ವ್ಯಾಖ್ಯಾನ

೧೯೩೬ರ ಮಜೂರಿ ಸಂದಾಯ ಅಧಿನಿಯಮದ ಕೆಳಗಿನ ಅಧಿಕಾರವನ್ನು ನ್ಯಾಯಯುತವಾಗಿ ಸ್ವಾಭಾವಿಕ ನ್ಯಾಯಾಲಯದ ತತ್ವಗಳಿಗನುಗುಣವಾಗಿ ಮಾಲೀಕ ಮತ್ತು ಕಾರ್ಮಿಕರಾದ ಎರಡೂ ಕಡೆಯವರಿಗೂ ಸಾಕಷ್ಟು ಅವಕಾಶಗಳನ್ನು ಕೊಡುವುದರ ಮೂಲಕ ನಿರ್ವಹಿಸಬೇಕು. ಅಧಿಕಾರಿಯು ತನಗೆ ಸೂಕ್ತವಾದ ರೀತಿಯಲ್ಲಿ ವಿಚಾರಣೆ ಮಾಡಿ ಅರ್ಜಿಯನ್ನು ತೀರ್ಮಾನಿಸಲು ಅರ್ಹನಾಗಿರುತ್ತಾನೆ. ೧೯೩೬ ಅಧಿನಿಯಮದ ಕಲಂ ೧೫ (೪ಅ) ಪ್ರಕಾರ ಅಧಿಕಾರಿಯು ನಡೆಸುವ ವಿಚಾರಣೆಯನ್ನು ನ್ಯಾಯಾಂಗ ನಡವಳಿಕೆಗಳೆಂದು ಪರಿಗಣಿಸಬೇಕು. ೧೯೩೬ರ ಅಧಿನಿಯಮದ ಕೆಳಗೆ ಮಾಡಿದ ಅದೇಶವನ್ನು ೧೯೮೫ರ ಆಡಳಿತ ನ್ಯಾಯಾಧೀಕರಣದ ಅಧಿನಿಯಮ ಕಲಂ ೧೯ (೧) ಕ್ಕೋಸ್ಕರ ಮಾಡಿದ ಆದೇಶವೆಂದು ಪರಿಗಣಿಸಲಾಗದು. ೧೯೩೬ರ ಅಧಿನಿಯಮದ ಕೆಳಗೆ ಅಧಿಕಾರಿಯು ಮಾಡಿದ ಆದೇಶವನ್ನು ಆಡಳಿತ ನ್ಯಾಯಾಧೀಕರಣ ೧೯೮೫ರ ಕಲಂ (೩ಡಿ) ರ ಸೇವಾ ವಿಷಯವಾಗಿ ಪರಿಗಣಿಸಬಾರದು. ಜನರಲ್ ಮ್ಯಾನೇಜರ್ ಪಶ್ಚಿಮ ರೈಲ್ವೆ “ವಿರುದ್ಧ” ಅಥಾರಿಟಿ ಅಂಡರ್ ದಿ ಪೇಮೆಂಟ್ ಆಫ್ ವೇಜಸ್ ಆಕ್ಟ್, ೧೯೯೪ (೧) ಎಲ್.ಎಲ್.ಜೆ. ೧೦೬೬. ಈ ಕಾಲಂನ್ನು ಕೂಲಂಕುಷವಾಗಿ ಓದಿ ನೋಡಿದರೆ ನಮಗೆ ತಿಳಿಯುವುದೇನೆಂದರೆ, ಮೇಲ್ಮನವಿ ಸಲ್ಲಿಸಲು ಮೂವತ್ತು (೩೦) ದಿನಗಳ ವಾಯಿದೆಯಿದ್ದು, ಜೊತೆಗೆ ಯಾವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದೋ ಅದರ ಪ್ರಯಾಣ ಪತ್ರವನ್ನು ಪಡೆಯಲು ತೆಗೆದುಕೊಂಡ ಕಾಲಾವಧಿಯೂ ಕೂಡಿ ಬರುತ್ತದೆ. ಅಲ್ಲದೆ ಮತ್ತೂ ತಿಳಿದು ಬರುವುದೇನೆಂದರೆ, ಮೇಲ್ಮನವಿ ಬಿನ್ನವತ್ತಳೆ  ಠೇವಣಿ ಪ್ರಮಾಣಿಕ ಪತ್ರ ಲಗತ್ತಿಸದಿದ್ದರೆ ಮೇಲ್ಮನವಿ ನಿಲ್ಲುವುದಿಲ್ಲ. ಅಂದರೆ ಮೇಲ್ಮನವಿ  ಠೇವಣಿ ಮತ್ತು ಠೇವಣಿ ಇಟ್ಟಿದ್ದಕ್ಕೆ ಪ್ರಮಾಣಿಕ ಪತ್ರವನ್ನು ನ್ಯಾಯಾಲಯಕ್ಕೆ ನಿಗದಿಯಾಗಿ ಅವಧಿಯೊಳಗೆ ಮಾಡಿರಬೇಕು. ಮೇಲ್ಮನವಿಯನ್ನು ಠೇವಣಿಯನ್ನು ಇಡುವುದಕ್ಕಿಂತ ಮುಂಚೆ ಸಲ್ಲಿಸಿದರೂ, ಠೇವಣಿಯನ್ನು ನಿಗದಿತ ಅವಧಿಯೊಳಗೆ ಇಟ್ಟು ಅದರ ಪ್ರಾಮಾಣಿಕ ಪತ್ರವನ್ನು ಮೇಲ್ಮನವಿ ಜೊತೆ ಲಗತ್ತಿಸದಿದ್ದರೆ, ಮೇಲ್ಮನವಿಯೂ ಸ್ವೀಕಾರವಾಗುವುದಿಲ್ಲ. ಮತ್ತು ಆ ಮೇಲ್ಮನವಿಯು ಮೇಲ್ಮನವಿಯೆಂದು ಪರಿಗಣಿಸಲರ್ಹವಾಗದು ಹಾಗೂ ಅದನ್ನು ವಜಾ ಮಾಡಲರ್ಹವಾಗಿರುತ್ತದೆ. ಮರುದುರ್ ಕ್ಷೇತ್ರಿಯ ಗ್ರಾಮೀಣ ಬ್ಯಾಂಕ್ “ವಿರುದ್ಧ” ಭಗೆರನ್ ರಾಮ ೧೯೯೫ (೨) ಎಲ್.ಎಲ್.ಜೆ. ೧೦೭೬.

(೧೭,ಆ), ಮಾಲೀಕರ ಷರತ್ತಿಗೊಳಪಟ್ಟ ಆಸ್ತಿಯ ಜಪ್ತಿ ಅಥವಾ ಮಜೂರಿ ಸಂದಾಯ ಮಾಡುವ ಅಧಿಕಾರವುಳ್ಳ ಯಾವುದೇ ವ್ಯಕ್ತಿಯ ಆಸ್ತಿಯ ಜಪ್ತಿ :- ಕಲಂ ೧೫ ಉಪ ಕಲಂ (೨) ಕೆಳಗೆ ಅರ್ಜಿಯನ್ನು ಹಾಕಿದ ನಂತರ ಯಾವುದೇ ವೇಳೆಯಲ್ಲಿ ಅಥವಾ ಕಲಂ (೧೭)ರ ಕೆಳಗೆ ಮೇಲ್ಮನವಿಯನ್ನು ಮಾಲೀಕನಾಗಲಿ ಅಥವಾ ಯಾವುದೇ ವಕೀಲ ಅಥವಾ ಲಿಖಿತ ಅಧಿಕಾರ ಪಡೆದು ಉದ್ಯೋಗಿ ಪರವಹಿಸುವ ಮಾನ್ಯತೆ ಪಡೆದ ಕಾರ್ಮಿಕ ಸಂಘದ ಯಾವುದೇ ಪದಾಧಿಕಾರಿಯಾಗಲಿ ಅಥವಾ ಯಾವುದೇ ನಿರೀಕ್ಷಣಾಧಿಕಾರಿ ಅಥವಾ ಅಧಿಕಾರಿಯಿಂದ ಅಪ್ಪಣೆ ಪಡೆದು ಅರ್ಜಿ ಹಾಕಲರ್ಹವಾದ ಯಾವುದೇ ವ್ಯಕ್ತಿ ಕಲಂ (೩)ರ ಕೆಳಗೆ ಮಜೂರಿ ಸಂದಾಯ ಮಾಡಬೇಕಾದ ಮಾಲೀಕ ಅಥವಾ ಆ ಜವಾಬ್ದಾರಿಯುಳ್ಳ ಯಾವುದೇ ವ್ಯಕ್ತಿ, ಕಲಂ (೧೫) ಅಥವಾ (೧೭)ರ ಕೆಳಗೆ ಆದೇಶ ಮಾಡಲ್ಪಟ್ಟ ಹಣವನ್ನು ಕೊಡಲು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆಂದು ಮನದಟ್ಟಾದರೆ, ಆ ಅಧಿಕಾರಿ ಅಥವಾ ನ್ಯಾಯಾಲಯವು ಸಂದರ್ಭನುಸಾರ, ಕೇಸುಗಳ ಪರಿಸ್ಥಿತಿ ಹೊರತುಪಡಿಸಿ ಅಧಿಕಾರಿ: ಪ್ರಾಧಿಕಾರ ಅಥವಾ ನ್ಯಾಯಾಲಯವು ತಡಮಾಡುವುದರಿಂದ ನ್ಯಾಯ ದೊರಕದೇ ಹೋಗಬಹುದೆಂಬ ಅಭಿಪ್ರಾಯಕ್ಕೆ ಬಂದಾಗ, ಮಾಲೀಕ ಅಥವಾ ಮಜೂರಿ ಸಂದಾಯದ ಜವಾಬ್ದಾರಿಯುಳ್ಳ ವ್ಯಕ್ತಿಗೆ ಸಾಕಷ್ಟು ಅವಕಾಶ ನೀಡಿ ಅದರ ವಾದ ಕೇಳಿ ಮಾಲೀಕನ ಅಥವಾ ಮಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳ ವ್ಯಕ್ತಿಯ ಆಸ್ತಿಯನ್ನು ಆದೇಶಿಸಲ್ಪಟ್ಟ ಹಣವನ್ನು ವಸೂಲಿ ಮಾಡಿಕೊಳ್ಳಬಹುದಾದಷ್ಟು ಆಸ್ತಿಯನ್ನು ಜಪ್ತಿ ಮಾಡಲು ಆದೇಶಿಸಬಹುದು.

