ಭೂಮಂಡಲದಲ್ಲಿ ಅನೇಕ ಬಗೆಯ ಮಣ್ಣುಗಳಿವೆ. ಪ್ರತಿಯೊಂದು ಮಣ್ಣಿನ ಅಧ್ಯಯನವನ್ನು ಮಾಡಿ, ಅವುಗಳ ಗುಣಧರ್ಮಗಳನ್ನು ಬರೆದಿಡುವುದಾಗಲೀ ಇತರರಿಗೆ ಮನದಟ್ಟು ಮಾಡುವುದಾಗಲೀ ಬಹಳ ದುಸ್ತರದ ಕೆಲಸವೆನ್ನಬಹುದು. ವಿಶ್ವದಲ್ಲಿರುವ ಮಣ್ಣುಗಳನ್ನೆಲ್ಲ ಅವುಗಳ ಸಾಮ್ಯ ಮತ್ತು ವ್ಯತ್ಯಾಸಗಳಿಗನುಗುಣವಾಗಿ ನಿರ್ಧಿಷ್ಟ ಗುಂಪುಗಳಾಗಿ ವಿಂಗಡಿಸಿದರೆ, ಮಣ್ಣುಗಳ ಅಧ್ಯಯನವು ಸುಲಭಸಾಧ್ಯವಾದೀತು. ಈ ದೃಷ್ಟಿಯಿಂದ ಮಣ್ಣುಗಳ ವರ್ಗೀಕರಣವು ಅತ್ಯವಶ್ಯಕ.

ವರ್ಗೀಕರಣದಇತಿಹಾಸ:

ಮಾನವನು ಭೂ ಸಾಗುವಳಿಯನ್ನು ಆರಂಭಿಸಿದಾಗಿನಿಂದಲೂ ಮಣ್ಣುಗಳನ್ನು ಒಂದಿಲ್ಲೊಂದು ರೀತಿಯಿಂದ ವರ್ಗೀಕರಿಸುತ್ತಲೇ ಬಂದಿದ್ದಾನೆ. ಕೆಳಗಿನ ಉದಾಹರಣೆಗಳಿಂದ ಈ ಮಾತು ಸ್ಪಷ್ಟವಾದೀತು.

 • ಮಣ್ಣಿನ ನಿರ್ಮಾಣಕ್ಕೆ ಕಾರಣೀಭೂತವಾದ ಶಿಲೆಗಳ ಆಧಾರದ ಮೇಲಿಂದ – ಸುಣ್ಣದ ಕಲ್ಲಿನ ಮಣ್ಣು, ಗ್ರಾನೈಟ್ ಮಣ್ಣು, ಮರಳು ಕಲ್ಲಿನ ಮಣ್ಣು ಇತ್ಯಾದಿ.
 • ಮಣ್ಣಿನ ಕಣಗಳ ಆಕಾರಗಳ ಮೇಲಿಂದ – ಮರಳು ಮಣ್ಣು, ರೇವೆ ಮಣ್ಣು, ಎರೆ ಮಣ್ಣು ಇತ್ಯಾದಿ.
 • ಬೆಳೆಗಳ ಸಾಗುವಳಿಗೆ ಸೂಕ್ತವೆನಿಸುವುದರ ಮೇಲಿಂದ – ಹತ್ತಿಯ ಮಣ್ಣು, ಬತ್ತದ ಮಣ್ಣು ಗೋದಿ ಮಣ್ಣು ಇತ್ಯಾದಿ.
 • ಮಣ್ಣಿನ ಬಣ್ಣದ ಮೇಲಿಂದ – ಕೆಂಪುಮಣ್ಣು, ಕಪ್ಪು ಮಣ್ಣು, ಬೂದು ಬಣ್ಣದ ಮಣ್ಣು ಇತ್ಯಾದಿ.
 • ಬೇಸಾಯದ ಉಪಕರಣಗಳನ್ನು ಎಳೆಯಲು ಬೇಕಾಗುವ ಶಕ್ತಿಯ ಮೇಲಿಂದ – ಹಗುರ ಮಣ್ಣು, ಮಧ್ಯಮ ಮಣ್ಣು, ಭಾರೀ ಮಣ್ಣು ಇತ್ಯಾದಿ.
 • ಮಣ್ಣಿನ ಆಳದ ಮೇಲಿಂದ – ಕಡಮೆ ಆಳದ ಮಣ್ಣು, ಮಧ್ಯಮ ಆಳದ ಮಣ್ಣು, ಆಳವಾದ ಮಣ್ಣು ಇತ್ಯಾದಿ.
 • ಪ್ರದೇಶದ ಮೇಲಿಂದ – ಶುಲ್ಕ ಮಣ್ಣು – ಟಂಡ್ರಾ ಮಣ್ಣು, ಸಮಶೀತೋಷ್ಣ ಪ್ರದೇಶದ ಮಣ್ಣು ಇತ್ಯಾದಿ.
 • ಮಣ್ಣಿನ ಆಮ್ಲ – ಕ್ಷಾರ ನಿರ್ದೇಶಕದ (pH) ಮೇಲಿಂದ – ಆಮ್ಲ ಮಣ್ಣು, ಕ್ಷಾರ ಮಣ್ಣು ಇತ್ಯಾದಿ.
 • ಮಣ್ಣಿನಲ್ಲಿರುವ ಲವಣ ಮತ್ತು ಎನಿಮಿಯ ಸೋಡಿಯಂ ಇವುಗಳ ಪ್ರಮಾಣದ ಮೇಲಿಂದ – ಲವಣರಹಿತ ಆದರೆ ವಿನಿಮಯ ಸೊಡಿಯಂ ಇರುವ ಮಣ್ಣು ಇತ್ಯಾದಿ.
 • ಮಣ್ಣಿನಲ್ಲಿರುವ ಕಲ್ಲಿನ ಚೂರುಗಳ ಮೇಲಿಂದ – ಕಲ್ಲಿರುವ ಮಣ್ಣು, ಹರಳುಗಳಿರುವ ಮಣ್ಣು ಇತ್ಯಾದಿ.
 • ನೈಸರ್ಗಿಕ ಸಸ್ಯಗಳ ಮೇಲಿಂದ – ಅಡವಿಯ ಮಣ್ಣು, ಹುಲ್ಲುಗಾವಲಿನ ಮಣ್ಣು, ಮರಳು ಭೂಮಿಯ ಮಣ್ಣು ಇತ್ಯಾದಿ.
 • ಮಣ್ಣುಗಳಿರುವ ಭೂಮಿಯ ಸ್ಥಾನದ ಮೇಲಿಂದ – ಇಳಿಜಾರಿನ ಮೇಲ್ಬಾಗದ ಮಣ್ಣು, ಇಳಿಜಾರಿನ ಮಣ್ಣು, ತಗ್ಗು ಪ್ರದೇಶದ ಮಣ್ಣು ಇತ್ಯಾದಿ.
 • ನೀರಿನ ಲಭ್ಯತೆಯ ಮೇಲಿಂದ – ಮಳೆಯಾಶ್ರಿತ ಮಣ್ಣು, ನೀರಾವರಿಯ ಮಣ್ಣು ಇತ್ಯಾದಿ.
 • ಮಣ್ಣಿನಲ್ಲಿರುವ ಸಾವಯವ ಪದಾರ್ಥದ ಪ್ರಮಾಣದ ಮೇಲಿಂದ ಪೀಟ್ – ಮಣ್ಣು, ಮಕ್ ಮಣ್ಣು, ಖನಿಜದ ಮಣ್ಣು ಇತ್ಯಾದಿ.

