ಮಳೆ, ಉಷ್ಣತೆ, ಜೀವಿಗಳು ಮುಂತಾದವುಗಳ ಪ್ರಭಾವದಿಂದ ಭೂಮಿಯ ಹೊರ ಕವಚದಲ್ಲಿರುವ ಶಿಲೆಗಳು ಶಿಥಿಲಗೊಂಡು, ಮಣ್ಣಿನ ಮೂಲದ್ರವ್ಯವು ಸಿದ್ಧವಾಗಿ, ಇದರಿಂದ ಕಾಲಾಂತರದಲ್ಲಿ ಮಣ್ಣು ನಿರ್ಮಾಣಗೊಳ್ಳುತ್ತದೆಂದು ಹೇಳಬಹುದು. ಮಣ್ಣಿನ ನಿರ್ಮಾಣದ ಬಗ್ಗೆ ಚರ್ಚಿಸುವ ಮೊದಲು ಶಿಲೆಗಳು ಮತ್ತು ಅವುಗಳಿಂದ ನಿರ್ಮಿತವಾದ ಮಣ್ಣಿನ ಮೂಲದ್ರವ್ಯಗಳಿಗೆ ಸಂಬಂಧಿಸಿದ ಕೆಲವು ಮಹತ್ವದ ಸಂಗತಿಗಳನ್ನು ಅರಿತುಕೊಳ್ಳುವುದು ಪ್ರಯೋಜನಕಾರಿ.

ಶಿಲೆಗಳು :
ಸಾಮಾನ್ಯವಾಗಿ ಮೂರು ಬಗೆಯ ಶಿಲೆಗಳನ್ನು ಗುರುತಿಸಲಾಗಿದೆ

) ಅಗ್ನಿ ಶಿಲೆಗಳು : ಕೋಟ್ಯಾಂತರ ವರ್ಷಗಳ ಪೂರ್ವದಲ್ಲಿ ಪ್ರಥ್ವಿಯು ಕರಗಿದ ಸ್ಥತಿಯಲ್ಲಿರುವ ಹಲವು ದ್ರವ್ಯಗಳ (ಲಾವಾರಸದ) ಒಂದು ಬೃಹತ್ ರಾಶಿಯಾಗಿತ್ತೆಂದೂ ಅದು ತಣ್ಣಗಾಗುತ್ತಾ ಸಾಗಿದಂತೆ, ಭೂಮಿಯ ಹೊರಪದರಿನಲ್ಲಿ ಶಿಲೆಗಳು ಕಾಣಿಸಿಕೊಂಡವೆಂದೂ ನಂಬಲಾಗಿದೆ. ಈ ಶಿಲೆಗಳೇ ಅಗ್ನಿ ಶಿಲೆಗಳು. ಮೇಲಿನ ವಲಯದಲ್ಲಿರುವ ಲಾವಾರಸವು ಅಧಿಕ ವೇಗದಿಂದ ತಣಿದು ಸಿದ್ಧವಾದ ಅಗ್ನಿಶಿಲೆಗಳ ಕಣಗಳು ಆಕಾರದಲ್ಲಿ ಜಿನುಗಾಗಿವೆ. ಆದರೆ, ಭೂಮಿಯ ಒಳಸ್ತರದಲ್ಲಿರುವ ಲಾವಾರಸವು ನಿಧಾನವಾಗಿ ತಣಿದುದರಿಂದ ಅಲ್ಲಿ ನಿರ್ಮಾಣಗೊಂಡ ಶಿಲೆಗಳ ಕಣಗಳು ತುಲನಾತ್ಮಕವಾಗಿ ಉರುಟಾಗಿವೆ. ಇವೆರಡೂ ಬಗೆಯ ಶಿಲೆಗಳುಲ್ಲಿ, ಬೆಣಚುಕಲ್ಲಿನ ಕೆಲವು ಕಣಗಳಿರಬಹುದು ಅಥವಾ ಇಲ್ಲದಿರಬಹುದು. ಹೀಗಾಗಿ ಅಗ್ನಿ ಶಿಲೆಗಳನ್ನು ಕೆಳಗಿನಂತೆ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬಹುದು:

 • ಜಿನುಗು ಕಣಗಳ ಅಗ್ನಿ ಶಿಲೆಗಳು – ಬೆಣಚು ಕಲ್ಲಿನ ಕಣಗಳಿರುವ ಶಿಲೆಗಳು; ಬೆಣಚು ಕಲ್ಲಿನ ಕಣಗಳಿಲ್ಲದ ಶಿಲೆಗಳು.
 • ಉರುಟುಕಣಗಳ ಅಗ್ನಿ ಶಿಲೆಗಳು – ಬೆಣಚು ಕಲ್ಲಿನ ಕಣಗಳಿರುವ ಶಿಲೆಗಳು, ಬೆಣಚುಕಲ್ಲಿನ ಕಣಗಳಿಲ್ಲದ ಶಿಲೆಗಳು

. ನಿಕ್ಷೇಪಗೊಂಡ (ಮಡ್ಡಿ) ಶಿಲೆಗಳು : ಅಗ್ನಿ ಶಿಲೆ ಮತ್ತು ಇತರ ಶಿಲೆಗಳು ಸವಕಳಿ ಹೊಂದಿ ಅವುಗಳ ಕಣಗಳು, ನೀರು ಗಾಳಿ, ಹಿಮ ಅಥವಾ ಗುರುತ್ವಾಕರ್ಷಣೆಯ ಶಕ್ತಿಯ ಮೂಲಕ ಬೇರೆಡೆ ನಿಕ್ಷೇಪಗೊಂಡು, ಆ ಕಣಗಳು ಒಂದಕ್ಕೊಂದು ಅಂಟುವುದರಿಂದ ನಿಕ್ಷೇಪ ಶಿಲೆಗಳು ನಿರ್ಮಾಣಗೊಳ್ಳುತ್ತವೆ. ಉದಾಹರಣೆಗೆ, ಗ್ರಾನೈಟ್ ಶಿಲೆಯಲ್ಲಿರುವ ಬೆಣಚುಕಲ್ಲಿನ ಕಣಗಳು, ನೀರಿನ ಮೂಲಕ ಸಾಗಿಹೋಗಿ ನಿಕ್ಷೇಪಗೊಂಡು ಕಬ್ಬಿಣ, ಸಿಲಿಕಾನ್, ಅಥವಾ ಅಲ್ಯೂಮಿಯಂ ಇವುಗಳಲ್ಲೊಂದರ ಸಹಾಯದಿಂದ ಒಂದಕ್ಕೊಂದು ಅಂಟಿಕೊಂಡು, ಮರಳು ಕಲ್ಲು ಸಿದ್ಧವಾಗುತ್ತದೆ. ಸುಣ್ಣದಕಲ್ಲು, ಡೊಲೊಮೈಟ್, ಹಿಟ್ಟು ಕಲ್ಲು (ಶೇಲ್) , ಹರಳು ಕಲ್ಲು ಇತ್ಯಾದಿಗಳು ನಿಕ್ಷೇಪ ಶಿಲೆಯ ಇತರ ಉದಾಹರಣೆಗಳು.

. ಪರಿವರ್ತಿತ (ರೂಪಾಂತರಿತ) ಶಿಲೆಗಳು :ಅಗ್ನಿ ಶಿಲೆಗಳು ಮತ್ತು ನಿಕ್ಷೇಪಗೊಂಡ ಶಿಲೆಗಳು ಬೃಹತ್ಪ್ರಮಾಣದ ಒತ್ತಡ ಇಲ್ಲವೇ ಅತ್ಯಧಿಕ ಉಷ್ಣತೆಯ ಪ್ರಭಾವದಿಂದ ಬದಲಾವಣೆಗೊಂಡು, ಪರಿವರ್ತಿತ ಶಿಲೆಗಳು, ನಿರ್ಮಾಣಗೊಳ್ಳುತ್ತವೆ. ಒತ್ತಡ ಅಥವಾ ಉಷ್ಣತೆಯ ಪ್ರಭಾವವೂ ತೀವ್ರವಾಗಿದ್ದರೆ ಅಗ್ನಿಶಿಲೆಗಳು ನೀಸ್‌ಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಪ್ರಭಾವವೂ ಮಧ್ಯಮ ಸ್ವರೂಪದ್ದಾಗಿದ್ದರೆ ಶಿಸ್ಟ್ (ಪದರಕಲ್ಲು) ಶಿಲೆಯು ನಿರ್ಮಾಣಗೊಳ್ಳುತ್ತದೆ. ಅದರಂತೆಯೇ ನಿಕ್ಷೇಪಗೊಂಡ ಶಿಲೆಗಳಾದ ಮರಳು ಕಲ್ಲಿನಿಂದ ಕ್ವಾರ್ಝಾಯ್ಟ್, ಹಿಟ್ಟುಕಲ್ಲಿನಿಂದ ಪಾಟೀಕಲ್ಲು, ಸುಣ್ಣದ ಕಲ್ಲು ಇಲ್ಲವೇ ಡೊಲೊಮೈಟ್‌ನಿಂದ ಅಮೃತಶಿಲೆ ಸಿದ್ಧವಾಗುತ್ತವೆ.

