ಬದುಕಿಗೊಂದು ಆಧಾರಬೇಕು, ಆಧಾರವನ್ನು ನಿರ್ಧರಿಸುವಲ್ಲಿ ವ್ಯಕ್ತಿಯ ವ್ಯಕ್ತಿತ್ವ ಮಹತ್ವದ ಪಾತ್ರವಹಿಸುತ್ತದೆ. ತಾನು ಪಡೆದುಕೊಂಡ ಬೌದ್ಧಿಕ, ಸಾಮರ್ಥ್ಯದೊಂದಿಗೆ ತನಗೆ ದೊರೆತ ತರಬೇತಿ, ಕೌಶಲ್ಯಗಳ ಆಧಾರದ ಮೇಲೆ ವೃತ್ತಿಯನ್ನಾಯ್ದುಕೊಳ್ಳುತ್ತಾನೆ. ಮನೆತನದ ವೃತ್ತಿಗಳನ್ನು ಪ್ರತಿಯೊಬ್ಬರು ನೋಡಿ, ಮಾಡಿ ಕಲಿಯುತ್ತಾರೆ. ಪ್ರತಿಯೊಂದು ವೃತ್ತಿಯಲ್ಲಿ ಆಸಕ್ತಿ ಮತ್ತು ಶ್ರದ್ಧೆ ಆತನಲ್ಲಿ ಕುಶಲತೆಯನ್ನು ಇಮ್ಮಡಿಗೊಳಿಸುತ್ತದೆ. ಆದ್ದರಿಂದ ಕಾಯಕವುಳ್ಳ ಭಕ್ತನ ಆಯತವನೋಡಿರೋ ಎಂದು ಸರ್ವಜ್ಞ ಸಾರಿದ್ದಾನೆ. ಪ್ರತಿಯೊಂದು ವೃತ್ತಿಯಿಂದ ದೈಹಿಕ ಶ್ರಮ, ಮಾನಸಿಕ ನೆಮ್ಮದಿ ಆರ್ಥಿಕ ಸಹಾಯ ದೊರೆಯುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗುತ್ತದೆ. ಆದ್ದರಿಂದ ವಚನಕಾರರು ಕಾಯಕವನ್ನು ಕೈಲಾಸ ಎಂದು ತಿಳಿಸಿದರು.

ಮಡಿಮಾಡುವ ವೃತ್ತಿಯಲ್ಲಿರುವ ಮಡಿವಾಳ ಜನಾಂಗದವರು ಹಳ್ಳಿಯಿಂದ-ದಿಲ್ಲಿಯವರೆಗೆ ಪ್ರಪಂಚದ ಎಲ್ಲೆಡೆ ಇದ್ದಾರೆ. “ಉದ್ಯೋಗ ಪುರುಷ ಲಕ್ಷಣ” ಎಂಬ ಮಾತು ಪರುಷನಿಗಷ್ಟೇ ಅಲ್ಲ ಸ್ತ್ರೀಗೂ ಅನ್ವಯಿಸುವಂತಾಯಿತು. ಗ್ರಾಮೀಣ ಪ್ರದೇಶದಲ್ಲಂತೂ ಸ್ತ್ರೀಯು ಪರಮ ಹಸ್ತ ಮನೆ-ಹೊಲ ವೃತ್ತಿಗಳಲ್ಲಿ ಸಹಕಾರಿಯಾಗಿದೆಂಬುದು ಮರೆಯಲಾಗದು.

ಮನೆತನದ ಹಿರಿಯರು ರೂಢಿ ಮಾಡಿಕೊಂಡ ವೃತ್ತಿಗಳನ್ನು ಮುಂದಿನ ತಲೆಮಾರಿನವರು ಮುಂದುವರೆಸಿಕೊಂಡು ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಕಾಲಕಸಬುದಾರರು ಊರಲ್ಲಿ ಇದ್ದರೆ ಊರಿನ ಸಕಲ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ. ಸಂಘ ಜೀವಿಯಾದ ಮಾನವನು ತನ್ನೆಲ್ಲ ಬೇಡಿಕೆಗಳನ್ನು ತಾನೆ ಪೂರೈಸಿಕೊಳ್ಳಲು ಸಾಧ್ಯವಾಗದೆ ಇದ್ದಾಗ ಬಡಿಗ, ಕಮ್ಮರ, ಚಮ್ಮಾರ, ಕುಂಬಾರ, ಕ್ಷೌರಿಕ ಅಗಸ ಮುಂತಾದ ಕಸಬುದಾರರನ್ನು ಊರಲ್ಲಿ ಇರಿಸಿಕೊಂಡು ಅವರಿಗೆ ಆಯಪದ್ಧತಿಯಿಂದ ಧವಸಧಾನ್ಯ, ಹಣ ಮುಂತಾದ ವಸ್ತುಗಳನ್ನು ನೀಡಿ ತಮ್ಮೊಂದಿಗೆ ಒಂದೆಡೆ ನೆಲೆಸಲು ಅನುವುಮಾಡಿಕೊಟ್ಟರು. ಆಯಗಾರರ ಸಹಕಾರವಿಲ್ಲದೆ ಸಾಮಾಜಿಕ ಜೀವನವು ನೆಮ್ಮದಿಯಾಗಲಾರದು. ಈ ಕುಲಕುಸಬುಗಳೇ ಜಾತಿಗಳಾಗಿ ಮಾರ್ಪಟ್ಟು ಸಾಮಾಜಿಕ ಏರು ಪೇರುಗಳನ್ನು ನಿರ್ಮಾಣ ಮಾಡಿವೆ.

ಮಡಿವಾಳ ಜನಾಂಗದ ವೃತ್ತಿ ಪರಂಪರೆಯ ಬಗ್ಗೆ ಹಲವಾರು ಭಿನ್ನಾಭಿಪ್ರಾಯಗಳಿವೆ. ತಮ್ಮದೆ ಆದ ಸಂಸ್ಕೃತಿಯನ್ನು ಇವರು ಹೊಂದಿದ್ದಾರೆ. ಪ್ರಾದೇಶಿಕತೆಗೆ ಅನುಗುಣವಾಗಿ ಇವರಲ್ಲಿ ಭಾಷೆ, ರೀತಿ-ನೀತಿ ಹಬ್ಬ ಹರಿದಿನಗಳು, ಆಚಾರ-ವಿಚಾರಗಳು ನಡೆ-ನುಡಿಗಳು ಸಂಪ್ರದಾಯಗಳು ಭಿನ್ನವಾಗಿವೆ. ಆದರೆ ವೃತ್ತಿ ನಿಯಮಾಳಿಗಳು ಏಕಮುಖವಾಗಿವೆಂಬುದು ಗಮನಾರ್ಹ ವಿಷಯವಾಗಿದೆ.

ಸರಸ್ವತಿ, ಲಕ್ಷ್ಮೀ, ಪಾರ್ವತಿ, ಶಚಿ ಛಾಯಾ ತಮ್ಮ ಹೊರಗಾದಾಗಿನ ಬಟ್ಟೆಗಳನ್ನು ಮಡಿಮಾಡಲು ಒಬ್ಬಳನ್ನು ನೇಮಿಸಿದರಂತೆ ಆಕೆ ಆ ಬಟ್ಟೆಗಳನ್ನೆಲ್ಲ ಸಮುದ್ರಕ್ಕೆ ತಂದಳು. ಜೊತೆಗೆ ಮಗನನ್ನು ಕರೆತಂದಳು. ಬಟ್ಟೆ ಸೆಲೆಯಲು ಕಲ್ಲು, ಸವುಳು, ಬಣ್ಣ, ಉರುವಲು ಮೊದಲಾದ ಸಾಧನಗಳೇನೂ ಇರಲಿಲ್ಲ. ಮಗನ ತಲೆಯನ್ನು ಕಡೆದು, ರಕ್ತವನ್ನು ಬಣ್ಣ ಮಾಡಿದಳು. ಕಣ್ಣನ್ನು ನೀತಿ ಮಾಡಿದಳು ಹಾಗೆಯೇ ಮಾಂಸ ಸವಳು, ಬೆನನ್ನು ಹಾಸುಗಲ್ಲು, ಕಾಲುಗಳನ್ನು ಕಟ್ಟಿಗೆ ಮಾಡಿದಳು. ತೋಳುಗಳನ್ನು ಇಸ್ತ್ರೀಪೆಟ್ಟಿಗೆ ಮಾಡಿ, ಹೊಟ್ಟೆಯನ್ನು ಪಾತ್ರೆ ಮಾಡಿದಳು. ಅಗ್ನಿಯನ್ನು ಪ್ರಾರ್ಥಿಸಿ ಬೆಂಕಿಯನ್ನು ಪಡೆದಳು. ಹೀಗೆ ಶುದ್ಧಿಗೊಳಿಸಿ ತಂದ ಬಟ್ಟೆಗಳನ್ನು ಕಂಡ ದೇವಿಯರು ಎಲ್ಲ ವಿವರಗಳನ್ನು ಕೇಳಿದರು. “ನಿನ್ನ ಮಗನನ್ನು ಕರೆ” ಎಂದರು. ಆ ವೀರ ಮಹಿಳೆ ಕರೆದಾಗ ಆತ ಎದ್ದು ಬಂದ ಆಕೆಗೆ ಬೇಡು ಎಂದರು. ಬಟ್ಟೆ ಸೆಳೆಯಲು ಮೊಣಕಾಲ ಮಟ್ಟ ನೀರು ಹೊಟ್ಟೆಗೆ ಅನ್ನದಕೂಲಿ ಕೇಳಿದಳಂತ ಆಕೆ, ಆಕೆಯ ಮಗನ ಮಕ್ಕಳೇ ಅಗಸರು (ಛಂದಃಸ್ಮೃತಿ ಪುಟ-೧೮) ಕಥೆ ಕಾಲ್ಪನಿಕವೋ ನಡೆದ ಘಟನೆಯೋ ಎಂಬುದು ಇಲ್ಲಿ ಮುಖವಾಗುವುದಿಲ್ಲ. ಈ ವೃತ್ತಿಯಲ್ಲಿ ಪ್ರಥಮವಾಗಿ ನಿರತಳಾದವಳು ಮಹಿಳೆ ಎಂಬುದು ಮುಖ್ಯವಾಗಿ ನಿಲ್ಲುತ್ತದೆ. ಮಡಿಮಾಡುವ ಕಾಯಕ್ಕಾಗಿ ಅಗಸಕುಲ ಹುಟ್ಟಿದೆಂಬುವ ಸಾಧ್ಯತೆಗಳಿಗೆ ಉತ್ತರ ದೊರೆಯುವುದರೊಂದಿಗೆ ಈ ಜನಾಂಗದ ಪ್ರಾಚೀನತೆಯು ತಿಳಿದುಬರುತ್ತದೆ.

