. ಹವಾಮಾನ : ಮಣ್ಣಿನ ನಿರ್ಮಾಣದಲ್ಲಿ, ಹವಾಮಾನದ ಪ್ರಭಾವವು ಉಳಿದ ನಾಲ್ಕು ಸಂಗತಿಗಳ ಪ್ರಭಾವಕ್ಕಿಂತ ಅತ್ಯಧಿಕವಾಗಿದೆಯೆಂದರೆ ತಪ್ಪಾಗಲಾರದು. ಉಷ್ಣತೆ ಮತ್ತು ಮಳೆ ಇವು ಬದಲಾದಂತೆ, ಮಣ್ಣಿನ ಗುಣಧರ್ಮಗಳಲ್ಲಿಯೂ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಹವಾಮಾನದ ಈ ಎರಡು ಘಟಕಗಳಿಂದ, ಮಣ್ಣಿನ ಮೇಲಾಗುವ ಕೆಲವು ಪ್ರಮುಖ ಪರಿಣಾಮಗಳು ಕೆಳಗಿನಂತಿವೆ :

. ರಾಸಾಯನಿಕ ಕ್ರಿಯೆಯ ವೇಗ ವಗವರ್ಧನೆ : ಅವಶ್ಯಕತೆಗೆ ಅನುಗುಣವಾಗಿ ಆರ್ದ್ರತೆ ಇದ್ದಾಗ, ಉಷ್ಣತಾಮಾನವು ಹೆಚ್ಚುತ್ತಾ ಸಾಗಿದಂತೆ, ರಾಸಾಯನಿಕ ಕ್ರಿಯೆಯ ವೇಗವೂ ವರ್ಧಿಸುತ್ತದೆ. ಸಾಮಾನ್ಯವಾಗಿ ಪ್ರತಿ ೧೦ಡಿಗ್ರಿ ಸೆಂ. ಉಷ್ಣತೆಯು ಹೆಚ್ಚಿದರೆ, ರಾಸಾಯನಿಕ ಕ್ರಿಯೆಯ ವೇಗವು ಇಮ್ಮಡಿಗೊಳ್ಳುತ್ತದೆ. ಆದ್ದರಿಂದಲೇ, ತಂಪು ಪ್ರದೇಶಕ್ಕಿಂತ ಆದ್ರತೆಯುಳ್ಳ ಉಷ್ಣಪ್ರದೇಶದಲ್ಲಿ, ಮಣ್ಣು ಶೀಘ್ರಗತಿಯಿಂದ ನಿರ್ಮಾಣವಾಗುತ್ತದೆ.

. ನಿರವಯವ ದ್ರವ್ಯಗಳ ಪ್ರಮಾಣ :ಶುಷ್ಕ ಪ್ರದೇಶದಲ್ಲಿ ಬೀಳುವ ಮಳೆಯನ್ನು ಮಣ್ಣಿನ ಕಣಗಳೇ ಹೀರಿಕೊಳ್ಳುತ್ತವೆ ಅಥವಾ ಅತ್ಯಧಿಕ ಉಷ್ಣತೆಯ ಕಾರಣದಿಂದ ನೀರು ಆವಿಯಾಗಿ ಹೋಗುತ್ತದೆ. ಅತಿ ರಭಸದಿಂದ ಮಳೆಯು ಬಿದ್ದಾಗ ಸಾಕಷ್ಟು ಮಣ್ಣು ಕೊಚ್ಚಿ ಹೋಗಿ ನಷ್ಟವಾಗಲೂಬಹುದು. ಹೀಗಾಗಿ ಭೂಮಿಯೊಳಗೆ ಇಳಿದುಹೋಗುವ ನೀರಿನ ಪ್ರಮಾಣವು ಅತಿ ಕಡಿಮೆ. ಇದಕ್ಕೆ ವಿರುದ್ಧವಾಗಿ ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚು ನೀರು ಭೂಮಿಯೊಳಗೆ ಇಳಿದು ಹೋಗುತ್ತದೆಯಾದ್ದರಿಂದ ಮಣ್ಣಿನಲ್ಲಿರುವ ಹಲವು ಮೂಲ ಧಾತುಗಳು ನೀರಿನಲ್ಲಿ ಕರಗಿ ಭೂಮಿಯಾಳಕ್ಕೆ ಬಸಿದು ಹೋಗುತ್ತವೆ. ಕೆಲವು ಪ್ರಮುಖ ಮೂಲಧಾತುಗಳು ಕೆಳಕಾಣಿಸಿದ ಕ್ರಮದಲ್ಲಿ ನೀರಿನೊಡನೆ ಸಾಗಿ ಮಣ್ಣಿನಾಳಕ್ಕೆ ಬಸಿದು ಹೋಗುವವೆಂದು ಕಂಡು ಬಂದಿದೆ.

ಸೋಡಿಯಂ > ಕ್ಯಾಲ್ಸಿಯಂ > ಪೋಟ್ಯಾಸಿಯಂ > ಸಿಲಿಕಾ ಆಕ್ಸೈಡ್ > ಕಬ್ಬಿಣದ ಆಕ್ಸೈಡ್ > ಅಲ್ಯೂಮಿನಿಯಂ ಆಕ್ಸೈಡ್

ಸೋಡಿಯಂ, ಕ್ಯಾಲ್ಸಿಯಂ ಮತ್ತು ಪೋಟ್ಯಾಸಿಯಂ ಮೊದಲು ಬಸಿದುಹೋಗುತ್ತವೆ. ಆದರೆ ಅಲ್ಯೂಮಿನಿಯಂ ಆಕ್ಸೈಡ್ ಅಷ್ಟು ಸುಲಭವಾಗಿ ಭೂಮಿಯಾಳಕ್ಕೆ ಬಸಿದುಹೋಗುವುದಿಲ್ಲ. ಆದ್ದರಿಂದ ಮೂಲಶಿಲಾದ್ರವ್ಯ ಮತ್ತು ಅದರಿಂದ ನಿರ್ಮಾಣಗೊಂಡ ಮಣ್ಣುಗಳನ್ನು ಕೆಳಗೆ ಕಾಣಿಸಿದ ಸೂಚಿಯ ಸಹಾಯದಿಂದ ತುಲನೆಮಾಡಿ ನೋಡಿದರೆ ಮಣ್ಣಿನ ರಾಸಾಯನಿಕ ಸವಕಳಿಯ ಅಂದಾಜನ್ನು ಮಾಡಬಹುದು.

ಸೋಡಿಯಂಆಕ್ಸೈಡ್ಪ್ರಮಾಣ + ಪೋಟ್ಯಾಸಿಯಂಆಕ್ಸೈಡ್ಪ್ರಮಾಣ
ಅಲ್ಯೂಮಿಯಂ ಆಕ್ಸೈಡ್ ಪ್ರಮಾಣ

ಮೇಲಿನ ಪರಿಮಾಣವನ್ನುಮಣ್ಣಿನ ರಾಸಾಯನಿಕ ಸವಕಳಿ ಸೂಚಿಎನ್ನುವರು.

ಇನ್ನೊಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಕಡಮೆ ಮಳೆ ಬೀಳುವ ಪ್ರದೇಶಗಳಲ್ಲಿ, ಕ್ಯಾಲ್ಸಿಯಂ ಕಾರ್ಬೊನೇಟಿನ ಗಂಟುಗಳು ಮಣ್ಣಿನ ಮೇಲುಸ್ಥರದಲ್ಲಿ ಕಂಡುಬರುತ್ತವೆ. ಮಳೆಯ ಪ್ರಮಾಣವು ಅಧಿಕಗೊಳ್ಳುತ ಸಾಗಿದಂತೆ ಈ ಗಂಟುಗಳು ಆಳವಾದ ಸ್ತರದಲ್ಲಿ ಕಾಣಿಸಿಕೊಳ್ಳುತ್ತವೆ. ಕ್ಯಾಲ್ಸಿಯಂ ಕಾರ್ಬೊನೇಟಿ ಗಿಂತ ಹೆಚ್ಚು ಪ್ರಮಾಣದಲ್ಲಿ ನೀರಿನಲ್ಲಿ ಕರಗುವ ಜಿಪ್ಸಂ ಹಳಕುಗಳು, ಕ್ಯಾಲ್ಸಿಯಂ ಕಾರ್ಬೊನೇಟಿನ ಕೆಳಗಿನ ಸ್ತರದಲ್ಲಿ ಕಾಣಿಸಿಕೊಳ್ಳುತ್ತವೆ.

. ರಸಸಾರ (ಆಮ್ಲಕ್ಷಾರ ನಿರ್ದೇಶಕ / pH) :ಮಳೆಯ ಪ್ರಮಾಣವು ಕಡಮೆ ಇರುವಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೋಟ್ಯಾಸಿಯಂ, ಸೋಡಿಯಂ, ಮುಂತಾದ ದ್ರವ್ಯಗಳು, ದೊಡ್ಡ ಪ್ರಮಾಣದಲ್ಲಿ ಬಸಿದು ಕೆಳಗೆ ಹೋಗುವುದಿಲ್ಲ. ಹೀಗಾಗಿ ಮಣ್ಣಿನ ಆಮ್ಲ – ಕ್ಷಾರ ನಿದೇಶಕವು ೭ಕ್ಕಿಂತ ಅಧಿಕವಾಗಿರುತ್ತದೆ. ಮಳೆಯ ಪ್ರಮಾಣವು ಅಧಿಕಗೊಂಡಂತೆ ಮೇಲೆ ಹೇಳಿದ ಪ್ರತ್ಯಾಮ್ಲಗಳು ಬಸಿದುಹೋಗಿ, ಆ ಪ್ರದೇಶದಲ್ಲಿ ಆಮ್ಲವುಂಟು ಮಾಡುವ ಜಲಜನಕ ಮತ್ತು ಅಲ್ಯೂಮಿನಿಯಂ ಅಯಾನ್‌ಗಳು ಮಣ್ಣಿನಲ್ಲಿಯ ಜಿನುಗು ಕಣಗಳು ಮೇಲ್ಮೆಯನ್ನು ಆವರಿಸುತ್ತವೆ. ಇದರಿಂದ ಮಣ್ಣಿನ ಆಮ್ಲ – ಕ್ಷಾರನಿರ್ದೇಶಕ / ರಸಸಾರವು ೭ಕ್ಕಿಂತ ಕಡಿಮೆಯಾಗುತ್ತದೆ.

