ಮಣ್ಣು ಭೂಮಿಯ ಹೊರ ಮೈಯನ್ನು ಆವರಿಸಿಕೊಂಡ ಒಂದು ನೈಸರ್ಗಿಕ ವಸ್ತು. ಭೂಮಿಯ ಮೇಲಿರುವ ಕಲ್ಲು ಮತ್ತು ಖನಿಜಗಳ ಮೇಲೆ ಹವಾಮಾನ, ಜೀವಿಗಳು ಮತ್ತು ಭೂಮಿಯ ಇಳಿಜಾರುಗಳು ವಿವಿಧ ಅವಧಿಗಳವರೆಗೆ ಬೀರಿದ ಪ್ರಭಾವದಿಂದ ಮಣ್ಣು ಸಿದ್ಧವಾಗಿದೆ. ಮಣ್ಣು ಹಲವು ಬಗೆಯ ನಿರವಯವ ಮತ್ತು ವಿವಿಧ ಸ್ಥಿತಿಯಲ್ಲಿರುವ ಸಾವಯವ ವಸ್ತುಗಳ ಮಿಶ್ರಣವೆನ್ನಬಹುದು. ಕೃಷಿಯ ದೃಷ್ಟಿಯಿಂದ ನೋಡಿದಾಗ, ಮಣ್ಣು ಅಗತ್ಯವಿರುವಷ್ಟು ನೀರು ಮತ್ತು ಹವೆಗಳ ಸಾನಿಧ್ಯದಲ್ಲಿ ಸಸ್ಯಗಳ ನೆಲೆಗೆ ಆಧಾರವನ್ನೂ ಬೆಳವಣಿಗೆಗೆ ಬೇಕಾಗುವ ಆಹಾರವನ್ನೂ ಒದಗಿಸುತ್ತದೆ.

ನಿರ್ವಹಣೆ ಎಂಬ ಪದವನ್ನು ಬಹು ವ್ಯಾಪಕ ಅರ್ಥದಲ್ಲಿ ಬಳಸಲಾಗುತ್ತಿದೆ. ಇಲ್ಲಿ ಸಂದರ್ಭಕ್ಕೆ ಅನುಗುಣವಾಗುವಂತೆ ಒಂದು ಮಿತಿಯಲ್ಲಿ ಉಪಯೋಗಿಸಲಾಗಿದೆ. ಮಣ್ಣಿನ ಮೂಲವನ್ನು ಅರಿತುಕೊಂಡು ಅದರ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಗಳ ಪರಸ್ಪರ ಕ್ರಿಯೆ – ಪ್ರಕಿಯೆಗಳಿಗೆ ಅನುಗುಣವಾಗಿ ಸಸ್ಯಗಳ ಬೆಳವಣಿಗೆಗೆ ಬೇಕಾಗುವ ಇತರೆ ಅವಶ್ಯಕತೆಗಳನ್ನು ಸಂಯೋಜಿಸಿ ಉತ್ತಮ ಗುಣಮಟ್ಟದ, ಅತ್ಯಧಿಕ ಉತ್ಪಾದನೆ ಹಾಗೂ ಅತಿ ಹೆಚ್ಚಿನ ಲಾಭ ದೊರೆಯುವಂತೆ ಮಣ್ಣನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವುದೇ ಮಣ್ಣಿನ ಉತ್ತಮ ನಿರ್ವಹಣೆಯೆನ್ನಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಮಣ್ಣಿನ ಫಲವತ್ತತೆಯೂ ಸೇರಿದಂತೆ ಮಣ್ಣಿನ ಉತ್ಪಾದಕತೆಯನ್ನು ಉಳಿಸಿ, ಸಂರಕ್ಷಿಸಿ, ಅಭಿವೃದ್ಧಿಗೊಳಿಸಿ, ಕೃಷಿಯು ಶಾಶ್ವತವಾಗಿ ಉನ್ನತ ಮಟ್ಟದಲ್ಲಿರುವಂತೆ ಮಾಡುವ ಕ್ರಿಯೆಯೇ ಮಣ್ಣಿನ ಉತ್ತಮ ನಿರ್ವಹಣೆ.