ಮೇಲೆ ಹೇಳಿದ ಯಾವುದೆ ಬಗೆಯ ವರ್ಗೀಕರಣವನ್ನು ಪರಿಗಣಿಸಿದರೂ, ಮಣ್ಣಿನ ಗುಣಧರ್ಮದ ಅಲ್ಪಪರಿಚಯ ಮಾತ್ರ ಆಗಬಲ್ಲದೇ ಹೊರತು ಆ ಮಣ್ಣಿನ ಸ್ವಭಾವದ ಸಂಪೂರ್ಣ ಅರಿವು ಮೂಡಿ ಬರುವುದಿಲ್ಲ. ಆದ್ದರಿಂದ, ಇಂತಹ ವರ್ಗೀಕರಣದಿಂದ ಮಣ್ಣಿನ ಆಳವಾದ ಅಧ್ಯಯನಕ್ಕಾಗಲಿ, ಇತರರಿಗೆ ಮಣ್ಣಿ ಬಗ್ಗೆ ವಿವರಗಳನ್ನು ಅರ್ಥಪೂರ್ಣವಾಗಿ ವಿವರಿಸುವುದಕ್ಕಾಗಲಿ, ಮಣ್ಣಿನ ಸಮರ್ಥ ನಿರ್ವಹಣೆಗಾಗಲಿ ಪ್ರಯೋಜನವಾಗುವುದಿಲ್ಲ. ಹೀಗಾಗಿ ಪರಿಪೂರ್ಣವಾದ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ಭದ್ರವಾಗಿ ನೆಲೆನಿಂತ ವರ್ಗೀಕರಣದ ಅವಶ್ಯಕತೆಯು ಸಂಬಂಧಿಕರೆಲ್ಲರಿಗೂ ಇತ್ತು.

ವೈಜ್ಞಾನಿಕಆಧಾರದಮೇಲೆಮಣ್ಣಿನವರ್ಗೀಕರಣ:

. ಮಣ್ಣಿನ ಉತ್ಪತ್ತಿಯ ಆಧಾರದ ಮೇಲೆ ಮಾಡಿದ ಮಣ್ಣಿನ ವರ್ಗೀಕರಣ :ಮಣ್ಣು ಒಂದು ನೈಸರ್ಗಿಕ ವಸ್ತು. ಹವಾಮಾನ ಮತ್ತು ಜೀವಿಗಳ ಪ್ರಭಾವವು ಮಣ್ಣಿನ ಗುಣಧರ್ಮಗಳ ಮೇಲೆ ಆಗುತ್ತದೆ ಎಂಬ ವಿಚಾರವನ್ನು ಪ್ರತಿಪಾದಿಸಿ ಮಣ್ಣನ್ನು ಅದರ ನಿರ್ಮಾಣದ ರೀತಿಯ ಆಧಾರದ ಮೇಲೆ ವರ್ಗೀಕರಿಸಿದ ಶ್ರೇಯಸ್ಸು ರಷ್ಯಾ ದೇಶದ ಡೊಕು ಚೈವ ಮತ್ತು ಅವರ ಸಹದ್ಯೋಗಿಗಳಿಗೆ ಸಲ್ಲುತ್ತದೆ. ಆ ಸಮಯದಲ್ಲಿ ರಷ್ಯಾ ದೇಶದೊಡನೆ ಇತರೆ ದೇಶಗಳ ಸಂಪರ್ಕವೇ ಇಲ್ಲದಿದ್ದುದರಿಂದ ೧೮೭೯ರಲ್ಲಿ ಪ್ರಕಟಗೊಂಡ ಈ ವರ್ಗೀಕರಣವು ಜಗತ್ತಿನ ಇತರ ದೇಶಗಳ ದೃಷ್ಟಿಗೆ ಬೀಳಲೇ ಇಲ್ಲ. ಕೆ.ಡಿ.ಗ್ಲಿಂಕಾ ಎಂಬುವರು ಈ ಲೇಖನವನ್ನು ಜರ್ಮನ್‌ಭಾಷೆಗೆ, ಅನಂತರ ಅದನ್ನು ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಸಿ.ಎಫ್. ಮಾರ್ಬಟ್ ಎಂಬುವರು ೧೯೨೭ರಲ್ಲಿ ಆಂಗ್ಲ ಭಾಷೆಗೆ ಅನುವಾದಿಸಿದ ನಂತರ, ಮಣ್ಣಿನ ಈಪದ್ಧತಿಯ ವರ್ಗೀಕರಣಕ್ಕೆ ಹೆಚ್ಚಿನ ಮಹತ್ವ ದೊರೆಯಿತು. ಬಾಲ್ಡ್ವಿನ್‌, ಕೆಲ್ಲೋಗ್ ಮತ್ತು ಥೋರ್ಪ್ ಎಂಬುವರು ಈ ವರ್ಗೀಕರಣದ ವಿವರಗಳನ್ನು ಪ್ರಕಟಿಸಿದಾಗಿನಿಂದ ಈ ಪದ್ದತಿಯ ಉಪಯೋಗವು ಎಲ್ಲೆಡೆ ಆಗತೊಡಗಿತು. ಇದು ೧೯೩೮ರ ಪದ್ಧತಿ ಎಂಬ ಹೆಸರಿನಲ್ಲಿ ಪ್ರಚಲಿತಗೊಂಡು ೧೯೬೦ರವರೆಗೆ ಬಳಕೆಯಲ್ಲಿತ್ತು.