೨) ಸಿವಿಲ್ ಪ್ರಕ್ರಿಯೆ ಸಂಹಿತೆಯ ೧೯೦೮ರ (೫ರ ೧೯೦೮) ಪ್ರಕಾರ ತೀರ್ಪಿಗೆ ಮುಂಚೆ ಜಪ್ತಿ ಮಾಡಲು ಅನುಸರಿಸತಕ್ಕ ಉಪಬಂಧಗಳೇ ಈ ಉಪ ಕಲಂ (೧)ರ ಪ್ರಕಾರ ಮಾಡುವ ತೀರ್ಪಿಗೆ ಮುಂಚೆ ಮಾಡುವ ಜಪ್ತಿಗೂ ಅನ್ವಯಿಸುತ್ತದೆ.

ವ್ಯಾಖ್ಯಾನ

ಉಚ್ಚ ನ್ಯಾಯಾಲಯದ ಪುನರ್ ವೀಕ್ಷಣಾ ಅಧಿಕಾರ ವ್ಯಾಪ್ತಿಯನ್ನು ತೆಗೆದು ಹಾಕುವ ಪ್ರಶ್ನೆ ಬಂದಾಗ ಮೇಲ್ಮನವಿ ಪ್ರಾಧಿಕಾರವು ಹೆಸರಿಸಲಾದ ವ್ಯಕ್ತಿಯಾಗಿದ್ದರೆ ಮತ್ತು ಆ ನ್ಯಾಯಾಲಯವು ಉಚ್ಚನ್ಯಾಯಾಲಯಕ್ಕೆ ಅಧೀನವಾಗಿಲ್ಲದಿದ್ದರೆ ಮಾತ್ರ ಉದ್ಭವಿಸುತ್ತದೆ. ಈ ಅಧಿನಿಯಮದ ೧ ಕಲಂ ೧೭ (೧)ರ ಕೆಳಗೆ ಬರುವ ಮೇಲ್ಮನವಿ ನ್ಯಾಯಾಧಿಕರಣಗಳು ಲಘುವ್ಯವಹಾರ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳಾಗಿವೆ ಮತ್ತು ಹೆಸರಿಸಲಾದ ನ್ಯಾಯಾಧೀಶರಾಗಿಲ್ಲ. ಎರಡೂ ನ್ಯಾಯಾಲಯಗಳು ಉಚ್ಚ ನ್ಯಾಯಾಲಯಕ್ಕೆ ಅಧೀನ ನ್ಯಾಯಾಲಯಗಳಾಗಿದ್ದ ಸಿವಿಲ್ ಪ್ರಕ್ರಿಯೆ ಸಂಹಿತೆ ೧೧೫ರ ವ್ಯಾಪ್ತಿಯೊಳಗೆ ಬರುತ್ತವೆ. ಸುರೇಂದ್ರನಾಥನ್ ನಾಯಕ “ವಿರುದ್ಧ” ಸೀನಿಯರ್ ಡಿವಿಜನಲ್ ಆಫೀಸರ್ ರೈಲ್ವೆ ೧೯೯೮ (೧) ಎಲ್.ಎಲ್.ಜೆ. ೨೨೭. ಪರ್ಯಾಯ ಪರಿಹಾರಕ್ಕಾಗಿ ರಿಟ್ ಅರ್ಜಿಯು ನಿಲ್ಲುವುದಿಲ್ಲ. ನಿಗದಿತ ಕಾಲಾವಧಿಯಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳದಿದ್ದರೆ, ಸಂವಿಧಾನ ದತ್ತವಾದ ಅನುಚ್ಛಾನದ ೨೨೬ರ ವಿವೇಚನಾತ್ಮಕ ವ್ಯಾಪ್ತಿಯ ಅಧಿಕಾರವನ್ನು ಪಡೆಯುವುದು ಸರಿಯಲ್ಲ ೧೯೮೨ ಡಬ್ಲ್ಯೂ ಎಲ್ ಎನ್ (ಯುಸಿ) ೨೧೦.

೧೮. ಕಲಂ ೧೫ರ ಉಪ ಕಲಂ ಕೆಳಗೆ ನೇಮಕ ಮಾಡಿದ ಅಧಿಕಾರಿಗಳ ಅಧಿಕಾರ

ಕಲಂ ೧೫ ಉಪ ಕಲಂ (೧)ರ ಕೆಳಗೆ ನೇಮಕ ಮಾಡಿದ ಪ್ರತಿಯೊಬ್ಬ ಅಧಿಕಾರಿಯು, ೧೯೦೮ ಸಿವಿಲ್ ಪ್ರಕ್ರಿಯೆ ಸಂಹಿತೆಯ ಕೆಳಗಿನ ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರವನ್ನು ಸಾಕ್ಷಿಗಳ ಹೇಳಿಕೆ ಪಡೆಯಲು, ಸಾಕ್ಷಿಗಳ ಹಾಜರಿ ಪಡೆಯಲು, ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಲು ಹೊಂದಿರುತ್ತಾರೆ ಮತ್ತು ಆ ಎಲ್ಲಾ ಅಧಿಕಾರಿಯು ಅಧ್ಯಾಯ ೨೬ರ ದಂಡ ಪ್ರಕ್ರಿಯೆ ಸಂಹಿತೆ ೧೯೭೩ (೨ರ ೧೯೭೪)ರ ಕಲಂ ೧೯೫ರಕ್ಕನುಗುಣವಾದ ಅಧಿಕಾರವನ್ನು ಹೊಂದಿರುತ್ತಾರೆ.

ವ್ಯಾಖ್ಯಾನ

ಅಧಿನಿಯಮದ ಕಲಂ ೧೮ರಲ್ಲಿ ದತ್ತವಾದ ಅಧಿಕಾರದ ಪ್ರಕಾರ, ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಚಲಾಯಿಸುವಾಗ, ಅಧಿಕಾರಿಯು ೧೯೦೮ರ ಸಿವಿಲ್ ಪ್ರಕ್ರಿಯೆ ಸಂಹಿತೆ ಮೊದಲನೆ ಅನುಸೂಚಿಯಲ್ಲಿರುವ ನಡವಳಿಕೆಗಳ ಆದೇಶಗಳಿಗನುಗುಣವಾಗಿ ತನಗೆ ಸರಿಯೆಂದು ಕಂಡುಬಂದ ಬದಲಾವಣೆಯೊಂದಿಗೆ ಮೂಲ ವಿಷಯದ ಸಾರಕ್ಕೆ ಧಕ್ಕೆ ಬಾರದಂತೆ ತನ್ನ ಮುಂದಿರುವ ವಿಷಯಕ್ಕೆ ಅಳವಡಿಸಿಕೊಳ್ಳುವುದು ಮತ್ತು ಅವುಗಳಲ್ಲಿ ವ್ಯಕ್ತವಾದ ಎಲ್ಲಾ ಅಧಿನಿಯಮದ ಉಪಬಂಧಗಳು ಅಥವಾ ನಿಯಮಗಳೊಂದಿಗೆ ಘರ್ಷಣೆಗೊಳಪಟ್ಟಿರುವುಗಳನ್ನು ಹೊರತುಪಡಿಸುವುದು. ಪರಿಶಿಷ್ಟ 11 ನಿಯಮ 11 ನ್ನು ನೋಡಿ.

೧೯. ಕೆಲವು ನಿರ್ದಿಷ್ಟ ಮೊಕದ್ದಮೆಗಳಲ್ಲಿ ಮಾಲೀಕರಿಂದ ಮಾಡುವ ಅಧಿಕಾರ ವಸೂಲಿ  ಸಂದಾಯದ (ತಿದ್ದುಪಡಿ) ಅಧಿನಿಯಮ ೧೯೬೪ (೫೩ರ ೧೯೬೪) ೧-೨-೯೬೫ರ ಮೂಲಕ ತೆಗೆದುಹಾಕಲಾಗಿದೆ.

೨೦. ಅಧಿನಿಯಮದ ಪ್ರಕಾರ ಅಪರಾಧಗಳಿಗೆ ದಂಡ

೧. ಉದ್ಯೋಗಿಗಳಿಗೆ ಮಜೂರಿ ಸಂದಾಯ ಮಾಡಬೇಕಾದ ಜವಾಬ್ದಾರಿಯುಳ್ಳ ಯಾವುದೇ ವ್ಯಕ್ತಿ ಈ ಕೆಳಕಂಡ ಕಲಂಗಳ ಉಪಬಂಧಗಳನ್ನು ಉಲ್ಲಂಘಿಸಿದರೆ; ಅಂದರೆ ಕಲಂ ೫ ಉಪ ಕಲಂ ೪ನ್ನು ಹೊರತುಪಡಿಸಿ ಅಥವಾ ಕಲಂ ೭, ಕಲಂ ೮, ಉಪಕಲಂಗಳನ್ನು ಬಿಟ್ಟು ಅಥವಾ ಹೊರತುಪಡಿಸಿ, ಕಲಂ ೯, ಕಲಂ ೧೦ ಉಪ ಕಲಂ ೨ನ್ನು ಬಿಟ್ಟು ಮತ್ತು ಕಲಂ ೧೧ ರಿಂದ ೧೩ ಎರಡೂ ಸೇರಿ, ಅವರಿಗೆ ಕನಿಷ್ಠ ಇನ್ನೂರು ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಒಂದು ಸಾವಿರದವರೆಗೆ ದಂಡ ನೀಡುವಂತೆ ಶಿಕ್ಷಿಸಬಹುದು.

೨. ಯಾವುದೇ ವ್ಯಕ್ತಿ ಕಲಂ ೪, ಕಲಂ ೫ರ ಉಪಕಲಂ ೪, ಕಲಂ ೬, ಕಲಂ ೮ರ ಉಪ ಕಲಂ ೮, ಕಲಂ ೧೦ರ, ಉಪಕಲಂ ೨ ಅಥವಾ ಕಲಂ ೨೫ನ್ನು, ಉಲ್ಲಂಘಿಸಿದವರಿಗೆ ಐನೂರು ರೂಪಾಯಿಗಳವರೆಗೆ ದಂಡ ವಿಧಿಸುವ ಮೂಲಕ ಶಿಕ್ಷಿಸಬಹುದು.

೩. ಈ ಅಧಿನಿಯಮದ ಪ್ರಕಾರ ದಾಖಲೆಗಳನ್ನು ಅಥವಾ ಹಾಜರಾತಿ ಪುಸ್ತಕಗಳನ್ನು ನೋಡಿಕೊಳ್ಳಬೇಕಾದವನು ಇಲ್ಲದೆ ಇಟ್ಟುಕೊಳ್ಳಬೇಕಾದವನು ಅಥವಾ ಯಾವುದೇ ಸಮಾಚಾರವನ್ನು ಒದಗಿಸಬೇಕಾದವನು ಅಥವಾ ಮರಳಿ ಕೊಡಬೇಕಾದವನು.

