ರಾಜ್ಯ ತಿದ್ದುಪಡಿಗಳು

ಗುಜರಾತ್ (ಮುಂಬಯಿ ಪ್ರದೇಶ) : ಕಲಂ ೮ (೮)ರ ಸೃಷ್ಟೀಕರಣ ಮೊದಲು ಈ ಕೆಳಕಂಡ ಪದಗಳನ್ನು ಸೇರಿಸಲಾಗಿದೆ. ಅವುಗಳೆಂದರೆ:

“ಮುಂಬಯಿ ಕಾರ್ಮಿಕರ ಕಲ್ಯಾಣ ನಿಧಿ ಅಧಿನಿಯಮ, ೧೯೫೩, ಅನ್ವಯಿಸುವ ಯಾವುದೇ ಕಾರ್ಖಾನೆ ಅಥವಾ ಔದ್ಯೋಗಿಕ ಸಂಸ್ಥೆಗಳಿಂದ ವಸೂಲಿಯಾದದ್ದನ್ನು ಆ ಅಧಿನಿಯಮದ ಕೆಳಗೆ ಸ್ಥಾಪಿಸಲ್ಪಟ್ಟ ನಿಧಿಗೆ ಪಾವತಿ ಮಾಡತಕ್ಕದ್ದು”.

ಕರ್ನಾಟಕ : ಕರ್ನಾಟಕಕ್ಕೆ ಅನ್ವಯಿಸುವಂತೆ ಸ್ಪಷ್ಟೀಕರಣದ ಮುಂಚೆ ಈ ಕೆಳಗಿನದನ್ನು ಸೇರಿಸತಕ್ಕದ್ದು. ಅವುಗಳೆಂದರೆ “ಮೈಸೂರು ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ-೧೯೬೫ ಯಾವ ಕಾರ್ಖಾನೆ ಅಥವಾ ಔದ್ಯೋಗಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೋ, ಆ ಸಂಸ್ಥೆಗಳಿಂದ ವಸೂಲಾದದ್ದನ್ನು ಆ ಅಧಿನಿಯಮದ ಕೆಳಗೆ ಸ್ಥಾಪಿಸಿದ ನಿಧಿಗೆ ಪಾವತಿಸತಕ್ಕದ್ದು”.

ಕೇರಳ : ಕಲಂ ೮ (೮) ರ ಸ್ಪಷ್ಟೀಕರಣದ ಮೊದಲು, ಒಂದು ಹೊಸ ಅಭಿಸಂಧಿಯನ್ನು ಸೇರಿಸಲಾಗಿದೆ. ಅದೇನೆಂದರೆ, ಯಾವ ಔದ್ಯೋಗಿಕ ಸಂಸ್ಥೆಗೆ ಕೇರಳ ಕಾರ್ಮಿಕ ಕಲ್ಯಾಣ ನಿಧಿಗೆ ಅಧಿನಿಯಮ ೧೯೭೫ ಅನ್ವಯಿಸುತ್ತದೊ, ಆ ಸಂಸ್ಥೆಗಳು ವಸೂಲಿಯನ್ನು ಆ ಅಧಿನಿಯಮದ ಕೆಳಗೆ ಸ್ಥಾಪಿಸಲ್ಪಟ್ಟ ನಿಧಿಗೆ ಪಾವತಿಸತಕ್ಕದ್ದು.

ಮಹಾರಾಷ್ಟ್ರ : ಕಲಂ ೮ (೮) ರಲ್ಲಿನ ಸ್ಪಷ್ಟೀಕರಣದ ಮುಂದೆ ಈ ಕೆಳಕಂಡ ಪದಗಳನ್ನು ಸೇರಿಸಲಾಗಿದೆ. ಅವುಗಳೆಂದರೆ, “ಆದರೆ, ಯಾವ ಕಾರ್ಖಾನೆಗೆ ಅಥವಾ ಔದ್ಯೋಗಿಕ ಸಂಸ್ಥೆಗಳಿಗೆ ಮುಂಬಯಿ ಕಾರ್ಮಿಕ ಕಲ್ಯಾಣನಿಧಿ ಅಧಿನಿಯಮ, ೧೯೫೩, ಅನ್ವಯಿಸುತ್ತದೊ, ಆ ಸಂಸ್ಥೆಗಳಿಂದಾದ ವಸೂಲಿಯನ್ನು ಆ ಅಧಿನಿಯಮದ ಕೆಳಗೆ ಸ್ಥಾಪಿಸಿದ ನಿಧಿಗೆ ಪಾವತಿ ಮಾಡುವುದು”.

ಪಂಜಾಬ್-ಹರಿಯಾಣ : ಪಂಜಾಬ್ ಕಾರ್ಮಿಕ ಕಲ್ಯಾಣನಿಧಿ, ಅಧಿನಿಯಮ ೧೯೬೫ (೧೯೬೫ ರ ೧೭) ಮತ್ತು ೧೯೬೬ರ ೩೧ನೇಯ ಕಲಂ ೮೮ನ್ನು ನೋಡಿ.

ತಮಿಳುನಾಡು : ಕಲಂ ೮ (೮) ರ ಕೊನೆ ವಾಕ್ಯದಲ್ಲಿ, ಈ ಕೆಳಕಂಡ ಪದಗಳನ್ನು ಸೇರಿಸಲಾಗಿದೆ. ಅವುಗಳೆಂದರೆ, “ಆದರೆ, ಯಾವ ಔದ್ಯೋಗಿಕ ಸಂಸ್ಥೆಗಳಿಗೆ ತಮಿಳುನಾಡು ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ ೧೯೭೨ ಅನ್ವಯಿಸುತ್ತದೊ, ಆ ಸಂಸ್ಥೆಗಳು ವಸೂಲಿಯನ್ನು ಮೇಲ್ಕಂಡ ಅಧಿನಿಯಮದ ಕೆಳಗೆ ಸ್ಥಾಪಿಸಲ್ಪಟ್ಟ ನಿಧಿಗೆ ಪಾವತಿಸತಕ್ಕದ್ದು.

ಉತ್ತರ ಪ್ರದೇಶ : ಈ ಕೆಳಕಂಡ ಉಪಬಂಧವನ್ನು ಕಲಂ ೮ (೮) ಕ್ಕೆ ಸೇರಿಸಲಾಗಿದೆ. ಪರಂತು, ಉ.ಪ್ರ. ಕಲ್ಯಾಣ ನಿಧಿ ಅಧಿನಿಯಮ ೧೯೬೫, ಯಾವ ಕಾರ್ಖಾನೆ ಅಥವಾ ಔದ್ಯೋಗಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೊ, ಆ ಸಂಸ್ಥೆಗಳ ವಸೂಲಿಯನ್ನು ಆ ಅಧಿನಿಯಮದ ಕೆಳಗೆ ಸ್ಥಾಪಿಸಲ್ಪಟ್ಟ ನಿಧಿಗೆ ಪಾವತಿಸತಕ್ಕದ್ದು.

ಪಶ್ಚಿಮ ಬಂಗಾಳ : ಕಲಂ ೮ (೮)ರ ಸ್ಪಷ್ಟೀಕರಣದ ಮುಂಚೆ ಒಂದು ಹೊಸ ಉಪಬಂಧವನ್ನು ಸೇರಿಸಲಾಗಿದೆ.  ಅದೆಂದರೆ, ಪರಂತು ಯಾವ ಔದ್ಯೋಗಿಕ ಸಂಸ್ಥೆಗೆ ಪಶ್ಚಿಮ ಬಂಗಾಲ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, ೧೯೭೪, ಅನ್ವಯಿಸುತ್ತದೊ, ಆ ಸಂಸ್ಥೆಗಳ ವಸೂಲಿಯನ್ನು ಆ ಅಧಿನಿಯಮದ ಕೆಳಗೆ ಸ್ಥಾಪಿಸಿದ ನಿಧಿಗೆ ಕೊಡತಕ್ಕದ್ದು.