 • ಗಣಗಳು (Orders) : ವಲಯ ಮಣ್ಣುಗಳು (Zonal Soils), ವಲಯಾಂತರಿತ ಮಣ್ಣು (Intrazonal Soils) ಮತ್ತು ವಲಯ ರಹಿತ ಮಣ್ಣುಗಳು (Azonal Soils) ಎಂಬ ಮೂರು ಗಣಗಳಿವೆ.
 • ಉಪಗಣಗಳು : (Sub – orders) ಒಟ್ಟು ೧೧ ಉಪಗಣಗಳಿವೆ.
 • ಮಹಾನ್‌ ಗುಂಪುಗಳು : (Great groups) : ಅಧಿಕೃತವಾಗಿ ೩೬ ಮಹಾನ್‌ ಗುಂಪುಗಳಿವೆ. ಆದರೆ, ಹೆಚ್ಚಿನ ಗುಂಪುಗಳು ಅನಧಿಕೃತವಾಗಿ ಬಳಕೆಯಲ್ಲಿವೆ.
 • ಕುಟುಂಬಗಳು ( Families): ಇವು ಬಹು ಸಂಖ್ಯೆಯಲ್ಲಿವೆ.
 • ಶ್ರೇಣಿಗಳು (Series) : ಇವು ಬಹು ಸಂಖ್ಯೆಯಲ್ಲಿವೆ.
 • ಪ್ರಕಾರಗಳು (Types) : ಇವು ಬಹು ಸಂಖ್ಯೆಯಲ್ಲಿವೆ.

ಮೇಲೆ ಹೇಳಿದ ವರ್ಗೀಕರಣ ಪದ್ಧತಿಯು, ೧೯೬೦ರವರೆಗೆ ಅಮೇರಿಕೆಯ ಸಂಯುಕ್ತ ಸಂಸ್ಥಾನಗಳು ಮತ್ತು ಇತರೆ ಕೆಲವು ದೇಶಗಳಲ್ಲಿ ಬಳಕೆಯಲ್ಲಿತ್ತು. ಹಲವು ರೀತಿಯಿಂದ ಈ ಪದ್ಧತಿಯು ಶ್ರೇಷ್ಠವೆನಿಸಿದರೂ ಇದರಲ್ಲಿ ಈ ಕೆಳಗೆ ತಿಳಿಸಿದ ನ್ಯೂನತೆಗಳಿದ್ದವು.

 • ಕೆಲವು ಮಣ್ಣುಗಳು, ಈ ಪದ್ಧತಿಯ ನಿಯಮಗಳಿಗೆ ಹೊಂದಿಕೊಳ್ಳದ ಕಾರಣ ವರ್ಗೀಕರಣದಿಂದ ಹೊರಗುಳಿಯಬೇಕಾಯಿತು.
 • ಕೆಲವು ನಿಯಮಗಳು ಅಷ್ಟು ನಿಖರವಾಗಿರದಿದ್ದರಿಂದ ಹಲವು ಮಣ್ಣುಗಳನ್ನು ವರ್ಗೀಕರಣದ ನಿರ್ಧಿಷ್ಟ ಸ್ಥಾನದಲ್ಲಿಡಲು ಸಾಧ್ಯವಾಗುತ್ತಿರಲಿಲ್ಲ.
 • ಮಣ್ಣುಗಳ ಕೆಲವು ಗುಂಪುಗಳು ಅಷ್ಟಾಗಿ ಪ್ರಯೋಜನಕಾರಿ ಎನಿಸುವಂತಿರಲಿಲ್ಲ. ವರ್ಗೀಕರಣದಲ್ಲಿಯ ಕೆಲವು ಹಂತಗಳು ಅತಾರ್ಕಿಕವೆನಿಸುವಂತಿರಲಿಲ್ಲ.
 • ವರ್ಗೀಕರಣದಲ್ಲಿರುವ ಕೆಲವು ಹಂತಗಳು ಅತಾರ್ಕಿಕವೆನಿಸುವಂತಿದ್ದವು.