ಅ) ಹಾಜರಿ ಪುಸ್ತಕ ಅಥವಾ ದಾಖಲೆಗಳನ್ನು ಸರಿಯಾಗಿ ಇಡದೆ ಹೋದರೆ ಅಥವಾ

ಆ) ಉದ್ದೇಶಪೂರ್ಣವಾಗಿ ತಿರಸ್ಕರಿಸುವುದು ಅಥವಾ ಸಕಾರಣವಿಲ್ಲದೆ ಬೇಕಾದ ಸಮಾಚಾರವನ್ನು ಒದಗಿಸಲು ಉದಾಸೀನ ಮಾಡುವುದು ಅಥವಾ ವಾಪಸು ನೀಡದಿರುವುದು ಅಥವಾ

ಇ) ಉದ್ದೇಶಪೂರ್ವಕವಾಗಿ ನೀಡುವುದು ಅಥವಾ ನೀಡುವಂತೆ ಯಾವುದೇ ಸಮಾಚಾರವನ್ನು ಮಾಡುವುದು ಅಥವಾ ಸುಳ್ಳೆಂದು ಗೊತ್ತಿದ್ದರೂ ಅದನ್ನು ನೀಡುವುದು ಅಥವಾ

ಈ) ಉತ್ತರಿಸಲು ತಿರಸ್ಕರಿಸುವುದು ಅಥವಾ ಅಧಿನಿಯಮದ ಕೆಳಗೆ ಉದ್ಭವಿಸಬಹುದಾದಂತಹ ಯಾವುದೇ ಪ್ರಶ್ನೆಗಳಿಗೆ ಉದ್ದೇಶಪೂರ್ವಕವಾಗಿ ಸುಳ್ಳು ಸಮಾಚಾರವನ್ನು ಒದಗಿಸುವುದು. ಇಂತಹ ಪ್ರತಿಯೊಂದು ಅಪರಾಧಕ್ಕೂ ಇನ್ನೂರು ರೂಪಾಯಿಗಿಂತ ಕಡಿಮೆಯಿಲ್ಲದಂತೆ ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸುವುದರ ಮೂಲಕ ಶಿಕ್ಷಿಸುವುದು.

೪. ಈ ಅಧಿನಿಯಮಕ್ಕೊಳಪಟ್ಟ ಯಾವುದೇ ಪರೀಕ್ಷಣಾಧಿಕಾರಿ ತನ್ನ ಕರ್ತವ್ಯವನ್ನು, ನಿರ್ವಹಿಸುವುದಕ್ಕೆ ಅಡ್ಡಿ ಪಡಿಸಿದರೆ ಅಥವಾ

ಅ) ತಿರಸ್ಕರಿಸಿದರೆ ಅಥವಾ ಪರೀಕ್ಷಣಾಧಿಕಾರಿಗೆ ಅವನು ಬೇಕಾದ್ದನ್ನು ನಮೂದಿಸಲು ಪರೀಕ್ಷಿಸಲು ತನಿಖೆ ಮಾಡಲು, ಮೇಲ್ವಿಚಾರಣೆ ನಡೆಸಲು, ಅಧಿಕಾರ ನೀಡಲ್ಪಟ್ಟ ಅಧಿನಿಯಮದ ಪ್ರಕಾರ ರೈಲ್ವೆ ಬಗ್ಗೆ, ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಮತ್ತಾವುದೇ ಔದ್ಯೋಗಿಕ ಸಂಸ್ಥೆ ಬಗ್ಗೆ ವಿಚಾರಣೆ ಮಾಡಲು ನ್ಯಾಯಬದ್ಧ ಅವಕಾಶ ಕಲ್ಪಿಸಿಕೊಡಲು ಉದಾಸೀನ ಮಾಡಿದರೆ.

ಆ) ಈ ಅಧಿನಿಯಮದ ಪ್ರಕಾರ ಇಟ್ಟಿರಬೇಕಾದ ಯಾವುದೇ ನೋಂದಣಿ ಪುಸ್ತಕ ಅಥವಾ ಯಾವುದೇ ದಾಖಲೆಗಳನ್ನು ಪರೀಕ್ಷಣಾಧಿಕಾರಿ ನೀಡಬೇಕೆಂದು ತಗಾದೆ ಮಾಡಿದಾಗ ಉದ್ದೇಶಪೂರ್ವಕವಾಗಿ ನೀಡಲು ನಿರಾಕರಿಸಿದರೆ: ಅಥವಾ

ಇ) ತಪ್ಪಿಸಿದರೆ ಅಥವಾ ತಪ್ಪಿಸಲು ಪ್ರಯತ್ನಪಟ್ಟರೆ ಅಥವಾ ಈ ಅಧಿನಿಯಮದ ಪ್ರಕಾರ ಕೆಲಸ ಮಾಡುತ್ತಿರುವ ಪರೀಕ್ಷಣಾಧಿಕಾರಿ ಮಾಡುವ ತನಿಖೆಗೆ ಒಳಪಡುವುದನ್ನು ಅಥವಾ ಅವರ ಮುಂದೆ ಹೋಗದಂತೆ ತಡೆಯಲು ಯಾವುದೇ ಯತ್ನವನ್ನು ಮಾಡಿದರೆ, ಅಂತಹವರನ್ನು ಇನ್ನೂರು ರೂಪಾಯಿಗಳಿಗೆ ಕಡಿಮೆ ಇಲ್ಲದಂತೆ ಒಂದು ಸಾವಿರದವರೆವಿಗೂ ದಂಡ ವಿಧಿಸುವುದರ ಮೂಲಕ ಶಿಕ್ಷಿಸಬಹುದು.

೫) ಈ ಅಧಿನಿಯಮದ ಪ್ರಕಾರ ಅಪರಾಧಗಳಿಗೆ ಯಾವುದೇ ವ್ಯಕ್ತಿ ಶಿಕ್ಷಿಸಲ್ಪಟ್ಟಿದ್ದರೆ, ಪುನಃ ನಿಯಮದ ಉಪಬಂಧಗಳನ್ನು ಉಲ್ಲಂಘಿಸುವ ಅಪರಾಧ ಮಾಡಿದರೆ, ಅಂಥವನಿಗೆ ಮುಂದೆ ಒಂದು ತಿಂಗಳಿಗಿಂತ ಕಡಿಮೆಯಿಲ್ಲದಂತೆ ಆರು ತಿಂಗಳವರೆಗಿನ ಜೈಲು ವಾಸದ ಶಿಕ್ಷೆಯನ್ನು ವಿಧಿಸಬಹುದಲ್ಲದೆ ಜೊತೆಗೆ ಐನೂರು ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ಮೂರು ಸಾವಿರ ರೂಪಾಯಿಗಳವರೆಗೆ ದಂಡವನ್ನು ವಿಧಿಸಬಹುದು. ಆದರೆ ಈ ಉಪಕಲಂಗೋಸ್ಕರವಾಗಿ ಈಗ ಮಾಡಿರುವ ಅಪರಾಧವನ್ನು ಗಣನಿಗೆ ತೆಗೆದುಕೊಂಡು ಶಿಕ್ಷಿಸಲು, ಈ ಅಪರಾಧವನ್ನು ಪರೀಕ್ಷಕರು ಗಣನೆಗೆ ತೆಗೆದುಕೊಳ್ಳುವುದಕ್ಕಿಂತ ಎರಡೂ ವರ್ಷಗಳಿಗಿಂತ ಮೇಲ್ಪಟ್ಟು ಹಿಂದೆ ನಡೆದ ಶಿಕ್ಷೆಯನ್ನು ಗಣನೆಗೆ ತೆಗೆದುಕೊಳ್ಳಬಾರದು.

೬. ಯಾವುದೇ ವ್ಯಕ್ತಿ ತಪ್ಪಿದರೆ ಅಥವಾ ಅಧಿಕಾರಿಯು ಗೊತ್ತು ಮಾಡಿದ ನಿಗದಿತ ತಾರೀಖಿಗೆ ಮಜೂರಿ ಕೊಡುವುದನ್ನು ಉದ್ದೇಶಪೂರ್ವಕವಾಗಿಯೇ ಕೊಡದೆ ಉದಾಸೀನ ಮಾಡಿದರೆ, ಅಂಥವನಿಗೆ ನೀಡಬಹುದಾದ ಮತ್ತಾವುದೇ ಶಿಕ್ಷೆಗೆ ಪೂರ್ವಗ್ರಹವಿಲ್ಲದಂತೆ ಹೆಚ್ಚುವರಿ ದಂಡವನ್ನು ದಿನವೊಂದಕ್ಕೆ ಒಂದು ನೂರು ರೂಪಾಯಿವರೆಗೆ ಮಜೂರಿಯನ್ನು ಕೊಡದೇ ಅಥವಾ ಉದಾಸೀನ ಮಾಡುತ್ತಿರುವವರೆಗೂ ಕೊಡಬೇಕು.

ವ್ಯಾಖ್ಯಾನ

ಕಲಂಗಳು ೨೦ ಮತ್ತು ೨೧ ಈ ಅಧಿನಿಯಮದ ಉಪಬಂಧಗಳನ್ನು ಉಲ್ಲಂಘಿಸಿದುದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತದೆ. ಆದರೆ, ಕಾನೂನು ಕ್ರಮ ಜರುಗಿಸುವ ಮುನ್ನ ಕಲಂ ೧೫ರ ಕೆಳಗೆ ನೀಡಬಹುದಾದ ಹಕ್ಕು ಸಾಧನೆಯನ್ನು ಭಾಗಶಃ ಅಥವಾ ಪೂರ್ಣವಾಗಿ ಕೊಡಲಾಗಿದೆಯೆಂಬುದನ್ನು ದೃಢಪಡಿಸಿಕೊಳ್ಳಬೇಕು ಮತ್ತು ಈ ಅಧಿನಿಯಮದ ಕೆಳಗೆ ಅಧಿಕಾರ ಹೊಂದಿದ ಅಧಿಕಾರಿ ಅಥವಾ ಮೇಲ್ಮನವಿ ಅಧಿಕಾರಿಯು, ಈ ಕಾನೂನು ಕ್ರಮ ಜರುಗಿಸುವ ಅವಶ್ಯಕತೆಯಿದೆಯೆಂದು ಭಾವಿಸಬೇಕು.