ಮಣ್ಣಿನಮಹತ್ವ

ಮಾನವನ ಅತ್ಯವಶ್ಯಕತೆಗಳಾದ ಅನ್ನ (ಆಹಾರ), ಬಟ್ಟೆ ಮತ್ತು ವಸತಿ ಇವುಗಳನ್ನು ಉತ್ಪಾದಿಸಲು ಮಣ್ಣೇ ಮೂಲಾಧಾರ. ಉನ್ನತ ಉತ್ಪಾದಕ ಸಾಮರ್ಥ್ಯವುಳ್ಳ ಮಣ್ಣೇ ಮನುಷ್ಯನ ನಿಜವಾದ ಬಲ. ಮಾನವನ ಅಸ್ತಿತ್ವವು ಈ ಭೂ ಭಾಗದ ಮೇಲೆ ನಿರಂತರವಾಗಿ ಮುಂದುವರಿಯಬೇಕಾದರೆ ಮಣ್ಣಿನ ಸಮರ್ಥ ನಿರ್ವಹಣೆಯು ಅತ್ಯವಶ್ಯ ಮತ್ತು ಅನಿವಾರ್ಯ.

ಮಣ್ಣು ಅತ್ಯಂತ ಮಹತ್ವಪೂರ್ಣವಾದ ನೈಸರ್ಗಿಕ ಸಂಪನ್ಮೂಲ. ಅದು ರಾಷ್ಟ್ರದ ಸಂಪತ್ತು. ರೈತನು ಅದರ ಮೇಲ್ವಿಚಾರಕನು ಮಾತ್ರ. ಆದ್ದರಿಂದಲೇ ಮಣ್ಣನ್ನು ಅತಿ ಜಾಣ್ಮೆಯಿಂದ ನಿರ್ವಹಿಸಿ, ಅದರ ಉತ್ಪಾದನಾ ಸಾಮರ್ಥ್ಯವನ್ನು ಅತ್ಯುನ್ನತ ಮಟ್ಟದಲ್ಲಿಟ್ಟುಕೊಂಡು ಅದೇ ಸ್ಥಿತಿಯಲ್ಲಿಯೇ ಅದನ್ನು ತನ್ನ ಸಂತತಿಗೆ ಅಂದರೆ ರಾಷ್ಟ್ರದ ಭಾವೀ ಜನಾಂಗಕ್ಕೆ ವಹಿಸಿಕೊಡುವುದು ಅವನ ಆದ್ಯ ಕರ್ತವ್ಯವಾಗಿರುತ್ತದೆ.

ಮಣ್ಣಿನನಿರ್ವಹಣೆಯಉತ್ತಮವಿಧಾನಗಳು

ಪ್ರಮುಖವಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ಮಣ್ಣಿನ ಉತ್ತಮ ನಿರ್ವಹಣೆಯು ಸಾಧ್ಯವಾದೀತು;

 • ಭೂ ಮತ್ತು ಜಲ ಸಂರಕ್ಷಣೆಗೆ ಅವಶ್ಯವಿರುವ ವಿವಿಧ ಕ್ರಮಗಳನ್ನು ಅನುಸರಿಸಬೇಕು.
 • ಮಣ್ಣಿನ ಭೌತಿಕ ಗುಣಧರ್ಮಗಳು ಉನ್ನತ ಮಟ್ಟದಲ್ಲಿ ಉಳಿದು, ಮಣ್ಣಿನಲ್ಲಿ ನೀರು ಮತ್ತು ಹವೆಯು ಸರಿಯಾಗಿ ಆಡಿ, ಸಸ್ಯದ ಬೇರುಗಳು ಸರಾಗವಾಗಿ ಬೆಳೆದು ಅಭಿವೃದ್ಧಿ ಗೊಳ್ಳಲು ಅವಶ್ಯವಿರುವ ಬೇಸಾಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳಬೇಕು.
 • ಹೆಚ್ಚಾದ ನೀರು ಬಸಿದುಹೋಗಿ ಸಸ್ಯದ ಬೇರುಗಳಿಗೆ ಸೂಕ್ತ ಪ್ರಮಾಣದಲ್ಲಿ ಆಮ್ಲಜನಕ ದೊರೆಯುವಂತೆ ಮಾಡಲು ಬಸಿಗಾಲುವೆಗಳ ವ್ಯವಸ್ಥೆಯನ್ನು ಮಾಡಬೇಕು.
 • ಸಸ್ಯಗಳಿಗೆ ಬೇಕಾಗುವ ಎಲ್ಲ ಪೋಷಕಗಳು ಅವಶ್ಯವಿರುವ ಪ್ರಮಾಣದಲ್ಲಿ ಒಂದಕ್ಕೊಂದು ಸಮತೋಲನದಲ್ಲಿರುವಂತೆ ಮತ್ತು ಸುಲಭವಾಗಿ ಸಿಗುವ ರೂಪದಲ್ಲಿರುವಂತೆ ನೋಡಿಕೊಳ್ಳಬೇಕು. ಇದನ್ನು ಸಾಧಿಸಲು ಸೂಕ್ತ ಪ್ರಮಾಣದಲ್ಲಿ ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಪೂರೈಸಬೇಕು. ಸಾವಯವ ಗೊಬ್ಬರಗಳು ಸಸ್ಯಗಳಿಗೆ ಬೇಕಾಗುವ ಪೋಷಕಗಳನ್ನು ಪೂರೈಸುತ್ತವಲ್ಲದೇ ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಗಳನ್ನೂ ಉತ್ತಮಗೊಳಿಸುತ್ತವೆ ಎಂಬುವುದು ಗಮನಾರ್ಹ.
 • ಮಣ್ಣು ಅತಿ ಆಮ್ಲ ಅಥವಾ ಅತಿ ಕ್ಷಾರಯುತವಾಗದಂತೆ ಹಾಗೂ ಮಣ್ಣಿನಲ್ಲಿ ಲವಣ ಮತ್ತು ವಿನಿಮಯ ಸೋಡಿಯಂಗಳು ಮಿತಿ ಮೀರಿ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು.