. ಎರೆಯ ಪ್ರಮಾಣ ಮತ್ರು ಪ್ರಕಾರ : ಹವಾಮಾನಕ್ಕೂ ಅದರ ಪ್ರಭಾವದಿಂದ ನಿಮಾಣಗೊಂಡ ಮಣ್ಣಿನಲ್ಲಿರುವ ಎರೆ ಕಣಗಳ ಪ್ರಮಾಣಕ್ಕೂ ನಿಕಟ ಸಂಬಂಧವಿದೆ. ಅದರಂತೆಯೇ ಹವಾಮಾನದ ಮೇಲಿಂದ, ಮಣ್ಣಿನಲ್ಲಿ ಕಂಡುಬರುವ ಎರೆಯ ಪ್ರಕಾರದಲ್ಲೂ ವ್ಯತ್ಯಾಸವುಂಟಾಗುತ್ತದೆ. ಉದಾಹರಣೆಗೆ, ಮಳೆಯ ಪ್ರಮಾಣವು ಕಡಮೆ ಇರುವಲ್ಲಿ ಮಣ್ಣಿನ ಮೂಲದ್ರವ್ಯದಿಂದ ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೋಟ್ಯಾಸಿಯಂ ಮುಂತಾದ ಪ್ರತ್ಯಾಮ್ಲಗಳು ಅಷ್ಟಾಗಿ ಬಸಿದುಹೋಗದ ಪರಿಸರದಲ್ಲಿ ನಿರ್ಮಾಣಗೊಂಡ ಎರೆಯಲ್ಲಿ ಮಾಂಟ್ಮೋರಿಲ್ಮೊನೈಟ್ ಖನಿಜದ ಪ್ರಮಾಣದಲ್ಲಿ ಬಸಿದ ಮಣ್ಣಿನಲ್ಲಿ ಕೆಓಲಿನೈಟ್ ಗುಂಪಿಗೆ ಸೇರಿದ ಖನಿಜಗಳು ಪ್ರಮುಖವಾಗಿ ಕಂಡುಬರುತ್ತವೆ. ಉಷ್ಣತೆ ಮತ್ತು ಮಳೆ ಇವೆರಡೂ ಅಧಿಕವಾಗಿರುವ ಪ್ರದೇಶದಲ್ಲಿ, ರಾಸಾಯನಿಕ ಕ್ರಿಯೆಗಳು ತೀಕ್ಷ್ಣವಾಗಿ ಸಾಗುತ್ತವೆಯಾದ್ದರಿಂದ ಮೇಲೆ ಹೇಳಿದ ಪ್ರತ್ಯಾಮ್ಲಗಳಲ್ಲದೇ ಸಿಲಿಕಾನ್‌ಸಹ ಮೂಲದ್ರವ್ಯದಿಂದ ಬಸಿದುಹೋಗಿ ಮಣ್ಣಿನಲ್ಲಿ ಜಲಯುತ ಕಬ್ಬಿಣ ಮತ್ತು ಅಲ್ಯೂಮಿನಿಯಂ ಆಕ್ಸೈಡ್ ಗಳು ಉಳಿದಿರುವುದನ್ನು ಕಾಣಬಹುದು.

. ಎರೆ ಕಣಗಳ ಚಲನೆ : ಮಣ್ಣಿನ ವಿವಿಧ ಸ್ತರಗಳಲ್ಲಿರುವ ಎರೆಯ ಪ್ರಮಾಣಕ್ಕೂ ಆ ಪ್ರದೇಶದ ಮಳೆಯ ಪ್ರಮಾಣಕ್ಕೂ ನಿಕಟವಾದ ಸಂಬಂಧವಿದೆ. ಮಣ್ಣು ನಿರ್ಮಾಣಗೊಳ್ಳುವ ಪ್ರಾರಂಭಿಕ ಹಂತದಲ್ಲಿ ಎರೆಯ ಪ್ರಮಾಣವು ಮೇಲ್ಮಣ್ಣಿನಲ್ಲಿ (ಮೇಲಿನ ಸ್ತರದಲ್ಲಿ) ಅಧಿಕವಾಗಿರುತ್ತದೆ. ಆದರೆ, ವಾರ್ಷಿಕ ಮಳೆಯು ಅಧಿಕವಿರುವ ಪ್ರದೇಶದಲ್ಲಿ ಭೂಮಿಯೊಳಗೆ ಬಸಿದುಹೋಗುವ ನೀರಿನೊಡನೆ, ಎರಡ ಕಣಗಳು A ವಲಯದಿಂದ (A horizon) ಚಲಿಸುತ್ತ ಹೋಗಿ B ವಲಯವನ್ನು (B horizon)ತಲುಪುತ್ತವೆ. ಆದ್ದರಿಂದ ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಸಾಮಾನ್ಯವಾಗಿ B ವಲಯದಲ್ಲಿ A ವಲಯದಲ್ಲಿರುವುದಕ್ಕಿಂತ ಎರೆಯು ಅಧಿಕ ಪ್ರಮಾಣದಲ್ಲಿರುತ್ತದೆ.

. ಎರೆ ಕಣಗಳ ಪ್ರತ್ಯಾಮ್ಲ ಸಂತೃಪ್ತಿ :ಮಣ್ಣಿನಲ್ಲಿರುವ ಜಿನುಗು ಕಣಗಳ ಹೊರಮೈಸೂತ್ತ ಋಣ ಚಾರ್ಚ್‌ಗಳಿರುತ್ತವೆ. ಅವು ಧನ ಚಾರ್ಚ ಹೊಂದಿರುವ ಅಯಾನ್‌ಗಳನ್ನು ತಮ್ಮೆಡೆಗೆ ಆಕರ್ಷಿಸಿ ಹಿಡಿದಿಟ್ಟುಕೊಳ್ಳುತ್ತವೆ. ಧನಚಾರ್ಚನ್ನು ಹೊಂದಿರುವ ಅಯಾನ್‌ಗಳಲ್ಲಿ ಪ್ರತ್ಯಾಮ್ಲಗಳಾದ ಕ್ಯಾಲ್ಸಿಯಂ, ಪೋಟ್ಯಾಷಿಯಂ ಮತ್ತು ಸೋಡಿಯಂ ಅಲ್ಲದೇ ಅಮ್ಲತೆಯುಂಟು ಮಾಡುವ ಜಲಜನಕ ಹಾಗೂ ಅಲ್ಯೂಮಿನಿಯಂಗಳು ಮುಖ್ಯವಾಗಿವೆ. ಒಂದು ಪ್ರದೇಶದಲ್ಲಿ ಬೀಳುವ ಮಳೆಗೂ ಈ ಎರಡು ಗುಂಪಿನ ಅಯಾನ್‌ಗಳ ಪ್ರಮಾಣಕ್ಕೂ ಸಂಬಂಧವಿದೆ. ಕಡಮೆ ಮತ್ತು ಮಧ್ಯಮ ಪ್ರಮಾಣದಲ್ಲಿ ಮಳೆ ಬರುವ ಪ್ರದೇಶದಲ್ಲಿಯ ಮಣ್ಣಿನಲ್ಲಿ ಎಲ್ಲ ಋಣ ಚಾರ್ಚಗಳನ್ನು ಪ್ರತ್ಯಾಮ್ಲಗಳ ಅಯಾನ್‌ಗಳೇ ಸಂತೃಪ್ತಿಪಡಿಸುತ್ತವೆ. ಆದರೆ ಮಳೆಯ ಪ್ರಮಾಣವು ಅಧಿಕಗೊಂಡಿತೆಂದರೆ ಋಣ ಚಾರ್ಚುಗಳ ಮೇಲೆ, ಜಲಜನಕ ಮತ್ತು ಅಲ್ಯೂಮಿನಿಯಂ ಅಯಾನ್‌ಗಳ ಪ್ರಾಬಲ್ಯವುಂಟಾಗುತ್ತದೆ. ಹೀಗಾಯಿತೆಂದರೆ ಮಣ್ಣಿನ ಆಮ್ಲಕ್ಷಾರ ನಿರ್ದೆಶಕವು ೭ಕ್ಕಿಂತ ಕಡಿಮೆಯಾಗುತ್ತದೆ.

. ಸಾವಯವ ಪದಾರ್ಥ ಮತ್ತು ಸಾರಜನಕ : ಮಳೆಯ ಪ್ರಮಾಣವು ಅಧಿಕಗೊಂಡಂತೆ ಸಸ್ಯಗಳ ಸಂಖ್ಯೆ ಮತ್ತು ಅವುಗಳ ಬೆಳವಣಿಗೆಗಳು ವೃದ್ಧಿಗೊಳ್ಳುತ್ತವೆ. ಸಸ್ಯಗಳಾಗಲಿ, ಅವುಗಳ ಅಂಗಗಳಾಗಲಿ, ಮಣ್ಣಿನಲ್ಲಿ ಸಂಗ್ರಹವಾಗುತ್ತಾ ಹೋದಂತೆ ಮಣ್ಣಿನಲ್ಲಿಯ ಸಾವಯವ ಪದಾರ್ಥ ಮತ್ತು ಸಾರಜನಕದ ಪ್ರಮಾಣಗಳು ಹೆಚ್ಚುತ್ತವೆ. ಅಲ್ಪ ಮಳೆಯಾಗುವ ಶುಷ್ಕ ಪ್ರದೇಶಗಳಲ್ಲಿ ಸಸ್ಯಗಳ ಬೆಳವಣಿಗೆಯು ಕಡಿಮೆಯಿರುತ್ತದೆಯಾದ್ದರಿಂದ ಅಲ್ಲಿಯ ಮಣ್ಣಿನಲ್ಲಿ ಸಾವಯವ ಪದಾರ್ಥ ಮತ್ತು ಸಾರಜನಕಗಳ ಪ್ರಮಾಣಗಳೂ ಕಡಮೆ.

ಉಷ್ಣತಾಮಾನವು ಹೆಚ್ಚುತ್ತಾ ಹೋದಂತೆ ಮಣ್ಣಿನಲ್ಲಿರುವ ಸಾವಯವ ಪದಾರ್ಥವು ಹೆಚ್ಚು ವೇಗದಿಂದ ಕಳೆಯುತ್ತದೆ. ಅಥವಾ ಉತ್ಕರ್ಷಣೆಗೊಳ್ಳುತ್ತದೆ. ಆದ್ದರಿಂದ ಉಷ್ಣತೆಯು ಅಧಿಕಗೊಂಡಂತೆ ಮಣ್ಣಿನಲ್ಲಿಯ ಸಾವಯವ ಪದಾರ್ಥವು ಕಡಮೆಯಾಗುತ್ತಾ ಸಾಗುತ್ತದೆ.

