಬೆಳ್ಳಗಿನ ಮೃದುವಾದ ಇಡ್ಲಿ, ಪೂರಿ ಸಾಗು, ಚಟ್ನಿ, ಚಿತ್ರಾನ್ನ, ವಡೆ, ಬೋಂಡ, ಕಾಫೀ, ಟೀ ಮಾಡುತ್ತಿದ್ದರು. ಇಡ್ಲಿಗಾದರೋ ತನ್ನ ಬಿಳಿ ಬಣ್ಣಕ್ಕಾಗಿ ಎಲ್ಲರೂ ತನ್ನನ್ನೇ ಕೇಳುತ್ತಿರುವುದನ್ನು ಕಂಡು ಜಂಬ ಬಂದು ಬಿಟ್ಟಿತು. ಪೂರಿ, ಸಾಗು,ಚಟ್ನಿ, ಚಿತ್ರಾನ್ನ, ದೋಸೆ, ವಡೆ, ಬೋಂಡ ಇವುಗಳ ಜೊತೆ ಮಾತನಾಡುವುದನ್ನೇ ಕೈಬಿಟ್ಟಿತು. ಅವುಗಳು ಮಾತನಾಡಿಸಿದರೂ “’ಆ, ಹೂಂ” ಎಂದು ಬೇಕಾಬಿಟ್ಟಿ ಉದಾಸೀನದಿಂದ ಮಾತಾಡಿ ಸುಮ್ಮನಾಗುತ್ತಿತ್ತು. ಎಲ್ಲವಕ್ಕೂ ಇದರ ನಡತೆಯಿಂದ ಬೇಸರವಾಯಿತು.

ಒಂದು ಬಾರಿ ಗಿರಾಕಿಯೊಬ್ಬ ಮೊದಲು ಚಿತ್ರಾನ್ನ ತೆಗೆದುಕೊಂಡು ಅದೇ ತಟ್ಟೆಗೆ ಇಡ್ಲಿಯನ್ನು ಹಾಕಿಸಿಕೊಂಡ. ಆಗಂತು ಇಡ್ಲಿ ಹೊಲಸಲ್ಲಿ ಬಿದ್ದಂತೆ ಮುಖ ಊದಿಸಿ ಅಸಹ್ಯಿಸಿ ಕೊಂಡಿತು. ಚಿತ್ರಾನ್ನಕ್ಕೆ ಪಾಪ ಅಳುವೇ ಬಂದು ಬಿಟ್ಟಿತು. ಇನ್ನೊಂದು ಬಾರಿ ಗಿರಾಕಿಯೊಬ್ಬ ಇಡ್ಲಿ ತಿಂದು ನೀರು ಕುಡಿಯುತ್ತಿರಬೇಕಾದರೆ, ನೀರು ಇಡ್ಲಿಯ ಜೊತೆ “ಯಾಕೆ ಇಡ್ಲಿಯಕ್ಕ, ಈ ನಡುವೆ ನೀನು ನಮ್ಮ ಜೊತೆ ಸೇರೋದೆಯಿಲ್ಲ. ಯಾವಾಗಲೂ ಒಬ್ಬಳೇ ಕುಳಿತುಕೊಂಡಿರುತ್ತಿಯಾ? ಯಾರಾದರೂ ಏನಾದರೂ ಅಂದರಾ?” ಎನ್ನಲು

“ನನ್ನನ್ಯಾಕೆ ಯಾರಾದರೂ ಅಂತಾರೆ. ನಾನು ಅಂದರೆ ಏನು ಅಂತ ತಿಳಿದಿದ್ದೀಯಾ? ನೀರೆ, ನನ್ನ ಬಣ್ಣ ಏನು, ಅದು ಅಲ್ಲದೆ ನನ್ನ ಯಜಮಾನ ಇದ್ದಾನಲ್ಲ, ನನ್ನ ಯಾವಾಗಲೂ ಜೋಪಾನವಾಗಿ ಬಿಸಿಬಿಸಿಯಾಗಿ ಇಟ್ಟಿರುತ್ತಾನೆ. ಪೂರಿ, ಚಿತ್ರಾನ್ನದಂತೆ ಒಣಗಿಕೊಂಡು ತಣ್ಣಗಾಗಿರುತ್ತೇನೆಯೇ ನಾನು. ನೀನು ಪೇಪರ್ ಓದಲ್ಲವಾ? ಮೊನ್ನೆ ಮೊನ್ನೆ ಬ್ರಿಟನ್ನಿನ ಪ್ರಧಾನಿಯೇ ನನ್ನ ಮೆಚ್ಚಿಕೊಂಡು ಸೇವಿಸಿದ್ದಾನೆ ಎಂದ ಮೇಲೆ, ನಾನು ಎಂದರೆ ಏನು ಅಂತ ನಿನಗೆ ಅರ್ಥ ಆಗಿರಬೇಕಲ್ಲ. ಮೊದಲೇ ತಣ್ಣಗಿದ್ದೀಯಾ, ಹಾಗೇ ಸುಮ್ಮನಿರು” ಎಂದು ವ್ಯಂಗವಾಗಿ ಇಡ್ಲಿ ನುಡಿಯಲು ಇದಾವ ಗ್ರಾಚಾರ ಎಂದು ನೀರು ಸುಮ್ಮನೆ ಗಿರಾಕಿಯ ಹೊಟ್ಟೆಯೊಳಗೆ ಹರಿಯಿತು.

