೧೯೩೬ರ ಮಜೂರಿ ಸಂದಾಯ ಅಧಿನಿಯಮ ಕೆಲವು ವರ್ಗದ ನೌಕರರಿಗೆ ನೀಡಬೇಕಾದ ಮಜೂರಿಯನ್ನು ನಿಯಂತ್ರಿಸುತ್ತದೆ, ಇಲ್ಲವೆ ಕ್ರಮಗೊಳಿಸುತ್ತದೆ. ಈ ಕಾನೂನಿಗೊಳ್ಳಪಟ್ಟ ನೌಕರರಿಗೆ ನೀಡಬೇಕಾದ ಮಜೂರಿಯನ್ನು ನಿಗದಿತ ಅವಧಿಯೊಳಗೆ ನೀಡುವುದು ಮತ್ತು ಮಜೂರಿಯಲ್ಲಿ ಕಾನೂನು ಪ್ರಕಾರ ಮುರಿದುಕೊಳ್ಳಬೇಕಾಗಿರುವ ಹಣವನ್ನು ಮಾತ್ರ ವಸೂಲಿ ಮಾಡಿಕೊಳ್ಳುವುದನ್ನು ಖಾತ್ರಿಗೊಳಿಸಲು ಈ ಅಧಿನಿಯಮವನ್ನು ರಚಿಸಲಾಗಿದೆ. ಈ ಕಾಯಿದೆಯು ನಿರ್ದಿಷ್ಟವಾಗಿ ಕಾರ್ಖಾನೆಗಳಲ್ಲಿ ಅಥವಾ ರೈಲ್ವೆ ಇಲಾಖೆಯಲ್ಲಿ ನೇರವಾಗಿ ಅಥವಾ ಒಳಗುತ್ತೇದಾರರ ಕೈಕೆಳಗೆ ಕೆಲಸ ಮಾಡುವ ನೌಕಕರಿಗೆ ಅನ್ವಯಿಸುತ್ತದೆ. ಈ ಕಾನೂನನ್ನು ಬೇರೆ ಯಾವುದೇ ಔದ್ಯೋಗಿಕ ಸಂಸ್ಥೆಗೂ ಅಥವಾ ಒಂದೇ ಗುಂಪಿಗೆ ಒಳಪಟ್ಟ ಅಥವಾ ಒಂದು ವರ್ಗಕ್ಕೆ ಸೇರಿದ ಸಂಸ್ಥೆಗಳಿಗೂ ಅನ್ವಯಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿರುತ್ತದೆ. ಈ ಕಾಯಿದೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರು ಯಾರು ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಈಗಿರುವ ಮಜೂರಿ ವಿವರಣೆಯು ವಾಸ್ತವಿಕ ಉಪಯೋಗದಲ್ಲಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.

ಕೆಲವು ಸಂದರ್ಭಗಳಲ್ಲಿ ನೌಕರರಿಗೆ ನೀಡಿದ ಶಿಕ್ಷೆಗನುಗುಣವಾಗಿ ಅಂದರೆ ನೌಕರರನ್ನು ಅಮಾನತ್ತುಗೊಳಿಸುವುದರಿಂದ ವಾರ್ಷಿಕ ಬಡ್ತಿ ನಿಲ್ಲಿಸುವುದು, ಕೆಳವರ್ಗದ ವೇತನಕ್ಕೆ ಇಳಿಸುವುದು ಇತ್ಯಾದಿಗಳಿಂದ ಉಂಟಾಗಬಹುದಾದ ಕಡಿತಗಳಿಗೆ ಕಾಯಿದೆಯಲ್ಲಿ ಅವಕಾಶವಿಲ್ಲವಾದರೂ, ರಾಷ್ಟ್ರದ ಹಲವಾರು ಉಚ್ಚ ನ್ಯಾಯಾಲಯಗಳ ತೀರ್ಪಿನ ಪ್ರಕಾರ ಉದ್ಭವಿಸಬಹುದಾದ ವೇತನ ಕಡಿತವನ್ನು ಜಾರಿಗೊಳಿಸಲು ಕಾಯಿದೆಯ ಕಲಂ ೭ನ್ನು ತಿದ್ದುಪಡಿ ಮಾಡಲಾಗಿದೆ.