ಒಂದು ಪ್ರದೇಶದ ಹವಾಮಾನಕ್ಕೂ, ಅಲ್ಲಿಯ ಸಸ್ಯವರ್ಗಕ್ಕೂ ನೆರ ಸಂಬಂಧವಿದೆ. ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಕುರುಚಲು ಗಿಡಗಳು ಮತ್ತು ಮುಳ್ಳು ಕಂಟಿಗಳು ಬೆಳೆಯುತ್ತವಾದರೆ ಅಧಿಕ ಮಳೆ ಬೀಳೂವ ಉಷ್ಣ ಪ್ರದೇಶದಲ್ಲಿ ದಟ್ಟವಾದ ಅರಣ್ಯವನ್ನು ಕಾಣಬಹುದು. ಆದ್ದರಿಂದ ಮಣ್ಣಿನ ನಿರ್ಮಾಣದಲ್ಲಿ ಜೀವಿಗಳ ಪ್ರಭಾವಕ್ಕೆ ಹವಾಮಾನವು ಪರೋಕ್ಷವಾಗಿ ಕಾರಣೀಭೂತವೆನಿಸುತ್ತದೆಂಬುವುದನ್ನು ಇಲ್ಲಿ ಗಮನಿಸಬಹುದು.

. ಜೀವಿಗಳು : ಮಣ್ಣಿನ ನಿರ್ಮಾಣದಲ್ಲಿ ವಿಭಿನ್ನ ಗುಂಪಿಗೆ ಸೇರಿದ ಜೀವಿಗಳು ಹಲವಾರು ರೀತಿಯಿಂದ ಪ್ರಭಾವವನ್ನು ಬೀರಿ ಮಣ್ಣಿನ ಗುಣಧರ್ಮಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಜೀವಿಗಳಲ್ಲಿ, ಮುಖ್ಯವಾಗಿ ಕೆಳಗಿನವು ಸೇರಿವೆ:

 • ಭೂಮಿಯ ಮೇಲೆ ಬೆಳೆಯುವ ಕುರುಚಲು ಗಿಡ, ಮುಳ್ಳು ಕಂಟಿ, ವಾರ್ಷಿಕ ಮತ್ತು ಬಹುವಾರ್ಷಿಕ ಹುಲ್ಲು, ಸದಾ ಹಸುರಿನಿಂದ ಕೂಡಿರುವ ಸೂಚೀಪರ್ಣ ಮತ್ತು ಇತರೆ ವೃಕ್ಷಗಳು ಹಾಗೂ ಚಳಿಗಾಲದಲ್ಲಿ ಎಲೆಗಳನ್ನುದುರಿಸುವ ವೃಕ್ಷಗಳು.
 • ಮಣ್ಣಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾ, ಶೀಲೀಂಧ್ರಗಳು, ಆಕ್ಟಿನೋಮೈಸಿಟೀಸ್ ಮುಂತಾದ ಸೂಕ್ಷ್ಮ ಜೀವಿಗಳು, ಎರೆಹುಳು ಮತ್ತು ಇತರೆ ಪ್ರಾಣಿಗಳು.
 • ಮನುಷ್ಯ.

ಕುರುಚಲು ಗಿಡಗಳು ಮತ್ತು ಮುಳ್ಳು ಕಂಟಿಗಳು, ಮಣ್ಣಿನ ನಿರ್ಮಾಣ ಕಾರ್ಯದಲ್ಲಿ ಹೇಳಿಕೊಳ್ಳುವಂತಹ ಪರಿಣಾಮವನ್ನು ಬೀರಲಾರವು. ಆದರೆ ಅರಣ್ಯದಲ್ಲಿರುವ ಗಿಡಮರಗಳು, ಮಣ್ಣಿನ ಗುಣಧರ್ಮಗಳ ಮೇಲೆ ತಮ್ಮ ಸ್ಥಾಯೀ ಪ್ರಭಾವವನ್ನುಂಟು ಮಾಡುತ್ತವೆ. ಮರದ ಎಲೆಗಳು, ಶಾಖೆ – ಉಪ ಶಾಖೆಗಳು ನೆಲದ ಮೇಲೆ ಬೀಳುತ್ತವೆಯಲ್ಲದೇ ವಯಸ್ಸಾದ ಮರಗಳೂ ನೆಲಕ್ಕುರುಳುವುದು ಅನಿವಾರ್ಯವಾಗುತ್ತದೆ. ಸಾವಯವ ಪದಾರ್ಥಗಳು ಸೂಕ್ಷ್ಮ ಜೀವಿಗಳ ಚಟುವಟಿಕೆಗಳಿಂದ ಕಳಿಯತೊಡಗಿದಾಗ ಹಲವು ಬಗೆಯ ಆಮ್ಲಗಳು ಉತ್ಪತ್ತಿಯಾಗಿ ಅವು ಮಳೆಯ ನೀರಿನೊಡನೆ ಭೂಮಿಯೊಳಗೆ ಇಳಿಯುತ್ತಾ ಸಾಗುತ್ತವೆ. ಇದರಿಂದ ಮಣ್ಣಿನ ಮೂಲದ್ರವ್ಯದ ಮೇಲೆ ರಾಸಾಯನಿಕ ಕ್ರಿಯೆಗಳು ಭರದಿಂದ ಸಾಗುತ್ತವೆ ಮತ್ತು ಆಮ್ಲಯುತ ಮಣ್ಣು ನಿರ್ಮಾಣ ವಾಗುತ್ತದೆ.

ಈ ಸಂದರ್ಭದಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಸಮಶೀತೋಷ್ಟ ಪ್ರದೇಶದಲ್ಲಿ ಬೆಳೆಯುವ ಸೂಚೀಪರ್ಣಿ ವೃಕ್ಷಗಳು ಮತ್ತು ಇತರ ಕೆಲವು ಮರಗಳು ಕ್ಯಾಲ್ಸಿಯಂ ಅನ್ನು ಅಧಿಕ ಪ್ರಮಾಣದಲ್ಲಿ ಹೀರಿಕೊಳ್ಳುವುದಿಲ್ಲ. ಆದ್ದರಿಂದ ಇಂತಹ ಮರಗಳಿಂದ ಕೆಳಗೆ ಬೀಳೂವ ಎಲೆ, ಶಾಖೆ – ಉಪ ಶಾಖೆಗಳು ಕಳಿತವೆಂದರೆ ಇವುಗಳಿಂದ ಮಣ್ಣಿಗೆ ಗಣನೀಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಸೇರಿಸಿದಂತಾಗುವುದಿಲ್ಲ. ಹೀಗಾಗಿ ಇಲ್ಲಿ ಆಮ್ಲಯುತ ಮಣ್ಣು ನಿರ್ಮಾಣವಾಗುತ್ತದೆ. ಆದರೆ, ಚಳಿಗಾಲದಲ್ಲಿ ಎಲೆಗಳನ್ನು ಉದುರಿಸುವ ವೃಕ್ಷಗಳು ಮತ್ತು ಉಷ್ಣ ವಲಯದಲ್ಲಿ ಬೆಳೆಯುವ ಮರಗಳೂ ದೊಡ್ಡ ಪ್ರಮಾಣದಲ್ಲಿ ಸುಣ್ಣವನ್ನು ಹೊಂದಿರುತ್ತವೆ. ಇವುಗಳಿಂದ ದೊರೆಯುವ ಸಾವಯವ ಪ್ರಮಾಣದಲ್ಲಿ ಸುಣ್ಣವನ್ನು ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುವುದರಿಂದ ಅಲ್ಲಿಯ ಮಣ್ಣಿನಲ್ಲಿ ಪ್ರತ್ಯಾಮ್ಲವು ಉನ್ನತ ಮಟ್ಟದಲ್ಲಿರುತ್ತದೆ.

ವೃಕ್ಷಗಳು ಬೇರುಗಳು ತುಲನಾತ್ಮಕವಾಗಿ ಹೆಚ್ಚು ಆಳಕ್ಕೆ ಹೋಗಿರುತ್ತವೆ. ಆದರೆ, ಜಿನುಗು ಬೇರುಗಳು ಕಡಿಮೆ, ಅಲ್ಲದೇ ಪ್ರತಿ ವರ್ಷ ನಶಿಸುವ ಬೇರುಗಳ ಸಂಖ್ಯೆಯೂ ಅಲ್ಲ. ಹೀಗಾಗಿ, ಬೇರಿನಿಂದ, ಮಣ್ಣಿಗೆ ದೊರೆಯುವ ಸಾವಯವ ಪದಾರ್ಥದ ಪ್ರಮಾಣವು A ವಲಯಕ್ಕಿಂತ B ವಲಯದಲ್ಲಿಯೇ ಅಧಿಕವಾಗಿರುತ್ತದೆ. ಅರಣ್ಯದಡಿ ನಿರ್ಮಾಣಗೊಂಡ ಮಣ್ಣು ಆಮ್ಲಯುತವಾಗಿರುತ್ತದೆ ಎಂದು ಈಗಾಗಲೇ ಸೂಚಿಸಲಾಗಿದೆ. ಮಣ್ಣಿನಲ್ಲಿರುವ ಕಬ್ಬಿಣ ಮತ್ತು ಅಲ್ಯೂಮಿಯಂಗಳು ಆಮ್ಲಗಳಲ್ಲಿ ಕರಗಿ ನೀರಿನೊಡನೆ ಬಸಿದು B ವಲಯಕ್ಕೆ ಸಾವಯವ ಪದಾರ್ಥ, ಕಬ್ಬಿಣ ಮತ್ತು ಅಲ್ಯೂಮಿನಿಯಂಗಳು A ವಲಯದಲ್ಲಿರುವುದಕ್ಕಿಂತ ದೊಡ್ಡ ಪ್ರಮಾಣದಲ್ಲಿರುತ್ತವೆ.