. ಮಣ್ಣಿನ ಗುಣಧರ್ಮಗಳ ಮೇಲಿಂದ ವರ್ಗಿಕರಣ : ಮೇಲಿನ ಪದ್ಧತಿಯಲ್ಲಿ ಅಂತರ್ಗತವಾಗಿರುವ ನ್ಯೂನತೆಗಳನ್ನು ನಿವಾರಿಸಿ, ವಿಶ್ವದಲ್ಲಿರುವ ಎಲ್ಲ ಮಾದರಿಯ ಮಣ್ಣುಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳಬಲ್ಲ ವರ್ಗೀಕರಣ ಪದ್ಧತಿಯೊಂದನ್ನು ಹೊರ ತರಬೇಕೆಂಬ ಉತ್ಕಟ ಬಯಕೆಯಿಂದ, ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಮೃದ ವೀಕ್ಷಣಾ ತಜ್ಞರು ಕಾರ್ಯನಿರತವಾದರು. ದೇಶದ ಹಲವು ವಿಜ್ಞಾನಿಗಳ ಸಹಕಾರದಿಂದ ಮುಂದುವರಿಸಿದ ಅವರ ಪ್ರಯತ್ನಗಳ ಫಲವಾಗಿ ವರ್ಗೀಕರಣದ ಮೊದಲ ಕರಡು ೧೯೫೦ರಲ್ಲಿ ಸಿದ್ಧವಾಯಿತು. ಈ ಕರಡು ಪ್ರತಿಯು, ಮೇಲಿಂದ ಮೇಲೆ ಪರಿಷ್ಕರಣೆಗೊಂಡು ೧೯೬೦ರಲ್ಲಿ ಏಳನೆಯ ಮತ್ತು ಅಂತಿಮ ಕರಡು ಸಿದ್ಧವಾಗಿ ಎಲ್ಲರ ಮಾನ್ಯತೆಯನ್ನು ಪಡೆಯಿತು. ಅಮೇರಿಕೆಯ ಸಂಯುಕ್ತ ಸಂಸ್ಥಾನಗಳ ಮಣ್ಣು ಸಂರಕ್ಷಣಾ ವಿಭಾಗವು, ಮಣ್ಣಿನ ವರ್ಗೀಕರಣದ ಈ ಪದ್ಧತಿಯನ್ನು ೧೯೬೫ರಲ್ಲಿ ಅಧಿಕೃತವಾಗಿ ಅಂಗೀಕರಿಸಿತು. ಅಂದಿನಿಂದ ಈ ಪದ್ಧತಿಯು ಆ ದೇಶದಲ್ಲಷ್ಟೇ ಅಲ್ಲದೆ, ಇತರೆ ಹಲವು ದೇಶಗಳಲ್ಲಿಯೂ ಬಳಕೆಯಲ್ಲಿದೆ.

ಮಣ್ಣಿನ ಗುಣಧರ್ಮಗಳ ಮೇಲಿಂದ ಮಾಡಿದ ಈ ವರ್ಗೀಕರಣದಲ್ಲಿಯೂ ಮಣ್ಣು ಒಂದು ನೈಸರ್ಗಿಕ ವಸ್ತುವೆಂಬುದನ್ನು ಮಾನ್ಯ ಮಾಡಲಾಗಿದೆ. ಆದಾಗ್ಯೂ ಮಣ್ಣಿನ ಉತ್ಪತ್ತಿಯ ಆಧಾರದ ಮೇಲೆ ಮಾಡಿದ ವರ್ಗೀಕರಣದಿಂದ ಇದು ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಈ ಕೆಲವು ವೈಶಿಷ್ಟ್ಯಗಳು ಕೆಳಗಿನಂತಿವೆ.

(i) ಮಣ್ಣಿನ ಗುಣಧರ್ಮ : ನಮ್ಮ ಕಣ್ಣಿಗೆ ಕಾಣುವ ಮತ್ತು ಅಳೆಯಲು ಬರುವ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ವರ್ಗೀಕರಣದ ಈ ಪದ್ಧತಿಯಲ್ಲಿ ಆಧಾರವಾಗಿಟ್ಟುಕೊಳ್ಳಲಾಗಿದೆ. ಮಣ್ಣಿನ ಆಳ, ಬಣ್ಣ, ಕಣಗಳ ಆಕಾರ, ಕಣಗಳ ರಚನೆ, ಸಾವಯವ ಪದಾರ್ಥ, ಜಿನುಗು ಎರೆ, ಸಿಲಿಕೇಟ್ ಖನಿಜಗಳು, ಕಬ್ಬಿಣದ ಹಾಗೂ ಅಲ್ಯೂಮಿಯಂನ ಆಕ್ಸೈಡ್‌ಗಳು, ಆಮ್ಲ – ಕ್ಷಾರ ನಿರ್ದೇಶಕ ಪ್ರತ್ಯಾಮ್ಲಗಳು, ಇತ್ಯಾದಿ ಹಲವಾರು ಗುಣಧರ್ಮಗಳನ್ನು ಪರಿಗಣಿಸಲಾಗಿದೆ. ಈ ಗುಣಧರ್ಮಗಳನ್ನು, ಯಾರು ಬೇಕಾದರೂ ಬೇಕಾದಾಗ ಅಳೆದುನೋಡಿ ಖಚಿತಪಡಿಸಿಕೊಳ್ಳಲು ಸಾಧ್ಯವಿದೆ. ಪ್ರತ್ಯಕ್ಷವಾಗಿ ಕಾಣದ ಅಥವಾ ಅಳೆಯಲು ಬಾರದ ಇಲ್ಲವೇ ಕೆಲವು ಬಾರಿ ಊಹಿಸಿಕೊಳ್ಳಬೇಕಾಗುವ ಉತ್ಪತ್ತಿಯ ಆಧಾರದ ಮೇಲೆ ಮಾಡಿದ ವರ್ಗೀಕರಣದಲ್ಲಿ ಉದ್ಭವವಾಗಬಹುದಾದ ವಾದವಿವಾದಕ್ಕೆ ಇಲ್ಲಿ ಆಸ್ಪದವಿಲ್ಲ. ಈ ಪದ್ಧತಿಯಲ್ಲಿ ಮಣ್ಣಿನ ಉತ್ಪತ್ತಿಯ ರೀತಿಯ ಮೆಲಿಂದಲೇ ಮಣ್ಣಿನ ಗುಣಧರ್ಮಗಳ ನಿರ್ಧರಿತವಾಗುತ್ತವೆಯಾದ್ದರಿಂದ ಅಪ್ರತ್ಯಕ್ಷವಾಗಿ ಉತ್ಪತ್ತಿಯ ಆಧಾರವನ್ನು ಪರಿಗಣಿಸಿದಂತಾಯಿತು ಎಂಬುದನ್ನು ಗಮನಿಸಬೇಕು.