ಶಿಲೆಗಳಲ್ಲಿಸವಕಳಿಯನ್ನುಂಟುಮಾಡುವಕ್ರಿಯೆಗಳು:

ಹಲವು ಬಗೆಯ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಂದ ಶಿಲೆಗಳು ಶಿಥಿಲಗೊಂಡು ಸಣ್ಣ ಮತ್ತು ದೊಡ್ಡ ತುಣುಕುಗಳಾಗುತ್ತವೆ. ಖನಿಜಗಳು ಹೊರ ಬರುತ್ತವೆ. ಹೊಸ ಖನಿಜಗಳು ಸಂಯೋಜನೆಗೊಳ್ಳುತ್ತವೆ; ಮಣ್ಣಿನ ಮೂಲದ್ರವ್ಯಗಳು ಸಿದ್ಧವಾಗುತ್ತವೆ ಮತ್ತು ಈ ದ್ರವ್ಯಗಳಿಂದ ಮಣ್ಣು ನಿರ್ಮಾಣಗೊಳ್ಳುತ್ತದೆ. ಇಂತಹ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳ ವಿವರಗಳು ಕೆಳಗಿನಂತಿವೆ:

) ಭೌತಿಕ ಕ್ರಿಯೆಗಳು :

 • ಉಷ್ಣತೆಯ ಪರಿಣಾಮಗಳು : ಶಿಲೆಗಳಲ್ಲಿ ಹಲವು ಗುಣಧರ್ಮಗಳಿರುವ ಖನಿಜಗಳಿರುತ್ತವೆ. ಬಿಸಿಲಿನಲ್ಲಿ ಈ ಖನಿಜಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಪ್ರಸರಣಗೊಳ್ಳು(ಹಿಗ್ಗು)ತ್ತವೆ. ಅದರಂತೆಯೇ ರಾತ್ರಿಯ ತಂಪು ಹವಾಮಾನದಿಂದ ವಿವಿಧ ಪ್ರಮಾಣದಲ್ಲಿ ಅಕುಂಚನಗೊಳ್ಳುತ್ತವೆ. ಸುದೀರ್ಘ ಸಮಯದವರೆಗೆ ನಡೆಯುವ ಈ ಕ್ರಿಯೆಗಳಿಂದ ಶಿಲೆಗಳು ಶಿಥಿಲಗೊಂಡು ಅದರಲ್ಲಿ ಸೀಳುಗಳಾಗಿ, ಕೆಲವು ಸಮಯದ ನಂತರ ಹೋಳಾಗುತ್ತವೆ. ಅತಿ ಕಡಮೆ ಉಷ್ಣಾತಾಮಾನವಿರುವ ಪ್ರದೇಶಗಳಲ್ಲಿ, ಕಲ್ಲಿನ ಬಿರುಕುಗಳೊಳಗೆ ಸೇರಿಕೊಂಡ ನೀರು, ರಾತ್ರಿಯ ತಂಪು ಹವಾಮಾನದಿಂದ ಹೆಪ್ಪುಗಟ್ಟಿತೆಂದರೆ ಬೃಹತ್ ಪ್ರಮಾಣದಲ್ಲಿ ಒತ್ತಡವುಂಟಾಗಿ ಶಿಲೆಗಳು ಒಡೆದು ಹೋಳಾಗುತ್ತವೆ.
 • ಮಳೆ, ಹಿಮ ಮತ್ತು ಗಾಳಿ ಇವುಗಳ ಪ್ರಭಾವ : ಮಳೆಯ ಹನಿಗಳು ರಭಸದಿಂದ ಸಾಗಿ ಬಂದು ಭೂಮಿಯನ್ನು ಅಪ್ಪಳಿಸುತ್ತವೆ. ಸಂಗ್ರಹವಾದ ನೀರು ಇಳಿಜಾರಿನ ಗುಂಟ ಹರಿದುಹೋಗುವಾಗ ತನ್ನ ಸಾಮರ್ಥ್ಯಕ್ಕನುಗುಣವಾಗಿ ವಿವಿಧ ಪ್ರಮಾಣದಲ್ಲಿ ಶಿಲೆ ಮತ್ತು ಖನಿಜಗಳ ಸಣ್ಣ – ದೊಡ್ಡ ಕಣಗಳನ್ನು ತನ್ನೊಡನೆ ಎಳೆದೊಯ್ಯುತ್ತದೆ. ಹರಿಯುವ ನೀರಿನ ಹೆಚ್ಚಿನ ರಭಸಕ್ಕೊಳಗಾದ ಈ ಕಣಗಳು ಒಂದಕ್ಕೊಂದು ಘರ್ಷಣೆಗೊಂಡು ಸಣ್ಣದಾಗುತ್ತಾ ಸಾಗುತ್ತವಲ್ಲದೇ ಗೋಲಾಕಾರವನ್ನು ತಳೆಯುತ್ತವೆ.

ಹಲವು ಸಹಸ್ರಮಾನಗಳ ಮೊದಲು ವಿಶ್ವದ ವಿವಿಧ ಪ್ರದೇಶಗಳಲ್ಲಿ ಹಿಮನದಿಗಳು ಕ್ರಿಯಾಶೀಲವಾಗಿದ್ದವು. ಇವು ತಮ್ಮ ಅಪಾರವಾದ ಭಾರ ಮತ್ತು ಶಕ್ತಿಗೆ ಸಿಲುಕಿದ ಶಿಲೆ ಮತ್ತು ಖನಿಜಗಳನ್ನು ಪುಡಿ ಪುಡಿ ಮಾಡುತ್ತ ಬಹುದೂರದವರೆಗೆ ಎಳೆದೊಯ್ದವು. ಇತ್ತೀಚಿನ ವರ್ಷಗಳಲ್ಲಿ ಹಿಮನದಿಗಳು ಕಾಣಿಸಿಕೊಂಡಿಲ್ಲವಾದರೂ, ಪುರಾತನ ಕಾಲದಲ್ಲಿ ಹಿಮನದಿಗಳು ಸಾಗಿಸಿ ತಂದ ಮಣ್ಣಿನ ಮೂಲದ್ರವ್ಯಗಳು ಲಕ್ಷಾನುಲಕ್ಷ ಹೆಕ್ಟೇರು ಪ್ರದೇಶಗಳಲ್ಲಿ ಇಂದಿಗೂ ಕಂಡುಬರುತ್ತವೆ.

ಗಾಳಿಯೂ ಒಂದು ಪ್ರಬಲವಾದ ಶಕ್ತಿಯೆನ್ನಬಹುದು. ಭರದಿಂದ ಬೀಸುವ ಬಿರುಗಾಳಿಯು ತನ್ನೊಡನೆ ಬಹುದೊಡ್ಡ ಪ್ರಮಾಣದಲ್ಲಿ ಶಿಲೆ – ಖನಿಜ ಕಣಗಳನ್ನು ಎತ್ತಿ, ಮೇಲೊಯ್ದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುತ್ತದೆ. ಈ ಸಂದರ್ಭದಲ್ಲಿ ಕಣಗಳು ಒಂದಕ್ಕೊಂದು ಘರ್ಷಣೆಗೊಂಡು ಪುಡಿಪುಡಿಯಾಗುತ್ತವಲ್ಲದೇ ಗೋಲಾಕಾರವನ್ನೂ ಪಡೆಯುತ್ತವೆ. ಗಾಳಿಯಿಂದ ಆಗುವ ಸವಕಳಿಯನ್ನು, ಸಾಮಾನ್ಯವಾಗಿ ಶುಷ್ಕ ಪ್ರದೇಶದಲ್ಲಿ ಕಾಣಬಹುದು.

