ಮಣ್ಣು ದೇಶದ ಅಮೂಲ್ಯವಾದ ನೈಸರ್ಗಿಕ ಸಂಪತ್ತು. ಇದನ್ನು ಸೂಕ್ತವಾಗಿ, ಸುಸಂಬಂಧವಾಗಿ ಮತ್ತು ಸಂಯೋಜಿತವಾಗಿ ಬಳಸಿಕೊಂಡರೆ ಮಾತ್ರ ಮಾನವನ ಅವಶ್ಯಕತೆಗಳಾದ ಅಶನ (ಆಹಾರ), ವಸನ (ಬಟ್ಟೆ) ಮತ್ತು ವಸತಿಗೆ ಬೇಕಾದ ಸಾಮಗ್ರಿಗಳನ್ನು ವಿಫಲವಾಗಿ ಉತ್ಪಾದಿಸಲು ಸಾಧ್ಯವಾದೀತು. ಮಣ್ಣಿನ ಉತ್ಪಾದಕತೆಯು ಕುಗ್ಗದಂತೆ ಎಚ್ಚರವಹಿಸಿ ಈ ಸಂಪತ್ತನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸಬೇಕಾದ್ದು ಅತಿ ಮುಖ್ಯ ಕರ್ತವ್ಯ ಎಂಬುದನ್ನು ಮರೆಯುವಂತಿಲ್ಲ.

ಮಣ್ಣಿನ ನಿರ್ವಹಣೆಯು ಅತಿ ಕ್ಲಿಷ್ಟ ಕಾರ್ಯ. ಉದಾಹರಣೆಗೆ, ಕೆಲವು ಮಣ್ಣು ನೈಸರ್ಗಿಕವಾಗಿಯೇ ಅಧಿಕ ಉತ್ಪಾದನೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದರೆ ಇನ್ನೂ ಕೆಲವು ಮೂಲತಃ ಉತ್ಪಾದಕತೆಯಲ್ಲಿ ಕೆಳ ಮಟ್ಟದಲ್ಲಿದ್ದರೂ ಉತ್ತಮ ನಿರ್ವಹಣೆಗೆ ಸ್ಪಂಧಿಸಿ ಅಧಿಕ ಇಳುವರಿಯನ್ನು ಕೊಡಬಲ್ಲವು. ತದ್ವಿರುದ್ಧವಾಗಿ ಕೆಲವು ಮಣ್ಣುಗಳು, ಎಷ್ಟೇ ಪರಿಶ್ರಮವನ್ನು ವಹಿಸಿದರೂ ನಿರೀಕ್ಷಿತ ಫಲವನ್ನು ಕೊಡಲಾರವು.

ಮಣ್ಣಿನ ಸುಯೋಗ್ಯ ನಿರ್ವಹಣೆಯನ್ನು ಮಾಡಲು ಸಾಧ್ಯವಾಗಬೇಕಾದರೆ, ಮಣ್ಣಿನ ಮೂಲಭೂತ ಗುಣಧರ್ಮಗಳ ಪೂರ್ವ ಅರಿವು ಇರಬೇಕಾದುದು ಅತ್ಯವಶ್ಯಕ. ಈ ಪರಿಜ್ಞಾನದಿಂದ, ಅಸ್ತಿತ್ವದಲ್ಲಿರುವ ನಿರ್ವಹಣಾ ವಿಧಾನಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವಶ್ಯವಿರುವ ಬದಲಾವಣೆಗಳನ್ನು ಮಾಡಲಾಗಲೀ, ಹೊಸ ವಿಧಾನಗಳನ್ನು ರೂಪಿಸಲಾಗಲೀ ಸಾಧ್ಯವಾಗುತ್ತದೆ. ಈ ಉದ್ದೇಶಗಳನ್ನು ಮನದಲ್ಲಿಟ್ಟುಕೊಂಡು ಹಾಗೂ ವಿದ್ಯಾಥಿಗಳನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆಯಾದರೂ ಕೃಷಿಕರಿಗೆ, ವಿಸ್ತರಣಾ ಕಾರ್ಯಕರ್ತರಿಗೆ ಹಾಗೂ ಕೃಷಿಯಲ್ಲಿ ಆಸ್ಥೆಯಿರುವ ಎಲ್ಲರಿಗೂ ಇದು ಪ್ರಯೋಜನಕಾರಿಯಾಗಲಿದೆ. ಓದುಗರು ಪುಸ್ತಕದ ಸದುಪಯೋಗ ಮಾಡಿಕೊಳ್ಳಬೇಕೆಂಬುದೇ ಲೇಖಕರ ಬಯಕೆ.

ಈ ಪುಸ್ತಕದ ಸಿದ್ಧತೆಗೆ ಪೂರಕ ಗ್ರಂಥಗಳನ್ನು ಒದಗಿಸಿಕೊಟ್ಟ ಡಾ. ಎ.ಎಂ. ಚಂದ್ರಶೇಖರಯ್ಯ, ಶಿಕ್ಷಣ ನಿರ್ದೇಶಕರು (ನಿವೃತ್ತ) ಮತ್ತು ಡಾ. ಎಸ್.ಕೆ. ಪಾಟೀಲ, ಶಿಕ್ಷಣ ನಿರ್ದೇಶಕರು, ಅರಣ್ಯ ಮಹಾವಿದ್ಯಾಲಯ ಶಿರಸಿ ಹಾಗೂ ಅಲ್ಲಿನ ಗ್ರಂಥಾಲಯದ ಸಹಾಯಕರಾದ ಶ್ರೀ ಎಂ.ಆರ್. ನದಾಫ್ ಮತ್ತು ಶ್ರೀ ಎಂ.ಪಿ. ದೊಡ್ಡಮನಿ ಇವರಿಗೆ, ಸ್ವಪ್ರೇರಣೆಯಿಂದ ಚಿತ್ರ ಬರೆದುಕೊಟ್ಟ ಡಾ. ಆರ್.ವಿ. ಶಾಮನೂರು, ಕೃಷಿ ಅಧಿಕಾರಿಗಳು ಇವರಿಗೆ ಹಾಗೂ ಪುಸ್ತಕದ ಬರವಣಿಗೆಯ ಯಶಸ್ಸಿಗೆ ಕಾರಣರಾದ ಶ್ರೀಮತಿ ಸಾವಿತ್ರಿ ಎಲ್. ದೀಕ್ಷಿತ ಇವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ಡಾ|| ಎಸ್.ವಿ. ಪಾಟೀಲ
ಡಾ|| .. ದೀಕ್ಷಿತ