ಆಚರಣೆಗಳು

ಬದುಕಿನ ಬಗ್ಗೆ ನಂಬಿಕೆ ಇಟ್ಟುಕೊಂಡ ಮಾನವನು ಅದರ ಸುಂದರತೆಗಾಗಿ, ಶಾಶ್ವತೆಗಾಗಿ ತನ್ನ ಪರಿಸರದಲ್ಲಿ ಸಾಧ್ಯವಾಗುವಂತಹ ಆಚರಣೆಗಳನ್ನು ರೂಢಿಸಿಕೊಂಡಿದ್ದಾನೆ. ಈ ಆಚರಣೆಗಳಿಗೆ ಧರ್ಮದ ಹೊದಿಕೆ ಹೊದಿಸಿದ್ದಾನೆ. ಸೃಷ್ಟಿಗೂ-ಬದುಕಿಗೂ ಇರುವ ಸಂಬಂಧವನ್ನು ಮನುಷ್ಯ ತಮ್ಮ ಕಲ್ಪನೆಯ ಮೂಲಕ ವಿವರಿಸಲು ಪ್ರಯತ್ನಿಸುತ್ತಿದ್ದಾನೆ. ಇದರಿಂದಾಗಿ ಕೆಲವು ಆಚರಣೆಗಳು ಮಾನವನಲ್ಲಿ ರೂಢಿಗತವಾದವು. ಪರಂಪರೆಯ ಮೂಲಕ ಮುಂದುವರಿದುಕೊಂಡು ಬಂದಿವೆ. ಆದ್ದರಿಂದ ಆಚರಣೆಗಳು ಜನಮನದಲ್ಲಿ ಅಳಿಯದೆ-ಉಳಿದಿವೆ. ಧರ್ಮದ ಮೂಲಾರ್ಥವನ್ನು ಅರಿಯದೆ ಗೊಡ್ಡು ಸಂಪ್ರದಾಯಗಳನ್ನು ಧರ್ಮದ ಆವರ್ತದಲ್ಲಿ ಸೇರಿಸಲಾಗಿದೆ. ಧರ್ಮವೆನ್ನುವುದು ಬಲಿಷ್ಠರ ಇಷ್ಟ ಸಾಧಕವಾದ ಶಾಸನ ಸಮೂಹವಲ್ಲ. ಎಲ್ಲರ ಆತ್ಮೋನ್ನತಿಗೂ ಸಾಧಕವಾದ ಮಾರ್ಗ ಎಂದು ಪ್ಲೇಟೋ ವಿವರಿಸಿದ್ದಾನೆ. ಧರ್ಮವು ಹೃದಯದಲ್ಲಿ ಅರಿವನ್ನು ಉಂಟು ಮಾಡುವಂತಿರಬೇಕು. ಅದು ಬಾಹ್ಯವಾದ ಆಚರಣೆಗಳಿಗೆ ಸೀಮಿತತೆಯನ್ನು ಹೊಂದಿರಬಾರದು.

“ರಜ್ಜು ಸರ್ಪನ್ಯಾಯ” ಹಗ್ಗವನ್ನು ಹಾವು ಎಂದು ಭಾವಿಸುವ ಭ್ರಮಾಂತಕತೆಯಾಗಿದೆ. ದಾರಿ ಹಿಡಿದು ಹೋಗುವ ವ್ಯಕ್ತಿ ಕತ್ತಲು ಇರುವುದರಿಂದ ಅಲ್ಲೊಂದು ಹಗ್ಗವನ್ನು ಕಂಡು ಹಾವೆಂದು ಭಾವಿಸಿದನು. ತನ್ನಲ್ಲಿರುವ ಬೆಳಕಿನ ಸಾಧನದಿಂದ ನಂತರ ಅದು ಹಾವಲ್ಲ ಹಗ್ಗವೆಂದು ತಿಳಿದು ಧೈರ್ಯತಂದುಕೊಂಡನು. ಕತ್ತಲು ಅಜ್ಞಾನದ ಸಂಕೇತ ಬೆಳಕು ಜ್ಞಾನದ ಸಂಕೇತವಾಗಿದೆ. ಹಾವನ್ನು ಕಂಡ ವ್ಯಕ್ತಿ ಭಯಗೊಂಡನು ಭಯದಿಂದ ಭಕ್ತಿ-ಭಕ್ತಿಯಿಂದ ದೇವರು ಇದರಿಂದ ಅಂಧಾನುಕರುಣೆಗಳು ಆರಂಭವಾದವು. ಹುಟ್ಟು ಸಾವುಗಳನ್ನು ಖಚಿತ ಎಂದು ತಿಳಿದರೂ ಮಾನವನು ಹಲವು ಆಚರಣೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಬಹುದೆಂದು ಭ್ರಮಿಸಿದ್ದಾನೆ.

ಮನದಲ್ಲಿ ಮೂಡಿದ ಭಾವನೆಗಳನ್ನು ಅನುಷ್ಠಾನಕ್ಕೆ ತರಲು ಕೆಲವು ಆಚರಣೆಗಳನ್ನು ರೂಢಿಮಾಡಿಕೊಂಡನು. ತನ್ನ ಬುದ್ಧಿ ಶಕ್ತಿಗೆ ನಿಲುಕದ್ದನ್ನು ದೈವಿಶಕ್ತಿಗೆ ಗಂಟು ಹಾಕಿದನು. ಅವುಗಳನ್ನು ಆಚರಿಸುತ್ತಾ ಸಾಗಿದನು. ಆಚರಣೆಗಳಲ್ಲಿ ಕೆಲವು ವ್ಯಕ್ತಿಗೆ ಸೀಮಿತವಾದರೆ ಹಲವು ಜನಾಂಗಕ್ಕೆ ಸೀಮಿತವಾದವು. ಧರ್ಮಕ್ಕೆ (ಜಾತಿಗಳಿಗೆ) ಅಂಟಿಕೊಂಡವು. ಕೆಲವು ಪ್ರಾದೇಶಿಕತೆಯನ್ನು ತನ್ನಲ್ಲಿ ಉಳಿಸಿಕೊಂಡವು. ಅವುಗಳಲ್ಲಿ ಆಯಾ ಜನಾಂಗದ ಸಾಂಸ್ಕೃತಿಕ ಅವಿಭಾಜ್ಯ ಅಂಗಗಳಾಗಿ ಆಚರಿಸಲ್ಪಟ್ಟವು. ಈ ಆಚರಣೆಗಳು ಕಾಲದಿಂದ ಕಾಲಕ್ಕೆ ಬದಲಾವಣೆ ಹೊಂದಿದರೂ ಅವುಗಳ ಮೂಲ ಬೇರುಗಳು ಜನಾಂಗೀಯ ಆಚರಣೆಗಳಲ್ಲಿ ಹಸಿರಾಗಿವೆ. ಕೆಲ ಆಚರಣೆಗಳಿಗೆ ಅರ್ಥ ಮತ್ತು ಉಪಯುಕ್ತವಾದರೆ ಕೆಲವು ಆಚರಣೆಗಳು ಮೌಖಿಕವಾಗಿ ಮುಂದುವರೆಯುತ್ತಿವೆ.

ನಿರ್ಧಿಷ್ಟವಾದ ಜನಾಂಗ ನಿರ್ಧಿಷ್ಟ ಆಚರಣೆಗಳನ್ನು ರೂಡಿಸಿಕೊಂಡಿರುತ್ತಾರೆ. ಅವು ಇತರ ಧರ್ಮದ ಆಚರಣೆಗಳನ್ನು ಅನುಕರಣೆ ಮಾಡದೆ ತಮ್ಮ ರೂಢಿ ಸಂಪ್ರದಾಯಗಳನ್ನು ಅನುಸರಿಸುತ್ತವೆ. ತಮ್ಮದೇ ಆದ ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದುವರೆಯುತ್ತವೆ. ಒಂದು ಜನಾಂಗದ ಆಚರಣೆಗಳು ಆ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯನ್ನು ತನ್ನ ತೆಕ್ಕೆಯಲ್ಲಿ ಹಿಡಿದುಕೊಳ್ಳುತ್ತದೆ. ನಿರ್ಧಿಷ್ಟ ಸಮುದಾಯದಲ್ಲಿ ಆಚರಣೆಗಳು ನಿರ್ಧಿಷ್ಟವಾಗಿರುತ್ತವೆ. ಹರಕೆ-ಹಬ್ಬ-ಆಚರಣೆಗಳು ವಿಶಿಷ್ಟವಾಗಿರುತ್ತದೆ.