೯. ಕರ್ತವ್ಯ ಗೈರು ಹಾಜರಾತಿ ಕಡಿತಗಳು

೧. ಕಲಂ ೭, ಉಪ ಕಲಂ ೨. ಖಂಡ (ಅ) ಪ್ರಕಾರ ಉದ್ಯೋಗಿಯು ಉದ್ಯೋಗದ ಷರತ್ತುಗಳ ಪ್ರಕಾರ ಆತನ ಕೆಲಸದ ಸ್ಥಳ ಅಥವಾ ಸ್ಥಳಗಳಿಂದ ಗೈರು ಹಾಜರಾದರೆ, ಆ ಗೈರು ಹಾಜರಿಯ ಪೂರ್ಣ ಅವಧಿಗಾಗಲಿ ಇಲ್ಲವೇ ಕಡಿಮೆ ಅವಧಿಗಾಗಲಿ, ಅವನ ಮಜೂರಿಯನ್ನು ಕಡಿತಗೊಳಿಸಬಹುದು.

೨. ಕಡಿತ ಮಾಡಬಹುದಾದ ಹಣವು ಉದ್ಯೋಗಿಗೆ ಆ ಅವಧಿಗೆ ಸಂದಾಯ ಮಾಡಬಹುದಾದ ಮಜೂರಿಗೆ ಸಂಬಂಧಿಸಿರುವುದಿಲ್ಲ. ಆ ಅವಧಿಗೆ ಮಾಡಿದ ಕಡಿತವು ಹೆಚ್ಚಿನ ಗೈರುಹಾಜರಾದ ಅವಧಿಗಿಂತಲೂ ಹೆಚ್ಚಿನ ಪ್ರಮಾಣದ್ದಾದರೂ, ಅವನು ಉದ್ಯೋಗದ ನಿಬಂಧನೆಗನುಗುಣವಾಗಿ ಕೆಲಸ ಮಾಡಬೇಕಾದ ಒಟ್ಟು ಅವಧಿಗೆ ಅನ್ವಯಿಸುತ್ತದೆ.

ಪರಂತು : ರಾಜ್ಯ ಸರಕಾರವು ಈ ಬಗ್ಗೆ ಮಾಡಿದ ನಿಯಮಗಳಿಗೊಳಪಟ್ಟ, ಹತ್ತು ಅಥವಾ ಹೆಚ್ಚು ಉದ್ಯೋಗಿಗಳು ಒಂದಾಗಿ ನಡೆದುಕೊಳ್ಳವುದರ ಮೂಲಕ ಯಾವುದೇ ತಿಳುವಳಿಕೆ ಪತ್ರ ನೀಡದೆ (ಅಂದರೆ ಉದ್ಯೋಗ ಒಪ್ಪಂದದ ಷರತ್ತಿಗನುಗುಣವಾಗಿ ನೀಡಬೇಕಾದ ತಿಳುವಳಿಕೆ ಪತ್ರ ನೀಡದೆ ಮತ್ತು ಸಕಾರಣವಿಲ್ಲದೆ ತಾವಾಗಿ ಗೈರು ಹಾಜರಾದರೆ, ಅವರಿಂದ ಮಾಡಿದ ಕಡಿತವು ಅವನ ಎಂಟು ದಿನದ ಮಜೂರಿಗಿಂತ ಮೀರಿರಬಾರದು, ಯಾವುದೇ ರೀತಿಯಲ್ಲೂ ಮಾಲೀಕನಿಗೆ ನೀಡುವ ತಿಳುವಳಿಕೆ ಪತ್ರಕ್ಕೆ ಬದಲಾಗಿ ಬಿಡುವ ಹಣದಷ್ಟಾಗಿರಬಾರದು;

ಸ್ಪಷ್ಟೀಕರಣ : ಈ ಕಲಂನ ಪ್ರಾಕಾರ, ಒಬ್ಬ ಉದ್ಯೋಗಿಯು ಕೆಲಸಕ್ಕೆ ಹಾಜರಾಗಿದ್ದರೂ, ಇದ್ದಲ್ಲೇ ಮುಷ್ಕರದ ಕರೆ ಮೇರೆಗೆ ಅಥವಾ ಮತ್ತಾವುದೇ ಕಾರಣಕ್ಕೆ ಆ ಪರಿಸ್ಥಿತಿಯಲ್ಲಿ ಸಮಂಜಸವಲ್ಲದಿದ್ದರೂ ಕೆಲಸ ಮಾಡಲು ತಿರಸ್ಕರಿಸಿದರೆ, ಆ ಉದ್ಯೋಗಿಯು ಕೆಲಸಕ್ಕೆ ಗೈರು ಹಾಜರಾಗಿದ್ದಾರೆಂದು ತಿಳಿದುಕೊಳ್ಳಬೇಕಾಗುತ್ತದೆ.

ವ್ಯಾಖ್ಯಾನ

ಮಜೂರಿ ಅಧಿನಿಯಮದ ಕಲಂ ೯, ಕೆಲಸಕ್ಕೆ ಗೈರು ಹಾಜರಾದವರ ಮಜೂರಿಯನ್ನು ಕಡಿತ ಮಾಡಲು ಆಡಳಿತವರ್ಗಕ್ಕೆ ಅಧಿಕಾರ ಕೊಡುತ್ತದೆ.

ಜಿ.ವೈ.ಎನ್. ಜೈನುಲು “ವಿ” ಡಿಪೋ ಮ್ಯಾನೇಜರ ಎ.ಪಿ.ಎಸ್.ಆರ್.ಟಿ.ಸಿ.ಅಮಲಾಪುರಂ, ೧೯೮೯  (೨) ಎಲ್.ಎಲ್.ಜೆ.೮೧, ಪುಟ್ ೮೪ ಆಂಧ್ರಪ್ರದೇಶ ತೀರ್ಪಿನ ಪ್ರಕಾರ ಅಗತ್ಯ ಸೇವಾ ನಿರ್ವರಣೆ ಅಧಿನಿಯಮದ ಕಲಂ ೩. ಕೆಳಗೆ ಮುಷ್ಕರವು ಕಾನೂನು ಬಾಹಿರವೆಂದು ಅಧಿಸೂಚನೆ ಹೊರಡಿಸುವುದರ ಮೂಲಕ ಘೋಷಿಸಿದರೆ, ಆಗ ಕಲಂ ೯, ಉಪಕಲಂ (೨)ರ ಉಪಬಂಧದ ಪ್ರಕಾರ ನ್ಯಾಯಬದ್ಧ ತಿಳುವಳಿಕೆ ಪತ್ರವಾಗುವುದಿಲ್ಲ. ಉದ್ಯೋಗಿಗಳು ಕಾನೂನುಬದ್ಧ ತಿಳುವಳಿಕೆ ಪತ್ರ ನೀಡದೆ ಅಥವಾ ಸಕಾರಣವಿಲ್ಲದೆ ಕೆಲಸಕ್ಕೆ ಗೈರು ಹಾಜರಾದರೆ ಅವರ ಮಜೂರಿಯನ್ನು ಕಡಿತ ಮಾಡುವುದು ಮಾಲೀಕನ ಹಕ್ಕಾಗಿರುತ್ತದೆ. ಆದರೆ, ಆ ರೀತಿಯ ಕೆಲಸಕ್ಕೆ ಗೈರು ಹಾಜರಾಗುವುದು, ಮೇಲ್ಕಂಡ ಕಾಯಿದೆಯ ಕಲಂ ೪ರ ಪ್ರಕಾರ ಅಪಬಂಧ ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳನ್ನು ನೀಡಲು ಅಧಿಕಾರವಿರುತ್ತದೆ. ಆದುದರಿಂದ ಇದು ಖಂಡನಾರ್ಹ ಪರಿಣಾಮಗಳಿಗೆ ಅವಕಾಶ ನೀಡುತ್ತದೆ. ಅದೇ ಅಪರರ್ಥಕ್ಕೆ ಮಜೂರಿ ಕಡಿತ ಮಾಡುವ ಹಕ್ಕನ್ನು ಅಧಿನಿಯಮ ಕಲಂ ೯ (೨) ಅಧಿಕಾರ ನೀಡುತ್ತದೆ. ಆದುದರಿಂದ ಕಲಂ ೯ (೨)ರಲ್ಲಿ ಕೊಟ್ಟಿರುವ ಹಕ್ಕು, ಅಗತ್ಯ ಸೇವಾ ನಿರ್ವಹಣೆ ಅಧಿನಿಯಮ ಕಲಂ ೪ ನೀಡುವ ದಂಡ ಅಥವಾ ಹೊಣೆಗಾರಿಕೆಗೆ ವಿರುದ್ಧವಾಗಿರುವುದರಿಂದ, ಮೇಲ್ಕಂಡ ಅಧಿನಿಯಮದ ಕಲಂ ೮, ಮಜೂರಿ ಅಧಿನಿಯಮದ ಕಲಂ ೯ (೨)ರ ಮೇಲುಗೈಯಾಗುತ್ತದೆ.