 • ಜೀವಿಗಳ ಪ್ರಭಾವ : ಹಾವಸೆ ಮತ್ತು ಇತರೆ ಕೆಳವರ್ಗದ ಸಸ್ಯಗಳ ಶಿಲೆಗಳ ಮೇಲೆ ತಮ್ಮ ಜೀವನವನ್ನು ಆರಂಭಿಸುತ್ತವೆ. ಗಾಳಿಯಿಂದ ಹಾರಿ ಬಂದ ಧೂಳಿನ ಕಣಗಳನ್ನು ಹಿಡಿದಿಟ್ಟುಕೊಂಡು ಈ ಮಾಧ್ಯಮದಲ್ಲಿ ಅಭಿವೃದ್ಧಿ ಹೊಂದುತ್ತವೆ. ಈ ಸಸ್ಯಗಳ ಸಮ್ಮುಖದಲ್ಲಿ ಶಿಲೆಗಳು ಕೆಲವು ಮಟ್ಟಿಗೆ ಸವಕಳಿಗೊಳ್ಳುತ್ತವೆ. ಇದರಂತೆಯೇ ಮೇಲ್ವರ್ಗದ ಗಿಡಮರಗಳ ಬೇರುಗಳು ಸಂಪರ್ಕದಿಂದಲೂ ಶಿಲೆಗಳು ಸವಕಳಿಗೀಡಾಗುತ್ತವೆ. ಆದರೆ ಈ ಜೀವಿಗಳು ಸವಕಳಿಯನ್ನುಂಟು ಮಾಡುವದಲ್ಲಿ ಮೇಲೆ ಹೇಳಿದ ಉಷ್ಣತೆ, ನೀರು ಮತ್ತು ಗಾಳಿಗಳಷ್ಟು ಪ್ರಭಾವಶಾಲಿಗಳಲ್ಲ.

. ರಾಸಾಯನಿಕ ಕ್ರಿಯೆಗಳು :

ಭೌತಿಕ ಕ್ರಿಯೆಗಳು ಆರಂಭವಾಗುತ್ತಿದ್ದಂತೆಯೇ ರಾಸಾಯನಿಕ ಕ್ರಿಯೆಗಳೂ ಪ್ರಾರಂಭವಾಗುತ್ತವೆ. ಆರ್ದ್ರ – ಉಷ್ಣವಲಯಗಳಲ್ಲಂತೂ ಈ ಎರಡೂ ಕ್ರಿಯೆಗಳು ತೀವ್ರಗತಿಯಿಂದ ಸಾಗುತ್ತವೆಯಲ್ಲದೆ ಒಂದಕ್ಕೊಂದು ಪೂರಕವಾಗಿ ಕಾರ್ಯನಿರತವಾಗಿರುತ್ತವೆ. ರಾಸಾಯನಿಕ ಕ್ರಿಯೆಗಳು ಭರದಿಂದ ಸಾಗಬೇಕಾದರೆ ಮುಂದಿನ ಅಂಶಗಳು ಅವಶ್ಯಕವಾಗಿವೆ:

 • ನೀರು :ಹಲವು ವಸ್ತುಗಳನ್ನು ಕರಗಿಸಬಲ್ಲ ದ್ರವ.
 • ಆಮ್ಲಜನಕ : ಹವೆಯಲ್ಲಿರುವ ಪ್ರಮುಖವಾದ ಕ್ರೀಯಾಶೀಲ ವಾಯು
 • ನಿರವಯವ ಆಮ್ಲಗಳು: ಮಿಂಚಿನಿಂದ ದೊರೆಯುವ ಉಷ್ಣತೆ, ಹವೆಯಲ್ಲಿರುವ ಸಾರಜನಕ ಮತ್ತು ಆಮ್ಲ ಜನಕ ವಾಯುಗಳು ಸಂಯೋಜನೆಗೊಂಡು ಸಿದ್ಧವಾದ ನೈಟ್ರೀಕ್ ಆಮ್ಲ.
 • ಸಾವಯವ ಆಮ್ಲಗಳು : ಸಾವಯವ ಪದಾರ್ಥಗಳು ಸೂಕ್ಷ್ಮ ಜೀವಿಗಳ ಕ್ರಿಯೆಗಳಿಂದ ಕಳಿಯುವಾಗ ನಿರ್ಮಾಣಗೊಳ್ಳುವ ಹಲವು ಬಗೆಯ ಆಮ್ಲಗಳು.

ಮಣ್ಣಿನ ನಿರ್ಮಾಣದಲ್ಲಿ ಪ್ರಮುಖಪಾತ್ರ ವಹಿಸುವ ಕೆಲವು ಮುಖ್ಯವಾದ ರಾಸಾಯನಿಕ ಕ್ರಿಯೆಗಳ ವಿವರಗಳು ಕೆಳಗಿನಂತಿವೆ :

. ಉತ್ಕರ್ಷಣೆ: ಯಾವುದೇ ಧಾತುವಿನೊಡನೆ ಆಮ್ಲಜನಕ ಸಂಯೋಜನೆ ಹೊಂದುವ ಅಥವಾ ಯಾವುದೇ ಸಂಯುಕ್ತ ವಸ್ತುವಿನಲ್ಲಿಯ ಆಮ್ಲಜನಕದ ಪ್ರಮಾಣವನ್ನು ಅಧಿಕಗೊಳಿಸುವ ಕಾರ್ಯಕ್ಕೆ ಉತ್ಕರ್ಷಣೆಯೆನ್ನುತ್ತಾರೆ. ಬಯೋಟೈಟ್, ಹಾರ‍್ನಬ್ಲೆಂಡ್ ಮುಂತಾದ ಖನಿಜಗಳಿರುವ ಶಿಲೆಗಳಲ್ಲಿ ಕಬ್ಬಿಣವು ಫೆರಸ್ ರೂಪದಲ್ಲಿರುತ್ತದೆ. ಫೆರಸ್ ರೂಪದ ಕಬ್ಬಿಣವು, ಆಮ್ಲಜನಕದೊಂದಿಗೆ ಸಂಯೋಜನೆ ಹೊಂದಿ ಉತ್ಕರ್ಷಣೆಗೊಂಡು ಫೆರಿಕ್ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ. ಈ ಕ್ರಿಯೆಯಿಂದ ಶಿಲೆಯಲ್ಲಿ ಕೆಲವು ಬದಲಾವಣೆಗಳು ಆಗುತ್ತವೆಯಾದ್ದರಿಂದ ಶಿಲೆಯು ಅಸ್ಥಿರಗೊಳ್ಳುತ್ತದೆ. ಇದರಿಂದ ಶಿಲೆಯ ಮೇಲೆ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳು ಭರದಿಂದ ಸಾಗಲು ಅನುವು ದೊರೆಯುತ್ತದೆ. ಉದಾಹರಣೆಗೆ:

ಕಬ್ಬಿಣ (ಖನಿಜದೊಳಗಿನ) + ಆಮ್ಲಜನಕ = ಫೆರಸ್ ಆಕ್ಸೈಡ್
2Fe (in the mineral) + O2 = 2FeO
ಫೆರಸ್ ಆಕ್ಸೈಡ್ + ಆಮ್ಲಜನಕ = ಫೆರಿಕ್ ಆಕ್ಸೈಡ್ (ಹೇಮಟೈಟ್)
4FeO +O2 = 2Fe2O3 (Hematite)

ಕೆಲವು ಸಂದರ್ಭಗಳಲ್ಲಿ ಜಲೋತ್ಕರ್ಷಣೆಯಿಂದ ಖನಿಜದೊಳಗಿರುವ ಫೆರಸ್ ರೂಪದ ಕಬ್ಬಿಣವು ಹೊರಬೀಳುತ್ತದೆ. ತಕ್ಷಣವೇ ಈ ಕಬ್ಬಿಣವು ಉತ್ಕರ್ಷಣೆಗೊಂಡು ಫೆರಿಕ್ ರೂಪಕ್ಕೆ ಬದಲಾಗುತ್ತದೆ. ಉದಾಹರಣೆಗೆ –

ಓಲಿವಿನ್‌+ ನೀರು =ಸರ್ಪೆಂಟೈನ್‌+ ಸಿಲಿಕಾ ಆಕ್ಸೈಡ್ + ಫೆರಸ್ ಆಕ್ಸೈಡ್
3Mg Fe SiO4 + 2H2O= H4 Mg3 Si2O9 + SiO2 + 3FeO
ಫೆರಸ್ ಆಕ್ಸೈಡ್ + ಆಮ್ಲಜನಕ + ನೀರು = ಗೋಯೆಥೈಟ್ ಖನಿಜ
4FeO+ O2 + 2H2O = 4 FeOOH (Geothite)

ಮೇಲೆ ವಿವರಿಸಿದಂತೆ, ಯಾವುದೇ ಖನಿಜದಿಂದ ಫೆರಸ್ ರೂಪದ ಕಬ್ಬಿಣವು ಹೊರಬಂದಾಗ ಅಥವಾ ಖನಿಜದಲ್ಲಿದ್ದಂತೆಯೇ ಉತ್ಕರ್ಷಣೆಗೊಂಡಾಗ ಸಂಬಂಧಿಸಿದ ಖನಿಜವಾದ ರಚನೆಯು ಶಿಥಿಲವಾಗುತ್ತದೆ. ಹೀಗಾಗುವುದರಿಂದ ಆ ಖನಿಜದ ಮೇಲೆ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳು ವೇಗದಿಂದ ಮುಂದುವರೆಯಲು ಅಸ್ಪದವಾಗುತ್ತದೆ.