ಪೂರಿ ಅಳುತ್ತಿದ್ದುದನ್ನು ನೋಡಿ ಚಿತ್ರಾನ್ನಕ್ಕೆ ತುಂಬ ಬೇಸರವಾಯಿತು. “ಯಾಕೆ?” ಎಂದು ಕೇಳಲು, “ಇಡ್ಲಿ ನನ್ನನ್ನು ಒಲೆ ಮೇಲೆ ಊದಿಕೊಂಡರೇನು, ಸ್ವಲ್ಪ ಹೊತ್ತಿಗೆಲ್ಲ ಎಲೆ ತರಹ ಅಪ್ಪಚ್ಚಿಯಾಗುತ್ತೀಯಾ ಎಂದು ಅಣಕಿಸಿದಳು” ಎಂದು ಹೇಳಲು, ಚಿತ್ರಾನ್ನ “ನನಗೂ ಅಷ್ಟೇ, ಒಣಗಿ ವಾಟೆಗರಿಯಾಗಿರೋ ನಿನ್ನನ್ನು ಯಾವನು ತಗೋತಾನೆ ಅನ್ನೋದೆ. ಅದಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕು. ಆದರೆ ಹೇಗೆ?”

“ಒಂದು ಕೆಲಸ ಮಾಡಿ. ನಾಳೆ ಹೇಗಿದ್ದರೂ ನಂಜುಂಡಯ್ಯ ಬೆಳಗಿನ ಜಾವವೇ ಎದ್ದು ನಮ್ಮನ್ನೆಲ್ಲ ಸಿದ್ಧಪಡಿಸಿ ಜೋಡಿಸಿ, ಇಡ್ಲಿ ತಯಾರಿಸಲು ಹೋಗುತ್ತಾನೆ. ಆಗ ನಾವೆಲ್ಲ ಸಭೆ ಸೇರಿ ಮುಂದೆ ಏನು ಮಾಡುವುದೆಂದು ಯೋಚಿಸೋಣ” ಎಂದಿತು ಚಿತ್ರಾನ್ನ.

ಮಾರನೇ ದಿನ ಬೆಳಗಿನಲ್ಲೇ ಎಲ್ಲ ಸಭೆಗೆ ಸೇರಿ ಸಿದ್ಧರಾಗಿದ್ದರು. ಈಗ ಇಡ್ಲಿಗೆ ಗಂಟೆ ಕಟ್ಟುವವರು ಯಾರು? ಅದಕ್ಕೆ ಬುದ್ಧಿ ಕಲಿಸಬೇಕು. ಹೇಗೆ? ಹಾಗೆ ಹೀಗೆ ಎಂದು ತಲಾ ಒಂದೊಂದು ಮಾತನ್ನಾಡಿದರು. ಕೊನೆಗೆ ನೀರು ಹೇಳಿತು: “ನಾನೇನೋ ಎಲ್ಲರ ಜೊತೆನೂ ಇರುತ್ತೇನೆ. ಮೊದಲು ನನ್ನ ಜೊತೆ ತುಂಬ ಪ್ರೀತಿ, ವಿಶ್ವಾಸದಿಂದ ಇಡ್ಲಿ ನಡೆದುಕೊಳ್ಳುತ್ತಿದ್ದಳು. ಅದ್ಯಾಕೋ ಈ ನಡುವೆ ಮಾತಾಡೋದೆ ಇಲ್ಲ. ಹತ್ತಿರ ಹೋದರೆ ಹರದಾರಿ ದೂರ ಹೋಗುತ್ತಾಳೆ. ಅದಕ್ಕೆ ನಾನು ಗಿರಾಕಿಗಳು ಅವಳನ್ನು ನುಂಗಿ ಕೆಮ್ಮಿದ ಮೇಲೇನೆ ಗಂಟಲಲ್ಲಿ ಇಳಿಯುವುದು ಗೊತ್ತಾ!?” ಎಂದಿತು.