ಕನ್ನಡ ನಾಡಿನಲ್ಲಿ ಅಗರಸರಿಗೆ ಮಲ್ಲಿಗೆ ದೇವಿ ಒಕ್ಕಲು ಅಥವಾ ವೀರಘಂಟೆ ಮಡಿವಾಳ ಕುಲ ಎಂಬ ಹೆಸರುಗಳಿವೆ. ಮೊದಲನೆಯ ವಿಷಯವು ಸ್ತ್ರೀ ಪರವಾಗಿದ್ದು ಎರಡನೆಯದು ಪುರುಷ ಪರವಾಗಿದೆ.

ಸಮಾಜದ ಸೂತಕ ಕಳೆವಲ್ಲಿ ಒಂದು ವರ್ಗ ರೂಪಗೊಂಡ ಆ ವರ್ಗದ ಸೇವೆ ನಿರಂತರವಾಗಿ ಬೆಳೆದು ಬಂದಿತ್ತೆನ್ನಬಹುದಾಗಿದೆ. ಈ ಜನರ ಕಾರ್ಯವು ಗ್ರಾಮೀಣ ಪ್ರದೇಶದಲ್ಲಿ ಒಂದು ಕಸುಬಾಗಿ ವಿಶಿಷ್ಟ ಸ್ಥಾನ ಪಡೆಯಿತು. ಕ್ರಿ.ಶ. ೧೦೭೭ರ ವೀರಗಲ್ಲೊಂದರಲ್ಲಿ ಈ ಜನಾಂಗದ ವೃತ್ತಿಗೆ ಸಂಬಂಧಿಸಿದ ಪ್ರಥಮ ಆಕರ ದೊರೆಯುತ್ತದೆ. ಆಳ ಎಂಬ ಅಕ್ಕಸಾಲಿ ರಾಯ ಎಂಬ ಅಗಸ ಇಬ್ಬರೂ ಊರಿನವರಿಂದ ಆಯಾ ಪಡೆದುಕೊಂಡಿದ್ದನ್ನು ಹೇಳಿದೆ. ಈ ಮಡಿವಾಳ ವೃತ್ತಿಯು ಬಹು ಪ್ರಾಚೀನ ಕಾಲದಿಂದಲೂ ಇತ್ತೆಂಬುದನ್ನು ನಾವು ಆಧಾರಗಳಿಂದ ನೋಡಬಹುದಾಗಿದೆ.

ತೆಲುಗು ಮಾತನಾಡುವ ಮಡಿವಾಳರು ಮೂಲತಃ ಆಂಧ್ರಪ್ರದೇಶದಿಂದ ಬಂದು ನೆಲೆಸಿದವರಾದರೆ, ತಮಿಳು ಮಾತನಾಡುವ ಬೆಂಗಳೂರು ಸುತ್ತಲಿನ ಕೆಲ ಊರುಗಳಲ್ಲಿ ವಾಸವಾಗಿರುವ ಮಡಿವಾಳರು ತಮಿಳುನಾಡಿನಿಂದ ಮರಾಠಿ ಭಾಷೆ ಮಾತನಾಡುವ ಮಡಿವಾಳರು ಮಹಾರಾಷ್ಟ್ರದಿಂದ ಬಂದು ನೆಲೆಸಿದ್ದಾರೆ.

ಕನ್ನಡ ನಾಡಿನಲ್ಲಿ ದೊರೆತ ಶಾಸನ, ಸಾಹಿತ್ಯ ಇತರ ಮಾಹಿತಿಗಳಿಂದ ಕನ್ನಡ ಸಂಸ್ಕೃತಿಯಲ್ಲಿ ಬೆಳೆದು ಬಂದ ಮೂಲನಿವಾಸಿಗಳಾದ ಮಡಿವಾಳರು ನಾಡಿನ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಸದ್ಯದ ಜನಾಂಗದ ನಾಯಕ “ಶರಣ ಮಡಿವಾಳ ಮಾಚಿದೇವನಾಗಿದ್ದಾನೆ. ಆತನೇ ನಮ್ಮ ವಂಶಸ್ಥ ಎಂದು ಅಭಿಮಾನದಿಂದ ಹೇಳುತ್ತಾರೆ.

ಮಡಿವಾಳರ ವೃತ್ತಿಯ ಆಧಾರಸ್ಥಂಬ ಸ್ತ್ರೀಯಾಗಿದ್ದಾಳೆ. ಊರಿನ ಮನೆ ಮನೆಗಳಿಗೆ ತಿರುಗಿ ಬಟ್ಟೆ ತರುವುದು ಸ್ವಚ್ಛಗೊಳಿಸುವುದು ಮತ್ತು ಇಸ್ತ್ರೀಯನ್ನು ಮಾಡಿ ಮನೆ-ಮನೆಗೆ ಮುಟ್ಟಿಸುವ ಕಾಯಕದಲ್ಲಿ ಸ್ತ್ರೀಯರು ಪ್ರಮುಖ ಪಾತ್ರ ವಹಿಸುತ್ತಾರೆ. ಪುರುಷ ಪ್ರಧಾನವಾದ ಕುಟುಂಬದಲ್ಲಿ ಸ್ತ್ರೀ ಗೌಣವಾಗಿ ಗಣಿಸಲ್ಪಟ್ಟರೂ ಮಡಿವಾಳರ ವೃತ್ತಿಯಲ್ಲಿ ಸ್ತ್ರೀ ಪ್ರಮುಖವಾದ ಪಾತ್ರ ವಹಿಸುತ್ತಾಳೆ. ಮನೆಯ ಎಲ್ಲಾ ಜವಾಬ್ದಾರಿಯನ್ನು ಸ್ತ್ರೀಯರೇ ವಹಿಸಿಕೊಂಡು ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತಾರೆ.

 

