ಲಿಂಗಾಯತ ಮಡಿವಾಳರ ಆಚರಣೆಗಳು

ಬಸವ ಯುಗದ ನಂತರದ ಕಾಲದಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡು ಬರುವ ಲಿಂಗಾಯಿತ ಮಡಿವಾಳರ ಆಚರಣೆಗಳು ವೀರಶೈವ ಧರ್ಮದ ಆಚರಣೆಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ವೃತ್ತಿಯಲ್ಲಿ ಮಡಿವಾಳಕೆಯನ್ನು ಬದುಕಿಗೆ ಆಸರೆಯನ್ನು ಹೊಂದಿದಾರೆ. ಆಚರಣೆಯಲ್ಲಿ ಲಿಂಗಯಾತರ ಧರ್ಮದಲ್ಲಿರುವ ಸಂಪ್ರದಾಯಗಳನ್ನು ಬಿಡದಂತೆ ಮುಂದುವರಿಸಿಕೊಂಡು ಬಂದಿದ್ದಾರೆ. ಇದಕ್ಕೆ ೧೨ನೆಯ ಶತಮಾನದ ಶರಣರ ಕ್ರಾಂತಿಯ ಪ್ರಭಾವವೇ ಮುಖ್ಯ ಕಾರಣವಾಗದೆಂಬುದು ತಿಳಿಯುತ್ತದೆ.

ಶರಣರ ಸಾಮಾಜಿಕ ಕ್ರಾಂತಿಯ ಸಂದರ್ಭದಲ್ಲಿ ವೃತ್ತಿಯನ್ನು ಗೌರವಿಸಿ ಕಾಯಕ ಎಂಬ ವಿಶಿಷ್ಟ ಪದದಿಂದ ವೃತ್ತಿಯನ್ನು ಪದೋನ್ನತಿಗೊಳಿಸಿದರು. ಅನುಭಾವಿಗಳ ಅನುಭವ ಮಂಟಪವು ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶವನ್ನು ಕಲ್ಪಿಸಿತು. ವೃತ್ತಿಯಲ್ಲಿ ಮಡಿವಾಳಕೆಯನ್ನು ಆಚರಿಸುವ ಮಡಿವಾಳರು ಆಚರಣೆಯಲ್ಲಿ ಮೋಟ ಮತ್ತು ನಾಮಧಾರಿ ಮಡಿವಾಳರಿಗಿಂತ ಭಿನ್ನವಾದ ಆಚಾರಗಳನ್ನು ರೂಢಿಸಿಕೊಂಡಿದ್ದಾರೆ. ಲಾಂಛನಕ್ಕೆ ಶರಣೆನ್ನುವ ಬಸವಾದಿ ಪ್ರಮಥರು ಮೇಲು ಕೀಳುಗಳೆಂಬ ತಾರತಮ್ಯದಿಂದ ದೂರ ಸರಿಸದವರಾಗವರು. ಅಂತೆಯೇ ಅವರ ನಡೆ ನುಡಿಯನ್ನು ಆಧಿರಿಸಿಕೊಂಡ ವೃತ್ತಿ ನಿರತ ಕಸಬುದಾರರು ಅವರಂತೆ ನಡೆದರು.

ವರ್ಣಧರ್ಮದ ಮೂಸೆಯಲ್ಲಿ ನಲುಗಿದ ಸಾಮಾನ್ಯ ಜನತೆಗೆ ಶರಣ ಧರ್ಮವು ಆಕರ್ಷಿಸದ್ದು ಸಹಜವಾದಾಗಿದೆ. ಕಾಯಕ ತತ್ವವು ಜನತೆಯಲ್ಲಿರುವ ವೃತ್ತಿ ಅಥವಾ ಕಸುಬಿನ ಬಗೆಗೆ ಇರುವ ಮೇಲು ಕೀಳೆಂಬ ಭಾವಗಳನ್ನು ದೂರಸರಿಸಿತು. ವ್ಯಕ್ತಿತ್ವದ ವಿಕಾಸಕ್ಕೆ ಆಸರೆಯನ್ನು ನೀಡಿತು. ಶರಣರ ಇಂಥ ಸಾಮಾಜಿಕ ಕ್ರಾಂತಿಯ ಪರಿಣಾಮದಿಂದಾಗಿ ಮೂಲ ವೃತಿ ನಿರತ ಮಡಿವಾಳ ಜನಾಂಗವು ಇಂದು ನಾವು ಬೇರೆಂದು ಗುರುತಿಸಿಕೊಳ್ಳುತ್ತಾರೆ. ವೀರಶೈವ ಧಾರ್ಮಿಕ ತತ್ವದ ಅನುಯಾಯಿಗಳಾಗಿದ್ದಾರೆ. ಮಡಿವಾಳರ ಗುಂಪಿನಲ್ಲಿ ನಾವು ಶ್ರೇಷ್ಠ, ಉನ್ನತ, ಉತ್ತಮ ಎಂದು ಮೂಲ ಜನಾಂಗದಿಂದ ಸಿಡಿದು ದೂರ ನಿಲ್ಲುತ್ತಾರೆ.

ವೀರಶೈವ ಧರ್ಮದ ಪ್ರಭಾವಕ್ಕೆ ಒಳಗಾದ ಲಿಂಗಾಯತ, ಮಡಿವಾಳರು ತಮ್ಮ ಆಚರಣೆಗಳಲ್ಲಿ ಭಿನ್ನತೆಯನ್ನು ರೂಢಿಸಿಕೊಂಡು ನಿಲ್ಲುತ್ತಾರೆ. ಸಮಾಜದಲ್ಲಿ ಆಯಾ ಕಾಲದ ಧರ್ಮಗಳ ಪ್ರಭಾವದಿಂದಾಗಿ ಮೂಲ ಆಚರಣೆಗಳಲ್ಲಿ ವ್ಯತ್ಯಾಸವನ್ನು ಹೊಂದುತ್ತಿರುವುದನ್ನು ಕಾಣಬಹುದಾಗಿದೆ. ಸಿದ್ದಾಂತ ಶಿಖಾಮಣಿಯು ಗೀತೆಯ ನಕಲಾಗಿ ಹೇಗೆ ರೂಪತಾಳಿ ನಿಂತಿದೆಯೋ ಅಥವಾ ವೈದಿಕ ಧರ್ಮದ ಪ್ರಣಾಳಿಕೆಗಳು ವೀರಶೈವ ಧರ್ಮದ ಮೇಲೆ ಪ್ರಭಾವ ಬೀರಿ ಅವರ ಆಚರಣೆ, ಪೂಜೆ, ಮಂತ್ರ ತಂತ್ರಗಳಲ್ಲಿ ಬದಲಾವಣೆಯನ್ನು ತಂದುಕೊಂಡರೋ ಹಾಗೆ ೧೨ನೇ ಶತಮಾನದ ಶರಣರ ಸಾಮಾಜಿಕ, ಧಾರ್ಮಿಕ ಕ್ರಾಂತಿಯಿಂದಾಗಿ ವೃತ್ತಿನಿರತ ಕುಲಕಸುಬುದಾರರು ಆಚರಣೆಗಳಲ್ಲಿ ವ್ಯತ್ಯಾಸವನ್ನು ಹೊಂದಿದರು.

ಲಿಂಗಾಯತ ಮಡಿವಾಳರನ್ನು ಕುರಿತು ಪ್ರಮುಖವಾದ ಆಚರಣೆಗಳನ್ನು ಚರ್ಚಿಸಲಾಗಿದೆ. ವೈದಿಕ ಧರ್ಮಾಚರಣೆಯಲ್ಲಿ ಹೆಣ್ಣನ್ನು ಸಮಾನವಾದ ರೀತಿಯಲ್ಲಿ ನೋಡಲಾಗಿಲ್ಲ. ಆದರೆ ಶರಣರ ಸಾಮಾಜಿಕ ಸಂದರ್ಭದಲ್ಲಿ ಸ್ತ್ರೀಗೆ ಸಮಾನತೆ ಕಲ್ಪಿಸಲಾಗಿದೆ. ಅಂತೆಯೇ ಲಿಂಗಾಯಿತ ಮಡಿವಾಳರಲ್ಲಿ ಸ್ತ್ರೀಯರಿಗೂ ಸಹ ಲಿಂಗದೀಕ್ಷೆ ನೀಡಲಾಗುತ್ತಿದೆ.

 

ಜನನ ಸಂಸ್ಕಾರಗಳು

ಮದುವೆಯ ಮೂಲ ಉದ್ದೇಶವು ವಂಶದ ಬೆಳವಣಿಗೆಯಾಗಿದೆ. ಗರ್ಭ ಧರಿಸುವುದು ಸ್ತ್ರೀ ಧರ್ಮಕ್ಕೆ ಶ್ರೇಯಸ್ಸು ಎಂಬ ನಂಬಿಕೆ ಇದೆ. ಮಕ್ಕಳೆ ಮುಂಬಾಳಿನ ಗುರಿಯೆಂದು ತಿಳಿಯಲಾಗಿದೆ. ಅಂತೆಯೇ ಲಿಂಗಾಯಿತ ಮಡಿವಾಳರಲ್ಲಿ ಮದುವೆಯಾದ ಮೂರು ವರ್ಷದೊಳಗೆ ಗರ್ಭ ಧರಿಸಬೇಕು. ಇಲ್ಲವಾದರೆ ಲಿಂಗಾಯಿತರಲ್ಲಿ ವ್ರತ ಆಚರಣೆ, ಕ್ಷೇತ್ರ ದರ್ಶನ, ವೈದ್ಯಕೀಯ ಸಹಾಯ ಪಡೆಯುವಂತೆ ಲಿಂಗಾಯಿತ ಮಡಿವಾಳರಲ್ಲಿ ರೂಢಿಸಿಕೊಂಡಿದ್ದಾರೆ. ಗರ್ಭಧರಿಸಿದ ಎಂಟು ತಿಂಗಳಿಗೆ ಗರ್ಭ‌ಕ್ಕೆ ಲಿಂಗಧಾರಣೆ ಮಾಡುವುದು ರೂಢಿಯಲ್ಲಿದೆ. ಮಗು ಹುಟ್ಟಿದ ಮೂರನೆ ದಿನಕ್ಕೆ ಲಿಂಗಧಾರಣೆ ಮಾಡುವ ಆಚರಣೆಯನ್ನು ಪಾಲಿಸುತ್ತಿದ್ದಾರೆ.