“ಅದು ಸರಿ, ಆದರೆ ಅದಕ್ಕೆ ಬುದ್ದಿ ಕಲಿಸುವುದು ಹೇಗೆ? ನಾವೆಲ್ಲ ಜೊತೇಲಿ ಸಂತೋಷವಾಗಿರೋದು ಎಲ್ಲೋ ಸ್ವಲ್ಪ ಹೊತ್ತು. ಆಮೇಲೆ ನಾವುಗಳು ಯಾರ್ಯಾರ ಹೊಟ್ಟೆಗೆ ಹೋಗುತ್ತೀವೋ ಏನೋ? ಇರೋ ಸ್ವಲ್ಪ ಹೊತ್ತು. ಆಮೇಲೆ ನಾವುಗಳು ಯಾರ್ಯಾರ ಹೊಟ್ಟೆಗೆ ಹೋಗುತ್ತೀವೊ ಏನೋ? ಇರೋ ಸ್ವಲ್ಪ ಹೊತ್ತಾದರೂ ನಗ್ತಾ ನಗ್ತಾ ಇರಾನಾ ಅಂದರೆ, ಇವಳದೊಂದು. ಏನು ಮಾಡೋದು?” ಎಲ್ಲಾ ತಿಂಡಿಗಳು ಗಡ್ಡದ ಮೇಲೆ ಕೈಯಿಟ್ಟುಕೊಂಡು ಚಿಂತಾಕ್ರಾಂತವಾದವು.

“ಓ! ನನಗೆ ಒಂದು ಉಪಾಯ ಹೊಳೆಯಿತು” ಎಂದಿತು ನೀರು. ” ಏನು, ಏನು, ಬೇಗ ಹೇಳು” ಎಂದವು ತಿಂಡಿಗಳು ಒಕ್ಕೊರಲಿನಿಂದ. “ನಾಳೆ ಹೇಗಿದ್ದರೂ ಪೂರಿ ನೀನು ಎಣ್ಣೆಯಲ್ಲಿದ್ದಾಗ ಜೋರಾಗಿ ಉಸಿರು ಬಿಡು. ಆಗ ಹೇಗಿದ್ದರು ಇಡ್ಲಿ ಮಾಡಲಿಕ್ಕೆ ನಂಜಮ್ಮ ಪಾತ್ರೆಗೆ ನೀರು ಸುರಿಯುತ್ತಿರುತ್ತಾಳೆ. ಎಣ್ಣೆ ಎಗರಿ ಅವಳ ಕಾಲಿನ ಮೇಲೆ ಬೀಳಬೇಕು. ನೀನು ಅಷ್ಟು ಜೋರಾಗಿ ಉಸಿರು ಬಿಡಬೇಕು, ಗೊತ್ತಾಯಿತಾ?” ಎಂದಿತು. ಆಗ ಹಂಡೆಗೆ ನೀರು ಹೆಚ್ಚಾಗಿ ಬೀಳುತ್ತದೆ. ಮುಂದಿನದು ನೋಡುವಿಯಂತೆ. ಇಡ್ಲಿ ನನ್ನ ಜೊತೆ ಬೆರೆತು ತೊಪ್ಪೆ ತೊಪ್ಪೆಯಾಗುತ್ತಾಳೆ. ಆಗ ಅವಳ ಅಹಂಕಾರ ಮುರಿಯುತ್ತದೆ. ಎಲ್ಲಾ ತಿಂಡಿಗಳಿಗೂ ಬಹಳ ಖುಷಿಯಾಗುತ್ತದೆ. ಅಲ್ಲಿಗೆ ಅಂದಿನ ಸಭೆ ಮುಗಿಯುತ್ತದೆ.

