ಹಂದರ ಹಾಕುವ ಶಾಸ್ತ್ರ

ಮದುವೆಯ ಮೊದಲನೆಯ ದಿನ ದೇವತಾ ಕಾರ್ಯದ (ದೇವರೂಟದ) ದಿನ ಹಂದರ ಹಾಕುವುದು. ಅಂದರೆ ಗಂಡು-ಹೆಣ್ಣಿನ ಮನೆಯ ಮುಂದೆ ಹಸಿರು ಚಪ್ಪರ ಹಾಕುವುದಾಗಿದೆ. ಸೋದರ ಮಾವನವರು ಹಾಲುಗಂಬವನ್ನು ತಂದು ಚೌಕಾಕಾರದಲ್ಲಿ ಹೊಸ್ತಿಲ ಮುಂಭಾಗದಲ್ಲಿ ಹೂಳಿ ಮೇಲೆ ತೆಂಗಿನ ಗರಿ, ಹೊಂಗೆಸೊಪ್ಪು ಹಾಕುತ್ತಾರೆ. ಕಂಬಳಿಗೆ ಕಂಕಣ ಕಟ್ಟುತ್ತಾರೆ. ಮಾವಿನ ತೋರಣ, ಹೂವಿನ ಅಲಂಕಾರ, ಪ್ರತಿ ಕುಂಬಕ್ಕೆ ದೀಪ ಹಾಕಲು ಪ್ರಣತಿ ಕಟ್ಟುತ್ತಾರೆ. ಒಂದು ಕಾಯಿಯನ್ನು ಚಪ್ಪರದ ಮೇಲ್ಭಾಗದಲ್ಲಿ ಚಪ್ಪರದ ಒಳಭಾಗದಲ್ಲಿ ಒಣಕೊಬ್ಬರಿಯನ್ನು ಕಟ್ಟುತ್ತಾರೆ. ಹಂದರ ಹಾಕುವುದು ಮುಗಿದ ತಕ್ಷಣವೇ ಹಂದರದಲ್ಲೇ ಐದು ಜನ ಕುಳಿತು ಊಟ ಮಾಡುವುದು, ಇದರಿಂದ ನವದಂಪತಿಗಳ ಬಾಳು ಸುಖ, ಸಮೃದ್ಧಿಯಿಂದ ಕೂಡಿರುತ್ತದೆಂದು ನಂಬಲಾಗಿದೆ. ವರನ ಅಕ್ಕ-ತಂಗಿಯ ದಂಪತಿಗಳು “ಚಟ್ಟು ಹೊಡೆಯುತ್ತಾರೆ. ಸುಣ್ಣ, ಜಾಜು (ಕೆಂಪು ಬಣ್ಣ ಹೋಲುವ ಪುಡಿ) ಮನೆಯ ಹೊರಗೋಡೆಗೆ ಹಸ್ತಗಳ ಅಚ್ಚುಗಳನ್ನು ಹಾಕುತ್ತಾರೆ. ಅವರಿಗೆ ಹಂದರದಲ್ಲಿ ಸ್ನಾನ ಮಾಡಿಸಿ ಬಟ್ಟೆ ಆಯಾರ ಮಾಡುತ್ತಾರೆ.

ಮದುವೆಯ ಮನೆಯೆಂದು ಬಹುಬೇಗನೆ ಗುರುತಿಸಲು ಸಾಧ್ಯವಾಗುವಂತೆ ಹಂದರ, ಚಟ್ಟು ಹೊಡೆಯುವುದು ಜೊತೆಗೆ ವಾದ್ಯಗಳ ಮಂಗಳ ನಿನಾದ ಇವುಗಳಿಂದ ಮದುವೆಯ ಮನೆಯು ಕಂಗೊಳಿಸುವುದರಿಂದ ಮದುವೆಗಳು ಜಾನಪದರಲ್ಲಿ ಅತ್ಯಂತ ಸಂಭ್ರಮದ ಕ್ಷಣಗಳಾಗಿ ತೋರಿಬರುತ್ತವೆ. ಗ್ರಾಮೀಣ ಪ್ರದೇಶದ ಜನರಿಗೆ ಹಸಿರೇ-ಉಸಿರಾಗಿದೆ. ಇದಾದ ನಂತರ ಮದುಮಗನ ಮಾಡುವ ಶಾಸ್ತ್ರ ಆರಂಭವಾಗುತ್ತದೆ.

 