(ii) ಹೆಸರಿನಲ್ಲಿಯ ವೈಶಿಷ್ಟ್ಯ : ಮಣ್ಣಿನ ವಿವಿಧ ಗಣಗಳು, ಮಹಾನ್‌ಗುಂಪುಗಳು ಇತ್ಯಾದಿಗಳನ್ನು ಹೆಸರಿಸಲು ವಿಶಿಷ್ಟ ಪದ್ಧತಿಯನ್ನು ಅನುಸರಿಸಲಾಗಿದೆ. ಲ್ಯಾಟಿನ್, ಗ್ರೀಕ್ ಮತ್ತು ಫ್ರೆಂಚ್ ಭಾಷೆಗಳ ಮೂಲದಿಂದ ಬಂದ ಅರ್ಥಪೂರ್ಣ ಧಾತುಗಳನ್ನು ಉಪಯೋಗಿಸಿಕೊಂಡು ಮಣ್ಣಿಗೆ ಹೆಸರುಗಳನ್ನಿಡಲಾಗಿದೆ. ಈ ಹೆಸರುಗಳಿಂದಲೇ ಸಂಬಂಧಿಸಿದ ಮಣ್ಣಿನ ಗುಣಧರ್ಮಗಳ ಬಗ್ಗೆ ಹಲವು ವಿವರಗಳು ಅರಿವಿಗೆ ಬರುತ್ತವೆ ಎಂಬುದು ಈ ವಿಧಾನದ ವೈಶಿಷ್ಟ್ಯವೆನ್ನಬಹುದು. ಇದಲ್ಲದೇ ಉಪ ಗುಂಪಿನ ಹೆಸರಿನಿಂದಲೇ ಆ ಮಣ್ಣು ಯಾವ ಮಹಾನ್‌ಗುಂಪಿಗೆ ಸೇರಿದೆ ಎಂಬುವುದನ್ನು ತಪ್ಪಿಲ್ಲದಂತೆ ಸುಲಭವಾಗಿ ಹೇಳಬಹುದು.

(iii) ವರ್ಗೀಕರಣದ ಹಂತಗಳು : ಈ ಪದ್ಧತಿಯ ವರ್ಗೀಕರಣದಲ್ಲಿಯೂ, ೧೯೩೮ರ ಪದ್ಧತಿಯಲ್ಲಿದ್ದಂತೆ ೬ ಹಂತಗಳಿವೆಯಾದರೂ ಅವುಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಕೆಳಗಿನ ವಿವರಗಳಿಂದ ಇದು ಸ್ಪಷ್ಟವಾಗುತ್ತದೆ:

ಹಂತದ ಹೆಸರುಗಳು  ಒಟ್ಟು ಸಂಖ್ಯೆ
ಗಣಗಳು

೧೧

ಉಪಗಣಗಳು

೪೭

ಮಹಾನ್‌ ಗುಂಪುಗಳು

೨೩೦

ಉಪ ಗುಂಪುಗಳು

೧೨೦೦

ಕುಟುಂಬಗಳು

೬೬೦೦

ಶ್ರೇಣಿಗಳು

ಅಸಂಖ್ಯಾತ

ಸೂಚನೆ : ಮಣ್ಣಿನ ನಕ್ಷೆಯನ್ನು ಸಿದ್ಧಪಡಿಸುವಾಗ ಶ್ರೇಣಿಗಳ ಹಂತಗಳನ್ನು ಗುರುತಿಸುವ ಪದ್ಧತಿಯು ರೂಢಿಯಲ್ಲಿದೆ, ಆದರೆ ಹಂತಗಳು ವರ್ಗೀಕರಣ ಪದ್ಧತಿಯಲ್ಲಿ ಒಂದು ಮಜಲೆಂದು ಪರಿಗಣಿಸಿಲ್ಲ.

(iv) ವರ್ಗೀಕರಣಕ್ಕೆ ಅವಶ್ಯಕವಿರುವ ಪರಿಕಲ್ಪನೆಗಳು : ವರ್ಗೀಕರಣದ ಅನುಕೂಲತೆಗೆ ಕೆಳಗಿನ ಎರಡು ಪರಿಕಲ್ಪನೆಗಳನ್ನು ಮಾಡಲಾಗಿದೆ.