ಅಸಮರ್ಪಕನಿರ್ವಹಣೆಯಿಂದಆಗುವದುಷ್ಪರಿಣಾಮಗಳು

ಮಣ್ಣನ್ನು ಸೂಕ್ತ ರೀತಿಯಿಂದ ನಿರ್ವಹಿಸದಿದ್ದರೆ ದುಷ್ಪರಿಣಾಮಗಳಾಗಬಹುದು. ಪ್ರಮುಖವಾದವುಗಳನ್ನು ಕೆಳಗೆ ಕೊಟ್ಟಿದೆ.

 • ಮಣ್ಣು ದೊಡ್ಡ ಪ್ರಮಾಣದಲ್ಲಿ ಹರಿದು ಹೋಗಿ ಅದರ ಫಲವತ್ತತೆಯೂ ಕುಗ್ಗಬಹುದು. ಈ ಕ್ರೀಯೆಯು ತೀವ್ರಗೊಂಡಾಗ, ಭೂಮಿಯಲ್ಲಿ ಕೊರಕಲುಗಳು ಕಾಣಿಸಿಕೊಂಡು ಭೂಮಿಯು ಬೇಸಾಯಕ್ಕೆ ನಿಷ್ಪ್ರಯೋಜಕವೆನಿಸಬಹುದು.
 • ಮಣ್ಣಿನ ಭೌತಿಕ ಗುಣಧರ್ಮಗಳು ಕೆಳಮಟ್ಟಕ್ಕೆ ಇಳಿಯಬಹುದು. ಇದರಿಂದ ಸಸ್ಯಗಳ ಬೇರುಗಳಿಗೆ ಸೂಕ್ತ ಪ್ರಮಾಣದಲ್ಲಿ ನೀರು ಮತ್ತು ಗಾಳಿ ದೊರೆಯದಿರಬಹುದು ಅಥವಾ ಹೆಚ್ಚಾದ ನೀರು ಬಸಿದುಹೋಗದೇ ಭೂಮಿಯು ಜೌಗಾಗಬಹುದು ಇಲ್ಲವೇ ಬೇರುಗಳ ಅಭಿವೃದ್ಧಿಗೆ ತಡೆಯುಂಟು ಮಾಡುವ ಗಟ್ಟಿಯಾದ ಪದರು ನಿರ್ಮಾಣವಾಗಬಹುದು.
 • ಪೋಷಕಗಳ ಕೊರತೆಯುಂತಾಗಿ, ಸಸ್ಯಗಳ ಬೆಳವಣಿಗೆಯು ಕುಂಠಿತಗೊಂಡು ಇಳುವರಿಯು ತಗ್ಗಬಹುದು.
 • ಮಣ್ಣಿನಲ್ಲಿರುವ ಪ್ರಯೋಜನಕಾರಿ ಜೀವಿಗಳಾದ ಎರೆಹುಳು ಮತ್ತು ಹಲವು ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಅನಾನುಕೂಲವುಂಟಾಗಿ, ಅವುಗಳ ಸಂಖ್ಯೆಯು ಕುಗ್ಗಿ ಇಳುವರಿ ಕಡಮೆಯಾಗಬಹುದು.
 • ಅಪಾಯಕಾರಿ ಲವಣಗಳು ಹಾಗೂ ವಿನಿಮಯ ಸೋಡಿಯಂ ಗಳು ಮಿತಿ ಮೀರಿ ಸಂಗ್ರಹವಾಗಿ ಸಸ್ಯಗಳ ಬೆಳವಣಿಗೆಗೆ ಅಡಚಣೆಯಾಗಬಹುದು.
 • ಅಲ್ಯೂಮಿನಿಯಂ, ಮ್ಯಾಂಗನೀಸ್ ಮುಂತಾದವು ವಿಷಕಾರೀ ಮಟ್ಟಕ್ಕೇರಿ ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು.