ಮದುಮಗನ ಮಾಡುವುದು

ಹಂದರ ಶಾಸ್ತ್ರದ ಎಲ್ಲಾ ಕಾರ್ಯಗಳು ಮುಗಿದ ನಂತರ ಮದುವೆ ಆಗುವ ವರನನ್ನು ಕರಿಕಂಬಳಿಯ ಮೇಲೆ ಅಕ್ಕಿಯಿಂದ “ಶ್ಯಾಸಿ” ಬರೆದು (ರಂಗೋಲಿಯಂತೆ ಚಿತ್ರಗಳನ್ನು ಬರೆದು, ಸೂರ್ಯ, ಚಂದ್ರ, ಕಳಸ, ಈಶ್ವರ (ಸ್ಥಾವರ ಲಿಂಗದ ಸಂಕೇತ) ಅಕ್ಕಿಯಿಂದ ಶ್ಯಾಸಿ ಹಾಕಿ ಅದರ ಮೇಲೆ ಕೂಡಿಸಿ ಅರಿಶಿಣ ಹಚ್ಚಿ ಆರುತಿ ಮಾಡುತ್ತಾರೆ. ಮುತ್ತೈದಿಯರು ಅಕ್ಕಿಯಿಂದ ಸ್ಯಾಸಿ ಇಡುತ್ತಾರೆ. ನಂತರ ಹಂದರದಲ್ಲಿ ಒನಕೆ ಮೇಲೆ ಮದುಮಗಳನ್ನು ಕೂಡಿಸುತ್ತಾರೆ. ನೀರು ಹಾಕಿ ಬಟ್ಟೆ ಉಡುಸಿ ದೇವರ ಮನೆಗೆ ಕರೆದುಕೊಂಡು ಹೋಗುತ್ತಾರೆ. ನಿಂಬೆಹಣ್ಣನ್ನು ಚಾಕುವಿಗೆ ಚುಚ್ಚಿ ಕೈಯಲ್ಲಿ ಕೊಡುತ್ತಾರೆ.

ಮದುಮಗ ಆದನಂತರ ಊರ ಹೊರಗಿನ ಪ್ರದೇಶಗಳಿಗೆ ಹೋಗಬಾರದೆಂಬ ನಂಬಿಕೆಯಿದೆ. ಸಂಜೆ ಬೀಗರನ್ನು ಎದುರುಗೊಳ್ಳುವುದು. ತುಂಬಿದ ಕೊಡದೊಂದಿಗೆ ಕಳಸ, ಆರತಿ ಬ್ಯಾಂಡ್‌ಮುಂತಾದ ವಾದ್ಯಗಳ ಮೂಲಕ ಊರ ಹೊರಗೆ ಇರುವ ಬೀಗರನ್ನು ಕರೆದುಕೊಂಡು ಬಂದು ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿ ನಿಗದಿ ಪಡಿಸಿದ ಸ್ಥಳದಲ್ಲಿ ಇಳಿಸುತ್ತಾರೆ. ರಾತ್ರಿ ಊಟವನ್ನು ಕೊಡುವುದನ್ನು ಮಸಿಊಟ ಎಂದು ಕರೆಯುವ ವಾಡಿಕೆಯಿದೆ. ಕರ್ನಾಟಕದ ತುಂಬ ಮೋಟ ಮಡಿವಾಳರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಇವರ ಆಚರಣೆಗಳನ್ನೇ ನಾಮಧಾರಿ ಮಡಿವಾಳರು ಅನುಸರಿಸುತ್ತ ಬಂದಿದ್ದಾರೆ.

 

ಉಡಿ ತುಂಬುವ ಕಾರ್ಯ

ಮದುವೆಯ ಹಿಂದಿನ ರಾತ್ರಿ ಮದುಮಗಳನ್ನು ಕೂಡಿಸಿ ಹರಿಸಿಣ ಹಚ್ಚಿ, ಆರತಿ ಮಾಡಿ ಉಡಿತುಂಬುವ ಕಾರ್ಯಕ್ರಮ ನಡೆಯುತ್ತದೆ. ನಿಶ್ಚಿತವಾದ ಕನ್ಯೆಯೋ ಬೇರೆ ಕನ್ಯೆಯೋ ಎಂದು ಗುರುತಿಸುತ್ತಾರೆ. ರಾತ್ರಿಯೆಲ್ಲಾ ಈ ಕಾರ್ಯಕ್ರಮ ಜರುಗುವುದು.

 

ಐರಾಣಿ ತರುವುದು

ಮದುವೆಯ ದಿನದಂದೇ ಮುತ್ತೈದೆಯರು ಕುಂಬಾರರ ಮನೆಗೆ ಹೋಗಿ ಪಡಿಕೊಟ್ಟು ಬಣ್ಣ ಬಳಿದ ಹೊಸ ಗಡಿಗೆಗಳನ್ನು ತಂದು ನೀರನ್ನು ತುಂಬಿ ತರುವುದಾಗಿದೆ.

 

ಸುರಗಿ ಸುತ್ತುವುದು

ಮದುಮಕ್ಕಳಿಗೆ ಮಾಡಿಸುವ ವಿಶೇಷ ಸ್ನಾನದ ಸಂದರ್ಭದಲ್ಲಿ ನಾಲ್ಕು ತಂಬಿಗೆಗಳನ್ನು ಇಟ್ಟು ಬಲದಿಂದ ಎಡಕ್ಕೆ ದಾರವನ್ನು ಸುತ್ತುವುದು. ಐರಾಣಿ ಕೊಡಗಳಿಂದ ತಂದ ನೀರನ್ನು ಹಾಕಿ ಅದರಲ್ಲಿ ವೀಳ್ಯದೆಲೆ ಹಾಕಿರುತ್ತಾರೆ. ಚೌಕಾಕಾರದ ಸುರಗಿಯಲ್ಲಿ ಮದುಮಗ-ಮದು ಮಗಳನ್ನು ಕೂಡಿಸಿ ಸ್ನಾನ ಮಾಡಿಸುತ್ತಾರೆ. ಇದಾದ ನಂತರ ಮಾಂಗಲ್ಯ ಕಾರ್ಯ ನೆರವೇರಿಸುತ್ತಾರೆ. ಬ್ರಹ್ಮಗಂಟು ಹಾಕಿ ಹಾರೈಸುತ್ತಾರೆ.