. ಪೆಡಾನ್‌ :    ಗಿಡ – ಮರಗಳಲ್ಲಿ, ಪಶು – ಪಕ್ಷಿಗಳಲ್ಲಿ ಮತ್ತು ಇತರೆ ಹಲವು ವಸ್ತುಗಳಲ್ಲಿ ಪ್ರತಿಯೊಂದು ಜೀವಿಯನ್ನು ಅಥವಾ ಪ್ರತಿ ವಸ್ತುವನ್ನು ಪ್ರತ್ಯೇಕವಾಗಿ ಗುರುತಿಸಬಹುದು ಮತ್ತು ಅದರ ವಿವರವಾದ ಅಧ್ಯಯನವನ್ನು ಮಾಡಬಹುದು. ಆದರೆ ಭೂ ಭಾಗದ ಮೇಲೆ ಮಣ್ಣು ಅಖಂಡವಾಗಿ ಪಸರಿಸಿದೆಯಾದ್ದರಿಂದ ಒಂದು ಮಣ್ಣನ್ನು ಇನ್ನೊಂದರಿಂದ ಪ್ರತ್ಯೇಕಿಸಿ ನೋಡಲು ಇಲ್ಲವೇ ತೋರಿಸಲು ಸಾಧ್ಯವಿಲ್ಲ. ಸಮಸ್ಯೆಯ ಪರಿಹಾರಕ್ಕಾಗಿ ಪೆಡಾನ್‌ ಎಂಬ ಪರಿಕಲ್ಪನೆಯು ಅಸ್ತಿತ್ವದಲ್ಲಿ ಬಂದಿತು. ಸರಾಸರಿ ಆಕಾರದ ಸಸ್ಯದ ಎಲ್ಲ ಬೇರುಗಳಿಗೆ ಸ್ಥಳವನ್ನು ಒದಗಿಸಿ ಕೊಡುವಷ್ಟು ಅಂದರೆ ಸ್ಥಳ ಪರಿಕ್ಷೆಗೆ ಸೂಕ್ತವೆನಿಸುವಷ್ಟರ ಮಟ್ಟಿಗೆ ಪೆಡಾನ ದೊಡ್ಡದಿರಬೇಕೆಂದು ಯೋಚಿಸಲಾಯಿತು. ಪೆಡಾನ್‌ಮೇಲ್ಭಾಗದ ಮತ್ತು ಕೆಳ ಭಾಗದ ಮೇರೆಗಳು ಮಣ್ಣಿಗಿದ್ದಂತೆಯೇ ಅಂದರೆ, ಮಣ್ಣಿನ ಮೇಲ್ಬಾಗದಿಂದ B ವಲಯದ ಬುಡ ಭಾಗದವರೆಗೆ ಇದೆ. ಆದರೆ ಪಾರ್ಶ್ವದ ಮೇರೆಯನ್ನು, ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಬಹುದು. ಕೆಲವು ಅಪವಾದಗಳನ್ನು ಬಿಟ್ಟರೆ ಮೇಲ್ಭಾಗದ ಕ್ಷೇತ್ರವು ಒಂದು ಚದರ ಮೀಟರು ಇರಬೇಕೆಂದು ಒಪ್ಪಿಕೊಳ್ಳಲಾಗಿದೆ. ಮಣ್ಣಿನ ಗುಣಧರ್ಮಗಳಲ್ಲಿ ಬಹಳಷ್ಟು ಭಿನ್ನತೆಯು ಕಂಡುಬಂದ ಪ್ರಸಂಗಗಳಲ್ಲಿ ಸುಮಾರು ೧೦ ಚದುರ ಮೀಟರಗಳು (ಸುಮಾರು ೩.೫ ಮೀ. ಉದ್ದ ಮತ್ತು ಅಷ್ಟೇ ಅಗಲ)ವರೆಗೂ ಪೆಡಾನ್‌ನ ಕ್ಷೇತ್ರವನ್ನು ವಿಸ್ತರಿಸಲು ಆಸ್ಪದವಿದೆ.

ಪೆಡಾನ್, ಆಕಾರದಲ್ಲಿ ಚಿಕ್ಕದಾಗಿರುವುದರಿಂದ ಭೂ ಪ್ರದೇಶದಲ್ಲಿ ವರ್ಗೀಕರಣಕ್ಕೆಂದು ಬಳಸಲು ಅನುಕೂಲಕರವಾಗಿಲ್ಲ. ಆದ್ದರಿಂದ ಪಾಲಿಡಾನ್‌ ಎಂಬ ಇನ್ನೊಂದು ಪರಿಕಲ್ಪನೆಯು ಅಸ್ತಿತ್ವಕ್ಕೆ ಬಂದಿತು. ಒಂದೇ ಬಗೆಯ ಹಲವು ಪೆಡಾನ್‌ಗಳು ಒಂದೆಡೆ ಇದ್ದ ಮಣ್ಣಿನ ಪ್ರದೇಶಕ್ಕೆ ಪಾಲಿಪೆಡಾನ್‌ಎಂಬ ಹೆಸರಿದೆ.

ಸೂಚನೆ : ಗ್ರೀಕ್ ಭಾಷೆಯಲ್ಲಿ ಪೆಡಾನ್‌ ಎಂದರೆ ನೆಲ ಎಂದು ಅರ್ಥ.

. ಎಪಿ ಪೆಡಾನ್‌ (ಮಣ್ಣಿನಲ್ಲಿರುವ ಭಿನ್ನತೆಯನ್ನು ತೋರಿಸಬಲ್ಲ ವಲಯಗಳು) : ಒಂದು ಬಗೆಯ ಮಣ್ಣನ್ನು ಇನ್ನೊಂದರಿಂದ ಪ್ರತ್ಯೇಕಿಸಲು ಅನುಕೂಲವಾಗಬಲ್ಲ ಮಣ್ಣಿನ ವಲಯದ ಕಲ್ಪನೆಯನ್ನು ಮಾಡಿ ಇದಕ್ಕೆ ಎಪಿಪೆಡಾನ್‌ ಎಂದು ಹೆಸರಿಡಲಾಗಿದೆ. (ಗ್ರೀಕ್ ಭಾಷೆಯಲ್ಲಿ ಎಪಿ ಎಂದರೆ ಮೇಲೆ ಮತ್ತು ಪೆಡಾನ್‌ಎಂದರೆ ನೆಲ ಅಥವಾ ಭೂಮಿ) ಸಾವಯವ ಪದಾರ್ಥವಿರುವುದರಿಂದ ಕಪ್ಪು ಬಣ್ಣಕ್ಕೆ ತಿರುಗಿದ ಮಣ್ಣಿನ ಮೇಲ್ಭಾಗ ಹಾಗೂ ಸಾವಯವ ಪದಾರ್ಥಗಳು, ಸೂಕ್ಷ್ಮ ಎರೆ ಕಣಗಳು, ಕಬ್ಬಿಣದ ಮತ್ತು ಅಲ್ಯೂಮಿಯಂ ಆಕ್ಸೈಡ್ ಇತ್ಯಾದಿಗಳು ಬಸಿದುಹೋದ A ವಲಯವನ್ನು ಎಪಿಪೆಡಾನ್‌ ಒಳಗೊಂಡಿವೆ. ಸಾವಯವ ಪದಾರ್ಥವು ಸಂಗ್ರಹಗೊಂಡಿದ್ದರೆ, B ವಲಯದ ಮೇಲ್ಭಾಗವೂ ಎಪಿಪೆಡಾನ್‌ನಲ್ಲಿ ಸೇರುತ್ತದೆ.