ವೃತ್ತಿ ವಿಧಾನ

ಮಡಿವಾಳರು ಪ್ರತಿದಿನ ಮುಂಜಾನೆ ೬ರಿಂದ ೧೦ ಗಂಟೆಯೊಳಗಾಗಿ ಒಗೆಯುವ ಬಟ್ಟೆಗಳನ್ನು ತಮ್ಮ ಒಕ್ಕಲು ಮನೆಗಳಿಂದ ತರುವರು. ಬಟ್ಟೆಗಳನ್ನು ಲೆಕ್ಕಹಾಕಿ ಮನೆಯವರಿಗೆ ಹೇಳಿ ಬರುವ ವಾಡಿಕೆ ಇದೆ. ಆ ಬಟ್ಟೆಗಳಲ್ಲಿ ಇಸ್ತ್ರಿ ಮಾಡುವ ಬಟ್ಟೆಗಳನ್ನು ಮನೆಯಲ್ಲೇ ಹೆಣ್ಣುಮಕ್ಕಳು ಒಗೆದು ಕೊಡುತ್ತಾರೆ. ಉಳಿದ ಬಟ್ಟೆಗಳನ್ನು ಒಂದು ಸೀರೆಯನ್ನು ಮಡಚಿ ಗಂಟುಕಟ್ಟಿಕೊಂಡು ಬರುತ್ತಾರೆ. ಹೀಗೆ ತಂದ ಬಟ್ಟೆಗಳನ್ನು ದೊಡ್ಡ ಗಂಟುಗಳಲ್ಲಿ ಕಟ್ಟುತ್ತಾರೆ. ಇದನ್ನು “ಗುದಿ” ಕಟ್ಟುವುದೆಂಬ ವಿಶಿಷ್ಟ ಶಬ್ದದಲ್ಲಿ ಹೇಳುತ್ತಾರೆ. ಬಟ್ಟೆ ಒಗೆಯಲು ಬೇಕಾದ ವಸ್ತುಗಳಾದ ಸವಳು, ಸುಣ್ಣ ಬಕೇಟು, ತೆಪಾಲ, ಸೋಡಾ, ಬ್ರೆಷ್‌, ಸಾಬೂನು ಬೇಕಾದ ವಸ್ತುಗಳನ್ನು ಬಕೇಟ್‌ನಲ್ಲಿ ತುಂಬಿಕೊಳ್ಳುತ್ತಾರೆ. ಇದರೊಂದಿಗೆ ತಂಗಳು ಅಥವಾ ಬಿಸಿಯಾಗಿ ಮಾಡಿದ ಅಡುಗೆಯ ಬುತ್ತಿ ಕಟ್ಟಿಕೊಳ್ಳುತ್ತಾರೆ. ಹಳ್ಳ ದೂರವಿದ್ದರೆ ಮತ್ತೆ ಮತ್ತೆ ಬಂದು ಹೋಗಲು ಸಾಧ್ಯವಾಗದ ಕಾರಣ ಮತ್ತು ಕೆಲಸ ಬೇಗನೆ ಮುಗಿಸಲು ಆಗದೆಂಬ ಕಾರಣದಿಂದ ಬುತ್ತಿ ತೆಗೆದುಕೊಂಡು ಹೋಗುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಹಳ್ಳ ದೂರ ಇರುವ ಊರುಗಳಲ್ಲಿ ಬಟ್ಟೆ ಸಾಗಿಸಲು ಕತ್ತೆಗಳನ್ನು ಉಪಯೋಗಿಸುತ್ತಾರೆ. ಏರನ್ನು ಕಟ್ಟೆ ಕತ್ತೆಯ ಬೆನ್ನಮೇಲೆ ಬಿಗಿದು ಅದರ ಮೇಲೆ ಕುಳಿತುಕೊಂಡು ಹೋಗುವುದು. ಇಲ್ಲವಾದರೆ ಅದರ ಹಿಂದೆ ನಡೆದುಕೊಂಡು ಹೋಗುವುದು. ಇಂದು ಸೈಕಲ್‌ಟಿ.ವಿ.ಎಸ್‌., ಲೂನಾಗಳ ಬಳಕೆ ಕಂಡು ಬರುತ್ತದೆ. ಪುರುಷರು ಈ ವಾಹನಗಳ ಮೇಲೆ ತೆಗೆದುಕೊಂಡು ಹೋಗಿ ಹಳ್ಳ, ಕೆರೆ, ಕಾಲುವೆ ದೋಭಿಘಾಟ್‌ಗಳಲ್ಲಿ ಹಾಕಿ ಬರುತ್ತಾರೆ. ಸ್ತ್ರೀಯರು ಮತ್ತು ಮಕ್ಕಳು ಅವುಗಳನ್ನೆಲ್ಲಾ ಶುಚಿಗೊಳಿಸಿಕೊಂಡು ಬರುತ್ತಾರೆ. ಹಳ್ಳ ಮಾಡುವುದೆಂಬ ಸಾಂಕೇತಿಕ ಪದವನ್ನು ಇದಕ್ಕೆ ಬಳಸುತ್ತಾರೆ. ಮಡಿಮಾಡುವ ಕಾಯಕದಲ್ಲಿರುವ ಮಡಿವಾಳರಲ್ಲಿ ಮಡಿಯ ಬಗ್ಗೆ ಬಹಳ ಕಾಳಜಿ ಇರುವುದು ಕಂಡು ಬರುತ್ತದೆ. ಹಳ್ಳಕ್ಕೆ ತೆಗೆದುಕೊಂಡು ಹೋದ ಬಟ್ಟೆಗಳನ್ನು ಒಗೆದು ಒಣಗಲು ಹಾಕಿದ ನಂತರ ಸ್ನಾನ ಮಾಡಿದ ಮೇಲೆ ಊಟ ಮಾಡುತ್ತಾರೆ. ನಂತರ ಒಣಗಿದ ಬಟ್ಟೆಗಳನ್ನೆಲ್ಲ ಮಡಚಿಕೊಂಡು ಹಳ್ಳದ ಸುತ್ತ ಮೇಯುತ್ತಿರುವ ಕತ್ತೆಯನ್ನು ಹಿಡಿದು ತಂದು ಮತ್ತೆ ಏರನ್ನು ಕಟ್ಟೆ ಮನೆಗೆ ತೆಗೆದುಕೊಂಡು ಹೋಗಿ ಮನೆಯ ಹೊರಗೆ ಹಾಕಿ ಆಯಾ ಒಕ್ಕಲದ ಬಟ್ಟೆಗಳನ್ನು ಗುರುತಿಸಿ ಮನೆ ಮನೆಗೆ ಮುಟ್ಟಿಸುತ್ತಾರೆ.

 

ಕೊಮ್ಮ ಕಲಿಸುವ ವಿಧಾನ

ಮನೆ ಮನೆಯಿಂದ ಸಂಗ್ರಹಿಸಿದ ಬಟ್ಟೆಗಳನ್ನು ಒಗೆಯುವಂತಹ ಸ್ಥಳಕ್ಕೆ ಒಯ್ದ ನಂತರ ಬೇರೆ ಬೇರೆ ಮಾಡಿ ಅವುಗಳಿಗೆ ಗುರುತು ಹಾಕುತ್ತಾರೆ ಬರೀ ನೀರಲ್ಲಿ ನೆನೆ ಇಡುತ್ತಾರೆ. ನೆನದ ಬಟ್ಟೆಗಳನ್ನೆಲ್ಲಾ ಬಸಿ ಇಟ್ಟ ಮೇಲೆ ಇತ್ತ ಕಡೆ ಸವಳು, ಸುಣ್ಣ, ಕಲಿಸಿ ಕೊಮ್ಮ ತಯಾರಿಸಿ ಆ ಬಟ್ಟೆಗಳನ್ನು ಕೊಮ್ಮಿನಲ್ಲಿ ಅದ್ದಿ ಉಬ್ಬೆಗೆ ಹಾಕುವ (ಕುದಿಯಲು) ಬಟ್ಟೆಗಳನ್ನು ಬೇರೆ ಮಾಡುತ್ತಾರೆ. ಉಬ್ಬೆಗೆ ಹಾಕುವ ಮೊದಲು ಉಬ್ಬೆಯ ಪಾತ್ರೆಯಡಿಯಲ್ಲಿ (ತೆಪಾಲದಲ್ಲಿ) ಉಳಿದ ಕೊಮ್ಮನ್ನು ಸ್ವಲ್ಪ ಹುಲ್ಲುಸದೆ ಇಲ್ಲವೆ ರವದೆಯನ್ನು ಹಾಕಿ, ಬಟ್ಟೆಗಳನ್ನು ಒಂದಾದನಂತರ ಒಂದರಂತೆ ಹಾಕುತ್ತಾರೆ. ಅದರ ಮೇಲ್ಭಾಗದಲ್ಲಿ ದಪ್ಪನೆಯ ಬಟ್ಟೆಯನ್ನು ಹೊದಿಸುತ್ತಾರೆ. ಒಳಗಿನ ಉಗಿ ಹೊರಗೆ ಹೋಗದಂತೆ ಮಾಡಿ ಕಸ, ಕಡ್ಡಿ, ಮುಂತಾದವುಗಳಿಂದ ಬೆಂಕಿ ಹಚ್ಚಿ ನಿಧಾನವಾಗಿ ಕುದಿಸುತ್ತಾರೆ. ಬಟ್ಟೆಗಳನ್ನು ಕುದಿಯುವ ಕೊಮ್ಮಿನೊಂದಿಗೆ ರಸಾಯನಿಕ ಕ್ರಿಯೆ ನಡೆಸಿದಾಗ ಒಂದು ತರಹದ ಸುವಾಸನೆ ಬರುತ್ತದೆ. ಅದರ ವಾಸನೆಯಿಂದ ಬಟ್ಟೆಗಳೆಲ್ಲ ಕುದಿ ಹಿಡಿದು ಚೆನ್ನಾಗಿ ಕೊಳೆ ಬಿಟ್ಟಿವೆಂದು ಮನವರಿಕೆಯಾದ ನಂತರ ಉರಿ ಕಡಿಮೆ ಮಾಡಿದ ನಿಧಾನವಾಗಿ ತೆಪಾಲಿ ಮೇಲಿನ ಬಟ್ಟೆ ತೆಗೆದು ಒಗೆದು ನೀಲಿ, ಗಂಜಿ, ಬ್ಲೀಚಿಂಗ್‌ಪುಡಿ ಹಾಕಿ ಹೊಸ ಹೊಳಪು ಬರುವಂತೆ ಮಾಡುತ್ತಾರೆ. ಬಟ್ಟೆಗಳನ್ನು ಒಣಗಿಸಿ ಆಯಾ ಮನೆಗಳಿಗೆ ಹೋಗಿ ಕೊಡುವಾಗ, ರೊಟ್ಟಿ, ಅನ್ನ, ಮುಂತಾದ ಊಟವನ್ನು ಕೊಡುತ್ತಾರೆ. ಈ ಎಲ್ಲ ಕೆಲಸಗಳಲ್ಲಿ ಸ್ತ್ರೀಯರ ಕೆಲಸವೇ ಪ್ರಮುಖವಾಗಿರುತ್ತದೆ. ಮನೆ-ಮನೆಗೆ ತಿರುಗುವವರು ಮತ್ತೆ ಹಳ್ಳದಲ್ಲಿ ಶ್ರಮ ವಹಿಸಿ ದುಡಿಯುವವರು ತಂದದ್ದನ್ನು ಎಲ್ಲರಿಗೂ ಹಂಚಿಕೊಂಡು ತಿನ್ನುವುದು ಮನೆಯಲ್ಲಿನ ತಾಯಿಯ ಕರ್ತವ್ಯವಾಗಿದೆ. ವೃತ್ತಿಯಲ್ಲಿ ಸ್ತ್ರೀಯರು ಬಿಡುವಿಲ್ಲದೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 

