ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವ ವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಆನೂಹ್ಯ ಲೋಕಗಳ ಕಡೆಗೆ ತಮ್ಮನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. “ಕನ್ನಡ” ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರು ಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ  ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿ ಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಅನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿ ರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡ ವಿಶ್ವವಿದ್ಯಾಲಯವು ಶ್ರೀಸಾಮಾನ್ಯರಿಗಾಗಿ ಕಾನೂನು ಎನ್ನುವ ಮಾಲಿಕೆಯಲ್ಲಿ ಆರು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಈ ಪುಸ್ತಕಗಳ ಪ್ರಕಟಣೆಗೆ ಉದಾರ ಆರ್ಥಿಕ ನೆರವನ್ನು ಕೊಟ್ಟಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಯೋಜನೆಗೆ ಕರ್ನಾಟಕ ಸರ್ಕಾರದ ಕಾನೂನು ಸಚಿವರಾಗಿದ್ದ ಶ್ರೀ ಎಚ್.ಕೆ.ಪಾಟೀಲರು ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು ತೋರಿಸಿದ ಪ್ರೋತ್ಸಾಹವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಶ್ರೀ ಆರ್.ವಿ. ರವೀಂದ್ರನ್ ಅವರನ್ನು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಶ್ರೀ.ಪಿ. ವಿಶ್ವನಾಥಶೆಟ್ಟಿ ಅವರನ್ನೂ ಈ ಸಂದರ್ಭದಲ್ಲಿ ತುಂಬು ಮನಸ್ಸಿನಿಂದ ನಾನು ನೆನೆಯುತ್ತೇನೆ.

ಶ್ರೀಸಾಮಾನ್ಯರಿಗಾಗಿ ಕಾನೂನು ಎನ್ನುವುದು ಇಂದಿನ ಬಹಳ ಮಹತ್ವದ ಧ್ಯೇಯವಾಕ್ಯ ಭಾರತದ ಸಂವಿಧಾನವಾಗಲೀ, ನಮ್ಮ ದೇಶದ ಜನರ ಒಳಿತಿಗಾಗಿ ರಚಿಸಿರುವ ಕಾನೂನುಗಳಾಗಲೀ, ಬಹುತೇಕ ಇಂಗ್ಲೀಷ ಭಾಷೆಯಲ್ಲಿದ್ದು ಸಾಮಾನ್ಯರ ಅರಿವಿನ ಅಂಚಿನಿಂದ  ದೂರವೇ ಉಳಿದಿವೆ. ಕರ್ನಾಟಕದಲ್ಲಿ ಜನರ ಭಾಷೆಯಾದ ಕನ್ನಡದಲ್ಲಿ ಸಮಸ್ತ ಆಡಳಿತ ತಿಳುವಳಿಕೆಯನ್ನು ಕೊಡಬೇಕು ಎನ್ನುವ ಉದ್ದೇಶಕ್ಕನುಗುಣವಾಗಿ ಈ ಗ್ರಂಥವನ್ನು ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸುತ್ತಿದೆ. ಜನರಿಗೆ ನ್ಯಾಯವನ್ನು ಒದಗಿಸಬೇಕು ಮತ್ತು ಸಾಮಾಜಿಕ ನ್ಯಾಯವನ್ನು ಪಾಲಿಸಬೇಕು ಎನ್ನುವ ಮಾತುಗಳು ನಿಜವಾಗಬೇಕಾದರೆ ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ಎಲ್ಲ ಕಾನೂನುಗಳ ಮಾಹಿತಿ ದೊರೆಯಬೇಕು. ಈ ದೃಷ್ಟಿಯಿಂದ ಜನರ ಬಳಿಗೆ ನಿಜವಾದ ನ್ಯಾಯವನ್ನು ಒದಗಿಸುವ ಉದ್ದೇಶದಿಂದ  ಈ ಗ್ರಂಥದ ಪ್ರಕಟಣೆಗೆ ವಿಶೇಷ ಮಹತ್ವವಿದೆ. ಜನಸಾಮಾನ್ಯರಿಗೆ ಅರ್ಥವಾಗುವಾಗಿ ಕನ್ನಡ ವಿಶ್ವವಿದ್ಯಾಲಯವು ಈ ಕಾನೂನು ಪುಸ್ತಕಗಳ ಪ್ರಕಟಣೆಯನ್ನು ಕೈಗೆತ್ತಿಕೊಂಡಿದೆ.

ಮಜೂರಿ ಸಂದಾಯ ಅಧಿನಿಯಮ ೧೯೩೬ ಈ ಪುಸ್ತಕವನ್ನು ಶ್ರೀ ಬಿ.ವೆಂ. ಪುಟ್ಟೇಗೌಡ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಬರೆದು ಕೊಟ್ಟಿದ್ದಾರೆ.  ಪ್ರಸಿದ್ಧ ವಕೀಲರೂ ಹಾಗೂ ಮಾಜಿ ಮೇಯರ್ ಆದ ಶ್ರೀ ಬಿ.ವೆಂ. ಪುಟ್ಟೆಗೌಡ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿಯೂ ಕೂಡ ವಿಶೇಷ ಸಾಧನೆಯನ್ನು ಮಾಡಿದವರು. ಮಜೂರಿ ಸಂದಾಯ ಅಧಿನಿಯಮ ೧೯೩೬ನ್ನು ತುಂಬಾ ಸರಳವಾಗಿ ಕನ್ನಡದಲ್ಲಿ ತಿಳಿಸಿಕೊಟ್ಟಿದ್ದಾರೆ.  ಇವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಕೃತಜ್ಞತೆಗಳು. ಈ ಪುಸ್ತಕದ ತಜ್ಞ ಪರಿಶೀಲಕರಾಗಿ ಶ್ರೀಮತಿ ಹೇಮಲತಾ ಮಹಿಷಿ, ಶ್ರೀ ಎಚ್.ಆರ್. ದಾಸೇಗೌಡ ಅವರು ಹಾಗೂ ಭಾಷಾ ಪರಿಶೀಲನಾ ತಜ್ಞರಾಗಿ ಪ್ರೊ.ಎ.ವಿ.ನಾವಡ ಅವರು ಸಹಕರಿಸಿದ್ದಾರೆ. ಇವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ.ಎ. ವಿವೇಕ ರೈ 
ಕುಲಪತಿಗಳು