ಜಂಗಮರನ್ನು ಕರೆಯಿಸಿ ಪಾದಪೂಜೆ ಮಾಡಿ ನಂತರ ಲಿಂಗಧಾರಣೆ ಮಾಡಿ ಜಂಗಮರಿಂದ ಸ್ವೀಕರಿಸಿ ಪೂಜಿಸುತ್ತಾರೆ. ಶರಣರ ತತ್ವ ಚಿಂತನೆಗಳು ಪ್ರಭಾವಕ್ಕೆ ಒಳಗಾದ ಲಿಂಗಾಯಿತ ಮಡಿವಾಳರು ಮಧ್ಯ-ಮಾಂಸಗಳನ್ನು ವರ್ಜಿಸುತ್ತಾರೆ. ವೃತ್ತಿ ಧರ್ಮದ ಜೊತೆಗೆ ಮತಧರ್ಮವನ್ನು ಅಷ್ಟೇ ಶ್ರದ್ಧೆ ಭಕ್ತಿಯಿಂದ ಪಾಲಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಬಹುಭಾಗದಲ್ಲಿರುವ ಲಿಂಗಾಯಿತ ಮಡಿವಾಳರು ಮೂಲ ಸಂಸ್ಕೃತಿಗೆ ಬೆನ್ನು ತಿರುಗಿಸಿ ಶರಣ ಸಂಸ್ಕೃತಿಯತ್ತ ತಿರುಗಿದ್ದಾರೆ. ಇದರಿಂದಾಗಿ ಮೋಟ, ಮತ್ತು ನಾಮಧಾರಿ ಮಡಿವಾಳ ಜನಾಂಗದ ಸಂಪರ್ಕಗಳು ಕಡಿಮೆಯಾಗುತ್ತ ಸಾಗಿವೆ.

 

ನಾಮಕರಣ

ಮಗು ಜನಿಸಿದ ೫ನೇ ದಿನದಿಂದ ೩ ತಿಂಗಳಿನ ಅವಧಿಯಲ್ಲಿ ನಾಮಕರಣ ಮಾಡುತ್ತಾರೆ. ಜಂಗಮರ ಉಪಸ್ಥಿತಿ ಇರಲೇಬೇಕು ಅದರೊಳಗೆ ಶಾಸ್ತ್ರ, ಪಂಚಾಂಗಗಳಿಗೆ, ನಕ್ಷತ್ರ ನೋಡಿ ಲಿಂಗಧಾರಣೆ ಮಾಡುತ್ತಾರೆ. ನಂತರ ಹಿಂದಿನವರ ಹೆಸರನ್ನು ಇಡುವುದು ವಾಡಿಕೆ ಇವರಲ್ಲಿಯೂ ಆಧುನಿಕ ಗಾಳಿ ಬೀಸಿದೆ.

 

ತೊಟ್ಟಿಲು ಕಾರ್ಯಕ್ರಮ

ಮಗುವಿನ ನಾಮಕರಣದ ದಿನದಂದೇ ತೊಟ್ಟಿಲ ಕಾರ್ಯಕ್ರಮ ಕೆಲವೆಡೆ ನಡೆದರೆ ಇನ್ನು ಹಲವೆಡೆ ಬೇರೊಂದು ದಿನದಂದು ಆಚರಿಸುತ್ತಾರೆ. ಸೂಲಗಿತ್ತಿ, ಸೋದರತ್ತೆಯರಿಗೆ ಹೊಸಬಟ್ಟೆ, ಜೋಗುಳದ ಹಾಡಿನೊಂದಿಗೆ ಮಗುವಿಗೆ ಯಶಸ್ಸನ್ನು ಕೋರಿ ಮುತ್ತೈದೆಯರು ಹರಸುತ್ತಾರೆ. ತವರು ಮನೆಯಿಂದ ತೊಟ್ಟಿಲು ತರುವುದು, ಕಿವಿ ಚುಚ್ಚುವುದು, ಮನೆಯ ಕೆಲವು ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ದಾರೆ.

 

ಋತುಮತಿಯಾಗುವುದು

ಋತುಮತಿಯಾದ ಐದು ದಿನ ಇಲ್ಲವೇ ಒಂಭತ್ತು ದಿನ ಅಥವಾ ಹದಿನಾರು ದಿನ ಕೂಡಿಸಿ ನಿತ್ಯವೂ ಆರತಿ, ಹಾಡು, ಮತ್ತು ಸಿಹಿ ತಿನಿಸುಗಳೊಂದಿಗೆ ಮೈನೆರೆದ ಹೆಣ್ಣಿಗೆ ಗೌರವಿಸುತ್ತಾರೆ. ಆರತಿ ದಿನ ಜಂಗಮರನ್ನು ಕರೆದು ಪಾದ ಪೂಜೆ ಮಾಡಿ ಪಾದೋದಕವನ್ನು ಎಲ್ಲರೂ ಸ್ವೀಕರಿಸುತ್ತಾರೆ. ಇದರಲ್ಲಿ ಬೀಗರ ಪಾತ್ರ ಮಹತ್ವದ್ದಾಗಿದೆ.

 

ಮದುವೆ

ಲಿಂಗಾಯಿತ ಮಡಿವಾಳ ಮದುವೆಯ ಸಂಪ್ರದಾಯಗಳು ವೈದಿಕ ಧರ್ಮದ ಸಂಪ್ರದಾಯಗಳನ್ನು ಒಳಗೊಂಡಿದೆ. ಆದರೆ ಪ್ರತಿಯೊಂದು ಕಾರ್ಯವನ್ನು ಜಂಗಮರನ್ನು ಮುಂದಿಟ್ಟುಕೊಂಡು ಮಾಡುವ ರೂಢಿ ಇವರಲ್ಲಿದೆ. ಕನ್ಯಾನ್ವೇಷಣೆಯಿಂದ ಮದುವೆಯ ಕಾರ್ಯಗಳೆಲ್ಲವೂ ಜಂಗಮರ ಸಮ್ಮುಖದಲ್ಲಿ ನೆರವೇರಬೇಕು. ವೈದಿಕರಲ್ಲಿ ಹೆಣ್ಣನ್ನು ಕರೆದುಕೊಂಡು ಗಂಡಿನ ಮನೆಯವರೆಗೆ ಬರಬೇಕು. ಆದರೆ ಲಿಂಗಾಯಿತ ಮಡಿವಾಳರಲ್ಲಿ ಇಂಥ ಸಂಪ್ರದಾಯವಿಲ್ಲ. ಗಂಡಿನವರೇ ಹೆಣ್ಣಿನ ಮನೆಗೆ ಶುಭ ಸೂಚಕ ವಸ್ತುಗಳೊಂದಿಗೆ ಹೋಗಿ ನೋಡುವುದು ರೂಢಿಯಲ್ಲಿದೆ. ಕೊಡುಕೊಳ್ಳುವ ವಿಷಯದಲ್ಲಿ ಜಂಗಮರೇ ಪ್ರಸ್ತಾಪ ಮಾಡುತ್ತಾರೆ. ಹೆಣ್ಣು ಒಪ್ಪಿದ ಮೇಲೆ ಮತ್ತು ಕರಾರುಗಳು ಸಮ್ಮತವಾದ ಮೇಲೆ ನಿಶ್ಚಯ ಕಾರಣವನ್ನು ನಡೆಯುತ್ತದೆ. ಇದು ಹೆಣ್ಣಿನ ಮನೆಯಲ್ಲಿ ಮಾಡುವ ಮೊದಲ ಕಾರ್ಯವಾಗಿರುತ್ತದೆ. ಉಡುಗೆ-ತೊಡಗೆ ಹಾಕಿದ ನಂತರ ಆರತಿಯ ನಂತರ ಸಕ್ಕರೆ, ವೀಳ್ಯೆ ಬದಲಾಯಿಸಿಕೊಂಡ ಮೇಲೆ ಮದುವೆ ಮುಹೂರ್ತ ನಿರ್ಧರಿಸುತ್ತಾರೆ.

ಲಿಂಗಾಯಿತ ಧರ್ಮದಲ್ಲಿ ವೀರಭದ್ರನನ್ನು ನೆನೆಸುವುದು ವಾಡಿಕೆಯಾಗಿದೆ. ದಕ್ಷಬ್ರಹ್ಮನು ಯಜ್ಞವನ್ನು ನಾಶ ಮಾಡಿದ ವೀರಭದ್ರನನ್ನು ನೆನೆದು ಲಿಂಗಾಯಿತ ಮಡಿವಾಳರು ಗುಗ್ಗಳೆ ಮದುವೆಯಲ್ಲಿ ಮಾಡುತ್ತಾರೆ. ಗುಗ್ಗಳ ಕಾರ್ಯವು ಮಡಿಯೊಂದಿಗೆ ಯಾವುದೇ ರೀತಿಯಲ್ಲಿ ನಿಲ್ಲಬಾರದು. ನಂದಿ ಹೋಗಬಾರದು ಅದು ಅಪಶಕುನವೆಂಬ ನಂಬಿಕೆಯಿದೆ. ಇದರಲ್ಲಿ ಪುರವಂತರ ಕುಣಿತ ನಡುವೆ ಒಡಪುಗಳನ್ನು ಹೇಳಲಾಗುವದು. ಒಂದು ನಿರ್ಧಿಷ್ಟ ಸ್ಥಳದವರೆಗೆ ಗುಗ್ಗಳ ಕಾರ್ಯ ನಡೆದು ಅಲ್ಲಿ ಪೂಜೆ ನಡೆದ ನಂತರವೂ ಮದುವೆ ಕಾರ್ಯಕ್ರಮಗಳು ಮುಂದುವರೆಯುತ್ತವೆ.