ಉಬ್ಬೆಯ ವಿಶೇಷ

ಉಬ್ಬೆಯನ್ನು ದಿನಾಲು ಹಾಕುವುದು, ಅತಿವಿರಳ ಏಕೆಂದರೆ ದಿನವೂ ಕಾಟನ್‌ಮತ್ತು ಖಾದಿ ಬಟ್ಟೆಗಳು ಬಹುಸಂಖ್ಯೆಯಲ್ಲಿ ದೊರೆಯದೆ ಇದ್ದರಿಂದ ಸಂಗ್ರಹವಾದ ಬಟ್ಟೆಗಳನ್ನು ಕೇರು ಬೀಜದಲ್ಲಿ ಸೂಜಿ ಚುಚ್ಚಿ, ಗುರುತಿಸುತ್ತಾರೆ. ಇಂದು ಸುಣ್ಣ, ಸವಳು ಮಾಯವಾಗಿ ಅವುಗಳ ಬದಲು ಸೋಡಾ, ಸೋಪಿನ ಪುಡಿಗಳು ಬಂದಿವೆ. ಉಬ್ಬೆಯಲ್ಲಿ ಕುದಿದ ಬಟ್ಟೆಗಳನ್ನು ತೆಗೆದು ಅದರಲ್ಲಿವ ಕೊಮ್ಮ ಹೋಗುವವರೆಗೆ ಒಗೆಯುತ್ತಾರೆ. ಇಲ್ಲವಾದರೆ ಬಿಳಿ ಬಟ್ಟೆಗಳು ಕೆಂಪುಬಣ್ಣಕ್ಕೆ ತಿರುಗುತ್ತವೆ. ಆದ್ದರಿಂದ ಉಬ್ಬೆಯನ್ನು ಬಳಸುವಾಗ ಬಹು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಇಲ್ಲವಾದರೆ ತಮ್ಮ ವೃತ್ತಿಗೆ ಬೆಲೆ ಕಡಿಮೆಯಾಗಿ ಬಟ್ಟೆಗಳು ದೊರೆಯದೆ ಹೋದರೆ ಹೊಟ್ಟೆಪಾಡಿನ ಗತಿಯೇನು ಎಂಬುದು ಜನಾಂಗದವರ ಅಭಿಮತವಾಗಿದೆ.

 

ವೃತ್ತಿಯೊಂದಿಗೆ ಕೃಷಿ ಕಾಯಕ ಮಾಡುವ ಮಹಿಳೆಯರು

ಕರ್ನಾಟಕದ ಮಡಿವಾಳರಿಗೆ ಸ್ವಂತ ಭೂಮಿ ಇದೆ ಹಾಗೂ ಇನಾಮು ಭೂಮಿಯೂ ಇದೆ. ಎಲ್ಲ ವರ್ಗಗಳಲ್ಲಿರುವಂತೆ ಎಲ್ಲರಿಗೂ ಎಲ್ಲವೂ ದೊರೆಯಲು ಅಸಾಧ್ಯ ಎಂಬ ಲೋಕ ಸತ್ಯದಂತೆ ಮಡಿವಾಳ ವೃತ್ತಿ ಬಾಂಧವರಿಗೆ ಭೂಮಿ ದೊರೆತಿಲ್ಲ. ತಲಾತಲಾಂತರದಿಂದ ಮೂಲ ನಿವಾಸಿಗಳಂತಿರುವ ಕೆಲವೇ ಕೆಲವು ಮಡಿವಾಳರು ಕೆಲ ಪ್ರದೇಶಗಳಲ್ಲಿ ಉತ್ತಮ ಕೃಷಿಕರಾಗಿದ್ದಾರೆ.

ವೃತ್ತಿಯೊಂದಿಗೆ ಕೃಷಿ ಕಾಯಕದಲ್ಲಿ ನಿರತವಾದ ಕೌಟುಂಬಿಕ ಪರಿಸರದಲ್ಲಿರುವ ಸ್ತ್ರೀಯರು ಬಟ್ಟೆ ಒಗೆಯುವ ಕೆಲಸವನ್ನು ದಿನಬಿಟ್ಟು ದಿನದಂತೆ ಮಾಡಿ ಉಳಿದ ದಿನಗಳಲ್ಲಿ ಕೆಲಸದಲ್ಲಿ ನಿರತರಾಗುತ್ತಾರೆ. ಮಡಿವಾಳರಿಗೆ ಬರುವ ಆದಾಯದ ಬಹುಪಾಲು ಭಾಗವು ಕೃಷಿ ಸ್ತ್ರೀಯರ ದುಡಿಮೆಯಿಂದ ಬರುತ್ತಿದೆ. ಆದರೆ ಆಕೆಯು ಅತಂತ್ರಸ್ಥಿತಿಯಲ್ಲಿದ್ದಾಳೆ. ಪುರುಷ ಪ್ರಧಾನವಾದ ಸಾಮಾಜಿಕ ಕಟ್ಟಳೆಗಳ ಕಟ್ಟಿನಲ್ಲಿ ಮಡಿವಾಳರ ಸ್ತ್ರೀಯರು ಹೊರತಾಗಿಲ್ಲ. ಆಕೆಯು ಸುಣ್ಣದಂತೆ ಕುದಿದು ಎಲ್ಲರ ಬಾಳಿಗೆ ಬೆಳಕಾಗುತ್ತಾಳೆ. ಸಂಸಾರಿಕ ಜೀವನದ ಮಹತ್ವವನ್ನು ಹೊಂದಿದ ಮಹಿಳೆಯರು ಕೃಷಿ ಕಾಯಕ, ವೃತ್ತಿ ಕಾಯಕದಲ್ಲಿ ತನ್ನ ಕಾಯವನ್ನು ಸವೆಸಿದ್ದಾಳೆ.

ಆಧುನಿಕ ಮಹಿಳೆಯು ಅಕ್ಷರಸ್ಥಳಾಗಿ ಪುರುಷನಿಗೆ ಹೆಗೆಲೆಣೆಯಾಗಿ ತಾನೂ ವಿವಿಧ ಉದ್ಯೋಗಗಳಲ್ಲಿ ಭಾಗಿಯಾಗಿದ್ದಾಳೆ. ನಗರ ಜೀವನದ ಮಹಿಳೆಯರಲ್ಲಿ ಅಕ್ಷರಸ್ಥ ಮಹಿಳೆಯರ ಜೀವನ ವಿಧಿ-ವಿಧಾನಗಳು ಬೇರೆಯಾಗಿವೆ. ಉಳಿದ ವರ್ಗಗಳಲ್ಲಿರುವ ಮಹಿಳೆಯಂತೆ ಜೀವನ ಸಾಗಿಸುತ್ತಾಳೆ. ನಗರದಲ್ಲಿದ್ದು ಅಕ್ಷರಭ್ಯಾಸವಿಲ್ಲದ ಮಹಿಳೆಯರು ವೃತ್ತಿಯನ್ನು ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಜೀವನ ನೂಕುವುದು ಮಡಿವಾಳ ವೃತ್ತಿಯನ್ನು ಅವಲಂಬಿಸಿದ ಮಹಿಳೆಯರಲ್ಲಿ ಕಾಣುತ್ತೇವೆ.

ವೈಜ್ಞಾನಿಕ ಅವಿಷ್ಕಾರಗಳಿಮದ ಯಂತ್ರೋಪಕರಣಗಳ ಉಪಯೋಗದಿಂದಾಗಿ ನಗರಗಳಲ್ಲಿಯ ಮಡಿವಾಳ ಜನಾಂಗದವರ ವೃತ್ತಿ ಮೊದಲಿನಂತೆ ಹಿತಕಾರಿಯಾಗಿಲ್ಲ. ಮನೆಗಳಲ್ಲಿ ವಾಷಿಂಗ್‌ಮಿಷನ್‌ಬಂದ ನಂತರವಂತೂ ಮಡಿವಾಳ ಜನಾಂಗದ ವೃತಿಯವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಜಾತಿಗೆ ಸೀಮಿತವಾದ ಮಡಿವಾಳ ವೃತ್ತಿಯನ್ನು ಅನ್ಯ ಜಾತಿಯ ಜನರೂ ಸಹ ದೊಡ್ಡ ದೊಡ್ಡ ಯಂತ್ರಗಳ ಸಹಾಯದಿಂದ ಮತ್ತು ಬಡಮಡಿವಾಳ ಜನರನ್ನು ಕೂಲಿಕೊಟ್ಟು ದುಡಿಸಿಕೊಳ್ಳುವುದರ ಮೂಲಕ ಮೂಲ ವೃತಿ ಬಾಂಧವರು ಕೆಲಸವಿಲ್ಲದೆ ಕಸ-ಮುಸರೆಗಳಿಗೆ ಮೊರೆ ಹೋಗಿದ್ದಾರೆ. ವೃತ್ತಿಯಲ್ಲಿ ಮೇಲು-ಕೀಳು ಭಾವನೆಗಳಿಲ್ಲ ಎಂದು ಪರ ಜಾತಿಯರು ಹಾರಿಕೆ ಉತ್ತರ ನೀಡಿ ಮಡಿ ಮಾಡುವುದನ್ನು ಒಂದು ಫ್ಯಾಕ್ಟರಿಯಂತೆ ಪರಿವರ್ತಿಸಿ ಸ್ಪರ್ಧೆಯ ಮೂಲಕ ಮೂಲ ವ್ಯಕ್ತಿಗಳಿಗೆ ತೊಂದರೆ ನೀಡುತ್ತಿದ್ದಾರೆ. ನಗರ ಜೀವನದಲ್ಲಿ ಗ್ರಾಮೀಣ ಪ್ರದೇಶಗಳಂತೆ ಮನೆ ಮನೆಗೆ ಹೋಗಿ ಬಟ್ಟೆ ತರುವ ವ್ಯವಸ್ಥೆಯಿಂದ ದೂರ ಉಳಿದು ಲ್ಯಾಂಡ್ರಿ ಎಂದು ನಾಮಕರಣಗೊಂಡ ಅಂಗಡಿಗಳಿಂದ ತಮ್ಮ ವ್ಯವಹಾರಿಕ ವೃತಿಯಲ್ಲಿ ಸಾಫಲ್ಯವನ್ನು ಪಡೆಯುತ್ತಿದ್ದಾರೆ. ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡು ಯಂತ್ರಗಳಿಂದ ಸಹಾಯ ಪಡೆದು ಅತ್ಯಂತ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭಗಳಿಸುತ್ತಿರುವುದರಿಂದ ನಿತ್ಯವೂ ಜೀವನೋಪಾಯದ ಆಧಾರವಾಗಿಟ್ಟುಕೊಂಡ ಬಡಮಹಿಳೆಯರಿಗೆ ಬದುಕು ಸಾಗಿಸಲು ಸವಾಲಾಗಿದ್ದಾರೆ.