ಕಲಂ ೨೦ (೨) ಮತ್ತು (೩) (ಜಿ.ಪತ್ರಿ ಬಸವನಗೌಡ) ಕ್ಷುಲ್ಲಕ ಮೊದದ್ದಮೆ-ಸಮನ್ಸ್ ನೀಡಲಾಗಿದ್ದು, ಅಪಾದಿತನ ಪರವಾಗಿ ಅಪಾದನೆಗಳನ್ನು ಒಪ್ಪಿಕೊಳ್ಳಲು ಮತ್ತು ಅವನು ವಿಚಾರಣೆಗೆ ಗೈರು ಹಾಜರಾಗಲು ಒಪ್ಪಿಗೆ ಕೋರಿದ ಅರ್ಜಿ-ತಿರಸ್ಕೃತ-ದಂಡಾಧಿಕಾರಿಯು ಸಮನ್ಸ್ ಕೇಸಾಗಿ ನಡೆಸಲು ತೀರ್ಮಾನಿಸಿ-ಸಕಾರಣ ನೀಡಿ-ಕ್ಷುಲ್ಲಕ ಕೇಸನ್ನು ಒಟ್ಟಾರೆ ತೀರ್ಮಾನಿಸಲು ತಿರಸ್ಕೃತ ಅರ್ಜಿ ವಜಾ ಮಾಡಿದ್ದನ್ನು ಎತ್ತಿ ಹಿಡಿಯಲಾಯಿತು. ಡಿ.ದಾಸಪ್ಪ “ವಿ” ಕರ್ನಾಟಕ ರಾಜ್ಯ ಮತ್ತು ಇನ್ನೊಬ್ಬರು. (ಕ್ರಿ.ರಿವಿಸನ್ ಅರ್ಜಿ ಸಂಖ್ಯೆ ೨೩೦:೧೯೯೮, ದಿನಾಂಕ ೧೩.೬.೨೦೦೦) ೨೦೦೧ (೨) ಕ.ಲಾ.ಜ.ಪುಟ ೨೮೨:ಐಎಲ್ ಆರ್ ೨೦೦೧ (೧) ಕರ್ನಾಟಕ ೧೩೭೩.

೨೧. ಅಪರಾಧಗಳ ಬಗ್ಗೆ ವಿಚಾರಣೆ ನಡೆಸಲು ಅನುಸರಿಸಬೇಕಾದ ಕಾರ್ಯ ವಿಧಾನ

೧. ಕಲಂ ೨೦ ಉಪ ಕಲಂ (೧)ರ ಕೆಳಗೆ ನಡೆದಿದೆಯೆನ್ನಲಾದ ಯಾವುದೇ ಅಪರಾಧಗಳ ಬಗ್ಗೆ ಯಾವುದೇ ನ್ಯಾಯಾಲಯವು, ಕಲಂ ೧೫ರ ಅಪರಾಧ ನಡೆಸಿರುವುದಕ್ಕೆ ಸಕಾರಣವನ್ನು ನೀಡಿ, ಅರ್ಜಿಯನ್ನು ಹಾಕಿದರೆ, ಆ ಅರ್ಜಿಯನ್ನು ಈ ಕಲಂ ಕೆಳಗೆ ಅಧಿಕಾರವುಳ್ಳ ಅಧಿಕಾರಿ ಅಥವಾ ಮೇಲ್ಮನವಿ ನ್ಯಾಯಾಲಯ ಪೂರ್ಣವಾಗಿ ಅಥವಾ ಭಾಗಶಃ ಮಜೂರಾತಿ ನೀಡದ ಹೊರತು ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ.

೨. ದೂರ ಅರ್ಜಿ ಸಲ್ಲಿಸಲು ಮಂಜೂರಾತಿ ನೀಡುವ ಮುನ್ನ, ಯಾರ ವಿರುದ್ಧ ಕಲಂ ೨೦ ಉಪಕಲಂ (೧)ರ ಕೆಳಗೆ ಮಾಡಿರುವ ಅಪರಾಧದ ಬಗ್ಗೆ ಅರ್ಜಿಯನ್ನು ಹಾಕಲಾಗಿದೆಯೋ, ಅವರಿಗೆ ಕಲಂ ೧೫ರ ಕೆಳಗೆ ಅಧಿಕಾರದತ್ತವಾದ ಅಧಿಕಾರಿ ಅಥವಾ ಮೇಲ್ಮನವಿ ನ್ಯಾಯಾಲಯ ಹೇಗಿದೆಯೋ ಹಾಗೆ, ಈ ಬಗ್ಗೆ ಸಕಾರಣ ಕೇಳಿ ಅವರ ಅಭಿಪ್ರಾಯ ತಿಳಿಸಲು ಅವಕಾಶ ನೀಡಿ, ಮಂಜೂರಾತಿ ಏಕೆ ನೀಡಬಾರದೆಂಬುದಕ್ಕೆ ಸಕಾರಣ ನೀಡಬೇಕೆಂದು ಮತ್ತು ತಪ್ಪಿತಸ್ಥರು ಅಧಿಕಾರಿಗೆ ಆಗಲಿ ಅಥವಾ ಮೇಲ್ಮನವಿ ನ್ಯಾಯಾಲಯಕ್ಕೆ ಆಗಲಿ ಸಮಂಜಸವೆನಿಸತಕ್ಕ ಉತ್ತರ ನೀಡಿ, ಎಸಗಿದ ತಪ್ಪು.

(ಅ) ಸದ್ಭಾವನೆಯಿಂದಾದ ತಪ್ಪು ಅಥವಾ ಸದ್ಭಾವನೆಯ ವಿವಾದದಿಂದಾಗಿ ಉದ್ಯೋಗಿಗೆ ಸಂದಾಯ ಮಾಡಬೇಕಾಗಿದ್ದ ಹಣದ ಬಗ್ಗೆ ಆಗಿದ್ದರೆ,

(ಆ) ಅಥವಾ ತುರ್ತುಪರಿಸ್ಥಿತಿ ಉಂಟಾದುದರಿಂದ ಅಥವಾ ಅಸಾಧಾರಣವಾದ ಪರಿಸ್ಥಿತಿ ಇದ್ದುದರಿಂದ ಮಜೂರಿ ಸಂದಾಯದ ಜವಾಬ್ದಾರಿಯು, ವ್ಯಕ್ತಿಯು ಎಷ್ಟೇ ಜಾಗರೂಕನಾಗಿದ್ದರೂ ಸಹ ಸರಿಯಾದ ವೇಳೆಗೆ ಸಂದಾಯ ಮಾಡಲಾಗದ ಪರಿಸ್ಥಿತಿ ಉಂಟಾಗಿದ್ದರೆ.

(ಇ) ಉದ್ಯೋಗಿಯು ಅರ್ಜಿ ಹಾಕದೇ ಹೋಗಿದ್ದರೆ ಅಥವಾ ಸಂದಾಯ ಮಾಡಿದ್ದನ್ನು ಸ್ವೀಕರಿಸದೇ ಹೋಗಿದ್ದರೆ.

೩. ಯಾವುದೇ ನ್ಯಾಯಾಲಯವು ಕಲಂ ಅದಕ್ಕೆ ದೂರು ನೀಡದ ಅಥವಾ ನಿರೀಕ್ಷಕರು ಈ ಅಧಿನಿಯಮದ ಕೆಳಗೆ ಅನುಮೋದನೆ ನೀಡದ ಹೊರತು, ಕಲಂ ೪ ಅಥವಾ ಕಲಂ ೬ ಅಥವಾ ಕಲಂ ೨೬ರ ಕೆಳಗೆ ರಚಿಸಿರುವ ನಿಯಮಗಳ ಉಲ್ಲಂಘನೆಗಾಗಿ ಮಾಡಿದುದನ್ನು ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ.

(೩ಅ) ಯಾವುದೇ ನ್ಯಾಯಾಲಯವು ಕಲಂ ೨೦ರ ಉಪ ಕಲಂ ೪ ಅಥವಾ ೬ನ್ನು ಉಲಂಘನೆ ಮಾಡಿದ ಅಪರಾಧವನ್ನು, ಈ ದಿಶೆಯಲ್ಲಿ ದೂರು ಮಾಡಿದ ಅಥವಾ ಅಧಿನಿಯಮದ ಪ್ರಕಾರ ನಿರೀಕ್ಷಕರು ಅನುಮೋದನೆ  ನೀಡದ ಹೊರತು ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ.

೪. ಕಲಂ ೨೦ ಉಪ ಕಲಂ (೧)ರ ಕೆಳಗೆ ಮಾಡಿರಬಹುದಾದ ಯಾವುದೇ ಅಪರಾಧಕ್ಕೆ ದಂಡವನ್ನು ವಿಧಿಸುವ ಮುನ್ನ. ಕಲಂ ೧೫ರ ಕೆಳಗಿನ ಯಾವುದೇ ನ್ಯಾಯಾಂಗ ವಿಚಾರಣೆಯಲ್ಲಿ ಈಗಾಗಲೇ ಅಪರಾಧಿಗೆ ವಿಧಿಸಿರಬಹುದಾದ ಪರಿಹಾರದ ಮೊತ್ತವನ್ನು ಗಣನೆಗೆ ತೆಗೆದುಕೊಳ್ಳತಕ್ಕದು.

೨೨. ದಾವೆಗಳ ನಿಷೇಧ

ಯಾವುದೇ ನ್ಯಾಯಾಲಯವು ಮಜೂರಿಯನ್ನು ಅಥವಾ ವೇತನದಲ್ಲಿ ಕಡಿತ ಮಾಡಿದ್ದನ್ನು ವಸೂಲಿ ಮಾಡಲು ಯಾವ ದಾವೆಯನ್ನೂ ಸ್ವೀಕರಿಸಬಾರದು. ಅಂದರೆ ಆ ರೀತಿ ಕೋರಿದ ಮೊತ್ತವು:

ಅ) ಕಲಂ ೧೫ರ ಕೆಳಗೆ ವಾದಿಯ ಪರವಾಗಿ ನೀಡಿದ ಆದೇಶಕ್ಕೊಳಪಟ್ಟಿದ್ದರೆ ಅಥವಾ

ಇ) ಕಲಂ ೧೫ರ ವಿಚಾರಣೆಯಲ್ಲಿ ತೀರ್ಮಾನಿಸಿದ ತೀರ್ಪಿನಲ್ಲಿ ಸೇರಿದ್ದು ವಾದಿಗೆ ಸಂಬಂಧಪಟ್ಟಿಲ್ಲವಾದರೆ ಅಥವಾ ಈ ಕಲಂ ೧೫ರ ಕೆಳಗೆ ಹಾಕಿದ ಅರ್ಜಿ ಮೂಲಕ ವಸೂಲಿ ಮಾಡಲ್ಪಟ್ಟಿದ್ದಾರೆ.