ಆಚರಣೆಗಳನ್ನು ಅನುಕರಣೆ ಮಾಡುತ್ತ ಬಂದಿರುವ ಮಾನವನು ದೈವಿಕ ನಂಬಿಕೆಗಳನ್ನು ಉಳಿಸಿಕೊಂಡಿದ್ದಾನೆ. ಅತೀಂದ್ರಯನಾಗಬೇಕು. ಶಕ್ತಿವಂತನಾದರೆ ಭಯ ಬೀರುವ ಕ್ರೂರ ಶಕ್ತಿಗಳಿಂದ ತಪ್ಪಿಸಿಕೊಳ್ಳಬಹುದೆಂಬ ನಂಬಿಕೆಯಿಂದ ಅಂತಹ ಅಗೋಚರ ಶಕ್ತಿಗಳನ್ನು ಪೂಜಿಸುತ್ತ ಬಂದನು. ಇಂಥ ನಂಬುಗೆಯಿಂದ ದೂರ ಉಳಿದರೆ ತನ್ನ ವಿಶಿಷ್ಟ ಆಚರಣೆಗಳಿಂದ ಮಡಿವಾಳ ಸಮಾಜವು ಆಚರಿಸುವ ಆಚರಣೆಗಳನ್ನು ಸ್ಥೂಲವಾಗಿ ವಿವರಿಸಬಹುದುದಾಗಿದೆ.

ಈ ಆಚರಣೆಗಳನ್ನು ಮುಖ್ಯವಾಗಿ ಎರಡು ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ.

೧) ಜೈವಿಕ ಆಚರಣೆಗಳು

೨) ದೈಹಿಕ ಆಚರಣೆಗಳು

ಈ ಎರಡು ಬಗೆಯ ಆಚರಣೆಗಳನ್ನು ಮಡಿವಾಳ ಸಮುದಾಯದ ಒಳಪಂಗಡಗಳಲ್ಲಿ ಭಿನ್ನ ಭಿನ್ನವಾಗಿ ಆಚರಿಸುತ್ತಾರೆ. ಆದ್ದರಿಂದ ಈ ಕೆಳಕಂಡಂತೆ ವರ್ಗಿಕರಿಸಿಕೊಳ್ಳಲಾಗಿದೆ.

೧) ಮೋಟ ಮತ್ತು ನಾಮಧಾರಿ ಮಡಿವಾಳರ ಆಚರಣೆಗಳು

೨) ಲಿಂಗಾಯಿತ ಮಡಿವಾಳರ ಆಚರಣೆಗಳು

ಮೋಟ ಮತ್ತು ನಾಮಧಾರಿ ಮಡಿವಾಳರ ಸಾಂಸ್ಕೃತಿಕ ಆಚರಣೆಗಳಲ್ಲಿ ಮಹಿಳೆಯರ ಪಾಲು ಹಿರಿದಾಗಿದೆ. ಇವರ ಆಚರಣೆಗಳಲ್ಲಿ ಮೂಲ ಸಂಸ್ಕೃತಿಯ ಛಾಯೆ ಪಡಮೂಡಿವೆ. ಅವರ ಆಚರಣೆಗಳು ಇತರ ಸಂಸ್ಕೃತಿಯ ಆಚರಣೆಗಳಿಗೆ ವೀರಶೈವ ಧರ್ಮದ ಕೆಲ ಆಚರಣೆಗಳನ್ನು ಅನುಕರಣೆ ಮಾಡಿದ ಬಗ್ಗೆ ತಿಳಿದು ಬರುತ್ತದೆ. ಆದ್ದರಿಂದ ಈ ಎರಡು ಬಗೆಯ ಆಚರಣೆಗಳಲ್ಲಿ ಭಿನ್ನತೆಯ ದೃಷ್ಟಿಯಿಂದ ವಿಭಾಗಿಸಿಕೊಳ್ಳಲಾಗಿದೆ.

ಜನನ: ಜೀವನದ ಪರಿಪೂರ್ಣತೆಗಾಗಿ ಸೃಷ್ಟಿ ಕಾರ್ಯದಲ್ಲಿ ಸ್ತ್ರೀಯು ಭೂತಾಯಿಯ ಸ್ವರೂಪದಲ್ಲಿದ್ದಾಳೆ. ಸ್ತ್ರೀ ಪದದ ಅರ್ಥವು ಗರ್ಭ ಧರಿಸಲು ಯೋಗ್ಯಳಾದವಳೆಂದಿದೆ. ಗರ್ಭ ಧರಿಸುವುದು ಸ್ತ್ರೀಗೆ ಭಾಗ್ಯ, ಸಂಪತ್ತು, ಶ್ರೇಯಸ್ಸು ಎಂಬ ನಂಬಿಕೆಗಳಿವೆ. ಇದರಿಂದ ಆಕೆಯ ಜೀವನ ಪರಿಪೂರ್ಣ, ಸಾರ್ಥಕವೆಂದು ತಿಳಿಸಿದ್ದಾರೆ. “ಬಂಜೆ ಬೇನೆ ಅರಿಯಳು” ಬಾಲಕರೇ ಬಾಲೆಯ ಜನ್ಮಕ್ಕೆ ಭೂಷಣ. ಆದ್ದರಿಂದ ಆಕೆ ಗರ್ಭಧರಿಸಿ ಆ ವಂಶದ ಕುಡಿಯನ್ನು ಹೊತ್ತು ಹೆತ್ತು ಪೋಷಿಸಬೇಕೆಂಬ ನಿಯಮಾವಳಿಯ ಕಟ್ಟಿನಲ್ಲಿ ನಿಂತಿದ್ದಾಳೆ. ಮಡಿವಾಳ ಜನಾಂಗದ ಗರ್ಭವತಿ ಮಹಿಳೆಯರಿಗೆ ದಿನ ತುಂಬಿ ಹೆರಿಗೆ ನೋವು ಕಂಡ ತಕ್ಷಣವೇ ಮನೆಯಲ್ಲಿನ ಕೋಣೆಯೊಂದರಲ್ಲಿ ಹಾಸಿಗೆ ಸಿದ್ಧಪಡಿಸಿ ಸೀರೆಗಳಿಂದ ಮರೆಮಾಡಿ ಹೆರಿಗೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅದೇ ಜನಾಂಗದ ಅನುಭವಸ್ಥ ಹಿರಿಯ ಮಹಿಳೆಯರು ಹಾಗೂ ಸುತ್ತಮುತ್ತಲಿನ ಅನುಭವಸ್ಥ ಬೇರೆ ಜನಾಂಗದ ಮಹಿಳೆಯರು ಬರುತ್ತಾರೆ. ಅವರನ್ನು “ಸೂಲಗಿತ್ತಿಯರು” ಎಂದು ಕರೆಯುತ್ತಾರೆ. ಹೆಣ್ಣಿಗೆ ಹೆರಿಗೆ ಮರುಜನ್ಮವಿದ್ದಂತೆ. ಆದ್ದರಿಂದ ಈ ಸೂಲಗಿತ್ತಿಯರು ಅನುಭವದ ಮಾತುಗಳನ್ನು ಹೇಳಿ ಅವಳಿಗೆ ಧೈರ್ಯ ತುಂಬುತ್ತಾರೆ. ಈ ಅನುಭವಸ್ಥರಿಂದ ಹೆರಿಗೆ ಅಸಾಧ್ಯವಾದಾಗ ಆಸ್ಪತ್ರೆಗೆ ಕರೆತಂದು ಹೆರಿಗೆ ಮಾಡಿಸುತ್ತಾರೆ. ಮಡಿವಾಳ ಜನಾಂಗದ ವೃತ್ತಿಪರ ಮಹಿಳೆಯರು ಸತತವಾಗಿ ದುಡಿಯುವುದರಿಂದ ಬಟ್ಟೆ ಮಡಿ ಮಾಡಿಕೊಡಲು ಮನೆಮನೆಗೆ ಹೋಗುವುದರಿಂದ ಬಹತೇಕ ಹೆರಿಗೆಗಳು ಮನೆಯಲ್ಲೇ ಆಗುತ್ತವೆ. ಮಗು ಜನಿಸಿದ ನಂತರ ಮಗುವಿನ ಮುಖಕ್ಕೆ ನೀರು ಹೊಡೆಯುತ್ತಾರೆ. ಇದರಿಂದ ಮಗು ನೀರನ್ನು ನೋಡಿ, ತಣ್ಣನೆಗಾಳಿಗೆ ಅಂಜಬಾರದೆಂಬ ನಂಬಿಕೆ ಇವರಲ್ಲಿದೆ. ಮಗುವಿನ ದೇಹಕ್ಕೆ ಸರಿಹೊಂದುವಂತೆ ಕುಲಾಯಿ, ಕುಂಚಿಗೆ ಹೊಲಿದು ಮಗುವಿಗೆ ರಕ್ಷಣೆ ನೀಡುತ್ತಾರೆ.