ಮಡಿವಾಳ ಜನಾಂಗದ ಆರ್ಥಿಕ ಸಬಲತೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮನೆಕೆಲಸ, ಅಡಿಗೆ ಕೆಲಸ, (ವೃತ್ತಿ) ಕಸುಬುದಾರಿಕೆ ಜೊತೆಗೆ ಕೃಷಿಕಾಯಕದಲ್ಲಿ ಮಹಿಳೆ ದುಡಿಯುವುದು ಸಾಮಾನ್ಯ ಸಂಗತಿಯಾಗಿದೆ. ಮಡಿವಾಳ ಜನಾಂಗದ ಪುರುಷರ ನಿತ್ಯ ಜೀವನದ ದಿನಚರಿ ಉಳಿದವರಿಗಿಂತ ಆಶ್ಚರ್ಯ ಮೂಡಿಸುತ್ತದೆ. ಮದ್ಯ-ಮಾಂಸ ವ್ಯವಸನಿಗಳಾದ ಪುರುಷರು ಮಹಿಳೆ ದುಡಿದ ಬಹುಪಾಲು ಹಣವನ್ನು ಒತ್ತಾಯದಿಂದ ತೆಗೆದುಕೊಂಡು ಹೋಗಿ ಅಮಲೇರಿ ಬರುವುದು. ಅಲ್ಲದೆ ಹೆಂಡತಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು ಹಿರಿಯರಿಂದ ಬಂದ ಬಳುವಳಿಯಾಗಿದೆ. ಪ್ರಸ್ತುತದಲ್ಲಿಯೂ ಇಂಥ ಅನೇಕ ಕುಟುಂಬಗಳು ಕಾಣಸಿಗುತ್ತವೆ. ಬೆಳಿಗ್ಗೆಯಿಂದ ಮಲಗುವವರೆಗೂ ಕಷ್ಟಪಟ್ಟು ದುಡಿಯುವಳು, ತನ್ನ ಮಕ್ಕಳಿಗೆಲ್ಲ ಅದೇ ವೃತ್ತಿಯಲ್ಲಿ ಮುಂದುವರಿಯುವಂತೆ ಪ್ರೇರಿಪಿಸುವುದು ಅವರ ಸಹಾಯ ಪಡೆಯುವುದು. ಇಸ್ತ್ರಿ ಡಬ್ಬಗಳನ್ನು ಇಟ್ಟುಕೊಂಡು ವೃತ್ತಿ ತರಬೇತಿ ನೀಡುವುದರಿಂದ ದುಡ್ಡ ಗಳಿಸುವ ಹವ್ಯಾಸ ಬಿದ್ದಾಗ ಉಳಿದವು ಮುಖ್ಯವಾಗಿ ಕಾಣಿಸದು. ಆದ್ದರಿಂದ ನೂರಕ್ಕೆ ೯೦% ರಷ್ಟು ಜನ ಅವಿದ್ಯಾವಂತರಾಗಿರುತ್ತಾರೆ.

ಸಾಮಾಜಿಕ ಜೀವನದಲ್ಲಿ ಬೇರೇನನ್ನು ಬಯಸದೆ ತನ್ನ ವೃತ್ತಿಗೆ ಸೀಮಿತವಾಗಿರುವ ಯುವಕರು, ಯುವತಿಯರು, ಸಂಸಾರಿಕರು ಮತ್ತು ಹಿರಿಯರು ಸ್ತ್ರೀಯರ ದುಡಿಮೆಯನ್ನು ಅವಲಂಭಿಸಿದ್ದಾರೆ. ಮಡಿವಾಳ ಜನಾಂಗದ ಆರ್ಥಿಕ ಸ್ಥಿತಿಗೆ ಆಧಾರ ಸ್ತಂಭದಂತಿರುವ ಮಹಿಳೆಯರ ಜೀವನ ಮಟ್ಟ ಅಷ್ಟೊಂದು ಉತ್ತಮವಾಗಿಲ್ಲವೆಂಬುದನ್ನು ಕ್ಷೇತ್ರ ಕಾರ್ಯದಿಂದ ಅನುಭವಕ್ಕೆ ಬರುತ್ತದೆ.

 

ಕೌಟುಂಬಿಕ ಜೀವನ-ಮಹಿಳೆಯರು

ಒಂದು ಸೂರಿನ ಅಡಿಯಲ್ಲಿ ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯಿಂದ ವಾಸಿಸುವವರನ್ನು ಒಂದು ಕುಟುಂಬ ಎಂಬ ಪದದಿಂದ ಕರೆಯಲಾಗುತ್ತದೆ. ಭಾರತೀಯ ಸಮಾಜದಲ್ಲಿ ಕುಟುಂಬ ಎಂಬ ಪದದ ಮೂಲಾರ್ಥವು ಅವಿಭಕ್ತ ಕುಟುಂಬ ಎಂಬರ್ಥದಲ್ಲಿ ಪ್ರಯೋಗಿಸಲ್ಪಡುತ್ತಿತ್ತು. ಆರಂಭಿಕ ಕೌಟುಂಬಕತೆಯಲ್ಲಿ ಮಾತೃ ಪ್ರಧಾನ ಕುಟುಂಬಗಳೇ ಇರುತ್ತಿದ್ದವು. ಆರ್ಯ ವೈದಿಕ ಸಂಸ್ಕೃತಿಯ ಪ್ರಭಾವದಿಂದ ಮಾತೃ ಪ್ರಧಾನ ಕುಟುಂಬಗಳು ಅಳಿದವು. ಪಿತೃ ಪ್ರಧಾನ್ಯತೆಯುಳ್ಳ ಕುಟುಂಬಗಳು ಅಂದಿನಿಂದ ಅಸ್ತಿತ್ವಕ್ಕೆ ಬಂದವು. ವರ್ಗ ಬೇಧಗಳು ಆರಂಭವಾದ ಮೇಲೆ ಸುಲಿಗೆ-ಶೋಷಣೆಗಳಿಗೆ ದಾರಿಯಾಯಿತು. ದೇವರ-ಕರ್ಮಫಲಗಳು ಉದ್ಭವಿಸಿದವು. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿರುವ ಅಗಸರು ಆರಂಭದಲ್ಲಿ ಅವಿಭಕ್ತ ಕೌಟುಂಬಿಕ ಜೀವನವನ್ನು ನಿರ್ವಹಿಸುತ್ತಿದ್ದರು.

ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿ ಸೇದಕ ವರ್ಗಗಳಿವೆ. ಅವುಗಳಲ್ಲಿ ಅಗಸರಿಗೆ ಮಹತ್ವದ ಸ್ಥಾನ ಕಲ್ಪಿಸಿದೆ. ಜಾತಿ ವ್ಯವಸ್ಥೆಯಲ್ಲಿ ಅಗಸರು ಮದ್ಯದಲ್ಲೆಲ್ಲೊ ಬರುತ್ತಾರೆ. ಆದರೆ ಅವರ ಕೌಟುಂಬಿಕ ವ್ಯವಸ್ಥೆಯಲ್ಲಿ ನಿರ್ದಿಷ್ಟವಾದ ಆಚರಣೆಗಳು, ಸಂಪ್ರದಾಯ ಪದ್ಧತಿಗಳಿವೆ. ಅವುಗಳಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಕಾರಣವಾದ ಶೈಕ್ಷಣಿಕ ಸೌಲಭ್ಯದ, ಅಧಿಕವಾಗಿ ಲಭ್ಯವಿರುವ ಉತ್ತಮ ಆದಾಯದ ಅವಕಾಶಗಳು, ಮನೆಯ (ಕುಟುಂಬದ) ರಚನೆಯನ್ನು ಪರಿವರ್ತನೆಗೊಳುಸುತ್ತಿವೆ. (ಡಾ|| ಎಂ.ಎಚ್‌.ದೇಸಾಯಿ) ಆಧುನಿಕತೆಯ ಗಾಳಿಯಿಂದಾಗಿ ಸಂಪ್ರದಾಯಗಳು ಒಡಗೂಡಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾವಣೆಯನ್ನು ಹೊಂದಿವೆ. ಅವಿಭಕ್ತ ಕುಟುಂಬದಲ್ಲಿರುವ ಮಹಿಳೆಯರು ತಮ್ಮ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಹೋಗಬಹುದು. ಆದರೆ ವಿಭಕ್ತ ಕುಟುಂಬಗಳಲ್ಲಿ ಬೇಡಿಕೆಗಳು ಬಹುಬೇಗನೆ ಪೂರೈಕೆ ಮಾಡಿಕೊಳ್ಳಲು ಅವಕಾಶವಿದೆ. ಕೆಲಸ ಕಾರ್ಯಗಳು ಒಬ್ಬರೆ ಮಾಡುವುದರ ಶ್ರಮವೂ ವಿಭಕ್ತರ ಕುಟುಂಬಗಳಲ್ಲಿ ಹೆಚ್ಚಾಗಿರುತ್ತದೆ. ದುಡಿಯುವುದಕ್ಕೆ ಎಲ್ಲರೂ ಬೇಕು. ಉಣ್ಣುವುದಕ್ಕೆ ಒಬ್ಬರೆ ಸಾಕು ಎಂಬ ಗಾದೆಯಂತೆ ಅವಿಭಕ್ತ ಕುಟುಂಬಗಳಲ್ಲಿ ದೊರೆಯದ ವಸ್ತುಗಳು ಇಲ್ಲಿ ದೊರೆಯುತ್ತವೆ.

ಪ್ರತಿ ಕುಟುಂಬದಲ್ಲಿರುವ ವ್ಯಕ್ತಿಯ ಮೇಲೆ ಆಯಾ ಸಮಾಜದ ಪ್ರಭಾವವಿರುತ್ತದೆ. ಸಾಮಾಜಿಕ ಜೀವಿಯಾದ ಮಾನವ ಸಂಸ್ಕಾರಗಳು ಕುಟುಂಬ ಜೀವನದಿಂದಲೇ ಆರಂಭವಾಗುತ್ತವೆ. ಬಾಲ್ಯದಲ್ಲಿ ದೊರೆತ ಸಂಬಂಧಗಳಿಂದ ಅವನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪರಿಸರದ ಪ್ರಭಾವಕ್ಕೆ ಪ್ರತಿಯೊಬ್ಬ ವ್ಯಕ್ತಿ ಒಳಗಾಗುತ್ತಾನೆ. ಕುಟುಂಬ ಮಾನವನ ಪ್ರಗತಿಯ ಮೊದಲ ಮೆಟ್ಟಿಲಾಗಿ ನಿಲ್ಲುತ್ತದೆ. ಮಡಿವಾಳರ ಕೌಟುಂಬಿಕ ಜೀವನ ಪದ್ಧತಿಗಳು ಅನುಸರಿಸುವ ಆಚರಣೆಗಳು ಮಗುವಿನಲ್ಲಿ ಪಡೆಮೂಡುತ್ತವೆ.

ಮಡಿವಾಳರಲ್ಲಿ ಅವಿಭಕ್ತ ಕುಟುಂಬಗಳ ಜೀವನ ಕ್ರಮವು ಕೃಷಿ ಪ್ರಧಾನ ಕುಟುಂಬಗಳಲ್ಲಿ ಕಂಡು ಬರುತ್ತವೆ. ಆದರೆ ಕುಲ ವೃತ್ತಿಯನ್ನು ಅವಲಂಬಿಸಿರುವ ಅವಿಭಕ್ತ ಕುಟುಂಬಗಳಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚಾಗಿ ಕಾಣುತ್ತೇವೆ. ಅವಿಭಕ್ತ ಕುಟುಂಬಗಳಲ್ಲಿ ತಂದೆಯ ನಂತರ ಹಿರಿಯ ಮಗನೆ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಾನೆ. ಆದರೆ ಹಿರಿಯ ಮಗಳಿಗೆ, ಸೊಸೆಗೆ, ಮಹಿಳೆಗೆ ಯಾವುದೇ ರೀತಿಯ ಸ್ಥಾನಮಾನ ಇಲ್ಲ. ಇಲ್ಲಿಯೂ ಆರ್ಯ ವೈದಿಕ ಪದ್ಧತಿಯ ಪಿತೃ ಪ್ರಧಾನತೆಯನ್ನು ಮುಂದುವರೆಸಿಕೊಂಡು ಹೋಗಿರುವುದು ತಿಳಿದು ಬರುತ್ತದೆ. ಅವಿಭಕ್ತ ಕುಟುಂಬಗಳು ಒಡೆದು ಹೋಗಿ ವಿಭಕ್ತ ಕುಟುಂಬಗಳಾಗಿ ಜೀವನ ನಿರ್ವಹಿಸುವ ಸಂದರ್ಭದಲ್ಲಿಯೂ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲವಾಗಿದೆ. ಅವರವರ ಗಂಡಂದಿರಿಗೆ ಬಂದ ಕೃಷಿ ಭೂಮಿಯಲ್ಲಿ ದುಡಿಯುವುದರೊಂದಿಗೆ ಒಕ್ಕಲು ಮನೆಗಳನ್ನು ಹಂಚಿಕೊಂಡು ಆಯ ಪದ್ಧತಿಯ ಪ್ರಕಾರ ಇಲ್ಲವೆ ದಿನಗೂಲಿಯಂತೆ ಬಟ್ಟೆ ಮಡಿಮಾಡುವ ಕಾಯಕದಲ್ಲಿ ನಿರತವಾಗುತ್ತಾರೆ.

ಕೃಷಿ ಕಾಯಕವಿರಲಿ, ಇಲ್ಲವೆ ಮಡಿವಾಳಿಕೆಯಿರಲಿ ಪುರುಷರಿಗಿಂತ ಅಧಿಕ ಶ್ರಮ, ಸೇವಾವಧಿ, ಕಷ್ಟ ಮಹಿಳೆಯರ ಪಾಲಿಗಿದೆ. ಆಕೆ ಮನೆಕೆಲಸ, ಹೊಲ ಕೆಲಸ, ಕಸುಬುದಾರಿಕೆ, ಮಕ್ಕಳ ಲಾಲನೆ-ಪಾಲನೆ, ಹಿರಿಯರ ಸೇವೆ, ಗಂಡನ ಬೇಡಿಕೆಗಳಿಗೆ ಗಂಧದ ಕೊರಡಿನಂತೆ ಸವೆಯುತ್ತಾಳೆ. ಸಂಸಾರದ ವ್ಯವಸ್ಥೆಯಲ್ಲಿ ಏರು-ಪೇರು ಕಂಡಿದೆ. ಉನ್ನತಿ-ಅವನತಿ ಆಗಿದೆ ಎಂದರೆ ಆ ಕುಟುಂಬದ ಮಹಿಳೆಯ ದುಡಿಮೆ ಮೇಲೆ ಅವಲಂಬಿತವಾಗಿದೆ. ದುಡಿಮೆಯ ಅಧಿಕ ಫಲ ಮಹಿಳೆಯರದ್ದಾಗಿದೆ. ಒಂದು ದಿನದಲ್ಲಿ ೧೦-೧೨ ತಾಸುಗಳವರೆಗೆ ಆಕೆ ಕೆಲಸ ಮಾಡುತ್ತಾಳೆ. ಮಹಿಳೆಯ ದುಡಿಮೆಗೆ ಪ್ರತಿಫಲ ದೊರೆಯದೆ ಎತ್ತು-ಕತ್ತೆಗಳಂತೆ ಸಂಸಾರದ ಬಂಡಿಯನ್ನು ಎಳೆಯುತ್ತ ಸಾಗಿದ್ದಾಳೆ.

ವ್ಯವಹಾರಿಕ ಸಂಬಂಧ ಹೊಂದಿದ ಬೇರೆ ವೃತ್ತಿಯವರಿಗೂ ಮಡಿವಾಳ ವೃತ್ತಿ ಹೊಂದಿದವರಿಗೂ ವ್ಯತ್ಯಾಸಗಳಿವೆ. ಪ್ರತಿಯೊಂದು ಕಾರ್ಯದಲ್ಲೂ ಮಹಿಳೆಯ ಸಹಕಾರ ಬಯಸುವ ಸಮಾಜವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಮಹಿಳೆಯರನ್ನು ಪರಿಗಣಿಸುವುದಿಲ್ಲ. ಆ ಹೆಣ್ಣು ಕತ್ತೆಗೆ ಏನು ಗೊತ್ತಾಗುತ್ತದೆ. ಹಂಗ ವದರತಾದ ಎಂದು ನ್ಯಾಯಿಕರ ಸಭೆಯಲ್ಲಿ ತೀರ್ಮಾನಗಳು ಪಾಸ್‌ಮಾಡುತ್ತಾರೆ. ಸ್ತ್ರೀಯರಿಗೆ ಆಸ್ತಿಯ ಒಡೆತನವಾಗಲಿ, ಕೀರ್ತಿಯಾಗಲಿ ಲಭಿಸುವುದಿಲ್ಲ. ಮನುವಿನ ಪ್ರಭಾವ ಈ ಮಡಿವಾಳರ ಮೇಲೂ ಆಗಿದೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಪುರುಷ ಪ್ರಾಧಾನ್ಯತೆ ಬಂದನಂತರ ಎಲ್ಲ ವರ್ಗ-ಜಾತಿ-ಪಂಗಡಗಳಲ್ಲಿ ಸ್ತ್ರೀಯರನ್ನು ಕಡೆಗಣಿಸಿದಂತೆ ಮಡಿವಾಳ ಸಮಾಜದಲ್ಲಿಯೂ ರೂಢಿಗೊಳಿಸಿಕೊಂಡಿದ್ದಾರೆ.