 

ಮೂಗತಿ ಹುಡುಕುವುದು

ಮದುವೆಗೆ ಬಂದ ಸಮಸ್ತ ದೈವದವರು ಅಕ್ಷತೆಯನ್ನು ಹಾಕಿ ಹರಸಿದ ನಂತರ ಮದುವೆ ಶಾಸ್ತ್ರ ಮಾಡಿಸಲು ಬಂದ ಜಂಗಮರು, ಹಾಲನ್ನು ತರಸಿ ಹಾಲಿನಲ್ಲಿ ಮುತ್ತನ್ನು ಹಾಕಿ ವಧು-ವರರಿಗೆ ಹುಡುಕಲು ಹೇಳುತ್ತಾರೆ. ಅನ್ಯೂನ್ಯತೆ ಬೆಳೆಯಲು ಇದು ಸಹಾಯಕವಾಗಿದೆ.

ಮುತ್ತು ಕಂಡೆ ಮುತ್ತಿನಂತ ಮೂಗತಿ ಕಂಡೆ
ಮೂಗತಿಯೊಳಗಿನ ರತ್ನ ಕಂಡೆ
ರತ್ನದಂತ ಹೆಂಡತಿ ಕಂಡೆ

ಇದೇ ರೀತಿಯಲ್ಲಿ ಮದುಮಗಳಿಂದ ಹೇಳಿಸುತ್ತಾರೆ. ಅಲ್ಲಿ “ಗಂಡನ ಕಂಡೆ” ಎಂಬ ಒಂದೇ ಮಾತು ಬದಲಾಗುತ್ತದೆ. ಯಾರು ಹೆಚ್ಚು ಸಲ ಹುಡುಕುತ್ತಾರೆ ಅವರೇ ಮುಂದೆ ಜಯಶಾಲಿಯಾಗುತ್ತಾರೆಂದು ನಂಬಿದ್ದಾರೆ.

 

ಇತರ ಆಚರಣೆಗಳು

ಪುರುಷ ಪ್ರಧಾನವಾದ ಸಮಾಜದಲ್ಲಿ ಪತಿಯೇ ಪ್ರತ್ಯಕ್ಷ ದೇವರು ಎಂಬ ಆಚರಣೆ ಇವರಲ್ಲಿಯೂ ಇದೆ. ಗಂಡನ ಪಾದ ತೊಳೆದು ವಿಭೂತಿ ಕುಂಕುಮ, ಊದುಬತ್ತಿ ಹಚ್ಚಿ ನಮಸ್ಕರಿಸುವುದು. ಇದು ಯಜಮಾನ ಸಂಸ್ಕೃತಿಯನ್ನು ಮುಂದುವರಿಸಿದೆ. ಸೂರ್ಯ ನಮಸ್ಕಾರ ಮಾಡಿರುವುದು ಇದರಿಂದ ಸೂರ್ಯದೇವನ ಸಾಕ್ಷಿಯಾಗಿ ನಾವು ದಾಂಪತ್ಯ ಜೀವನವನ್ನು ನಡೆಸುತ್ತೇವೆಂದು ಪ್ರಾಮಾಣೀಕರಿಸುವುದಾಗಿದೆ. ಇದಾದ ನಂತರ ವಿನೋದಾಟವನ್ನು ಆಡಿಸುತ್ತಾರೆ. ಹೂ ಚೆಂಡಾಟ, ಬೆಲ್ಲ, ಕೊಬ್ಬರಿ ಆಟ, ಎಲೆಯಾಟ, ಆಡಿಸುವುದರಿಂದ ಪರಸ್ಪರ ಅನೂನ್ಯತೆ ಬೆಳೆಯುತ್ತದೆ.

