ಶ್ರೀ ಸಾಮಾನ್ಯರಿಗಾಗಿ ಕಾನೂನು ಮಾಲೆಯಡಿಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಆಂಗ್ಲ ಭಾಷೆಯಲ್ಲಿರುವ ಎಲ್ಲ ಕಾನೂನು ಅಧಿನಿಯಮಗಳನ್ನು ಕನ್ನಡಕ್ಕೆ ಅನುವಾದಿಸುತ್ತಿರುವುದು. ವಿಶ್ವವಿದ್ಯಾಲಯದ ಹೆಸರಿಗೆ ತಕ್ಕ ಕೃತ್ಯವಾಗಿದೆ. ಇದು ಯಶಸ್ವಿಯಾಗಿ ಸಾಗಬೇಕಾಗಿದೆ. ಉದ್ದೇಶ ಸಾಧನೆಯ ಸಿದ್ಧಿಯಾಗಬೇಕಾಗಿದೆ. ಶ್ರೀಸಾಮಾನ್ಯನ ಆಡುನುಡಿಯನ್ನು ಎತ್ತಿ ಹಿಡಿಯಬೇಕಾಗಿದೆ. ಇದು ನಾಡಿನ ಎಲ್ಲ ಆಡಳಿತಾಂಗಗಳ ಚೇತನವಾಗಬೇಕಿದೆ. ಶ್ರೀಸಾಮಾನ್ಯನ ಅರಿವಿನ ಚೈತನ್ಯ ಇನ್ನೂ ಹೆಚ್ಚಬೇಕಾಗಿದೆ. ಈ ದಿಶೆಯಲ್ಲಿ ನನಗೆ ಕನ್ನಡ ವಿಶ್ವವಿದ್ಯಾಲಯವು ವಹಿಸಿದ ಕೆಲಸವನ್ನು ನನ್ನ ಶಕ್ತಿ ಮೀರಿ ನಿರ್ವಹಿಸಿದ್ದೇನೆಂಬ ಆತ್ಮತೃಪ್ತಿ ನನಗಿದೆ. ಈ ನನ್ನ ನುಡಿಯ ಸೇವೆಗೆ ನಾನು ಸದಾ ಸಿದ್ಧ.

ಪ್ರಸ್ತುತ ಆಂಗ್ಲಭಾಷೆಯಲ್ಲಿರುವ ರಾಜ್ಯಕ್ಕೆ ಅನ್ವಯಿಸುವ ಎಲ್ಲ ಕಾನೂನು ಕಾಯಿದೆಗಳನ್ನು ಹಾಗೂ ಇತರೆ ವ್ಯಾವಹಾರಿಕ ವಿಷಯಗಳನ್ನೊಳಗೊಂಡ ಆಡಳಿತಾತ್ಮಕ ನಡವಳಿಕೆಗಳನ್ನು ಕನ್ನಡಕ್ಕೆ ಅನುವಾದಿಸುವುದರ ಜೊತೆಗೆ ಅವುಗಳನ್ನು ದಿನನಿತ್ಯದ ವ್ಯವಹಾರದಲ್ಲಿ ಕಡ್ಡಾಯವಾಗಿ ಬಳಸುವಂತೆ ಮಾಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕೆಂದೂ ಅಲ್ಲದೆ ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಜರುಗಿಸುವಂತಾಗಬೇಕೆಂಬುದು ನನ್ನ ಅಭಿಪ್ರಾಯ. ಕಾರಣ ಕಡ್ಡಾಯವಾಗಿ ಬಳಕೆಯಾಗುತ್ತಿಲ್ಲ. ಕರ್ನಾಟಕದ ಉಚ್ಛನ್ಯಾಯಾಲಯ ಹೊರತುಪಡಿಸಿ ಅಧೀನ ನ್ಯಾಯಾಲಯಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಉಪಯೋಗಿಸದಿದ್ದಲ್ಲಿ ಆಂಗ್ಲಭಾಷೆಯಲ್ಲಿರುವ ಕಾನೂನುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದರ ಶ್ರಮ ವ್ಯರ್ಥವಾಗುತ್ತದೆ. ಮತ್ತು ಶ್ರೀಸಾಮಾನ್ಯನಿಗೆ ಇದರಿಂದ ಯಾವ ಉಪಯೋಗವು ಆಗುವುದಿಲ್ಲ.