ಮಡಿವಾಳ ಸಮಾಜದಲ್ಲಿ ಏಕಪತಿತ್ವ ಮತ್ತು ಏಕಪತ್ನಿತ್ವ ಕುಟುಂಬಗಳೇ ಹೆಚ್ಚಾಗಿವೆ. ಬಹು ಪತ್ನಿತ್ವದ ಕುಟುಂಬಗಳು ಇಲ್ಲದಿಲ್ಲ. ಪುರುಷನು ಎಷ್ಟೇ ಮಹಿಳೆಯರನ್ನು ಮದುವೆಯಾಗಬಹುದು. ಸ್ತ್ರೀ ಮಾತ್ರ ಏಕ ಪತಿತ್ವ ಹೊಂದಿರಬೇಕೆಂಬ ಕಟ್ಟಳೆ ಇಲ್ಲಿಯೂ ಪ್ರಚಲಿತವಾಗಿದೆ. ಮೊದಲ ಹೆಂಡತಿ ಬಂಜೆಯೆಂದು ತಿಳಿದಾಗ ಬಹುದಿನದವರೆಗೆ ಮಕ್ಕಳಾಗದಿದ್ದಾಗ ಎರಡನೆಯ ಮದುವೆ ಆಗಬಹುದಾಗಿದೆ. ಇದು ಏಕಪಕ್ಷೀಯ ವಿಚಾರವಾಗಿದೆ. ವೈದಿಕ ಜಾತಿ ವ್ಯವಸ್ಥೆಯಲ್ಲಿರಬಹುದಾದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಮೇಲ್ನೊಟಕ್ಕೆ ಬಟ್ಟೆ ಮಡಿಮಾಡುವ ಕಾಯಕದವರೆಂದು ಕಂಡುಬಂದರೂ ಕೌಟುಂಬಿಕ ವ್ಯವಸ್ಥೆಯಲ್ಲಿ ವೈದಿಕರ ಆಚರಣೆಗಳಿಗೆ ಮಿಗಿಲಾದವು ರೂಡಿಸಿಕೊಂಡಿದ್ದಾರೆ.

ವೈದಿಕರ ಹೆಣ್ಣನ್ನು ಅನ್ಯ ಜಾತಿಯವರು, ಅನ್ಯ ಜಾತಿಯ ಹೆಣ್ಣನ್ನು ವೈದಿಕರು ವಿವಾಹವಾದರೆ ಕುಲದಿಂದ ಬಹಿಷ್ಕಾರ ಹಾಕುವಂತೆ ಮಡಿವಾಳರಲ್ಲಿ ಬೇರೆ ಜನಾಂಗದ ಹೆಣ್ಣು, ಗಂಡುಗಳು, ಮದುವೆಯಾದರೆ ಆ ಮನೆಯನ್ನು ಎತ್ತಿ ಇಡುತ್ತಾರೆ. ಇದು ಒಂದು ರೀತಿಯ ಬಹಿಷ್ಕಾರವಾಗಿದೆ. ಜನಾಂಗದ ಮುಖಂಡರ ಮುಂದೆ ನ್ಯಾಯ ಪಂಚಾಯಿತಿ ಕರೆದು ಮನೆಯ ಯಜಮಾನ ತಪ್ಪೊಪ್ಪಿಕೊಂಡರೆ ದೈವ ನಿರ್ಧರಿಸಿದ್ದಷ್ಟು ದಂಡವನ್ನು ಕಟ್ಟಬೇಕಾಗುತ್ತದೆ.ಇದರಿಂದಾಗಿ ಸಮಾಜ ವಿರೋಧಿ ಕೆಲಸಗಳಲ್ಲಿ ಯಾರೂ ಭಾಗಿಯಾಗಬಾರದೆಂಬ ಎಚ್ಚರಿಕೆ ನೀಡುವಂತಾಗಿದೆ.

ಸಾಮಾಜಿಕ ನ್ಯಾಯ ನಿಬಂಧನೆಯಲ್ಲಿಯೂ ಸ್ತ್ರೀಯರಿಗೆ ಯಾವುದೇ ರೀತಿಯ ಅವಕಾಶ ನೀಡುವುದಿಲ್ಲ. ನ್ಯಾಯಸ್ಥಾನದಲ್ಲಿರುವವರೆಲ್ಲ ಪುರುಷರೇ ದೈವ ನಿರ್ಧರಿಸಿದ್ದನ್ನು ಬದಲಾಯಿಸಲು ಸಾಧ್ಯವಿಲ್ಲ. ಯಾವ ಕಾರಣಕ್ಕೂ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ನೀಡಿಲ್ಲ. ವ್ಯಕ್ತಿಯ ವೈಯಕ್ತಿಕತೆಗೆ ಯಾವುದೇ ರೀತಿಯ ಬೆಲೆ ನೀಡದೆ ಇರುವುದು ತೋರುತ್ತದೆ. ಇಂಥ ಸಂದಿಗ್ದ ಸ್ಥಿತಿಯಲ್ಲಿ ಮಹಿಳೆಯರನ್ನು ಯಾರು ಕೇಳಬೇಕು. ಆಕೆಯ ಆಸೆ-ಅಭಿಲಾಷೆಗಳಿಗೆ ಯಾವ ವೇದಿಕೆಯಲ್ಲಿ ಅವಕಾಶ ದೊರಕುವುದೆಂಬುದನ್ನು ಚಿಂತಿಸಬೇಕಾಗಿದೆ.

ತಮಗೆ ಹಂಚಿಕೆಯಾದ ಒಕ್ಕಲು ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಸ್ತ್ರೀಯರಿಗೆ ಸಮಾನವಾದ ಅವಕಾಶಗಳು ದೊರೆಯುತ್ತವೆ. ಒಕ್ಕಲು ಮನೆಗಳಲ್ಲಿ ಸ್ವತಂತ್ರವಾಗಿ ಓಡಾಡುವ ಅವಕಾಶವು ಮಹಿಳೆಯರಿಗೆ ಇರುತ್ತದೆ. ಒಕ್ಕಲು ಮನೆಯವರು ಮಡಿವಾಳ ಮಹಿಳೆಯರೊಂದಿಗೆ ಸೋದರ ಭಾವನೆಯಿಂದ ವರ್ತಿಸುವುದರಿಂದ ಮಹಿಳೆಯರು ತಮ್ಮ ಕಷ್ಟಗಳನ್ನು ಮರೆಯುತ್ತಾರೆ. ಮನೆಯಲ್ಲಿ ಗಂಡ-ಹೆಂಡರು ಒಂದೆಡೆ ಕುಳಿತು ಮಾತನಾಡುವ ಅವಕಾಶದಿಂದ ವಂಚಿತಳಾದ ಮಹಿಳೆಯ ಒಕ್ಕಲು ಮನೆಯಲ್ಲಿ ನಿಟ್ಟಿಸಿರು ಬಿಡುತ್ತಾಳೆ.

ಮಡಿವಾಳರಲ್ಲಿ ಮುಟ್ಟಾದವರಿಗೆ ಯಾವುದೇ ದೋಷವಿರುವುದಿಲ್ಲ. ಅವರನ್ನು ಮನೆಯ ಯಾವುದೇ ಮೂಲೆಯಲ್ಲಿ ಮಲಗಿಸುವುದಿಲ್ಲ. ಮುಟ್ಟಾದವರು ದೇವರ ಮನೆಗೆ ಹೋಗುವುದನ್ನು ಬಿಟ್ಟರೆ ಉಳಿದಂತೆ ಎಲ್ಲ ಕೆಲಸಗಳನ್ನು ಮಾಡಬಹುದುದಾಗಿದೆ. ವೈದಿಕ ಧರ್ಮಾಚರಣೆಗಳನ್ನು ಕೆಲವು ಸಂದರ್ಭಗಳಲ್ಲಿ ಅನುಸರಿಸಿದರೂ ಇನ್ನು ಕೆಲವು ವಿಚಾರಗಳಲ್ಲಿ ವೀರಶೈವ ಧರ್ಮದ ನಿಯಮಾಳಿಗಳನ್ನು ಅನುಸರಿಸುತ್ತ ಬಂದಿದ್ದಾರೆ.

ಮಡಿವಾಳ ಜನಾಂಗದವರು ತಮಗೆ ಪರಿಚಯವಿರುವವರಿಂದ ಬೇರೆ ಬೇರೆ ಊರುಗಳಲ್ಲಿರುವ ವಧು-ವರರ ಅನ್ವೇಷಣೆಯ ಕಾರ್ಯ ಆರಂಭಿಸುತ್ತಾರೆ. ಇದುವರೆಗೂ ಯಾವುದೇ ನಿಶ್ಚಿತ ವಧು-ವರರ ಸಮಾವೇಶ ನಡೆದಿಲ್ಲ. ಮಡಿವಾಳರದ್ದು ಪಿತೃ ಪ್ರಧಾನ ಕುಟುಂಬವಾದ್ದರಿಂದ ತಂದೆಯ ಕಡೆಯ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಯಾವುದೇ ಶುಭ ಕಾರ್ಯವಾಗಲಿ ತಂದೆಯ ಸಂಬಂಧಿಕರೇ ನಿರ್ಧರಿಸುತ್ತಾರೆ. ಅದರಲ್ಲಿ ಸೋದರ ಮಾವನ ಸಂಬಂಧಕ್ಕೆ ಪ್ರಾಧಾನ್ಯತೆ ನೀಡುತ್ತಾರೆ. ತಾಯಿಯ ಅಣ್ಣ ತಮ್ಮಂದಿರಿಗೆ ಮಾತ್ರ ವಿಶೇಷ ಗೌರವವಿರುತ್ತದೆ. ಇಲ್ಲಿಯೂ ಸಹ ಮಹಿಳೆಯ ವ್ಯಕ್ತಿತ್ವ ಗೌಣವಾಗಿ ಉಳಿಯುತ್ತದೆ.