ಮೊದಲು ಪರಿಚಯ ಇಲ್ಲದ ಹೊಸ ವ್ಯಕ್ತಿಯೊಂದಿಗೆ ಸಮರಸವಾಗಿ ಬೆರೆಯಲು ಇವೆಲ್ಲ ಸಹಕಾರಿ ಎಂದು ತಿಳಿಸಿದ್ದರು. ನಂತರ ದಂಪತಿಗಳನ್ನು ಕೂಡಿಸಿದ ಸ್ಥಳಕ್ಕೆ ಆಗಮಿಸಿ ಅವರವರ ಶಕ್ತ್ಯಾನುಸಾರ ಮುಯ್ಯ ಮಾಡುವರು. ಹತ್ತಿರ ಸಂಬಂಧಿಕರು ಬಂಗಾರ, ಬೆಳ್ಳಿ, ಬಟ್ಟೆ, ಹಣ ನೀಡಿದರೆ ಉಳಿದವರೆಲ್ಲಾ ಹಣದ ರೂಪದಲ್ಲಿ ಆಯಾರು ಮಾಡುವರು. ನಂತರ ಊಟದ ವ್ಯವಸ್ಥೆ ಇರುತ್ತದೆ. ಸಾಯಂಕಾಲ ಕುಡಿತ, ಮಾಂಸದೂಟದ ಸಂಪ್ರದಾಯಗಳು ಇಂದು ನಿಲ್ಲಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಏರುಪೇರಾದರೆ, ಜಗಳ ಮುಂತಾದ ಗೊಂದಲ ಉಂಟಾದರೆ ಮಡಿವಾಳ ಸಮಾಜದ “ಗೌಡ” ಎಂಬ ವ್ಯಕ್ತಿಯು ಬಗೆಹರಿಸುತ್ತಾನೆ. ಗಂಡಿನ ಮನೆಯಲ್ಲಿ ಮೂರು ಸಲ, ಹೆಣ್ಣಿನ ಮನೆಯಲ್ಲಿ ಎರಡು ಸಲ ನೀರು ಹಾಕುವುದು ಇದನ್ನು ವಾರದ ನೀರು ಎಂದೇ ಕರೆಯುತ್ತಾರೆ. ನೀರು ಶಾಸ್ತ್ರವನ್ನು ಮಾಡುವಾಗ ಅಕ್ಕ-ಪಕ್ಕದ ಮನೆಯ ಮಹಿಳೆಯರು ಭಾಗವಹಿಸುತ್ತಾರೆ. ನಂತರ ದಂಪತಿಗಳನ್ನು ಕೂಡಿಸಿ ಹಾಡಿ ಆರತಿ ಮಾಡುತ್ತಾರೆ. ಪ್ರಸ್ತ, ಶೋಭನ ಕಾರ್ಯಕ್ರಮವನ್ನು ನಿಗದಿಪಡಿಸಿದ ಶುಭ ದಿನದಂದು ನೆರವೇರಿಸುತ್ತಾರೆ. ಅಂದು ದೇವರ ಗುಡಿಗೆ ಬ್ಯಾಂಡ್‌ಮೂಲಕ ಹೋಗಿ ಬಂದ ನಂತರ ಪ್ರಸ್ತ ಕಾರ್ಯಕ್ರಮ ನಡೆಸುತ್ತಾರೆ. ನಂತರ ಉಡಿತುಂಬಿ ಗಂಡನ ಮನೆಗೆ ಕಳಿಸುವುದರೊಂದಿಗೆ ಮದುವೆಯ ಆಚರಣೆಗಳಿಗೆ ಮಂಗಳ ಹಾಡುತ್ತಾರೆ.

 

ವೈವಾಹಿಕ ವಿಘಟನೆ

ವೇದ ಕಾಲದಿಂದಲೂ ಸ್ತ್ರೀಗೆ ಪಾತಿವ್ರತ್ಯ ಎಂಬ ನಿಯಮದಡಿಯಲ್ಲಿ ಕಟ್ಟಿಹಾಕಿದ್ದಾರೆ. ಪಂಚ ಪತಿವ್ರತೆಯರ ಹೆಸರನ್ನು ಹೇಳಿ ಅದರಂತೆ ನಡೆಯಬೇಕು. ಗಂಡನೆಂಬ ಗುಂಡು ಹೇಗೆ ಉರಳಿದರೂ ನೀನು ತಡೆದುಕೊಳ್ಳಬೇಕು. ತ್ರಿಕರಣ ಪೂರ್ವಕವಾಗಿ ಮಾಡಿದ ಪ್ರತಿಜ್ಞೆಯಂತೆ ನಡೆಯಬೇಕು ಇದು ಭಾರತೀಯರ ನಾರಿಯರಿಗೆ ವಿಧಿಸಿದ ನಿಯಮವಾಗಿದೆ. ಪುರುಷನಿಗೆ ಮಾತ್ರ ಇಷ್ಟೊಂದು ನಿರ್ಭಂದಗಳಿಲ್ಲ ಎಂಬ ಮಾತು ನೆನಪಿಸಿಕೊಳ್ಳಬೇಕಾಗಿದೆ.

 

ವಿವಾಹ ವಿಚ್ಛೇದನ

ಮಡಿವಾಳ ಜನಾಂಗದಲ್ಲಿ ಕುಲಕಸುಬು ಮಾಡುವುದನ್ನು ಮಹಿಳೆ ಅರಿತಿರಬೇಕು. ಕುಲಕಸುಬನ್ನು ಆಧಾರವಾಗಿಟ್ಟು ನಡೆಯುತ್ತಿರುವ ಮನೆಗಳಲ್ಲಿ ಕುಲಕಸಬು ಬರುವಂತ ಹುಡುಗರನ್ನೇ ಆಯ್ದುಕೊಂಡು ಮದುವೆ ಮಾಡುತ್ತಾರೆ.

ವಿಚ್ಛೇದನಕ್ಕೆ ಕಾರಣಗಳು: ಕುಲಕಸಬು ಬರದಿದ್ದಾಗ ಹೆಂಡತಿ ಶೀಲದ ಬಗ್ಗೆ ಶಂಕೆ ಬಂದಾಗ, ಬುದ್ಧಿ ಭ್ರಮಣೆಯಾದಾಗ, ಸಂತಾನವಾಗದಿದ್ದಾಗ ವಿಚ್ಛೇದನಗಳು ನಡೆಯುತ್ತವೆ. ದೈವದ ಸಮ್ಮುಖದಲ್ಲಿ ನಡೆಯುತ್ತವೆ. ತಪ್ಪು ಯಾರ ಕಡೆ ಇರುತ್ತದೆ ಅವರಿಗೆ ದಂಡವಿಧಿಸುತ್ತಾರೆ. ವಿವಾಹ ವಿಚ್ಛೇದನ ಪಡೆದ ಹೆಣ್ಣಾಗಲಿ-ಗಂಡಾಗಲಿ ಮರು ಮದುವೆ ಆಗುವುದು ಕಷ್ಟಕರವಾದದ್ದು.