ಮದುವೆಯ ಮುನ್ನಾ ದಿನದ ರಾತ್ರಿ ಬೀಗರು ಗಂಡಿನ ಊರಿಗೆ ಬರುತ್ತಾರೆ. ಊರಿನ ಹೊರವಲಯದಲ್ಲಿ ಬೀಡುಬಿಟ್ಟು ಜಂಗಮರಿಂದ ಸುದ್ದಿ ಮುಟ್ಟಿಸುತ್ತಾರೆ. ನಂತರ ಬೀಗರನ್ನು ಕರೆತರುವುದು, ಹಾಡುವುದು, ಗುಲಾಲ್‌ಎರಚುವುದು, ಬೀಗರನ್ನು ಜರೆಯುವ ಹಾಡುಗಳ ಮೂಲಕ ಜರೆದು ಸಂತೋಷಪಡುವುದು ಇಂಥ ಸಂಪ್ರದಾಯಗಳನ್ನು ಇನ್ನು ಮುಂದುವರೆಸಿಕೊಂಡು ಬಂದವರು ಕೆಲವೇ ಊರಗಳಲ್ಲಿ ಮಾತ್ರವಾಗಿದೆ. ಉಳಿದೆಲ್ಲಡೆ ಈ ಸಂಪ್ರದಾಯಗಳು ನಿಂತುಹೋಗಿವೆ. ಬೀಗರನ್ನು ಕರೆತಂದು ನಂತರ ಕನ್ಯೆಗೆ ಅರಿಸಿಣ ಹಚ್ಚಿ ಸ್ನಾನ ಮಾಡಿಸಿ ಉಡಿತುಂಬುವ ಕಾರ್ಯಕ್ರಮಗಳು ಆರಂಭವಾಗುತ್ತದೆ. ಮರುದಿನ ಐರಾಣಿ ತರುವ ಶಾಸ್ತ್ರವು. ಮೋಟ ಮತ್ತು ನಾಮಧಾರಿ ಮಡಿವಾಳರಲ್ಲಿ ಇರುವಂತೆ ಅನುಸರಿಸುತ್ತಾರೆ. ಹೂಗಾರರ ಮನೆಗೆ ಹೋಗಿ ಸಂಪ್ರದಾಯಿಕ ಕಾಣಿಕೆಗಳನ್ನು (ಚಾಜಾ) ಕೊಟ್ಟು ಬಾಸಿಂಗ ತರುವುದು, ನಂತರ ಸುರಗಿ ಸುತ್ತಿದ ನಂತರ ಸುರಗಿನೀರನ್ನು ಹಾಕುತ್ತಾರೆ. ವಿವಾಹ ಮಟಂಪಕ್ಕೆ ವಧು-ವರರನ್ನು ಕರೆಯಿಸುತ್ತಾರೆ. ಉಳಿದ ಕಾರ್ಯಗಳೆಲ್ಲವು ಲಿಂಗಾಯಿತರ ಮದುವೆ ಕಾರ್ಯಕ್ರಮಗಳಂತೆ ನಡೆಯುತ್ತವೆ. ಇದಾದ ನಂತರ ಲಿಂಗಾಯಿತರು ನೆರವೇರಿಸುವ ದಶಕರ್ಮಗಳನ್ನು ಮಾಡುತ್ತಾರೆ. ವಧು-ವರರಿಗೆ ಕಂಕಣ ಕಟ್ಟುವ ಕಾರ್ಯಕ್ರಮ ಮಾಡುತ್ತಾರೆ. ಬೆಲ್ಲ, ಜೀರಿಗೆಯನ್ನು ವರನ ತಲೆ ಮೇಲೆ ವಧು, ವಧುವಿನ ತಲೆಮೇಲೆ ವರ ಹಾಕುವ ಶಾಸ್ತ್ರವಾಗಿದೆ ಇದರಿಂದ ಮುಂದಿನ ಸಂಸಾರಿಕ ಬದುಕು ಉತ್ತಮವಾಗುವುದೆಂಬ ನಂಬಿಕೆ ಇದೆ. ಮಾಂಗಲ್ಯ ಧಾರಣ ಕಾರ್ಯಕ್ರಮ ವರನು ವಧುವಿನ ಕೊರಳಿಗೆ ಕಟ್ಟಿ ನಂತರ ಅಕ್ಷತೆ ಹಾಕುವರು.

ಮಾಂಗಲ್ಯ ಧಾರಣ ನಂತರ ಮುತ್ತು ಹುಡುಕುವ ಕಾರ್ಯಕ್ರಮ ನಡೆಯುತ್ತದೆ. ಇದರಿಂದ ವರ-ವಧುಗಳಿಗೆ ಅನ್ಯೋನ್ಯತೆ ಉಂಟಾಗುವುದೆಂದು ಭಾವಿಸಲಾಗಿದೆ. ಹಾಲು, ತುಪ್ಪ, ಪಂಚಾಮೃತ ಹಾಕಿ ಅದರಲ್ಲಿ ಮೂಗತಿ ಹಾಕಿ ಹುಡುಕುವುದು. ನಂತರ ವರನ ಪಾದಪೂಜೆ ಕಾರ್ಯಕ್ರಮ ಮಾಡಿಸುತ್ತಾರೆ. ಅಕ್ಷತಾರೋಹಣ ಕ್ರಮ ವಧು-ವರನ ತಲೆ ಮೇಲೆ ವರ ವಧುವಿನ ತಲೆಮೇಲೆ ಅಕ್ಕಿಕಾಳು ಹಾಕುವುದು ನಂತರ ನೆರೆದ ಜನರೆಲ್ಲ ಅಕ್ಷತೆ ಹಾಕುತ್ತಾರೆ. ಫಲಪ್ರದಾನ ಪದ್ಧತಿಯಲ್ಲಿ ಹಣ್ಣು, ಹೂ ತೆಂಗಿನಕಾಯಿ ಮುಂತಾದ ಫಲಗಳನ್ನು ಅಯ್ಯನವರಿಗೆ ನೀಡುವುದು. ಬ್ರಹ್ಮಗಂಟು ಕಟ್ಟುವುದರಿಂದ ಸಂಸಾರಿಕ ಜೀವನವು ಶಾಶ್ವತ ಮತ್ತು ದೀರ್ಘಕಾಲದವರೆಗೆ ಇರಲಿ ಎಂಬ ಭಾವನೆಯುಳ್ಳವರಾಗಿದ್ದರು. ಗೌರಿದರ್ಶನ ಕಾರ್ಯಕ್ರಮದಿಂದ ಮದುವೆಯ ಕಾರ್ಯಕ್ರಮಗಳು ಮುಗಿಯುತ್ತವೆ.

ಸಮಾಜದ ಉಳಿದ ವರ್ಗಗಳಲ್ಲಿರುವಂತೆ ಲಿಂಗಾಯಿತ ಮಡಿವಾಳರಲ್ಲಿಯೂ ಮದುವೆ ನಂತರ ನೀರು ಹಾಕುವ ಪದ್ಧತಿಯೂ ರೂಢಿಯಲ್ಲಿದೆ. ಒಟ್ಟು ಐದು ನೀರು ಆಗಬೇಕು ಅದನ್ನು ಉತ್ತರ ಕರ್ನಾಟಕದ ಭಾಗದಲ್ಲಿ ವಾರದ ನೀರು ಎಂದು ಕರೆಯುತ್ತಾರೆ. ಈ ನೀರು ಶಾಸ್ತ್ರ ಮುಗಿಯುವುದು ಒಂದು ವಾರದ ವರೆಗೆ ನಡೆಯುತ್ತದೆ. ನೀರು ಹಾಕಿದ ನಂತರ ವಧು-ವರರನ್ನು ಕೂಡಿಸಿ ಹಾಡು ಹಾಡಿ ಆರತಿ ಮಾಡುವುದು ವಾಡಿಕೆ. ಅಂತರಂಗದ ಬಯಕೆಯನ್ನು ಒಳಗೊಂಡ ಮದುವೆಯ ಮೋಕ್ಷ ಮುಕ್ತಿಯೆಂಬ ನಂಬಿಕೆಯನ್ನು ತುಂಬಿಕೊಂಡಿದೆ. ಮದುವೆಯನಂತರ ಶೋಭನ ಕಾರ್ಯಕ್ರಮವನ್ನು ಲಿಂಗಾಯಿತ ಮಡಿವಾಳರು ಪಂಚಾಂಗ ನೋಡಿ ನಿರ್ಧರಿಸುತ್ತಾರೆ. ಈ ಶೋಭನ ಕಾರ್ಯಕ್ರಮವು ಅವರವರ ಆರ್ಥಿಕತೆಯನ್ನು ಅವಲಂಬಿಸಿರುತ್ತದೆ. ಕೆಲವರು ಅತಿ ವಿಜೃಂಭಣೆಯಿಂದ ಮಾಡಿದರೆ, ಕೆಲವರು ಸಾಮಾನ್ಯವಾದ ರೀತಿಯಲ್ಲಿ ಮಾಡಿಸುತ್ತಾರೆ. ಲಿಂಗಾಯಿತ ಮಡಿವಾಳರು ಆರ್ಥಿಕತೆಯ ಅಷ್ಟೊಂದು ಸುಸ್ಥಿತಿಯಲ್ಲಿ ಇಲ್ಲದ್ದರಿಂದ ಸರಳ ರೀತಿಯಲ್ಲಿ ಶೋಭನ ಕಾರ್ಯಕ್ರಮ ಮುಗಿಸುತ್ತಾರೆ.

“ಕವಳೀಯ ಬಸವಣ್ಣ ಹೆಚ್ಚೇನು ಕೊಡಬ್ಯಾಡ ಹೂಡಾಕ ಎರಡೆತ್ತು, ಮೇಸಾಕೊಬ್ಬ ಹಿರಿಮಗ, ಮಾರಾಯನ ಮುಂದ ಮರಣವ” ಎಂದು ಬೇಡುವ ಸ್ತ್ರೀಯು ತನ್ನ ವಂಶದ ಕುಡಿ ಬೆಳೆಯಬೇಕೆಂಬ ಮಹಾದಾಸೆಯನ್ನು ಹೊಂದಿದ್ದಾಳೆ. ಆಕೆಯ ಬುದುಕು ಪರಿಪೂರ್ಣವಾಗಲು ಆಕೆಗೆ ಮಕ್ಕಳು ಇರಲೇಬೇಕು.. ಅಂತಹ ಸಂದರ್ಭದಲ್ಲಿ ತವರುವರು ಸೀಮಂತ, ಕುಬಸದ ಕಾರ್ಯ ಮಾಡುವುದು ಇವರಲ್ಲಿಯೂ ರೂಢಿಯಲ್ಲಿದೆ.