ಮುಷ್ಕರದ ಅವಧಿಗೆ ಕಲಂ ೯ (೨) ಪ್ರಕಾರ ಮಜೂರಿ ಕಡಿತ ನ್ಯಾಯಬದ್ಧ

ಮುಷ್ಕರ ಅವಧಿಗೆ ಮಜೂರಿ ಕಡಿತ ನ್ಯಾಯಬದ್ಧ, ಮಜೂರಿ ಸಂದಾಯ ಅಧಿನಿಯಮ ಕಲಂ ೯ (೨) ಪ್ರಕಾರ ಎಂಟು ದಿನಗಳ ಮಜೂರಿ ಕಡಿತ ಮಾಡುವುದರ ಕಾನೂನು ಬದ್ಧತೆ ಅಥವಾ ಔಚಿತ್ಯದ ಬಗ್ಗೆ, ಯಾವುದೇ ತೀರ್ಪು ನೀಡದೆ, ಈ ವಿಷಯವನ್ನು ಕಾರ್ಮಿಕರು ಯಾವುದೇ ಆಧಾರದ ಮೇಲೆ ಪ್ರಶ್ನಿಸಿದರೆ, ತೀರ್ಮಾನವಾಗಲೆಂದು ತೆರಿದಟ್ಟ ಏಕ ನ್ಯಾಯಧೀಶರ ತೀರ್ಪಿನ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ನ್ಯಾಯಾಲಯ ನಿರಾಕರಿಸಿತು.

ಪ್ರಕರಣ, “ಮಿನರಲ್ ಮೈನರ್ಸ್ ಯೂನಿಯನ್ “ವಿ” ಕುದುರೆಮುಖ ಐರನ್ ಕಂ.ಲಿ., ೧೯೮೯ (೧) ಎಲ್.ಎಲ್.ಜೆ. ೨೭೭ ಪು ೨೮೪ (ಕರ್ನಾಟಕ) : ಚತ್ತಿಸನಗರ ಕಾರ್ಖಾನಾ ಮಜ್ದೂರ್ ಯುನಿಯನ್ “ವಿ” ಯೂನಿಯನ್ ಆಫ್ ಇಂಡಿಯಾ ೧೯೯೭ ಲ್ಯಾಬ್ ಎಲ್.ಆರ್. ೪೩೧ ಪು ೪೩೩ (ಮಧ್ಯಪ್ರದೇಶ) : ಜನರಲ್ ಮ್ಯಾನೇಜರ್, ಇಂಡಿಯಾ ಸಿಮೆಂಟ್ಸ್ ಲಿ, ಶಂಕರನಗರ “ವಿ” ಎನ್.ಎಸ್. ಸುಬ್ರಹ್ಮಣ್ಯನ್ ೧೯೯೭ (೪) ಎಲಂ.ಎಲ್.ಎನ್. ೨೩೪ ಪು ೨೪೨ (ಮದ್ರಾಸ್).

ಅಭಿಸಂಧಿ : ಕಲಂ ಅಥವಾ ಉಪ ಕಲಂನಲ್ಲಿ ನೀಡಿರುವ ಗಣನಾರ್ಹ ಹಕ್ಕನ್ನು ತೆಗೆಯಲು ಕಾರಣವನ್ನು ವಿವರವಾಗಿ ವಿವರಿಸದ ಹೊರತು; ಅಭಿಸಂಧಿಯ ತೆಗೆದು ಹಾಕಲಾಗುವುದಕ್ಕಾಗುವುದಿಲ್ಲವೆನ್ನುವುದು ಈಗಾಗಲೇ ತೀರ್ಮಾನವಾಗಿರುವ ವಿಷಯ.

ಪ್ರಕರಣ : ಮಧುಗೋಪಾಲ “ವಿ” ೬ನೇ ಅಡಿಸನಲ್ ಜಡ್ಜ್, ೧೯೮೯ ಎ.ಐ.ಆರ್. ೧೫೫ ಪು. ೧೫೭: ಟಿ.ಎಸ್.ರೆಡ್ಡಿ “ವಿ” ಆಂಧ್ರ ರಾಜ್ಯ ಸರಕಾರ ಎಐಆರ್ ೧೯೯೨ ಎ.ಪಿ.೧೯ ಪು.೩೭; ಸರಸ್ವತಿದೇವಿ ಮತ್ತಿತರು “ವಿ”  ಕಮೀಷನರ್ ಆಫ್ ಭಾಗಲ್ಪುರ ಡಿವಿಜನ್, ೧೯೯೬ (೧) ಪಿ.ಎಲ್.ಜಿ.ಆರ್. ೯೨೪ ಪು ೯ ೨೭: ದಿಲೀಪ್ “ವಿ” ಕೇರಳ ಸ್ಟೇಟ್ ೨೦೦೦ (೮೪) ಎಫ್ ಎಲ್ ಆರ್ ೧೧೦ ಪು ೧೧೩ (ಕೇರಳ).

ಮಜೂರಿ ಸಂದಾಯ ಅಧಿನಿಯಮ ಕಲಂ ೯ರ ಪ್ರಕಾರ ಎರಡು ರೀತಿಯ ಕಡಿತಗಳುಂಟು. (೧) ಮಾಮೂಲು ಅಥವಾ ಸಾಮಾನ್ಯ ಕಡಿತ ಗೈರು ಹಾಜರಾದ ಅವಧಿಗೆ ಕಲಂ ೯ (೨)ರಲ್ಲಿ ತಿಳಿಸಿರುವಂತೆ (೧೧) ಮತ್ತು ಹೆಚ್ಚಾಗಿ ಅಥವಾ ದಂಡನಾರ್ಹ ಎಂಟು ದಿನಗಳ ಮಜೂರಿ ಕಡಿತ ಕಲಂ ೯ (೨)ರ ಅಭಿಸಂಧಿಯಲ್ಲಿ ತಿಳಿಸಿರುವಂತೆ, ಕಲಂ ೯ (೨)ರ ಪ್ರಕಾರ ಮಾಡುವ ಕಡಿತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅಭಿಪ್ರಾಯದ ಪ್ರಕಾರ ಸ್ವಾಭಾವಿಕ ನ್ಯಾಯತತ್ವ ಅನ್ವಯಿಸುವುದಿಲ್ಲ. ಆದರೆ ಕಲಂ ೯ (೨)ರ ಅಭಿಸಂಧಿ ಪ್ರಕಾರ ೧ ದಂಡನಾರ್ಹ ಅಥವಾ ಇನ್ನು ಹೆಚ್ಚಿನ ಕಡಿತಗಳ ವಿಷಯದಲ್ಲಿ ಸ್ವಾಭಾವಿಕ ನ್ಯಾಯತತ್ವವನ್ನು ಪಾಲಿಸಬೇಕು ಮತ್ತು ಅಧಿಕಾರಿಗಳು ಮುಷ್ಕರದ ನ್ಯಾಯಬದ್ಧತೆ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಅಭಿಸಂಧಿಯ ಅರ್ಥವ್ಯಾಪ್ತಿಗೆ ಬರುವಂತಹ ಆಪಾದಿತ ಕ್ರಮದ ನ್ಯಾಯಬದ್ಧತೆಯನ್ನು ಆಧರಿಸಿ ತೀರ್ಮಾನಿಸಬೇಕು. ಪ್ರಕರಣ ಓರಿಯಂಟ್ ಪೇಪರ್ ಮಿಲ್ಸ್ ಶ್ರಮಿಕ ಕಾಂಗ್ರೇಸ್ ಬ್ರಜರಾಜಿನಗರ “ವಿ” ವೈಸ್ ಪ್ರೆಸಿಡೆಂಟ್ ಓರಿಯಂಟ್ ಪೇಪರ್ ಮಿಲ್ಸ್ ಬ್ರಜರಾಜಿನಗರ ೧೯೮೮ ಲ್ಯಾಬ್ ಐಸಿ ೮೬೨ ಪು ೮೬೫ (ಒರಿಸ್ಸಾ).