 

ಚುಟಿಕೆ ಹಾಕುವುದು

ಮಗುವು ಜನನವಾದ ಕೆಲ ದಿನಗಳ ನಂತರ ಚುಟಿಕೆ ಹಾಕುತ್ತಾರೆ. (ಈಗ ತುಂಬಾ ಕಡಿಮೆಯಾಗಿದೆ) ಉದ್ದನೆಯ ಸೂಚಿಯನ್ನು ದೀಪಕ್ಕೆ ಕಾಯಿಸಿ ಹೊಟ್ಟೆಯ ಭಾಗದ ಎರಡೂ ಪಕ್ಕೆಗಳಿಗೆ ಕತ್ತರಿ (X) ಆಕಾರದ ಗುರುತು ಹಾಗೂ ಎದೆಯ ನೇರವಾದ ಹೊಟ್ಟೆಯ ಭಾಗಕ್ಕೆ ತ್ರಿಪುಡ್ರ (=) ರೀತಿಯ ಗುರುತುಗಳನ್ನು ಕಾಯ್ದ ಸೂಜಿಯಿಂದ ಬರೆಹಾಕುತ್ತಾರೆ. ನಂತರ ಚಿಟಿಕೆಯ ಗಾಯಗಳ ಮೇಲೆ ಹತ್ತಿಯನ್ನು ಮೊದರಲ್ಲಿ ಅದ್ದಿ ಪಟ್ಟಿ ಹಾಕುತ್ತಾರೆ. ಈ ಬರೆಹಾಕುವುದರಿಂದ ಕಾಯಿಲೆ, ಹೊಟ್ಟೆನೋವು, ಜ್ವರ, ಶೀತ ತಗಲಬಾರದೆಂಬ ನಂಬಿಕೆಯನ್ನು ಇಟ್ಟುಕೊಂಡು ಆಚರಿಸಿಕೊಂಡು ಬಂದಿದ್ದಾರೆ.

ಮಾಸು ಊಳುವ ಪದ್ಧತಿಯನ್ನು ಮಡಿವಾಳರಲ್ಲಿದೆ. “ಮಾಸು”ವನ್ನು ಒಂದು ಮಣ್ಣಿನ ಗಡಿಗೆಯಲ್ಲಿ ಹಾಕಿ-ಮನೆಯ ಮುಂಭಾಗದಲ್ಲಿ ಹೂಳಿಡುತ್ತಾರೆ. ಮಾಸಿನ ಗಡಿಗೆ ಹೂಳಿದ ಮೇಲೆ ಅದರ ಮೇಲೆ ಚೌಕಾರದ ಕಲ್ಲನ್ನು ಇಟ್ಟು ಅದಕ್ಕೆ ವಿಭೂತಿ, ಅರಿಸಿಣ, ಕುಂಕಮ ಹಚ್ಚಿ ಪೂಜಿಸುತ್ತಾರೆ. ಕರುಳಿನ ಕುಡಿ ಬೆಳೆಯಲಿ ಎಂದು ಸೂಲಗಿತ್ತಿಯರು ಬೇಡಿಕೊಳ್ಳುತ್ತಾರೆ. ಮೂರನೆ ದಿನಕ್ಕೆ ಇರಲು ಮಾಡುವುದು.

 

ಇರಲು ಮಾಡುವುದು

ಹೆರಿಗೆಯಾದ ಮೂರನೆಯ ದಿನದಂದು ಇರಲು ಪೂಜೆ ಇಟ್ಟುಕೊಳ್ಳುತ್ತಾರೆ. ಬಾಣಂತಿಗೆ ಮಾವು, ಬೇವು ಲೆಕ್ಕ ಸೊಪ್ಪು ಹಾಕಿ ಕುದಿಸಿದ ನೀರಿನಿಂದ ಸ್ನಾನ ಮಾಡಿಸುತ್ತಾರೆ. ಈ ಮೂರು ಮರದ ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿ ಇರುವುದು ಹಾಗೂ ಚರ್ಮರೋಗ ನಿವಾರಣೆಯ ಅಂಶಗಳಿರುವುದೆಂಬ ನಂಬಿಕೆಯಿಂದಲೋ, ಸಂಪ್ರದಾಯದಿಂದಲೋ ಆಚರಿಸಿಕೊಂಡು ಬಂದಿದ್ದಾರೆ. ಅಂದು ಸ್ಥೂಲಗಿತ್ತಿಯರಿಗೆ ಊಟಕ್ಕೆ ಆಹ್ವಾನಿಸುತ್ತಾರೆ. ಹೊಸ ಸೀರೆಯನ್ನು ಕೊಡುವುದುಂಟು. ಗಂಡು ಮಗು ಜನಿಸಿದರೆ ಇರಲು ಸಂಭ್ರಮದಿಂದ ಕೂಡಿರುತ್ತದೆ. ಸಂಜೆ ಮಾಸು ಹೂಳಿದ ಸ್ಥಳಕ್ಕೆ ಅನ್ನ, ಸಕ್ಕರೆ, ತುಪ್ಪ, ನೈವೇದ್ಯ ನೀಡುವುದು, ಇರಲು ದಿನ ಮಾಂಸದ ಅಡಿಗೆಯನ್ನು ಮಾಡಿಸಿ ಮದ್ಯ ಸೇವಿಸಿ ಮಗು ಜನನದ ಸಂಭ್ರಮ ಹಂಚಿಕೊಳ್ಳುತ್ತಾರೆ. ಈ ಸಂಪ್ರದಾಯವು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಚರಣೆಯಲ್ಲಿದ್ದು, ಅವರ ಆರ್ಥಿಕ ಸ್ಥಿತಿಯನ್ನು ಅವಲಂಭಿಸಿದೆ. ವೈಭವದ ಸಂಭ್ರಮದ ರೂಪ ತಾಳುತ್ತದೆ. ಇದಾದ ೫ನೇ ದಿನ, ೯ನೇ ದಿನ ಇಲ್ಲವೆ ೧೧ನೇ ದಿನದಂದು ಗಂಗೆ ಪೂಜೆ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ.

 

ಗಂಗೆಯ ಪೂಜೆ

ಹೆರಿಗೆಯನ್ನು ಸೂತಕವೆಂದು ಭಾವಿಸುತ್ತಾರೆ. ಹುಟ್ಟಿದರೂ ಸೂತಕ, ಸತ್ತರೂ ಸೂತಕದ ಪರಂಪರೆ ಸನಾತನ ಧರ್ಮಾಚರಣೆಗಳಲ್ಲಿ ಪ್ರಬಲವಾಗಿರುವಂತೆ ಮೋಟ ಮತ್ತು ನಾಮಧಾರಿ ಅಥವಾ ಆದಿಸ್ಥಲ ಮಡಿವಾಳರಲಿಯೂ ಪ್ರಚಲಿತವಿದೆ. ಹೆರಿಗೆಯಾದ ಬಾಣಂತಿ ಸಾರ್ವಜನಿಕ ಬಾವಿಗಳಿಂದ ನೀರು ತರುವಂತಿಲ್ಲ. ಗಂಗೆಯ ಪೂಜೆಯ ನಂತರ ಆಕೆ ಪವಿತ್ರಳಾಗುತ್ತಾಳೆಂಬ ನಂಬಿಕೆಯಿದೆ. ಮನೆಗೆ ಬಂದ ಭಿಕ್ಷುಕರಿಗೆ ಭಿಕ್ಷೆ ನೀಡಬಾರದು. ದೇವಸ್ಥಾನಕ್ಕೆ ಹೋಗಬಾರದು. ಇತರ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಾರದೆಂಬ ಧಾರ್ಮಿಕ ಆಚರಣೆಗಳು ರೂಢಿಯಲ್ಲಿರುವುದರಿಂದ ಮನೆ ಸ್ವಚ್ಚಗೊಳಿಸಿ, ಬಟ್ಟೆ ಬರಿಗಳನ್ನು ಒಗೆದು ಅಂದು ಮನೆಯಲ್ಲಿ ಸಿಹಿ ಅಡಿಗೆ ಮಾಡಿ ಬಾಣಂತಿಯನ್ನು ಗಂಗೆಯ ಪೂಜೆಗೆ ಕರೆದುಕೊಂಡು ಹೋಗುತ್ತಾರೆ.

