ಇದು ಮೊಲ ಮತ್ತು ಆಮೆಯ ಓಟದ ಕಥೆಯ ಮುಂದುವರಿದ ಭಾಗವೆಂದು ಭಾವಿಸದಿರಿ. ಇಲ್ಲಿ ಮಣ್ಣಾವು ಮತ್ತು ಆಮೆ ಸ್ವತಃ ಓಟದ ಸ್ಪರ್ಧೆಯನ್ನು ಮಾಡುತ್ತಿಲ್ಲ. ಬದಲಾಗಿ ಇವುಗಳನ್ನು ಮಾರಾಟಮಾಡಲು ಹಳ್ಳಿಗಳಲ್ಲಿ ರೈತರ ನಡುವೆ ಸ್ಪರ್ಧೆಯೇ ಏರ್ಪಟ್ಟಿದೆ. ಅದರ ಒಂದು ಕಥೆ ಇದು.

ನಾನು ಈಚೆಗೆ ಚಿತ್ರದುರ್ಗದ ಹತ್ತಿರದ ಹಾಯ್ಕಲ್ ಎಂಬ ಊರಿನ ನನ್ನ ದೊಡ್ಡಮ್ಮನ ಮನೆಗೆ ಹೋಗಿದ್ದೆ. ಎಲ್ಲರೂ ಹೊಲಕ್ಕೆ ಹೋದ ಕಾರಣ ನಾನು ಬೈಕನ್ನು ಹೊಲದ ಕಡೆ ತಿರಿವಿಕೊಂಡು ಹೋದೆ. ಒಂದು ಕಡೆ ಹೊಲದ ಹಾದಿ ಸ್ವಲ್ಪ ಕೊರಕಲಾಗಿ ಗಾಡಿ ಹೋಗಲು ತೊಂದರೆಯಾದ ಕಾರಣ  ಅದನ್ನು ತಳ್ಳಿಕೊಂಡು ಹೋಗತೊಡಗಿದೆ. ವಿಪರೀತ ಬಿಸಿಲಿದ್ದ ಕಾರಣ ಯಾಕದರೂ ಬಂದೆನೋ ಎಂದು ಬೈದುಕೊಳ್ಳುತ್ತಾ ಗಾಡಿ ತಳ್ಳುತ್ತಾ ನಡೆದೆ. ಸುತ್ತಮುತ್ತಲ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜನ ನನ್ನನ್ನು ನೋಡಿ ಯಾರೋ ಹೊಸಬರು ಎಂದುಕೊಂಡು ತಮ್ಮ ತಮ್ಮ ಕೆಲಸದಲ್ಲಿ ತೊಡಗುತ್ತಿದ್ದರು.

ಸ್ವಲ್ಪ ದೂರದಲ್ಲಿ ನನ್ನನ್ನೇ ನೋಡುವಂತೆ ನನ್ನ ಕಡೆ ಇಬ್ಬರು ಓಡಿ ಬರುತ್ತಿರುವುದು ಕಾಣಿಸಿತು. ಅವರು ನನಗೆ ಅಪರಿಚಿತರು. ಬಂದವರೆ  ‘ನೀವು ಹಾವು ತೊಗೊಳೊರಾ? ಎಂದರು. ನಾನು ತಬ್ಬಿಬ್ಬಾದೆ. ಇದೇನು ಹಾವು ತೊಗೊಳ್ಳೋದು? ನನ್ನನ್ನೇನು ಹಾವಾಡಿಗ ಅನ್ಕೊಂಡ್ರೋ ಹೇಂಗೋ ಎಂದುಕೊಂಡೆ. ನಾನಾಗ ‘ಇಲ್ರಿ ಇಲ್ಲೆ ಸಂಬಂಧಿಕರ ಹೊಲಕ್ಕೆ ಬಂದಿದ್ದೆ’ ಎಂದೆ. ಅವರು ‘ಅಯ್ಯೋ ಗೊತ್ತು ಬಿಡ್ರಿ..