 

ಮರಣ ಸಂಸ್ಕಾರಗಳು

ಲಿಂಗಾಯಿತ ಮಡಿವಾಳರಲ್ಲಿ ಮರಣ ಸಂಸ್ಕಾರಗಳು ವೀರಶೈವ ಸಂಸ್ಕಾರಗಳನ್ನು ಅನುಸರಿಸುತ್ತದೆ. ಶಿವೈಕ್ಯ, ಲಿಂಗೈಕ್ಯ, ಕೈಲಾಸವಾಸಿಯಾದರೆಂದು ಕರೆಯುವ ವಾಡಿಕೆಯಾಗಿದೆ. ಬಾರದು ಬಪ್ಪದು; ಬಪ್ಪದು ತಪ್ಪದು, ನಾಳೆ ಬರುವುದು ನಮಗಿಂದೆ ಬರಲಿ ಎಂದು ಹೇಳಿದ ಶರಣರ ವಾಣಿಯಂತೆ ಭೌತಿಕ ದೇಹ ನಶ್ವರ, ಶಾಶ್ವತವಾದದ್ದು ಆತ್ಮ. ಆತ್ಮದಿಂದ ಪರಮಾತ್ಮನ ಸಾನ್ನಿಧ್ಯ ಹೊಂದಿದನೆಂಬ ನಂಬಿಕೆ ಉಳ್ಳವರಾಗಿದ್ದಾರೆ. ವ್ಯಕ್ತಿಯ ಕೊನೆಯ ದಿನಗಳಲ್ಲಿ ಅಂದರೆ ಸಾವಿನ ಬಾಗಿಲಲ್ಲಿ ನಿಂತ ವ್ಯಕ್ತಿಗೆ ವಿಭೂತಿ, ವೀಳ್ಯವನ್ನು ಜಂಗಮರ ಕೈಯಿಂದ ಕೊಡಿಸುವದಾಗಿದೆ. ಮುಕ್ತಿಯ ದಾರಿಯನ್ನು ಕಂಡುಕೊಳ್ಳಲಾಗುತ್ತದೆ ನಂಬಿಕೆಯುಳ್ಳದ್ದಾಗಿದೆ. ಶವಸಂಸ್ಕಾರವನ್ನು ವೀರಶೈವ ಧರ್ಮದ ಆಚರಣೆಗಳಂತೆ ಅನುಸರಿಸುತ್ತಾರೆ. ಸಮಾಧಿ ಮಾಡುವ ಪದ್ಧತಿ ಅವರಲ್ಲಿದೆ.

ಲಿಂಗಾಯಿತ ಮಡಿವಾಳರು ವೀರಶೈವ ಧರ್ಮದ ಆಚರಣೆಗಳನ್ನು ಅಯ್ಯನವರಿಂದ ತಿಳಿದುಕೊಂಡು ಸಾವು ಬರುವುದು ಸೂತಕ ಅಲ್ಲವೆಂದು ತಿಳಿದಿದ್ದರೂ ಸೂತಕವನ್ನು ಆಚರಿಸುತ್ತಾರೆ. ದಿನವನ್ನು ಆಚರಿಸಿದ ನಂತರ ನೆಂಟರ ಮನೆಗಳಿಗೆ ಹೋಗುವುದು ವಾಡಿಕೆಯಾಗಿದೆ. ಈ ಸೂತಕದ ಕರ್ಮಾದಿಗಳನ್ನು ದೈವಕಾರ್ಯ, ಶಿವಗಣಾರಾಧನೆ, ಕೈಲಾಸ ಸಮಾರಾಧನೆಯೆಂದು ಕರೆಯುವುದುಂಟು. ವರ್ಷಕ್ಕೆ ಒಂದು ಸಲ, ಹಿರಿಯರ ಹಬ್ಬ ಎಂದು ಆಚರಿಸುತ್ತಾರೆ. ಸತ್ತ ವ್ಯಕ್ತಿಯ ದಿನ, ನಕ್ಷತ್ರ ನೋಡಿ ಪಂಚಾಂಗದಂತೆ ಮನೆ ಬಿಡುವುದು ರೂಢಿಯಲ್ಲಿದೆ. ಆ ದಿನಗಳು ಮುಗಿದ ನಂತರ ರುದ್ರಾಭಿಷೇಕ ಮಾಡಿಸಿ ಮನೆ ಸೇರುತ್ತಾರೆ.

ಆಧುನಿಕತೆಯ ಪ್ರಭಾವದಿಂದ ಇಂದು ಎಲ್ಲ ವಿಧಿವಿಧಾನಗಳಲ್ಲಿ ಬದಲಾವಣೆಗಳಾಗಿವೆ. ಸಂಪ್ರದಾಯಗಳು ಸರಳವಾಗಿವೆ. ಸಮಯದ ಅಭಾವದ ಹಿನ್ನೆಲೆಯನ್ನಿಟ್ಟುಕೊಂಡು ಸಾಗುತ್ತಿರುವ ಯುವ ಜನತೆಗೆ ಕೆಲಸಂಪ್ರದಾಯಗಳನ್ನು ನೆರವೇರಿಸಲಾಗದ ಸ್ಥಿತಿಯಲ್ಲಿದ್ದಾರೆ. ಒಟ್ಟಾರೆ ವೀರಶೈವ ಪ್ರಭಾವಕ್ಕೆ ಒಳಗಾದ ಲಿಂಗಾಯಿತ ಮಡಿವಾಳರ ಆಚರಣೆಗಳು ಲಿಂಗಾಯತ ಧರ್ಮದ ಪಡಿನೆರಳಾಗಿ ರೂಢಿಯಲ್ಲಿರುವುದು ತೋರುತ್ತದೆ.

 

ಶಿಕ್ಷಣ ಆಧುನಿಕತೆಯ ಪ್ರಭಾವ

ಬುಡಕಟ್ಟು ಸಂಸ್ಕೃತಿಯಲ್ಲಿ ಪುರುಷರೇ ಅಕ್ಷರದಿಂದ ವಂಚಿತರಾಗಿರುವಾಗ ಸ್ತ್ರೀಯರ ಶಿಕ್ಷಣದ ಬಗ್ಗೆ ಯೋಚಿಸುವ ಸಂದರ್ಭಗಳೇ ಬರಲಿಲ್ಲ. ಕೃಷಿ ಮತ್ತು ವೃತ್ತಿ ನಿರತ ಜನಾಂಗಗಳಲ್ಲಿಯೂ ಶಿಕ್ಷಣ ಪಡೆದವರು ಅತಿ ಕಡಿಮೆ ಪ್ರಮಾಣದಲ್ಲಿದ್ದಾರೆ. ಮಹಿಳೆಯನ್ನು ಇಂದಿಗೂ ಭೋಗದ ವಸ್ತುವಾಗಿಯೇ ಪರಿಗಣಿಸಿದ್ದಾರೆ. ನೂರಕ್ಕೆ ಒಂದೆರಡರಷ್ಟು ಜನ ಸಾಕ್ಷರತೆ ಪಡೆದು ಸರಕಾರದ ಸಂಬಳದೊಂದಿಗೆ ಸಂಬಂಧವಿಟ್ಟುಕೊಂಡಿರಬಹುದು. ಉಳಿದ ೯೮% ಪ್ರತಿಶತ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಯೋಚಿಸಬೇಕಾಗಿದೆ. ಮಡಿವಾಳ ಜನಾಂಗದ ಮಹಿಳೆಯರ ಶಿಕ್ಷಣದ ಪ್ರಮಾಣ ಅತ್ಯಲ್ಪವಾಗಿದೆ. ಆಕೆಯು ತನ್ನ ಮೂಲವೃತ್ತಿಯೊಂದಿಗೆ ಜೀವಿಸುತ್ತಿದ್ದಾಳೆ. ಶಿಕ್ಷಣ ಪಡೆಯದೆ ಇರಲು ಅನೇಕ ಕಾರಣಗಳಿವೆ.

ಸಮಾಜದ ಇತರೆ ಕೆಳ ವರ್ಗಗಳಂತೆ ಮಡಿವಾಳ ಜನಾಂಗದ ಮೋಟ, (ಆದಿ) ನಾಮಧಾರಿ, ಲಿಂಗಾಯತ ಜನಾಂಗಗಳಲ್ಲಿ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿಯನ್ನು ಇಂದಿಗೂ ವಹಿಸಿಲ್ಲ ಎಂಬುದು ಕ್ಷೇತ್ರ ಕಾರ್ಯದ ಮೂಲಕ ತಿಳಿದು ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಬಡತನ ಮತ್ತು ವೃತ್ತಿ ನಿರತತೆಯಾಗಿದೆ. ಮಡಿವಾಳಿಕೆ ವೃತ್ತಿಯನ್ನು ನಿರ್ವಹಿಸಲು ಕುಟುಂಬದ ಎಲ್ಲ ಸದಸ್ಯರ ಉಪಸ್ಥಿತಿ ಹಾಗೂ ಸಹಕಾರ, ಸಹಾಯದ ಅವಶ್ಯಕತೆಯಿದೆ. ಮಡಿವಾಳ ಜನಾಂಗದಲ್ಲಿ ಮನೆ ಮನೆಗೆ ಹೋಗಿ ಬಟ್ಟೆಗಳನ್ನು ಸಂಗ್ರಹಿಸುವ ಕೆಲಸವನ್ನು ಸ್ತ್ರೀಯರೇ ಮಾಡುವುದರಿಂದ ವೃತ್ತಿಯಲ್ಲಿ ಮಹಿಳೆಯರ ಅವಶ್ಯಕತೆ ಇದೆ. ಇದರಿಂದಾಗಿ ಸ್ತ್ರೀಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣದಿಂದ ವಂಚಿತವಾದ ಸ್ತ್ರೀಯು ಸಹಜವಾಗಿ ತಮ್ಮ ಮುಂದಿನ ಜನಾಂಗಕ್ಕೆ ಶಿಕ್ಷಣದ ಮಹತ್ವ ತಿಳಿಯದೆ ಇದ್ದುದರಿಂದ ಶಿಕ್ಷಣ ನೀಡದೇ ಇರುವದು ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

 

ಸಾಕ್ಷರತೆ

ದುಡಿಯುವ ವ್ಯಕ್ತಿಗಳಿಗೆ ಬಿಡುವಿದ್ದಾಗ ಅವರಿಗೆ ಅಕ್ಷರಜ್ಞಾನ ನೀಡಬೇಕೆಂದು ಸರ್ಕಾರವು ರಾತ್ರಿ ಶಾಲೆಗಳನ್ನು ತೆಗೆದು ಶಿಕ್ಷಕರನ್ನು ನೇಮಿಸಿ ಅಕ್ಷರದಿಂದ ವಂಚಿತರಾಗಿರುವವರಿಗೆ ಅಕ್ಷರಜ್ಞಾನ ಮೂಡಿಸುವ ಸಲುವಾಗಿ ಹಾಕಿಕೊಂಡ ಸಾಕ್ಷರತೆಯ ಕಾರ್ಯಕ್ರಮದಿಂದ ಈ ಜನಾಂಗವು ದೂರ ಉಳಿಯಿತು. ದಿನವಿಡೀ ದುಡಿದು ದಣಿದ ಈ ಜನಾಂಗವು ಈ ಶಾಲೆಗಳಿಗೆ ಹಾಜರಾಗದೆ ತಮ್ಮ ಬದುಕಿನ ತೊಳಲಾಟದಲ್ಲೇ ಕಾಲಕಳೆಯುತ್ತಿದ್ದಾರೆ. ಶಿಕ್ಷಣದ ಸೌಲಭ್ಯಗಳನ್ನು ಸದುಪಯೋಗ ಮಾಡಿಸಿಕೊಳ್ಳಲಾರದು ವಿಪರ್ಯಾಸವಾದ ಸಂಗತಿಯಾಗಿದೆ.