 

ಬಹು ಪತ್ನಿತ್ವ

ಏಕಪತ್ನಿತ್ವ ಪದ್ಧತಿ ಜಾರಿಯಲ್ಲಿದೆ. ಮೊದಲನೆಯ ಹೆಂಡತಿಗೆ ಮಕ್ಕಳಾಗದಿದ್ದಾಗ, ಮನೆತನದ ಗೌರವಕ್ಕೆ ಧಕ್ಕೆ ಉಂಟಾದಾಗ ಮರುಮದುವೆ ಆಗುತ್ತಾರೆ. ಗಂಡು ಒಂದಕ್ಕಿಂತ ಹೆಚ್ಚು ಮದುವೆಯಾಗುವ ಸಾಧ್ಯತೆಗಳಿವೆ. ಹೆಣ್ಣಿಗೆ ಈ ಅವಕಾಶವಿರುವುದಿಲ್ಲ.

 

ಮರುವಿವಾಹ

ಹೆಂಡತಿಗೆ ಸಂತಾನ ಪ್ರಾಪ್ತಿಯಾಗದಿದ್ದಲ್ಲಿ ದೈವದ ಮೇರೆಗೆ ಮೊದಲನೆಯ ಹೆಂಡತಿಯಿಂದ ವಿವಾಹ ವಿಚ್ಛೇದನ ಪಡೆದರೆ ಮಾತ್ರ ಮರುಮದುವೆಗೆ ಅವಕಾಶವಿದೆ.

 

ಮದುವೆಯ ಖರ್ಚುವೆಚ್ಚಗಳು

ಮದುವೆಯ ಸಂಬಂಧಕ್ಕಾಗಿ ಹೆಣ್ಣನ್ನು ನೋಡುವುದರಿಂದ ಹಿಡಿದ ಕೊನೆಯವರೆಗೂ ವಿವಾಹದ ಖರ್ಚು ವೆಚ್ಚುಗಳು ಬರುತ್ತವೆ. ಇದರಲ್ಲಿ ಗಂಡಿನವರ ಖರ್ಚು ಹೆಚ್ಚಾಗಿರುತ್ತವೆ. ಇತ್ತಿತ್ತಲಾಗಿ ಹೆಣ್ಣಿನವರು ಈ ಜವಾಬ್ದಾರಿಯನ್ನು ಹೊತ್ತು ಮಗಳ ಮದುವೆ ಮಾಡಿಕೊಡುವುದು, ಅಕ್ಷರಸ್ಥ ಮಡಿವಾಳರ ಕುಟುಂಬಗಳಲ್ಲಿ ಕಾಣಬಹುದಾಗಿದೆ.

ತೆರವು ಕೊಡುವ ಪದ್ಧತಿಯು ಇವರಲ್ಲಿ ಜಾರಿಯಲ್ಲಿದೆ. ಹೆಣ್ಣಿನ ಮನೆಯವರಿಗೆ ವಸ್ತು ರೂಪದಲ್ಲಾಗಲಿ ಹಣರೂಪದಲ್ಲಾಗಲಿ ಇಂತಿಷ್ಟು, ನೀಡಬೇಕೆಂದು ನಿಯಮಾವಳಿಗಳನ್ನು ಮಾಡಿಕೊಂಡಿರುತ್ತಾರೆ. ಇದು ಮಾತೃಪ್ರಧಾನ ಕುಟುಂಬದ ವ್ಯವಸ್ಥೆಯನ್ನು ನೆನಪಿಸುತ್ತದೆ. ಈಗ ಇದು ವಧುವಿಗೆ ಕೊಡುವ ಕನ್ಯಾ ಶುಲ್ಕದ ಬದಲು ವರನಿಗೆ ಕೊಡುವ ವರದಕ್ಷಿಣೆಯಾಗಿ ಮಾರ್ಪಾಡಿಸಿದೆ.

ಈ ಸಮಾಜದಲ್ಲಿ ಸ್ತ್ರೀಯರಿಗೆ ನೀಡಿದ ಸ್ಥಾನ-ಮಾನಗಳನ್ನು ನೋಡಿದಾಗ ಹೆಚ್ಚಿನ ಕಟ್ಟು-ಕಟ್ಟಳೆಗಳು ಸ್ತ್ರೀಗೆ ವಿಧಿಸಲಾಗಿದೆ. ಮಡಿವಾಳ ಜನಾಂಗದ ಆರ್ಥಿಕತೆಯನ್ನು ಸುಧಾರಿಸುವಲ್ಲಿ ಸ್ತ್ರೀಯರ ಪಾತ್ರವೇ ಮುಖ್ಯವಾಗಿ ನಿಲ್ಲುತ್ತದೆ.