ವ್ಯಾಖ್ಯಾನ

ಮಜೂರಿ ಸಂದಾಯ ಅಧಿನಿಯಮ ಮತ್ತು ಔದ್ಯೋಗಿಕ ವಿವಾದಗಳ ಅಧಿನಿಯಮಗಳೆರಡೂ ವಿಶೇಷ ಶಾಸನಗಳು ಮತ್ತು ಅದರಿಂದಾಗಿ ಸಾಮಾನ್ಯ, ವಿಶೇಷ ಹಾಗೂ ಒಂದಕ್ಕೊಂದರ ವಿರೋಧ ಸಿದ್ಧಾಂತ ಇಲ್ಲಿ ಬರುವುದಿಲ್ಲ. ಮಜೂರಿ ಸಂದಾಯ ಅಧಿನಿಯಮದ ಕಲಂ ೧೫ರ ಕೆಳಗೆ ಒದಗಿಸಿರುವ ಪರಿಹಾರ ಹಾಗೂ ಔದ್ಯೋಗಿಕ ವಿವಾದಗಳ ಅಧಿನಿಯಮದ ಕಲಂ ೧೦ರ ಕೆಳಗೆ  ಅಭಿಪ್ರಾಯ ಕೋರಿ ಮನವಿ ಸಲ್ಲಿಸುವಿಕೆಯು ಸ್ವತಃ ಕ್ರಮವಾಗಿದ್ದು ಮತ್ತು ಪರ್ಯಾಯವಾಗಿದ್ದು ಒಂದು ಮತ್ತೊಂದನ್ನು ಬೇರ್ಪಡಿಸುವುದಿಲ್ಲ. ಔದ್ಯೋಗಿಕ ವಿವಾದಗಳ ಅಧಿನಿಯಮದ ಕಲಂ ೧೦ರ ಕೆಳಗಿನ ಪರಿಹಾರವು ಹೆಚ್ಚಿನ ವ್ಯಾಪ್ತಿಯುಳ್ಳದ್ದಾಗಿದ್ದು, ಮಜೂರಿ  ಸಂದಾಯ ಅಧಿನಿಯಮ ಕಲಂ ೧೫ರ ಕೆಳಗೆ ಒದಗಿಸಿರುವ ಪರಿಹಾರಕ್ಕಿಂತ ಅನುಕೂಲಕರವಾಗಿದೆ. ಆದುದರಿಂದ ಈ ಎರಡೂ ಅಧಿನಿಯಮಗಳಲ್ಲಿ ಒದಗಿಸಿರುವ ಎರಡು ಪರಿಹಾರಗಳಲ್ಲಿ ಯಾವುದನ್ನು ಪಡೆಯಬೇಕೆಂಬುದು, ಕಾರ್ಮಿಕನು ಮಜೂರಿ ಸಂದಾಯ ಅಧಿನಿಯಮ ಮತ್ತು ಔದ್ಯೋಗಿಕ ವಿವಾದಗಳ ಅಧಿನಿಯಮಗಳಿಗೆ ಒಳಪಟ್ಟಿದ್ದರೆ ಅದು ಅವನಿಗೆ ಬಿಟ್ಟ ವಿಷಯ. ವೆಸ್ಪರ್ನ್ ಕೋಲ್ ಫೀಲ್ಡ್ ಲಿಮಿಟೆಡ್ “ವಿರುದ್ಧ” ಕೇಂದ್ರ ಸರಕಾರ ಔದ್ಯೋಗಿಕರಣ-ಕಾರ್ಮಿಕ ನ್ಯಾಯಾಲಯ ೧೯೩೩ (೨) ಎಲ್.ಎಲ್.ಜೆ. ೩೩೫.

ಮಜೂರಿ ಸಂದಾಯದ ಅಧಿನಿಯಮದ ಕಲಂ ೧೫ರ ಕೆಳಗೆ ರಚಿಸಿರುವ ಅಧಿಕಾರಿಯ ವ್ಯಾಪ್ತಿಯಲ್ಲಿ ಬರುವ ವಿಷಯಗಳನ್ನು ಸ್ವೀಕರಿಸಲು ಕಲಂ ೨೨ರ ಕೆಳಗೆ ನ್ಯಾಯಾಲಯದ ವ್ಯಾಪ್ತಿಯನ್ನು ಹೊರತುಪಡಿಸಿರುವುದರಿಂದ, ಕಾರ್ಮಿಕ ನ್ಯಾಯಾಲಯವು ಸಾಮಾನ್ಯ ವ್ಯಾಪ್ತಿಯ ನ್ಯಾಯಾಲಯವಲ್ಲವಾಗಿರುವುದರಿಂದ, ಈ ಸಂಬಂಧ ದಾವಾವನ್ನು ಸ್ವೀಕರಿಸುವ ಹಾಗಿಲ್ಲ. ಅಧಿನಿಯಮದ ಕಲಂ ೨೨ದಾವಾ ಹಾಕುವುದನ್ನು ನಿಷೇಧಿಸಿದೆ. ಆದರೆ ಕಾರ್ಮಿಕ ನ್ಯಾಯಾಲಯವು ಸಿವಿಲ್ ನ್ಯಾಯಾಲಯವಲ್ಲವಾದುದರಿಂದ ಮತ್ತು ಔದ್ಯೋಗಿಕ ವಿವಾದಗಳ ಅಧಿನಿಯಮದ ಕಲಂ ೨೨ರ ಮಜೂರಿ ಸಂದಾಯದ ಅಧಿನಿಯಮ ನಿಷೇಧಿಸಿಲ್ಲವಾದುದರಿಂದ, ಕಾರ್ಮಿಕ ನ್ಯಾಯಾಲಯದಲ್ಲಿ ಮಜೂರಿ ವಸೂಲು ಮಾಡಲು ಸಲ್ಲಿಸಬಹುದು. ಜಯಪುರ ಡೆವಲಪ್ ಮೆಂಟ್ ಅಥಾರಿಟಿ “ವಿರುದ್ಧ” ಕಾರ್ಮಿಕ ನ್ಯಾಯಾಲಯ ೧೯೯೧ (೨) ಎಲ್.ಎಲ್.ಜೆ. ೧೩೩.

ಏನೇ ಇದ್ದರೂ ಮಜೂರಿ ಸಂದಾಯ ಅಧಿನಿಯಮದ ೧೮ನೇ ಉಪಬಂಧಗಳ ಪ್ರಕಾರ, ಅಧಿಕಾರಿಗಳಿಗೆ ಕೆಲವು ವಿಷಯಗಳಲ್ಲಿ ಸಿವಿಲ್ ನ್ಯಾಯಾಲಯವು ಸ್ವಲ್ಪ ಅಧಿಕಾರ ಕೊಟ್ಟಿದ್ದರೂ ಸಹ, ಅಧಿನಿಯಮದ ಅಧಿಕಾರಿಗಳು ನ್ಯಾಯಾಲಯದಲ್ಲಿ ಆದುದರಿಂದ ಕೇರಳ ಸಹಕಾರಿ ಸಂಘಗಳ ಅಧಿನಿಯಮದ ೧೯೬೯ರ ಕಲಂ ೬೯ ಮತ್ತು ೧೦೦ರ ವ್ಯಾಪ್ತಿಯನ್ನು ಹೊರತು ಪಡಿಸುವುದು ಮಜೂರಿ ಸಂದಾಯ ಅಧಿನಿಯಮದ ಕೆಳಗಿನ ಅಧಿಕಾರಿಗಳ ವ್ಯಾಪ್ತಿಯನ್ನು ಇಲ್ಲದಂತೆ ಮಾಡುವುದಿಲ್ಲ-ಕನ್ಯಾಕುಮಾರಿ ಸರ್ವೀಸ್ ಸಹಕಾರಿ ಸಂಘ “ವಿರುದ್ಧ” ವಿ. ಸರಕುಟ್ಟಿ ೧೯೮೭ (೨) ಎಲ್.ಎಲ್.ಜೆ. ೪೯೮.

ಮಜೂರಿ ಸಂದಾಯ ಅಧಿನಿಯಮವು, ಪಂಜಾಬ್ ರಸ್ತೆ ಸಾರಿಗೆಗೆ ಅನ್ವಯಿಸುವುದರಿಂದ ಸಿವಿಲ್ ದಾವಾ ಹಾಕುವುದು ಉದ್ಯೋಗಿಯನ್ನು ಔದ್ಯೋಗಿಕ ವಿವಾದಗಳ ಅಧಿನಿಯಮದ ಕಲಂ ೩೩ಸಿ (೨) ಕೆಳಗೆ ಅರ್ಜಿ ಹಾಕುವುದನ್ನು ತಪ್ಪಿಸುವಂತಹ ಪರ್ಯಾಯ ಪರಿಹಾರವಾಗುವುದಿಲ್ಲ. ಪಂಜಾಬ್ ರಾಜ್ಯ “ವಿರುದ್ಧ” ಹತ್ಯಯಸಿಂಗ್ ೧೯೮೦ (೧) ಎಸ್.ಎಲ್.ಆರ್. ೨೫೭ (ಪಿ ೨ ಹೆಚ್).

೨೨ಎ. ಸದುದ್ದೇಶದಿಂದ ತೆಗೆದುಕೊಂಡ ಕ್ರಮದ ರಕ್ಷಣೆ

ಈ ಅಧಿನಿಯಮದ ಪ್ರಕಾರ ಸದ್ಭಾವನೆಯಿಂದ ತೆಗೆದುಕೊಂಡ ಅಥವಾ ತೆಗೆದುಕೊಳ್ಳಲಿಚ್ಚಿಸುವ ಸರಕಾರದ ಅಥವಾ ಸರಕಾರದ ಅಧಿಕಾರಿಯ ವಿರುದ್ಧ ಯಾವುದೇ ಸಿವಿಲ್ ದಾವೆ, ನಡವಳಿಕೆಗಳು ಅಥವಾ ಕಾನೂನು ಕ್ರಮ ಜರುಗಿಸುವ ಹಾಗಿಲ್ಲ.