 

ಆಧುನಿಕತೆಯ ಪ್ರಭಾವ

ಯುಗಯುಗದ ಮಬ್ಬು ಗತ್ತಲಿನ ಗವಿಯಿಂದ ಸ್ತ್ರೀಯರು ಬೆಳಕಿನಡೆ ಸಾಗುವ ಆಶಾಕಿರಣ ಆಧುನಿಕ ಯುಗದಲ್ಲಿ ಮೂಡಿ ಬಂದಿದೆ. ನಾಗರೀಕತೆ ಬೆಳೆದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಬದಲಾವಣೆ ಬಹುಬೇಗನೇ ಕಂಡುಬಂದರೂ ಸ್ತ್ರೀಯರ ಬದುಕಿನ ಬಗ್ಗೆ ಅವರ ಜೀವನದ ಬಗ್ಗೆ ಅಷ್ಟೊಂದು ಬದಲಾವಣೆ ಕಾಣಲಾಗದು. ಪುರಾಣ ಕಾಲದ ಕೂಪದಿಂದ ಮೇಲೆದ್ದು ಬಂದಿಲ್ಲ. ಇಂದು ನಗರದಲ್ಲಿ ವಾಸಿಸುವ ಮಹಿಳೆ ಅಕ್ಷರ ಜ್ಞಾನವನ್ನು ಹೊಂದಿ ಉದ್ಯೋಗಸ್ಥಳಾದರೆ ಆಕೆಗೂ ಕಟ್ಟುಪಾಡುಗಳ ಕಟ್ಟಳೆಗಳ ಮೂಸೆಯಲ್ಲಿ ಕಟ್ಟಿಹಾಕಿದ್ದಾರೆ.

ತಂದೆಯ ಮನೆಯಲ್ಲಿಯೇ ಪ್ರತಿಭಟಿಸುವ ಹೆಣ್ಣು ಮಕ್ಕಳನ್ನು ಗಂಡುಬೀರೆ ಎಂದು ಕರೆಯುತ್ತಾರೆ. ಮುಗ್ಧತೆ, ನಮ್ರತೆ, ನಾಚಿಕೆ, ಸ್ತ್ರೀಯ ಲಕ್ಷಣವನ್ನು ಸೌಂದರ್ಯವನ್ನು ಹೆಚ್ಚಿಸುತ್ತವೆಂದು ತಿಳಿಸಿ ತಿಳಿಸಿ ಹೇಳುತ್ತಾರೆ. ಇದರಿಂದ (ಮಹಿಳೆಯರಿಗೆ) ಗೃಹಿಣಿಗೆ ಗೃಹವೇ ಶೋಭೆ ತರುತ್ತದೆಂದು ಕೂಡು ಹಾಕಿದರು.

ಪರಿವರ್ತನೆಯು ಜೀವಂತಿಕೆಯ ಲಕ್ಷಣವಾಗಿದೆ. ಅಂತೆಯೇ ಶತಮಾನಗಳಿಂದ ನಿಯಮಗಳ ಶೃಂಕಲೆಗಳಿಂದ ಬಂಧಿಸಲ್ಪಟ್ಟ ಸ್ತ್ರೀಯರು ಸ್ವಾತಂತ್ರ್ಯ ನಂತರ ಎಚ್ಚರಗೊಂಡರು. ಪ್ರತಿ ಹಂತದಲ್ಲಿಯೂ ಸ್ತ್ರೀಯು ಪುರುಷನಿಗೆ ಸಮಾನವಾಗಿ ನಿಂತಿದ್ದಾಳೆ. ಗ್ರಾಮೀಣ ಪ್ರದೇಶದ ಕೃಷಿ ಮತ್ತು ಇತರ ವೃತ್ತಿಗಳಲ್ಲಿ ತನ್ನ ದುಡಿಮೆಯ ಸಿಂಹಪಾಲು ನೀಡುತ್ತಿದ್ದಾಳೆ. ಆದರೆ ನಿರ್ಧಾರ, ನಿರ್ಣಯ ಮತ್ತು ಸ್ವಾತಂತ್ರ್ಯಗಳಲ್ಲಿ ಪುರುಷನ ಅಧೀನಳಾಗಿದ್ದಾಳೆ. ಆಧುನಿಕ ಉದ್ಯೋಗಸ್ಥ ಮಹಿಳೆಯರೂ ಇದರಿಂದ ಹೊರತಾಗಿಲ್ಲ ಎಂಬುವುದು ಗಮನಾರ್ಹವಾಗಿದೆ.

ನಗರವಾಸಿ ಕುಟುಂಬಗಳಲ್ಲಿನ ಮಹಿಳೆಯರು ಇಂದು ವಿದ್ಯಾವಂತರಾಗಿದ್ದಾರೆ. ಉದ್ಯೋಗಿಗಳಾಗಿದ್ದಾರೆ. ಆದರೆ ಉನ್ನತ ಹುದ್ದೆಗಳಿಂದ ದೂರವಿದ್ದಾರೆ (ಪುರುಷರಿಗೆ ಹೋಲಿಸಿದರೆ ತುಂಬಾ ಕಡಿಮೆ) ವೃತ್ತಿ ನಿರತ ಮಡಿವಾಳ ಜನಾಂಗದ ಮಹಿಳೆಯರ ಮೇಲೆ ಆಧುನಿಕತೆಯ ಪ್ರಭಾವ ಬೀರಿದೆ. ಆದರೆ ಉಳಿದ ಜನಾಂಗಗಳಲ್ಲಿರುವ ಅಕ್ಷರಸ್ಥ ಮಹಿಳೆಯರ ಪ್ರಮಾಣಕ್ಕಿಂತ ತೀರ ಕಡಿಮೆ ಪ್ರಮಾಣದಲ್ಲಿದ್ದಾರೆ. ಮತ್ತು ಉನ್ನತ ಹುದ್ದೆಯಲ್ಲಿರುವವರು ಸಂಖ್ಯೆಯಂತೂ ತೀರಾ ಕಡಿಮೆಯಾಗಿದೆ. ಬದಲಾವಣೆಯ ಗಾಳಿ ಎಷ್ಟೇ ರಭಸವಾಗಿ ಬೀಸಿದರೂ ಗ್ರಾಮೀಣ ಪ್ರದೇಶದಲ್ಲಿರುವ ಮಡಿವಾಳ ಜನಾಂಗದ ಮಹಿಳೆಯರು ಮಾತ್ರ ನೂರಕ್ಕೆ ನೂರರಷ್ಟು ವೃತ್ತಿಯಲ್ಲಿಯೇ ನಿರತರಾಗಿದ್ದಾರೆ. ಒಟ್ಟಾರೆ ಮಡಿವಾಳ ಜನಾಂಗದ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ದೂರ ಉಳಿದಿದ್ದಾರೆ. ಆಧುನಿಕತೆಯ ಪ್ರಭಾವ ಇವರ ಮೇಲೆ ಆಗಿಲ್ಲವೆಂದರೆ ತಪ್ಪಾಗಲಾರದು.

 

ಉತ್ಪನ್ನಗಳಲ್ಲಿ ಮಹಿಳೆಯರು

ಸಾಮಾಜಿಕ ಜಾತಿ ವಿನ್ಯಾಸದ ಸ್ಥರಗಳಲ್ಲಿ ಕೆಳನೂಕಲ್ಪಟ್ಟ ಮಡಿವಾಳ ಜನಾಂಗವು ಊರಿನ ಪ್ರಮುಖ ಹಬ್ಬ-ಹರಿದಿನಗಳಲ್ಲಿ, ನಿಯಮಾಚರಣೆಗಳಲ್ಲಿ ಮಹತ್ವದ ಸ್ಥಾನದಲ್ಲಿದೆ. ಮಡಿ ಎಂದರೆ ಸ್ವಚ್ಛ, ಶುಭ್ರ, ಪರಿಶುದ್ಧ ಎಂಬರ್ಥಗಳಿವೆ. ಮಡಿವಾಳ ಜನಾಂಗದವರು ಕೊಡುವ/ತರುವ ಬಟ್ಟೆ ಪರಿಶುದ್ಧ ಎಂಬ ಕಲ್ಪನೆಗಳು ಇಂದಿಗೂ ವ್ಯಕ್ತವಾಗುತ್ತದೆ. ಋತುಮತಿ, ಜನನ, ಮರಣ ಸೂತಕಗಳು ಪರಿಹಾರವಾಗಲು ಮಡಿವಾಳರ ಮಡಿಬಟ್ಟೆಯೊಂದಿಗೆ ಅವರ ಉಪಸ್ಥಿತಿ ಅವಶ್ಯಕವಾಗಿದೆ. ಉತ್ತರ ಕರ್ನಾಟಕದ ಕೆಲವು ಊರುಗಳಲ್ಲಿ ಮಡಿವಾಳರೇ ಕೆಲ ದೇವತೆಗಳ/ದೇವರುಗಳ ಪೂಜಾರಿಗಳಾಗಿದ್ದಾರೆ. ಸಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಕನಿಷ್ಠವೆನಿಸಿದರೂ ಮಡಿವಾಳ ಜನಾಂಗದ ಮಹಿಳೆಯರಿಗೆ ಊರಿನ ಉತ್ಸವಗಳಲ್ಲಿ ಕೆಲಸ್ಥಾನಗಳನ್ನು ನೀಡಿದ್ದಾರೆ.