ಅಧಿನಿಯಮದ ಕಲಂ ೯ (೨) ರ ಪ್ರಕಾರ, ಆಡಳಿತ ವರ್ಗವು ಎಂಟು ದಿನಗಳ ಮಜೂರಿಯನ್ನು ದಿನದ ಮುಷ್ಕರವನ್ನು ಆಧರಿಸಿ ಎಂಟು ದಿನಗಳ ಮಜೂರಿಯನ್ನು ಮೀರದಂತೆ ಹಿಡಿದುಕೊಳ್ಳಲು ಅಧಿಕಾರವಿರುತ್ತದೆ. ಆಡಳಿತ ವರ್ಗಕ್ಕೆ ಬರಬೇಕಾಗಿರುವ ಮೊತ್ತವನ್ನು ತಿಳುವಳಿಕೆ ಪತ್ರ ನೀಡದೆ ಹಿಡಿದುಕೊಳ್ಳಲು ಅಧಿಕಾರವಿರುತ್ತದೆ.

(ರಿಟ್ ಅರ್ಜಿ ಸಂ. ೧೪೬೩೬ ಮತ್ತು ೧೫೭೦೧-೧೯೯೮, ದಿನಾಂಕ : ೧೧.೯.೨೦೦೦) ೨೦೦೦ (೪) ಕೆ ಸಿ ಸಿ ಆರ್ ಸಂಕ್ಷಿಪ್ತ ಟಿಪ್ಪಣಿ-೨೨೮.

೧೦. ಹಾನಿ ಅಥವಾ ನಷ್ಟದ ಕಡಿತಗಳು

೧. ಕಲಂ ೭ (೨) ಖಂಡ (ಇ) ಅಥವಾ (೨)ರ ಪ್ರಕಾರ ಮಾಡುವ ಕಡಿತಗಳು ಉದ್ಯೋಗಿಯ ಬೇಜವಾಬ್ದಾರಿ ಅಥವಾ ತಪ್ಪಿನಿಂದಾಗಿ ಮಾಲೀಕನಿಗೆ ಆದ ಹಾನಿ ಅಥವಾ ನಷ್ಟಕ್ಕಿಂತ ಹೆಚ್ಚಿರಬಾರದು. (೧-ಅ) ಕಲಂ ೭ (೨) ಖಂಡ (ಇ) ಅಥವಾ ಖಂಡ (೨)ರ ಕೆಳಗೆ ಮಾಡುವ ಕಡಿತಗಳನ್ನು, ಉದ್ಯೋಗಿಯು ಮಾಡಿದ ಹಾನಿ ಅಥವಾ ನಷ್ಟದ ಬಗ್ಗೆ ಕಡಿತವನ್ನು ಏಕೆ ಮಾಡಬಾರದೆಂಬ ಬಗ್ಗೆ ಅವರಿಗೆ ಸ್ಪಷ್ಟೀಕರಣ ನೀಡಲು ಅವಕಾಶ ಕೊಡದೆ ಮಾಡಬಾರದು.

೨. ಇಂಥ ಎಲ್ಲಾ ಕಡಿತಗಳು ಮತ್ತು ಈ ಬಗ್ಗೆ ಮಾಡಿದ ಎಲ್ಲಾ ವಸೂಲಿಗಳನ್ನು ಈ ಬಗ್ಗೆ ನಿಗದಿತ ಮಾದರಿಯಲ್ಲಿ ಕಲಂ ೩ರ ಪ್ರಕಾರ ಮಜೂರಿ ಸಂದಾಯ ಮಾಡುವ ಜವಾಬ್ದಾರಿಯುಳ್ಳ ನೋಂದಾಣಿ ಪುಸ್ತಕದಲ್ಲಿ ಬರೆದಿರತಕ್ಕದ್ದು.

೧೧. ಸಲ್ಲಿಸಿದ ಸೇವೆಗೆ ಕಡಿತಗಳು

ಕಲಂ ೭ (೨) ಖಂಡ (ಈ) ಅಥವಾ ಖಂಡ (ಉ) ಕೆಳಗೆ ಮಾಡುವ  ಕಡಿತಗಳನ್ನು ಉದ್ಯೋಗಿಯ ಮಜೂರಿಯಲ್ಲಿ ಅವನ ವಸತಿ ಸೌಕರ್ಯ ಸೌಲಭ್ಯ ಅಥವಾ ಸೇವೆಯನ್ನು ಉದ್ಯೋಗದ ನಿಬಂಧನೆ ಅಥವಾ ಬೇರೆ ರೀತಿಗನುಗುಣವಾಗಿ ಒಪ್ಪಿಕೊಳ್ಳದಿದ್ದ ಹೊರತು ಮತ್ತು ಆ ಕಡಿತವು ಒದಗಿಸಿದ ವಸತಿ ಸೌಕರ್ಯ ಸೌಲಭ್ಯದ ಅಥವಾ ಒದಗಿಸಿದ ಸೇವೆಯ ಮೌಲ್ಯಕ್ಕಿಂತ ಹೆಚ್ಚಿರಬಾರದು ಮತ್ತು ಖಂಡ (ಖು) ಕೆಳಗೆ ಕಡಿತವು ರಾಜ್ಯ ಸರಕಾರವು ವಿಧಿಸುವಂತಹ ಷರತ್ತುಗಳಿಗೊಳಿಪಟ್ಟಿರಬೇಕು.

ರಾಜ್ಯ ತಿದ್ದುಪಡಿಗಳು

ಪಾಂಡಿಚೇರಿ:ಕಲಂ ೧೧ರ ನಂತರ ಈ ಕೆಳಕಂಡ ಕಲಂನ್ನು ಸೇರಿಸುವುದು ಅದೇನೆಂದರೆ; ೧೧-ಅ, ಮಾಲೀಕನು, ಪಾಂಡಿಚೇರಿ ಸರಕಾರದಿಂದ ಅಥವಾ ಅಧಿಕೃತ ಅಧಿಕಾರಿಯಿಂದ ಲಿಖಿತ ಕೋರಿಕೆ ಬಂದರೆ, ಉದ್ಯೋಗಿಯ ಮಜೂರಿಯಲ್ಲಿ ಕಲಂ ೭ (೨) ಖಂಡ (ಉಊ) ಪ್ರಕಾರ ಕಡಿತ ಮಾಡಿ, ಆ ರೀತಿ ಕಡಿತ ಮಾಡಿದುದನ್ನು ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆಯಲ್ಲಿ ಸೂಚಿಸಿದಂತೆ ರವಾನೆ ಮಾಡುವುದು.

ತಮಿಳುನಾಡು : ಕಲಂ ೧೧ರ ನಂತರ ಈ ಕೆಳಕಂಡ ಕಲಂಗಳನ್ನು ಸೇರಿಸುವುದು ಅವೆಂದರೆ; ೧೧-ಅ, ವಸತಿ ಸೌಕರ್ಯದ ಬಗ್ಗೆ ಕಡಿತಗಳು :

ಕಲಂ ೭ (೨) ಖಂಡ (ಉಸಿ) ಮಾಲೀಕನು ಉದ್ಯೋಗಿಯ ಮಜೂರಿಯಲ್ಲಿ ಕಡಿತ ಮಾಡಬೇಕು ಮತ್ತು ಆ ರೀತಿ ಕಡಿತ ಮಾಡಿದ ಹಣವನ್ನು ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆ ಮೂಲಕ ಸೂಚಿಸಿದಂತೆ ರವಾನೆ ಮಾಡಬೇಕು.

೧೧-ಆ, ವಿದ್ಯುಚ್ಛಕ್ತಿ ಬಗ್ಗೆ ಕಡಿತಗಳು: ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಅಥವಾ ಅಧಿಕೃತ ಅಧಿಕಾರಿಯಿಂದ ಲಿಖಿತ ಕೋರಿಕೆ ಬಂದರೆ, ಕಲಂ ೭ (೨) ಖಂಡ (ಉಉ) ರ ಕೆಳಗೆ ಮಾಲೀಕನು ಉದ್ಯೋಗಿಯ ಮಜೂರಿಯಲ್ಲಿ ಕಡಿತ ಮಾಡಬೇಕು ಮತ್ತು ಆ ರೀತಿ ಕಡಿತ ಮಾಡಿದ ಹಣವನ್ನು ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆಯಲ್ಲಿ ಸೂಚಿಸಿದಂತೆ ರವಾನಿಸಬೇಕು.

ಪ್ರಧಾನ ಅಧಿನಿಯಮ ಕಲಂ-೧೧-ಆ ಪ್ರಕಾರ ಈ ಕೆಳಕಂಡ ಕಲಂನ್ನು ಅಳವಡಿಸತಕ್ಕದ್ದು.