. ಅಪಕರ್ಷಣೆ : ಅಪಕರ್ಷಣೆಯು ಉತ್ಕರ್ಷಣೆಯ ವಿರುದ್ಧ ಕ್ರಿಯೆ. ಆಮ್ಲಜನಕ ಪೂರೈಕೆಯು ಇಲ್ಲದಿದ್ದಾಗ ಈ ಕ್ರಿಯೆಯು ನಡೆಯುತ್ತದೆ. ಭೂಮಿಯ ಆಳದಲ್ಲಿ ಆಮ್ಲಜನಕ ಕೊರತೆಯು ಇರುವುದರಿಂದ ಅಲ್ಲಿ ಅಪಕರ್ಷಣೆಯ ಕ್ರಿಯೆಯನ್ನು ಕಾಣಬಹುದು. ಅದರಂತೆಯೇ ಮಣ್ಣಿನಿಂದ ನೀರು ಬಸಿದುಹೋಗದೇ ಆಮ್ಲಜನಕದ ಕೊರತೆಯಾಗುವುದರಿಂದ ಇಲ್ಲವೇ ಸಾವಯವ ಪದಾರ್ಥಗಳು ಕಳಿಯುತ್ತಿರುವಾಗ ಹೊರ ಬರುವ ಇಂಗಾಲಾಮ್ಲ ವಾಯುವಿನ (ಇಂಗಾಲದ ಡೈ ಆಕ್ಸೈಡ್) ಪ್ರಾಬಲ್ಯದಿಂದ ಆಮ್ಲಜನಕದ ಪೂರೈಕೆಯು ಕುಗ್ಗಿ ಅಪಕರ್ಷಣ ಕ್ರಿಯೆಯು ನಡೆಯುತ್ತದೆ.

. ಜಲ ವಿಶ್ಲೇಷಣೆ : ನೀರು ಅತಿ ಕ್ರಿಯಾಶೀಲ ದ್ರವ. ಆದ್ದರಿಂದ ಖನಿಜಗಳ ಮೇಲೆ ನೀರಿನ ಹಲವು ಕ್ರಿಯೆಗಳು ನಡೆಯುವುದು ಸ್ವಾಭಾವಿಕ. ಈ ಕ್ರಿಯೆಯು ಬಹು ಮಹತ್ವದ್ದೆನಿಸಿದೆ. ಇಲ್ಲಿ ನೀರಿನಲ್ಲಿರುವ ಜನಜನಕ ಅಯಾನ್, ಸಂಯುಕ್ತ ವಸ್ತುವಿನಲ್ಲಿರುವ ಧನ ಅಯಾನ್‌ನೊಡನೆ ಸ್ಥಾನಪಲ್ಲಗೊಳ್ಳುತ್ತದೆ. ಈ ಮುಂದಿನ ಉದಾಹರಣೆಯಿಂದ ಇದು ಸ್ಪಷ್ಟವಾಗುತ್ತದೆ.

ಮೈಕ್ರೋಕ್ಲೈಯ್ನ್ + ನೀರು = ಹೈಡ್ರೋಜನ್‌ಅಲ್ಯೂಮಿನಿಯಂ ಸಿಲಿಕೇಟ್ + ಪೊಟ್ಯಾಸಿಯಂ ಹೈಡ್ರಾಕ್ಸೈಡ್
KAISi3O8 + HOH = HA/Si3O3+KOH
ಹೈಡ್ರೋಜನ ಅಲ್ಯೂಮಿನಿಯಂ ಸಿಲಿಕೇಟ್+ ನೀರು = ಅಲ್ಯೂಮಿನಿಯಂ ಆಕ್ಸೈಡ್ + ಸಿಲಿಕ್ ಆಮ್ಲ
2HA/Si3O8 + 8HOH = Al2O3. 3H2O + 6H2SiO3

ಮೊದಲಿನ ಸಮೀಕರಣದಲ್ಲಿ ತೋರಿಸಿದಂತೆ ಹೊರ ಬಂದ ಪೋಟ್ಯಾಸಿಯಂ ಹೈಡ್ರಾಕ್ಸೈಡ್ ನಲ್ಲಿರುವ ಪೋಟ್ಯಾಸಿಯಂ.

 • ಮಣ್ಣಿನಲ್ಲಿರುವ ಎರೆಕಣಗಳ ಹೊರ ಮೈ ಸುತ್ತ ಅಂಟಿಕೊಳ್ಳಬಹುದು ಅಥವಾ
 • ಸಸ್ಯಗಳು ಪೋಟಯಾಸಿಯಂ ಅನ್ನು ಹೀರಿಕೊಳ್ಳಬಹುದು ಇಲ್ಲವೇ
 • ಈ ಪೋಷಕಾಂಶವು ನೀರಿನಲ್ಲಿ ಕರಗಿ ಭೂಮಿಯಾಳಕ್ಕೆ ಬಸಿದುಹೋಗಬಹುದು. ಅಲ್ಯೂಮಿನಿಯಂ ಮತ್ತು ಸಿಲಿಕಾನ್‌ಇವು – ಅಥವಾ
 • ಸಂಯುಕ್ತ ವಸ್ತುವಾಗಿ ಪರಿವರ್ತನೆಗೊಂಡು ಮಣ್ಣಿನಲ್ಲಿಯೇ ಉಳಿಯಬಹುದು. ಅಥವಾ
 • ಇವುಗಳಿಂದ ಕೆ ಓಲಿನ್‌ನಂಥ ಹೊಸ ಖನಿಜಗಳು ನಿರ್ಮಾಣಗೊಳ್ಳಬಹುದು ಇಲ್ಲವೇ,
 • ಇವುಗಳಿಂದ ಬಸಿಯುವ ನೀರಿನಗುಂಟ ಭೂಮಿಯಾಳಕ್ಕೆ ಇಳೀದುಹೋಬಗಹುದು.

. ಜಲೋತ್ಕರ್ಷಣೆ (ಜಲಸಂಯುಕ್ತತತೆ) : ಜಲೋತ್ಕರ್ಷಣೆಯಲ್ಲಿ ನೀರು ಖನಿಜದೊಡನೆ ಪ್ರತಿಕ್ರಿಯೆಗೊಂಡು ಹೊಸ ಖನಿಜವು ನಿಮಾಣವಾಗುತ್ತದೆ. ನೀರು ಈ ಹೊಸ ಖನಿಜದಲ್ಲಿ ಸ್ಫಟಿಕ ಜಲವಾಗಿ ಉಳಿದುಕೊಳ್ಳುತ್ತದೆ. ಕೆಳಗಿನ ಕ್ರಿಯೆಯು ಜಲೋತ್ಕರ್ಷಣೆಯ ಒಂದು ಉತ್ತಮ ನಿದರ್ಶನವೆನ್ನಬಹುದು.