 

ಹಡದಿ ಹಾಸುವುದು

ವೀರಭದ್ರ ದೇವರ ಉತ್ಸವಗಳಲ್ಲಿ, ಪಲ್ಲಕ್ಕಿ ಹೊತ್ತವರಿಗೆ ಅವರ ಕಾಲುಗಳು ನೆಲಕ್ಕೆ ತಾಗಿದರೆ, ಅಪವಿತ್ರರಾಗುತ್ತಾರೆಂದು ತಿಳಿದು ಅವರಿಗೆ ಮುಂದೆ-ಮುಂದೆ ಹಡದಿ ಹಾಸುತ್ತಾ ಸಾಗುತ್ತಾರೆ. ಹಡದಿ ಎಂದರೆ ಸೀರೆಯನ್ನು ಉದ್ದಕ್ಕೆ ಹಾಸುತ್ತಾ ಸಾಗುವದು (ಮತ್ತೆ ಹಿಂದಿನಿಂದ ಅದೇ ಸೀರೆಯನ್ನೂ ಮಡಚಿಕೊಂಡುಬಂದು ಮುಂದೆ ಹಾಸುವವರಿಗೆ ಕೊಡುವುದು) ನಿರ್ಧಿಷ್ಟ ಸ್ಥಳದಿಂದ ಗುಡಿ, ಅಥವಾ ಮೂಲಸ್ಥಾನಕ್ಕೆ ಮುಟ್ಟುವವರಿಗೂ ಹಾಸುತ್ತಾ ಮುಂದೆ ಸಾಗುವುದು, ಅದೇ ರೀತಿಯಲ್ಲಿ ಆಯಾ ಊರಿನ ಗ್ರಾಮದೇವತೆಗಳಾದ ದುರ್ಗಮ್ಮ, ಪಾಲಮ್ಮ, ಯಲ್ಲಮ್ಮ, ಹನುಮಂತ, ಬಸವಣ್ಣನ ಜಾತ್ರೆಗಳಲ್ಲಿ ಹಾಗೂ ಮೊಹರಂ ಸಂದರ್ಭಗಳಲ್ಲಿ ಬರುವ ಹಸೇನ್‌ಹುಸೇನ್‌ಸಾಬ್ರ ಕತ್ತಾಲ ರಾತ್ರಿಯಿಂದ ದಫನ್‌ದವರೆಗೆ ಹಡದಿ ಹಾಸುವುದನ್ನು ಮಹಿಳೆಯರೇ ಮಾಡುತ್ತಾರೆ.

ಊರಿನ ಉತ್ಸವಗಳಲ್ಲಿ ದೀವಿಟಿಗೆ ಹಿಡಿಯುವುದು ವಾಡಿಕೆಯಿದೆ. ಆದೀವಿಟಿಗೆ ಬೇಕಾಗುವ ಬಟ್ಟೆಯ ದುಂಡನೆಯ ರಿಂಗಗಳನ್ನು ಮಡಿವಾಳರ ಮಹಿಳೆಯರು ಮನೆಯಲ್ಲಿ ಮಾಡಿಕೊಡುತ್ತಾರೆ. ಅವುಗಳನ್ನು ಕಕ್ಕಡಗಳೆಂದು ಕರೆಯುತ್ತಾರೆ. ಆ ಕಕ್ಕಡಗಳನ್ನು ಎಣ್ಣೆಯಲ್ಲಿ ಹಾಕಿ ನೆನಸಿ ದೀವಿಟಿಗೆಗೆ ಹಾಕಿ ಎಣ್ಣೆ ಹಾಕುತ್ತಾ ದೇವರ ಉತ್ಸವಗಳಲ್ಲಿ ಹಿಡಿದು ಮುಂದೆ ಸಾಗಬೇಕು. ಇದನ್ನು ಕೆಲವು ಊರುಗಳಲ್ಲಿ ಹರಕೆಯೆಂದು ಆಚರಿಸುತ್ತಾರೆ. ಇಂದು ವಿದ್ಯುತ್‌ಬೆಳಕಿನ ವ್ಯವಸ್ಥೆ ಇದ್ದಾಗಲೂ ಹಳೆಯ ಸಂಪ್ರದಾಯದ ಈ ಪದ್ಧತಿಗಳು ರೂಢಿಯಲ್ಲಿವೆ. ಊರಿನ ಉತ್ಸವಗಳಲ್ಲಿ ಜಾತ್ರೆಗಳಲ್ಲಿ ಹಬ್ಬ-ಹರಿದಿನಗಳಲ್ಲಿ ಮಡಿವಾಳ ಜನಾಂಗದ ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಿದ್ದಾರೆ. ಅವರು ಈ ಸಂಪ್ರದಾಯಗಳನ್ನು ನಮ್ಮ ಕರ್ತವ್ಯ ಎಂದು ನಂಬಿದ್ದಾರೆ. ದೇವರ ಸೇವೆಗೆ ಹಿಂದೆಗೆಯಬಾರದೆಂಬ ವಿಚಾರಗಳು ಅವರಲ್ಲಿವೆ.

 

ಮಹಿಳೆಯರ ಆರ್ಥಿಕ ಸ್ಥಿತಿ-ಗತಿ

ಮಡಿವಾಳ ಜನಾಂಗದ ಮಹಿಳೆಯರ ದುಡಿಮೆಯಿಂದಲೇ ಕುಟುಂಬ ನಡೆಯುತ್ತದೆ. ಮಹಿಳೆ ದುಡಿಯದೆ ಇದ್ದರೆ ಈ ಜನಾಂಗದಲ್ಲಿ ಜೀವನ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಕೆಲ ಕುಟುಂಬಗಳಲ್ಲಿ ಪುರುಷರು ದುಡಿಯದೆ ಊರಗೂಳಿಯಂತೆ ತಿರುಗಾಡುತ್ತಾರೆ. ಹೆಂಡತಿ, ಮುಪ್ಪಿನ ತಂದೆ-ತಾಯಿಯರು ದುಡಿದು ತಂದ ಹಣದಲ್ಲಿ ಮಜಾ ಮಾಡಿ ಕುಡಿದು ತೂರಾಡುತ್ತಾ ಮನೆಗೆ ಬರುವ ದೃಶ್ಯಗಳನ್ನು ಇಂದಿಗೂ ಪ್ರತ್ಯಕ್ಷ ದರ್ಶನ ಮಾಡಿಕೊಳ್ಳಬಹುದಾಗಿದೆ. ಬಡತನದ ಬವಣೆಯಲ್ಲಿರುವ ಮಡಿವಾಳ ಕುಟುಂಬದ ಮಹಿಳೆಯರು ದಿನವಿಡೀ ದುಡಿದು ತಂದ ಹಣದಿಂದ ಅಂದಿನ ದಿನದ ಊಟೋಪಚಾರವನ್ನು ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪುರುಷನು ತನ್ನ ಪೌರುಷದ ಮಾತುಗಳಿಂದ ಅಂಜಿಸಿ ದುಡಿದು ತಂದು ಮಾಡಿದ ಅಡಿಗೆಯನ್ನು ರಾಜಾರೊಷದಿಂದ ತಿಂದು ತೇಗುತ್ತಾನೆ. ಇಂಥ ದೃಶ್ಯಗಳನ್ನು ನಾವು ಕ್ಷೇತ್ರ ಕಾರ್ಯ ಮಾಡುವಾಗಲೇ ನಡೆದ ಕುಟುಂಬ ಕಲಹಗಳಿಂದ ತಿಳಿಯಬೇಕಾಯಿತು.

ಮಡಿವಾಳ ಜನಾಂಗದ ಮಹಿಳೆಯರು ಕುಟುಂಬದ ಆರ್ಥಿಕ ಸ್ಥಿತಿಯ ಆಧಾರಸ್ತಂಭವಾಗಿದ್ದಾಳೆ. ಕುಟುಂಬದ ಸರ್ವ ಸದಸ್ಯರ ಹೊಟ್ಟೆ ತುಂಬಿಸುವುದರೊಂದಿಗೆ ಅವರ ಇತರ ಅವಶ್ಯಕತೆಗಳಿಗೆ ಬೇಕಾಗುವ ಹಣವನ್ನು ಮಹಿಳೆಯರೇ ಪೂರೈಸುತ್ತಾರೆ. ಈ ಜನಾಂಗದಲ್ಲಿ ವೃತ್ತಿ ನಿರತ ಕುಟುಂಬಗಳು, ಕಸುಬಿನೊಂದಿಗೆ ಕೃಷಿಯನ್ನು ಅವಲಂಬಿಸಿದ ಕುಟುಂಬಗಳು, ಇತರ ಉದ್ಯೋಗಸ್ಥ ಕುಟುಂಬಗಳ ಆರ್ಥಿಕ ಸ್ಥಿತಿ-ಗತಿ ಭಿನ್ನವಾಗಿರುತ್ತವೆ.

ವೃತ್ತಿ ನಿರತ ಮಡಿವಾಳ ಕುಟುಂಬದಲ್ಲಿ ಬರುವ ಆದಾಯಗಳಲ್ಲಿ ದಿನದ ಆದಾಯ, ತಿಂಗಳ ಆದಾಯ, ವಾರ್ಷಿಕ ಆದಾಯಗಳೆಂದು ಮೂರು ಪ್ರಕಾರದ ಆದಾಯಗಳು ಈ ಜನಾಂಗಕ್ಕೆ ಲಭ್ಯವಾಗುತ್ತವೆ. ನಗರಗಳಲ್ಲಿ ದಿನದ ಆದಾಯ ಬರುವುದು ಹೆಚ್ಚು. ದಿನವೂ ಇಸ್ತ್ರೀ ಮಾಡಿದ ಬಟ್ಟೆಗಳನ್ನು ಅವರವರ ಮನೆಗಳಿಗೆ ಕೊಟ್ಟ ನಂತರ ಒಂದಕ್ಕೆ ಇಂತಿಷ್ಟು ಎಂದು ನಿಗದಿಪಡಿಸಿದಂತೆ ಹಣ ಕೊಡುವರು. ಕೆಲಮನೆಗಳಲ್ಲಿ ತಿಂಗಳವರೆಗೆ ಬಟ್ಟೆ ಮಡಿಮಾಡಿದ ಇಸ್ತ್ರೀ ಮಾಡಿದ ಲೆಕ್ಕಗಳನ್ನು ನೋಡಿ ತಿಂಗಳಾದ ನಂತರ ಕೊಡುವ ಹಣದಿಂದ ಮನೆಗೆ ಬೇಕಾದ ದವಸ-ಧಾನ್ಯಗಳನ್ನು ತೆಗೆದುಕೊಂಡು ಬಂದು ಜೀವನ ನಿರ್ವಹಣೆ ಮಾಡುವುದು. ವರ್ಷಕ್ಕೊಮ್ಮೆ ತಾವು ದುಡಿದ ಮನೆಗಳಿಗೆ ಹೋಗಿ ಧಾನ್ಯ, ಹಣ ಸ್ವೀಕರಿಸುವುದು “ಆಯ” ಪದ್ದತಿಯಂತೆ ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಈ ಮೂರು ಪ್ರಕಾರದ ಆದಾಯಗಳಿಗೆ ಮಹಿಳೆಯ ಶ್ರಮ-ದುಡಿಮೆ ಮುಖ್ಯವಾಗಿದೆ. ಮಡಿವಾಳ ಜನಾಂಗದ ಮಹಿಳೆಯರಿಂದಲೇ ಹೆಚ್ಚಿನ ಕುಟುಂಬಗಳು ಮುನ್ನಡೆದಿವೆ.