ಈ ಮಜೂರಿ ಸಂದಾಯ ಅಧಿನಿಯಮ ೧೯೩೬ನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಾಗ ನನಗೆ ಅನಿಸಿದ್ದೇನೆಂದರೆ ಯಾವುದೇ ಕಾಯಿದೆಯನ್ನು ಅನುವಾದಿಸಬೇಕಾದರೆ ಅನುವಾದಿಸುವವರೆಲ್ಲರೂ ಸಾಮಾನ್ಯ ಆಂಗ್ಲ ಪದಗಳಿಗೆ (ಸಾಮಾನ್ಯವಾಗಿ ಉಪಯೋಗಿಸುವ ಪದಗಳಿಗೆ) ಕನ್ನಡದಲ್ಲಿ ಸೂಕ್ತವಾದ ಒಂದೇ ಪದವನ್ನು ಉಪಯೋಗಿಸುವಂತೆ ವಿಶ್ವವಿದ್ಯಾಲಯವು ಆದೇಶ ನೀಡಬೇಕೆಂಬುದು ನನ್ನ ಅನಿಸಿಕೆ. ಕಾರಣ ಇಂಗ್ಲೀಷ್ ನ Act  ಎಂಬ ಪದಕ್ಕೆ ಕೆಲವು “ಅಧಿನಿಯಮ ಇಲ್ಲವೆ ಕಾಯಿದೆ” ಎಂದೂ, “Section”  ಎಂಬ ಪದಕ್ಕೆ “ಕಲಂ” ಅಥವಾ “ಪ್ರಕರಣ” ಇದೇ ರೀತಿ ಹಲವಾರು ಇತರ ಆಂಗ್ಲ ಪದಗಳಿಗೆ ಬದಲಾಗಿ ಕನ್ನಡ ಪದಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಎಲ್ಲರೂ ಒಂದೇ ಪದವನ್ನು ಇಂಗ್ಲೀಷ್ ಪದಗಳಿಗೆ ಬದಲು ಉಪಯೋಗಿಸಬೇಕು. ಇಲ್ಲವೇ ಅವರು ಅನುವಾದಿಸಿದ ಪದಗಳು ಒಂದೇ ಆಗಿರುವಂತೆ ವಿಶ್ವವಿದ್ಯಾಲಯದ ಸಂಬಂಧಪಟ್ಟವರು ತಿದ್ದಿ ಸರಿಪಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಯಾವುದು ಸರಿ ಎಂಬ ಬಗ್ಗೆ ಅನುಮಾನ ಬರುತ್ತದೆ.

ಅಲ್ಲದೆ ತಾವು ಯಾವುದೇ ಕಾಯಿದೆಯನ್ನು ತರ್ಜುಮೆ ಮಾಡಿಸಬೇಕಾದರೆ ಆಂಗ್ಲ ಭಾಷೆಯ ಕಾಯಿದೆಯನ್ನು ತಾವೇ ಸೂಚಿಸುವುದು ಒಳ್ಳೆಯದು. ಕಾರಣ ಒಂದೇ ಕಾಯಿದೆಯನ್ನು ಹಲವಾರು ಜನ ಪುನರ್ ವಿಮರ್ಶೆ ಮಾಡಿರುತ್ತಾರೆ. ಅದರಲ್ಲಿ ಕೆಲವು ಬಹಳವಾದ ಅನವಶ್ಯಕ ವಿವರಣೆಗಳುಳ್ಳವಗಳಾಗಿರುತ್ತದೆ. ಆದ್ದರಿಂದ ಅಂತಹವುಗಳನ್ನು ಪರಿಶೀಲಿಸಿ ಸರಳವಾಗಿ ಸಂಕ್ಷಿಪ್ತವಾಗಿ ಆ ವೇಳೆಗೆ ತಕ್ಕ ಎಲ್ಲ ತಿದ್ದುಪಡಿಗಳು ಮತ್ತು ಉಚ್ಛನ್ಯಾಯಾಲಯ ಹಾಗೂ ಶ್ರೇಷ್ಠ ನ್ಯಾಯಾಲಯಗಳ ತೀರ್ಪುಗಳನ್ನು ಒಳಪಟ್ಟಿರಬೇಕು ಅಷ್ಟೆ.

ಈ ಮೇಲ್ಕಂಡ ನನ್ನ ಅನಿಸಿಕೆ ಹಾಗೂ ಸಲಹೆಗಳೊಂದಿಗೆ ನನಗೆ ಈ ಅನುವಾದದ ಅವಕಾಶ ಮಾಡಿಕೊಟ್ಟ ವಿಶ್ವವಿದ್ಯಾಲಯಕ್ಕೆ ನನ್ನ ವಂದನೆಗಳನ್ನು ಮತ್ತೆ ಸಲ್ಲಿಸುತ್ತೇನೆ.

ಬಿ.ವೆಂ.ಪುಟ್ಟೇಗೌಡ