೧೧-ಇ ವೃತ್ತಿ ತೆರಿಗೆ ಬಗ್ಗೆ ಕಡಿತಗಳು : ಮಾಲೀಕನು, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಅಥವಾ ಅಧಿಕೃತ ಅಧಿಕಾರಿಯಿಂದ ಲಿಖಿತ ಕೋರಿಕೆ ಬಂದರೆ, ಕಲಂ ೭ (೨) ಖಂಡ (ಉಊ) ಕೆಳಗೆ ಅಧಿಕೃತವಾದ ಕಡಿತವನ್ನು ಮಾಡಬೇಕು ಮತ್ತು ಆ ರೀತಿ ಕಡಿತ ಮಾಡಿದ ಹಣವನ್ನು ಸರಕಾರವು ಸಾಮಾನ್ಯ ಅಥವಾ ವಿಶೇಷ ಆಜ್ಞೆ ಮೇರೆಗೆ ಸೂಚಿಸಿದಂತೆ ಸ್ಥಳೀಯ ಪ್ರಾಧಿಕಾರದ ಲೆಕ್ಕಕ್ಕೆ ರವಾನಿಸತಕ್ಕದ್ದು.

೧೨. ಮುಂಗಡಗಳ ವಸೂಲಾತಿ ಕಡಿತಗಳು

ಕಲಂ ೭ (೨) ಖಂಡ (ಊ) ಕೆಳಗೆ ಮಾಡತಕ್ಕ ಕಡಿತಗಳು ಈ ಕೆಳಕಂಡ ಷರತ್ತುಗಳಿಗೊಳಪಟ್ಟಿರಬೇಕು ಅವುಗಳೆಂದರೆ, ಅ) ಉದ್ಯೋಗಕ್ಕೆ ಮುಂಚೆ ಕೊಟ್ಟ ಮುಂಗಡವನ್ನು ಆ ಮಜೂರಿಯ ಪೂರ್ಣ ಅವಧಿಗೆ ಸಂಬಂಧಪಟ್ಟ ಮೊದಲು ಸಂದಾಯವಾಗುವ ಮಜೂರಿಯಲ್ಲಿ ಹಿಡಿಯತಕ್ಕದ್ದು. ಆದರೆ ಪ್ರಯಾಣ ವೆಚ್ಚಕ್ಕಾಗಿ ಕೊಟ್ಟ ಮುಂಗಡವನ್ನು ಕಡಿತ ಮಾಡುವ ಹಾಗಿಲ್ಲ.

(ಅ ಆ) ಉದ್ಯೋಗಕ್ಕೆ ತೆಗೆದುಕೊಂಡ ನಂತರ ಕೊಟ್ಟ ಮುಂಗಡವನ್ನು, ಸರಕಾರವು ಈ ಬಗ್ಗೆ ವಿಧಿಸಿದ ಷರತ್ತಿಗನುಗುಣವಾಗಿ ವಸೂಲಿ ಮಾಡಿಕೊಳ್ಳತಕ್ಕದ್ದು. (ಆ) ಮಜೂರಿ ಮುಂಗಡ ಹಣವನ್ನು ರಾಜ್ಯ ಸರಕಾರವು ಈ ಬಗ್ಗೆ ನಿಯಮಗಳನ್ನು ಮಾಡಿ ಎಷ್ಟು ಮುಂಗಡವನ್ನು ಕೊಡಬಹುದು ಮತ್ತು ಕಂತುಗಳಲ್ಲಿ ಅದನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಿಯಮಿಸುತ್ತದೊ ಹಾಗೆ ವಸೂಲಿ ಮಾಡುವುದು.

೧೨-ಅ, ಸಾಲ ವಸೂಲಾತಿ ಕಡಿತಗಳು :

ಕಲಂ ೭ (೨) ಖಂಡ (ಊಊ) ಕೆಳಗೆ ಮಾಡತಕ್ಕ ಸಾಲ ವಸೂಲಾತಿ ಕಡಿತಗಳನ್ನು ರಾಜ್ಯ ಸರಕಾರವು ಈ ಬಗ್ಗೆ ರಚಿಸುವ ನಿಯಮಗಳ ಪ್ರಕಾರ ಎಷ್ಟು ಸಾಲವನ್ನು ಕೊಡಬೇಕು ಮತ್ತು ಎಷ್ಟು ಬಡ್ಡಿಯನ್ನು ಸಂದಾಯ ಮಾಡಬೇಕೆಂದು ನಿಯಂತ್ರಿಸಿದಂತೆ ಮಾಡತಕ್ಕದ್ದು.

೧೩. ಸಹಕಾರ ಸಂಘಗಳು ಮತ್ತು ಜೀವವಿಮಾ ಯೋಜನೆಗಳಿಗೆ ಸಂದಾಯ ಮಾಡಬೇಕಾದ ಕಡಿತಗಳು

ಕಲಂ ೭ (೨) ಖಂಡ (ಖು) ಮತ್ತು (ಇ) ಕೆಳಗೆ ಮಾಡತಕ್ಕ ಕಡಿತಗಳನ್ನು ರಾಜ್ಯ ಸರಕಾರವು ವಿಧಿಸಿದ ಷರತ್ತುಗಳಿಗನುಗುಣವಾಗಿ ಮಾಡುವುದು.

ರಾಜ್ಯ ತಿದ್ದುಪಡಿ

ಕರ್ನಾಟಕ : ಪ್ರಧಾನ ಅಧಿನಿಯಮದ ಕಲಂ ೧೩ರಲ್ಲಿ :

೧. ತಲೆ ಬರಹಕ್ಕೆ ಈ ಕೆಳಕಂಡ ತಲೆ ಬರಹವನ್ನು ಬದಲಿಸುವುದು. ಅಂದರೆ : ಬೇರೆ ಕಡಿತಗಳು.

೨. ಪದಗಳು, ಪತ್ರಗಳು ಮತ್ತು ಆವರಣ ಚಿಹ್ನೆ “ಖಂಡ (ಏ), ಖಂಡ (ಐ) ಮತ್ತು ಖಂಡ ಫ” ಎಂಬ ಪದಗಳು, ಪತ್ರಗಳು ಮತ್ತು ಆವರಣ ಚಿಹ್ನೆಗಳನ್ನು ಬದಲಿಸತಕ್ಕದ್ದು.

೧೩. ಅ. ನೋಂದಣಿ ಪುಸ್ತಕ ಮತ್ತು ದಾಖಲೆಗಳನ್ನು ಇಡುವುದು :

೧. ಪ್ರತಿಯೊಬ್ಬ ಮಾಲೀಕನು ತಾನು ನೇಮಕ ಮಾಡಿಕೊಂಡ ಉದ್ಯೋಗಿಗಳ ಎಲ್ಲಾ ವಿವರ, ಅವರು ಮಾಡುತ್ತಿರುವ ಕೆಲಸ, ಅವರಿಗೆ ಕೊಡುತ್ತಿರುವ ಮಜೂರಿ, ಅವರ ಮಜೂರಿಯಲ್ಲಿ ಮಾಡಿದ್ದ ಕಡಿತಗಳು ಅವರು ಕೊಟ್ಟ ರಸೀದಿಗಳು ಮತ್ತು ಇತರ ಅಂತಹ ಎಲ್ಲಾ ವಿವರಗಳನ್ನು ನಿಗದಿತ ಮಾದರಿಯಲ್ಲಿ ಇಟ್ಟಿರುವ ನೋಂದಣಿ ಪುಸ್ತಕ ಮತ್ತು ದಾಖಲಾತಿಗಳನ್ನು ಇಡತಕ್ಕದ್ದು.

೨. ಈ ಅಧಿನಿಯಮದ ಈ ಕಲಂ ಪ್ರಕಾರ ಇಡಬೇಕಾದ ಎಲ್ಲಾ ನೋಂದಣಿ ಪುಸ್ತಕ ಮತ್ತು ದಾಖಲಾತಿಗಳನ್ನು ಆ ದಾಖಲಾತಿಗಳಲ್ಲಿ ಅಂತಿಮವಾಗಿ ನಮೂದಿಸಿದ ದಿನದಿಂದ ಮೂರು ವರ್ಷಗಳ ಕಾಲ ರಕ್ಷಿಸಿಡತಕ್ಕದ್ದು.