 

ಮರಣ ಸಂಸ್ಕಾರಗಳು

ಹುಟ್ಟುವುದು ನಿಸರ್ಗನಿಯಮ, ಬೆಳೆಯುವುದು ಸಂಸರ್ಗಫಲ, ಸಾಯುವುದು ಅನಿವಾರ್ಯವಾಗಿದೆ, ಬರುವವರಿಗೆ ಸ್ಥಾನ ನೀಡಬೇಕು. ಕೆಲಪ್ರಾಣಿಗಳು ಸತ್ತಾಗಲು ಸಂಸ್ಕಾರ ಮಾಡುವುದುಂಟು. ಎತ್ತು, ಕತ್ತೆ, ಕೋತಿ ಮುಂತಾದವುಗಳಿಗೆ ಪ್ರಾದೇಶಿಕತೆಯಲ್ಲಿ ಪ್ರಚಲಿತವಿರುವ ನಂಬಿಕೆಗಳಿಂದ ಅವುಗಳ ಸಂಸ್ಕಾರ ಮಾಡಲಾಗುತ್ತದೆ. ಮಾನವ ಜನಾಂಗದಲ್ಲಿ ಇಂಥ ಸಂಸ್ಕಾರಗಳು ಆಯಾ ಜನಾಂಗದಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದ ನಿಯಮಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ಸಾವಿನಾಚೆಯ ಬದುಕನ್ನು ಕುರಿತು ಎಲ್ಲ ಧರ್ಮಗಳಲ್ಲಿ ನಂಬಿಕೆಯಿದೆ. ಪುನರ್ಜನ್ಮದ ಕಲ್ಪನೆಯು, ವೈದಿಕ, ಜೈನ ಧರ್ಮಗಳಲ್ಲಿ ಬಲವಾಗಿದೆ. ಮೋಕ್ಷ, ಸ್ವರ್ಗ, ನರಕಗಳು ಆ ವ್ಯಕ್ತಿಯ ನಡಾವಳಿಗಳಿಗೆ ಸಂಬಂಧಿಸಿದ್ದು ಆತನು ಬದುಕಿರುವಾಗ ಒಳ್ಳೆಯದು ಮಾಡಿದರೆ ಸ್ವರ್ಗ ಹೋಗುತ್ತಾನೋ ನರಕಕ್ಕೆ ಹೋಗುತ್ತಾನೋ ಆದರೂ ಸಂಸ್ಕಾರಗಳನ್ನು ಮಾಡಬೇಕು.

ಸನಾತನ ಧರ್ಮಗಳ ವಿಧಿ-ವಿಧಾನಗಳನ್ನು ಸಂಪೂರ್ಣವಾಗಿ ಆಚರಿಸಿದೆ ಇದ್ದರೂ ಮಡಿವಾಳ ಜನಾಂಗದಲ್ಲಿ ವೈದಿಕ, ಶೈವ, ವೀರಶೈವ ಧರ್ಮದ ಕೆಲ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ. ಮಡಿವಾಳರಲ್ಲಿ ಸತ್ತ ನಂತರ ಹೂಳುವ, ಸುಡವ ಎರಡು ಪದ್ಧತಿಗಳಿವೆ. ಬಾಣಂತಿ, ಗರ್ಭಿಣಿ ಸ್ತ್ರೀ, ತೊನ್ನು, ಕುಷ್ಟ ರೋಗದವರನ್ನು ಸುಡಲಾಗುತ್ತದೆ. ಮೋಟ, ನಾಮಧಾರಿ, ಲಿಂಗಾಯತ ಮಡಿವಾಳರಲ್ಲಿ ಹೂಳುವ ಸಂಪ್ರದಾಯವೇ ಪ್ರಚಲಿತವಿದೆ.

ಸತ್ತ ಮನೆಯಲ್ಲಿ ಅಡಿಗೆ ಮಾಡುವುದಿಲ್ಲ. ಅಕ್ಕಪಕ್ಕದವರು ಸಮಾಧಾನ ಹೇಳುತ್ತ ಚಹಾ-ಕಾಫಿ ಕುಡಿಯಲು ಕೊಡುವರು. ಸತ್ತ ವ್ಯಕ್ತಿಯ ಗುಣಗಾನ ಮಾಡವರು, ಎದೆ, ಹೊಟ್ಟೆ, ಹಣೆಬಡಿದುಕೊಂಡು ಅಳುವರು. ರಾತ್ರಿ ಕಾಯುವ ಸ್ಥಿತಿ ಇದ್ದರೆ ಭಜನೆ ಮಾಡುತ್ತಾರೆ. ನಾಮದವರು, ಮೋಟದವರು, ಲಿಂಗಾಯಿತರು ಶವವನ್ನು ಸ್ಮಶಾನಕ್ಕೆ ಸಾಗಿಸುವ ಮೊದಲು ಬಂಧುಗಳಿಗೆ ಮದ್ಯ ಕುಡಿಸುವ ವಾಡಿಕೆ ಇತ್ತು. ಇಂದು ಪರಿಸ್ಥಿತಿಯನ್ನು ನೋಡಿ ಈ ಸಂಪ್ರದಾಯ ಕಡಿಮೆಯಾಗಿದೆ.