ವ್ಯಾಖ್ಯಾನ

ಈ ಅಧಿನಿಯಮದ ಕೆಳಗೆ ರಕ್ಷಣೆ ಬಯಸುವ ವ್ಯಕ್ತಿಯು, ಈ ಕೆಲಸವನ್ನು ತಾನು ಮಾಡಬೇಕಾಗಿತ್ತು ಅಥವಾ ಮಾಡದೇ ಇರಬೇಕಾಗಿತ್ತು ಇಲ್ಲವೆ ತಾನು ಮಾಡಲುದ್ದೇಶವುಳ್ಳವನಾಗಿದ್ದೆ ಎಂದು ಅವನು ಸಮರ್ಥಿಸಿಕೊಳ್ಳಬೇಕು. ಈ ಅಧಿನಿಯಮದ ಪ್ರಕಾರ ಮಾಡದ ಅಥವಾ ವಿರುದ್ಧವಾಗಿ ಮಾಡಿದ ಕೆಲಸಕ್ಕೆ ರಕ್ಷಣೆ ಪಡೆಯುವ ಹಾಗಿಲ್ಲ. ಸಾಮಾನ್ಯ ಖಂಡಗಳ ಅಧಿನಿಯಮದ ಪ್ರಕಾರ ಕೆಲವು ಲೋಪಗಳಾಗಿವೆ ಎಂದು ಭಾವಿಸಿದರೂ ಸಹ, ಆ ಕೃತ್ಯವು ಈ ಅಧಿನಿಯಮಕ್ಕೆ ಸಂಬಂಧಿಸಿದುದಾಗಿರಬೇಕು. ಆದರೆ ಮಾಡಿದ ಕೃತ್ಯವು ಪ್ರಾಮಾಣಿಕ ನಂಬಿಕೆಯಿಂದ ಮಾಡಿದುದಾಗಿದೆ. ಎಂದರೆ ಸಾಲದು, ಅದು ಸದ್ಭಾವನೆಯಿಂದ ಮಾಡಿದ ಕೃತ್ಯ ಎಂಬ ಪದಗಳೊಳಗೆ ಸೇರಬೇಕು. ಆಪಾದಿಸಲ್ಪಟ್ಟ ಕೃತ್ಯವನ್ನು ಅಧಿನಿಯಮದ ಪ್ರಕಾರ ಮಾಡಬೇಕಾಗಿತ್ತು ಎಂದು ಪುನರ್ ಪ್ರತಿಷ್ಠಾಪಿಸಬೇಕಾಗಿರುತ್ತದೆ. ಅಧಿನಿಯಮದ ಕೆಳಗೆ ರಕ್ಷಣೆ ಕೋರುವ ನಿಯಮದ ಉಪಬಂಧನೆಯಂತೆ ಪಾಲನೆ ಮಾಡಲಾಗಿದೆ ಅಥವಾ ಮಾಡುವ ಉದ್ದೇಶವುಳ್ಳದ್ದಾಗಿರಬೇಕು. ಮಾಡಿದ ಕೃತ್ಯವು ಎಷ್ಟು ಪ್ರಾಮಾಣಿಕವಾಗಿದ್ದರೂ ಸಹ ಅದು ಈ ಕಲಂನ ಉಲ್ಲಂಘನೆಯಾಗಿದ್ದರೆ ಅಥವಾ ಉಲಂಘನೆ ಮಾಡುವ ಉದ್ದೇಶದಿಂದ ಕೂಡಿದ್ದರೆ, ಈ ಅಧಿನಿಯಮವು ರಕ್ಷಣೆ ಕೊಡುವುದಿಲ್ಲ. ಎಐಆರ್ ೧೯೬೪ ಎಸ್.ಸಿ

ಈ ಕಲಂನ ಉದ್ದೇಶವು ಅಧಿನಿಯಮದ ಪ್ರಕಾರ ಮಾಡುವ ಯಾವುದೇ ಕೆಲಸದಿಂದ ಉದ್ಭವಿಸಬಹುದಾದ ಸಿವಿಲ್ ಮತ್ತು ಅಪರಾಧಿ ಕೃತ್ಯಗಳ ಅಪಾದನೆಯಿಂದೊದಗಬಹುದಾದ ಜವಾಬ್ದಾರಿಯಿಂದ ವಿಮುಕ್ತಗೊಳಿಸಬಹುದಾಗಿದೆ. ಈ ಸಂಬಂಧದಲ್ಲಿ ಅಪಾದನೆಯಿಂದ ಕೂಡಿದ ವ್ಯಕ್ತಿಯ ಕೃತ್ಯವು ಸದ್ಭಾವನೆಯಿಂದ ಕೂಡಿದ್ದರೆ, ಅಪರಾಧಕ್ಕಾಗಿ ಕ್ರಮ ತೆಗೆದುಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಪರಂತು ಉದ್ದೇಶರಹಿತವಾಗಿತ್ತೆಂಬುದು ಉತ್ತಮ ರಕ್ಷಣೆಯಾಗಬಲ್ಲದು. ಎಐಆರ್ ೧೯೬೩ ಎಪಿ ೧೦೬.

೩. ಎಸ್.ಎನ್.ಪಾಟಿಯೊ “ವಿರುದ್ಧ” ಮಹೇಶ್ ಮಾಧವ ಎಐಆರ್. ೧೯೮೭ ಎಸ್.ಸಿ.೨೯೪.

೪. ಎಕ್ಸ್ ಪ್ರೆಸ್ ನ್ಯೂಸ್ ಪೇಪರ್ಸ್ (ಪ್ರೈ) ಲಿ “ವಿರುದ್ಧ” ಯೂನಿಯನ್ ಆಫ್ ಇಂಡಿಯಾ ೧೯೮೬ (೧) ೧೩೩.

೨೩. ಕರಾರು ಮೂಲಕ ವಿಮೋಚನೆ

ಈ ಅಧಿನಿಯಮ ಪ್ರಾರಂಭವಾಗುವುದಕ್ಕಿಂತ ಮುಂಚೆ ಅಥವಾ ನಂತರ ಆಗಿರಲಿ, ಈ ಅಧಿನಿಯಮದ ಪ್ರಕಾರ ದತ್ತವಾದ ಹಕ್ಕನ್ನು ಉದ್ಯೋಗಿಯು ಬಿಟ್ಟಕೊಟ್ಟಿರುವಂತಿದ್ದ ಯಾವುದೇ ಕರಾರು ಅಥವಾ ಒಪ್ಪಂದ ಅಪಕೃತ ಮತ್ತು ಶೂನ್ಯವಾಗುತ್ತದೆ.

ವ್ಯಾಖ್ಯಾನ

ಮಜೂರಿ ಸಂದಾಯ ಅಧಿನಿಯಮದ ಕಲಂ ೨೩ ಉದ್ಯೋಗಿಯು ಕರಾರು ಮೂಲಕ ಅಧಿನಿಯಮದ ಪ್ರಕಾರ ದತ್ತವಾದ ಹಕ್ಕನ್ನು ಬಿಟ್ಟು ಕೊಡುವುದನ್ನು ತಪ್ಪಿಸುತ್ತದೆ. ತನಗೆ ಅನುಕೂಲಕರವಾದ ಅಥವಾ ಲಾಭದಾಯಕವಾದುದರ ಬಗ್ಗೆ ಒಪ್ಪಂದ ಮಾಡಿಕೊಳ್ಳುವುದನ್ನು ತಪ್ಪಿಸುವುದಿಲ್ಲ. ಅಧಿನಿಯಮದ ಕೆಳಗೆ ದತ್ತವಾದ ಹಕ್ಕನ್ನು ಬಿಟ್ಟು ಕೊಡುವುದನ್ನು ತಡೆಯುತ್ತದೆ. ಆ ಮಾಲೀಕ, ಕಾರ್ಮಿಕ ಮತ್ತು ಸರಕಾರದ ನಡುವೆ ಆದ ಒಪ್ಪಂದದ ಪ್ರಕಾರ ಪರಿಷ್ಕೃತಗೊಂಡ ಮಜೂರಿಯ ಬಗ್ಗೆ ನೀಡಿದ ಸುತ್ತೋಲೆಯನ್ನು ಕರಾರಿನ ಷರತ್ತುಗಳಲ್ಲೊಂದಾಗಿ ಪರಿಗಣಿಸಲಾಗದೆಂದು ಹೇಳಲಾಗುವುದಿಲ್ಲ. ಕರಾರಿನ ಷರತ್ತುಗಳನ್ನು ಮೂಲ ಕರಾರಿನ ಭಾಗವೆಂದು ನಂತರದಲ್ಲಿ ನೀಡಿರುವ ಸುತ್ತೋಲೆಗಳನ್ನು ಆಧರಿಸಿ ಅರ್ಥೈಸಬಹುದು. ೧೯೬೩ (೧) ಎಲ್.ಎಲ್.ಜೆ. ೨೬೭.

೨೪. ರೈಲ್ವೆ, ವಿಮಾನಯಾನ ಸೇವೆಗಳು, ಗಣಿಗಳು ಮತ್ತು ತೈಲಕ್ಷೇತ್ರಗಳಿಗೆ ಅಧಿನಿಯಮ ಅನ್ವಯಿಸುವ ಬಗ್ಗೆ

ರೈಲ್ವೆ, ವಿಮಾನಯಾನ ಸೇವೆಗಳು, ಗಣಿಗಳು ಮತ್ತು ತೈಲಕ್ಷೇತ್ರಗಳ ಬಗ್ಗೆ ಈ ಅಧಿನಿಯಮದ ಪ್ರಕಾರ ರಾಜ್ಯಗಳಿಗೆ ಪ್ರದತ್ತವಾದ ಅಧಿಕಾರಗಳು ಕೇಂದ್ರ ಸರಕಾರದ ಅಧಿಕಾರಿಗಳಿದ್ದ ಹಾಗೆ.

೨೫. ಅಧಿನಿಯಮದ ಸಾರಾಂಶವನ್ನು ಸೂಚನಾಪತ್ರದ ಮೂಲಕ ಪ್ರದರ್ಶಿಸುವುದು

ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಬೇರೆ ಕೈಗಾರಿಕೋದ್ಯಮಗಳಲ್ಲಿ ನೇಮಕಗೊಂಡಿರುವ ಉದ್ಯೋಗಿಗಳಿಗೆ ಮಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳ ವ್ಯಕ್ತಿಯು, ಆಯಾ ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಕೈಗಾರಿಕೋದ್ಯಮಗಳಲ್ಲಿ ಅಧಿನಿಯಮದ ಸಾರಾಂಶ ಮತ್ತು ಅದರ ನಿಯಮಗಳನ್ನು ಆಂಗ್ಲ ಭಾಷೆಯಲ್ಲಿ ಮತ್ತು ಆ ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಕೈಗಾರಿಕೋದ್ಯಮಗಳ ಬಹುತೇಕ ಕಾರ್ಮಿಕರು ಬಲ್ಲ ಭಾಷೆಯಲ್ಲಿರುವ ಸೂಚನಾ ಪತ್ರದ ಮೂಲಕ ನಿಗದಿತ ನಮೂನೆಯಂತೆ ಪ್ರದರ್ಶಿಸಬೇಕು.

೨೫ಎ. ಉದ್ಯೋಗಿ ನಿಧನ ಹೊಂದಿದರೆ ಪಾವತಿಯಾಗದಿರುವ ಮಜೂರಿಯನ್ನು ಸಂದಾಯ ಮಾಡುವ ಬಗ್ಗೆ

೧. ಅಧಿನಿಯಮದ ಬೇರೆ ಉಪಬಂಧಗಳಿಗೊಳಪಟ್ಟು, ಉದ್ಯೋಗಿಗೆ ಮಜೂರಿಯಾಗಿ ನೀಡಬೇಕಾದ ಮೊಬಲಗನ್ನು ಸಂದಾಯ ಮಾಡುವ ವೇಳೆಗೆ ನಿಧನ ಹೊಂದಿದುದರಿಂದ ಅಥವಾ ಅವನು ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲವಾದ್ದರಿಂದ ಕೊಡಲಾಗದಿದ್ದು ಅಥವಾ ಕೊಡಲಾಗದ ಹೋದರೆ :-

ಅ) ಅಧಿನಿಯಮದ ನಿಯಮಗಳಿಗನುಸಾರವಾಗಿ ಈ ಸಂಬಂಧವಾಗಿ ಯಾರನ್ನು ಅವನು ನಾಮಕರಣ ಮಾಡಿರುತ್ತಾನೊ ಆ ವ್ಯಕ್ತಿಗೆ ಕೊಡತಕ್ಕದ್ದು.