೧೪. ಪರಿಶೀಲಕರು

೧. ಕಾರ್ಖಾನೆಗಳ ಅಧಿನಿಯಮ, ೧೯೪೮ (೧೯೪೮ರ ೬೩) ಕಲಂ ೮ (೧)ರ ಪ್ರಕಾರ ನೇಮಕ ಮಾಡಿದ ಪರಿಶೀಲಕನೇ ಈ ಅಧಿನಿಯಮದ ಪ್ರಕಾರ ಅವನ ವ್ಯಾಪ್ತಿಗೆ ವಹಿಸಿದ ಕಾರ್ಖಾನೆಗಳಿಗೂ ಪರಿಶೀಲಕನಾಗಿರುತ್ತಾನೆ.

೨. ರಾಜ್ಯ ಸರಕಾರವು ಸಹ ಈ ಅಧಿನಿಯಮಕ್ಕೋಸ್ಕರ ಈ ಅಧಿನಿಯಮ ಅನ್ವಯಿಸುವ ಎಲ್ಲಾ ರೈಲ್ವೆ ಉದ್ಯೋಗಿಗಳ ಬಗ್ಗೆ (ಕಾರ್ಖಾನೆಯಲ್ಲಿರುವವರನ್ನು ಬಿಟ್ಟು) ಪರಿಶೀಲಕರನ್ನು ನೇಮಿಸಬಹುದು.

೩. ರಾಜ್ಯ ಸರಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವುದರ ಮೂಲಕ ತನಗೆ ಸೂಕ್ತವೆನಿಸಿದವರನ್ನು ಪರಿಶೀಲಕರನ್ನಾಗಿ ಈ ಅಧಿನಿಯಮಕ್ಕೋಸ್ಕರ ನೇಮಕ ಮಾಡಬಹುದು ಮತ್ತು ಅವರ ಅಧಿಕಾರ ವ್ಯಾಪ್ತಿಯೊಳಗೆ ಯಾವ ದರ್ಜೆಯ ಕಾರ್ಖಾನೆಗಳು, ಕೈಗಾರಿಕೆಗಳು ಅಥವಾ ಔದ್ಯೋಗಿಗಳು ಬರಬೇಕೆಂಬುದನ್ನು ನಿರ್ಧರಿಸುವುದು.

೪. ಪರಿಶೀಲಕನಾದನು :

ಅ. ಈ ಅಧಿನಿಯಮದ ಉಪಬಂಧಗಳು ಅಥವಾ ನಿಯಮಗಳನ್ನು ಜಾರಿಗೊಳಿಸಿದ್ದರೋ, ಇಲ್ಲವೊ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೋಸ್ಕರ ಅವನಿಗೆ ಸರಿ ಕಂಡ ರೀತಿಯಲ್ಲಿ ಪರೀಕ್ಷಿಸಬಹುದು ಮತ್ತು ವಿಚಾರಣೆ ಮಾಡಬಹುದು.

ಆ. ಅವನಿಗೆ ತಿಳಿದಮಟ್ಟಿಗೆ, ತನಗೆ ಬೇಕಾದಂತಹ ಸಹಾಯದೊಂದಿಗೆ ಈ ಅಧಿನಿಯಮದ ಉದ್ದೇಶಗಳನ್ನು ಪಾಲಿಸಲೋಸುಗ ಯಾವುದೇ ರೈಲ್ವೆ ಕಾರ್ಖಾನೆ, ಕೈಗಾರಿಕ ಅಥವಾ ಔದ್ಯೋಗಿಕ ಸಂಸ್ಥೆಯ ಆವರಣದೊಳಗೆ ಸೂಕ್ತ ಸಮಯದಲ್ಲಿ ಪ್ರವೇಶಿಸಿ ಪರೀಕ್ಷಿಸಬಹುದು ಮತ್ತು ಶೋಧಿಸಬಹುದು.

ಇ. ಯಾವುದೇ ರೈಲ್ವೆ ಅಥವಾ ಕಾರ್ಖಾನೆ ಅಥವಾ ಕೈಗಾರಿಕೆ ಅಥವಾ ಬೇರೆ ಔದ್ಯೋಗಿಕ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಮಜೂರಿ ಸಂದಾಯ ಮಾಡುವುದರ ಮೇಲ್ವಿಚಾರಣೆ ಮಾಡಬಹುದು.

ಈ. ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಲಿಖಿತ ಆಜ್ಞೆಯ ಮೂಲಕ, ಯಾವುದೇ ನೋಂದಣಿ ಪುಸ್ತಕ ಅಥವಾ ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ಮತ್ತು ಸೂಕ್ತವಾದ ಸ್ಥಳದಲ್ಲಿ ಒದಗಿಸಲು ಕೇಳಬಹುದು ಮತ್ತು ತನಗೆ ಬೇಕೆಂದವರ ಹೇಳಿಕೆಗಳನ್ನು ಪಡೆಯಬಹುದು.

ಉ. ಈ ಅಧಿನಿಯಮದ ಪ್ರಕಾರ ಮಾಲೀಕನು ಅಪರಾಧವೆಸಗಿದ್ದಾನೆಯೆಂದು ತಿಳಿದುಬಂದರೆ. ಆ ಅಪರಾಧಕ್ಕೆ ಸಂಬಂಧಪಟ್ಟಂತೆ ಬೇಕಾದ ಯಾವುದೇ ನೋಂದಣಿ ಪುಸ್ತಕ ಅಥವಾ ದಾಖಲಾತಿಗಳು ಅಥವಾ ಅದರ ಭಾಗಗಳ ನಕಲುಗಳನ್ನು ಪಡೆಯಬಹುದು ಮತ್ತು ವಶಪಡಿಸಿಕೊಳ್ಳಬಹುದು.

ಊ. ನಿಗದಿತ ಬೇರೆ ಯಾವುದೇ ಅಧಿಕಾರವನ್ನು ಚಲಾಯಿಸಬಹುದು. ಪರಂತು, ಈ ಉಪ ಕಲಂ-ಕೆಳಗೆ ಯಾವುದೇ ವ್ಯಕ್ತಿಯನ್ನು ಅವನು ಶಿಕ್ಷೆಗೊಳಪಡುವಂತಹ ಹೇಳಿಕೆಯನ್ನು ಕೊಡುವಂತೆ ಒತ್ತಾಯ ಮಾಡುವ ಹಾಗಿಲ್ಲ.

(೪-ಅ) ಈ ಉಪ ಕಲಂ ಕೆಳಗೆ ಅಪರಾಧ ಪ್ರಕ್ರಿಯೆ ಸಂಹಿತೆ ೧೯೭೩ (೧೯೭೪ರ ೨) ಉಪ ಸಂಧಿಗಳನ್ನು ಆ ಸಂಹಿತೆಯ ಕಲಂ ೯೪ರ ಪ್ರಕಾರ ವಾರಂಟಿನ ಮೇಲೆ ಶೋಧನೆ ಅಥವಾ ವಶಪಡಿಸಿಕೊಳ್ಳುವುದಕ್ಕೋಸ್ಕರ ಅನುಸರಿಸುವಂತೆ, ಈ ಸಂಬಂಧದಲ್ಲೂ ಶೋಧನೆ ಅಥವಾ ವಶಪಡಿಸಿಕೊಳ್ಳಲು ಅನುಸರಿಸಬಹುದು.

(೧೪-ಆ) ಪರಿಶೀಲಕರಿಗೆ ಒದಗಿಸಬೇಕಾದ ಸೌಲಭ್ಯಗಳು : ಪ್ರತಿಯೊಬ್ಬ ಮಾಲೀಕನು ಪರಿಶೀಲಕನಿಗೆ ನಮೂದನೆ ಮಾಡಿಕೊಳ್ಳಲು, ಪರಿಶೀಲಿಸಲು, ಮೇಲ್ವಿಚಾರಣೆ ಮಾಡಲು ಪರೀಕ್ಷೆ ಅಥವಾ ಶೋಧನೆ ಮಾಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸುವುದು.

೫. ಪ್ರತಿಯೊಬ್ಬ ಪರಿಶೀಲಕನೂ ಭಾರತೀಯ ದಂಡ ಸಂಹಿತೆ (೧೮೬೦ರ ೪೫) ಪ್ರಕಾರ ಸರಕಾರಿ ನೌಕರನೆಂದು ಪರಿಗಣಿಸತಕ್ಕದ್ದು.