ಮಾರನೆ ದಿನ ಮುಂಜಾನೆಯೇ ನಂಜುಂಡ ನಂಜಮ್ಮ ಎದ್ದು ತಮ್ಮ ಕಾಯಕದಲ್ಲಿ ತೊಡಗಿದರು. ಇಡ್ಲಿ ಮಾಡಲು ನಂಜಮ್ಮ ಹಂಡೆಗೆ ನೀರು ಸುರಿಯುತ್ತಿರುವಾಗ, ನಂಜುಂಡಯ್ಯ ಪೂರಿ ಕರಿಯುತ್ತಿದ್ದನು. ಒಂದು ಪೂರಿ ದಪ್ಪನೆ ಉಬ್ಬಿ ತಕ್ಷಣ ಪುಸ್ಸಂತ ಉಸಿರು ಬಿಟ್ಟಿತು. ಮೇಲೆ ಎತ್ತಿದ ಜಾಲರಿ ಕೆಳಗೆ ಸರಿಯಿತು. ಆಗ ನೀರು ಸುರಿಯುತ್ತಿದ್ದ ನಂಜಮ್ಮನ ಕಾಲಿಗೆ ಎಣ್ಣೆ ಹಾರಿ ಬಿದ್ದಿತು. ತಕ್ಷಣ ಹಂಡೆಗೆ ನೀರು ಹೆಚ್ಚಾಗಿ ಬಿದ್ದಿತು. ನಂಜಮ್ಮ ಗಂಡನಿಗೆ “ನೋಡಿ ಮಾಡಬಾರದ, ಎಣ್ಣೆ ಮುಂದೆ ಕುಂತಿದ್ದೀಯಾ. ಈಗ ನೋಡು, ನನ್ನ ಕಾಲಿಗೆ ಎಣ್ಣೆ ಬಿತ್ತು” ಎಂದು ರೇಗಿದಳು. ಹಂಡೆಗೆ ನೀರು ಬಿದ್ದ ಕಡೆ ಅವಳ ಗಮನವಿರಲಿಲ್ಲ.

ಇಡ್ಲಿ ತಟ್ಟೆ ಜೋಡಿಸಿ ಹಂಡೆಗೆ ಬೆಂಕಿ ಹಾಕಿ ಹಬೆ ಬಂದುದು ನೋಡಿ ಬೆಂದಿದೆ ಎಂದು ನಂಜಮ್ಮ ಇಡ್ಲಿ ತೆಗೆದಳು. ಎಲ್ಲಾ ನೀರು ಉಕ್ಕಿ ಪಿತಪಿತ ಆಗಿದ್ದಿತು. ಇದನ್ನು ನೋಡಿ ನಂಜಯ್ಯ ಹೆಂಡತಿಯನ್ನು ಬೈದನು. ಹೆಂಡತಿಯಾದರೋ ” ಈ ಇಡ್ಲಿಗೆ ಸ್ವಲ್ಪ ನೀರು ಹೆಚ್ಚಾದರೂ ಉಕ್ಕಿ ಪಿತಪಿತ ಅಂತ ಆಗುತ್ತದೆ. ಪೂರಿ ಇವೇ ಸರಿ, ಸ್ವಲ್ಪ ಹೆಚ್ಚು ಕಮ್ಮಿಯಾದರೂ ತಡೆಯುತ್ತವೆ. ಇಡ್ಲಿದೊಂದು ಗೋಳು” ಎಂದು ಇಡ್ಲಿಯನ್ನು ಬೈದಳು. ಇಡ್ಲಿಯನ್ನೆಲ್ಲಾ ತೆಗೆದು ತಟ್ಟೆ ಸಮೇತ ಒಂದು ಮೂಲೆಗೆ ಗುಡ್ಡೆ ಹಾಕಿದಳು. ಇಡ್ಲಿಗೋ ತನ್ನ ರೂಪ ನೋಡಿ, ನಂಜಮ್ಮನ ಬೈಗಳ ಕೇಳಿ ಅಳುವೇ ಬಂದುಬಿಟ್ಟಿತು. ಅಳುತ್ತಾ, ಅಳುತ್ತಾ, ಇನ್ನೂ ನೀರು ನೀರಾಯಿತು. ಇದರ ಪರಿಸ್ಥಿತಿ ನೋಡಿ ಚಿತ್ರಾನ್ನ, ಪೂರಿ, ವಡೆ, ಬೋಂಡಕ್ಕೆ ಸಂತೋಷವೋ ಸಂತೋಷ. ಬಂದವರೆಲ್ಲ ಇವನ್ನೇ ಕೇಳುತ್ತಿರುತ್ತಾರೆ. ತಟ್ಟೆಯಲ್ಲಿ ಕುಣಿಕುಣಿಯುತ್ತ ಇಡ್ಲಿಯ ನೋಡಿದರು ನೋಡದಂತೆ ಗಿರಾಕಿಗಳ ಹತ್ತಿರ ಹೋಗುತ್ತಿದ್ದವು. ಇಡ್ಲಿಗೆ ಅಳು ಇನ್ನೂ ಹೆಚ್ಚಾಯಿತು.