ಹೆಮಟೈಟ್ + ನೀರು = ಲಿಮೋನೈಟ್
(ಕೆಂಪು ಬಣ್ಣದ ಖನಜಿ) – (ಹಳದಿ ಬಣ್ಣದ ಖನಿಜ)
2Fe2O3 + 3H2O = 2FeO3 3H2O

ಜಲೋತ್ಕರ್ಷಣೆಗೊಂಡ ಲಿಮೋನೈಟ್ ಖನಿಜವು ಕಾರಣಾಂತರಗಳಿಂದ ಒಣಗಿದರೆ ಅದು ಬದಲಾವಣೆಗೊಂಡು ಮೊದಲಿನ ರೂಪಕ್ಕೆ, ಅಂದರೆ ಕೆಂಪು ಬಣ್ಣದ ಹೆಮಟೈಟ್ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ. ಜಲೋತ್ಕರ್ಷಣೆಯಿಂದ ಖನಿಜಗಳು ಶಿಥಿಲಗೊಂಡು ಅವುಗಳ ಮೇಲೆ ಇತರೆ ರಾಸಾಯನಿ ಕ್ರಿಯೆಗಳು ನಡೆಯಲು ಅನುವು ದೊರೆಯುತ್ತದೆ.

. ಆಮ್ಲದ ಪ್ರಭಾವ : ಮಣ್ಣಿನಲ್ಲಿರುವ ಹವೆಯಲ್ಲಿ ಇಂಗಾಲದ ಡೈ ಆಕ್ಸೈಡ್ ಇರುತ್ತದೆ. ಸಸ್ಯದ ಬೇರುಗಳು ಉಸಿರಾಡುವುದರಿಂದ ಇದು ಹೊರ ಬರುತ್ತದೆ. ಅಲ್ಲದೇ, ಮಣ್ಣಿನಲ್ಲಿರುವ ಸಾವಯವ ಪದಾರ್ಥವು ಸೂಕ್ಷ್ಮ ಜೀವಿಗಳ ಕ್ರಿಯೆಯಿಂದ, ಕಳಿಯುವಾಗಲೂ ಇದು ನಿರ್ಮಾಣವಾಗುತ್ತದೆ. ಹೀಗಾಗಿ ವಾತಾವರಣದಲ್ಲಿಯ ಹವೆಗಿಂತ ಮಣ್ಣಿನೊಳಗೆ ಈ ವಾಯುವಿನ ಪ್ರಮಾಣವು ಹಲವಾರು ಪಟ್ಟು ಅಧಿಕಗೊಳ್ಳುತದೆ. ಇದು ನೀರಿನೊಡನೆ ಸೇರಿ ಇಂಗಾಲಾಮ್ಲವಾಗುತ್ತದೆ. ಇದು ಕಾರ್ಬೊನೇಟ್ ಇರುವ ಖನಿಜದೊಡನೆ ಪ್ರತಿಕ್ರಿಯೆಗೊಂಡು, ಸಂಬಂಧಿಸಿದ ಶಿಲೆಗಳನ್ನು ದುರ್ಬಲಗೊಳಿಸಿ ಅವುಗಳ ಸವಕಳಿಗೆ ಕಾರಣೀಭೂತವಾಗುತ್ತದೆ.

ಸುಣ್ಣದ ಕಲ್ಲಿನಲ್ಲಿರುವ ಕ್ಯಾಲ್ಸೈಟ್ (ಘನರೂಪ) + ಇಂಗಾಲಾಮ್ಲ (ದ್ರಾವಣ) = ಕ್ಯಾಲ್ಸಿಯಂ ಅಯಾನ್‌+ ಬೈಕಾರ್ಬೊನೆಟ್ ಅಯಾನ್‌(ದ್ರಾವಣದಲ್ಲಿ)
CaCO3 + H2CO3 = Ca+2 + HCO3

ಇದಲ್ಲದೇ ಆಮ್ಲ ಮಣ್ಣಿನಲ್ಲಿರುವ ಎರೆ ಕಣಗಳು ಘನ ರೂಪದಲ್ಲಿರುವ ಕೆಲವು ಖನಿಜಗಳೊಡನೆ ಸಂಪರ್ಕ ಹೊಂದಿದವೆಂದರೆ ಆ ಖನಿಜಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಅಯಾನ್‌ ರೂಪದಲ್ಲಿ ಹೊರ ಬರುವಂತೆ ಮಾಡುತ್ತವೆ. ಉದಾಹರಣೆಗೆ, ಕ್ಯಾಲ್ಸಿಯಂ ಅನ್ನು ಹೊಂದಿದ ಅನಾರ್ಥೈಟ್ ಎಂಬ ಖನಿಜದೊಡನೆ ಆಮ್ಲ ಮಣ್ಣಿನಲ್ಲಿರುವ ಎರೆ ಕಣಗಳ ಸಂಪರ್ಕ ಬಂದಾಗ ಮುಂದಿನ ಕ್ರಿಯೆಯು ನಡೆಯುತ್ತದೆ.

ಅನಾರ್ಥೈಟ್ (ಘನರೂಪ)

+

ಆಮ್ಲ ಎರೆ ಕಣಗಳು (ಘನರೂಪ)

=

ಆಮ್ಲಯುತ ಸಿಲಿಕೇಟ್ (ಘನರೂಪ)

+

ಕ್ಯಾಲ್ಸಿಯಂ ಎರೆ (ಘನರೂಪ)

CaI2 Si2 O8

+

H+

 – – >

H2AI2Si2O8

+

Ca+2

H+

Clay

Clay

ಆಮ್ಲಯುತ ಎರೆಯ ಮೇಲಿರುವ ಜನಜನಕ ಅಯಾನ್, ಖನಿಜದಲ್ಲಿರುವ ಕ್ಯಾಲ್ಸಿಯಂನ ಸ್ಥಳವನ್ನು ಆಕ್ರಮಿಸಿ ಕ್ಯಾಲ್ಸಿಯಂ ಅನ್ನು ಹೊರ ಹಾಕುತ್ತದೆ. ಈ ಕ್ಯಾಲ್ಸಿಯಂ, ಎರೆಯ ಹೊರ ಮೈಯಲ್ಲಿ ಮೊದಲು ಜನಜನಕವಿದ್ದ ಸ್ಥಳದ ಮೇಲೆ ಹೋಗಿ ಕೂಡುತ್ತದೆ. ಈ ಕ್ರಿಯೆಯಿಂದ ಖನಿಜವು ದುರ್ಬಲಗೊಂಡು ಹಲವು ರಾಸಾಯನಿಕ ಕ್ರಿಯೆಗಳು ಆರಂಭವಾಗಲು ಆಸ್ಪದವಾಗುತ್ತದೆ.

ಹಿಂದೆ ವಿವವರಿಸಿದ ವಿವಿಧ ರಾಸಾಯನಿಕ ಕ್ರಿಯೆಗಳು ಒಂದನ್ನೊಂದು ಅವಲಂಬಿಸಿವೆ ಮತ್ತು ಅವು ಏಕ ಕಾಲದಲ್ಲಿ ಸಾಗುತ್ತಿರುತ್ತವೆ ಎಂಬುವುದನ್ನು ನೆನಪಿನಲ್ಲಿಡಬೇಕು.

ಮಣ್ಣಿನಮೂಲದ್ರವ್ಯ :

ಶಿಲೆಯ ಮೇಲ್ಬಾಗದಲ್ಲಿ, ಆದರೆ ಮಣ್ಣಿನ ಕೆಳಗೆ ಇರುವ ಸಡಿಲಗೊಂಡ ಶಿಲೆಗಳು ಮತ್ತು ಪ್ರತ್ಯೇಕವಾಗಿರುವ ಖನಿಜಗಳ ದ್ರವ್ಯರಾಶಿಗೆ ಮಣ್ಣಿನ ಮೂಲದ್ರವ್ಯ ಎಂದು ಹೆಸರು. ಸಾಮಾನ್ಯವಾಗಿ ಈ ಮೂಲದ್ರವ್ಯದಿಂದಲೇ ಮಣ್ಣು ನಿರ್ಮಾಣಗೊಳ್ಳುತ್ತದೆ ಎಂದು ಹೇಳಬಹುದು. ಮೇಲೆ ವಿವರಿಸಿದ ಹಲವು ಭೌತಿಕ ಕ್ರಿಯೆಗಳಿಂದ ಶಿಲೆಗಳಲ್ಲಿರುವ ಮೂಲ ಖನಿಜಗಳು ಪ್ರತ್ಯೆಕಗೊಂಡು, ಶಿಲೆಗಳು ಶಿಥಿಲಗೊಳ್ಳುತ್ತವೆ. ಶಿಲೆಗಳ ಕಣಗಳ ಮಧ್ಯದಲ್ಲಿರುವ ಬಂಧವನ್ನು ಸಡಿಲಿಸುವಲ್ಲಿ ರಾಸಾಯನಿಕ ಕ್ರಿಯೆಗಳು ಸಹಯಕಾರಿಯಾಗುತ್ತವೆಯಾದರೂ ಮಣ್ಣಿನ ಮೂಲ ದ್ರವ್ಯದ ನಿರ್ಮಾಣದಲ್ಲಿ ಭೌತಿಕ ಕ್ರಿಯೆಗಳದೇ ಮೇಲುಗೈ ಎನ್ನುವುದನ್ನು ಗಮನಿಸಬೇಕು.