ಗಂಗೆಯ ಪೂಜೆಗೆ ಹೋಗುವ ದಾರಿಯಲ್ಲಿ ಸಣ್ಣ ಮಕ್ಕಳಿದ್ದರೆ, ಸೂತಕದ ತೊಂದರೆ ಆಗುತ್ತದೆಂದು “ಗಂಗಮ್ಮಗೆ ಹೋಗುತ್ತಾಳ ದಾರಿ ಬಿಡ್ರಿ” ಎಂದು ಮುಂದೆ ಹೇಳುತ್ತಾ ಹೋಗುತ್ತಾರೆ. ಬಾಣಂತಿಯ ಜೊತೆಗೆ ಉಳಿದ ಐದು ಜನ ಸ್ತ್ರೀಯರು ಜೊತೆಗೆ ಇರುತ್ತಾರೆ. ಗಂಗೆಯನ್ನು ಪೂಜಿಸಿ ನೈವೇಧ್ಯ, ಆರತಿ ಮಾಡಿದ ನಂತರ ಬಾಣಂತಿಯು ಒಂದು ಬಿಂದಿಗೆ ನೀರನ್ನು ಹೊತ್ತುಕೊಂಡು ಮನೆಗೆ ತರುವುದು ವಾಡಿಕೆಯಾಗಿದೆ. ಗಂಗೆಯನ್ನು ಪೂಜಿಸದಿದ್ದರೆ ತಮಗೆ ಮುಂದೆ ನೀರು ಸಿಗುವುದಿಲ್ಲ ಎಂಬ ನಂಬಿಕೆ ಈ ಜನರಲ್ಲಿದೆ. ಬಡ ಮಡಿವಾಳ ಮಹಿಳೆಯರು ಬಾಣಂತಿಯ ಮೈ ಆರೋಗ್ಯವಾಗುವವರೆಗೆ ಬಿಡದೆ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ದುಡಿದರೆ ಊಟ ಇಲ್ಲವಾದರೆ ಉಪವಾಸ ಎನ್ನುವ ಪರಿಸ್ಥಿತಿ ಇರುವುದರಿಂದ ಬಡತನ ಮುಂದೆ ಮಣಿದವರಾರು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಂಗೆಯ ಪೂಜೆಯ ಆಚರಣೆ ರೂಢಿಯಲ್ಲಿದೆ.

 

ನಾಮಕರಣ

ಮೋಟ, ನಾಮಧಾರಿ ಮಡಿವಾಳರಲ್ಲಿ ವೈದಿಕ ಸಂಪ್ರದಾಯದಂತೆ ಊರಲ್ಲಿಯ ಪಂಡಿತರ, ಸ್ವಾಮಿಗಳ ಹತ್ತಿರ ಹೋಗಿ ಜನನದ ದಿನ ಮತ್ತು ಸಮಯವನ್ನು ಹೇಳಿ ಗ್ರಹಗತಿಯನ್ನು ತಿಳಿದುಕೊಂಡು ಬರುತ್ತಾರೆ. ಜನ್ಮನಾಮ ಏನು ಬಂದಿದೆ ಎಂದು ತಿಳಿದುಕೊಳ್ಳುತ್ತಾರೆ. ಜನಿಸಿದ ಮಗು ಹೆಣ್ಣು ಅಥವಾ ಗಂಡುಗಳಾಗಿದ್ದರೆ ತಮ್ಮ ಹಿರಿಯರ ಹೆಸರನ್ನು ಆರಿಸಿಕೊಂಡು ಶುಭ ಮುಹೂರ್ತದಂದು ನಾಮಕರಣ ದಿನವನ್ನು ನಿಗದಿಪಡಿಸಿಕೊಂಡು ಸೋದರ ಮಾವ ಅಥವಾ ಸೋದರತ್ತೆ ನಾಮಕರಣ ಮಾಡುತ್ತಾರೆ. ಮಗುವಿನ ಕಿವಿಯಲ್ಲಿ ಮೊದಲು ಜನ್ಮನಾಮದ ಹೆಸರನ್ನು ಹೇಳಿ ನಂತರ ಆಯ್ದುಕೊಂಡ ಹೆಸರನ್ನು ಜೋರಾಗಿ ಕೂಗಿ ಹೇಳುವಾಗ ಸುತ್ತ ನೆರೆದವರು ಅದರ ಬೆನ್ನ ಮೇಲೆ ಹೊಡೆಯುತ್ತಾರೆ. ಗಂಗಾಳ ಬಾರಿಸುತ್ತ ಹೆಸರು ಇಡುವುದು ಕಾಣುತ್ತೇವೆ. ನಾಮಕರಣದ ಸಂತೋಷಕ್ಕಾಗಿ ಸಿಹಿ ಊಟದ ವ್ಯವಸ್ಥೆ ಮಾಡಿರುತ್ತಾರೆ. ಬಟ್ಟೆ, ಸಾಮನು, ಹಣದ ಮುಯ್ಯ ಮಾಡುತ್ತಾರೆ.

 

ಜವಳ ಕಾರ್ಯಕ್ರಮ

ಬುಡಕಟ್ಟು ಸಮಾಜದಲ್ಲಿ ರೂಢಿಗತವಾಗಿ ಬಂದ ಆಚರಣೆಗಳಲ್ಲಿ ಇದು ಒಂದಾಗಿದೆ. ಮಡಿವಾಳ ಸಮಾಜದಲ್ಲಿ ಆಚರಿಸುವ ಈ ಜವಳ ತೆಗೆಸುವ ಪದ್ಧತಿ-ವೆಚ್ಚದಾಯಕವಾಗಿದೆ. ಆದ್ದರಿಂದ ಒಂದಕ್ಕಿಂತ ಹೆಚ್ಚಿನ ಮಕ್ಕಳನ್ನು ಸೇರಿಸುತ್ತಾರೆ. ತಮ್ಮ ಅಣ್ಣ-ತಮ್ಮಂದಿರ ಮಕ್ಕಳು, ಇಲ್ಲವೆ ಬಂಧುಗಳ ಮಕ್ಕಳನ್ನು ಸೇರಿಸಿಕೊಳ್ಳುತ್ತಾರೆ. ನಾಮಧಾರಿ ಮಡಿವಾಳರು ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಮೋಟ ಮಡಿವಾಳರು ತಮ್ಮ ಮನೆ ದೇವರ ಸಾನಿಧ್ಯದಲ್ಲಿ ಬಡವರ ಮನೆಯಲ್ಲಿಯೇ ಈ ಜವಳ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ. ಸೋದರ ಮಾವನು ಎರಡು ವಿಳ್ಯೆದ ಎಲೆಯನ್ನು ತೆಗೆದುಕೊಂಡು ಕತ್ತರಿಯಂತೆ ಮಾಡಿ ಕೂದಲನ್ನು ಕತ್ತರಿಸಿದಂತೆ ಮಾಡುತ್ತಾರೆ. ನಂತರ ಮುಂಭಾಗದ ಐದೈದು ಕೂದಲನ್ನು ಕತ್ತರಿಸುತ್ತಾನೆ. ಮಾವನಿಗೆ ಆಯಾರ ರೂಪದಲ್ಲಿ ಬಟ್ಟೆ, ಹಣ ಕೊಡುತ್ತಾರೆ. ಒಂದೆರಡು ದಿನಗಳ ನಂತರ ಕ್ಷೌರಿಕನಿಗೆ ಕರೆದು ಅಕ್ಕಿ, ಬೆಲ್ಲ, ಎಲೆ, ಅಡಿಕೆ, ಕೊಬ್ಬರಿ, ೧೧ ರೂಪಾಯಿ ಅಥವಾ ಅವರವರ ಶಕ್ತ್ಯಾನುಸಾರ ದಕ್ಷಿಣೆ ಕೊಡುತ್ತಾರೆ. ಜವಳ ಇಳಿಸುತ್ತಾರೆ.