ಮಣ್ಣಿನ ವರ್ಗೀಕರಣಕ್ಕೆ ಅನುಕೂಲವಾಗಬಲ್ಲ ಒಟ್ಟು ಏಳು ಎಪಿಪೆಡಾನ್‌ಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಐದು ಎಪಿಪೆಡಾನ್‌ಗಳು ನೈಸರ್ಗಿಕವಾಗಿ ನಿರ್ಮಾಣಗೊಂಡಿವೆಯಾದರೆ ಉಳಿದೆರಡು, ಮಾನವನ ಚಟುವಟಿಕೆಗಳಿಂದ ಮಾರ್ಪಾಟುಗೊಂಡವುಗಳಾಗಿವೆ. ಈ ಎಪಿಪೆಡಾನ್‌ಗಳನ್ನು ಕೋಷ್ಟಕ ೩ ರಲ್ಲಿ ವಿವರಿಸಲಾಗಿದೆ.

ಕೋಷ್ಟಕ : ಮಣ್ಣಿನ ವರ್ಗಿಕರಣಕ್ಕೆ ನೆರವಾಗಬಲ್ಲ ಎಪಿಪೆಡಾನ್‌ಗಳ ವರ್ಣನೆ

.ಸಂ.

ಎಪಿಪೆಡಾನ್‌ಗಳ ಹೆಸರು

ಎಪಿಪೆಡಾನ್‌ಗಳ ವರ್ಣನೆ

೧. ಮೋಲಿಕ್ ಸಾಮಾನ್ಯವಾಗಿ ಹುಲ್ಲುಗಾವಲಿನ ಪ್ರದೇಶದಲ್ಲಿ ನಿರ್ಮಾಣಗೊಂಡ ಮಣ್ಣಿನ ಮೇಲ್ಬಾಗದಲ್ಲಿ ಕಂಡು ಬರುವ ಈ ಸ್ತರವು ದಪ್ಪವಾಗಿರುತ್ತದೆಯಲ್ಲದೇ ಸಾವಯವ ಪದಾರ್ಥವು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದರ ಕಪ್ಪು ಮಣ್ಣಿನಲ್ಲಿ ಶೇ.೦.೬ ಸಾವಯವ ಇಂಗಾಲವಿರಬೇಕಲ್ಲದೇ ಪ್ರತ್ಯಾಮ್ಲದ ಪ್ರಮಾಣವು ಶೆ.೫೦ ರಷ್ಟಾದರೂ ಇರಬೇಕು.
೨. ಯ್ಯಾಂಬ್ರಿಕ್ ಮೇಲೆ ಹೇಳಿದ ಮೋಲಿಕ್ ಸ್ಥರದಂತೆಯೇ ಇದೆ. ಆದರೆ ಪ್ರತ್ಯಾಮ್ಲದ ಪ್ರಮಾಣವು ಶೇ.೫೦ಕ್ಕಿಂತ ಕಡಿಮೆ.
೩. ಮೆಲಾನಿಕ್ ಮಣ್ಣಿನ ಸ್ಥೂಲ ಸಾಂದ್ರತೆಯು ಕಡಮೆ. ಇದರಲ್ಲಿ ಅಲ್ಲೋಫೇನ್‌ಖನಿಜದ ಪ್ರಾಬಲ್ಯವಿದೆ. ಈ ಸ್ಥರದಲ್ಲಿಯೇ ಮಣ್ಣಿಗೆ ಋಣ ಆಯಾನ್‌ಗಳನ್ನು ಆಕರ್ಷಿಸುವ ಸಾಮರ್ಥ್ಯವು ಅಧಿಕವಾಗಿದೆ.
೪. ಓಕ್ರಿಕ್ ಈ ಸ್ತರವು ಅತಿ ತೆಳುವಾಗಿದೆ. ಮೋಲಿಕ್ ಸ್ತರದೊಡನೆ ತುಲನೆ ಮಾಡಿದರೆ ಬಣ್ಣವು ಅತಿ ತಿಳುವು. ಸಾವಯವ ಇಂಗಾಲದ ಪ್ರಮಾಣವು ಅತಿ ಕಡಿಮೆ. ಒಣಗಿದೊಡನೆ ಗಟ್ಟಿಯಾಗುತ್ತದೆ.
೫. ಹಿಸ್ಟಿಕ್  ಇದು ಪೀಟ್ ಅಥವಾ ಮಕ್ ಸ್ತರ. ಆದರೆ ಇದು ಹಿಸ್ಟೋಝೋಲ್ ಮಣ್ಣೆನಿಸುವಷ್ಟು ಆಳವಾಗಿಲ್ಲ. ಇದರ ದಪ್ಪವು ೨೦ ರಿಂದ ೬೦ ಸೆಂ.ಮೀ. ಮತ್ತು ಸಾವಯವ ಪದಾರ್ಥದ ಪ್ರಮಾಣವು ಶೇ.೧೨ ರಿಂದ ೧೮ರಷ್ಟು. ವರ್ಷದ ಕೆಲವು ಕಾಲ ಹಸಿಯಾಗಿರುತ್ತದೆ.
೬. ಯ್ಯಾಂಥ್ರೋಫಿಕ್ ಮಾನವನು ಕೈಗೊಂಡ ವಿವಿಧ ಬೇಸಾಯ ಕ್ರಮಗಳ ಪರಿಣಾಮದಿಂದ ಬದಲಾವಣೆಯನ್ನು ಹೊಂದಿದ ಸ್ತರ. ಸತತ ನೀರಾವರಿಯಿಂದ ಇದು ಮೋಲಿಕ್ ಸ್ತರದ ಕೆಲವು ಗುಣ ಧರ್ಮಗಳನ್ನು ಹೊಂದಿರುತ್ತದೆ. ಲಭ್ಯ ರಂಜಕದ ಪ್ರಮಾಣವು ಅಧಿಕ. (ಪ್ರತಿ ದಶಲಕ್ಷ ಭಾಗಕ್ಕೆ ೨೫೦ ಭಾಗಕ್ಕಿಂತ ಅಧಿಕ).
೭. ಪ್ಲಾಗೆನ್ ಸಾವಯವ ಗೊಬ್ಬರವನ್ನು ಸತತವಾಗಿ ಮಣ್ಣಿಗೆ ಸೇರಿಸುತ್ತ ಬಂದದ್ದವರಿಂದ ಕೃ‌ತ್ರಿಮವಾಗಿ ನಿರ್ಮಾಣಗೊಂಡ ಸುಮಾರು ೫೦ ಸೆಂ.ಮೀ. ದಪ್ಪದ ಸ್ತರ.