ಮಣ್ಣಿನಮೂಲದ್ರವ್ಯದವರ್ಗೀಕರಣ :

ಭೂರಚನಾ ಶಾಸ್ತ್ರದಲ್ಲಿ ಹೇಳಿದ ಪ್ರಕಾರ ಮಣ್ಣಿನ ಮೂಲದ್ರವ್ಯದ ವರ್ಗೀಕರಣ ಮತ್ತು ಪ್ರತಿ ವರ್ಗದ ಸಂಕ್ಷಿಪ್ತ ವಿವರಗಳು ಕೆಳಗಿನಂತಿವೆ :

೧. ಸ್ವ ಸ್ಥಾನದಲ್ಲಿಯೇ ಉಳಿದುಕೊಂಡ ಅವಶಿಷ್ಟ ದ್ರವ್ಯಗಳು.

೨. ಸಾಗಣೆಗೊಂಡ (ಸಂವಾಹಿತ) ಮೂಲದ್ರವ್ಯಗಳು.

ಅ. ಗುರುತ್ವಾಕರ್ಷಣೆಯಿಂದ ಸಾಗಣೆಗೊಂಡ ದ್ರವ್ಯ

ಆ. ನೀರಿನಿಂದ ಸಾಗಣೆಗೊಂಡ ದ್ರವ್ಯ – (ನದಿಯ ನೀರಿನಿಂದ ಸಾಗಿತ ದ್ರವ್ಯ: – ಸರೋವರಗಳಲ್ಲಿ ಮತ್ತು ಸಮುದ್ರಗಳಲ್ಲಿ ನಿಕ್ಷೇಪಗೊಂಡ ದ್ರವ್ಯ.

ಇ. ಹಿಮಸಾಗಿತ ದ್ರವ್ಯ

ಈ. ಗಾಳಿಸಾಗಿತ ದ್ರವ್ಯ

. ಸ್ವಸ್ಥಾನದಲ್ಲಿಯೇ ಉಳಿದುಕೊಂಡ ಅವಶಿಷ್ಟ ದ್ರವ್ಯಗಳು:

 • ಈ ಬಗೆಯ ಮೂಲದ್ರವ್ಯಗಳು ದೀರ್ಘ ಕಾಲದವರೆಗೆ ಒಂದೇ ಸ್ಥಳದಲ್ಲಿ ಉಳಿದುಕೊಂಡಿರುವುದರಿಂದ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳು ಈ ದ್ರವ್ಯದ ಮೇಲೆ ಬಹುಕಾಲದವರೆಗೆ ನಡೆದಿರುತ್ತವೆ.
 • ಅಧಿಕ ಮಳೆಯಾಗುವ ಉಷ್ಣ ಪ್ರದೇಶದಲ್ಲಿಯ ಮೂಲದ್ರವ್ಯದೊಡನೆ ಇರುವ ಕ್ಯಾಲ್ಸಿಯಂ, ಮೆಗ್ನೀಸಿಯಂ ಮೊದಲಾದ ಪ್ರತ್ಯಾಮ್ಲಗಳು ಬಸಿದುಹೋಗಿ ಕಬ್ಬಿಣದ ಆಕ್ಸೈಡ್ ಗಳು ಉಳಿದುಕೊಂಡಿರುವುದರಿಂದ, ಈ ದ್ರವ್ಯ ಹಳದಿ ಮತ್ತು ಕೆಂಪು ಬಣ್ಣವು ಬಂದಿರುತ್ತದೆ.
 • ಮಳೆಯ ಪ್ರಮಾಣವು ಕಡಿಮೆಯಿರುವ ತಂಪು ಪ್ರದೇಶಗಳಲ್ಲಿ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳು ಅಷ್ಟೂ ತೀಕ್ಷ್ಣವಾಗಿ ನಡೆಯದಿರುವುದರಿಂದ, ಮೂಲ ದ್ರವ್ಯಗಳಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಗಳ ಪ್ರಮಾಣವು ಕಡಮೆಯಾಗುವುದಿಲ್ಲ. ಇಲ್ಲಿ ಕಬ್ಬಿಣದ ಆಕ್ಸೈಡ್ ಕಾಣಿಸಿಕೊಳ್ಳುವುದು ಅತಿ ವಿರಳ.

. ಸಾಗಣೆಗೊಂಡ ಮೂಲದ್ರವ್ಯಗಳು.

. ಗುರುತ್ವಾಕರ್ಷಣೆಯಿಂದ : ಎತ್ತರದಲ್ಲಿರುವ ಶಿಲೆಗಳ ತುಣುಕುಗಳು, ಗುರುತ್ವಾಕರ್ಷಣಾ ಶಕ್ತಿಯ ಪ್ರಭಾವದಿಂದ ಇಳಿಜಾರಿನೊಂದಿಗೆ ಸಾಗಿ ಬಂದು ಕೆಳಗೆ ಸಂಗ್ರಹವಾಗುತ್ತವೆ. ಇವುಗಳಲ್ಲಿ ಉರುಟು ಕಣಗಳ ಮತ್ತು ವಿವಿಧ ಆಕಾರಗಳ ಕಲ್ಲಿನ ಚೂರುಗಳದೇ ಪ್ರಾಬಲ್ಯ. ಈ ದ್ರವ್ಯದ ನಿರ್ಮಾಣದಲ್ಲಿ ಭೌತಿಕ ಕ್ರಿಯೆಗಳು ಕೆಲ ಮಟ್ಟಿಗೆ ಸಹಾಯಕಾರಿಯಾಗುತ್ತವೆಯಾದರೆ ರಾಸಾಯನಿಕ ಕ್ರಿಯೆಗಳ ಪ್ರಭಾವವು ಅತ್ಯಲ್ಪ. ಈ ಬಗೆಯ ಮೂಲದ್ರವ್ಯವಿರುವ ಕ್ಷೇತ್ರವು ಕಡಮೆ. ಇಂತಹ ಮೂಲದ್ರವ್ಯಗಳಿಂದ ನಿರ್ಮಾಣಗೊಂಡ ಮಣ್ಣು ಬೇಸಾಯಕ್ಕೆ ಅಷ್ಟು ಯೋಗ್ಯವಾಗಿರುವುದಿಲ್ಲ.

. ನದಿಗಳ ನೀರಿನಿಂದ : ಇವುಗಳಲ್ಲಿ ಮೂರು ಪ್ರಕಾರದ ಕ್ರಿಯೆಗಳನ್ನು ಕಾಣಬಹುದು.