ಅಧಿಕಾರಿಗಳು ನೀಡುವ ಆದೇಶಗಳನ್ನು ಜಾರಿಗೆ ತರುವ ಮೂಲಕ ವಸೂಲಿ ಮಾಡಬೇಕಾದವುಗಳ ಬಗ್ಗೆ ಬಹಳ ಕಾಲ ವ್ಯಯವಾಗುತ್ತಿದೆ. ಮುಚ್ಚಲ್ಪಟ್ಟ ಸಂಸ್ಥೆಗಳಿಂದ ನೌಕರರಿಗೆ ನೀಡಬೇಕಾದ ಬಾಕಿ ಮಜೂರಿ ಬಗ್ಗೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ. ಇಂಥ ಸಂದರ್ಭಗಳಲ್ಲಿ ಕಾರ್ಮಿಕರ ಹಿತರಕ್ಷಣೆ ದೃಷ್ಟಿಯಿಂದ ಅವರಿಗೆ ಬರಬೇಕಾದ ಹಣವನ್ನು ಅವರ ಅರ್ಜಿ ತೀರ್ಮಾನವಾಗುವವರೆಗೆ ಅಥವಾ ಪಾವತಿ ಮಾಡುವ ಅಧಿಕಾರವುಳ್ಳವರ ಆಸ್ತಿಯನ್ನು ಮುಂಗಡವಾಗಿ ಮುಟ್ಟುಗೋಲು ಹಾಕಲು ಅಧಿಕಾರವಿರುತ್ತದೆ. ಅಲ್ಲದೆ ಕಾಯಿದೆಯಲ್ಲಿ ನೌಕರರಿಗೆ ನಿಗದಿಯಾದ ದಿನಾಂಕದೊಳಗೆ ಮಜೂರಿ ಸಂದಾಯ ಮಾಡದ ಪಕ್ಷದಲ್ಲಿ ಸಂಬಂಧಪಟ್ಟವರಿಗೆ ದಂಡ ವಿಧಿಸಲು ಅವಕಾಶವಿರುತ್ತದೆ.

ಈ ಬಗ್ಗೆ ವಿಧಿಸಬಹುದಾದ ಶಿಕ್ಷೆ ಗರಿಷ್ಟ ಆರು ತಿಂಗಳ ಸಜಾ ಅಥವಾ ಮೂರು ಸಾವಿರ ರೂಪಾಯಿ ದಂಡ ಇಲ್ಲವೆ ಎರಡು ಸೇರಿ ಶಿಕ್ಷೆ ವಿಧಿಸಬಹುದಾಗಿರುತ್ತದೆ.

ಒಟ್ಟಾರೆ ಹೇಳಬೇಕಾದರೆ, ಈ ಕಾಯಿದೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮತ್ತು ಇದರ ಹಿಂದಿರುವ ತತ್ವವನ್ನು ಈಡೇರಿಸುವ ದೃಷ್ಟಿಯಿಂದ ಉದಾರ ನೀತಿಯನ್ನು ಅನುಸರಿಸಬೇಕಾಗಿರುತ್ತದೆ.

ನಮ್ಮ ದೇಶದಲ್ಲಿ ಈಗ ಹೆಚ್ಚು ಕಡಿಮೆ ಸಾರ್ವಜನಿಕ ಸಂಸ್ಥೆಗಳಲ್ಲಾಗಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಾಗಲಿ ನೀಡುತ್ತಿರುವ ವೇತನ ಉತ್ಪಾದನೆಗನುಗುಣವಾಗಿಲ್ಲ. ಕಾರಣ, ವೇತನ ವೇಳೆಯನ್ನು ಅವಲಂಬಿಸಿರುತ್ತದೆ.

ಮಜೂರಿಯ ಮುಖ್ಯಾಂಶಗಳು ಈ ಕೆಳಕಂಡಂತಿವೆ. :

೧. ಮೂಲ ವೇತನ

೨. ತುಟ್ಟಿಭತ್ಯೆ

೩. ಇತರೆ ಭತ್ಯೆಗಳು

೪. ಉತ್ತೇಜಕ ವೇತನ ಯೋಜನೆ (ಕೆಲವು ಸಂಸ್ಥೆಗಳಲ್ಲಿ ಮಾತ್ರ)

ಮೇಲ್ಕಂಡ ನಾಲ್ಕನೆಯದನ್ನು ಬಿಟ್ಟರೆ, ಮಿಕ್ಕವುಗಳ ಹಾಜರಾತಿಯನ್ನು ಅವಲಂಬಿಸಿದೆ. ಆದ್ದರಿಂದ ಉತ್ಪಾದನಾ ಸಂಸ್ಕೃತಿಯ ತತ್ವ (ನೀತಿ) ಕಾರ್ಖಾನೆಗಳಲ್ಲಿ ಕಂಡು ಬರುತ್ತಿಲ್ಲ. ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಮಜೂರಿಯನ್ನು ಸರಿಯಾದ ರೀತಿಯಲ್ಲಿ ನಿಗದಿಪಡಿಸಬೇಕಾಗಿದೆ. ಈ ಮಜೂರಿಯು ಎಲ್ಲಾ ಸಂಸ್ಥೆಗಳ ಒಂದೇ ಆಗಿರಬೇಕಾಗಿಲ್ಲ, ಉತ್ಪಾದನೆಗುನುಗುಣವಾಗಿ ಬೇರೆ ಬೇರೆ ಇರಬಹುದು.