ಹರಿದಾಡುವನು ಇವನು ಮನೆತುಂಬ, ನೆಲವೆ
ಮಿದುವಾಯಿತು !
ಎಲ್ಲಿದ್ದನೋ ಇವನು, ಇವನಿಂದ ನಮ್ಮ
ಮನೆ ತುಂಬಿತು
ಹೂಗಂಪು ತುಂಬಿರುವ ಸರಸಿಯಂತೆ ಮನ
ಚೆಲುವಾಯಿತು.

ಇವನ ನಗುವೇನು, ಊದುಬತ್ತಿಯ ನವುರು
ಗೆರೆಯ ಧೂಪ !
ಉರಿಗಿಟ್ಟ ಹಸಿ ಸೌದೆ ಹೊಗೆಯನುಗಿದಂತೆ
ಇವನ ಕೋಪ !
ಹಿಡಿವರಾರೂ ಇಲ್ಲ, ಆಡಿದುದೆ ಆಟ
ಇವನೆ ಭೂಪ !

ಕಾಗೆ ಗುಬ್ಬಿಗಳೊಡನೆ ಇವನು ಸಲ್ಲಾಪ
ನಡೆಸುವವನು
ಬೀದಿಯಲಿ ನಡೆವವರನೆಲ್ಲ ಕೈಬೀಸಿ
ಕರೆಯುತಿಹನು,
ವಿಶ್ವಚೇತನವನೆಲ್ಲೆಲ್ಲು ಕಂಡು
ಬಾಳುತಿಹನು !

ಇದ್ದೀತು ಏಸುದಿನ, ಮಧುರ ನವನೀತ
ಮುಗ್ಧಮನಸು !
ಬಾಳ ಬಿಸಿಗೆ ಕರಗಿ ನೀರಾದೀತು, ಈ
ಮಧುರ ಕನಸು.
ಇರುವುದರಲೇ ಅದನು ತುಂಬಿಕೊಳ್ಳುತಿದೆ
ನನ್ನ ಮನಸು !