ನಾವು ಯಾರಿಗೂ ಹೇಳಲ್ಲ ಎರಡು ಹಾವು ಇದಾವೆ ತೊಗೊಳ್ರಿ’ ಎಂದ. ನಾನು ಇಲ್ಲ ನಾನು ಹಾವು ತೊಗೊಳ್ಳೋನು ಅಲ್ಲ ಎಂದೆ. ಅವರು ಸಾ ಹಂಗನ್ನಬೇಡ್ರಿ ಹಾವು ಹಿಡಿದು ಎಂಟು ದಿನ ಆಯ್ತು ಮಳೆಹುಳ ಹಾಕಿ ಸಾಕ್ತಿದಿವಿ, ದುಡ್ಡು ಸ್ವಲ್ಪ ಕಡಿಮೆಯಾದ್ರೂ ಪರವಿಲ್ಲ ತೊಗಳ್ರಿ..ಒಂದು ಲಕ್ಷಕ್ಕೊಂದು ಅಂತಿದ್ರು..ಒಂದು ಎರಡು ಮೂರು ಸಾವ್ರ ಕಡಿಮೆ ಕೊಡ್ರಿ..ಆದ್ರ ತಗಳ್ಳಲ್ಲ ಅಂತ ಮಾತ್ರ ಹೇಳಬೇಡ್ರಿ.. ಎಂದು ಅಂಗಲಾಚಿದರು. ನಾನು ಅವರಿಗೆ ಹೇಗೆ ಹೇಳುವುದೋ ತಿಳಿಯದಾಯಿತು. ಸರಿ ನೋಡೋಣ ನಡೀರಿ ಎಂದು ಯಾವ ಹಾವು ಏನು ಕಥೆ ತಿಳಿಯೋಣವೆಂದು ಅವರ ಹಿಂದೆ ಹೊರಟೆ. ಅವರ ಮುಖದಲ್ಲಿ ನಗು ಹೊಮ್ಮಿತು.

ಅವರು ತಮ್ಮ ಹೊಲದ ಪುಟ್ಟ ಗುಡಿಸಲ ಬಳಿ ಕರೆದೊಯ್ದರು. ಗುಡಿಸಲು ಚಿಕ್ಕದಾದ ಕಾರಣ ತಲೆ ತಗ್ಗಿಸಿ ಗುಡಿಸಲಿನೊಳಗೆ ಹೋದೆ. ಅಲ್ಲಿ ನೇತು ಹಾಕಿದ್ದ ಸೋರೆಯನ್ನು ಕೆಳಗೆ ಇಳಿಸಿದರು. ನೋಡಿದರೆ ಎರಡು ಮಣ್ಣಾವುಗಳು ನಿತ್ರಾಣವಾಗಿ ಉಸಿರಾಡುವಂತಿದ್ದವು. ಹೊಲದಾತ ಒಂದು ಕೊಕ್ಕೆ ಕೋಲಿನಿಂದ ನಿಧಾನಕ್ಕೆ ಸೋರೆಯಿಂದ ಹೊರ ತೆಗೆದ. ಅವೆರಡೂ ಹಾವುಗಳು ತೆವಳುವಂತಾಗಿದ್ದವು. ಶಕ್ತಿ ಇಲ್ಲವಾಗಿತ್ತು. ಮೆತ್ತಗಾದ ದಪ್ಪನೆಯ ಬೇರುಗಳಂತೆ ಸುಮ್ಮನೆ ಹುರುಳಾಡಿದವು.

ನನಗೆ ಅವುಗಳನ್ನು ನೋಡಿ ಕರುಳು ಚುರುಕ್ ಎಂದಿತು. ಹೊಲದಾತ ಇವು ಎರಡು ಸೇರಿ ಏಳು ಕೇಜಿ ಇದಾವ ಸಾ..ತಗಂಡೋಗ್ರಿ..