ಸತ್ತ ನಂತರ ಹತ್ತಿರದ ಸಂಬಂಧಿಗಳೆಲ್ಲ ಸೇರಿ ಸ್ನಾನ ಮಾಡಿಸಿ, ಕುಡಿಸುತ್ತಾರೆ. ಕೆಲವೊಂದು ಜಿಲ್ಲೆಗಳಲ್ಲಿ ಸ್ಮಶಾನಕ್ಕೆ ಕೊಂಡ್ಯೊಯುವ ೪-೫ ತಾಸು ಮೊದಲು ಸ್ನಾನ ಮಾಡಿಸಿ ಹೊಸ ಬಟ್ಟೆ ತಂದು ಸಂಸ್ಕಾರದ ಸಾಮಾನುಗಳನ್ನು ತಂದು ಕೂಡಿಸುತ್ತಾರೆ. ಚಟ್ಟ ಕಟ್ಟುವುದು, ಗೋಣಿ ಚೀಲದಲ್ಲಿ ಮಲಗಿಸಿ ಒಯ್ಯುವುದು, ಗೋಪುರ ಅಕಾರದ ಸಿದಿಗೆ (ವಿಮಾನ) ಕಟ್ಟಿಸುವುದು ವಾಡಿಕೆಯಿದೆ. ಹೆಣದ ಪಕ್ಕದಲ್ಲಿ ಹೆಂಡತಿಯನ್ನು ಕೂಡಿಸಿ ದಂಡೆ, ಹೊಸ ಸೀರೆ, ಉಡಿತುಂಬಿ ಆರತಿ ಮಾಡುತ್ತಾರೆ. ಇದನ್ನೆಲ್ಲ ತವರು ಮನೆಯವರು ಮಾಡುತ್ತಾರೆ.

ಶವವನ್ನು ಮೋಟ ಮಡಿವಾಳರಲ್ಲಿ ಸೋದರ ಅಳಿಯಂದಿರು ಹೊರಬೇಕು. ನಾಮಧಾರರಲ್ಲಿ ಅಣ್ಣ ತಮ್ಮಂದಿರು ಮೊದಲು ಹೊರಬೇಕು. ವ್ಯಕ್ತಿ ಸತ್ತ ನಂತರ ಮೂರು ದಿನ ಕಾರ್ಯ ಮಾಡುತ್ತಾರೆ. ಅಂದು ಕುರಿ-ಕೋಳಿಯನ್ನು ಸತ್ತ ಸ್ಥಳದಲ್ಲಿ ಕಡಿದು ಬಲಿಕೊಡುತ್ತಾರೆ. ಶವವನ್ನು ಹೂಳಿದ ಸ್ಥಳಕ್ಕೆ ಹೋಗಿ ಆತನು ತಿನ್ನುತ್ತಿರುವ, ಕುಡಿಯುತ್ತಿರುವ ಪದಾರ್ಥ, ಪಾನೀಯಗಳನ್ನು ತೆಗೆದುಕೊಂಡು ಹೋಗಿ ಗೋರಿಯ ಮೇಲೆ ಇಡುತ್ತಾರೆ. ಕಾಗೆ ಬಂದು ತಿನ್ನಲೇಬೇಕೆಂಬ ನಂಬಿಕೆಯಿದೆ.

ಮೂರು ದಿನದ ಕಾರ್ಯದ ನಂತರ ೧೧ ಇಲ್ಲವೆ ೧೬ನೆಯ ದಿನಕ್ಕೆ ದಿವಸ ಮಾಡುವ ಕಾರ್ಯಕ್ರಮ ಇರುತ್ತದೆ. ಸಿಹಿ ಅಡಿಗೆ ಮಾಡಿ ತಮ್ಮ ಸಮುದಾಯದವರನ್ನು, ಬಂಧುಗಳನ್ನು ಊಟಕ್ಕೆ ಆಹ್ವಾನಿಸುತ್ತಾರೆ. ಸತ್ತ ಸೂತಕದ ಕೊನೆಯ ದಿನವೆಂದು ಗಂಗೆ ಪೂಜೆ ಮಾಡುತ್ತಾರೆ. ಅದರಂತೆ ವರ್ಷಕ್ಕೊಮ್ಮೆ ಪುಣ್ಯತಿಥಿ ಎಂದು ಅವರವರ ಆರ್ಥಿಕತೆಯನುಸಾರ ನೆನಪು ಮಾಡಿಕೊಳ್ಳುವುದಕ್ಕಾಗಿ ಭೋಜನ ಕೂಟವನ್ನು ಏರ್ಪಡಿಸುತ್ತಾರೆ.

 