ಜನನದಿಂದ ಜರೆಯವರೆಗೆ ಸೋದರ ಮಾವನಿಗೆ ಅಗ್ರಸ್ಥಾನ ಕಲ್ಪಿಸಲಾಗಿದೆ. ಮದುವೆ, ಮರಣ, ತಿಥಿ ಕಾರ್ಯಗಳಲ್ಲಿಯೂ ಆತನೇ ಮುಖ್ಯಸ್ಥನಾಗಿ ನಿಲ್ಲುತ್ತಾನೆ. ಹೆಣ್ಣನ್ನು ಧಾರೆಯೆರೆದು ಕೊಡುವಾಗ ಮತ್ತು ಶವಸಂಸ್ಕಾರದ ಸಂದರ್ಭದಲ್ಲಿಯೂ ಆತನೇ ಮೊದಲಿಗೆ ಹೆಗಲು ಕೊಡಬೇಕು. ಇಂಥ ಸಂಪ್ರದಾಯಗಳು ಕರ್ನಾಟಕದೆಲ್ಲೆಡೆ ಸಾಮಾನ್ಯವಾಗಿ ಅನುಸರಿಸಿಕೊಂಡು ಬರುತ್ತಾರೆ. ಮಡಿವಾಳರ ಕುಟುಂಬಗಳಲ್ಲಿ ಅತ್ತೆ ಮತ್ತು ಅಕ್ಕನ ಮಗಳನ್ನು ಮದುವೆಯಾಗುವುದು ಸಂಪ್ರದಾಯವಾಗಿದೆ. ತವರಿನ ನಂಟು ಶಾಶ್ವತವಾಗಿರಲೆಂಬ ಉದ್ದೇಶದಿಂದ ಸೋದರತ್ತೆ (ಅಪ್ಪನ ತಂಗಿ, ಅಕ್ಕ)ಯ ಮಗಳನ್ನು, ಅಕ್ಕನ ಮಗನನ್ನು ಮದುವೆ ಆಗುವುದರಿಂದ ತವರು ಮನೆಗೆ ಹೋಗಿ ಬರಲು ತುಂಬಾ ಅನುಕೂಲವಾಗುತ್ತದೆ. ಇಂಥ ಸಂದರ್ಭದಲ್ಲಿ ಹಠ ಹಿಡಿದು ತವರು ಮನೆಗೆ ಸಂಬಂಧ ಬೆಳೆಸುವುದರಲ್ಲಿ ಮಹಿಳೆಯರು ಸಾಫಲ್ಯ ಹೊಂದುತ್ತಾರೆ. ಕೆಲವೊಂದು ಸಲ ಇಂಥ ಬಾಂಧವ್ಯಗಳು ಸರಿಯಾಗದೆ ಮುಖ ತಿರುಗಿಸಿಕೊಂಡು ಸಂಬಂಧ ಕಳಚಿ ಬೀಳುತ್ತದೆ.

ಬಹುಪತ್ನಿತ್ವ ಅಥವಾ ವಿಧವಾ ವಿವಾಹಗಳು ಕ್ವಚಿತ್ತಾಗಿ ನಡೆದರೂ ಹಿರಿಯರ, ಸಮಾಜದ ಒಪ್ಪಂದದ ಮೇಲೆ ನಡೆಯುತ್ತವೆ. ಮಡಿವಾಳ ಜನಾಂಗದಲ್ಲಿ ಸ್ತ್ರೀಯರನ್ನು ದೇವದಾಸಿಯಾಗಿ ಅಥವಾ ಬಸವಿಯಾಗಿ ಬಿಡುವ ಪದ್ಧತಿಗಳು ಇಲ್ಲವೇ ಇಲ್ಲ. ಕುಲವೃತ್ತಿಯನ್ನು ನೋಡುತ್ತ ಕಲಿಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆಯ ಜನರು ಮಾತ್ರ ವಿದ್ಯಾವಂತರಾಗಿ ವೃತ್ತಿಯಿಂದ ನಿವೃತ್ತಿಯನ್ನು ಹೊಂದಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮಹಿಳೆಯರ ಸಂಖ್ಯೆ ತುಂಬಾ ಕಡಿಮೆಯಾಗಿದೆ.

ಅವಿಭಕ್ತ ಕುಟುಂಬದಲ್ಲಿ ಹೆಣ್ಣಿಗೆ ಮಹತ್ವವಾದ ಸ್ಥಾನ ನೀಡಿರುವುದಿಲ್ಲ. ವಿಭಕ್ತ ಕುಟುಂಬಗಳಲ್ಲಿ ಗಂಡಿನಷ್ಟೇ ಸಮಾನವಾದ ಅವಕಾಶಗಳನ್ನು ಹೊಂದಿರುತ್ತಾಳೆ. ಇಂದು ಅವಿಭಕ್ತ ಕುಟುಂಬಗಳಲ್ಲಿ ಸಮಾನತೆಯ ಗಾಳಿ ಬೀಡುತ್ತದೆ. ಸ್ತ್ರೀಯರಿಗೆ ಸ್ಥಾನಮಾನ ದೊರೆಯುತ್ತದೆ. ಪ್ರಮುಖ ನಿರ್ಧಾರಗಳಲ್ಲಿ ಪುರುಷನದ್ದೇ ಸಿಂಹಪಾಲಾಗಿರುತ್ತದೆ.

ನಿತ್ಯ ವೃತ್ತಿಯೊಂದಿಗೆ ಕೌಟುಂಬಿಕ ಜೀವನದಲ್ಲಿ ರಸನಿಮಿಷಗಳನ್ನು ಅನುಭವಿಸುತ್ತಾಳೆ. ತ್ಯಾಗದ ಪುತ್ಥಳಿಯಾದ ಮಹಿಳೆಯು ತನ್ನ ಆಶೋತ್ತರಗಳನ್ನು ಬದಿಗೆ ಸರಿಸಿ ತನ್ನವರ ಹಿತಕ್ಕಾಗಿ ದುಡಿಯುತ್ತಾಳೆ. ಮನೆಯ ಮಂದಿಯ ಒಳಿತಿಗಾಗಿ ಹೆದರಿ ನಡೆಯುತ್ತಾಳೆ. ಬಿಚ್ಚಿ ಆಡಿಕೊಂಡರೆ ಬಿಚ್ಚುಗತ್ತಿಯಾಗಿ ನಿಲ್ಲುವುದಕ್ಕೆ ಸಿದ್ದಳಾದವಳಾಗಿದ್ದಾಳೆ. ಸಾಮಾನ್ಯವಾಗಿ ಹುಟ್ಟಿದ ಮಹಿಳೆಯರು ಅಸಮಾನ್ಯರಾಗಿ ಬೆಳೆದು ತನ್ನ ಜವಾಬ್ದಾರಿಯುತವಾದ ಕೆಲಸದಿಂದ ಎಂಥ ಕಷ್ಟ ಸಮಯದಲ್ಲಿಯೂ ದೂರವಾಗದೆ ಬದುಕನ್ನು ನಡೆಸುತ್ತಿದ್ದಾಳೆ. ಎದುರಾಗುವ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸ್ಥಿತಿ ಪ್ರಜ್ಞೆಯನ್ನು ಕಳೆದುಕೊಳ್ಳದೆ ಕೃತಜ್ಞತೆಯೊಂದಿಗೆ ಬಾಳಿನಲ್ಲಿ ಜಯದ ಜಾಗಟೆಯನ್ನು ಬಾರಿಸುತ್ತಿದ್ದಾಳೆ.

ಕುಟುಂಬ ನಿರ್ವಹಣೆಯೊಂದಿಗೆ ವೃತ್ತಿ ನಿರ್ವಹಣೆಯ ಹೊಣೆ ಹೊತ್ತ ಮಡಿವಾಳ ಜನಾಂಗದ ಮಹಿಳೆಯರ ಜೀವನವು ಇತರ ಮಹಿಳೆಯರಿಗೆ ಆದರ್ಶವಾಗುತ್ತದೆ. ಮನೆಯ ಶಾಂತಿಯನ್ನು ಮನದ ಶಾಂತಿಯಿಂದ ನಿಭಾಯಿಸುತ್ತಾಳೆ. ಒಕ್ಕಲು ಮನೆಯವರ ಟೀಕೆಗಳಿಗೆ ಉತ್ತರಿಸುತ್ತಾಳೆ. ಸರ್ವ ವಿಘ್ನಗಳನ್ನು ಸಮಚಿತ್ತದಿಂದ ನಿರ್ವಹಿಸಿಕೊಂಡು ಬದುಕು ಸಾಗಿಸುತ್ತಾಳೆ.