ಹುಲ್ಲುಗಾವಲಿನಲ್ಲಿ ಪ್ರದೇಶದಲ್ಲಿ ನಿರ್ಮಾಣಗೊಂಡ ಮಣ್ಣಿನ ಗುಣಧರ್ಮಗಳು ಭಿನ್ನವಾಗಿರುತ್ತವೆ. ಹುಲ್ಲುಗಳು ಹಲವು ಜಿನುಗು ಬೇರುಗಳನ್ನು ಹೊಂದಿರುತ್ತವೆಯಲ್ಲದೇ ಈ ಬೇರುಗಳು A ವಲಯಕ್ಕಷ್ಟೇ ಸೀಮಿತವಾಗಿರುತ್ತವೆ. ಹುಲ್ಲು ಒಣಗಿತ್ತೆಂದರೆ, ಭೂಮಿಯ ಮೇಲ್ಬಾಗದಲ್ಲಿಯೇ ಬೀಳುತ್ತದೆ. ಹೀಗಾಗಿ ಪ್ರತಿ ವರ್ಷ ಹುಲ್ಲಿನ ಬೇರು ಮತ್ತು ಕಾಂಡಗಳು ಆ ವಲಯಕ್ಕೆ ಸೇರಿ ಅಲ್ಲಿಯೇ ಕಳಿಯುತ್ತವೆ. ಇದಲ್ಲದೇ ಹುಲ್ಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣವು ಅಧಿಕ.ಆದ್ದರಿಂದ ಹುಲ್ಲು ಗಾವಲಿನ ಪ್ರದೇಶದಲ್ಲಿ ನಿರ್ಮಾಣಗೊಂಡ ಮಣ್ಣಿನ A ವಲಯದಲ್ಲಿ ಸಾವಯವ ಪದಾರ್ಥ ಮತ್ತು ಕ್ಯಾಲ್ಸಿಯಂಗಳ ಪ್ರಮಾಣಗಳು B ವಲಯದಲ್ಲಿರುವುದಕ್ಕಿಂತ ಅಧಿಕ ಪ್ರಮಾಣದಲ್ಲಿರುತ್ತವೆ. ಈ ಪ್ರದೇಶದಲ್ಲಿಯ ಮಣ್ಣಿನ A ವಲಯದಲ್ಲಿ ಇರುವ ಸಾವಯವ ಪದಾರ್ಥವು ಕಳಿಯತೆಂದರೆ ಮಣ್ಣಿಗೆ ಕಪ್ಪು ಬಣ್ಣವು ಬರುತ್ತದೆ. ಇದಲ್ಲದೇ ಈ ಮಣ್ಣಿನ ಜಲಧಾರಣಾ ಶಕ್ತಿ ಮತ್ತು ವಿನಿಮಯ ಧನ ಅಯಾನ್‌ಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅಧಿಕವಾಗಿರುತ್ತದೆ. ಮಣ್ಣು ಆಮ್ಲಯುತವಾಗಿರುವುದಿಲ್ಲ.

ಸಾವಯವ ವಸ್ತುಗಳು ಕಳಿಯಲು, ಬ್ಯಾಕ್ಟೀರಿಯಾ ಶೀಲೀಂದ್ರಗಳು ಮತ್ತು ಆಕ್ಟನೋಮೈಸಿಟೀಸ್ ಗಳ ಪಾತ್ರವು ಬಹುಮುಖ್ಯ. ಸಾಮಾನ್ಯವಾಗಿ ಶೀಲೀಂದ್ರಗಳು ಆಮ್ಲತೆಯನ್ನು ತಡೆದುಕೊಂಡು ಕಾರ್ಯನಿರತವಾಗಿರಬಲ್ಲವು. ಹೀಗಾಗಿ ಅರಣ್ಯ ಪ್ರದೇಶದ ಮಣ್ಣಿನಲ್ಲಿ ಶೀಲೀಂದ್ರಗಳದೇ ಪ್ರಾಬಲ್ಯವೆನ್ನಬಹುದು. ಆದರೆ ಬ್ಯಾಕ್ಟೀರಿಯಾ ಮತ್ತು ಆಕ್ಟಿನೋಮೈಸಿಟೀಸ್ ಗಳು ತಮ್ಮ ಚಟುವಟಿಕೆಗಳನ್ನು ಸರಿಯಾಗಿ ನಡೆಸಬೇಕಾದರೆ, ಮಣ್ಣಿನ ಆಮ್ಲ – ಕ್ಷಾರ ನಿರ್ದೇಶಕವು ೭ರ ಸನಿಹದಲ್ಲಿ ಇರಬೇಕಾಗುತ್ತದೆ. ಆದ್ದರಿಂದಲೇ, ಆಮ್ಲತೆಯಿಲ್ಲದ ಹುಲ್ಲು ಗಾವಲಿನ ಮತ್ತು ಇತರೆ ಪ್ರದೇಶಗಳಲ್ಲಿಯ ಮಣ್ಣುಗಳಲ್ಲಿ ಈ ಸೂಕ್ಷ್ಮ ಜೀವಿಗಳು ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತವೆ.

ಹಲವು ಗುಂಪುಗಳಿಗೆ ಸೇರಿದ ಬ್ಯಾಕ್ಟೀರಿಯಾ ಮಣ್ಣಿನ ರಾಸಾಯನಿಕ ಮತ್ತು ಭೌತಿಕ ಗುಣಧರ್ಮಗಳ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಸಾವಯವ ಪದಾರ್ಥದೊಳಗಿರುವ ಸಾರಜನಕ, ಮತ್ತು ಇತರೆ ಪೋಷಕಾಂಶಗಳನ್ನು ನಿರವಯವ ರೂಪಕ್ಕೆ ಬದಲಿಸುವುದು, ಹವೆಯಲ್ಲಿರುವ ಸಾರಜನಕವನ್ನು ಸ್ವೀಕರಿಸುವುದು ಮುಂತಾದ ಮಹತ್ವಪೂರ್ಣ ಕಾರ್ಯಗಳಿಗೆ ಬ್ಯಾಕ್ಟೀರಿಯಾ ಇವೇ ಹೊಣೆಯೆನ್ನಬೇಕು. ಇದರಂತೆಯೇ ಕೆಲವು ಬ್ಯಾಕ್ಟೀರಿಯಾ ಸಾವಯವ ಪದಾರ್ಥವನ್ನು ಕಳಿಸುವಾಗ ಒಂದು ರೀತಿಯ ಜಿಗುಟು ಪದಾರ್ಥವು ನಿರ್ಮಾಣಗೊಳ್ಳುತ್ತದೆ. ಈ ವಸ್ತುವು ಮಣ್ಣಿನ ಕಣಗಳ ರಚನೆಯನ್ನು ಸ್ಥಿರಗೊಳಿಸಲು ಸಹಾಯಕಾರಿಯಾಗಿ ಮಣ್ಣಿನ ಭೌತಿಕ ಗುಣವನ್ನು ಉತ್ತಮಗೊಳಿಸುತ್ತದೆ.

ಸೂಕ್ಷ್ಮ ಜೀವಿಗಳು, ಮಣ್ಣಿನ ಗುಣಧರ್ಮಗಳ ಮೇಲೂ ಮಣ್ಣಿನ ಸ್ವಭಾವವು ಸೂಕ್ಷ್ಮ ಜೀವಿಗಳ ಚಟುವಟಿಕೆಗಳ ಮೇಲೂ ಪರಿಣಾಮಗಳನ್ನು ಬೀರುತ್ತವೆಂಬುವುದು ಮೇಲಿನ ವಿವರಣೆಯಿಂದ ಸ್ಪಷ್ಟವಾಗುತ್ತದೆ.

ಎರೆ ಹುಳುಗಳು ಮಣ್ಣಿನ ನಿರ್ಮಾಣದಲ್ಲಿ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತವೆ. ಸಾವಯವ ಪದಾರ್ಥವನ್ನು ಮತ್ತು ಅದರೊಡನೆ ಮಣ್ಣನ್ನು ಭಕ್ಷಿಸಿ, ಅವುಗಳನ್ನು ಮಥಿಸಿ, ತಮ್ಮ ದೇಹದಲ್ಲಿರುವ ಕ್ಯಾಲ್ಸಿಯಂ ಅನ್ನು ಅದರೊಡನೆ ಮಿಶ್ರವಾಗುವಂತೆ ಮಾಡಿ, ಉತ್ತಮ ಗುಣವಿರುವ ಈ ಮಿಶ್ರಣವನ್ನು ಹಿಕ್ಕೆಗಳ ರೂಪದಲ್ಲಿ ಹೊರಹಾಕುತ್ತವೆ. ಎರೆ ಹುಳುಗಳ ಚಟುವಟಿಕೆಗೆ ಅನುಕೂಲಕರ ಪರಿಸರವಿದ್ದಾಗ, ಈ ಕ್ರಿಯೆಯು ನಿರಂತರವಾಗಿ ಸಾಗುತ್ತದೆ. ಆದ್ದರಿಂದ, ಮಣ್ಣಿನ ರಾಸಾಯನಿಕ ಗುಣಧರ್ಮವನ್ನು ಸುಧಾರಿಸುವಲ್ಲಿ ಎರೆಹುಳುಗಳ ಪಾತ್ರವು ಬಹುಮುಖ್ಯವೆನ್ನಬಹುದು. ಇದಲ್ಲದೇ, ಮಣ್ಣನ್ನು ಆಗೆಯುತ್ತ, ಮೇಲಿನ ಸ್ಥರದ ಮಣ್ಣನ್ನು ಕೆಳಗಿನ ಸ್ಥರಕ್ಕೂ, ಕೆಳಗಿನ ಸ್ತರದ ಮಣ್ಣನ್ನು ಮೇಲಿನದಕ್ಕೂ ತರುತ್ತ, ಮಣ್ಣನ್ನು ಮಿಶ್ರ ಮಾಡುವ ಕ್ರಿಯೆಯು ಮಣ್ಣಿನ ನಿರ್ಮಾಣ ಕಾರ್ಯದಲ್ಲಿ ಬಹು ಮಹತ್ವವಾದುದು.

ಮಣ್ಣಿನ ನಿರ್ಮಾಣದಲ್ಲಿ, ಮಾನವನೂ ಕೆಲವು ಮಟ್ಟಿಗೆ ಹೊಣೆಗಾರನೆನ್ನಬಹುದು. ಗಿಡ – ಮರಗಳನ್ನು ಕಡಿಯುವುದು, ಬೇಸಾಯವನ್ನು ಮಾಡುವಾಗ, ನೆಲವನ್ನು ಹದಮಾಡುವುದು, ನೀರು ಗೊಬ್ಬರ, ಇತ್ಯಾದಿಗಳನ್ನು ಭೂಮಿಗೆ ಪೂರೈಸುವುದು, ಒಡ್ಡುಗಳನ್ನು ನಿರ್ಮಿಸುವುದು, ಇಲ್ಲವೇ ಭೂಸವಳಿಕೆಯನ್ನು ತೀವ್ರಗೊಳಿಸುವ ಕಾರ್ಯಗಳನ್ನು ಕೈಗೊಳ್ಳುವುದು ಇತ್ಯಾದಿ ಅಪೇಕ್ಷಿತ ಇಲ್ಲವೇ ಅಸಮರ್ಪಕ ಭೂ ನಿರ್ವಹಣೆಯ ಕ್ರಮಗಳಿಂದ ಮಣ್ಣಿನ ನಿರ್ಮಾಣ ಮತ್ತು ಮಣ್ಣಿನ ಗುಣಧರ್ಮಗಳ ನಿರ್ಣಾಯಕತೆಯಲ್ಲಿ ಮಾನವನು ಹೊಣೆಗಾರನಾಗುತ್ತಾನೆ.