ಮಹಿಳೆಯರಿಂದಲೇ ಕುಟುಂಬದ ನಿರ್ವಹಣೆಯಿರುವ ಈ ಜನಾಂಗದ ಮಹಿಳೆಯರು ಮಾತ್ರ ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಾಗಿಲ್ಲ ಎಂಬ ಅಂಶವು ಪ್ರಮುಖವಾಗುತ್ತದೆ. ಸ್ತ್ರೀಯರಂತೆ ಪುರುಷರು ವೃತ್ತಿಯಲ್ಲಿ ಪಾಲ್ಗೊಳ್ಳದಿರುವುದು. ಈ ವೃತ್ತಿಯು ತುಂಬಾ ಶ್ರಮದಾಯಕವಾದದ್ದು, ದೈಹಿಕ ಆಯಾಸವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಹೆಂಡ, ಸಾರಾಯಿ ಕುಡಿದರೆ ನಿದ್ರೆ ಬರುತ್ತದೆಂದು ನಂಬಿ ಅದನ್ನೆ ಚಟವಾಗಿ ರೂಢಿಸಿಕೊಂಡಿದ್ದರಿಂದ ವೃತ್ತಿನಿರತ ಕುಟುಂಬದ ಮಹಿಳೆ (ಪುರುಷರು)ಯರ ಆರ್ಥಿಕ ಸ್ಥಿತಿ ಸುಧಾರಣೆಯಾಗದಿರುವುದು ತೋರುತ್ತದೆ. ಕೆಲವೆಡೆ ದುಡಿದು ಕೂಡಿಟ್ಟ ಹಣವನ್ನು ಪುಂಡ ಗಂಡರು ಕಸಿದುಕೊಂಡು ಹೋಗಿ ತೂರಾಡಿಕೊಂಡು ಬರುತ್ತಾರೆ. ಇಲ್ಲವಾದರೆ ಕುಡಿದು ಬರುವಾಗ ಹೆಂಡತಿಯನ್ನು ಸಮಾಧಾನಪಡಿಸುವುದಕ್ಕಾಗಿ ಆಕೆಗೂ ತೀರ್ಥ ಪ್ರಸಾದ (ಸಾರಾಯಿ-ಚಾಕಣ) ಚಾಕಣ ಎಂದರೆ ಸುಟ್ಟ ಮಾಂಸದ ಚೂರು ತಂದು ಸಮಾಧಾನಪಡಿಸುತ್ತಾರೆ. ಇಂಥ ಹಲವಾರು ಹವ್ಯಾಸಗಳಿಂದ ಮುಂದಿನ ಜೀವನದ ಬಗ್ಗೆ ಚಿಂತಿಸದೆ ಇರುವುದರಿಂದ ಈ ಜನಾಂಗದ ಮಹಿಳೆಯರ ಆರ್ಥಿಕ ಸ್ಥಿತಿ-ಗತಿ ಉತ್ತಮವಾಗಿಲ್ಲ ಎಂಬುದು ತಿಳಿದುಬರುತ್ತದೆ.

 

ಸಂಸ್ಕೃತಿ ಉಳಿವಿಕೆಯಲ್ಲಿ ಮಹಿಳೆಯರು

ಒಂದು ಧರ್ಮದ ಆಚರಣೆಗಳು ಮುನ್ನಡೆಸುವ ವಾಹಕಗಳನ್ನು ಸಂಸ್ಕೃತಿಯ ತೆಕ್ಕೆಗೆ ಸೇರಿಸುತ್ತೇವೆ. ಪಾಶ್ಚಾತ್ಯದಲ್ಲಿ ಭೌತಸಂಸ್ಕೃತಿಯ ವ್ಯಾಪಕತೆ ಪ್ರಖರವಾಗಿ ಎದ್ದು ತೋರುತ್ತದೆ. ಮೂಲಪುರುಷರು ರೂಢಿಸಿಕೊಂಡ ಸಂಪ್ರದಾಯಗಳನ್ನು ಮುಂದಿನವರು ಮುಂದುವರಿಸಿಕೊಂಡು ಬಂದಿದ್ದಾರೆ. ಒಂದು ಧರ್ಮದ ಪ್ರಭಾವ ಇನ್ನೊಂದು ಧರ್ಮದ ಆಚರಣೆಗಳಿಗೆ ಹೋಲಿಕೆ ಹೊಂದಿರುತ್ತವೆ. ಆದರೆ ಎಲ್ಲ ಧರ್ಮಗಳಲ್ಲಿ (ಜನಾಂಗದಲ್ಲಿ)ಯೂ ಸ್ತ್ರೀ-ಪುರುಷರನ್ನು ಸಮಾನಾಗಿ ನಡೆಸಿಕೊಂಡಿಲ್ಲ. ಹಿಂದೂ ಧರ್ಮದಲ್ಲಿ ಸ್ತ್ರೀಯನ್ನು ದೇವತೆಯೆಂದು ಕರೆಯಲ್ಪಟ್ಟರೂ ಆಚರಣೆಯಲ್ಲಿ ಅದರಂತೆ ಇರಲಾರದನ್ನು ಕಾಣುತ್ತೇವೆ. ದೈಹಿಕ ವ್ಯತ್ಯಾಸಗಳನ್ನೆ ಆಧಾರವಾಗಿಟ್ಟುಕೊಂಡು ಸ್ತ್ರೀಯರನ್ನು ಅವಕಾಶಗಳಿಂದ ವಂಚಿಸಲಾಗುತ್ತಿದೆ.

ಧಾರ್ಮಿಕ, ಸಾಂಪ್ರದಾಯಿಕ ಶ್ರದ್ಧೆ, ಹಿಂದಿನವರ ಆಚಾರ ವಿಚಾರಗಳನ್ನು ಮುಂದುವರಿಸುವುದರಲ್ಲಿ ಆಸಕ್ತಿ-ಗೌರವ, ಭಾವನೆಗಳನ್ನು ಸ್ತ್ರೀಯರಲ್ಲಿ ಗಾಢವಾಗಿ ಇದ್ದಂತೆ ಪುರುಷರಲ್ಲಿ ಕಾಣಲಾಗದು. ದೈನಂದಿನ ಕ್ರಿಯಾಚರಣೆಗಳಲ್ಲಿ ಹಬ್ಬ-ಹರಿದಿನಗಳಲ್ಲಿ ಪೂಜೆ, ವ್ರತ ನಿಯಮಗಳ ಪಾಲನೆಯಲ್ಲಿ ಮಹಿಳೆಯರಲ್ಲಿ ಭಕ್ತಿ-ಭಾವ ಹೆಚ್ಚಾಗಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಹಿಳೆಯು ನಮ್ಮ ಸಂಸ್ಕೃತಿಯ ವಾಹಕವಾಗಿದ್ದಾಳೆ.

ಈ ಲೇಖನದಲ್ಲಿ ವಿವರಿಸಲಾದ ವೃತ್ತಿಯ ಪಾವಿತ್ರತೆ, ಪ್ರಾಚೀನತೆ ಕೌಟುಂಬಿಕ ಜೀವನ, ಆಚರಣೆಗಳು, ಸ್ತ್ರೀಯ ಮಹತ್ವ ವಿಚಾರಗಳಲ್ಲಿ ಮಡಿವಾಳ ಜನಾಂಗದ ಮಹಿಳೆಯರಲ್ಲಿ ವೃತ್ತಿಯನ್ನು ಅತ್ಯಂತ ಪವಿತ್ರ ಎಂಬ ಭಾವನೆಯಿಂದ ಸ್ವೀಕರಿಸಿದ್ದಾರೆ. ಅದರಿಂದ ಬರುವ ಸಂಭಾವನೆಯನ್ನು ಪರಿಗಣಿಸಿದೆ. ನಮ್ಮ ಹಿರಿಯರು ಮಾಡಿಕೊಂಡ ಬಂದ ವೃತ್ತಿಯನ್ನು ನಾವು ಬಿಡಬಾರದೆಂದು ಅದು ನಮ್ಮ ವಂಶಕ್ಕೆ ದೇವರು ನೀಡಿದ ಕೊಡುಗೆಯೆಂದು ಭಾವಿಸಿಕೊಂಡು ವೃತ್ತಿಯ ಪ್ರತಿಯೊಂದು ಕಾರ್ಯಗಳಲ್ಲಿ ಮಹಿಳೆಯರದ್ದು ಸಿಂಹಪಾಲಿದೆ. ಮಡಿವಾಳ ವೃತ್ತಿಯಲ್ಲಿ ಮಹಿಳೆಯರಿಲ್ಲದೆ ಏನೂ ಮಾಡಲಾಗದು. ಆದ್ದರಿಂದ ಮನೆತನದ ವೃತ್ತಿಯನ್ನು ಮುಂದುವರಿಸುವ ಸಂಸ್ಕೃತಿ ಮಹಿಳೆಯರಿಂದ ಮಾತ್ರ ಸಾಧ್ಯವಾಗುತ್ತದೆ.