೧೫. ಮಜೂರಿಯ ಕಡಿತಗಳಿಂದ ಅಥವಾ ತಡವಾಗಿ ಮಜೂರಿ ಸಂದಾಯ ಮಾಡುವುದರಿಂದ ಉದ್ಭವಿಸುವ ಹಕ್ಕುಗಳು ಮತ್ತು ದುರುದ್ದೇಶ ಅಥವಾ ಕಿರುಕುಳ ಪೂರಕ ಹಕ್ಕು ಕೋರಿಕೆಗೆ ದಂಡ

೧. ರಾಜ್ಯ ಸರಕಾರವು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸುವುದರ ಮೂಲಕ ಔದ್ಯೋಗಿಕ ವಿವಾದಗಳ ಅಧಿನಿಯಮ ೧೯೪೭ (೧೯೪೭ರ ೧೪) ಕಾಯಿದೆ ಕೆಳಗೆ ಸ್ಥಾಪಿಸಿದ ಯಾವುದೇ ಕಾರ್ಮಿಕ ನ್ಯಾಯಾಲಯದ ಅಥವಾ ಕೈಗಾರಿಕಾ ನ್ಯಾಯಾಧಿಕರಣದ ಪೀಠಾಸೀನ ಅಧಿಕಾರಿಗಳನ್ನು ಅಥವಾ ಯಾವುದೇ ಕೈಗಾರಿಕಾ ವಿವಾದಗಳ ತನಿಖೆ ಮತ್ತು ಇತ್ಯರ್ಥ ಗೊಳಿಸುವಿಕೆಗೆ ಸಂಬಂಧಪಟ್ಟ ಸಂವಾದಿ ಕಾನೂನು ಅಥವಾ ಕಾರ್ಮಿಕರ ಪರಿಹಾರ ಆಯುಕ್ತರು ಅಥವಾ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರ ಅನುಭವವಿರುವ ಯಾವುದೇ ಅಧಿಕಾರಿ ಅಥವಾ ವೇತನ ಪಡೆಯುತ್ತಿರುವ ದಂಡಾಧಿಕಾರಿಯನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಮಜೂರಿಯಿಂದ ಮಾಡುವ ಕಡಿತಗಳು ಅಥವಾ ತಡವಾಗಿ ಮಾಡುವ ಮಜೂರಿಯಿಂದಾಗಿ ಉದ್ಭವಿಸುವ ಹಾಗೂ ಇದಕ್ಕೆ ಸಂಬಂಧಪಟ್ಟ ಹಕ್ಕು ಕೋರಿಕೆಗಳ ವಿವಾದಗಳನ್ನು ಕೇಳಿ ತೀರ್ಮಾನಿಸಲು ನೇಮಿಸಬಹುದು. ಪರಂತು, ರಾಜ್ಯ ಸರಕಾರಕ್ಕೆ ಸರಿಯೆಂದು ಕಂಡು ಬಂದಲ್ಲಿ ನಿರ್ದಿಷ್ಟ ಪ್ರದೇಶಕ್ಕೆ ಒಬ್ಬರಿಗಿಂತ ಹೆಚ್ಚು ಅಧಿಕಾರಿಗಳನ್ನು ನೇಮಿಸಬಹುದು ಮತ್ತು ಸಾಮಾನ್ಯ ಅಥವಾ ವಿಶೇಷ ಆಜ್ಞೆ ಮೂಲಕ ಅವರು ಮಾಡಬಹುದಾದ ಕೆಲಸಗಳನ್ನು ವಿತರಣೆ ಮಾಡಬಹುದು ಅಥವಾ ಹಂಚಬಹುದು.

೨. ಈ ಅಧಿನಿಯಮಕ್ಕೆ ವಿರುದ್ಧವಾಗಿ ಉದ್ಯೋಗಿಯ ಮಜೂರಿಯಿಂದ ಯಾವುದೇ ಕಡಿತವನ್ನು ಮಾಡಿದರೆ ಅಥವಾ ಮಜೂರಿ ಸಂದಾಯ ಮಾಡುವುದನ್ನು ತಡ ಮಾಡಿದರೆ, ಅಥವಾ ವ್ಯಕ್ತಿಯು ತಾನಾಗಿ ಅಥವಾ ಯಾರೇ ನ್ಯಾಯವಾದಿಯು ಅಥವಾ ಯಾವುದೇ ಕಾರ್ಮಿಕ ಸಂಘದ ಪದಾಧಿಕಾರಿಯು ಲಿಖಿತ ಆದೇಶವುಳ್ಳವನಾಗಿ ಅಥವಾ ಈ ಅಧಿನಿಯಮಕ್ಕೊಳಪಟ್ಟ ಯಾವುದೇ ಪರಿಶೀಲಕ ಅಥವಾ ಉಪ ಕಲಂ (೧)ರ ಕೆಳಗೆ ನೇಮಕ ಮಾಡಲ್ಪಟ್ಟ ಅಧಿಕಾರಿಯ ಅನುಮತಿ ಮೇರೆಗೆ ಉಪ ಕಲಂ (೩) ಕೆಳಗೆ ಸಂಬಂಧಪಟ್ಟ ಅಧಿಕಾರಿಗೆ ಸೂಕ್ತ ನಿರ್ದೇಶನಕ್ಕೆ ಅರ್ಜಿ ಹಾಕಿಕೊಳ್ಳಬಹುದು.

ಪರಂತು ಆ ಅರ್ಜಿಯನ್ನು ಮಜೂರಿಯಿಂದ ಕಡಿತ ಮಾಡಿದ ದಿನದಿಂದ ಅಥವಾ ಮಜೂರಿಯನ್ನು ಕೊಡಬೇಕಾದ ದಿನದಿಂದ ಒಂದು ವರ್ಷದ ಒಳಗೆ ಯಾವುದು ಸೂಕ್ತವೊ ಅದರ ಪ್ರಕಾರ ಸಲ್ಲಿಸಬಹುದು ಮತ್ತು ಅಂತಹ ಅರ್ಜಿಯನ್ನು ಒಂದು ವರ್ಷದ ನಂತರ ಮಾಡಿದರೂ, ಅರ್ಜಿದಾರನು ಆ ಅವಧಿಯೊಳಗೆ ಅರ್ಜಿ ಸಲ್ಲಿಸಲಾಗುವುದಕ್ಕೆ ಒಪ್ಪಿಗೆಯಾಗುವಂತಹ ಕಾರಣವನ್ನು ನೀಡಿದರೆ, ಅಂತಹ ಅರ್ಜಿಯನ್ನು ಸ್ವೀಕರಿಸಿದರೆ, ಅಧಿಕಾರಿಯು ಸ್ವೀಕರಿಸಬಹುದು.

೩. ಉಪ ಕಲಂ (೨)ರ ಕೆಳಗೆ ಅರ್ಜಿಯನ್ನು ಸ್ವೀಕರಿಸಿದರೆ, ಅಧಿಕಾರಿಯು ಅರ್ಜಿದಾರ ಮತ್ತು ಮಾಲೀಕನನ್ನು ಅಥವಾ ಕಲಂ (೩)ರ ಪ್ರಕಾರ ಮಜೂರಿ ಸಂದಾಯ ಮಾಡಲು ಜವಾಬ್ದಾರನಾದ ಬೇರೆ ಯಾವುದೇ ವ್ಯಕ್ತಿಗೆ ಅವನ ಹೇಳಿಕೆ ನೀಡಲು ಸೂಕ್ತ ಅವಕಾಶ ನೀಡಿ ಮತ್ತು ತನಗೆ ಸರಿಕಂಡ ರೀತಿಯಲ್ಲಿ ಮತ್ತೊಮ್ಮೆ ವಿಚಾರಣೆ ಮಾಡಿದ ನಂತರ ಮಾಲೀಕ ಅಥವಾ ಯಾವುದೇ ವ್ಯಕ್ತಿ ಈ ರೀತಿಯ ದಂಡ ವಿಧಿಸಲು ಅವಕಾಶವಿರುವಂತಹ ಯಾವುದೇ ದಂಡನೆಗೆ ಅಡ್ಡಿಯಾಗದ ರೀತಿಯಲ್ಲಿ ಉದ್ಯೋಗಿಯಿಂದ ಕಡಿತ ಮಾಡಿದಂತಹ ಹಣವನ್ನು ಹಿಂತಿರುಗಿಸುವಂತೆ ಅಥವಾ ಸಂದಾಯ ಮಾಡದೇ ಇರುವ ಮಜೂರಿಯನ್ನು ಅಧಿಕಾರಿಗೆ ಸೂಕ್ತವೆನಿಸಿದ ಪರಿಹಾರ ಸಹಿತ ಅಂದರೆ, ಪೂರ್ವದ ವಿಷಯದಲ್ಲಿ ಹತ್ತು ಪಟ್ಟುಗಿಂತ ಹೆಚ್ಚಿರದಂತೆ ಈಚಿನ ವಿಷಯದಲ್ಲಿ ಇಪ್ಪತ್ತೈದು ರೂಪಾಯಿಗೆ ಹೆಚ್ಚಿಲ್ಲದಂತೆ, ಈ ಮಧ್ಯೆ ಅರ್ಜಿಯನ್ನು ತೀರ್ಮಾನ ಮಾಡುವ ಮುಂಚೆ ಕಡಿತದ ಹಣವನ್ನು ಅಥವಾ ತಡಮಾಡಿದ ಮಜೂರಿಯನ್ನು ನೀಡಿದ್ದರೂ ಸಹ, ಅಧಿಕಾರಿಯು ತನಗೆ ಸರಿಯೆನಿಸಿದ ಪರಿಹಾರವನ್ನು ಇಪ್ಪತ್ತೈದು ರೂಪಾಯಿಗಳಿಗೆ ಮೀರದಂತೆ ನೀಡಬೇಕೆಂದು ಆದೇಶಿಸಬಹುದು.