. ಇಳಿಜಾರು : ಮಣ್ಣಿನಲ್ಲಿಯ ಆರ್ದ್ರತೆ, ಉಷ್ಣತೆ, ಜೀವಿಗಳ ಚಟುವಟಿಕೆಗಳು, ಎರೆ ಕಣಗಳ ಚಲನೆ, ಮಣ್ಣಿನ ಮೇಲ್ಬಾಗದಲ್ಲಿ ಮತ್ತು ಮಣ್ಣಿನೊಳಗೆ ನೀರಿನ ಸಂಚಾರ ಮುಂತಾದುವಗಳಿಗೂ ಭೂಮಿಯ ಇಳಿಜಾರಿಗೂ ನೇರ ಸಂಬಂಧವಿದೆ.

ಗುಡ್ಡದ ಅಂಚಿನಿಂದ ಆರಂಭಮಾಡಿ ಕೆಳಗಿನ ಸಪಾಟು ಪ್ರದೇಶದಲ್ಲಿ ನಿರ್ಮಾಣಗೊಂಡ ಮಣ್ಣನ್ನು ಪರೀಕ್ಷಿಸಿದರೆ ವಿಭಿನ್ನ ರೀತಿಯ ಮಣ್ಣುಗಳನ್ನು ಕಾಣಬಹುದು. ಮೇಲ್ಬಾಗದಲ್ಲಿರುವ ಮಣ್ಣಿನ ಕಣಗಳು ಇಳಿಜಾರಿನೊಡನೆ ಮಳೆಯ ನೀರಿನೊಂದಿಗೆ ಹರಿದು ಹೋಗಿ ಕೆಳಭಾಗವನ್ನು ಸೇರುತ್ತವೆ. ಹೀಗಾಗಿ ಇಳಿಜಾರು ಆರಂಭವಾಗುವಲ್ಲಿ ಮಣ್ಣಿನ ಆಳವು ಬಹಳ ಕಡಮೆ. ಇಲ್ಲಿ ನಿರ್ಮಾಣಗೊಂಡ ಜಿನುಗು ಕಣಗಳು ಸದಾ ಕೊಚ್ಚಿ ಹೋಗಿ, ಕೆಳಭಾಗವನ್ನು ಸೇರುತ್ತವೆ. ಆದ್ದರಿಂದ ಮೇಲ್ಬಾಗದ ಮಣ್ಣಿನಲ್ಲಿ ಆರ್ದ್ರತೆಯ ಪ್ರಮಾಣವು ಕಡಮೆ. ಅಲ್ಲದೇ ಸಸ್ಯಗಳು ಹುಲುಸಾಗಿ ಬೆಳೆಯುವುದಿಲ್ಲ. ಈ ಕಾರಣಗಳಿಂದ ಇಲ್ಲಿಯ ಮಣ್ಣು ಶೈಶವಾವಸ್ಥೆಯಲ್ಲಿಯೇ ಇರಬೇಕಾದುದು ಅನಿವಾರ್ಯ.

ಇಳಿಜಾರಿನ ಕೆಳಭಾಗಕ್ಕೆ ಸರಿದಂತೆ ಹರಿದುಹೋಗುವ ನೀರು ಮತ್ತು ಅದರೊಡನೆ ಕೊಚ್ಚಿ ಹೋಗುವ ಮಣ್ಣಿನ ಕಣಗಳ ಪ್ರಮಾಣವು ಕಡಿಮೆಯಾಗುತ್ತ ಸಾಗುತ್ತದೆ. ಇಲ್ಲಿ ಆಳವಾದ ಮಣ್ಣು ನಿರ್ಮಾಣಗೊಂಡಿರುತ್ತದೆ. ಮಣ್ಣಿನಲ್ಲಿ ಸಾಕಷ್ಟ ಆರ್ದ್ರತೆಯು ಇರುತ್ತದೆಯಾದ್ದರಿಂದ ಸಸ್ಯಗಳು ಸರಿಯಾಗಿ ಬೆಳೆಯುತ್ತವೆ. ಮಣ್ಣಿನಲ್ಲಿ ಸಾವಯವ ಪದಾರ್ಥಗಳು ಸಂಗ್ರಹವಾಗಿ ಜೈವಿಕ ಚಟುವಟಿಕೆಗಳು ವೃದ್ಧಿಗೊಳ್ಳುತ್ತವೆ. ಮೇಲಿನಿಂದ ಹರಿದುಬರುವ ನೀರು ಮತ್ತು ಮಣ್ಣಿನ ಕಣಗಳು ಇಳಿಜಾರಿನ ಕೆಳ ಪ್ರದೇಶದಲ್ಲಿ ಸಂಗ್ರಹವಾಗುತ್ತವೆ. ಆದರೆ ಇಲ್ಲಿ ಭೂಮಿಯು ಜೌಗಾಗುವ ಸಂಭವವಿದೆ. ಇದರಿಂದ ಸಸ್ಯಗಳ ಬೆಳವಣಿಗೆಗೆ ಮತ್ತು ಸೂಕ್ಷ್ಮ ಜೀವಿಗಳ ಚಟುವಟಿಕೆಗೆ ಕೆಲಮಟ್ಟಿಗೆ ಅನಾನುಕೂಲಗಳಾಗಬಹುದು. ಹೆಚ್ಚಿನ ನೀರು ಬಸಿದುಹೋಗುವ ವ್ಯವಸ್ಥೆಯನ್ನು ಮಾಡಿದರೆ ಮಣ್ಣು ಉತ್ತಮವಾದೀತು.

ಒಂದು ವಿಷಯವನ್ನು ಇಲ್ಲಿ ಗಮನಿಸಬಹುದು. ಇಳಿಜಾರಿನಲ್ಲಿರುವ ಇಡೀ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣವು ಒಂದೇ ಸಮ ಇದ್ದರೂ ಇಳಿಜಾರಿನ ಕೆಳಭಾಗದಲ್ಲಿ ಮೇಲಿನ ಭಾಗಕ್ಕಿಂತ ಅಧಿಕ ನೀರು ದೊರೆಯುತ್ತದೆ. ಎಂದರೆ ಇಳಿಜಾರಿನ ಮೇಲಿನ ಭಾಗಕ್ಕಿಂತ ಕೆಳಭಾಗದಲ್ಲಿ ಅಧಿಕ ಮಳೆಯು ಬಿದ್ದಂತಾಗುತ್ತದೆ. ಉದಾಹರಣೆಗೆ , ಒಟ್ಟು ಮಳೆಯ ಪ್ರಮಾಣವು ೪೫ ಸೆಂ. ಮೀ. ಇದ್ದು, ಇಳಿಜಾರಿನ ಮೇಲ್ಬಾಗದಲ್ಲಿ ಕೇವಲ ೧೪ ಸೆಂ.ಮೀ. ಮಾತ್ರ ಉಳಿದು ಉಳಿದೆಲ್ಲಾ ನೀರು ಹರಿದು ಹೋಗಿ ತಗ್ಗಿನ ಪ್ರದೇಶದಲ್ಲಿ ಸಂಗ್ರಹವಾಯಿತೆಂದರೆ, ಇಳಿಜಾರಿನ ಮೇಲ್ಬಾಗದಲ್ಲಿ ಕೇವಲ ೧೫ ಸೆಂ. ಮೀ. ಮಳೆಯಾದಷ್ಟೇ ಪರಿಣಾಮವು ದೊರೆತು, ಇಳಿಜಾರಿನ ಕೆಳಭಾಗದಲ್ಲಿ (೪೫ + (೪೫ – ೧೫) ಅಂದರೆ ೭೫ ಸೆಂ.ಮೀ. ಮಳೆಯಾದಷ್ಟು ಪರಿಣಾಮವಾದಂತಾಗುತ್ತದೆ. ಇಂತಹ ಮಣ್ಣಿಗೆ ಆರ್ದ್ರ ಹವಾಮಾನದ ಮಣ್ಣು ಎಂದು ಹೆಸರು.

. ಮಣ್ಣಿನ ಮೂಲದ್ರವ್ಯಗಳು : ವಿವಿಧ ಪ್ರಕಾರದ ಶಿಲೆಗಳು ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳಿಗೊಳಗಾಗಿ, ಶಿಥಿಲಗೊಂಡು ಅದರೊಳಗಿನ ಪ್ರಾಥಮಿಕ ಖನಿಜಗಳು ಬೇರ್ಪಟ್ಟು, ಮಣ್ಣಿನ ಮೂಲದ್ರವ್ಯವು ನಿರ್ಮಾಣಗೊಳ್ಳುತ್ತದೆ ಎಂಬುವುದನ್ನು ಈಗಾಗಲೇ ಅರಿತಿದ್ದೇವೆ. ಶಿಲೆಗಳ ಸ್ವಭಾವ, ಅದರಲ್ಲಿರುವ ಖನಿಜಗಳು, ಈ ಖನಿಜಗಳ ಸ್ವರೂಪ – ಇವು ನಿರ್ಮಾಣಗೊಂಡ ಮಣ್ಣಿನ ಗುಣಧರ್ಮಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಉದಾಹರಣೆಗೆ :

 • ಸುಣ್ಣದ ಕಲ್ಲಿನಿಂದ ನಿರ್ಮಾಣಗೊಂಡ ಮಣ್ಣಿನಲ್ಲಿ ಕ್ಯಾಲ್ಸಿಯಂನ ಪ್ರಾಭಲ್ಯವಿರುತ್ತದೆಯಾದ್ದರಿಂದ ಇಂತಹ ಮಣ್ಣು ಬೇಗನೇ ಆಮ್ಲಯುತವಾಗುವುದಿಲ್ಲ. ಈ ಮಣ್ಣಿನಲ್ಲಿ ಬೆಳೆದ ಸಸ್ಯಗಳಲ್ಲಿ ಕ್ಯಾಲ್ಸಿಯಂ ಅಧಿಕವಿರುತ್ತವುದು ಸಹಜ.
 • ಬೇಸಾಲ್ಟ್ ಶಿಲೆಯ ಕಣಗಳು ಮೂಲತಃ ಅತಿ ಜಿನುಗಾಗಿರುತ್ತವೆ. ಆದ್ದರಿಂದ ಈ ಶಿಲೆಯಿಂದ ನಿರ್ಮಾಣಗೊಂಡ ಮಣ್ಣಿನಲ್ಲಿ ಎರೆ ಕಣಗಳು ಅಧಿಕ ಪ್ರಮಾಣದಲ್ಲಿಲರುತ್ತವೆ.
 • ಗ್ರಾನೈಟ್ ಶಿಲೆಯ ಕಣಗಳು ಉರುಟು. ಅಲ್ಲದೇ, ಈ ಶಿಲೆಯಲ್ಲಿ ಪ್ರತ್ಯಾಮ್ಲಗಳಿರುವುದಿಲ್ಲ. ಆದ್ದರಿಂದ ಈ ಶಿಲೆಯಿಂದ ನಿರ್ಮಾಣಗೊಂಡ ಮಣ್ಣಿನಲ್ಲಿ ಮರಳಿನದೇ ಪ್ರಾಬಲ್ಯ ಮತ್ತು ಮಣ್ಣಿನ ಆಮ್ಲ – ಕ್ಷಾರ ನಿರ್ದೇಶಕವೂ ೭ಕ್ಕಿಂತ ಕಡಮೆಯಿರುತ್ತದೆ.