 

ಹರಕೆ

ಮಡಿವಾಳ ಸಮಾಜದಲ್ಲಿ ನಮಗೆ ಬರುವ ತೊಂದರೆಗಳನ್ನು ದೇವರೇ ಕೊಡುತ್ತಿದ್ದಾನೆಂಬ ನಂಬಿಕೆ ಮಹಿಳೆಯರಲ್ಲಿ ಹೆಚ್ಚಾಗಿದೆ. ಈ ಜವಳ ಸಂದರ್ಭದಲ್ಲಿ ಹರಕೆಯನ್ನು ಸಲ್ಲಿಸುವ ಕಾರ್ಯಕ್ರಮ ಇರುತ್ತದೆ. ಮುಡಿಪು ಮುಟ್ಟಿಸುವುದೆಂದು ಕರೆಯುತ್ತಾರೆ. ಉರುಳು ಸೇವೆ, ದೀಡ ನಮಸ್ಕಾರ, (ನಿರ್ಧಿಷ್ಟ ಪಡಿಸಿದ ಸ್ಥಳದಿಂದ ತನ್ನ ಕೈಯ ಒಂದು ಮೊಳೆ ಉದ್ದದ ಕಡ್ಡಿಯನ್ನು ತೆಗೆದುಕೊಂಡು ಉದ್ದಕ್ಕೆ ಬಿದ್ದು ಏಳುವುದು, ದೇವರ ಸನ್ನಿಧಿವರೆಗೆ ಹಾಕುವುದು ತೊಟ್ಟಿಲ ಕಟ್ಟಿಸುವುದು, ಕಾಯಿ ಅರ್ಪಿಸುವುದು, ತಮ್ಮ ಇಷ್ಟ ದೇವರ ಸಾನಿಧ್ಯದಲ್ಲಿ ನಡೆಯುತ್ತದೆ. (ಮಾಚಿ ದೇವರ ಸಾನಿಧ್ಯದಲ್ಲಿ ನಡೆಯುವುದಿಲ್ಲ.)

 

ಮುರುವು ಹಾಕುವುದು

ಚೊಚ್ಚಲ ಹೆರಿಗೆಯ ನಂತರ ತವರಿನಿಂದ ಬರುವಾಗ ಬಂಗಾರದ ಮುರುವು, ಬೆಳ್ಳಿ ಉಡುದಾರ, ಕಾಲಚೈನಾ ರುಳಿ, ಕಡಗ ಹಾಕುವುದು ರೂಢಿಯಲ್ಲಿದೆ. ಇದರಿಂದ ಮಗುವಿಗೆ ರೋಗ-ರುಜಿನ ಬರುವುದಿಲ್ಲ. ಪರರ ಕಣ್ಣು ತಾಕುವುದಿಲ್ಲ ಎಂಬ ನಂಬಿಕೆ ಇದೆ. ಸ್ತ್ರೀಯರಿಗೆ ತವರು ಮನೆಯವರು ಕೊಡುವ ಬಳವಳಿಯೂ ರೂಢಿಯಲ್ಲಿದೆ.

 

ಋತುಮತಿ ಶಾಸ್ತ್ರ

ಕನ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಡುವ ಪ್ರಕೃತಿ ಧರ್ಮವೇ ಸ್ತ್ರೀತನ. ಸ್ತ್ರೀ ಪದದ ಅರ್ಥವೇ ಯುವತಿಯಾದವರು ಗೃಹಸ್ಥಾಶ್ರಮಕ್ಕೆ ಸಿದ್ದಳಾದಳೆಂಬುದಾಗಿದೆ. ಯೌವನಾವಸ್ಥೆಯು ಬಾಲಕಿಯರಲ್ಲಿ ಬಹುಬೇಗನೆ ಕಾಣಿಸಿಕೊಳ್ಳುತ್ತದೆ. ರಸಗ್ರಂಥಿಗಳ ಬೆಳವಣಿಗೆಯ ವೇಗೆ ಸ್ತ್ರೀಯರಲ್ಲಿ ವೇಗವಾಗಿರುತ್ತದೆ. ಋತುಮತಿಯಾದಳೆಂದರೆ ಗರ್ಭಧರಿಸಲು ಯೋಗ್ಯಳೆಂದರ್ಥವಿದೆ. ಗರ್ಭಕೋಶವು ಸ್ತ್ರೀಯರಿಗೆ ವೈಶಿಷ್ಟಪೂರ್ಣವಾದ ಅಂಗವಾಗಿದೆ. ಅದರ ಪರಿಪೂರ್ಣ ಬೆಳವಣಿಗೆಯೇ ಋತುಮತಿಯನ್ನಾಗಿಸುತ್ತದೆ.

ಋತುಮತಿಯಾದಳೆಂಬುದಕ್ಕೆ ಪ್ರಾದೇಶಿಕವಾಗಿ ಬೇರೆ ಬೇರೆ ಶಬ್ದಗಳಿಂದ ಉಚ್ಚರಿಸುತ್ತಾರೆ. “ಮಾತೃ ವಂಶ ಸಮಾಜದಲ್ಲಿ ಹೆಣ್ಣು ಪ್ರೌಢಾವಸ್ಥೆಯಾದುದಕ್ಕೆ ವಿಶೇಷ ಪ್ರಧಾನ್ಯ ನೀಡಲಾಗಿದೆ” ಎನ್ನುವ ಡಾ. ಪಿ.ಎಸ್‌.ಹರೀಶ್‌ರವರ ಮಾತು ಸೂಕ್ತವಾಗಿದೆ. ಮಡಿವಾಳ ಜನಾಂಗದಲ್ಲಿ ಋತುಮತಿ ಶಾಸ್ತ್ರವು ಪ್ರಮುಖವಾದ ಸಾಮಾಜಿಕ ಸಂಸ್ಕಾರವಾಗಿದೆ.

ಮಡಿವಾಳ ಜನಾಂಗದಲ್ಲಿ ಹೆಣ್ಣು ಋತುಮತಿಯಾದ ನಂತರ ಹೊರಗಡೆ ಹೋಗದಂತೆ ನೋಡಿಕೊಳ್ಳುತ್ತಾರೆ. ಕೆಲಸ, ಕಾರ್ಯಗಳು ಮಾಡದಂತೆ ಒಂದೆಡೆ ಕೂಡಿಸುತ್ತಾರೆ. ದಿನವೂ ಎಣ್ಣೆ ಸ್ನಾನ, ಆರತಿ, ಹಾಡು ಹೀಗೆ ಒಂಭತ್ತು ದಿನ, ಹನ್ನೊಂದು ದಿನಗಳವರೆಗೆ ಕೂಡಿಸಿ ಕೊನೆಯ ದಿನ ಗಂಗೆ ಪೂಜೆ ಮಾಡಿಸಿ ಬಂಧು-ಬಳಗ, ಊರಿನವರನ್ನು ಕರೆದು ಆರತಿ ಮಾಡಿಸುತ್ತಾರೆ. ವಿಶೇಷ ಭೋಜನದ ವ್ಯವಸ್ಥೆ ಇರುತ್ತದೆ. ಉಡುಗೊರೆ, ಆಯಾರ ಮುಂತಾದವು ಸಾಮಾನ್ಯವಾಗಿರುತ್ತವೆ. ಮೈಸೂರು, ದಕ್ಷಿಣ ಕನ್ನಡ, ಕೋಲಾರ ಮೊದಲಾದ ಕಡೆಗಳಲ್ಲಿ ಸೊಪ್ಪು ಹಾಕುವುದೆಂದು ಕರೆಯುತ್ತಾರೆ. ಸೊಪ್ಪಿನಿಂದ ಗುಡಿಸಲು ಕಟ್ಟಿ ಅದರಲ್ಲಿ ಋತುಮತಿಯಾದವಳು ಕೂಡಿಸುತ್ತಾರೆ. ನಂತರ ಆರತಿ, ಕ್ರಿಯೆಗಳನ್ನು ನಡೆಸುತ್ತಾರೆ.