ನಾಮಧಾರಿ ಮಡಿವಾಳರು

ಸತ್ತ ನಂತರ ಸುದ್ದಿಯನ್ನು ಮುಟ್ಟಿಸುತ್ತಾರೆ. ಪೇಟೆಗೆ ಹೋಗಿ ಸಾಮಾನುಗಳನ್ನು ಖರೀದಿಸಿಕೊಂಡು ಬರುತ್ತಾರೆ. ಸತ್ತ ವ್ಯಕ್ತಿ ತಿನ್ನುತ್ತಿರುವ ಎಲ್ಲ ವಸ್ತುಗಳನ್ನು ತರುತ್ತಾರೆ. ಹೆಣ ಮನೆಯಲ್ಲಿದ್ದರೂ ಅಡುಗೆ ಮಾಡುತ್ತಾರೆ. ಮಾಂಸದಡಿಗೆ, ಅನ್ನ, ಚಪಾತಿ, ರೊಟ್ಟಿ ಇತರ ಎಲ್ಲ ಪದಾರ್ಥಗಳನ್ನು ಮಾಡಿ ಒಂದು ಎಲೆಯಲ್ಲಿ ನೈವಿಧ್ಯಮಾಡಿ ಸತ್ತ ವ್ಯಕ್ತಿಯ ಕೈಬೆರಳನ್ನು ಅದರಲ್ಲಿ ಅದ್ದಿಸಿ ನಂತರ ಪ್ರಸಾದಂತೆ ಎಲ್ಲರೂ ಸ್ವೀಕರಿಸುತ್ತಾರೆ. ಹೊರಗಿನ ವ್ಯಕ್ತಿಗಳನ್ನು ಇದರಲ್ಲಿ ಸೇರಿಸುವುದಿಲ್ಲ ಬಾಗಿಲು ಕಿಟಕಿಗಳನ್ನು ಮುಚ್ಚಿ ಮಾಡುತ್ತಾರೆ. ಹೆಣದ ಎಲ್ಲ ಸಂಸ್ಕಾರಗಳನ್ನು ನಾಮಧಾರಿ ಮಡಿವಾಳರೇ ತೆಗೆದುಕೊಂಡು ಹೋಗುವಾಗ ಗೋವಿಂದ, ಗೋವಿಂದ ಎಂದು ಪಠಿಸುತ್ತಾ ಜಾಗಟೆ, ಶಂಖ ಊದುತ್ತ ಹೋಗುತ್ತಾರೆ. ಋಣ ಕೊಡುವ ವ್ಯಕ್ತಿ ದಾರಿ ಬುತ್ತಿಯನ್ನು ಹೊತ್ತುಕೊಂಡು ಕೈಯಲ್ಲಿ (ಕೊಳ್ಳಿ ಹಿಡಿಯುತ್ತಾನೆ) ಕಕ್ಕಡವನ್ನು ಹಿಡಿಯುತ್ತಾನೆ. ಸತ್ತ ವ್ಯಕ್ತಿ ದೆವ್ವ ಆಗಬಾರದೆಂದು ರಾಗಿಯೋ, ನವಣೋ ಬಿತ್ತುತ್ತಾರೆ. ಸ್ಮಶಾನದಲ್ಲಿ ಮತ್ತೆ ಮುಖನೋಡಿ ಕುಣಿಯಲ್ಲಿಡುತ್ತಾರೆ. ಮಣ್ಣು ಮಾಡಿದ ಮೇಲೆ ಕಲ್ಲನ್ನು ಇಟ್ಟು ಪೂಜೆ ಮಾಡಿಸುತ್ತಾರೆ.

ಐದನೆಯ ದಿನದಂದು ಕಾರ್ಯ ನಡೆಯುತ್ತದೆ. ಮೋಟ ಮಡಿವಾಳರಲ್ಲಿದ್ದಂತೆ ಉಳೆದೆಲ್ಲ ಆಚರಣೆಗಳು ಇವರಲ್ಲಿವೆ. ರಾತ್ರಿ ಹನ್ನೆರಡರ ನಂತರ ಸ್ಮಶಾನಕ್ಕೆ ಹೋಗಿ ಅಡುಗೆ ಇಟ್ಟು ಬರುತ್ತಾರೆ. ನಂತರ ಮನೆಗೆ ಬಂದು ಊಟವನ್ನು ಮಾಡುತ್ತಾರೆ. ಅಂದಿನ ಅಡಿಗೆ, ಮುಸರೆ ನೀರು ಸಹಿತ ಹೊರಗೆ ಹಾಕದೆ ತಗ್ಗು ತೋಡಿ ಹಾಕುತ್ತಾರೆ.

ಮೋಟ ಮಡಿವಾಳರಲ್ಲಿ ದೀಪ ಆರದಂತೆ ನೋಡಿಕೊಂಡರೆ ನಾಮಧಾರಿ ಮಡಿವಾಳ ಊಟವಾದ ನಂತರ ದೀಪ ಆರಿಸುತ್ತಾರೆ. ಈ ರೀತಿ ದೀಪ ಆರಿಸುವುದು ಸತ್ತ ವ್ಯಕ್ತಿಗೆ ಸಲ್ಲಿಸುವ ಗೌರವವಾಗಿದೆಂದು ನಾಮಧಾರಿ ಮಡಿವಾಳರ ನಂಬಿಕೆಯಾಗಿದೆ.

ನಾಮಧಾರಿಗಳು ೧೬ನೇ ದಿನದ ಕಾರ್ಯಕ್ಕೆ ಶವಸಂಸ್ಕಾರಕ್ಕೆ ಬಂದ ಎಲ್ಲರನ್ನು ಕರೆಯುತ್ತಾರೆ. ದಾಸಯ್ಯನನ್ನು ಕರೆಸಿ ಗಂಗೆ ಪೂಜೆ ಮಾಡಿಸುತ್ತಾರೆ. ಮಗನ ತಲೆ ಬೋಳಿಸಿ ಋಣ ಕೊಡುವ ಪದ್ಧತಿ ಇದೆ. ಇದು ಇತರ ಸಂಬಂಧಿಗಳಿಗೆ ಸಂಬಂಧಿಸುವುದಿಲ್ಲ. ಈ ಸೂತಕದ ದಿನ ಕಳೆದ ನಂತರ ಉಳಿದ ಯಾವ ಕಾರ್ಯದಲ್ಲಾದರೂ ಪಾಲ್ಗೊಂಡರೆ ಯಾವುದೇ ರೀತಿಯ ದೋಷ ಇರುವುದಿಲ್ಲವೆಂಬ ನಂಬಿಕೆಯಿದೆ.