ಸಾಮಾನ್ಯವಾಗಿ ಕಂಡುಬರುವ ಖನಿಜಗಳು ಮತ್ತು ಅವುಗಳ ಗುಣಧರ್ಮಗಳನ್ನು ಕೋಷ್ಟಕ ೧ರಲ್ಲಿ ಹಾಗೂ ಪ್ರಮುಖ ಖನಿಜಗಳು ಮತ್ತು ಇಂತಹ ಮೂಲದ್ರವ್ಯಗಳಿಂದ ನಿರ್ಮಾಣಗೊಳ್ಳುವ ಮಣ್ಣಿನ ಸ್ವಭಾವಗಳನ್ನು ಕೋಷ್ಟಕ ೨ರಲ್ಲಿ ಕೊಟ್ಟಿದೆ.

. ಸಮಯ : ಭೂಮಿಯ ಬಾಹ್ಯ ರಚನೆಗನುಗುಣವಾಗಿ ಮಣ್ಣಿನ ಮೂಲದ್ರವ್ಯದ ಮೇಲೆ ಹವಾಮಾನ ಮತ್ತು ಜೀವಿಗಳು ಎಷ್ಟು ಸಮಯದಿಂದ ತಮ್ಮ ಕಾರ್ಯಗಳನ್ನು ನಡೆಸುತ್ತಿವೆ ಎನ್ನುವುದರ ಮೇಲೆ ಆ ಮಣ್ಣಿನ ಗುಣಧರ್ಮಗಳು ಅವಲಂಬಿಸಿರುತ್ತವೆ. ಸಾಮಾನ್ಯವಾಗಿ ಮಣ್ಣುಗಳನ್ನು ಎಳೆಯ ಮಣ್ಣು, ಪ್ರೌಢಮಣ್ಣು ಮತ್ತು ಹಳೆಯ ಮಣ್ಣು ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

ಎಳೆಯ ಮಣ್ಣು :ಮಣ್ಣಿನ ಮೂಲದ್ರವ್ಯದ ಮೇಲೆ ಹವಾಮಾನ ಮತ್ತು ಜೀವಿಗಳು ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದರೆ ಮಣ್ಣು ನಿರ್ಮಾಣವಾದಂತೆಯೇ. ಭೂಮಿಯ ಬಾಹ್ಯ ರಚನೆಗೂ ಮಣ್ಣಿನ ನಿರ್ಮಾಣದಲ್ಲಿ ಪಾತ್ರವಿದೆಯೆಂಬುವುದನ್ನು ಈಗಾಗಲೇ ಸೂಚಿಸಲಾಗಿದೆ. ಆದರೆ ಈ ರೀತಿ ಸಿದ್ಧಗೊಂಡ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು, ಸಸ್ಯಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದಾಗ ಮಾತ್ರ ಸಸ್ಯಗಳ ದೃಷ್ಟಿಯಿಂದ ಮಣ್ಣು ನಿರ್ಮಾಣವಾದಂತೆ ಎಂದು ಹೇಳಬಹುದು. ಈ ರೀತಿ ಮಣ್ಣು ನಿರ್ಮಾಣಗೊಂಡಿತೆಂದರೆ ಪ್ರಾರಂಭಿಕ ದಿನಗಳಲ್ಲಿ ಅದರಲ್ಲಿರುವ ಪೋಷಕಗಳು ದೊಡ್ಡ ಪ್ರಮಾಣದಲ್ಲಿ ಬಸಿದು ಭೂಮಿಯಾಳಕ್ಕೆ ಹೋಗಿರುವುದಿಲ್ಲ. ಇವಕ್ಕೆ ಎಳೆಯ ಮಣ್ಣೆಂದು ಹೇಳೂವರು. ಇಂತಹ ಮಣ್ಣುಗಳು ತುಲನಾತ್ಮಕವಾಗಿ ಹೆಚ್ಚು ಫಲವತ್ತಾಗಿರುತ್ತವೆ.

ಪ್ರೌಢ ಮಣ್ಣು : ಸಹಸ್ರಾರು ವರ್ಷಗಳ ನಂತರ ಎಳೆಯ ಮಣ್ಣು ಪ್ರೌಢಾವಸ್ಥೆಯನ್ನು ಹೊಂದುತ್ತದೆ. ಮಣ್ಣಿನ ಎರಡೂ ವಲಯಗಳು (A ಮತ್ತು B ವಲಯಗಳು ) ಪೂರ್ತಿಯಾಗಿ ಅಭಿವೃದ್ಧಿ ಗೊಂಡಿರುತ್ತವೆ. C ವಲಯವು ಇರಬಹುದು ಅಥವಾ ಇಲ್ಲದೇ ಇರಬಹುದು. ಮಣ್ಣು ಪ್ರೌಢಾವಸ್ಥೆಯನ್ನು ತಲುಪಿದಾಗ ಮಣ್ಣಿನ ನಿರ್ಮಾಣ ಕಾರ್ಯವು ಅತಿ ಮಂದಗತಿಯನ್ನು ಮುಟ್ಟಿರುತ್ತದೆ. ಎಳೆಯ ಮಣ್ಣಿಗಿಂತ ಪ್ರೌಢ ಮಣ್ಣಿನ ಫಲವತ್ತತೆಯು ಕಡಮೆಯಿರುತ್ತದೆ.

ಹಳೆಯ ಮಣ್ಣು : ಸಸ್ಯದ ಬೆಳವಣಿಗೆಯ ದೃಷ್ಟಿಯಿಂದ ಹಳೆಯ ಮಣ್ಣುಗಳು ಅಷ್ಟು ಉತ್ತಮವೆನಿಸುವುದಿಲ್ಲ. ಮಣ್ಣಿನಲ್ಲಿರುವ ಸಸ್ಯ ಪೋಷಕಗಳು ಬಸಿದು ಭೂಮಿಯಳಕ್ಕೆ ಹೋಗಿರುತ್ತವೆಯಾದ್ದರಿಂದ ಮಣ್ಣಿನ ಫಲವತ್ತತೆಯ ಕಡಮೆಯಾಗಿರುತ್ತದೆ. A ವಲಯದಿಂದ ಚಲಿಸಿ,ಕೆಳಗೆ ಹೋದ ಎರೆ ಕಣಗಳು ಮತ್ತು ಕಬ್ಬಿಣದ ಸಂಯುಕ್ತ ವಸ್ತುಗಳು B ವಲಯವನ್ನು ತಲುಪಿ ಅಲ್ಲಿ ಜಿಗುಟಾದ ವಲಯವು ನಿರ್ಮಾಣಗೊಳ್ಳಬಹುದು. ಇಂತಹ ವಲಯಗಳು ಗಾಳಿ ಮತ್ತು ನೀರಿನಚಲನೆಗೆ ಹಾಗೂ ಸಸ್ಯದ ಬೇರುಗಳ ಪ್ರವೇಶಕ್ಕೆ ಅಡಚಣೆಯುಂಟು ಮಾಡುತ್ತವೆ.

ಸುದೈವದಿಂದ ಮೇಲೆ ಹೇಳಿದ ಅನಪೇಕ್ಷಿತ ಸ್ಥಿತಿಯು ನಿಸರ್ಗದಲ್ಲಾಗುವ ಕೆಲವು ಸ್ಥಿತ್ಯಂತರಗಳಿಂದ ಪರಿವರ್ತನೆಗೊಂಡು ಹೊಸ ಮಣ್ಣಿನ ನಿರ್ಮಾಣಕ್ಕೆ ನಾಂದಿಯಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದಲೇ ಪ್ರಕೃತಿಯಲ್ಲಿ ಹಳೆಯ ಮಣ್ಣುಗಳು ಕಂಡುಬರುವುದು ಅತಿ ವಿರಳವೆನ್ನಬಹುದು. ಒಂದೊಮ್ಮೆ ಹಳೆಯ ಮಣ್ಣು ಕ್ವಚಿತ್ತಾಗಿ ಕಂಡುಬಂದರೆ ಹೆಚ್ಚು ಸಮಯದವರೆಗೆ ಅದು ಅಸ್ತಿತ್ವದಲ್ಲಿರುವುದಿಲ್ಲ.