ಆಗ ಅಲ್ಲಿಯೇ ಇದ್ದ ನೀರು “ಯಾಕೆ ಇಡ್ಲಿ ಅಳುತ್ತಿದ್ದೀಯಾ? ಎನ್ನಲು, “ಆ ನಂಜಮ್ಮ ಇದ್ದಾಳಲ್ಲ, ನನ್ನ ರೂಪನ ನೋಡು ಹೇಗೆ ಮಾಡಿಬಿಟ್ಲು. ಈ ಮೂಲೇಲಿ ಬಿಸಾಡಿದ್ದಾಳೆ” ಎಂದು ಇನ್ನು ಜೋರಾಗಿ ಅಳಲಿಕ್ಕೆ ಪ್ರಾರಂಭಿಸಿದಳು. ನನ್ನದೊಂದು ಮಾತು ಕೇಳುವುದಾದರೆ ನಿನ್ನ ನಾಳೆಯಾದರೂ ಚೆನ್ನಾಗಿ ಮಾಡಲಿಕ್ಕೆ ಹೇಳುತ್ತೀನಿ, ಕೇಳುತ್ತೀಯಾ?” ಎಂದಿತು ನೀರು. “ಅದೇನು ಹೇಳು. ನನ್ನ ರೂಪ ಸರಿ ಹೋಗಲು ಏನು ಮಾಡಬೇಕು?” ಎಂದು ಕೇಳಿತು.

“ನೀನು ನಿನ್ನ ಜಂಬ ಗಿಂಬ ಎಲ್ಲ ಬಿಟ್ಟು ನಮ್ಮೊಂದಿಗೆಲ್ಲ ಮೊದಲಿನಂತೆ ಚೆನ್ನಾಗಿ ಮಾತನಾಡಿಕೊಂಡಿರುತ್ತೀನಿ ಎಂದರೆ ನಾವೆಲ್ಲ ಸೇರಿ ಏನಾದರೂ ಮಾಡುತ್ತೀವಿ. ಇಲ್ಲದಿದ್ದರೆ ನಿನ್ನ ಹಣೆಬರಹ” ಎಂದರು. ಅದಕ್ಕೆ ಇಡ್ಲಿ “ನಾನು ಮೊದಲಿನಂತೆ ಆದರೆ, ಮೊದಲಿನ ಹಾಗೆ ನನ್ನ ಗೆಳೆಯರ ಜೊತೆ ಚೆನ್ನಾಗಿರುತ್ತೇನೆ. ನನ್ನದು ತಪ್ಪಾಯಿತು”  ಎಂದು ಹೇಳಿತು. “ಸರಿ, ನೀನು ಯೋಚನೆ ಮಾಡಬೇಡ. ನಾಳೆ ನಿನ್ನ ಚೆನ್ನಾಗಿ ಮಾಡಲಿಕ್ಕೆ ನಂಜಮ್ಮನಿಗೆ ನಾನು ಹೇಳುತ್ತೇನೆ” ಎಂದಿತು ನೀರು. ಇಡ್ಲಿ ಕಣ್ಣೀರು ಒರೆಸಿಕೊಳ್ಳುತ್ತ ಸರಿ ಎಂಬಂತೆ ತಲೆ ಆಡಿಸಿತು.

ನೀರು ಬಂದು ನಡೆದ ವಿಷಯ ಗೆಳೆಯರ ಜೊತೆ ಹೇಳಿತು. ಅದನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು. ಮಾರನೇ ದಿನ ನಸುಕಿನಲ್ಲಿ ಪೂರಿ ಕರಿಯುವಾಗ ಜೋರಾಗಿ ಉಸಿರು ಬಿಡಲಿಲ್ಲ. ಎಣ್ಣೆ ನಂಜಮ್ಮನ ಕಾಲಿಗೆ ಹಾರಲಿಲ್ಲ. ಹಂಡೆಗೆ ಹೆಚ್ಚಾಗಿ ನೀರು ಬೀಳಲಿಲ್ಲ. ಇಡ್ಲಿ ಹೊರಬಂದು ತನ್ನ ಗೆಳೆಯರೊಂದಿಗೆ ಸೇರಿಕೊಂಡು ಮಾತುಕತೆಯಾಡುತ್ತಾ, ನಗುನಗುತ್ತಾ ಇದ್ದಿತು.