 • ನದಿಗಳು : ವರ್ಷದ ಕೆಲವು ಕಾಲ ಪಾತಳಿಯಿಂದ ಮೇಲೆ ಉಕ್ಕಿ ಹರಿಯುತ್ತವೆ. ಹರಿಯುವ ನೀರು ತನ್ನೊಡನೆ ಶೀಲೆ ಮತ್ತು ಖನಿಜಗಳ ವಿವಿಧ ಆಕಾರದ ಕಣಗಳನ್ನು ಎಳೆದೊಯ್ದು ಅವುಗಳನ್ನು ಅಲ್ಲಿಯೇ ಬಿಟ್ಟು ಹಿಂತಿರುಗುತ್ತದೆ. ಉರುಟು ಕಣಗಳು ನದಿ ದಂಡೆಯ ಸನಿಹದಲ್ಲಿಯೂ ಜಿನುಗು ಕಣಗಳು ದಂಡೆಯಿಂದ ಕೆಲ ಮಟ್ಟಿಗೆ ದೂರದಲ್ಲಿಯೆ ದೂರದಲ್ಲಿಯೂ ನಿಕ್ಷೇಪಗೊಳ್ಳುವುದು ಸಹಜ. ಭಾರತದ ಗಂಗಾ ಸಿಂಧು ಮತ್ತು ಬ್ರಹ್ಮಪುತ್ರಾ ನದಿಗಳ, ಬ್ರೆಜಿಲ್ ದೇಶದ ಅಮೇಝಾನ ನದಿಯ, ಈಜಿಪ್ಟ್ ಮತ್ತು ಸೂಡಾನಿನ ನೈಲ ನದಿಯ, ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಮಿಸ್ಸಿಸಿಪ್ಪೀ ನದಿಯ ದಂಡೆಗಳಲ್ಲಿರುವ ವಿಶಾಲ ಪ್ರದೇಶಗಳಲ್ಲಿ ಈ ಬಗೆಯ ಮೂಲದ್ರವ್ಯಗಳನ್ನು ಕಾಣಬಹುದು. ಈ ರೀತಿಯ ನಿಕ್ಷೇಪಕ್ಕೆ ಪ್ರವಾಹ ನೀರಿನಿಂದ ಉಂಟಾದ ರೇವೆಯ ಬಯಲು ಎಂದು ಹೆಸರು. ಸಾಮಾನ್ಯವಾಗಿ ಇವುಗಳಲ್ಲಿ ಸಸ್ಯಗಳಿಗೆ ಬೇಕಾಗುವ ಪೋಷಕಾಂಶಗಳು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಇವು ಫಲವತ್ತಾಗಿರುತ್ತವೆ. ಆದರೆ ಇಂತಹ ಪ್ರದೇಶಗಳ ಮಣ್ಣಿನಲ್ಲಿ ನೀರು ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆಯಾದ್ದರಿಂದ, ಬಸಿಗಾಲುವೆಗಳನ್ನು ನಿರ್ಮಿಸಬೇಕಾಗುತ್ತದಲ್ಲದೇ ಕೆಲವೆಡೆ ನದಿಗಳು, ಎತ್ತರದಲ್ಲಿರುವ ಕಿರಿದಾದ ಕಣಿವೆಯೊಳಗಿನಿಂದ ಹರಿದು ಕೆಳಬಂದು ವಿಶಾಲವಾದ ಪ್ರದೇಶದ ಮೂಲಕ ಹರಿದು ಹೋದಾಗ, ಅವುಗಳಲ್ಲಿರುವ ರೇವೆಯು ಬೀಸಣಿಕೆಯ ಆಕಾರದಲ್ಲಿ ( ) ಕೆಳಗೆ ಕೂಡುತ್ತದೆ. ಈ ರೇವೆಯು ಉರುಟುಕಣ ಮತ್ತು ಕಲ್ಲಿನ ಚೂರುಗಳಿಂದ ಕೂಡಿರುತ್ತದೆ. ಇದರೊಳಗಿಂದ ನೀರು ಸುಲಭವಾಗಿ ಬಸಿದುಹೋಗುತ್ತದೆ. ಈ ರೀತಿಯ ನಿಕ್ಷೇಪಕ್ಕೆ ರೇವೆಯ ಬೀಸಣಿಕೆ ಎನ್ನುವರು.
 • ಪ್ರವಾಹದ ನೀರಿನಲ್ಲಿರುವ ಎಲ್ಲ ಕಣಗಳು ಅದರಲ್ಲಿಯೂ ಜಿನುಗು ಕಣಗಳು ಸರೋವರ ಇಲ್ಲವೇ ಸಮುದ್ರದ ದಂಡೆಯ ಮೇಲೆ ನಿಕ್ಷೇಪಗೊಳ್ಳದೇ ನೀರಿನೊಳಗೆ ಹೋಗಿ ನೆಲಗೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ, ಪ್ರವಾಹದ ನೀರಿನಲ್ಲಿರುವ ಜಿನುಗು ಕಣಗಳ ಸ್ವಲ್ಪ ಭಾಗವು ನದಿಯ ಮುಖದಲ್ಲಿ ಸರೋವರ ಇಲ್ಲವೇ ಸಮುದ್ರಕ್ಕಿಂತ ಸ್ವಲ್ಪ ಹಿಂದೆ ನೆಲದ ಮೇಲೆ ಕೂಡುತ್ತದೆ. ಮಣ್ಣಿನ ಕಣಗಳು ನೆಲದ ಮೆಲೆ ನೆಲೆಸಿದ ಪ್ರದೇಶವು ಲ್ಯಾಟಿನ್‌ ಭಾಷೆಯ ಡೆಲ್ಟಾ ( ) ಅಕ್ಷರದಂತೆ ಕಾಣುತ್ತದೆಯಾದ್ದರಿಂದ ಈ ಭೂ ಭಾಗಕ್ಕೆ ಡೆಲ್ಟಾ ಪ್ರದೇಶ (ನದೀ ಮುಖಜ ಭೂಮಿ) ಎನ್ನುತ್ತಾರೆ. ಸಾಮಾನ್ಯವಾಗಿ ಈ ಮೂಲದ್ರವ್ಯದಲ್ಲಿ ಎರೆ ಕಣಗಳ ಪ್ರಾಬಲ್ಯವಿರುತ್ತದೆಯಾದ್ದರಿಂದ ಹೆಚ್ಚಿನ ನೀರು ಮಣ್ಣಿನೊಳಗಿಂದ ಸುಲಭವಾಗಿ ಬಸಿದು ಹೋಗುವುದಿಲ್ಲ.
 • ನದಿಗಳು ಹೊತ್ತು ತಂದು ಶಿಲೆ ಮತ್ತು ಖನಿಜಗಳ ಕಣಗಳು ಕೊನೆಗೆ ಸರೋವರ ಇಲ್ಲವೇ ಸಮುದ್ರವನ್ನು ಸೇರುತ್ತವೆ. ಸಹಸ್ರಾರು ವರ್ಷಗಳವರೆಗೆ ಈ ರೀತಿ ಸಂಗ್ರಹಗೊಂಡ ದ್ರವ್ಯದ ಪದರು ದಪ್ಪವಾಗುತ್ತಾ ಸಾಗುತ್ತದೆ. ಭೂಮಿಯಲ್ಲಿ ಸ್ಥಿತ್ಯಂತರವಾಯಿತೆಂದರೆ, ಸಂಗ್ರಹಗೊಂಡ ಈ ದ್ರವ್ಯದ ಪದರ ಸರೋವರ ಇಲ್ಲವೇ ಸಮುದ್ರದ ಪಾತಳಿಗಿಂತ ಮೇಲೆದ್ದು, ಮಣ್ಣಿನ ಮೂಲದ್ರವ್ಯವಾಗುತ್ತದೆ. ಜಗತ್ತಿನಲ್ಲಿ ಕಂಡು ಬರುವ ಇಂತಹ ವಿಭಿನ್ನ ದ್ರವ್ಯಗಳಲ್ಲಿ ಕೆಲವೆಡೆ ಉರುಟು ಕಣಗಳಿದ್ದರೆ ಇನ್ನು ಕೆಲವೆಡೆ ಜಿನಗು ಕಣಗಳು ಇರುತ್ತವೆ. ಈ ಮೂಲದ್ರವ್ಯಗಳಿಂದ ನಿರ್ಮಾಣಗೊಂಡ ಮಣ್ಣನ್ನು ಸರಿಯಾಗಿ ನಿರ್ವಹಿಸಿದರೆ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವೆಂದು ಕಂಡುಬಂದಿದೆ.

) ಹಿಮದಿಂದ : ಈ ಮೊದಲೇ ಸೂಚಿಸಿದಂತೆ, ಪುರಾತನ ಶಿಲೆ ಮತ್ತು ಖನಿಜಗಳ ಚೂರುಗಳನ್ನು ಹಿಮನದಿಗಳು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸುತ್ತಿದ್ದವು. ಇವೇ ಮಣ್ಣಿನ ಮೂಲದ್ರವ್ಯವಾಗಿ ಪರಿಣಮಿಸುತ್ತಿದ್ದವು. ಇಂದು ಈ ರೀತಿ ಸಾಗಿಸಿದ ಮೂಲವಸ್ತುಗಳನ್ನು ಕಾಣಬಹುದೇ ಹೊರತು ಹಿಮ ನದಿಗಳು ಈಗ ಅಸ್ಥಿತತ್ವದಲ್ಲಿಲ್ಲ.