ಮಣ್ಣಿನನಿರ್ಮಾಣದಲ್ಲಿಯವಿವಿಧಹಂತಗಳು :

ಇಲ್ಲಿಯವರೆಗೆ ವಿವರಿಸಿದ ಹಲವು ವಿಷಯಗಳನ್ನು ಅನುಲಕ್ಷಿಸಿ ಶಿಲೆಗಳಿಂದ ಮಣ್ಣು ನಿರ್ಮಾಣಗೊಳ್ಳುವಾಗ ಕಂಡುಬರುವ ವಿವಿಧ ಹಂತಗಳ ವಿವರಣೆ ಕೆಳಗಿನಂತಿದೆ:

 • ಶಿಲೆಗಳು, ಭೌತಿಕ ಮತ್ತು ಕೆಲ ಮಟ್ಟಿಗೆ ರಾಸಾಯನಿಕ ಕ್ರಿಯೆಗಳಿಂದ ಶಿಥಿಲಗೊಂಡು ಮಣ್ಣಿನ ಮೂಲದ್ರವ್ಯವು ಸಿದ್ಧವಾಗುತ್ತದೆ.
 • ಮಣ್ಣಿನ ಮೂಲದ್ರವ್ಯವು ಸ್ವಸ್ಥಾನದಲ್ಲಿಯೇ ಉಳಿದುಕೊಂಡು ಅವಶಿಷ್ಟ ಮೂಲದ್ರವ್ಯವೆನಿಸಬಹುದು ಇಲ್ಲವೇ ಗುರುತ್ವಾಕರ್ಷಣೆಯಿಂದ, ನೀರಿನಿಂದ ಹಿಮದಿಂದ ಅಥವಾ ಗಾಳಿಯಿಂದ ಚಲಿಸಿ ವಹನಗೊಂಡ ಮೂಲ ದ್ರವ್ಯವೆನಿಸಬಹುದು.
 • ಉಷ್ಣತೆ, ಮಳೆ, ಹಿಮ ಗಾಳಿ ಮತ್ತು ಜೀವಿಗಳಿಂದಾಗಿ ಭೌತಿಕ ಕ್ರಿಯೆಗಳು ನಡೆದು ಮಣ್ಣಿನ ಮೂಲದ್ರವ್ಯವು ಜಿನುಗು ಕಣಗಳಾಗಿ ಮಾರ್ಪಡುತ್ತದೆ. ರಾಸಾಯನಿಕ ಕ್ರಿಯೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇದರಿಂದ ಅನುವು ದೊರೆತಂತಾಗುತ್ತದೆ.
 • ಭೌತಿಕ ಕ್ರಿಯೆಯು ಆರಂಭವಾಗುತ್ತಿದ್ದಂತೆಯೇ ಉತ್ಕರ್ಷಣೆ, ಅಪಕರ್ಷಣೆ, ಜಲ ವಿಶ್ಲೇಷಣೆ, ಜಲೋತ್ಕರ್ಷಣೆ ಇತ್ಯಾದಿ ಹಲವು ಬಗೆಯ ರಾಸಾಯನಿಕ ಕ್ರಿಯೆಗಳು ನಡೆದು ಮೂಲದ್ರವ್ಯದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಇದರ ಪರಿಣಾಮವಾಗಿ ಕಬ್ಬಿಣದಂತಹ ಧಾತುಗಳು ಖನಿಜದಿಂದ ಹೊರಬರುತ್ತವೆ;

 

ಕೋಷ್ಟಕ ಪ್ರಮುಖ ಖನಿಜಗಳು ಮತ್ತು ಅವುಗಳ ಗುಣಧರ್ಮಗಳು

ಅಸಂ

ಖನಿಜದ ಹೆಸರು

ಖನಿಜದಲ್ಲಿರುವ ಘಟಕಗಳು

ಖನಿಜದಲ್ಲಿರುವ ಪೋಷಕಗಳು

ಎರೆ ಕಣಗಳು ನಿರ್ಮಾಣ ಗೊಳ್ಳುತ್ತವೆಯೇ?

ಕ್ವಾರ್ಜ್ . ಪ್ರಾಥಮಿಕ ಖನಿಜಗಳು ಸಿಲಿಕಾನ್‌ಆಕ್ಸೈಡ್‌ (SiO2) ಇಲ್ಲ ಇಲ್ಲ
ಅರ್ಥೋಕ್ಲೇಜ್‌ ಪೊಟ್ಯಾಸಿಯಂ ಅಲ್ಯೂಮಿನಿಯಂ ಸಿಲಿಕೇಟ್‌ (KAlSiO2) ಪೊಟ್ಯಾಷಿಯಂ (K) ಹೌದು
ಫ್ಲೆಜಿಯೋಕ್ಲೇಜ್‌ ಸೋಡಿಯಂ/ಕ್ಯಾಲ್ಸಿಯಂ ಅಲ್ಯೂಮಿನಿಯಂ ಸಿಲಿಕೇಟ್‌ಗಳು (NaAlSi3O8 CaAl2Si2O8) ಕ್ಯಾಲ್ಸಿಯಂ (Ca) ಹೌದು
ಬಯೋಟೈಟ್‌ ಹೈಡ್ರೋಜನ್‌- ಪೊಟ್ಯಾಷಿಯಂ, ಮೆಗ್ನೀಸಿಯಂ – ಕಬ್ಬಿಣ, ಅಲ್ಯೂಮಿನಿಯಂ – ಕಬ್ಬಿಣ ಸಿಲಿಕೇಟ್‌ಗಳು (KAl(Mg.Fe)3 Si3 O10 (OH)2 ಪೊಟ್ಯಾಸಿಯಂ, ಮೆಗ್ನೀಸಿಯಂ, ಕಬ್ಬಿಣ (K, Mg. Fe) ಹೌದು
ಮಸ್ಕೋವೈಟ್‌ ಹೈಡ್ರೋಜನ್‌ಪೊಟ್ಯಾಸಿಯಂ ಅಲ್ಯೂಮಿನಿಯಂ ಸಿಲಿಕೇಟ್‌ (KAl3Si3O10 (OH)2) ಪೊಟ್ಯಾಸಿಯಂ (K) ಹೌದು
ಹಾರ್ನ್‌ಬ್ಲೆಂಡ್‌ ಕ್ಯಾಲ್ಸಿಯಂ – ಕಬ್ಬಿಣ – ಮೆಗ್ನೀಸಿಯಂ ಸಿಲಿಕೇಟ್‌ (Ca2Al2Mg2Fe3, Si6O22 (OH)2) ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಂ (Ca, Fe. Mg) ಇಲ್ಲ
. ಉಪಖನಿಜಗಳು
ಕ್ಯಾಲ್ಸೈಟ್‌  ಕ್ಯಾಲ್ಸಿಯಂ ಕಾರ್ಬೋನೇಟ್‌ (CaCO3) ಕ್ಯಾಲ್ಸಿಯಂ, (Ca) ಇಲ್ಲ
ಅಪಟೈಟ್‌ ಟ್ರೈಕ್ಯಾಲ್ಸಿಯಂ ಫಾಸ್ಫೇಟ್‌
(Ca5(PO4)3 (Cl, F)
ಕ್ಯಾಲ್ಸಿಯಂ, ರಂಜಕ, ಕ್ಲೋರಿನ್‌(Ca, P, CI) ಇಲ್ಲ
ಡೋಲೊಮೈಟ್‌ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್‌
(CaCO3 Mg CO3)
ಕ್ಯಾಲ್ಸಿಯಂ, ಮೆಗ್ನೀಸಿಯಂ (Ca, Mg) ಇಲ್ಲ
೧೦ ಹೆಮೆಟೈಟ್‌ ಕಬ್ಬಿಣದ ಆಕ್ಸೈಡ್‌ (Fe2O3) ಕಬ್ಬಿಣ (Fe) ಇಲ್ಲ
೧೧ ಲಿಮೋನೈಟ್‌ ಜಲಯುತ ಕಬ್ಬಿಣದ ಆಕ್ಸೈಡ್‌ (Fe2O3, 3H2O) ಕಬ್ಬಿಣ (Fe) ಇಲ್ಲ
೧೨ ಜಿಪ್ಸಂ ಕ್ಯಾಲ್ಸಿಯಂ ಸಲ್ಫೇಟ್‌
(CaSO4, 2H2O)
ಸುಣ್ಣ, ಗಂಧಕ (Ca, S) ಇಲ್ಲ

 

ಕೋಷ್ಟಕ : ವಿವಿಧ ಶಿಲೆಗಳು, ಅವುಗಳಲ್ಲಿರುವ ಪ್ರಮುಖ ಖನಿಜಗಳು ಮತ್ತು ಅವುಗಳಿಂದ ನಿರ್ಮಾಣಗೊಂಡ ಮಣ್ಣಿನ ಗುಣಧರ್ಮಗಳು

ಅಸಂ ಶಿಲೆಯ ಹೆಸರು ಶಿಲೆಯಲ್ಲಿರುವ ಪ್ರಮುಖ ಖನಿಜಗಳು ಮಣ್ಣಿನ ಗುಣಧರ್ಮಗಳು
ಗ್ರಾನೈಟ್‌ ಕ್ವಾರ್ಟ್ಸ್, ಆರ್ಥೋಕ್ಲೇಜ್‌ ಮತ್ತು ಪ್ಲೆಜಿಯೋಕ್ಲೇಜ್‌ ಫೆಲ್ಸ್‌ಫಾರ್ ಗಳು ಸಿಲಿಕಾದ ಅಂಶವು ಅಧಿಕವಿರುತ್ತದೆ. ಮಣ್ಣಿನ ಕಣಗಳು ಉರುಟು; ಮಣ್ಣು ಆಮ್ಲಯುತ ಅಥವಾ ಸ್ವಲ್ಪ ಕ್ವಾರಯುತ; ಸಸ್ಯ ಪೋಷಕಗಳು ಅತ್ಯಲ್ಪ.
ಬಸಾಲ್ಪ್ ಕ್ಯಾಲ್ಸಿಯಂ – ಸೋಡಿಯಂ ಫೆಲ್‌ಸ್ಟಾರ್, ಮೈಕಾ, ಹಾರ್ನ್‌ಬ್ಲೆಂಡ್‌, ರಂಜಕ ಶಿಲೆ ಮಣ್ಣಿನ ಕಣಗಳು ಜಿನುಗು; ಕ್ಯಾಲ್ಸಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸೋಡಿಯಂಗಳಂಥ ಪ್ರತ್ಯಾಮ್ಲ ಧಾತುಗಳ ಪ್ರಾಬಲ್ಯವಿರುತ್ತದೆ; ಆಮ್ಲಕ್ಷಾರ ನಿರ್ದೇಶಕವು ೭ ಕ್ಕಿಂತ ಅಧಿಕ; ಮಣ್ಣು ಬೂದು ಬಣ್ಣದಿಂದ ಕಪ್ಪು ಬಣ್ಣದವರೆಗೆ; ಸಸ್ಯ ಪೋಷಕಗಳು ವಿಪುಲವಾಗಿರುತ್ತವೆ.
ಮರಳುಕಲ್ಲು ಕ್ವಾರ್ಟ್ಸ್ ದೊಡ್ಡ ಪ್ರಮಾಣದಲ್ಲಿರುತ್ತದೆ; ಇತರ ಖನಿಜಗಳ ಪ್ರಮಾಣವು ಅತ್ಯಲ್ಪ ಸಿಲಿಕಾದ ಪ್ರಮಾಣವೇ ಅಧಿಕ; ಮಣ್ಣಿನ ಕಣಗಳು ಉರುಟು; ಸಸ್ಯ ಪೋಷಕಗಳು ಅತ್ಯಲ್ಪ
ಸುಣ್ಣದ ಕಲ್ಲು ಕ್ಯಾಲ್ಸಿಯಂ ಕಾರ್ಬೊನೇಟ್‌ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್‌ಗಳು ಮಣ್ಣಿನ ಕಣಗಳು ಜಿನುಗು; ಮಣ್ಣಿನ ಕೆಳ ಸ್ತರದಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್‌ಗಳ ಗಂಟುಗಳು ಕಂಡುಬರುತ್ತವೆ; ಆಮ್ಲ – ಕ್ಷಾರ ನಿರ್ದೇಶಕವು ೭ ಕ್ಕಿಂತ ಅಧಿಕ.
ಶೇಲ್‌ ಜೇಡಿ ಕಣಗಳು ಪರಸ್ಪರ ಅಂಟಿಕೊಂಡು ಗಟ್ಟಿಯಾದ ಶಿಲೆ ಭೂಮಿಯೊಳಗೆ ನೀರು ಸರಿಯಾಗಿ ಬಸಿದು ಹೋಗುವುದಿಲ್ಲ; ಸಸ್ಯ ಪೋಷಕಗಳು ಅತ್ಯಲ್ಪ.
ಲ್ಯಾಟಿರೈಟ್‌ ಮುಖ್ಯವಾಗಿ ಕಬ್ಬಿಣ ಮತ್ತು ಅಲ್ಯೂಮಿನಿಯಂ ಇವುಗಳ ಜಲಯುತ ಆಕ್ಸೈಡ್‌ಗಳು ಭೂಮಿಯೊಳಗೆ ನೀರು ಚೆನ್ನಾಗಿ ಬಸಿದು ಹೋಗುತ್ತದೆ; ಸಾಮಾನ್ಯವಾಗಿ ಆಮ್ಲ ಕ್ಷಾರ ನಿರ್ದೇಶಕವು ೭ ಕ್ಕಿಂತ ಕಡಿಮೆ; ಸಸ್ಯ ಪೋಷಕಗಳ ಪ್ರಮಾಣವೂ ಕಡಿಮೆ.