ಆ) ಎಲ್ಲಿ ನಾಮಕರಣ ಮಾಡಿರುವುದಿಲ್ಲವೊ ಅಥವಾ ನಾಮಕರಣ ಮಾಡಿದ್ದರೂ ಸಹ ಕಾರಣಾಂತರದಿಂದ ಆ ವ್ಯಕ್ತಿಗೆ ಮೊಬಲಗನ್ನು ಕೊಡಲಾಗದಿದ್ದ ಪಕ್ಷದಲ್ಲಿ, ಸಂಬಂಧಪಟ್ಟ ಅಧಿಕಾರಿಯ ಮುಂದೆ ನಿಯಮಿತ ರೀತಿಯಲ್ಲಿ ಮೊಬಲಗನ್ನು ಠೇವಣಿ ಇಡುವುದು. ಆ ಅಧಿಕಾರಿಯು ನಿಗದಿ ಪಡಿಸಿದ ರೀತಿಯಲ್ಲಿ ಆ ಮೊಬಲಗನ್ನು ವಿಲೇವಾರಿ ಮಾಡುವುದು.

೨. ಎಲ್ಲಿ, ಉಪ  ಕಲಂ (೧) ಉಪಬಂಧಗಳಿಗನುಸಾರ ಎಲ್ಲ ಮೊಬಲಗನ್ನು ಮಜೂರಿ ರೀತಿಯಲ್ಲಿ ಕೊಡಬೇಕಾದಾಗ; ಸಂದಾಯ ಮಾಡಬೇಕಾದಾಗ :-

ಅ) ಮಾಲೀಕರು ಉದ್ಯೋಗಿಯು ನಾಮಕರಣ ಮಾಡಿದ ವ್ಯಕ್ತಿಗೆ ಕೊಟ್ಟರೆ ಅಥವಾ

ಆ) ಸಂಬಂಧಪಟ್ಟ ಅಧಿಕಾರಿಯ ಹತ್ತಿರ ಠೇವಣಿ ಇಟ್ಟರೆ, ಮಾಲೀಕನನ್ನು ಮಜೂರಿ ನೀಡುವ ಜವಾಬ್ದಾರಿಯಿಂದ ವಿಮುಕ್ತಿಗೊಳಿಸತಕ್ಕದ್ದು.

೨೬. ನಿಯಮ-ರಚಿಸುವ ಅಧಿಕಾರ

(೧) ರಾಜ್ಯ ಸರಕಾರವು ಕಲಂ ೧೫ ಮತ್ತು ೧೭ರ ಪ್ರಕಾರ ಉಲ್ಲೇಖಿಸಿರುವ ಅಧಿಕಾರಿ ಅಥವಾ ನ್ಯಾಯಾಲಯವು ಅನುಸರಿಸಬೇಕಾದ ರೀತಿಗಳನ್ನು ನಿಯಂತ್ರಿಸಲು ನಿಯಮಗಳನ್ನು ರಚಿಸುವುದು.

(೨) ಈ ಅಧಿನಿಯಮದ ಉಪ-ಬಂಧಗಳನ್ನು ಕಾರ್ಯರೂಪಕ್ಕೆ ತರಲನುಕೂಲವಾಗುವಂತೆ ರಾಜ್ಯ ಸರಕಾರವು ನಿಯಮಗಳನ್ನು ರಚಿಸಿ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಬಹುದು.

(೩) ನಿರ್ದಿಷ್ಟವಾಗಿ ಮತ್ತು ಹಿಂದೆ ಹೇಳಿದ ಅಧಿಕಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಉಪ-ಕಲಂ (೨) ಕೆಳಗೆ ಮಾಡಿದ ನಿಯಮಗಳು :-

(ಅ) ಅಧಿನಿಯಮವನ್ನು ಯಶಸ್ವಿಯಾಗಿ ಜಾರಿಗೊಳಿಸಲನುಕೂಲವಾಗುವಂತೆ ಅವಶ್ಯವಾದಂತಹ ದಾಖಲೆಗಳು, ನೋಂದಣಿ ಪುಸ್ತಕಗಳು, ಆದಾಯ ಮತ್ತು ತಿಳುವಳಿಕೆ ಪತ್ರ ಇವುಗಳನ್ನು ಇಡುವಂತೆ ಬಯಸಬಹುದು (ನೋಂದಣಿ ಪುಸ್ತಕ ಅಥವಾ ದಾಖಲೆಗಳಲ್ಲಿ ಎಲ್ಲಾ ವಿವರಣೆಗಳನ್ನು ಒಳಗೊಂಡಿರುವಂತಹ ನಮೂನೆಯನ್ನು ನಿಗದಿಪಡಿಸುವುದು: ಗೊತ್ತು ಮಾಡುವುದು)

(ಆ) ಉದ್ಯೋಗ ನಡೆಯುವ ಆವರಣದ, ಎದ್ದು ಕಾಣುವಂತಹ ಸ್ಥಳದಲ್ಲಿ, ಆ ಆವರಣದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ನೀಡುವ ಮಜೂರಿಯ ದರವನ್ನು ತಿಳಿಸುವ ಸೂಚನಾ ಪತ್ರವನ್ನು ಪ್ರದರ್ಶಿಸಬೇಕೆಂದು ಅಪೇಕ್ಷಿಸಬಹುದು : ಬಯಸಬಹುದು.

ಇ) ಮಾಲೀಕನು ತನ್ನ ಉದ್ಯೋಗಿಗಳಿಗೆ ನೀಡುವ ಮಜೂರಿಯನ್ನು ತನಿಖೆ ಮಾಡಲು ಅಥವಾ ಖಚಿತಪಡಿಸಿಕೊಳ್ಳಲು ಇಟ್ಟುಕೊಂಡಿರುವಂತಹ ತೂಕ, ಅಳತೆ ಮತ್ತು ತೂಕದ ಯಂತ್ರಗಳನ್ನು ಕ್ರಮಬದ್ಧ ತಪಾಸಣೆಗಾಗಿ ಅವಕಾಶ ದೊರಕಿಸುವುದು.

ಈ) ಮಜೂರಿ ಸಂದಾಯ ಮಾಡುವ ದಿನಗಳನ್ನು ಗೊತ್ತು ಮಾಡಲು ನೀಡಬೇಕಾದ ತಿಳುವಳಿಕೆ ಪತ್ರದ ರೀತಿ ನೀತಿಗಳನ್ನು ಗೊತ್ತು ಮಾಡುವುದು.

ಉ) ಕಲಂ ೮ ಉಪ ಕಲಂ (೧) ಕೆಳಗೆ ಕಾರ್ಯಲೋಪಗಳನ್ನು ಪರಿಶೀಲಿಸಿ ದಂಡ ವಿಧಿಸುವುದನ್ನು ಅನುಮೋದಿಸುವ ಹಕ್ಕುಳ್ಳ ತಕ್ಕ ಅಧಿಕಾರಿಯನ್ನು ಗೊತ್ತು ಮಾಡುವುದು.

ಊ) ಕಲಂ ೮ರ ಕೆಳಗೆ ದಂಡ  ವಿಧಿಸುವ ಮತ್ತು ಕಲಂ ೧೦ರ ಕೆಳಗೆ ತಿಳಿಸಿರುವ ಕಡಿತಗಳನ್ನು ಮಾಡುವ ರೀತಿಯನ್ನು ಗೊತ್ತು ಮಾಡುವುದು.

ಋ) ಕಲಂ ೯ ಮತ್ತು ಉಪ-ಕಲಂ (೨)ರ ಕೆಳಗೆ ನಿಬಂಧನೆ ಕೆಳಗೆ ಮಾಡುವ ಕಡಿತಗಳನ್ನು ಮಾಡುವ ಬಗ್ಗೆ ಷರತ್ತುಗಳನ್ನು ಗೊತ್ತು ಮಾಡುವುದು.

ೠ) ದಂಡದ ಶುಲ್ಕಗಳನ್ನು ಯಾವ ಉದ್ದೇಶಕ್ಕಾಗಿ ವಿನಿಯೋಗಿಸಬೇಕು ಎಂಬುದನ್ನು ಅನುಮೋದಿಸುವ ಅಧಿಕಾರವನ್ನು ನಿಗದಿಪಡಿಸುವುದು : ಗೊತ್ತು ಮಾಡುವುದು.

ಅಂ) ಕಲಂ ೧೨ ಖಂಡ (ಆ) ರಲ್ಲಿ ಉಲ್ಲೇಖಿಸಿರುವಂತಹ ಮುಂಗಡಗಳನ್ನು ಎಷ್ಟರವರೆಗೆ ಕೊಡಬಹುದು ಹಾಗೂ ಅವುಗಳನ್ನು ಎಷ್ಟು ಕಂತುಗಳಲ್ಲಿ ಹಿಡಿದುಕೊಳ್ಳಬಹುದು ಎಂಬುದನ್ನು ನಿಗದಿ ಮಾಡುವುದು.

ಆಃ) ಕಲಂ (೧೨ಅ) ದಲ್ಲಿ ಉಲ್ಲೇಖಿಸಿರುವಂತೆ ಸಾಲಗಳನ್ನು ಎಷ್ಟು ಮಜೂರಿ ಮಾಡುವುದು ಮತ್ತು ಬಡ್ತಿ ದರವನ್ನು ಎಷ್ಟಿರಬೇಕೆಂದು ನಿಗದಿ ಮಾಡುವುದು.

ಕ) ಈ ಅಧಿನಿಯಮಕ್ಕೆ ಅನುಗುಣವಾಗಿ ತಪಾಸಣಾಧಿಕಾರಿಗಳು ಅಧಿಕಾರವನ್ನು ಗೊತ್ತು ಮಾಡುವುದು.

ಖ) ಈ ಅಧಿನಿಯಮದ ಕೆಳಗೆ ಹಾಕಬಹುದಾದ ಖರ್ಚಿನ ಶ್ರೇಣಿಯನ್ನು ನಿಯಂತ್ರಿಸುವುದು.

ಗ) ಈ ಅಧಿನಿಯಮದ ಕೆಳಗೆ ನಡೆಯುವ ವಿಚಾರಣೆಗಳಲ್ಲಿ ಸಂದಾಯ ಮಾಡಬೇಕಾದ ನ್ಯಾಯಾಲಯ ಶುಲ್ಕ ಮೊತ್ತವನ್ನು ನಿಗದಿಪಡಿಸುವುದು.

ಘ) ಕಲಂ ೨೫ರ ಕೆಳಗೆ ನೀಡಬಹುದಾದ ತಿಳುವಳಿಕೆ ಪತ್ರದಲ್ಲಿರಬೇಕಾದ ಸಂಕ್ಷಿಪ್ತ ವಿಷಯವನ್ನು ನಿಗದಿಪಡಿಸುವುದು.