ಕೌಟುಂಬಿಕ ಆಚರಣೆಗಳಲ್ಲಿ ಮಹಿಳೆಯರು ಮುಖ್ಯವಾಗಿ ನಿಲ್ಲುತ್ತಾರೆ. ಜನನದಿಂದ ಜರೆವರೆಗೆ ಆಚರಿಸುವ ಜನಾಂಗೀಯ ನಂಬಿಕೆಗಳನ್ನು ಮಹಿಳೆಯರು ಬಿಡದಂತೆ ಆಚರಿಸಿಕೊಂಡು ಬಂದಿದ್ದಾರೆ. ಊರಿನ ಒಕ್ಕಲುಮನೆಗಳಲ್ಲಿ ನಡೆಯುವ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳು ಪೂರ್ಣಗೊಳ್ಳಲು ಮಡಿವಾಳ ಜನಾಂಗದ ಮಹಿಳೆಯ ಉಪಸ್ಥಿತಿ ಅನಿವಾರ್ಯವಾಗಿದೆ. ತಂತಮ್ಮ ಒಕ್ಕಲು ಮನೆಗಳಲ್ಲಿ ಹೆರಿಗೆಯಾದರೆ ಮಡಿವಾಳ ಮಹಿಳೆಯರು ತಮ್ಮ ಮನೆಯಿಂದ ಸೀರೆ (ಮನೆಯಲ್ಲಿದ್ದ ಸಾಮಾನ್ಯ)ಗಳನ್ನು ಕೊಡಬೇಕು. ಋತುಮತಿಯಾದಾಗಲೂ ಇದೇ ಸಂಪ್ರದಾಯವನ್ನು ಅನುಸರಿಸುತ್ತಾರೆ. ಮರಣಹೊಂದಿದ ವ್ಯಕ್ತಿಯ ಬಟ್ಟೆ, ಹಾಸಿಗೆ, ಗಾದಿ, ಮಂಚ ಕೆಲವೊಂದು ವಸ್ತುಗಳನ್ನು ಅಗಸರು ಪಡೆಯುತ್ತಾರೆ. ಇಂಥ ಆಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತವಾಗಿವೆ.

ಮಡಿವಾಳ ಜನಾಂಗದ ಮಹಿಳೆಯರು ತಮ್ಮ ಸಂಸ್ಕೃತಿಯನ್ನು ಮುಂದುವರಿಸುವ ಮುಖ್ಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುರುಷ ಪ್ರಧಾನವಾದ ಸಮಾಜದಲ್ಲಿದ್ದ ಸಂಸ್ಕೃತಿಯನ್ನು ಮಹಿಳೆಯರೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶಿಕ್ಷಣ ಮತ್ತು ಆಧುನಿಕತೆ, ವೈಜ್ಞಾನಿಕತೆ, ಪ್ರಭಾವ ಬೀರಿದ ಕೆಲಕುಟುಂಬಗಳಲ್ಲಿ ತಮ್ಮ ಮೂಲ ವೃತ್ತಿಯನ್ನು ನಿಲ್ಲಿಸಿದ್ದಾರೆ. ಹಿರಿಯರಿಂದ ಆಚರಿಸಲ್ಪಟ್ಟ ನಿಯಮಗಳನ್ನು ತಮ್ಮ ಮಟ್ಟಿಗೆ ಅಥವಾ ಪೂರ್ಣವಾಗಿ ನಿಲ್ಲಿಸಿದ್ದಾರೆ.

ವಿಜ್ಞಾನದ ಅವಿಷ್ಕಾರದಿಂದ ಯಂತ್ರಗಳ ಬಳಕೆಯಿಂದ ಈ ವೃತ್ತಿಯನ್ನು ಮಾಡುತ್ತಿರುವವರು ಕೇವಲ ವ್ಯವಹಾರಿಕ ದೃಷ್ಟಿಕೋನವನ್ನು ಮಾತ್ರ ಹೊಂದಿದ್ದಾರೆ. ಬಟ್ಟೆಗಳನ್ನು ಯಂತ್ರಗಳಲ್ಲಿ ತುಂಬಿ, ನೀರು, ಸೋಡಾ, ಸಾಬೂನಿನ ಪುಡಿ ಹಾಕಿ ತಿರುಗಿಸಿದಾಗ ಸ್ವಚ್ಛವಾಗುತ್ತವೆ. ಅದೇ ಯಂತ್ರ ಹಿಂಡಿ ನೀರು ತೆಗೆಯುತ್ತದೆ. ಯಂತ್ರದಿಂದ ಹೊರಬರುವಾಗಲೆ ಅರ್ಧದಷ್ಟು ಒಣಗಿ ಹೋಗಿರುತ್ತವೆ. ಇಂಥ ವೃತ್ತಿ ನಿರತ ಪರಿಸರದಲ್ಲಿ ಮೂಲ ಸಂಸ್ಕೃತಿಯ ಸುಳಿವು ಸುಳಿಯಲಾರದು. ಅವರ ವೃತ್ತಿ ಮತ್ತು ಬದುಕು ಯಾಂತ್ರಿಕವಾದದ್ದಾಗಿದೆ.

ಮಡಿವಾಳ ಜನಾಂಗದ ಪರಂಪರೆಯು ಅತೀ ಪುರಾತನವಾದುದಾಗಿದೆ. ವರ್ಣಾಶ್ರಮದ ಸಂದರ್ಭಗಳಲ್ಲಿ ವೃತ್ತಿ ನಿರತ ವರ್ಗವನ್ನು ಕಡೆಗಣಿಸಿ ಶೂದ್ರರ ಸ್ಥಾನದಲ್ಲಿಟ್ಟು ನೋಡಿತು. ನಮ್ಮ ಪೂರ್ವೇತಿಹಾಸವನ್ನು ತಿಳಿಸುವ ಶಾಸನಗಳಲ್ಲಿ ವೀರತ್ವದಿಂದ ಹೋರಾಡಿದ ಮಡಿವಾಳ ಜನಾಂಗದವರ ಉಲ್ಲೇಖ ನೀಡಿದ್ದಾರೆ. ಮಡಿವಾಳ ಜನಾಂಗದ ಮಹಿಳೆಯರನ್ನು ಉಳಿದ ಜನಾಂಗಗಳಂತೆ ಬಳಸಿಕೊಂಡಿದ್ದಾರೆ. ಸ್ತ್ರೀ ಶೋಷಣೆ ಭಾರತೀಯರಲ್ಲಿ ಹವ್ಯಾಸವಾಗಿ ನಿಂತಿದೆ. ಉಪಭೋಗದ ಯಂತ್ರದಂತೆ, ಗಂಧದ ಕೊರಡಿನಂತಿ ಸವೆದಿದ್ದಾಳೆ. ಕಾಲಕಾಲಕ್ಕೆ ಬಂದ ಸುಧಾರಣೆಯ ಗಾಳಿ ಬೀಸಿದಾಗ ಅಲುಗಾಡಿ ಮತ್ತೆ ಮೂಲ ಸ್ಥಾನಕ್ಕೆ ನಿಂತಿದ್ದಾಳೆ.

ಮಡಿವಾಳ ಜನಾಂಗದ ಕುಟುಂಬಗಳಲ್ಲಿ ಆಚರಣೆಯಲ್ಲಿರುವ ಮಡಿಮಾಡುವ ವೃತ್ತಿಗಳಲ್ಲಿ ಮತ್ತು ಇತರ ಎಲ್ಲ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಹರಿದಾಗಿದೆ. ಈ ಜನಾಂಗದ ಆರ್ಥಿಕ ಸ್ಥಿತಿಯ ಸಮತೋಲನತೆಗೆ ಮಹಿಳೆಯರ ದುಡಿಮೆಯನ್ನೆ ಅವಲಂಬಿಸಿದೆ. ಬುಡಕಟ್ಟು ಸಂಸ್ಕೃತಿಯ ವಾಹಕಳಾದ ಮಹಿಳೆಯು ತನ್ನೆಲ್ಲ ಅಶೋತ್ತರಗಳನ್ನು ಬದಿಗಟ್ಟು ಕುಟುಂಬದ ಕ್ಷೇಮಾಭಿವೃದ್ಧಿಗಾಗಿ ಹಾಗೂ ವೃತ್ತಿಯ ಮುಂದುವರಿಕೆಯಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದಾಳೆ. ತಾಯಿತನದ ಮಮತೆಯಿಂದ ಜನಾಂಗದ ಸರ್ವ ಸಂಸ್ಕೃತಿಯನ್ನು, ಆಚರಣೆಗಳನ್ನು ಒಪ್ಪಿ, ಪ್ರೀತಿಯಿಂದ ಅಪ್ಪಿಕೊಂಡು ಮುನ್ನಡೆಯುತ್ತಿರುವ ಮಹಿಳೆಗೆ ಗೌರವಕ್ಕೆ ಪಾತ್ರಳಾಗಿದ್ದಾಳೆ.

 

ಗ್ರಂಥ ಋಣ

೧) ಕರ್ನಾಟಕದ ಮಡಿವಾಳ ಜನಾಂಗದ ಸಾಂಸ್ಕೃತಿಕ ಅಧ್ಯಯನ (ಅಪ್ರಕಟಿತ ಪಿಎಚ್‌.ಡಿ. ಮಹಾಪ್ರಬಂಧ) -ಡಾ.ಎಂ.ನಾಗರಾಜ

೨) ಭಾರತೀಯ ಸಂಸ್ಕೃತಿ ದರ್ಶನ- ಸಂ. ಅ.ನ.ಕೃ. ಪ್ರ: ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ.

೩) ಮಿಂಚಿದ ಮಹಿಳೆಯರು-ದೇಸಾಯಿ ಪಾಂಡುರಂಗ ರಾಯರು

೪) ಜನಪದ ಸಮಾಜ ಸಂಸ್ಕೃತಿ-ಎನ್‌.ಎಸ್‌.ಹಿರೇಮಠ ಮಲ್ಲಾರಹಳ್ಳಿ

೫) ಧರ್ಮ, ಸಂಸ್ಕೃತಿ, ಸಮಾಜ-ಎನ್‌.ಕೆ.ಕಡೇತೋಟದ

೬) ಮಹಿಳೆ ಮತ್ತು ಧರ್ಮ-ಪ್ರಭಾಮಣಿ

೭) ಹಿಂದೂ ಮತೀಯವಾದದ ಮುಖವಾಡಗಳು – ಗುರುದತ್ತ ಎಸ್‌.

೮) ಮನಸ್ಮೃತಿ- ಚಕ್ರಕೋಡಿ ಈಶ್ವರಯ್ಯ ಶಾಸ್ತ್ರಿ

೯) ಕುಮಾರ ಕಕ್ಕಯ್ಯ ಪೋಳ ಬುದುಕು-ಬರಹ (ಪಿ.ಎಚ್‌.ಡಿ. ಪ್ರಬಂಧ-ಅಪ್ರಕಟಿತ)- ಡಾ.ಲಿಂಗಣ್ಣ ಗಾಣಧಾಳ

೧೦) ಸಮಾಜ ಶಾಸ್ತ್ರದ ಮೂಲ ತತ್ವಗಳು – ಕೆ.ಬೈರಪ್ಪ

೧೧) ಹಿಂದೂ ಧರ್ಮದ ಪರಿಚಯ – ಶಂಕರನಾರಾಯಣ ಭಟ್ಟ ಎರ್ದುಕಳ್‌

೧೨) ಧರ್ಮ ಸಂಭವ- ಪಂಡಿತ ತಾರನಾಥ