ಎಂದನು. ನನಗೆ ಏನು ಹೇಳುವುದೋ ತಿಳಿಯದೆ, ಸುಮ್ಮನೆ ಒಂದು ಕತೆ ಕಟ್ಟಿದೆ. ‘ನನಗೆ ಗೊತ್ತಿದ್ದವರೊಬ್ರು ಮೊದಲು ಹಾವು ತೊಗೊಳ್ತಿದ್ರು, ಮೊನ್ನೆ ಅವರನ್ನೆಲ್ಲಾ ಅರಣ್ಯ ಇಲಾಖೆಯವರು ಹಿಡಿದು ಜೈಲಿಗೆ ಹಾಕಿದ್ರು. ಹಾಗಾಗಿ ಹಾವು ತೊಗೊಳ್ಳೋದು ಬಿಟ್ಟಾರೆ. ಈಗ ಹಾವು ಎಲ್ಲೆಲ್ಲಿ ಹಿಡಿದಿಟ್ಟಿದಾರೋ ಅಲ್ಲೆಲ್ಲಾ ಹುಡುಕಾಟ ಮಾಡ್ತಿದಾರೆ, ಯಾರಿಗಾದ್ರೂ ನೀವು ಹಾವು ಹಿಡಿದಿರೋದು ಗೊತ್ತಾದ್ರೆ ನಿಮ್ಮನ್ನೂ ಜೈಲಿಗೆ ಹಾಕ್ತಾರೆ’ ಎಂದೆ. ಅವರು ಒಂದು ಕ್ಷಣ ವಿಚಲಿತರಾದರು. ನನಗೆ ಹಾವನ್ನು ಯಾಕಾದರೂ ತೋರಿಸಿದೆವೋ ಎಂದು ಕಸಿವಿಸಿಗೊಂಡರು. ‘ಹಂಗೇನ್ಸಾ..ನಮಿಗೆ ಗೊತ್ತುಲ್ಲ ಬಿಡ್ರಿ. ಅದಿಕ್ಕೆ ಒಂದು ಹತ್ತದ್ನೈದು ದಿನದಿಂದ ಹಾವು ತಗಳ್ಳಾರು ಬಂದಂಗಿಲ್ಲ, ನಾವು ಇಡದಿಟ್ಕಂಡು ಕಾದೆ ಕಾಯ್ತೀವಿ..ಜೈಲಿಗೋದಾರು ಇನ್ನೆಲ್ಲಿ ಬರ‍್ತಾರ ಬಿಡ್ರಿ.. ನೀವು ಹಾವು ತೊಗೊಳ್ಳೋರು ಅನ್ಕಂಡ್ವಿ ತಪ್ಪು ತಿಳ್ಕಾಬ್ಯಾಡ್ರಿ…ನಾವು ಹಾವು ಹಿಡಿದಿಟ್ಟಿರೋದ್ನ ಯಾರಿಗೂ ಹೇಳಬೆಡ್ರಿ ಸಾ’ ಎಂದರು. ಅವರು ಭಯಗೊಂಡಿರುವುದನ್ನು ನೋಡಿ ‘ಇಲ್ಲ ಎಲ್ಲೂ ಹೇಳಲ್ಲ, ಆ ಹಾವುಗಳನ್ನು ಬಿಟ್ಟುಬಿಡ್ರಿ ಇಲ್ಲಾಂದ್ರೆ ಸಾಯ್ತಾವೆ, ಆ ಪಾಪ ನಿಮಗೆ ತಟ್ಟುತ್ತೆ ಅಂದೆ. ಅದಕ್ಕವರು ‘ಇನ್ನೆರಡು ದಿನ ನೋಡಿ ಬಿಡ್ತೀವಿ ಸಾ’ ಎಂದರು. ನಾನು ಹಾಗೆ ಮಾತಾಡಿ ದೊಡ್ಡಮ್ಮನವರ ಹೊಲಕ್ಕೆ ಹೋದೆ. ಅಲ್ಲಿ ಈ ಹಾವಿನ ಕಥೆ ಹೇಳಿದಾಗ ಅವರೆಲ್ಲಾ ಬಿದ್ದು ಬಿದ್ದು ನಕ್ಕರು. ಈಗ ಈ ಭಾಗದ ಜನ ಹೊಲದ ಕೆಲ್ಸಬಿಟ್ಟು ಬರಿ ಹಾವು ಹಿಡಿಯೋದು ಮಾಡ್ತಿದಾರೆ ಎಂದೆಲ್ಲಾ ಹೇಳಿದರು. ಹೀಗೆ ಹಾವು ಹಿಡಿದವರ ಪೇಚಾಟಗಳ ಕಥೆಯನ್ನು ಹೇಳಿದರು.