 

ಸೋದರ ಮಾನವನರಿಗೆ ಸುದ್ದಿ ಮುಟ್ಟಿಸುವುದು

ಮೈನೆರೆದ ಹೆಣ್ಣಿಗೆ ಮದುವೆಯಾಗಿದ್ದರೆ ಗಂಡನ ಮನೆಗೆ ಸುದ್ದಿ ಮುಟ್ಟಿಸುವುದು, ಅವರು ಕೊಬ್ಬರಿ, ಬೆಲ್ಲ, ತುಪ್ಪ, ಉತ್ತುತ್ತಿ ತಂದುಕೊಡುವರು. ಆರತಿ ದಿನ ಹಸಿರು ಸೀರೆ, ಹಸಿರು ಬಳೆ, ಉಡಿತುಂಬುವ ಸಾಮಾನು ತರುತ್ತಾರೆ. ಅದರಂತೆ ಮದುವೆಯಾಗಿರದಿದ್ದರೆ ಸೋದರ ಮಾವನವರು ಇವೆಲ್ಲ ವಸ್ತುಗಳನ್ನು ತರುವುದು ವಾಡಿಕೆಯಾಗಿದೆ.

ಮಡಿವಾಳ ಸಮಾಜದಲ್ಲಿ ಸ್ತ್ರೀ ಸಂಬಂಧಿತ ಕಾರ್ಯಗಳಲ್ಲಿ ಆಚರಣೆಗಳಲ್ಲಿ ಮಹಿಳೆಯರ ನಿರ್ಧಾರಗಳಿಗೆ ಪ್ರತಿಯೊಬ್ಬರು ಒಪ್ಪಿಕೊಳ್ಳುತ್ತಾರೆ. ಇವು ಮುಖ್ಯವಾಗಿ ಸ್ತ್ರೀ ಕೇಂದ್ರೀಕೃತ ಕಾರ್ಯಗಳಾಗಿರುವುದರಿಂದ ಪುರುಷರ ಹಸ್ತಕ್ಷೇಪ ಕಾಣಲಾಗದು. ಪುರುಷನ ಸ್ಥಾನ ಆರ್ಥಿಕ ಸಹಾಯಕನಾಗಿ ನಿಲ್ಲಬೇಕು. ಇಲ್ಲಿ ಮಹಿಳೆಯರ ನಿರ್ಧಾರಗಳೇ ಅಂತಿಮವಾಗಿವೆ.

 

ವಿವಾಹ ಪದ್ಧತಿ

ವೇದ ಕಾಲದಲ್ಲಿ ವಿವಾಹದ ಸಂದರ್ಭದಲ್ಲಿ ಸ್ತ್ರೀಯ ನಿರ್ಧಾರಗಳು ಅಂತಿಮವಾಗಿರುತ್ತಿದ್ದವು. ಮಹಾಕಾವ್ಯಗಳ ಕಾಲದಲ್ಲಿ ಸ್ವಯಂವರ ಪದ್ಧತಿಯ ಮೂಲಕ ಗಂಡನನ್ನು ಆಯ್ಕೆ ಮಾಡಿಕೊಳ್ಳುವುದು ರೂಢಿಯಲ್ಲಿತ್ತು. ಸ್ತ್ರೀಯನ್ನು ಪತ್ನಿ ಎಂಬ ಪದದಿಂದ ಕರೆಯುತ್ತಾರೆ. ಪತ್ನಿ ಎಂದರೆ ಸಹಭಾಗಿತ್ವ ಹೊಂದಿದವಳೆಂದು ಅರ್ಥವಾಗುತ್ತದೆ. “ನಾಸ್ತಿ ಭಾರ್ಯಾ ಸಮಂ ಮಿತ್ರಂ ನರಸ್ಯಾರ್ತಸ್ಯ ಬೇಷಜಂ” ಪುರುಷನಿಗೆ ಹೆಂಡತಿಗೆ ಸಮನಾದ ಸ್ನೇಹಿತೆ ಬೇರೆ ಯಾರೂ ಇಲ್ಲ ಎನ್ನುವುದಾಗಿದೆ.

ಮಡಿವಾಳ ಜನಾಂಗದ ವಿವಾಹ ಪದ್ಧತಿಗಳು ಮೇಲೆ ಸಮಾಜದ ಇತರ ವೈವಾಹಿಕ ಸಂಪ್ರದಾಯಗಳ ಪ್ರಭಾವವಾಗಿದೆ. ಅನುಕರಣ ಮಾನವನ ಸಹಜವಾದ ಮನಸ್ಥಿತಿಯಾಗಿದೆ. ಆದರೂ ಮೂಲ ಸಂಸ್ಕೃತಿಯ ಪ್ರಭಾವ ಮಾಸಿಹೋಗಿಲ್ಲ. ಬೇರೆ ಬೇರೆ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಸಂಪ್ರದಾಯಗಳನ್ನು ಮಡಿವಾಳರ ಮದುವೆ ಸಂದರ್ಭದಲ್ಲಿ ಕಾಣುತ್ತೇವೆ. ಕರ್ನಾಟಕದ ನಗರ ಪ್ರದೇಶದ ಮದುವೆಗಳಿಗೂ, ಗ್ರಾಮೀಣ ಪ್ರದೇಶಗಳ ಮದುವೆಗೆ ಕೆಲ ಆಚರಣೆಗಳಲ್ಲಿ ವ್ಯತ್ಯಾಸ ಕಾಣುತ್ತೇವೆ. ವಾರದವರೆಗೆ ನಡೆಯುವ ಮದುವೆಗಳು ಒಂದು ದಿನಕ್ಕೆ ನಿಂತಿವೆ.

ಕರ್ನಾಟಕದಲ್ಲಿ ರೂಢಿ ಇರುವ ಮೂರು ಒಳಪಂಗಡಗಳಲ್ಲಿ ಮದುವೆಯ ರೀತಿಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗದು. ಮೋಟ ಅಥವಾ ಆದಿಸ್ಥಲದ ಮಡಿವಾಳರು (ಶೈವ) ಮತ್ತು ನಾಮಧಾರಿ ಮಾಡಿವಾಳರ ಆಚರಣೆಗಳು ಒಂದೇ ರೀತಿಯಾಗಿದ್ದರೆ ಲಿಂಗಾಯತ ಮಡಿವಾಳರಲ್ಲಿ ವೀರಶೈವ ಪರಂಪರೆಯ ಪದ್ಧತಿಗಳನ್ನು ಅನುಸರಿಸುತ್ತಾರೆ. ಮೋಟ ಮತ್ತು ನಾಮಧಾರಿ ಮಡಿವಾಳರಿಗೆ ಊಟ ಉಪಚಾರ ನಡೆಯುತ್ತದೆ. ವರ-ಕನ್ಯಾವಿಚಾರಗಳು ನಡೆಯುವುದಿಲ್ಲ.

ಮಡಿವಾಳರಲ್ಲಿ ಆರಂಭದಲ್ಲಿ ತೊಟ್ಟಿಲ ವಿವಾಹ ತೆರವುಕೊಟ್ಟು ಹೆಣ್ಣು ಗಟ್ಟಿ ಮಾಡುವುದು. ತೆರೆಕೊಟ್ಟ ಹೆಣ್ಣು ತಂದರೆ ಹೆಚ್ಚಿನ ಗೌರವ ಎಂದು ತಿಳಿದಿದ್ದರು. ಇಂದು ಈ ಜನಾಂಗದಲ್ಲಿಯೂ ವರದಕ್ಷಿಣೆಯ ಪಿಡುಗು ಹತ್ತಿದೆ. ನಮ್ಮಂತೆ ನಮ್ಮ ಮಕ್ಕಳು ಕಷ್ಟಕ್ಕೆ ಗುರಿಯಾಗಬಾರದೆಂದು ಓದಿದ, ನೌಕರಸ್ಥನಿಗೆ, ಶ್ರೀಮಂತ ಮನೆಗೆ ಮಗಳನ್ನು ಕೊಡುವ ಇತರ ಜನಾಂಗದವರಂತೆ ಮಡಿವಾಳ ಜನಾಂಗದಲ್ಲಿಯೂ ವರದಕ್ಷಿಣೆ ಎಂಬ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ.