ಮಣ್ಣಿನರಕ್ಷಣೆಯಅವಶ್ಯಕತೆ

ಮಣ್ಣಿನ ಉತ್ಪಾದಕತೆಗೂ ದೇಶದ ಅಭಿವೃದ್ಧಿಗೂ ನಿಟಕವಾದ ಸಂಬಂಧವಿದೆ. ನಾಗರಿಕತೆಯ ಅಳಿವು ಮತ್ತು ಉಳಿವು ಮಣ್ಣಿನ ಉತ್ಪಾದಕತೆಯನ್ನು ಅವಲಂಬಿಸಿದೆ ಎಂಬುದರ ಬಗ್ಗೆ ಇತಿಹಾಸದಲ್ಲಿ ಹಲವು ಉದಾಹರಣೆಗಳು ದೊರೆಯುತ್ತವೆ. ಯಾವುದೇ ಪ್ರದೇಶದ ಮಣ್ಣಿನ ಉತ್ಪಾದಕತೆಯು ಕ್ಷೀಣಿಸಿದೊಡನೆ, ಉತ್ತಮವಾದ ಫಲದಾಯಕ ಮಣ್ಣಿರುವ ಹೊಸ ಪ್ರದೇಶಕ್ಕೆ ನಾಗರಿಕ ಕೇಂದ್ರಗಳು ಸ್ಥಳಾಂತರಗೊಳ್ಳುತ್ತಿದ್ದವೆಂಬುವುದರ ಬಗ್ಗೆ ಹಾಗೂ ಕೃಷಿ ಭೂಮಿಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗದೇ ಇದ್ದ ಫಲಸ್ವರೂಪವಾಗಿ, ಬೃಹತ್ ರಾಷ್ಟ್ರಗಳು ಪತನಗೊಂಡ ಬಗ್ಗೆ ಹಲವು ಉದಾಹರಣೆಗಳನ್ನು ಇತಿಹಾಸದಿಂದ ತಿಳಿಯಬಹುದು.

ರೈತರ ಅಜ್ಞಾನ ಮತ್ತು ಸರಕಾರದ ಅನಿವಾರ್ಯತೆಗಳಿಂದ ಮಣ್ಣಿನ ಉತ್ಪಾದನಾ ಸಾಮರ್ಥ್ಯವು ಕುಗ್ಗುತ್ತಾ ಸಾಗುತ್ತಿರುವುದು, ಹಲವೆಡೆ ಅದರಲ್ಲಿಯೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಂಡುಬರುತ್ತಿರುವುದು ಸಾಮಾನ್ಯ ದೃಶ್ಯ. ಫಲವತ್ತಾದ ಮಣ್ಣನ್ನು ಫಲದಾಯಕವನ್ನಾಗಿ ಪರಿವರ್ತಿಸಲು ಸಾಧ್ಯವಿದೆ ಎಂಬುವುದು ಸಮಾಧಾನವನ್ನು ತರುವ ಸಂಗತಿಯಾದರೂ ಈ ರೀತಿಯ ಬದಲಾವಣೆಯನ್ನು ಮಾಡಲು ಸುಸಂಬಂಧವಾದ ಯೋಜನೆ ಮತ್ತು ಅದನ್ನು ಶ್ರದ್ಧಾಭಾವದಿಂದ ಅನುಷ್ಠಾನಕ್ಕೆ ತರುವ ಮನಸ್ಸು ಅತ್ಯವಶ್ಯ. ಆದರೆ ಮಣ್ಣನ್ನು ಅವನತಿಗೆ ಹೋಗಲು ಬಿಟ್ಟು ಅನಂತರ ಅದನ್ನು ಉನ್ನತ ಮಟ್ಟಕ್ಕೆ ಏರಿಸುವ ಶ್ರಮದ ಮತ್ತು ಖರ್ಚಿನ ಕೆಲಸಕ್ಕೆ ಅಹ್ವಾನವೀಯುವ ಬದಲು ಮಣ್ಣಿನ ಉತ್ಪಾದಕತೆಯು ಸದಾ ಉನ್ನತ ಮಟ್ಟದಲ್ಲಿಯೇ ಇರುವಂತೆ ಸಮರ್ಥವಾಗಿ ನಿರ್ವಹಿಸುವುದೇ ಜಾಣತನವೆನ್ನವುದರಲ್ಲಿ ಸಂದೇಹವಿಲ್ಲ.