 

ಪೋಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮುಂತಾದ ಪ್ರತ್ಯಾಮ್ಲ ಧಾತುಗಳು ವಿಮೋಚನೆಗೊಳ್ಳುತ್ತವೆ. ಹಾಗೂ ಕೆಓಲಿನೈಟ್, ಕಬ್ಬಿಣ ಮತ್ತು ಅಲ್ಯೂಮಿನಿಯಂ ಇವುಗಳ ಜಲಯುತ ಆಕ್ಸೈಡ್ (ಹೈಡ್ರಾಕ್ಸೈಡ್)ಗಳಂತಹ ಹೊಸ ಖನಿಜಗಳು ನಿರ್ಮಾಣಗೊಳ್ಳುತ್ತವೆ.

 • ಹವಾಮಾನ, ಜೀವಿಗಳು, ಭೂಮಿಯ ಬಾಹ್ಯ ರಚನೆಗಳು ಮಣ್ಣಿನ ಮೂಲದ್ರವ್ಯದ ಮೇಲೆ ವಿವಿಧ ಅವಧಿಗಳವರೆಗೆ ಬೀರಿದ ಪ್ರಭಾವದ ಪರಿಣಾಮದಿಂದಾಗಿ ಮಣ್ಣು ನಿರ್ಮಾಣಗೊಳ್ಳುತ್ತದೆ.
 • ಮೇಲೆ ಸೂಚಿಸಿದ ವಿವಿಧ ಬಗೆಯ ಕ್ರಿಯೆಗಳು ಮಣ್ಣಿನ ಮೂಲದ್ರವ್ಯದ ಮೇಲಿರುವ ವಲಯದಿಂದಲೇ ಆರಂಭವಾಗುತ್ತವೆಯಾದ್ದರಿಂದ ವಿಮೋಚನೆಗೊಂಡ ಧಾತುಗಳು, ಹೊಸದಾಗಿ ನಿರ್ಮಾಣಗೊಂಡ ಖನಿಜಗಳು ಮತ್ತು ಒಟ್ಟುಗೂಡಿದ ಸಾವಯವ ಪದಾರ್ಥಗಳು, ಮೇಲಿನ ವಲಯದಲ್ಲಿಯೇ (A ವಲಯದಲ್ಲಿಯೇ) ಸಂಗ್ರಹಗೊಳ್ಳುತ್ತವೆ. ಸಾವಯವ ಪದಾರ್ಥಗಳನ್ನು ಕಳಿಯುವಂತೆ ಮಾಡುವ ಹಲವು ಬಗೆಯ ಸೂಕ್ಷ್ಮ ಜೀವಿಗಳ ಚಟುವಟಿಕೆಗಳಿಂದ ನಿರ್ಮಾಣಗೊಳ್ಳುವ ಲೋಳೆಯಂತಹ ದ್ರವ್ಯವು ಮಣ್ಣಿನ ಕಣಗಳ ರಚನೆಯನ್ನು ಸ್ಥಿರಗೊಳಿಸಲು ಸಹಾಯಕವಾಗುತ್ತದೆ.
 • ಕಾಲಕ್ರಮೇಣ ನೀರಿನ ಸೆಳೆತಕ್ಕೆ ಸಿಕ್ಕಿ ಮೇಲೆ ಹೇಳಿದ ಧಾತು, ಖನಿಜ ಇತ್ಯಾದಿ ದ್ರವ್ಯಗಳು ಬಸಿದುಬಂದು, ಕೆಳಗಿರುವ B ವಲಯವನ್ನು ತಲುಪಿ ಅಲ್ಲಿ ಸಂಗ್ರಹವಾಗುತ್ತವೆ. ಆದ್ದರಿಂದಲೇ ಕೆಲವು ಸಲ A ವಲಯದಲ್ಲಿರುವುದಕ್ಕಿಂತಲೂ B ವಲಯದಲ್ಲಿಯೇ ಎರೆ ಕಣಗಳ ಪ್ರಮಾಣವು ಅಧಿಕವಾಗಿರುತ್ತದೆ. ಅದರಂತೆಯೇ ಕೆಲವು ಪ್ರಸಂಗಗಳಲ್ಲಿ, ಕ್ಯಾಲ್ಸಿಯಂ, ಮತ್ತು ಮೆಗ್ನಿಸಿಯಂ ಕಾರ್ಬೊನೇಟುಗಳು, ಜಿಪ್ಸಂ, ಕಬ್ಬಿಣದ ಆಕ್ಸೈಡ್ ಇತ್ಯಾದಿಗಳು B ವಲಯದಲ್ಲಿ ಸಂಗ್ರಹವಾಗಬಹುದು.
 • B ವಲಯದ ಕೆಳಗಿರುವ ಮೂರನೇ ಸ್ತರವೇ (C ವಲಯ) ಮಣ್ಣಿನ ಮೂಲದ್ರವ್ಯ, ಮಣ್ಣಿನ ನಿರ್ಮಾಣದ ಕ್ರಿಯೆಗಳು ತೀಕ್ಷ್ಣವಾಗಿರುವಲ್ಲಿ ಅಥವಾ ಮೇಲಿನ ವಲಯವೇ ನೀರಿನ ಸೆಳೆತಕ್ಕೆ ಸಿಕ್ಕಿ ಸ್ಥಳಾಂತರಗೊಂಡ ಪ್ರಸಂಗಗಳಲ್ಲಿ C ವಲಯವು ಇಲ್ಲದೇ ಇರಬಹುದು
 • ಮೂಲದ್ರವ್ಯವು ಅವಶಿಷ್ಟ ದ್ರವ್ಯವಾಗಿದ್ದರೆ ಅದರ ಕೆಳಗೆ ಮೂಲ ಶಿಲೆಯಿರುತ್ತದೆ.

ಮೇಲೆ ಹೇಳಿದ ವಿವಿಧ ವಲಯಗಳನ್ನು ಚಿತ್ರ ೧ರಲ್ಲಿ ತೋರಿಸಿದ ಮಣ್ಣಿನ ಪಾರ್ಶ್ವದೃಶ್ಯದಲ್ಲಿ ನೋಡಬಹುದು.

ಈ ಚಿತ್ರದಲ್ಲಿರುವ ಮಣ್ಣಿನ ಪಾರ್ಶ್ವದೃಶ್ಯವು ಒಂದು ಕಾಲ್ಪನಿಕ ಮಣ್ಣಿನ ನಮೂನೆ ಮಾತ್ರ ಎಂಬುವುದನ್ನು ಗಮನಿಸಬೇಕು. ಪ್ರಕೃತಿಯಲ್ಲಿ ಕಂಡುಬರುವ ಮಣ್ಣುಗಳು ಈ ದೃಶ್ಯದಿಂದ ಹಲವು ರೀತಿಗಳಲ್ಲಿ ಭಿನ್ನವಾಗಿರಬಹುದು. ಉದಾಹರಣೆಗೆ:

ಚಿತ್ರ - ೧ ಮಣ್ಣಿನ ಕಾಲ್ಪನಿಕ ಪಾರ್ಶ್ವ ದೃಶ್ಯ

 • ಅರಣ್ಯದಡಿ ನಿರ್ಮಾಣಗೊಂಡ ಮಣ್ಣಿನ ಮೇಲ್ಬಾಗದಲ್ಲಿ ಸತತವಾಗಿ ಮರಗಳಿಂದ ಉದುರುವ ಎಲೆಗಳು, ರೆಂಬೆಗಳು ಇತ್ಯಾದಿಗಳಿಂದ A ವಲಯದಲ್ಲಿ ಸಾವಯವ ಪದಾರ್ಥವು ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗಿರುತ್ತದೆ. ಇದರಲ್ಲಿ ಕಳಿಯದ, ಅರ್ಧ ಕಳಿತ ಮತ್ತು ಪೂರ್ಣ ಕಳಿತ ಸಾವಯವ ಪದಾರ್ಥವಿರುವ ಮೂರು ಉಪವಲಯಗಳನ್ನು ಗುರುತಿಸಬಹುದು.
 • ಅದರಂತೆಯೇ, A ವಲಯದಲ್ಲಿ ಕಳಿತ ಸಾವಯವ ಪದಾರ್ಥದಿಂದೊಡಗೂಡಿದ ಖನಿಜ ಮತ್ತು ಸಾವಯವ ಪದಾರ್ಥಗಳು ಬಸಿದುಹೋಗಿ ಬಿಳುಕರಿಸಿದ E ವಲಯ ಎಂಬ ವಿಭಾಗವನ್ನು ಮಾಡಬಹುದು.
 • ಇದೇ ಪ್ರಕಾರ A ಮತ್ತು B ವಲಯಗಳ ಮಧ್ಯದಲ್ಲಿ ಹಲವು ಮಣ್ಣುಗಳು ಸಂಕ್ರಮಣ ಸ್ತರಗಳನ್ನೂ ಕಾಣಬಹುದು.