ಮಡಿವಾಳರಲ್ಲಿ ವಿವಾಹ ಎಂದರೆ ಅಂತರಂಗದ ಬಯಕೆಯನ್ನು ಈಡೇರಿಸಿಕೊಳ್ಳಲು ಇರುವ ಸಾಮಾಜಿಕ ಒಪ್ಪಂದವಾಗಿರದೆ ಬದುಕಿನ ಬಂಡಿಯ ಎರಡು ಚಕ್ರಗಳಂತೆ ಸಾಗಬೇಕಾಗಿದೆ. ವೃತ್ತಿಯನ್ನೇ ಅವಲಂಭಿಸಿದ ಕೌಟುಂಬಿಕ ಪರಿಸರದಲ್ಲಿ ಇಬ್ಬರ ದುಡಿಮೆ ಸಹಕಾರ ಅನಿವಾರ್ಯವಾಗಿ ನಿಲ್ಲುತ್ತದೆ. ಇಂದು ಒಪ್ಪಿದ ಗಂಡು-ಹೆಣ್ಣಿನೊಂದಿಗೆ ವಿವಾಹವಾಗುವ ಅವಕಾಶವಿದೆ. ಆದರೆ ಸಂಪ್ರದಾಯದ ಮೂಲಕ ನೆರವೇರಬೇಕು.

ಮದುವೆ ಶಾಸ್ತ್ರ ಮುಗಿದ ನಂತರ “ಕುಕ್ಕಡಿ ಬ್ಯಾಟಿ” (ಒಂದು ಓತು, ಇಲ್ಲವೆ ಟಗರು)ಯನ್ನು ಬೀಗರಿಗೆ ಕೊಡಬೇಕು. ಹಿಂದಿನ ಕಾಲದಲ್ಲಿ ಗಂಡಿನ ಮನೆಯಲ್ಲಿ ಮದುವೆ ಆಗುತ್ತಿದ್ದವು. ಸಂಜೆ ಈ ಕಾರ್ಯಕ್ರಮ ಇರುತ್ತಿತ್ತು. ಇದರ ಜೊತೆಗೆ ಹೆಂಡ-ಸಾರಾಯಿ ಕುಡಿದು ಸಂತೋಷ ವ್ಯಕ್ತಪಡಿಸುತ್ತಿದ್ದರು. ನಾಮಧಾರಿ ಮಡಿವಾಳರಲ್ಲಿ ಈ ಪದ್ಧತಿ ಕಡ್ಡಾಯವಾಗಿತ್ತು.

ಈ ಸಂದರ್ಭದಲ್ಲಿ ಮಹಿಳೆಯರಿಗೆ ಅಗ್ರಸ್ಥಾನವಿದೆ. ಎಲ್ಲಾ ಆಚಾರಗಳಲ್ಲಿ, ವಿಧಿ-ವಿಧಾನಗಳಲ್ಲಿ ಮಹಿಳೆಯೇ ಬೇಕು. ಅದರಲ್ಲಿ ಮುತ್ತೈದೆ ಮಹಿಳೆಗೆ ಸ್ಥಾನ ನೀಡುತ್ತಾರೆ. ಉಡುಕಿ (ವಿಧವೆಯನ್ನು ಪುನರ್ವಿವಾಹವಾಗಿದ್ದರೆ) ಸಂಬಂಧ ಇದ್ದರೆ ಅವಕಾಶವಿಲ್ಲ. ಕಳಸ ಹಿಡಿಯುವುದೆಂದರೆ ಸ್ತ್ರೀಯರಿಗೆ ಹೆಚ್ಚಿನ ಗೌರವ ನೀಡಿದಂತೆ ಎಂದು ಭಾವಿಸುತ್ತಾರೆ. ಮನೆ ಹಿರಿಯ ಸೊಸೆಗೆ ಹೆಚ್ಚಿನ ಗೌರವ ನೀಡಿದಂತೆ ಎಂದು ಭಾವಿಸುತ್ತಾರೆ. ಮನೆಯ ಹಿರಿಯ ಸೊಸೆಗೆ ಆಸ್ಥಾನ ನೀಡಲಾಗುತ್ತದೆ.

ಮದುವೆಯ ಖರ್ಚು, ವೆಚ್ಚಗಳು ವಧು-ವರರ ಕುಟುಂಬಗಳೇ ನೋಡಿಕೊಳ್ಳುತ್ತಾರೆ. ಮೋಟ ಮಡಿವಾಳರಲ್ಲಿ ಜಂಗಮರು ವಿವಾಹ ಮಾಡಿಸಿದರೆ, ನಾಮಧಾರಿಗಳಲ್ಲಿ ದಾಸಯ್ಯನವರು ಬರುತ್ತಾರೆ. ಲಿಂಗಾಯತ ಮಡಿವಾಳರಲ್ಲಿ ಜಂಗಮರೇ ಬರುತ್ತಾರೆ. ತಾಳಿಕಟ್ಟುವ ಸಮಯದಲ್ಲಿ ಮಾತ್ರ ಇವರ ಪ್ರವೇಶವಿರುತ್ತದೆ.

 

ಕನ್ನೆಯನ್ನು ನೋಡಲು ಹೋಗುವುದು

ಯಾವ ಊರಲ್ಲಿ ಯಾರ ಮನೆಯಲ್ಲಿ ಕನ್ಯಗಳು ಇದ್ದಾವೆಂಬುದನ್ನು ಪರಿಚಯಸ್ಥರು ಮತ್ತು ಸಂಬಂಧಿಕರ ಮೂಲಕ ತಿಳಿದುಕೊಳ್ಳುತ್ತಾರೆ. ತಾವು ಆ ಊರಿಗೆ ಹೋಗುವುದಕ್ಕಿಂತ ಮುಂಚೆ ಶುಭ ದಿನವನ್ನು ಕೇಳಿ ತಿಳಿದು ಆ ಕನ್ಯಾ ಮನೆಗೆ ಸುದ್ದಿಮುಟ್ಟಿಸುತ್ತಾರೆ. ನಂತರ ಹತ್ತಿರದ ಸಂಬಂಧಿಗಳೊಡನೆ ಮಹಿಳೆಯರನ್ನು ಕೂಡಿಕೊಂಡು ಹೋಗಿ ಕನ್ಯೆ ನೋಡಿದ ಮೇಲೆ, ಚಹಾ-ಇಲ್ಲವೆ ಉಪಹಾರ ಪಡೆಯುತ್ತಾರೆ. ಊಟ ಮಾಡುವುದು ನಿಷೇಧವಿದೆ. ನಿಶ್ಚಿತಾರ್ಥದ ನಂತರ ಊಟ ನಡೆಯುತ್ತದೆ.

 

ನಿಶ್ಚಿತಾರ್ಥ

ನಿಶ್ಚಿತಾರ್ಥವನ್ನು ಇಳೇ ಹಂಚುವುದು, ಎಲೆ ಹಂಚುವುದು, ಹೆಣ್ಣು ಗಟ್ಟಿ ಮಾಡುವುದು, ಹೋಳಿಗೆ ಉಣ್ಣುವುದು, ಸಕ್ರಿಬಾನ ಉಣ್ಣುವುದು, ಹೆಣ್ಣು ಖಾಯಂ ಮಾಡುವುದೆಂದು ಹೆಸರಿಸುತ್ತಾರೆ. ನಿಶ್ಚಿತಾರ್ಥವಾದರೆ ಹೆಣ್ಣಿನ ಕಡೆಯವರಿಗೆ ಮದುವೆ ಖಾತ್ರಿಯೆಂದು ತಿಳಿದುಕೊಳ್ಳುತ್ತಾರೆ. ಇದು ಹೆಣ್ಣಿಗೆ ಮದುವೆ ಪೂರ್ವದ ಮಹತ್ವದ ಘಟ್ಟವಾಗಿದೆ. ಗಂಡಿನವರು ಬಂಧು-ಬಳಗದೊಂದಿಗೆ ವೈಭವದಿಂದ ಬರುತ್ತಾರೆ. ಮಂಗಲಕರವಾದ ವಸ್ತ್ರ, ಒಡವೆಗಳನ್ನು ಉಡಿತುಂಬುವ ಸಾಮಗ್ರಿಗಳು ಬೆಂಡೋಲೆ, ಸರ, ಉಂಗುರ, ಬೆಳ್ಳಿ, ಕಾಲ್ಸರ ಮುಂತಾದವುಗಳನ್ನು ಹಾಕುವುದು ವಾಡಿಕೆಯಾಗಿದೆ. ಈ ಕಾರಣಗಳಲ್ಲಿ ಸ್ತ್ರೀಯರೆ ಮದುಮಗನ ಅಕ್ಕ-ತಂಗಿಯರೆ ಮುಂದಾಳು ಆಗಿರುತ್ತಾರೆ. ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಬೀದರ್, ಗದಗ ಕಡೆ ಮುಂಜಾನೆ ಈ ಕಾರ್ಯಕ್ರಮ ಮಾಡಿದರೆ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೇರಿ, ಶಿವಮೊಗ್ಗ, ಮೈಸೂರು, ಬೆಂಗಳೂರು ಕಡೆ ಸಂಜೆ ಸಮಯದಲ್ಲಿ ಮಾಡುತ್ತಾರೆ.