ಮೋಲಿಕ್ ಸ್ತರವು ಮಣ್ಣಿನ ಹೊಸ ಪದ್ಧತಿಯ ವರ್ಗೀಕರಣದಲ್ಲಿ ಕೇಂದ್ರ ಬಿಂದು ಎಂದು ಹಲವರ ಮತ. ನೈಸರ್ಗಿಕವಾಗಿ ಹೆಚ್ಚು ಫಲವತ್ತಾಗಿರುವ ಮತ್ತು ಅಧಿಕ ಉತ್ಪಾದಕತೆಯ ಮಣ್ಣಿರುವ ವಿಶಾಲವಾದ ಕ್ಷೇತ್ರದಲ್ಲಿ ಮೋಲಿಕ್ ಸ್ತರವಿರುವುದು ಗಮನಾರ್ಹ. ಇತರೆ ಎಪಿ ಪೆಡಾನ್‌ಗಳನ್ನು ವರ್ಣಿಸುವಾಗ ಅವು ಮೋಲಿಕ್ ಎಪಿಪೆಡಾನ್‌ಗಿಂತ ಯಾವ ರೀತಿಯಿಂದ ಭಿನ್ನವಾಗಿದೆ ಎಂಬುವುದನ್ನು ಪರಿಗಣಿಸಲಾಗುವುದು.

ಮೇಲೆ ವಿವರಿಸಿದ ೭ ಎಪಿಪೆಡಾನ್‌ಗಳಲ್ಲದೇ ಮಣ್ಣಿನ ಕೆಳಭಾಗದಲ್ಲಿ ಅಥವಾ B ವಲಯದಲ್ಲಿರುವ ಕೆಲವು ವಿಶಿಷ್ಟ ಸ್ತರಗಳು ಮಣ್ಣಿನ ಕೆಳಭಾಗಹದಲ್ಲಿ ಅಥವಾ ಸಹಾಯಕವಾಗಲ್ಲವು. A ವಲಯದಲ್ಲಿರುವುದಕ್ಕಿಂತ ಶೇ.೩ ರಿಂದ ೮ ಪಟ್ಟು ಅಧಿಕ ಎರೆ ಕಣಗಳಿರುವ ಅರ್ಜಿಲಿಕ್ ವಲಯ, ಮೇಲಿನ A ವಲಯದಿಂದ ಬಸಿದು ಬಂದು ಸಾವಯವ ಪದಾರ್ಥ. ಅಲ್ಲದೇ ಕಬ್ಬಿಣ ಮತ್ತು ಅಲ್ಯೂಮಿನಿಯಂ ಆಕ್ಸೈಡ್ ಗಳು ಸಂಗ್ರಹವಾಗಿರುವ ಪ್ರಖರ ಬಣ್ಣದ ಸೋಡಿಯಕ್ ಸ್ತರ, ಶೇ.೫ ಕ್ಕಿಂತ ಅಧಿಕ ವಿನಿಮಯ ಸೋಡಿಯಂ ಇರುವ ಸ್ತಂಭಾಕಾರ ರಚನೆಯುಳ್ಳ ವಿಶಿಷ್ಟ ಸ್ತರ ಇವೆಲ್ಲ ಮೇಲೆ ಸೂಚಿಸಿದ ಸ್ತರಗಳ ಉದಾಹರಣೆಗಳು, ಇಂತಹ ಎಲ್ಲ ಬಗೆಯ ಸ್ತರಗಳ ವಿವರಣೆಯನ್ನು ಇಲ್ಲಿ ಕೊಟ್ಟಿಲ್ಲ.

v) ಮಣ್ಣಿನ ವರ್ಗಗಳಿಗೆ ಹೆಸರನ್ನಿಡುವಾಗ ಅನುಸರಿಸಿದ ಪದ್ಧತಿಗಳು : ಮಣ್ಣುಗಳನ್ನು, ಗಣ, ಉಪಗಣ, ಮಹಾನ್‌ ಗುಂಪು ಇತ್ಯದಿ ೬ ವರ್ಗಗಳಲ್ಲಿ ವಿಂಗಡಿಸಲಾಗಿದೆಯೆಂದೂ ಇವುಗಳ ಹೆಸರುಗಳು ಸಂಬಂಧಿಸಿದ ಮಣ್ಣಿನ ಗುಣಧರ್ಮಗಳನ್ನು ಸೂಚಿಸುತ್ತದೆಯೆಂದೂ ಈ ಮೊದಲೇ ಹೇಳಿದೆ. ಈ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಕೆಳಗಿನಂತಿವೆ:

ಮಣ್ಣಿನ ವರ್ಗೀಕರಣದಲ್ಲಿಯ ೧೧ ಗಣಗಳ ಹೆಸರುಗಳು, ಈ ಹೆಸರುಗಳನ್ನು ನಿರ್ಧರಿಸುವಾಗ ಬಳಸಿದ ಪ್ರಾಚೀನ ಭಾಷೆಗಳ ಮೂಲ ಧಾತುಗಳ ಮತ್ತು ಈ ಗಣಗಳಿಗೆ ಸೇರಿದ ಮಣ್ಣುಗಳ ಪ್ರಮುಖ ಗುಣಧರ್ಮಗಳ ವಿವರಗಳನ್ನು ಕೋಷ್ಟಕ ೪ ರಲ್ಲಿ ಕೊಟ್ಟಿದೆ.

ಕೋಷ್ಟಕ : ಮಣ್ಣಿನ ಗಣಗಳ ಹೆಸ