ನಾನು ನಮ್ಮೂರು ಜೋಳದಕೂಡ್ಲಿಗಿಗೆ ಬಂದಾಗ ಹಾವಿನ ಜತೆ ಆಮೆಯ ಮಾರಾಟದ ಕತೆ ತಿಳಿಯಿತು. ನಕ್ಷತ್ರ ಆಮೆಗೆ ಹೆಚ್ಚು ಬೇಡಿಕೆಯಂತೆ. ಇನ್ನು ಹದಿನಾರು ಉಗುರು ಇರುವ ಆಮೆ ಸಿಕ್ಕರಂತೂ ಹೆಚ್ಚು ಹಣ ಕೊಟ್ಟು ಕೊಳ್ಳುತ್ತಾರಂತೆ. ಈ ಆಮೆಯನ್ನು ಯಾಕೆ ಕೊಳ್ಳುತ್ತಾರೆ ಎನ್ನುವುದಕ್ಕೆ ಜನ ಕೊಟ್ಟ ಕಾರಣ ಮಜವಾಗಿತ್ತು. ಹದಿನಾರು ಉಗುರು ಇರುವ ಆಮೆಯನ್ನು ಓಸಿ ನಂಬರ್ ಹಿಡಿಯಲು ಬಳಸುತ್ತಾರಂತೆ. ಒಂದು ರಂಗ ಹೊಡೆದು ಪೂಜೆಗೀಜೆ ಮಾಡಿ ರಂಗದ ತುಂಬಾ ನಂಬರುಗಳನ್ನು ಬರೆಯುತ್ತಾರಂತೆ. ಆಮೆಯನ್ನು ಪೂಜೆ ಮಾಡಿ ರಂಗದಲ್ಲಿ ಬಿಡಲಾಗುತ್ತದೆಯಂತೆ, ಆಗ ಆಮೆ ನಡೆದುಕೊಂಡು ಹೋಗಿ ಯಾವ ನಂಬರಿನ ಮೇಲೆ ನಿಲ್ಲುತ್ತದೆಯೋ ಆ ನಂಬರಿನ ಓಸಿ ಹೊಡೆಯುತ್ತದೆ, ಯಾವುದೇ ಕಾರಣಕ್ಕೂ ಆ ನಂಬರ್ ಮಿಸ್ ಆಗುವುದಿಲ್ಲ ಎನ್ನುವ ನಂಬಿಕೆ ಗಾಢವಾಗಿದೆಯಂತೆ. ಆ ನಂಬರ್ ಹಿಡಿಯುವುದಕ್ಕಾಗಿ ಆಮೆಯನ್ನು ಕೊಳ್ಳುತ್ತಾರಂತೆ. ಈ ಬಗೆಯ ನಂಬಿಕೆಗಳನ್ನು ಹಳ್ಳಿಗರಲ್ಲಿ ಹುಟ್ಟುಹಾಕಿವೆ.

ಈ ಹಾವು ಆಮೆ ಹಿಡಿದಿಟ್ಟ ಕಥೆಗಳು ನಗೆ ಹುಕ್ಕಿಸುತ್ತವೆ. ನಮ್ಮೂರ ಪಕ್ಕದ ಸೀರನಹಳ್ಳಿಯಲ್ಲಿ ಸಂಗಜ್ಜ ಎನ್ನುವಾತ ಮಣ್ಣಾವನ್ನು ಹಿಡಿದಿಟ್ಟು ಕೊಳ್ಳುವ ಏಜಂಟರಿಗಾಗಿ ಹುಡುಕಾಟ ನಡೆಸಿದ್ದನಂತೆ. ಹಾವು ಮನೆಯಲ್ಲಿಟ್ಟುಕೊಳ್ಳಲು ಭಯವಾಗಿ ಮಣ್ಣಿನ ಸೋರೆಯ ತಳದಲ್ಲಿ ಒಂದಷ್ಟು ಕೆಮ್ಮಣ್ಣು ಹಾಕಿ,  ಮನೆ ಮುಂದಿನ ಮರವೊಂದಕ್ಕೆ ಆ ಸೋರೆಯನ್ನು ನೇತುಹಾಕಿದ್ದನಂತೆ. ಸಂಗಜ್ಜ ದಿನ ರಾತ್ರಿ ಆ ಹಾವನ್ನು ಕಾಯ್ದುಕೊಂಡು ಮನೆ ಹೊರಗೆ ಮಲಗಿರುತ್ತಿದ್ದನಂತೆ. ಒಂದು ದಿನ ರಾತ್ರಿ ಆ ಸೋರೆಯನ್ನೇ ಯಾರೋ ಕದ್ದಿದ್ದಾರೆ. ಆತ ಬೆಳಗ್ಗೆ ಸೋರೆ ಕಳವಾದದ್ದನ್ನು ನೋಡಿ ಕಂಗಾಲಾಗಿ ಇಡೀ ಊರನ್ನೇ ತಡಕಾಡಿದ್ದಾನೆ. ಅದಕ್ಕಾಗಿ ಊರಲ್ಲಿರುವ ಸೋರೆಗಳನ್ನೆಲ್ಲಾ ಹೊಡೆದು ಹುಡುಕಾಟ ನಡೆಸಿದ್ದನಂತೆ. ಪಾಪ ಈತನ ಕೋಪಕ್ಕೆ ಬಡಪಾಯಿ ಮಣ್ಣಿನ ಮಡಕೆಗಳ ಮಾರಣ ಹೋಮವೇ ನಡೆದಿದೆ. ಹಾವು ಕಳವಾದದ್ದರ ನೋವಿಗೆ ಕುಡಿದು ಯಾರು ನನ್ನ ಹಾವು ಕದ್ದೋರು ಎಂದು ಸಿಕ್ಕ ಸಿಕ್ಕವರನ್ನೆಲ್ಲಾ ಬೈಯುತ್ತಾ ನಡೆದಾಡುತ್ತಿದ್ದನಂತೆ. ಈಗ ಆತನನ್ನು ಮಣ್ಣಾವಿನ ಸಂಗಜ್ಜ ಎಂತಲೇ ಕರೆಯುತ್ತಾರೆ.

ನಮ್ಮೂರಿನ ಪಕ್ಕೀರಜ್ಜ ಎಂಬಾತ ಆಮೆಯೊಂದನ್ನು ಹಿಡಿದು, ಕೊಳ್ಳುವ ಏಜಂಟರಿಗಾಗಿ ಕಾಯುತ್ತಿದ್ದನಂತೆ. ಆಮೆಯನ್ನು ದನ ಕಟ್ಟುವ ಕೊಟ್ಟಿಗೆಯಲ್ಲಿ ಪುಟ್ಟಿ ಮುಚ್ಚಿ ಅಡಗಿಸಿದ್ದನಂತೆ, ಆತ ಹೊಲಕ್ಕೆ ಹೋದಾಗ ಮಕ್ಕಳು ಪುಟ್ಟಿ ತೆಗೆದು ಆ ಆಮೆಯ ಜತೆ ಆಟವಾಡಿದ್ದಾರೆ. ಅದು ಹೇಗೋ ನಿಧಾನಕ್ಕೆ ನಡೆದು ತಪ್ಪಿಸಿಕೊಂಡಿದೆ. ಮನೆಗೆ ಬಂದ ಪಕ್ಕೀರಜ್ಜನಿಗೆ ಆಮೆ ತಪ್ಪಿಸಿಕೊಂಡ ಸುದ್ದಿ ಬರಸಿಡಿಲಿನಂತೆ ಎರಗಿದೆ. ಆಟವಾಡಿದ ತನ್ನ ಮಕ್ಕಳನ್ನು ಎಕ್ಕೆ ಜುಳ್ಕಿ ತೊಗೊಂಡು ಬಾಸುಂಡೆ ಬರುವಂತೆ ಬಾರಿಸಿದ್ದಾನೆ. ಮಕ್ಕಳು ಕಿರುಚಾಟ ಮಾಡುವುದನ್ನು ನೋಡಿ ಓಣಿಯ ಜನ ಮಧ್ಯೆ ಪ್ರವೇಶಿಸಿ ಮಕ್ಕಳನ್ನು ಬಿಡಿಸಿಕೊಂಡಿದ್ದಾರೆ. ಮರುದಿನ ಆಮೆಗಾಗಿ ಹುಡುಕಾಡಿದ್ದಾನೆ. ಆಮೆ ಹೇಗೋ ಮತ್ತೆ ಆತನ ಕೈಗೆ ಸಿಕ್ಕಿದೆ. ಆ ನಂತರ ಜಾಗರೂಕತೆಯಿಂದ ಪುಟ್ಟಿ ಮುಚ್ಚಿ ಮಕ್ಕಳ ಆಟಕ್ಕೆ ಸಿಗದಂತೆ ಕಾದಿದ್ದಾನೆ. ಯಾರೋ ಆಮೆಯನ್ನು ಹಿಡಿದಿಟ್ಟಿರುವ ಸುದ್ದಿಯನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಅರಣ್ಯ ಇಲಾಖೆ ಪೋಲೀಸರು ಪಕ್ಕೀರಜ್ಜನ ಮನೆ ಪ್ರವೇಶಿಸಿ ಆಮೆಯನ್ನು ವಶಪಡಿಸಿಕೊಂಡು, ಪಕ್ಕೀರಜ್ಜನ ಮೇಲೆ ಕೇಸು ಜಡಿದಿದ್ದಾರೆ. ಇದು ಜನರಲ್ಲಿ ಸ್ವಲ್ಪ ಮಟ್ಟಿನ ಭಯ ಹುಟ್ಟಿಸಿದೆ. ಇಂತಹ ಹಲವು ಕಥೆಗಳಿವೆ.