ಜ್) ಕಲಂ ೨೫ಎ ಉಪ-ಕಲಂ (೧)ರ ಪ್ರಕಾರ ನಾಮನಿರ್ದೇಶನ ಮಾಡಲು, ರದ್ದು ಮಾಡಲು, ಅಥವಾ ಮಾರ್ಪಾಡು ಮಾಡಲು ಅಥವಾ ನಾಮನಿರ್ದೇಶಿತ ವ್ಯಕ್ತಿಯು ನಾಮನಿರ್ದೇಶನ ಮಾಡಿದವನಿಗಿಂತ ಮೊದಲೇ ಮೃತರಾದರೆ ಹೊಸದಾಗಿ ನಾಮನಿರ್ದೇಶನ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದಂತೆ ಬೇರೆ ನಾಮನಿರ್ದೇಶನಕ್ಕೆ ತಕ್ಕ ಕ್ರಮಕ್ಕೆಗೊಳ್ಳಲು ಅನುಕೂಲವಾಗುವಂತಹ ಮಾದರಿಯನ್ನು ನಿಗದಿಪಡಿಸುವುದು.

ಚ) ಕಲಂ ೨೫ (ಎ) ಉಪ ಕಲಂ (೧) ಖಂಡ (೨) ಕೆಳಗೆ ಠೇವಣಿಯನ್ನು ಯಾವ ಅಧಿಕಾರಿಯೊಡನೆ ಇಡಬೇಕು ಮತ್ತು ಇಟ್ಟ ಠೇವಣಿಯನ್ನು ಅಧಿಕಾರಿಯು ಯಾವ ರೀತಿ ಆ ಖಂಡದ ಕೆಳಗೆ ವಿಲೇವಾರಿ ಮಾಡಬೇಕೆಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕು.

ಛ) ಈ ಸಂಬಂಧ ನಿಗದಿ ಮಾಡಬಹುದಾದ ಅಥವಾ ಮಾಡಲೇಬೇಕಾದ ವಿಷಯಗಳಿಗೆ ಅವಕಾಶ ಮಾಡುವುದು.

೪. ಈ ಕಲಂ ಕೆಳಗೆ ಸರಕಾರವು ನಿಯಮಗಳನ್ನು ರಚಿಸುವಾಗ, ನಿಯಮಗಳನ್ನು ಉಲ್ಲಂಘಿಸುವವರಿಗೆ ಇನ್ನೂರು ರೂಪಾಯಿಯವರಿಗೆ ದಂಡ ವಿಧಿಸುವುದರ ಮೂಲಕ ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಬೇಕು.

೫. ಈ ಕಲಂ ಕೆಳಗೆ ಮಾಡಿದ ಎಲ್ಲಾ ನಿಯಮಗಳು ಹಿಂದಿನ ಪ್ರಕಟಣೆಯ ಷರತ್ತುಗಳಿಗೆ ಒಳಪಟ್ಟಿಸುವವರಿಗೆ ಮತ್ತು ಸಾಮಾನ್ಯ ಖಂಡ ಅಧಿನಿಯಮದ (೧೦ರ ೧೯೫೭) ಕಲಂ (೨೩)ರ ಖಂಡ ೩ರ ಪ್ರಕಾರ, ೧೯೮೭ ಉದ್ದೇಶಿತ ಮಾದರಿ ನಿಯಮಗಳನ್ನು ಪ್ರಕಟಪಡಿಸಬೇಕಾಗಿರುವ ದಿನಾಂಕವು ಕನಿಷ್ಠ ಮೂರು ತಿಂಗಳಿಗಿಂತ ಕಡಿಮೆಯಿರಬಾರದು.

೬. ಈ ಕಲಂ ಕೆಳಗೆ ಕೇಂದ್ರ ಸರಕಾರವು ಮಾಡಿದ ಪ್ರತಿ ನಿಯಮವು ಅವುಗಳನ್ನು ರಚಿಸಿದ ತಕ್ಷಣ ಸಂಸತ್ತಿನ ಎರಡೂ ಮನೆಗಳಲ್ಲಿ ಸದನವು ೩೦ ದಿನಗಳವರೆಗೆ ಒಂದೇ ಬಾರಿಗೆ ನಡೆಯುತ್ತಿರುವ ಸಮಯದಲ್ಲಿ ಅಥವಾ ಎರಡೂ ಅಥವಾ ಮೂರು ಒಂದೇ ಬಾರಿಗೆ ಒಂದಾದರ ಮೇಲೆ ನಡೆಯುವ ಅಧಿವೇಶನದಲ್ಲಿ, ಆ ಸಂಪತ್ತು ಅಧಿವೇಶನ (ಒಂದೇ ಅಧಿವೇಶನವಾಗಿರಬಹುದು) ಮುಗಿಯುವುದೊರಳಗಾಗಿ ಮಂಡಿಸಬೇಕು ಮತ್ತು ಎರಡು ಸದನಗಳು ಆ ನಿಯಮಗಳಲ್ಲಿ ಬದಲಾವಣೆ ಮಾಡಬಹುದು ಇಲ್ಲವೆ ನಿಯಮಗಳನ್ನು ಮಾಡದೇ ಇರಬಹುದು. ಆಗ ನಿಯಮಗಳು ಪರಿಷ್ಕೃತ ಇಲ್ಲವೇ ಹಾಗೆಯೇ ಪರಿಸ್ಥಿತಿಗನುಗುಣವಾಗಿ ಜಾರಿಗೆ ಬರಬಹುದು ಅಥವಾ ಬರದೇ ಇರಬಹುದು. ಆದರೆ ಪರಿಷ್ಕೃತಗೊಂಡ ಅಥವಾ ತಿರಸ್ಕೃತಗೊಂಡ ನಿಯಮಗಳು ಹಿಂದೆ ಆ ನಿಯಮದ ಕೆಳಗೆ ಮಾಡಿದ ನಿಯಮದ ಸಿಂಧುತ್ವಕ್ಕೆ ಧಕ್ಕೆಯಾಗುವಂತಿರಬಾರದು.

ವ್ಯಾಖ್ಯಾನ

ನಿಯಮಗಳನ್ನು ರಚಿಸುವ ಅಧಿಕಾರವು ಯಾವ ಅಧಿನಿಯಮದ ಉಪಬಂಧಗಳಿಂದ ಬಂದಿರುತ್ತದೊ, ಅಸಾಮಾನ್ಯ ನಿಯಮದ ಕಾಯಿದೆ ಅನ್ವಯಿಸುವಂತೆ, ಕೆಟ್ಟ ನಿಯಮದ ಭಾಗವನ್ನು ಒಳ್ಳೆ ನಿಯಮದ ಭಾಗದಿಂದ ಬೇರ್ಪಡಿಸಬಹುದು. ಒಳ್ಳೆಯ ಭಾಗವನ್ನು ಇನ್ನೂ ಮುಂದಿವರಿಸಬಹುಸು. ಆದರೆ ಎಲ್ಲಿ ಕೆಟ್ಟ ಭಾಗವನ್ನು ಬೇರ್ಪಡಿಸಲಾರದಷ್ಟು ಮಿಶ್ರವಾಗಿರುತ್ತದೊ, ಆಗ ಪೂರ್ಣ ಎಲ್ಲ ನಿಯಮವು ಕೆಟ್ಟದಾಗುತ್ತದೆ. ಒಂದು ಭಾಗವು ಕೆಟ್ಟದ್ದೊ ಅಥವಾ ಅಲ್ಲವೊ, ಅದನ್ನು ಬೇರ್ಪಡಿಸಲು ಸಾಧ್ಯವೋ ಎಂಬುದನ್ನು ಕಂಡು ಹಿಡಿಯುವ ಪ್ರಯೋಗವೆಂದರೆ, ಕೆಟ್ಟ ಭಾಗವನ್ನು ಬೇರ್ಪಡಿಸದ ಮೇಲೆ, ಉಳಿದ ನಿಯಮಗಳು ಉಪಯೋಗಕ್ಕೆ ಬರುತ್ತವೆಯೋ ಮತ್ತು ನಿಯಮವನ್ನು ರಚಿಸುವ ಸಂಸ್ಥೆಯ ಉದ್ದೇಶವನ್ನು ಭಗ್ನಗೊಳಿಸುವುದಿಲ್ಲ ಮತ್ತು ಕೆಟ್ಟ ಭಾಗದಿಂದ ಸಂಪೂರ್ಣ ಸ್ವತಂತ್ರವಾಗಿರುತ್ತದೆ ಎಂಬುದನ್ನು ನೋಡುವುದು.

ಈಗಾಗಲೇ ಮಾನ್ಯತೆ ಪಡೆದ ವ್ಯಾಖ್ಯಾನ ತತ್ವದ ಪ್ರಕಾರ ನಿಯಮಗಳನ್ನು ಶಾಸನದ ಕೆಳಗೆ ರಚಿಸಿದರೆ ಅಥವಾ ನಿಯಮಗಳ ಕೆಳಗೆ ರಚಿಸಿದ ಉಪ ಕಾನೂನುಗಳು ಶಾಸನಗಳಿಗಿಂತ ಹೆಚ್ಚಿದ್ದರೆ ಅಥವಾ ವಿರುದ್ಧವಾಗಿದ್ದರೆ ಅಥವಾ ಆ ಉಪಬಂಧಗಳಿಗೆ ಪರಸ್ಪರ ವಿರೋಧವಿದ್ದರೆ, ಆಗ ಈ ಉಪ-ಬಂಧಗಳನ್ನು ಶಾಸನದ ಅಧಿಕಾರ ಮೀರಿದ್ದೆಂದು ತಿಳಿಯಬಹುದು ಮತ್ತು ಅವುಗಳನ್ನು ಜಾರಿಗೆ ಕೊಡಲಾಗದು. ಒಂದು ಅಧಿನಿಯಮದ ಕೆಳಗೆ ಮಾಡಿದ ನಿಯಮಗಳನ್ನು ವ್ಯಾಖ್ಯಾನಿಸುವಾಗ, ನ್ಯಾಯಾಲಯವು ಆ ನಿಯಮಗಳನ್ನು ಮಾಡಿದ ಪ್ರಾಧಿಕಾರದ ಉದ್ದೇಶಗಳಿಗೆ ಮನ್ನಣೆಯನ್ನು ಕೊಡುವುದು ಅದರ ಕರ್ತವ್ಯವೇ ಹೊರತು, ನಿಯಮಗಳನ್ನು ಮಾಡಿದ ಔಚಿತ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಲ್ಲ. ಆ ನಿಯಮಗಳನ್ನು ರಚಿಸಿದ ಪ್ರಾಧಿಕಾರದ ಉದ್ದೇಶವನ್ನು ನಿಯಮಗಳಿಂದಲೇ ತಿಳಿಯಬೇಕು.