ಪರಂತು, ಈ ಕೆಳಕಂಡ ಕಾರಣಗಳಿಗಾಗಿ ಮಜೂರಿಯನ್ನು ನೀಡುವುದು ತಡವಾಗಿದೆಯೆಂದು ಅಧಿಕಾರಿಗೆ ಮನದಟ್ಟಾದರೆ, ಯಾವುದೇ ಪರಿಹಾರವನ್ನು ಕೊಡಬೇಕೆಂದು ಆದೇಶಿಸಬಾರದು.

ಅ. ಉದ್ಯೋಗಿಗೆ ಸಂದಾಯ ಮಾಡಬೇಕಾದ ಮೊತ್ತದ ಬಗ್ಗೆ ಪ್ರಾಮಾಣಿಕ ತಪ್ಪು ಅಥವಾ ವಿವಾದದಿಂದಾಗಿ ಅಥವಾ

ಆ. ತುರ್ತುಪರಿಸ್ಥಿತಿ ಅಥವಾ ಅಸಾಧಾರಣ ಪರಿಸ್ಥಿತಿ ಉಂಟಾದುದರಿಂದಾಗಿ, ಮಜೂರಿಯನ್ನು ಸಂದಾಯ ಜವಾಬ್ದಾರಿಯುಳ್ಳ ವ್ಯಕ್ತಿಯು ಮಜೂರಿ ಸಂದಾಯ ಮಾಡಲು ಸೂಕ್ತ ಮತ್ತು ಜಾಗರೂಕತೆ ಪ್ರಯತ್ನ ಮಾಡಿದರೂ ಕೊಡಲಾಗದಿದ್ದಾಗ,

ಇ. ಉದ್ಯೋಗಿಯು ಸಂದಾಯಕ್ಕೆ ಅರ್ಜಿ ಹಾಕದಿದ್ದರೆ ಅಥವಾ ಸಂದಾಯವನ್ನು ಸ್ವೀಕರಿಸದಿದ್ದರೆ,

೪. ಈ ಕಲಂ ಕೆಳಗೆ ಅರ್ಜಿ ಬಗ್ಗೆ ವಿಚಾರಣೆ ನಡೆಸುವ ಅಧಿಕಾರಿಗೆ ಸಮಾಧಾನವಾದರೆ,

ಅ. ಅರ್ಜಿಯು ದುರುದ್ದೇಶದಿಂದ ಅಥವಾ ಕಿರುಕುಳ ಕೊಡುವ ಉದ್ದೇಶವುಳ್ಳದ್ದಾಗಿದೆಯೆಂದು ಕಂಡು ಬಂದರೆ, ಅಧಿಕಾರಿಯು ಐವತ್ತು ರೂಪಾಯಿಗೆ ಮೀರದಂತೆ ಮಾಲೀಕನಿಗೆ ಅಥವಾ ಮಜೂರಿ ಸಂದಾಯಕ್ಕೆ ಜವಾಬ್ದಾರನಾಗಿರುವ ವ್ಯಕ್ತಿಗೆ ದಂಡ ಕೊಡಬೇಕೆಂದು ಉದ್ಯೋಗಿಗೆ ಆದೇಶ ನೀಡಬಹುದು.

ಆ. ಆದರೆ ಯಾವುದೇ ರೀತಿಯಿಂದಲೂ ಉಪಕಲಂ (೩) ಕೆಳಗೆ ಪರಿಹಾರವನ್ನು ಕೊಡಬೇಕೆಂದು ಆದೇಶಿಸಿದ್ದರೆ, ಅರ್ಜಿದಾರನು, ಈ ಕಲಂ ಕೆಳಗೆ ನಿವಾರಣೋಪಾಯವನ್ನು ಕೋರಬೇಕೆಂಬ ಒತ್ತಾಯ ಮಾಡುವ ಹಾಗಿಲ್ಲ. ಆದರೆ ಅಧಿಕಾರಿಯು ಜುಲ್ಮಾನೆಯನ್ನು ಐವತ್ತು ರೂಪಾಯಿಗಳಿಗೆ ಮೀರದಂತೆ ಸರಕಾರಕ್ಕೆ ಕೊಡಬೇಕೆಂದು ಮಾಲೀಕನಿಗೆ ಅಥವಾ ಮಜೂರಿ ಸಂದಾಯಕ್ಕೆ ಜವಾಬ್ದಾರನಾದ ವ್ಯಕ್ತಿಯು ನೀಡಬೇಕೆಂದು ಆದೇಶಿಸಬಹುದು.

೪. ಅ. ಎಲ್ಲಿ ಮಾಲೀಕನು ಅಥವಾ ಉದ್ಯೋಗಿಯ ವಾರಸುದಾರನಿಂದ ಅಥವಾ ವಾರಸುದಾರರ ಬಗ್ಗೆ ವಿವಾದವಿದ್ದರೆ, ಆ ವಿವಾದದ ಬಗ್ಗೆ ಅಧಿಕಾರಿಯ ತೀರ್ಮಾನವೇ ಅಂತಿಮ.

೪. ಆ. ಈ ಕಲಂ ಕೆಳಗೆ ಮಾಡುವ ಯಾವುದೇ ವಿಚಾರಣೆಯು ಭಾರತೀಯ ದಂಡ ಸಂಹಿತೆ (೧೮೬೦ರ ೪೫) ಕಲಂ ೧೯೩, ೨೧೯ ಮತ್ತು ೨೨೮ರ ಕೆಳಗಿನ ನ್ಯಾಯಕ ನಡವಳಿಕೆಗಳೆಂದು ಪರಿಗಣಿಸುವುದು.

೫. ಈ ಕಲಂ ಕೆಳಗೆ ವಸೂಲಿ ಮಾಡಬೇಕೆಂದು ಆದೇಶಿಸಿರುವ ಯಾವುದೇ ಹಣವನ್ನು :

ಅ). ಆ ಅಧಿಕಾರಿಯು ದಂಡಾಧಿಕಾರಿಯಾಗಿದ್ದರೆ, ಆ ಜುಲ್ಮಾನೆಯು ದಂಡಾಧಿಕಾರಿಯಾಗಿ ಅವನೇ ವಿಧಿಸಿದ್ದೆಂದೂ ಮತ್ತು

ಆ). ಅಧಿಕಾರಿಯು ದಂಡಾಧಿಕಾರಿಯಾಗಿಲ್ಲದಿದ್ದರೆ ಯಾವ ದಂಡಾಧಿಕಾರಿಯ ಮುಂದೆ ಅಧಿಕಾರಿಯು ಅರ್ಜಿಯನ್ನು ಹಾಕಿಕೊಳ್ಳುತ್ತಾನೋ, ಆ ದಂಡಾಧಿಕಾರಿಯೇ ಜುಲ್ಮಾನೆ ವಸೂಲಿ ಮಾಡುವುದು.