ಹಾವು, ಆಮೆಯನ್ನು ಕೊಳ್ಳುವವರು ಯಾರು? ಯಾಕಾಗಿ ಕೊಳ್ಳುತ್ತಾರೆ? ಮಾರಾಟ ಮಾಡಿದವರಾರು? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟ. ಇದು ಭೂಗತಲೋಕದ ಚಟುವಟಿಕೆಗಳಂತೆ ನಡೆಯುತ್ತದೆ. ಸ್ವಲ್ಪ ಅನುಮಾನ ಬಂದವರೊಂದಿಗೆ ಇಂತಹ  ವಿಷಯಗಳನ್ನು ಜನ ಮಾತನಾಡುವುದಿಲ್ಲ. ಹಾಗಾಗಿ ಇಂತಹ ಚಟುವಟಿಕೆಗಳ ಕೇಸುಗಳು ದಾಖಲಾಗುವುದು ಕಡಿಮೆ. ಆದರೆ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಹಾವು, ಆಮೆಯನ್ನು ಕೊಳ್ಳುತ್ತಾರೆನ್ನುವ ಸುದ್ದಿಗಳು ಮಾತ್ರ ಹಳ್ಳಿಗಳಲ್ಲಿ ವಿಚಿತ್ರ ಪಾಠಾಂತರಗಳಲ್ಲಿ ಹಬ್ಬುತ್ತವೆ. ಹೀಗೆ ಒಬ್ಬರೋ ಇಬ್ಬರೋ ಹೀಗೆ ಹಾವು ಆಮೆಯನ್ನು ಮಾರಿ ಹಣ ಪಡೆದಿರುತ್ತಾರೆ, ಅವರು ಹೀಗೆ ಮಾರಾಟ ಮಾಡಲು ಅಧಿಕೃತ ಸಾಕ್ಷಿಗಳಾಗಿ ಕೆಲಸ ಮಾಡುತ್ತಾರೆ. ಇಂತವರನ್ನೇ ಮಧ್ಯವರ್ತಿಗಳನ್ನಾಗಿ ನೇಮಿಸಿಕೊಳ್ಳುತ್ತಾರೆ. ಹಾಗಾಗಿ ಹೀಗೆ ಮಾರುವ ಮಾರಾಟ ಜಾಲವನ್ನು ಪತ್ತೆ ಮಾಡಲು ಹೊರಟರೆ ಸಿಗುವುದು ಅದೇ ಹಳ್ಳಿಗಳ ಮಧ್ಯವರ್ತಿಗಳು ಮಾತ್ರ.

ಈ ಬಗೆಯ ಕಥನಗಳು ಹಳ್ಳಿಗರನ್ನು ಆಸೆಗೆ ತಳ್ಳುತ್ತವೆ. ಹಾಗಾಗಿಯೇ ಹಾವು ಆಮೆಯಂತಹ ಕಾಡು ಪ್ರಾಣಿಗಳನ್ನು ಹಿಡಿದಿಟ್ಟು ಮಾರುವ ಜಾಲಕ್ಕೆ ರೈತರು ಬಲಿಯಾಗುತ್ತಾರೆ. ಅವರು ಹೊಲ ನಂಬಿ ಬದುಕುವ ಆಸೆಯನ್ನು ಮರೆತದ್ದರಿಂದ, ಕಾಣದ ಕೈಗಳು ಮಾಡುವ ದಂದೆಗೆ ಇವರುಗಳು ಅಪರಾಧಿಗಳಾಗುತ್ತಾರೆ. ರೈತರು ಹೊಲಕ್ಕಾಗಿ ಮಾಡಿದ ಸಾಲವನ್ನು ಹೀಗಾದರೂ ತೀರಿಸಬಹುದು ಎಂದುಕೊಂಡು, ಇಂತಹ ಆಸೆಗಳಿಗೆ ಸಹಜವಾಗಿ ಮಾರುಹೋಗುತ್ತಾರೆ. ಈ ಕಥೆ ರೈತ ಸಮುದಾಯದ ಬದುಕಿನ ದ್ವಂದ್ವಕ್ಕೆ ರೂಪಕದಂತಿದೆ.