ಹೆಣ್ಣಿನ ಮನೆಯ ಅಂಗಳದಲ್ಲಿ ಎಲ್ಲರೂ ಸೇರುತ್ತಾರೆ. ಇದನ್ನು ದೈವ ಕೂಡುವುದೆಂದು ಕರೆಯುತ್ತಾರೆ. ವಿಭೂತಿ-ಕುಂಕುಮ ಹಚ್ಚುವುದು, ರುಮಾಲು ಸುತ್ತಿಕೊಂಡಿರುವುದು, ಮಹಿಳೆಯ ತಲೆಮೇಲೆ ಸೆರಗು ಹಾಕಿಕೊಂಡು ಇರುತ್ತಾರೆ. ಹೆಣ್ಣು-ಗಂಡಿನ ತಂದೆಯವರು ದೈವರೆದುರು ವೀಳ್ಯ ಬದಲಿಸಿಕೊಂಡು ಬಾಯಿಗೆ ಸಕ್ರಿ ಹಾಕುತ್ತಾರೆ. ಮಡಿವಾಳರಲ್ಲಿ ಪ್ರತಿಯೊಂದು ಊರಿನ ಗೌಡ ಎನ್ನುವವರು ಈ ಎಲ್ಲ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಮಹಿಳೆಯರು ಗಂಡನ ಮನೆ ಕಡೆಯವರು ತಂದ ಆಭರಣ ಮತ್ತು ಉಡಿತುಂಬು ಸಾಮಗ್ರಿಗಳನ್ನು ತೆಗೆದುಕೊಂಡು ಹೆಣ್ಣನ್ನು ಸಿಂಗರಿಸಿ ಉಡಿತುಂಬಿ ಆರತಿ ಮಾಡುತ್ತಾರೆ. ಗಂಡು-ಹೆಣ್ಣಿನ ಮನೆಯವರು ಗೌಡನಿಗೆ ಹಣ ಕೊಡಬೇಕಾಗುತ್ತದೆ. ಆ ಹಣವನ್ನು ಸಾಮೂಹಿಕವಾಗಿ ಸಾರಾಯಿ ಹೆಂಡ ಕುಡಿದು ಸಂತೋಷ ವ್ಯಕ್ತಪಡಿಸುತ್ತಾರೆ. ತಮಗೆ ಅನುಕೂಲವಾದ ದಿನಗಳಲ್ಲಿ ಹೆಣ್ಣು-ಗಂಡಿನವರು ಮಾತಾಡಿಕೊಂಡು ಲಗ್ನ ಪತ್ರಿಕೆಯ ಪೂಜೆ ಮಾಡಲಾಗುತ್ತದೆ. ಲಗ್ನ ಪತ್ರಿಕೆಯನ್ನು ಬರೆಸಿ ಅದನ್ನು ದೇವರ ಜಗಲಿಮೇಲೋ, ಮುಂದೆ ಇಟ್ಟು ಪೂಜಿಸುತ್ತಾರೆ. ಅನಂತರ ಬೀಗರಿಗೆ ಕಳಿಸುತ್ತಾರೆ. ಹಲವು ಭಾಗಗಳಲ್ಲಿ ಇದನ್ನು ದೇವರ ಕಾರ್ಯ ಎಂದು ಕರೆಯುತ್ತಾರೆ.

 

ಒಳಕಲ್ಲು ಪೂಜೆ-ಬೀಸುವ ಕಲ್ಲು ಪೂಜೆ

ಮದುವೆ ಆರಂಭಕ್ಕಿಂತ ಮುಂಚೆ ಒಳಕಲ್ಲು ಮತ್ತು ಬೀಸುಕಲ್ಲು ಪೂಜೆಯ ನಂತರ ಉಳಿದೆಲ್ಲ ಕಾರ್ಯಗಳನ್ನು ಮಾಡುತ್ತಾರೆ. ಅರಿಸಿಣ ಎಲ್ಲ ಧರ್ಮದಲ್ಲಿಯೂ ಶುಭದ ಸಂಕೇತವಾಗಿದೆ. ಅರಿಶಿಣ ಕಟ್ಟುವ, ಬೀಸುವ ಕಲ್ಲನ್ನು ಪೂಜಿಸುವುದು ವಾಡಿಕೆಯಾಗಿದೆ. ಗಂಡಿನವರ ಮನೆಯಲ್ಲಿ ಮದುವೆಗೆ ಮುನ್ನಾ ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಿಳೆಯರೆ ಪಾಲ್ಗೊಳ್ಳುತ್ತಾರೆ. ಜಾನಪದ ಸಂಸ್ಕೃತಿಯಲ್ಲಿ ನಡೆಯುವ ಈ ಸಂಪ್ರದಾಯವು ಮದುವೆಯ ಸಂದರ್ಭದಲ್ಲಿ ಮಹತ್ವವನ್ನು ಪಡೆದಿದೆ. ಪ್ರತಿಯೊಂದು ಕಾರ್ಯಕ್ರಮಗಳು ಹಾಡಿನಿಂದ ಆರಂಭವಾಗುವುದು ಈ ಸಂಸ್ಕೃತಿಯಲ್ಲಿ ವೈಶಿಷ್ಟ್ಯತೆಯನ್ನು ಪಡೆದಿವೆ. ಇಂದು ಸುಧಾರಣೆಯ ಸುಂಟರಗಾಳಿಯಲ್ಲಿ ಸಿಲುಕಿದ ನಗರ ಪ್ರದೇಶಗಳಲ್ಲಿ ಈ ಸಂಪ್ರದಾಯಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಉತ್ತರ ಕರ್ನಾಟಕದ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಆಚರಣೆಯಲ್ಲಿವೆ.

ಕಲ್ಲಪೂಜೆ ಮಾಡ್ಯಾರ ಎಲ್ಲ ನಾರಿಯರು ಕೂಡಿ
ಕಲ್ಲೆಮಗ ಜೀವವ | ಪಾರ್ವತಿಗೆ
ಬಲ್ಲ ಪತಿಯ ಕರುಣಿಸು ||

ಬಲ್ಲಿದ ಬಲ್ಲಿದರೀಗೆ ಪಲ್ಲಕ್ಕಿ ಕಳುವ್ಯಾಳ
ಪಲ್ಲೆದ ಗಾಲ ಮಗಳಿಗೆ | ಸುಮತ್ತೈದಿಗೆ
ಪಲ್ಲಕ್ಕಿ ಕೊಟ್ಟ ಕರಿಸ್ಯಾರ ||

ಹಾದೀಗಿ ಕಲ್ಲಾಕಿ ಹಾಡಿ ಬೀಸಾಕಿಯಾರ
ಲಾಲ ಕುಂಕುಮದ | ಸರಸತಿಯ
ಹಾಡಿಬೀಸಾಳ ಅರಿಶಿಣ ||

ನಿತ್ಯ ಉಪಯೋಗಿ ವಸ್ತುಗಳಿಗೂ ಮಡಿವಾಳರ ಮದುವೆ ಸಂದರ್ಭಳಲ್ಲಿ ವಿಶೇಷ ಗೌರವ ದೊರೆಯುತ್ತದೆ. ಶುಭ-ಸೋಬನ ಕಾರ್ಯಗಳಲ್ಲಿ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಿದ್ದಾರೆ. ಇವರ ಅನುಪಸ್ಥಿತಿಯಿಂದ ಯಾವ ಕ್ರಿಯೆಗಳು ನಡೆಸಲು ಸಾಧ್ಯವಾಗದು.