) ಗಾಳಿಯಿಂದ : ಗಾಳಿಯೊಡನೆ ಸಾಗಿಬಂದ ಶಿಲೆ ಮತ್ತು ಖನಿಜಗಳು ಕಣಗಳಲ್ಲಿಯ ಬಹುಭಾಗವು, ರೇವೆಯ ಆಕಾರವಾಗಿದ್ದರೂ ಇವುಗಳೊಡನೆ ಜಿನುಗು ಮರಳು ಮತ್ತು ಎರೆ ಕಣಗಳೂ ಕೆಲವು ಮಟ್ಟಿಗೆ ಸೇರಿಕೊಂಡಿರುತ್ತವೆ. ಅಮೇರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಹಲವೆಡೆ ಈ ರೀತಿಯ ಮೂಲದ್ರವ್ಯವು ಕಂಡುಬರುತ್ತದೆ. ಈ ಬಗೆಯ ದ್ರವ್ಯವನ್ನು ಕಾಣಬಹುದು.

ಮಣ್ಣುಉತ್ಪತ್ತಿಕಾರಕಗಳು :

ಮೂಲ ದ್ರವ್ಯದಿಂದ ನಿರ್ಮಾಣಗೊಳ್ಳುವ ಮಣ್ಣಿನ ಗುಣಧರ್ಮಗಳನ್ನು ಕೆಳಗೆ ತಿಳಿಸಿದ ಐದು ಸಂಗತಿಗಳು ನಿರ್ಧರಿಸುತ್ತವೆ ಎಂದು ಕಂಡುಬಂದಿದೆ. ಇವುಗಳನ್ನು ಮಣ್ಣು ಕಾರಕಗಳೆಂದು ಹೇಳಬಹುದು.

 • ಮಣ್ಣಿನ ಮೂಲದ್ರವ್ಯದ ಸ್ವರೂಪ.
 • ಹವಾಮಾನ (ಮುಖ್ಯವಾಗಿ ಉಷ್ಣತಾಮಾನ ಮತ್ತು ಮಳೆ)
 • ಜೀವಿಗಳು (ಸ್ಥಾನಿಕ ಸಸ್ಯವರ್ಗ, ಸೂಕ್ಷ್ಮ ಜೀವಿಗಳು, ಪ್ರಾಣಿಗಳು ಹಾಗೂ ಮಾನವ)
 • ಸ್ಥಳದ ಭೌಗೋಳಿಕ ರಚನೆ (ಪ್ರಮುಖವಾಗಿ ಭೂಮಿಯ ಇಳಿಜಾರು)
 • ಮಣ್ಣು ನಿರ್ಮಾಣಗೊಳ್ಳಲು ದೊರೆತ ಸಮಯ.

ಹವಾಮಾನ ಮತ್ತು ಜೀವಿಗಳು ತಮಗೆ ದೊರೆತ ಅವಧಿಯಲ್ಲಿ ಮಣ್ಣಿನ ಮೂಲದ್ರವ್ಯದ ಮೇಲೆ ನಡೆಸಿದ ಚಟುವಟಿಕೆಗಳಿಂದ ಭೂರಚನೆಗೆ ಅನುಗುಣವಾಗಿ ಬದಲಾವಣೆಯಾಗಿ ನಿರ್ಮಾಣಗೊಂಡ ಪ್ರಾಕೃತಿಕ ವಸ್ತುವಿಗೆ ಮಣ್ಣು ಎನ್ನಬಹುದು.

ಮೇಲಿನ ಹೇಳಿಕೆಯನ್ನು ಸಮೀಕರಣ ರೂಪದಲ್ಲಿ ಕೆಳಗಿನಂತೆ ಬರೆಯಬಹುದು:

        = (, ಜೀ, , ಮೂ, …) 
          ಇಲ್ಲಿ ಮ = ಮಣ್ಣಿನ ಗುಣಧರ್ಮಗಳು
ಹ = ಹವಾಮಾನ (ಉಷ್ಣತೆ, ಮಳೆ ಇತ್ಯಾದಿ)
ಜೀ = ಜೀವಿಗಳು (ಸಸ್ಯಗಳು, ಸೂಕ್ಷ್ಮ ಜೀವಿಗಳು ಇತ್ಯಾದಿ)
ಇ = ಇಳಿಜಾರು (ಸ್ಥಳದ ಭೂ ರಚನೆ)
ಮೂ = ಮಣ್ಣಿನ ಮೂಲದ್ರವ್ಯ
ಸ = ಮಣ್ಣಿನ ನಿರ್ಮಾಣಕ್ಕೆ ದೊರೆತ ಸಮಯ

…. = ಮೇಲಿನವಲ್ಲದೇ, ಮಣ್ಣಿನ ನಿರ್ಮಾಣದಲ್ಲಿ ಇತರ ಸಂಗತಿಗಳು ಇರುವ ಸಾಧ್ಯತೆಗಳಿವೆ ಎನ್ನವುದರ ಸಂಕೇತ.

ಮೇಲೆ ಹೇಳಿದ ಐದು ಅಥವಾ ಹೆಚ್ಚಿನ ಸಂಗತಿಗಳ ಮೇಲೆ ಮಣ್ಣಿನ ಗುಣಧರ್ಮಗಳು ಅವಲಂಬಿಸಿವೆ ಎಂಬುವುದನ್ನು ಈ ಸಮೀಕರಣವು ಸೂಚಿಸುತ್ತದೆ.

ಈ ಸಂದರ್ಭದಲ್ಲಿ, ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಮೇಲಿನ ಐದು ಸಂಗತಿಗಳು, ಏಕಕಾಲಕ್ಕೆ ಕಾರ್ಯನಿರತವಾಗಿ ಮಣ್ಣಿನ ನಿರ್ಮಾಣವನ್ನು ಮಾಡುತ್ತವೆ, ಆದ್ದರಿಂದ, ಇವೆಲ್ಲವುಗಳ ಸಾಮೂಹಿಕ ಪ್ರಭಾವದಿಂದಲೇ ಮಣ್ಣಿನ ಗುಣಧರ್ಮಗಳು ನಿರ್ಧರಿತವಾಗುತ್ತವೆಯೇ ಹೊರತು, ಯಾವುದೇ ಒಂದು ಸಂಗತಿಯು ಮಣ್ಣಿನ ಸ್ವಭಾವನ್ನು ನಿರ್ಧರಿಸುವುದಿಲ್ಲ. ಆದಾಗ್ಯೂ ವಿಷಯದ ವಿವರಣೆಗೆ ಅನುಕೂಲವಾಗಲೆಂದು, ಪ್ರತಿಯೊಂದು ಸಂಗತಿಯ ಪ್ರಭಾವವನ್ನು ಪ್ರತ್ಯೇಕವಾಗಿ ಚರ್ಚಿಸಿದೆ. ಒಂದು ಸಂಗತಿಯನ್ನು ಚರ್ಚಿಸುವಾಗ, ಉಳಿದ ನಾಲ್ಕೂ ಸಂಗತಿಗಳು ಬದಲಾಗದೇ, ಒಂದೇ ಸ್ಥಿತಿಯಲ್ಲಿರುತ್ತವೆಯೆಂದು ಗ್ರಹಿಸಲಾಗಿದೆ. ಉದಾಹರಣೆಗೆ, ಮಣ್ಣಿನ ಗುಣಧರ್ಮಗಳ ಮೇಲೆ ಹವಾಮಾನದ ಪರಿಣಾಮವನ್ನು ಚರ್ಚಿಸುವಾಗ, ಇತರೆ ನಾಲ್ಕು ಸಂಗತಿಗಳಾದ ಜೀವಿಗಳು, ಇಳಿಜಾರು, ಮಣ್ಣಿನ ಮೂಲದ್ರವ್ಯ ಮತ್ತು ಮಣ್ಣಿನ ನಿರ್ಮಾಣಕ್ಕೆ ದೊರೆತ ಸಮಯ ಇವು ಯಾವುದೆ ಬದಲಾವಣೆಯನ್ನು ಹೊಂದದೆ, ಒಂದೇ ಸ್ಥಿತಿಯಲ್ಲಿರುತ್ತವೆಂದು ಗ್ರಹಿಸಲಾಗುತ್ತದೆ. ಈ ಗ್ರಹಿಕೆಯನ್ನು ಮನದಲ್ಲಿಟ್ಟುಕೊಂಡು, ನಿರ್ಮಾಣಗೊಳ್ಳುವ ಮಣ್ಣಿನ ಮೇಲೆ, ಮೇಲಿನ ಐದು ಸಂಗತಿಗಳು ಯಾವ ರೀತಿಯ ಪ್ರಭಾವವನ್ನು ಬೀರುತ್ತವೆ ಎಂಬುವುದರ ವಿವರಗಳು ಕೆಳಗಿನಂತಿವೆ: